(ಮರಣೋತ್ತರ
ನುಡಿನಮನಗಳು ೩)
(ಬಾಗಲೋಡಿ
ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ
ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೮)
-
ಎಲ್.ಎಸ್. ಶೇಷಗಿರಿರಾವ್
ಆಧುನಿಕ ಕನ್ನಡ ಸಣ್ಣ ಕತೆಗಳ ಲೋಕದಲ್ಲಿ
‘ಅನನ್ಯ’ ಎನ್ನಿಸಿಕೊಳ್ಳುವ ಕಥೆಗಾರರು ಬಾಗಲೋಡಿ ದೇವರಾಯರು. ಬಾಗಲೋಡಿಯವರು ವ್ಯಂಗ್ಯವನ್ನು ಶಕ್ತವಾಗಿ
ಬಳಸಿದರು. ಬಲುಮಟ್ಟಿಗೆ ಅವರ ಸಾಹಿತ್ಯಕ್ಕೆ ಬಣ್ಣವನ್ನು ಕೊಟ್ಟಿದ್ದು ವ್ಯಂಗ್ಯ ಎನ್ನುವ ಮಾತು ಪರಿಚಿತವಾದದ್ದು.
ಆದರೆ ಅವರ ವಿಶಿಷ್ಟ ರೀತಿಯಲ್ಲಿ ವ್ಯಂಗ್ಯವನ್ನು ಬಳಸಿದ್ದನ್ನು ಕನ್ನಡ ಕಥಾಸಾಹಿತ್ಯದಲ್ಲಿ ಕಾಣಲಾರೆವು.
ರಷ್ಯದ ದೊಯಸ್ತವಿಸ್ಕಿ, ಟಾಲ್ ಸ್ಟಾಯ್ ಇಂಥವರ ಕಥಾಸಾಹಿತ್ಯದಲ್ಲಿ ಕಾಣುವ ವ್ಯಂಗ್ಯ ಇದು. ಈ ವ್ಯಂಗ್ಯ
ಬದುಕಿನ ವಿಶಿಷ್ಟ ದರ್ಶನದಿಂದ ಮೂಡಿದ್ದು. ಆ ದರ್ಶನ ಪ್ರಕಟವಾಗುವ ರೀತಿಗೆ ಅನಿವಾರ್ಯವಾದದ್ದು. ಬದುಕಿನ
ಸಂಕೀರ್ಣವಾದ ಅನುಭವವನ್ನು ಹಿಡಿದಿಡಲು ಸಾಹಿತ್ಯ ಸೃಷ್ಟಿಸಿರುವ ಸಾಧನಗಳಲ್ಲಿ ಒಂದು ವ್ಯಂಗ್ಯ. ಒಂದು
ಸನ್ನಿವೇಶದಲ್ಲಿ ಇರಬೇಕಾದ ಸ್ಥಿತಿಗಿಂತ ವಾಸ್ತವತೆ ಭಿನ್ನವಾಗಿದ್ದು, ಭಿನ್ನತೆ ಆಕ್ಷೇಪಾರ್ಹ ವಾದ
ಎಂದು ಕಂಡಾಗ ವ್ಯಂಗ್ಯ ಮೂಡುತ್ತದೆ; ನೇರವಾಗಿ ರೂಪ ತಾಳುತ್ತಿರುವ ನಿರೂಪಣೆಗಿಂತ ವಾಸ್ತವ ಭಿನ್ನ ಎಂಬುದು
ಹಲವು ರೀತಿಗಳಲ್ಲಿ - ಧ್ವನಿಯಿಂದ, ಧಾಟಿಯಿಂದ ಇತ್ಯಾದಿ ಪ್ರಕಟವಾಗುತ್ತದೆ. ಒಂದು ನಿರ್ದಿಷ್ಟ ಸಂದರ್ಭದಲ್ಲಿ
ಇರಬೇಕಾದ ಸ್ಥಿತಿಯ ಕಲ್ಪನೆ ಬರೆಯುವವನಿಗೂ ಓದುವವನಿಗೂ ಸಾಮಾನ್ಯವಾಗಿದ್ದಾಗ ಬರೆಯುವವನ ಕಾರ್ಯ ಸುಲಭವಾಗುತ್ತದೆ.
ಉದಾಹರಣೆಗೆ, ಕೈಲಾಸಂ ಅವರ ಟೊಳ್ಳುಗಟ್ಟಿಯಲ್ಲಿ ಮಕ್ಕಳ ಸ್ಕೂಲ್ ಮನೇಲಿ ಎನ್ನುವುದು ಇಬ್ಬರೂ ಸ್ವೀಕರಿಸುವ
ವಾಸ್ತವವಾದ್ದರಿಂದ ನಾಟಕಕಾರ ತನ್ನ ಮನಸ್ಸಿನಲ್ಲಿರುವ ಸ್ಥಿತಿಯನ್ನು ಸೂಚಿಸುವ, ಪರೀಕ್ಷವಾಗಿ ಚಿತ್ರಿಸುವ
ಅಗತ್ಯವಿರುವುದಿಲ್ಲ. ಹಾಗೆಯೇ ಸಮಾಜದ ಒಂದು ನಿರ್ದಿಷ್ಟ ದೋಷ, ಉದಾಹರಣೆಗೆ, ಅಸ್ಪೃಶ್ಯತೆ, ವ್ಯಂಗ್ಯದ
ಗುರಿಯಾದಾಗ, ಬರೆಯುವವನು ಮತ್ತು ಓದುವವನು ಆಗಲೇ ಒಂದು ನಿಲುವನ್ನು ತಳೆದಿರುವುದರಿಂದ ವ್ಯಂಗ್ಯ ಪರಿಣಾಮವನ್ನು
ಉಂಟುಮಾಡುವುದು ಸುಲಭವಾಗುತ್ತದೆ. ಆದರೆ ಸಂದರ್ಭ ವಿಶಾಲವಾದಷ್ಟು ಕತೆಗಾರ ವ್ಯಂಗ್ಯದಿಂದ ಪರಿಣಾಮವನ್ನು
ಸಾಧಿಸುವುದು ಕಠಿಣವಾಗುತ್ತದೆ. ಬಾಗಲೋಡಿ ದೇವರಾಯರ ಅಸಾಧಾರಣ ಸಾಧನೆ ಬದುಕನ್ನೇ ಹಲವು ಕತೆಗಳಲ್ಲಿ
ಸಂದರ್ಭವಾಗಿ ಸ್ವೀಕರಿಸಿ, ತಮ್ಮ ವಿಶಿಷ್ಟ ದರ್ಶನವನ್ನು ನಿರೂಪಿಸಹೊರಟು ಯಶಸ್ವಿಯಾಗುವುದು. ನನ್ನ
ಅಭಿಪ್ರಾಯದಲ್ಲಿ, ಅವರ ಸಾಧನೆ ಆಶ್ಚರ್ಯವನ್ನುಂಟು ಮಾಡುವುದಕ್ಕೆ ಕಾರಣ, ಅವರು ತಮ್ಮ ಪ್ರಾರಂಭದ ಕತೆಗಳಲ್ಲಿಯೇ
ಇದನ್ನು ಸಾಧಿಸಿದರು ಎನ್ನುವುದು.

