Showing posts with label ನಂದಿ ಬೆಟ್ಟ. Show all posts
Showing posts with label ನಂದಿ ಬೆಟ್ಟ. Show all posts

05 April 2013

‘ಬೋರೇಗೌಡ’ನ ಇನ್ನಷ್ಟು ನೆನಪುಗಳು!


(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ)
ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ!

ಬಾಲ್ಯದಲ್ಲಿ ನಾನು ಭಾರೀ ಕಾರುಭಾರಿಯೇನೂ ಅಲ್ಲ. (ಈಗ ಹೌದೆಂದೂ ಅಲ್ಲ! ಈ ಜಾಲತಾಣದ ದೆಸೆಯಲ್ಲಿ ಅನಿವಾರ್ಯವಾಗಿ ನನಗೆ ಬಂದನಾಯಕತ್ವಕ್ಕೆ ಇಷ್ಟು ಹೇಳಬೇಕಾಗಿದೆ) ಆದರೂ ಮಡಿಕೇರಿ ಮತ್ತು ಬಳ್ಳಾರಿಯಲ್ಲಿ ವಿಸ್ತಾರದಲ್ಲೇ ಬೆಳೆದ ನಮಗೆ (ಅತ್ರಿ - ಅಶೋಕ, ಆನಂದ, ಅನಂತ) ಹನುಮಂತನಗರ ಕಿಷ್ಕಿಂಧೆಯ ನೆನಪನ್ನೇ ಕೊಟ್ಟಿತು! ಅಲ್ಲಿನ ಸಂಜೆಗಳು ನನಗೆ ಆಸುಪಾಸಿನ ಮನೆಯ ಹುಡುಗರೊಡನೆ ದಾರಿಬದಿಯಲ್ಲೋ ಇನ್ನೂ ನಿವೇಶನಗಳಾಗಿ ಸ್ಪಷ್ಟ ಅಭಿವೃದ್ಧಿಗೊಳ್ಳದ ಹದಿನೈದನೇ ಅಡ್ಡ ರಸ್ತೆಯಿಂದಾಚಿನ ಮೈದಾನದಲ್ಲೋ ಕಬಡ್ಡಿ, ಕ್ರಿಕೆಟ್, ಗಾಳಿಪಟ, ಬುಗುರಿಯಾಟಗಳಲ್ಲಿ ಮುಗಿಯುತ್ತಿತ್ತು.

ಆಗ ಇಂದಿನಂತೆ ಸಿದ್ಧ ಗಾಳಿಪಟಗಳು ಮಾರಾಟಕ್ಕೆ ಸಿಗುತ್ತಿದ್ದದ್ದು ನನಗೆ ತಿಳಿದಿರಲಿಲ್ಲ. ಯಾರೋ ಸಹಪಾಠಿಯಿಂದ ಕಲಿತು, ಹಳೇ ಪತ್ರಿಕೆಯ ಪುಟಗಳಿಗೆ ಮನೆಯ ಹಿಡಿಸೂಡಿ ಕಡ್ಡಿ ಹೊಸೆದು, ಅನ್ನದ ಅಂಟು ಹಚ್ಚಿ ತೇಲಿಬಿಡುವ ನನ್ನ ಹುಚ್ಚಿಗೆ ಅಮ್ಮನ ಎಂಬ್ರಾಯಿಡರಿ ನೂಲೆಲ್ಲಾ ಖಾಲಿಯಾಗಿತ್ತು. ಪಟ್ವೇನೋ ಮಾಡ್ಬೌದೂ. ಸೂಸ್ತ್ರ ಕಟ್ಟೋದೇ ಇರೋದು ಎನ್ನುವ ಕೋಣಗಳ ನಡುವೆ ನಾನು ಅದೃಷ್ಟದಲ್ಲೆ ಜಾಣ ಅನ್ನಿಸಿಕೊಂಡಿದ್ದೆ! ಒಂದಕ್ಕೊಂದು ಜಂಟಿ ಹಾಕಿ ಐದು ಪಟದವರೆಗೂ ನಾನು ಗಾಳಿಗೇರಿಸಿದ್ದಿತ್ತು. ನಮ್ಮ ಮನೆಯ ಬೋಳು ತಾರಸಿಗೇರಿ (ಎರಡನೇ ಮಾಳಿಗೆ) ಪಟ ಏರಿಸಿದರೆ, ಅದು ಸಾಮಾನ್ಯವಾಗಿ ಯಾವುದೇ ಲೈಟ್ ಕಂಬ, ತಂತಿಗೆ ಸಿಗದಂತೆ ಮೇಲೇರಿ ಹಾರುತ್ತಿತ್ತು. ಇನ್ನೂ ದೊಡ್ಡ ಲಾಭವೆಂದರೆ ಕೊಳೆಗೇರಿಗಳೇ ಆಗಿದ್ದ ಅತ್ತಿತ್ತಣ ಹಳ್ಳಿಯ ಪೋಲಿ ಪಟಾಲಮ್ಮು ಎಟುಕಿಗೆ ನನ್ನ ಪಟ ನಿಲುಕದ ಎತ್ತರವನ್ನೂ ಸಾಧಿಸುತ್ತಿತ್ತು.

22 March 2013

ಬೋರೇಗೌಡ ಬೆಂಗಳೂರಿಗ್ಬಂದ

(ನಂದಿಹೋಗಲಿರುವ ನಂದಿಯ ಎರಡನೇ ಭಾಗ)

ಈ ಸಲದ ನಮ್ಮ ಬೆಂಗಳೂರು ಪ್ರವಾಸದ ಮುಖ್ಯ ಕಲಾಪ ಹಿಂದಿನ ಲೇಖನದಲ್ಲಿ ಹೇಳಿದಂತೆ  -  ಮಂಟಪರ ‘ಭಾಮಿನಿ’ ಪ್ರದರ್ಶನ ಮತ್ತು ಚರ್ಚೆ. ನಂದಿ ಬೆಟ್ಟದಿಂದ ಹೊರಟ ನಾವು ಸಕಾಲಕ್ಕೆ ತಲಪಿಕೊಂಡೆವು. ಆರೂವರೆಗೇ ಅನೌಪಚಾರಿಕವಾಗಿ ತೊಡಗಿದ ಚರ್ಚೆ, ಪ್ರದರ್ಶನ ಮತ್ತು ಮುಂದುವರಿದ ಚರ್ಚೆ ರಾತ್ರಿ ಹತ್ತೂವರೆಯವರೆಗೂ ಚೆನ್ನಾಗಿಯೇ ನಡೆಯಿತು. ಇದರ ಕುರಿತು ಮುಂದೆಂದಾದರೂ ಹೆಚ್ಚು ಅಧಿಕಾರಯುತವಾಗಿ ಅಭಯನೇ ಬರೆಯಬೇಕಾದ್ದರಿಂದ ನಾನು ವಿಷಯಾಂತರಿಸುತ್ತೇನೆ.

ಹನುಮಂತನಗರ

೧೯೬೫ರ ಸುಮಾರಿನಿಂದ ನಾಲ್ಕೈದು ವರ್ಷ ನನ್ನ ತಂದೆ ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಸಹಜವಾಗಿ ನಾನು ಬೆಂಗಳೂರಿನಲ್ಲೇ ಪ್ರೌಢಶಾಲಾ (ಬೆಂಗಳೂರು ಹೈಸ್ಕೂಲ್) ಮತ್ತು ಪದವಿಪೂರ್ವ (ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜು ಅಥವಾ ಆ ಕಾಲದಲ್ಲಿ ಜನಪ್ರಿಯವಾಗಿ ಪ್ರಚಾರದಲ್ಲಿದ್ದಂತೆ ಗ್ಯಾಸ್ ಕಾಲೇಜ್ - G.A & S Collge!) ವಿದ್ಯಾಭ್ಯಾಸವನ್ನು ಮಾಡಿದ್ದೆ. ನಮ್ಮ ಬಾಡಿಗೆ ಮನೆ ಹನುಮಂತನಗರದ ಹದಿಮೂರನೇ ಅಡ್ಡ ರಸ್ತೆಯಲ್ಲೊಂದು ಮಾಳಿಗೆಯಲ್ಲಿತ್ತು. ಮೊನ್ನೆ ಬೆಂಗಳೂರಲ್ಲಿದ್ದ ಎರಡನೇ ಸಂಜೆ ನನಗೊಮ್ಮೆ ಅಲ್ಲೆಲ್ಲಾ ಸುತ್ತಿ ಬರುವ ಉತ್ಸಾಹ ಬಂತು. ಅಭಯನೇನೋ ಗೂಗಲ್ ನಕ್ಷೆ ಕೊಟ್ಟೇ ಕೊಟ್ಟ. ಆದರೆ ಮೈಸೂರು ರಸ್ತೆಯಲ್ಲಿದ್ದ ನನಗೆ, ಚಾಮರಾಜಪೇಟೆ, ಬಸವನಗುಡಿರಸ್ತೆ, ಹನುಮಂತನಗರವೆಲ್ಲ “ಅಂಗೈ ರೇಖೆ, ಎಲ್ಲಿಗೆ ಮಾರ್ಗದರ್ಶಿ” ಎಂಬ ಉಡಾಫೆ. ದೇವಕಿಯನ್ನು ಬೆಂಬಲಕ್ಕಿಟ್ಟುಕೊಂಡು ಬೈಕೇರಿ ಹೊರಟೇಬಿಟ್ಟೆ.

15 March 2013

ನಂದಿಹೋಗಲಿರುವ ನಂದಿ - ಖ್ಯಾತ ಗಿರಿಧಾಮದ ವಿಭಿನ್ನ ಕತೆ!!

ಅಭಯನಿಗೀಗ ಕತೆ ಹೇಳುವ ವೃತ್ತಿ. ನಟರಾಜನಿಂದ ತೊಡಗಿ, ಝಣ ಝಣ ಲಕ್ಷ್ಮೀಪುತ್ರನಿಗೆ, ಕಟಿಪಿಟಿ ನಟೀಮಣಿಗೆ, ಕಾವ್ಯಶ್ರೀಗೆ, ವಿಶ್ವಕರ್ಮನಿಗೆ, ಕಂಠಶ್ರೀಗೆ ಮುಂತಾದವರಿಗೆ ಹೊಸಹೊಸದಾಗಿ ಬರೆದು ಓದುತ್ತಿರುತ್ತಾನೆ. ಕೆಲವೊಮ್ಮೆ ಇವರನ್ನೆಲ್ಲ ಸೇರಿಸಿ ಸಮೂಹ ಘೋಷದಲ್ಲಿ ಸಾರ್ವಜನಿಕಕ್ಕೂ ಇವನು ಹೇಳುವುದು ಕಥೆಯನ್ನೇ. (ಹಾಗೆ ಬಂದವುಗಳೆ ಗುಬ್ಬಚ್ಚಿಗಳು, ಶಿಕಾರಿ ಮತ್ತು ಇನ್ನೇನು ಬರಲಿರುವ ಸಕ್ಕರೆ.) ಅವನ ಮೊದಲ ಪಟ್ಟಿಯಲ್ಲೇನೂ ಬಾರದ ನಮಗೂ ಅವನು ಕತೆಗಳನ್ನು ಕೇಳಿಸುವುದು ಇದೆ. ಆವನ ಬಾಲ್ಯದಲ್ಲಿ ನಾವು ಅವನಿಗೆ ಹೇಳಿರಬಹುದಾದ ಕತೆಗಳ ಸಾಲ ತೀರುವಳಿಯೋ, ಸೇಡು ತೀರುವಳಿಯೋ ನಾವು ಲೆಕ್ಕವಿಟ್ಟವರಲ್ಲ. ಅವನಿಗೋ ಕತೆ ಮೊಳೆಯುವ ಕಾಲದಲ್ಲೇ ಬೆಳೆಯ ಸಿರಿ ಅಂದಾಜಿಸುವ ತವಕ. ಹಾಗೇ ಮೊನ್ನೆ ದಿಢೀರ್ ಅವನ ದೂರವಾಣಿ ಕರೆ “ಅಪ್ಪಾ, ಮಿಂಚಂಚೆಯಲ್ಲಿ ಒಂದು ಕತೆ ಕಳಿಸಿದ್ದೇನೆ. ಕೂಡಲೇ ನೀವಿಬ್ಬರೂ ಓದಿ ವಿಮರ್ಶೆ ತಿಳಿಸ್ತೀರಾ?” ನಾನು ಕತೆ, ಕಾದಂಬರಿಗಳಿಗೆ ದೂರ. ಅದಕ್ಕೂ ಹೆಚ್ಚಿಗೆ ಕತೆಯನ್ನು ಒಂದು ದೃಶ್ಯ ನಿರೂಪಣೆಯ ವಸ್ತುವಾಗಿ ಗ್ರಹಿಸುವಲ್ಲಿ ದೇವಕಿಗಿಂತ ತುಂಬಾ ಹಿಂದುಳಿದವ. ಆದರೆ ದೇವಕಿ ಹಾಗಲ್ಲ. ಅವಳಿಗೆ ಕಾದಂಬರಿ ತೆರೆದರೆ ಊಟ ನಿದ್ರೆಗಳ ಪರಿವೆಯೂ ಇರದ ಕಾಲವಿತ್ತು. ಕಾಲಧರ್ಮಾನುಸಾರ ಈಗ ಆಯ್ದ ಟೀವಿ ಸರಣಿ ತೆರೆದರೂ ಹಾಗೇ. ನಾನು ಆ ಕತೆಯ ಪ್ರೇರಣೆಗಳ ಬಗ್ಗೆ ತುಸು ಯೋಚನೆ ಹರಿಸಿದರೆ, ದೇವಕಿ ಪಾತ್ರಧಾರಿಗಳ ಆಯ್ಕೆಯ ಮಟ್ಟದಲ್ಲೂ ಸಲಹೆಗಳನ್ನಿಟ್ಟಳು.