Showing posts with label ಪುಸ್ತಕ ವಿಮರ್ಶೆ. Show all posts
Showing posts with label ಪುಸ್ತಕ ವಿಮರ್ಶೆ. Show all posts

15 August 2020

ತೇನ್ ಸಿಂಗ್ ಬಿಳಿಮಲೆ ಮತ್ತು ‘ಕಾಗೆ ಮುಟ್ಟಿದ ನೀರು’

ಬಹುಮಂದಿಗೆ ಪಶ್ಚಿಮ ಘಟ್ಟದ ದಿಗ್ಗಜಗಳ (ಕುದುರೆಮುಖ, ಕುಮಾರ ಪರ್ವತ...) ಗಹನತೆ ಅಡಿ, ಮೀಟರ್‍ಗಳಲ್ಲಿ ಹೇಳಿದರೆ ಮುಟ್ಟುವುದಿಲ್ಲ. ಅವರಿಗೆ ನಿತ್ಯ ಕಾಣುವ ಬಲ್ಲೇರಿ, ಕಳಂಜಿಮಲೆ, ಬಿರುಮಲೆ, ಬಂಟಮಲೆಗಳೇ ನಿಜದ ಅಳತೆಗೋಲು. ನಾನು ಅವನ್ನೂ ಅನುಭವಿಸುವ ಸರಣಿಯಲ್ಲಿ, ಒಂದು ಮಳೆ ದಿನದ ಬೆಳಿಗ್ಗೆ ಬಂಟಮಲೆ ಆಯ್ದುಕೊಂಡಿದ್ದೆ. ತಂಡ ನಾಲ್ಕು ಬೈಕೇರಿ, ಪಂಜ ತಲಪಿತ್ತು. ಮತ್ತೆ ಅಲ್ಲಿ ಇಲ್ಲಿ ವಿಚಾರಿಸುತ್ತ ಸುಮಾರು ಹನ್ನೊಂದು ಕಿಮೀ ಕಳೆದು, ಬಿಳಿಮಲೆಯಲ್ಲಿದ್ದ ಪುರುಷೋತ್ತಮರ ಮನೆ ಸೇರಿದ್ದು ಒಂದು ಆಕಸ್ಮಿಕ. ಪುರುಷೋತ್ತಮರು ಆ ದಿನಗಳಲ್ಲಿ ಮಂಗಳೂರು ವಿವಿ ನಿಲಯದಲ್ಲಿದ್ದರು (೧೯೮೭). ಹಾಗಾಗಿ ಅವರು ನಮಗೆ ಮನೆಯಲ್ಲಿ ಸಿಗಲಿಲ್ಲ. ನಾವು ಬೈಕು, ಜಿಗಣೆಗೆ ಬೆದರಿದ ಅಭಯ, ಜತೆಗೆ ದೇವಕಿಯನ್ನು ಪುರುಷೋತ್ತಮರ ತಾಯಿಗೊಪ್ಪಿಸಿ, ಕಾಡು ನುಗ್ಗಿದ್ದೆವು. ಸುಮಾರು ಎರಡು ಗಂಟೆಯ ಅವಧಿಯಲ್ಲಿ, ಶಿಖರ ವಲಯವನ್ನು ತಲಪಿ ಸುತ್ತಾಡಿ, ಬುತ್ತಿಯೂಟ ಮಾಡಿ ಮುಗಿಸಿದ್ದೆವು. ಅನಂತರ ಉತ್ಸಾಹದಲ್ಲಿ ಇಳಿಯುತ್ತ ಮಳೆ, ಮಂಜು, ಹುಲ್ಲು, ಪೊದರುಗಳ ಫಿತೂರಿಯಲ್ಲಿ ದಿಕ್ಕು ತಪ್ಪಿ ತಲಪಿದ್ದು ಎದುರು ಮೈಯ ಏರಿಮಲೆ, ಗುತ್ತಿಗಾರು. ಮತ್ತೆ ಬಾಡಿಗೆ ವಾಹನ ಹಿಡಿದು ಪಂಜಕ್ಕಾಗಿ ಬಿಳಿಮಲೆ ಸೇರಿ, ಮರಳಿದ ಪ್ರಕರಣ ಸುಖಾಂತ ಸಾಹಸವೇ ಅನ್ನಿಸಿತ್ತು. ಆದರೆ.... 

07 April 2020

ಜೋಗದ ಗಜಾನನ ಶರ್ಮರಿಗೊಂದು ಪತ್ರ

[ಶರಾವತಿ ಸಾಗರದ ದೋಣಿಯಾನಕ್ಕೆ ನಾನು/ವು ಹೊನ್ನೆಮರಡಿಗೆ ಹೋದ ಕತೆ ನಿಮಗೆಲ್ಲ ಗೊತ್ತೇ ಇದೆ. (ಇಲ್ಲವಾದವರು ನೋಡಿ: ಶರಾವತಿ ಸಾಗರದ ಉದ್ದಕ್ಕೆ..) ಅಲ್ಲಿ ಸಂಘಟಕದ್ವಯರಾದ ಎಸ್.ಎಲ್ಲೆನ್ ಸ್ವಾಮಿ, ನೊಮಿತೊ ಕಾಮ್ದಾರ್ ದಂಪತಿಯ ಪ್ರೀತಿಯಲ್ಲಿ ‘ಪುನರ್ವಸು’ ಕಾದಂಬರಿ ನನಗೆ ಸಿಕ್ಕಿತು. ಮುಂದೆ ಕಾದಂಬರಿ ಓದಿದ ಸಂತೋಷದಲ್ಲಿ ಫೇಸ್ ಬುಕ್ ಸಂದೇಶಗಳ ಮೂಲಕ ಲೇಖಕ ಗಜಾನನ ಶರ್ಮರನ್ನು, ಮೊದಲ ಬಾರಿಗೆ ಎಂಬಂತೆ ಸಂಪರ್ಕಿಸಿದ್ದೆ. ಅವರು "ಇಲ್ಲ ನಾ ಮೊದಲು..." ಎಂದೇ ಉತ್ತರಿಸಿದ್ದರು. ಅದಕ್ಕೆ ನಾನು... ]

ಪ್ರಿಯರೇ,
ಐಕೆ ಬೊಳುವಾರು, ದೇರಾಜೆ ಮೂರ್ತಿ ಜತೆ ನೀವು ನನ್ನಂಗಡಿಗೆ ಬಂದಿದ್ದಿರಿ ಎಂಬ ನಿಮ್ಮ ನೆನಪು ನನಗೆ ಕುಶಿಕೊಟ್ಟಿತು. ಆದರೆ ನನ್ನ ನೆನಪಿನ ಭಿತ್ತಿಯಲ್ಲಿ ಅಂಗಡಿಯ ಮೂವತ್ತಾರು ವರ್ಷಗಳ ಸಾವಿರಾರು ಚಿತ್ರಗಳು ಕಲಸಿ ಹೋಗುತ್ತವೆ. ಆದರೆ ಈಗ ನೀವು ಹೇಳಿದ ಕರ್ನಾಟಕಕ್ಕೆ ಬೆಳಕು ಬಂದ ಕುರಿತ ನಿಮ್ಮ ಪುಸ್ತಕ ಚೆನ್ನಾಗಿ ನೆನಪಿದೆ. ಕೆವಿ ಅಕ್ಷರ ಈ ಪುಸ್ತಕ ನನಗೆ ಕಳಿಸುವಾಗ "ಬಹಳ ಮಹತ್ವದ ಪುಸ್ತಕ" ಎಂದು ಒತ್ತೂ ಕೊಟ್ಟಿದ್ದರು. ಆದರೆ ಈಗ ಆ ಪುಸ್ತಕವನ್ನು ಓದಿದ ನೆನಪು ನನಗಿಲ್ಲ, ‘ಪುನರ್ವಸು’ ನನ್ನ ಕೈಗೆ ಬಂದಾಗಲೂ ನೆನಪಾಗಲೇ ಇಲ್ಲ. ಇದು ನನ್ನ ದೊಡ್ಡಸ್ತಿಕೆಯಲ್ಲ, ಮಿತಿ!

ಪುಸ್ತಕ ವ್ಯಾಪಾರಿಯಾಗಿ ಕಾರ್ಗಲ್ಲಿನ (ಸಾಗರ) ರವೀಂದ್ರ ಪ್ರಕಾಶನದ ಸಂಬಂಧ ನನಗಿತ್ತು. ಅವರಿಂದ ಶರಾವತಿ ಮುಳುಗಡೆ ಕತೆಗಳ ಖ್ಯಾತಿಯ ನಾಡಿಸೋಜಾರ ಕೃತಿಗಳನ್ನು ಸಾಕಷ್ಟು ತರಿಸಿಕೊಂಡು ಮಾರಿದ್ದೇನೆ. ನಾಡಿಯವರ ‘ದ್ವೀಪ’ ಮಂಗಳೂರು ವಿವಿನಿಲಯಕ್ಕೆ ಪಠ್ಯವಾಗಿದ್ದಾಗ, ರವೀಂದ್ರ ಪ್ರಕಾಶನದ ಪರವಾಗಿ ನಾನೇ ಏಕೈಕ ವಿತರಣೆಗಾರನೂ ಆಗಿದ್ದೆ. ‘ಉಣ್ಣಿ ಕೆಚ್ಚಲೊಳಿದ್ದೂ....’ ಎಂಬಂತೆ ಸದಾ ವೈವಿಧ್ಯಮಯ ಪುಸ್ತಕಗಳ ಸಂಗದಲ್ಲಿದ್ದೂ ನನ್ನ ಓದು ಕಡಿಮೆ. ಶರಾವತಿ ಅಣೆಕಟ್ಟಿನ ಕರುಣ ಕತೆಗಳು ನನ್ನೊಳಗೆ ಬೇರು ಬಿಡಲಿಲ್ಲ. ಎಲ್ಲಾ ಅಭಿವೃದ್ಧಿ ಕಲಾಪಗಳ ಸಂತ್ರಸ್ತರ ಪಾಡಿನಂತೇ ಇಲ್ಲಿನದೂ ಒಂದು ದಾರುಣ ಕತೆ ಎಂದಷ್ಟೇ ಕಂಡದ್ದಿರಬೇಕು.

11 July 2014

ಶಿವಮೊಗ್ಗ ಕರ್ನಾಟಕ ಸಂಘ – ಕೂಡಲಿ!

ಪ್ರಶಸ್ತಿ, ಪುರಸ್ಕಾರ, ಸಮ್ಮಾನ ಏನೇ ಹೇಳಿದರೂ ತೆರೆಮರೆಯಾಟಗಳ ಆಯಾಮದ ಕುರಿತ ನನ್ನ ಆತಂಕವನ್ನು ಕಳೆದ ವಾರದ ಇಲ್ಲಿನ ಬರೆಹದಲ್ಲಿ ತೋಡಿಕೊಂಡಿದ್ದೆ. ಲೇಖನಕ್ಕೆ `ವ್ಯವಸ್ಥಿ’ತವಾಗಿ ನೀರೂಡಿದರೂ ಭಣಭಣಿಸಿದ ಒಣಕಡ್ಡಿ ಮೊದಲ ಮಳೆಗೆ ಗಂಟುಗಂಟಿನಲ್ಲೂ ಎಬ್ಬಿಸಿದ ಮೊಳೆ-ಸಾಲಿನಂತೆ ಮಿಂಚಂಚೆ, ಜಾಲತಾಣಗಳಲ್ಲಿ ಅಭಿನಂದನೆಗಳ ರಾಶಿ, ಮುಖಪುಸ್ತಕದಲ್ಲಿ `ಲಾಯಕ್’ಗಳ (ಲೈಕ್ಸ್) ಏರುಜ್ವರ! ನಡುವೆ ಸುಳಿವ ಮೆಲು ಮಾರುತನಂತೆ ಸಿಎನ್ನಾರ್, ಅನಂತಮೂರ್ತಿ, ವಿವೇಕ ರೈ, ವೈದೇಹಿ ಮುಂತಾದ ಹಿರಿಯರು ಸ್ವಾನುಭವದ ನೆಲೆಯಿಂದ ಶಿವಮೊಗ್ಗ ಕರ್ನಾಟಕ ಸಂಘದ ಘನತೆ ಬಗ್ಗೆ ಹೇಳಿದರು, ನನ್ನ ಒಪ್ಪಿಗೆಯನ್ನು ಸಮರ್ಥಿಸಿದರು. ಸಾರ್ವಜನಿಕ ರಂಗದಲ್ಲಿ ಗಟ್ಟಿಯಾಗಿ ಉಳಿದು ಬಂದ ಯಾವುದೇ ಸಂಸ್ಥೆಯನ್ನು ಹುಟ್ಟುಹಾಕಿ, ಮೊದಲ ನಡೆ ಕಲಿಸಿದವರು ಹೆಚ್ಚಾಗಿ ದ್ರಷ್ಟಾರರೇ ಇರುತ್ತಾರೆ. ಆದರೆ ಮುಂದುವರಿದಂತೆ, ಪಾಲು ಕೊಡುವವರಿಗಿಂತ, ಕಡಿಯುವವರ ಸಂಖ್ಯೆ ದೊಡ್ಡದು. ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಬಂದ ಮೇಲೆ ಘಂಟಾಘೋಷವಾಗಿ ಹೇಳಬಲ್ಲೆ - ಇದಕ್ಕೆ ಅಪವಾದ ೮೩ ವರ್ಷಗಳ ಹಿರಿಯ ಶಿವಮೊಗ್ಗ ಕರ್ನಾಟಕ ಸಂಘ. ಶಿವಮೊಗ್ಗ ಪೇಟೆಯಿಂದ ತುಸು ಹೊರಗಿನ ಕ್ಷೇತ್ರ ಕೂಡಲಿ. ಎಲ್ಲೋ ಹುಟ್ಟಿ, ಎಲ್ಲೆಲ್ಲೋ ಹರಿದು, ಅರಿತು ಬಳಸಿದರೆ ನಾಗರಿಕತೆಗೆ ಒಳಿತನ್ನೇ ಮಾಡುತ್ತ ಬಂದ ತುಂಗಾ ಮತ್ತು ಭದ್ರಾ ನದಿಗಳು, ಮತ್ತಷ್ಟೂ ಜೀವ ನೆಮ್ಮದಿಗೆ ಇಲ್ಲಿ ಕೂಡಿ ಮುಂದುವರಿಯುತ್ತವೆ. ಶಿವಮೊಗ್ಗ ಕರ್ನಾಟಕ ಸಂಘವೂ ಕೂಡಲಿ; ಒಳ್ಳೇ ಇತಿಹಾಸದೊಂದಿಗೆ ಒಳ್ಳೇ ವರ್ತಮಾನದ ಸಂಗಮ.

ನನಗೆ ಬಹುಮಾನ ಘೋಷಣೆಯ ಕುರಿತ ದೂರವಾಣಿ ಸಂದೇಶ, ಹಿಂಬಾಲಿಸಿದ ಪತ್ರ, ಸುಮಾರು ಹತ್ತು ದಿನವಿದ್ದಂತೆ ನಮ್ಮ (ಹೆಂಡತಿ ದೇವಕಿ ಸಹಿತ) ಪ್ರಯಾಣ ಮತ್ತು ವಾಸ್ತವ್ಯದ ವಿಚಾರಣೆ, ವಾರವಿದ್ದಂತೆ ಮುದ್ರಿತ ಆಮಂತ್ರಣದೊಡನೆ ಅವರು ಯೋಜಿಸಿದ ವಾಸ್ತವ್ಯದ ವಿವರಗಳು ಮತ್ತು ಕೊನೆಯಲ್ಲಿ ಮೂರು ದಿನವಿದ್ದಂತೆ ದೂರವಾಣಿಸಿ ಅವೆಲ್ಲ ಮುಟ್ಟಿದ್ದು ಮತ್ತು ನನ್ನ ಬರವನ್ನು ಖಾತ್ರಿಪಡಿಸಿಕೊಂಡ ಕ್ರಮ ಶಿಸ್ತಿನ ಸಿಪಾಯಿಯ ಮೆಲು ನಗೆಯಂತಿತ್ತು. ಬಸ್ಸಿಳಿದಲ್ಲಿಂದ ಮೂರು ಮಿನಿಟಿಗೆ ಹೋಟೆಲ್, ಮತ್ತಲ್ಲಿಂದ ಐದು ಮಿನಿಟಿಗೆ ಕರ್ನಾಟಕ ಸಂಘ. ಯೋಜನೆಯಂತೆ ಸಂಜೆ ನಾಲ್ಕಕ್ಕೆ ಪುರಸ್ಕೃತರೊಡನೆ ಸಂವಾದ. ಆ ಸಂಜೆ ಸಮಯ ನಾಲ್ಕರ ಗಡಿ ದಾಟಲು, ಸಂಘದಲ್ಲಿನ `ಪುರಸ್ಕೃತರೊಡನೆ ಸಂವಾದ’  ಕಲಾಪದ ಆರಂಭವನ್ನು ಕಾದಿತ್ತು!

04 July 2014

ಕುಮಾರ ಪರ್ವತ ಮತ್ತು ಕುಕ್ಕೆ ಪ್ರಶಸ್ತಿ!

ಕಳೆದ ತಿಂಗಳು ನನಗೊಂದು ಅನಿರೀಕ್ಷಿತ ದೂರವಾಣಿ ಕರೆ,  “ಶಿವಮೊಗ್ಗ ಕರ್ನಾಟಕ ಸಂಘದ ಕಾರ್ಯದರ್ಶಿ ಮಾತಾಡುತ್ತಿದ್ದೇನೆ. ನಿಮ್ಮ ಪುಸ್ತಕ – ಕುಮಾರ ಪರ್ವತದ ಸುತ್ತ ಮುತ್ತ, ಇದು ನಮ್ಮ ಸಂಘದ ೨೦೧೩ರ ಸಾಲಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನಕ್ಕೆ ಆಯ್ಕೆಯಾಗಿದೆ, ಅಭಿನಂದನೆಗಳು. ಜುಲೈ ಐದಕ್ಕೆ ವಿತರಣಾ ಸಮಾರಂಭ. ಅವಶ್ಯ ಒಪ್ಪಿ, ಬರಬೇಕು.” ಸಹಜವಾಗಿ ಕೃತಜ್ಞತೆಗಳನ್ನು ತಿಳಿಸಿದೆ. ಅವರು ಪ್ರಾಸಂಗಿಕವಾಗಿ ಕೇಳಿದ ನನ್ನ ಅಂಚೆ ವಿಳಾಸ, ಸಚಿತ್ರ ಪರಿಚಯಗಳೆಲ್ಲಕ್ಕೂ ನನ್ನ ಜಾಲತಾಣದತ್ತ ಕೈ ತೋರಿದೆ. ಸಂಭಾಷಣೆಯನ್ನು ಖಾತ್ರಿಪಡಿಸುವಂತೆ ಮೂರೋ ನಾಲ್ಕೋ ದಿನಗಳಲ್ಲೆ ಗೌರವ ಕಾರ್ಯದರ್ಶಿ – ಡಾ| ಎಚ್.ಎಸ್. ನಾಗಭೂಷಣರಿಂದ ಸಂದೇಶವಾಹಕರ ಮೂಲಕ ಪತ್ರವೂ ಬಂತು. ಅದಕ್ಕುತ್ತರ ಬರೆಯುತ್ತ, “...ತಾತ್ತ್ವಿಕವಾಗಿ ಯಾವುದೇ ಬಹುಮಾನ, ಪ್ರಶಸ್ತಿ ಮುಂತಾದವುಗಳನ್ನು ಕೇಳಿ (ಅರ್ಜಿ, ಪ್ರಭಾವ ಇತ್ಯಾದಿ) ಪಡೆಯುವುದರಿಂದ ನಾನು ಮಾರು ದೂರವಿರುತ್ತೇನೆ. (ಅವಶ್ಯ ನೋಡಿ: ಪ್ರಜಾಸತ್ತೆಗೆ ಅವಮಾನ– ಪ್ರಶಸ್ತಿ, ಸಮ್ಮಾನ) ಅಂಥ ನನ್ನ ಅರಿವಿಗೆ ಬಾರದಂತೆ, ಪುಸ್ತಕದ ಪ್ರಕಾಶಕ - ಅಭಿನವ ಪ್ರಕಾಶನ, ಬೆಂಗಳೂರು ಇದರ ಮಾಲಿಕ ನ. ರವಿಕುಮಾರ ಅದನ್ನು ಸಲ್ಲಿಸಿರಬೇಕು. ಅದನ್ನುಳಿದಂತೆ, ಕರ್ನಾಟಕ ಸಂಘ (ಸ್ಥಾಪನೆ ೧೯೩೦) ಸ್ವತಂತ್ರವಾಗಿ ದೊಡ್ಡ ಇತಿಹಾಸ ಮತ್ತು ಘನತೆಯನ್ನು ಕಾಯ್ದುಕೊಂಡು ಬಂದಿರುವ ಸಂಸ್ಥೆ ಎಂದೂ ತಿಳಿದಿರುವುದರಿಂದ ಸವಿನಯ ಒಪ್ಪಿಕೊಳ್ಳುತ್ತಿದ್ದೇನೆ...”

ಸುಮಾರು ಹದಿನೈದು ವರ್ಷಗಳ ಹಿಂದೊಮ್ಮೆ ನಾನು ಸ್ವಂತ ಕಾರಿನಲ್ಲಿ ನನ್ನೆಲ್ಲ ಪ್ರಕಟಣೆಗಳ ಒಂದಷ್ಟು ಪ್ರತಿಗಳನ್ನು ಹೇರಿಕೊಂಡು, ಮಗನನ್ನು ಜೊತೆಮಾಡಿಕೊಂಡು, ನಾಲ್ಕೈದು ದಿನಗಳ ಮಾರಾಟ-ಪ್ರವಾಸ ನಡೆಸಿದ್ದೆ. ಆಗ ಶಿವಮೊಗ್ಗಕ್ಕೆ ಹೋಗಿದ್ದಾಗ ಬಹುಖ್ಯಾತವಾಗಿದ್ದ ಈ ಸಂಘಕ್ಕೆ ಭೇಟಿ ಕೊಟ್ಟಿದ್ದೆ. ಆಗ ಅವರು ತಮ್ಮ ಗ್ರಂಥಾಲಯದಲ್ಲಿಲ್ಲದ ಪುಸ್ತಕಗಳನ್ನು ನಗದು ಕೊಟ್ಟು ಕೊಳ್ಳುವುದರಲ್ಲಿ ಧಾರಾಳಿಗಳೇ ಆಗಿದ್ದರು. ಮುಂದೆಂದೋ ಇದೇ ಸಂಘ ಎಸ್.ವಿ ಪರಮೇಶ್ವರ ಭಟ್ಟರ ಕವನ ಸಂಕಲನವೊಂದನ್ನು ಪ್ರಕಟಿಸಿದಾಗ ವ್ಯಾಪಾರಿಯಾದ ನನ್ನನ್ನು ಸಂಪರ್ಕಿಸಿದ್ದರು. ನಾನು ಬಯಸಿದಂತೆ ಸಹಜ ವ್ಯವಹಾರಕ್ಕೂ ಸಂಘ ಒಲಿದು ವರ್ತಿಸಿತ್ತು. ಆದರೀಗ ಹೊಸ ಸಂಬಂಧ, ನನಗೂ ಮುಜುಗರ. ಎರಡು ವಾರಗಳ ಹಿಂದೆ ಮಂಟಪ ತ್ರಿವಳಿ ಎಂಬ ಯಕ್ಷಗಾನ ಕಾರ್ಯಕ್ರಮವನ್ನು ನೋಡಿ ಸಂತೋಷಿಸಲು ನಾನು ಶಿವಮೊಗ್ಗಕ್ಕೆ ಹೋಗಿದ್ದೆ. ಆಗ ಸಿಕ್ಕ ಸಣ್ಣ ಸಮಯಾವಕಾಶದಲ್ಲಿ ಗೆಳೆಯ ಮನೋಹರ ಉಪಾಧ್ಯರ ಜತೆಯಲ್ಲಿ ಸಂಘಕ್ಕೇ ಹೋಗಿದ್ದೆ. ಸಂಘದ ಕಾರ್ಯಕಾರೀ ಸಮಿತಿಯ ಬೈಠಕ್ಕು ನಡೆಯುವುದಿತ್ತು. ಹಾರ್ದಿಕವಾಗಿ ನಮ್ಮನ್ನು ಬರಮಾಡಿಕೊಂಡು, ಉಪಾಹಾರವಿತ್ತು, ಲಭ್ಯ ಮಾಹಿತಿಗಳನ್ನಿತ್ತರು, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ತಪ್ಪಿಸ್ಕೊಳ್ಳಬಾರದೆಂದು ಮೌಖಿಕ ಒತ್ತಾಯ ಕೊಟ್ಟು, ಕಳಿಸಿಕೊಟ್ಟರು.

04 May 2012

ಶಿಲಾರೋಹಿಯ ಕಡತ


ಅತ್ರಿ ಜಾಲತಾಣದಲ್ಲಿ ನಾನು ಚದುರಿದಂತೆ ಬರೆದ, ಮುಖ್ಯವಾಗಿ ಶಿಲಾರೋಹಣ ಸಾಹಸಗಳ ಸಂಕಲನ, ಈಗ ಸುಂದರ ಮುಖಪುಟ ಹೊತ್ತು ‘ಶಿಲಾರೋಹಿಯ ಕಡತ’ ಎಂಬ ಪುಸ್ತಕವಾಗಿ ಬಂದಿದೆ. ಇದನ್ನು ಬೆಂಗಳೂರಿನ ಬರಹ ಪಬ್ಲಿಷಿಂಗ್ ಹೌಸ್ ಅಥವಾ ಪ್ರಗತಿ ಗ್ರಾಫಿಕ್ಸಿನ ಡಾ| ಎಂ. ಭೈರೇಗೌಡರು ಬಯಸಿ ಪಡೆದು, ಪ್ರಕಟಿಸಿದ್ದಾರೆ. ಸುಮಾರು ನೂರಾಮೂವತ್ತು ಪುಟಗಳ, ಸುಂದರ ಮುದ್ರಣದ ಸಚಿತ್ರ ಪುಸ್ತಕ ರೂಪಾಯಿ ನೂರರ ಬೆಲೆಯಲ್ಲಿ ಪುಸ್ತಕಮಳಿಗೆಗಳಲ್ಲಿ ನಿಮ್ಮ ಕೈ ಸೇರಲು ಕಾದಿವೆ. ಅಲ್ಲಿ ನಿರಾಶೆಯಾದರೆ ನೇರ ನನಗೆ ಅದರ ಪೂರ್ಣ ಮೊತ್ತವನ್ನು (ರೂ. ನೂರು) ಮನಿಯಾರ್ಡರ್ ಮೂಲಕ ಕಳಿಸಿಕೊಟ್ಟರೆ, ಅಂಚೆ ವೆಚ್ಚ ನಾನೇ ಭರಿಸಿಕೊಂಡು ಕಳಿಸಿಕೊಡಬಲ್ಲೆ. ಮಾರ್ಚಿನಲ್ಲಿ ಹೀಗೇ ಅಭಿನವ ಪ್ರಕಾಶನದಿಂದ ಪ್ರಕಟವಾದ ನನ್ನ ಇನ್ನೊಂದು ಕೃತಿ - ದ್ವೀಪ ಸಮೂಹದ ಕಥೆ (ಅಂಡಮಾನ್ ಮತ್ತು ಲಕ್ಷದ್ವೀಪಗಳ ಪ್ರವಾಸ ಕಥನ) ರೂ ಎಪ್ಪತ್ತೈದು ಮತ್ತು ಸದ್ಯ ಅತ್ರಿ ಪ್ರಕಾಶನದಲ್ಲೇ ದಾಸ್ತಾನು ಉಳಿದಿರುವ ಯಾವವು ಬೇಕಿದ್ದರೂ (ಕೊನೆಯಲ್ಲಿ ಪಟ್ಟಿ ಲಗತ್ತಿಸಿದ್ದೇನೆ) ಕೇವಲ ಮುದ್ರಿತ ಬೆಲೆಯನ್ನು ಮಾತ್ರ ಸೇರಿಸಿ ಕಳಿಸಿ, ಸಾಗಣೆ ವೆಚ್ಚ ನಾನೇ ವಹಿಸಿಕೊಂಡು ಕಳಿಸುತ್ತೇನೆ.

04 March 2012

ದ್ವೀಪ ಕಥನದಿಂದ ಕಾದಂ-ಸಂಗೀತದವರೆಗೆ


ಭೌತಿಕವಾಗಿ ಅಂಗಡಿಯನ್ನು ಕಟ್ಟಿದಷ್ಟೇ ಕಳಚಿಕೊಳ್ಳುವಲ್ಲೂ ಕಟ್ಟುಪಾಡುಗಳಿವೆ! ಆ ಅನಿವಾರ್ಯತೆಯಲ್ಲಿ ನಾನು ತೊಡಗಿದ್ದಂತೆ ಅಂದು (೪-೨-೧೨), ನಾನು ಕಾದಿರದ ಗೆಳೆಯ - ಅಭಿನವ ಪ್ರಕಾಶನದ ನ. ರವಿಕುಮಾರ್ ದೂರವಾಣಿಸಿದರು. ಅವರು ವರ್ಷದ ಹಿಂದೆ ನಾನು ಅತ್ರಿಯ ಪ್ರಕಾಶನ ವಿಭಾಗವನ್ನು ಮುಚ್ಚಿದ ದಿನವೇ ಮನವಿ ಕೊಟ್ಟಿದ್ದರು “ನಿಮ್ಮ ಒಂದಾದರೂ ಕೃತಿಯನ್ನು ಪ್ರಕಟಿಸುವ ಅವಕಾಶ ನನಗೆ ಕೊಡಬೇಕು.” ಗಣಕಕ್ಕೆ ತಲೆ ತುಂಬುವವರಿಗೆಲ್ಲಾ ಇರುವ ಅನುಕೂಲ ನನಗಿತ್ತು. ವಾರಗಟ್ಟಳೆ ಕುಳಿತು, ರಾಶಿ ಕಾಗದದಲ್ಲಿ, ಮಸಿ ಬಸಿದು ಅಕ್ಕರಮಣಿ ಪೋಣಿಸುವ ಶ್ರಮವಿಲ್ಲ. ಇಲ್ಲಿ (ಜಾಲತಾಣದಲ್ಲಿ) ಆಗಷ್ಟೇ ಲಕ್ಷದ್ವೀಪ ಕಥನ ಮುಗಿಸಿದ್ದೆ. ಅದಕ್ಕೆ ಎರಡು ವರ್ಷದ ಹಿಂದೆ ಧಾರಾವಾಹಿಸಿದ್ದ ಅಂಡಮಾನ್ ಕಥನವನ್ನು ಜೊತೆಮಾಡಿ, ಪುಸ್ತಕರೂಪಕ್ಕೆ ಪರಿಷ್ಕರಿಸಿ, ಒಂದೇ ಕೀಲಿ ಬಳಸಿದೆ - ‘ಕಳುಹಿಸು.’

11 October 2010

ವನ್ಯಜೀವಿ ಸಪ್ತಾಹಕ್ಕೆರಡು ಅಮೋಘ ಕೊಡುಗೆಗಳು

ದಿಟದ ನಾಗರಕ್ಕೆ ಮಣಿಯಿರೋ


ನನ್ನ ಹವ್ಯಾಸೀ ವಾಸನೆಗಳು ನನ್ನ ವೃತ್ತಿರಂಗಕ್ಕೂ (ಪುಸ್ತಕ ವ್ಯಾಪಾರ) ದಟ್ಟವಾಗಿ ವ್ಯಾಪಿಸಿರುವುದರಿಂದ ಪರ್ವತಾರೋಹಣ ಕೂಟ ಕಟ್ಟಿದೆ, ಯಕ್ಷಗಾನಾಸಕ್ತರನ್ನು ಮೇಳೈಸಿದೆ, ಬಳಕೆದಾರ, ವನ್ಯ, ಪರಿಸರ ಇತ್ಯಾದಿ ಜಾಗೃತಿಗಳಲ್ಲಿ ಕೈಜೋಡಿಸುವಂತಾದೆ. ನನ್ನ ಹುಚ್ಚುಗಳಿಗೆ ಪೂರಕವಾಗಿ ನನ್ನಲ್ಲಿಗೆ ಬರುವ ಗಿರಾಕಿಗಳಲ್ಲೂ ಸುಮಾರು ಜನ ‘ವಿಚಿತ್ರದವರೇ’! ಉಳಿದವರ ವಿಚಾರ ಹಾಗಿರಲಿ, ಹೀಗೇ ಕೆಲವು ವರ್ಷಗಳ ಹಿಂದೆ ಪರಿಚಯವಾದ ಉಡುಪಿಯ ಗುರುರಾಜ ಸನಿಲ್ ಬಗ್ಗೆಯಂತೂ ‘ಇವರದು ಒಂದು ಸುತ್ತು ಹೆಚ್ಚು’ ಎಂದನ್ನಲೇಬೇಕು. ಪ್ರಾಯ ನಲ್ವತ್ಮೂರು ವರ್ಷ, ಓದು ಕೇವಲ ಎಸ್ಸೆಲ್ಸಿ, ಹೆಂಡತಿ ಮತ್ತು ಒಬ್ಬ ಮಗನ ಸಂಸಾರಿ, ವೃತ್ತಿಯಲ್ಲಿ ಕಾರು ಬಾಡಿಗೆಯ ಚಾಲಕ. ಇವರ ಹವ್ಯಾಸ ಜೀವಪಣಕ್ಕಿಟ್ಟು ಹಾವುಗಳ ರಕ್ಷಣೆ ಎಂದರೆ ನೀವು ನಂಬಲೇಬೇಕು. ಒಂದಲ್ಲ, ಎರಡಲ್ಲ ಹನ್ನೊಂದು ಬಾರಿ ವಿಷದ ಹಾವುಗಳಿಂದ ಕಚ್ಚಿಸಿಕೊಂಡು ಪಡಬಾರದ ಸಂಕಟವೆಲ್ಲ ಅನುಭವಿಸಿ (ಅದರಲ್ಲೂ ಎರಡು ಸಲವಂತೂ ಮರಣಾಂತಿಕ ಎನ್ನುವ ಸ್ಥಿತಿ ಮುಟ್ಟಿ, ಮರಳಿ) ಬಂದರೂ ಸ್ವಂತ ಮಗನ ತಲೆಯ ಮೇಲೇ ಕೈಯಿಟ್ಟು ಪಾರಂಪರಿಕ ನಂಬಿಕೆಯ ಆಣೆ ಹಾಕಿ ‘ಹಾವಿನ ಉಸಾಬರಿ ಬಿಟ್ಟೆ’ ಎಂದರೂ ಬಿಡದ ನಂಟು ಇವರದು ಹಾವುಗಳೊಡನೆ. ಸುಮಾರು ಮೂವತ್ತು ವರ್ಷಗಳಲ್ಲಿ ಇವರು ರಕ್ಷಿಸಿದ ಹಾವುಗಳ ಸಂಖ್ಯೆ ಕಡಿಮೆ ಎಂದರೂ ಹದಿನೈದು ಸಾವಿರ ಮೀರುತ್ತದೆ!


12 January 2009

ಯಕ್ಷೋಪಾಸನೆ

ಸೂರಿಕುಮೇರು ಗೋವಿಂದ à²à²Ÿà³ (ಚಿತ್ರ ಮನೋಹರ ಉಪಾಧ್ಯ)(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ ಅಗತ್ಯದಲ್ಲಿ ಯಕ್ಷೋಪಾಸನೆ ಕೊಳ್ಳುತ್ತಿದ್ದರೂ ನೀವು ವೈಯಕ್ತಿಕವಾಗಿ ನನಗೆ ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ ಎಲ್ಲರಿಗೆ ನಾನು ಹೇಳುವುದಿಲ್ಲ. ಆದರೆ ನೀವು ಮಾತ್ರ ಪುಸ್ತಕ ಓದಿ ನಿಮ್ಮ ಅಭಿಪ್ರಾಯ ತಿಳಿಸಬೇಕು” ಎಂದು ಹೇಳಿಹೋದಿರಿ. ಹಾಗಾಗಿ ಮುಂದಿನ ಸಾಲುಗಳನ್ನು ಓದುವ ಕಷ್ಟ ಕೊಡುತ್ತಿದ್ದೇನೆ. ಕಡುಬಡತನ, `ನಮ್ಮವರು’ ಎನ್ನಬಹುದಾದವರಿಂದಲೂ (ಅದೇ ಹೆಚ್ಚೇನೋ!) ಆದ ದ್ರೋಹಗಳು, ಯಾವುದೇ ಆದರ್ಶ ಕಟ್ಟಿಕೊಡುವವರಿಲ್ಲದೆಯೂ ನೀವು ರೂಪಿಸಿಕೊಂಡ ಜೀವನ, ಹಳೆಯ ಕಹಿಗಳ್ಯಾವವೂ ನಿಮ್ಮ ವರ್ತಮಾನವನ್ನು ಕಲುಷಿತಗೊಳಿಸದಂಥ ನಿಮ್ಮ ಸಂಯಮ ಹೀಗೆ ಪಟ್ಟಿ ಮಾಡ ಹೋದರೆ ಮೊದಲೇ ನಿಮ್ಮ ಬಗ್ಗೆ ಇದ್ದ ಪ್ರೀತಿ, ಗೌರವ ಅಪಾರವಾಗುತ್ತದೆ. ಹೀಗೆ ಇನ್ನಷ್ಟು ವಿವರಗಳಲ್ಲಿ ನಿಮ್ಮನ್ನೇ ನಿಮಗೆ ತೋರಿಸುವ ಬದಲು ಸದ್ಯ ನನಗೆ ಕಾಣಿಸಿದ ಭಿನ್ನಮತವನ್ನಷ್ಟೇ ಒಕ್ಕಣಿಸುತ್ತೇನೆ.