೧. ಬಳಸು ದಾರಿಯಲ್ಲಿ
‘ಏಪ್ರಿಲ್ ೧೬ರಿಂದ ಜೂನ್ ೧ರವರೆಗೆ ಬಿಸಿಲೆ ದಾರಿ ಬಂದ್’ ಹಾಸನ ಜಿಲ್ಲಾಧಿಕಾರಿ ಪ್ರಕಟಣೆ ಬಂತು. ಗಡಿಬಿಡಿಯಾಗಬೇಡಿ, ಇದು ಕೋವಿಡ್ ಸಂಬಂಧಿಯಲ್ಲ. ನಾನೇ ಹಿಂದೆ ಹೇಳಿದ್ದ ಕುಳ್ಕುಂದ - ಬಿಸಿಲೆ ನಡುವೆ ಬಾಕಿಯುಳಿದಿದ್ದ ಮೂರು ಕಿಮೀ ಕಾಂಕ್ರಿಟೀಕರಣ ಪೂರೈಕೆಗೆ. ಆದರೆ ಆರಂಭಕ್ಕೆ ತಡ, ಮುಕ್ತಾಯ ಎಂದೂ ಇಲ್ಲ ಎನ್ನುವ ನಮ್ಮ ಸರಕಾರೀ ಕಾಮಗಾರಿಗಳು ನಂಬಲರ್ಹವಲ್ಲ. ಹಾಗಾಗಿ ನಾನು ಬಿಸಿಲೆ ಗಣೇಶರಲ್ಲಿ ಚರವಾಣಿಸಿ ಕೇಳಿದೆ. "ಅಯ್ಯೋ ಮೂರು ಕಿಮೀ
ಕಾಂಕ್ರೀಟಿಗೆ ಒಂದೂವರೆ ತಿಂಗಳು ಎಲ್ ಸಾಲುತ್ತೇ? ಹಂಗಾಗಿ ಎಂಟು ದಿನ ಮೊದಲೇ ರೋಡ್ ಕ್ಲೋಸ್ ಮಾಡಿ, ಕೆಲಸ ಜೋರಾಗಿ ನಡೆದಿದೆ..." ಎಂದರು.
‘ಕಪ್ಪೇಗೂಡಿ’ಗೆ ಮೇಲ್ಟಾಂಕಿ ಕೂರಿಸಿ ಬಂದ ಮೇಲೆ ನಾನು ಅತ್ತ ತಲೆ ಹಾಕಿರಲಿಲ್ಲ. ಬಾಕಿಯುಳಿದ ಚಿಲ್ಲರೆ ಕೆಲಸ ಸೇರಿಸಿಕೊಂಡು, ಬಳಸು ದಾರಿಯಲ್ಲಿ ಅಶೋಕವನಕ್ಕೆ ಹೋಗುವ, ಮೂರು ದಿನದ ಮೊಕ್ಕಾಂ ಮಾಡುವ ಯೋಜನೆ ಹಾಕಿದೆ. ಹಿಂದಾದರೋ