ಶ್ಯಾಮಲಾ
ಮಾಧವ ಇವರ ಆಥ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ - ೪೦
ಪ್ರಕೃತಿ ದೇವಿಯ ಸೊಬಗು ದೇಗುಲದಿ ಆನಂದವೇ ಪೂಜೆ; ಮೌನವೇ ಮಹಾಸ್ತೋತ್ರ
- ಕುವೆಂಪು
ಮಲೆನಾಡಿನ ತರು ಲತೆ, ಗಿರಿ, ಶಿಖರ ಝರಿ, ತೊರೆಗಳು, ಮತ್ತಲ್ಲಿ ನಮ್ಮ ಕುವೆಂಪು ಕವಿಮನೆ ಬಹುಕಾಲದಿಂದ ನಮ್ಮ ಸೃಜನಾ ಬಳಗವನ್ನು ಕೈ ಬೀಸಿ ಕರೆಯುತ್ತಿತ್ತು. ಈ ಪ್ರವಾಸದ ಬಹುದಿನಗಳ ಕನಸು ನನಸಾದ ರೋಚಕ ಕ್ಷಣವದು! ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಹದಿಮೂರು ಸದಸ್ಯೆಯರು ರಾತ್ರಿ ಮಂಗಳೂರು ಎಕ್ಸ್ಪ್ರೆಸ್ ಏರಿ, ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಉಡುಪಿ ರೈಲು ನಿಲ್ದಾಣದಲ್ಲಿ ಬಂದಿಳಿದಾಗ, ಕುಪ್ಪಳಿಗೆ ನಮ್ಮನ್ನೊಯ್ಯುವ ಮಿನಿಬಸ್ನ ಸಾರಥಿ, ಉದಯ ಕುಮಾರ್ ಅಲ್ಲಿ ನಮಗಾಗಿ ಕಾದಿದ್ದ. ಗೆಳತಿ ಮಿತ್ರಾ ವೆಂಕಟ್ರಾಜ್ ಯೋಜಿಸಿದಂತೆ, ಈ ಮಿನಿ ಬಸ್ ನಮ್ಮನ್ನು ಉಡುಪಿಯ ಅವರ ರಾವ್ ಕುಟುಂಬದ ಮನೆಗೆ
ಕರೆದೊಯ್ದಿತು. ವೆಂಕಟ್ರಾಜರ ಅಣ್ಣ ರಮೇಶ ರಾವ್ ದಂಪತಿಯಲ್ಲಿಗೆ ಸ್ನಾನಕ್ಕಾಗಿ ಹೋದ ನಮಗೆ ಆದರದ ಸ್ವಾಗತ ಕಾದಿತ್ತು. ಉಡುಪಿಗೆ ಹೋದ ಮೇಲೆ ಉಡುಪಿ ಕೃಷ್ಣನನ್ನು ಒಂದರೆ ಘಳಿಗೆಯಾದರೂ ಕಾಣದಿರುವುದೆಂತು? ದೇವಳ ಶಿಲ್ಪ ವಿನ್ಯಾಸಕಾರರಾದ ರಮೇಶ ರಾವ್ ಅವರಿಂದಾಗಿ ನಮಗೆ ಸುಲಭದಲ್ಲಿ ಕೃಷ್ಣ ದರ್ಶನವಷ್ಟೇ ಅಲ್ಲ, ಪ್ರಸಾದರೂಪವಾಗಿ ಪಂಚ ಭಕ್ಷ್ಯ ಪರಮಾನ್ನದ ಭೋಜನವೂ ಪ್ರಾಪ್ತಿಯಾಯ್ತು. ಅಂಗಣದಲ್ಲಿ ನಿಂತಿದ್ದ ಬೃಹದ್ರಥವನ್ನೂ ಕನಕನ ಕಿಂಡಿಯ ಮುದ್ದು ಕೃಷ್ಣನನ್ನೂ ಹೂವಿನಂಗಡಿಯ ಬಕುಲದ ಮಾಲೆ, ಮಲ್ಲಿಗೆ ಚೆಂಡುಗಳನ್ನೂ ಕಣ್ಣಲ್ಲಿ ತುಂಬಿಕೊಂಡು, ಕುಪ್ಪಳಿ ತಲುಪುವ ಧಾವಂತದಲ್ಲಿ, ಆ ಕಿರು ಭೇಟಿಯಲ್ಲೇ ಆಪ್ತರಾದ ರಾವ್ ದಂಪತಿಗಳಿಂದ ಬೀಳ್ಕೊಂಡು ಉದಯ ರಥವೇರಿ ಮಲೆಗಳತ್ತ ಸಾಗಿದೆವು.