Showing posts with label ತಾತಾರ್ ಶಿಖರಾರೋಹಣ. Show all posts
Showing posts with label ತಾತಾರ್ ಶಿಖರಾರೋಹಣ. Show all posts
21 March 2010
ಅಮರ್ತ್ಯರ ಆತಿಥ್ಯದಲ್ಲಿ (ತಾತಾರ್ ೬)
10 March 2010
ಮೃಗಜಲದ ಬೆನ್ನೇರಿ
ಸುಮಾರು ನಲ್ವತ್ತು ವರ್ಷಗಳ ಹಿಂದಿನ ನನ್ನ ಅನುಭವ ಕಥನ - ತಾತಾರ್ ಶಿಖರಾರೋಹಣವನ್ನು ಮರುಕಥನಕ್ಕಿಳಿದು ನಾಲ್ಕು ಕಂತು ಕಳೆದಿದೆ. ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ತಂಡ, ಉದಕಮಂಡಲ ಶ್ರೇಣಿಯ, ಮುದುಮಲೈ ವನಧಾಮಾಂತರ್ಗತ ತಾತಾರ್ ಬೆಟ್ಟವನ್ನು ವಾತಾವರಣದ ವಿಪರೀತದಲ್ಲೂ ಏರುತ್ತೇರುತ್ತೇರುತ್ತಾ ಒತ್ತರಿಸಿ ಬಂದ ರಾತ್ರಿಗೆ ಆಕಸ್ಮಿಕವಾಗಿ ಒದಗಿದ ಬಂಡೆಮರೆಯಲ್ಲಿ ಶಿಬಿರ ಹೂಡಿದ್ದಾಗಿದೆ. ಅತ್ತ ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾ ವಿಮೋಚನೆಯ ಸಮರದಲ್ಲಿ ತೊಡಗಿದ ಭಾರತೀಯ ಸೇನೆಯ ವೀರಗಾಥೆಯನ್ನು ತುಣುಕು ರೆಡಿಯೋ ವರದಿಗಳಲ್ಲಿ ಸ್ಫೂರ್ತಿಪೇಯದಂತೆ ಹೀರುತ್ತಾ ಸಾಗಿದ ಪ್ರಾಕೃತಿಕ ಸಾಹಸಯಾನಕ್ಕಿಲ್ಲಿ ಶಿಖರಯೋಗ ಕಾಣಿಸುವ ಹಂತ ಬಂದಿದೆ. ನಿನ್ನೆಯ ಅನ್ನಕ್ಕೆ ಇಂದಿನ ವಗ್ಗರಣೆ ಎಂಬ ತಾತ್ಸಾರ ಕಳೆದು, ಹಿಂದಿನ ಸಾಧನೆ ಮುಂದಕ್ಕೆ ಪ್ರೇರಣೆ ಎಂಬ ಉತ್ಸಾಹ ತಳೆದು ಬನ್ನಿ, ಹೊರಡೋಣ ಸವಾರಿ...
25 February 2010
ಅಯನದ್ವಯಕ್ಕೂ ಭೀಷ್ಮ ಕಾಯ
(ತಾತಾರ್ ೪)ತಾತಾರ್ ಶಿಖರಾರೋಹಣ ಪುಸ್ತಕವನ್ನು ಅಂದು (೧೯೭೨) ಪುಣೆಯಲ್ಲಿದ್ದ ನನ್ನ ಸೋದರತ್ತೆ ಸೀತಾ ಓದಿ ಕಾಲೆಳೆದಿದ್ದಳು, “ಇದು ‘ಕುದುರೆಮುಖದೆಡೆಗೆ’ ಬರೆದ ನಾರಣ್ಣಯ್ಯನೇ (ನನ್ನ ತಂದೆ) ಬರೆದುಕೊಟ್ಟಿರಬೇಕು.” ಕುದುರೆಮುಖದೆಡೆಗೆ (೧೯೬೮) ಬೆಂಗಳೂರು ವಿಶ್ವವಿದ್ಯಾನಿಲಯದ ಪಠ್ಯೇತರ ಪ್ರಕಟಣೆಗಳಲ್ಲಿ ಪ್ರಥಮ ಪುಸ್ತಕ. ಮುಂದೆ ಇದು ತಂದೆಯದೇ ಎನ್.ಸಿ.ಸಿ ದಿನಗಳಲ್ಲಿ, ಸವಾಲನ್ನು ಎದುರಿಸುವ ಛಲದಲ್ಲಿ ಮತ್ತು ಕೊನೆಯದಾಗಿ ಮುಗಿಯದ ಪಯಣದಲ್ಲಿ ಸಮಕಾಲೀನ ಆವಶ್ಯಕತೆಗಳಿಗನುಗುಣವಾಗಿ ಪರಿಷ್ಕೃತಗೊಂಡು ಮರುಮುದ್ರಣಗಳನ್ನೂ ಕಂಡಿದೆ. ತಂದೆಯ ಸಾಹಿತ್ಯ ಕೊಡುಗೆಗಳಲ್ಲಿ ಸರಸ ಶೈಲಿ, ಹಾಸ್ಯಪ್ರಜ್ಞೆಗಳಿಂದ ನಿರ್ವಿವಾದವಾಗಿ ಜನಪ್ರಿಯತೆಯನ್ನು ಗಳಿಸಿದ ಬರವಣಿಗೆಗಳು ಇಂಥವು. ಆದರೆ ತಂದೆ ಯಾವುದನ್ನು ತನ್ನ ಜೀವನದ ಪರಮಲಕ್ಷ್ಯ (ಕನ್ನಡದಲ್ಲಿ ವಿಜ್ಞಾನಸಾಹಿತ್ಯ ಪ್ರಸರಣ) ಎಂದು ಭಾವಿಸಿ (‘ವಿಜ್ಞಾನ ಎನ್ನಶನ’ ಎಂದೇ ಘೋಷಿಸಿ) ದುಡಿದರೋ ಅಲ್ಲಿ ಹೀಗಳೆವ ಕೆಲವು ಪ್ರಯತ್ನಗಳನ್ನು ಆಗಾಗ ಅನುಭವಿಸಿದ್ದುಂಟು. (ತಪ್ಪು ತಿಳಿಯಬೇಡಿ, ಅದರಿಂದ ವಿಷಾದ, ಸಂತ್ರಸ್ತತನದಂಥ ಭಾವಗಳು ಅವರನ್ನೆಂದೂ ಕಾಡಲಿಲ್ಲ.) ಕಳೆದ ವಾರ ‘ಕೆಂಡಸಂಪಿಗೆ’ಯಲ್ಲಿ ಕೆ.ವಿ ತಿರುಮಲೇಶ್ ಕೂಡಾ ಇಂಥದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾಗ, ಅವರ ಬೆಂಬಲಕ್ಕೆ ತಂದೆಯ ಉದಾಹರಣೆ ಕೊಟ್ಟು ನನ್ನ ಮಿತಿಯ ನಾನೂ ನಾಲ್ಕು ಮಾತು ಹೊಸೆದೆ. ಮೊದಲು ಅದನ್ನಷ್ಟು ಉದ್ದರಿಸಿ, ನಿರುಮ್ಮಳವಾಗಿ ತಾತಾರಿನತ್ತದ ಯಾತ್ರೆ ಮುಂದುವರಿಸುತ್ತೇನೆ, ಸೇರಿಕೊಳ್ಳಿ, ಜೊತೆ ಬಿಡಬೇಡಿ.
10 February 2010
ಒದ್ದೆ ಕನಸುಗಳು (ತಾತಾರ್ ೩)
28 January 2010
ನಿರಾಶ್ರಿತರ ಶಿಬಿರ
[ವಿ.ಸೂ: ಮುಂದೆ ಹಳಗಾಲದ ನಿರೂಪಣೆಯ ಉದ್ದಕ್ಕೆ ಈ ತೆರನ [ ] ದೊಡ್ಡ ಕಂಸದೊಳಗೆ ಈ ಕಾಲದ ವಗ್ಗರಣೆ ಅಥವಾ ಟಿಪ್ಪಣಿ ಎನ್ನಿ, ಹಾಕುತ್ತಿರುತ್ತೇನೆ]
ಡಿಸೆಂಬರ್ ೧೫, ೧೯೭೧ರ ಬೆಳಿಗ್ಗೆ ನಾನು ನಾಲ್ಕು ಗಂಟೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಅವಸರದಲ್ಲಿ ತಿಂಡಿ ಕುಡಿದು ಕಾಫಿ ತಿಂದೆ. ಪ್ಯಾಂಟು ಶರಟುಗಳೊಳಗೆ ತೂರಿದ್ದಲ್ಲದೆ ಊಟಿಯ ಚಳಿಯ ನಿರೀಕ್ಷೆಯಲ್ಲಿ ತಂದೆಯ ಹಳೆಯ ಕೋಟೊಂದನ್ನೂ ಏರಿಸಿಕೊಂಡೆ. [ಆ ಪ್ರಾಯದಲ್ಲಿ ‘ಕೊಡಗಿನವನಾದ’ ನಾನು, ಸ್ವೆಟ್ಟರ್ ಬಳಸುವುದು ಅವಮಾನಕಾರಿ ಎಂದೇ ಇತ್ತು, ನನ್ನಲ್ಲಿರಲೂ ಇಲ್ಲ!) ಮಧ್ಯಾಹ್ನದ ಊಟಕ್ಕೆ ಮಿತ್ರರೊಡನೆ ಹಂಚಿ ತಿನ್ನಲು ಕಟ್ಟಿಟ್ಟ ರೊಟ್ಟಿಗಂಟನ್ನು ದಿನಮುಂಚಿತವಾಗಿ ಇತರ ಸಾಮಾನುಗಳನ್ನು ತುಂಬಿ ಸಜ್ಜುಗೊಂಡಿದ್ದ ಸುಲಭೋಪಾಯದ ಬೆನ್ನುಚೀಲದಲ್ಲಿ ಇರುಕಿಸಿ, ಅದರ ಬಾಯಿ ಬಿಗಿದು ಬೆನ್ನಿಗೇರಿಸಿದೆ. ಬಲಗೈಯಲ್ಲಿ ಗಾಂಧೀ ಬಂಟ - ಊರುಗೋಲು. ಕಾಲಿಗೆ ಬೇಟೆಗಾರನ ಪಾದರಕ್ಷೆ ಅಥವಾ ಹಂಟರ್ ಶೂ. ನನ್ನಲ್ಲಿ ಅಷ್ಟಾಗಿ ಪ್ರಾಮುಖ್ಯ ಸಲ್ಲಬೇಕಿಲ್ಲದ ತಲೆಗೆ ಕಾಡುಟೊಪ್ಪಿ ಅಥವಾ ಜಂಗಲ್ ಹ್ಯಾಟ್.
08 January 2010
ಹೋಗೋಣ ಬನ್ನಿ ತಾತಾರಿಗೆ
“ಕ್ರಿಸ್ಮಸ್ ರಜೆಗೆ ಬಸ್ಸೇರಿ ರಾಮೋಜಿ ಸಿಟಿ ನೋಡಲು ಹೊರಟಿದ್ದೇವೆ” ಗೆಳೆಯ ಮನೋಹರ ಉಪಾಧ್ಯ ಹೇಳಿದ್ದರು. ಆದರೆ ತೆಲಂಗಾಣದ ಗದ್ದಲಕ್ಕೆ ಹೆದರಿ, ಕಡೇ ಮಿನಿಟಿಗೆ ಯೋಜನೆ ಬದಲಿಸಿ, ಸ್ವಂತ ವಾಹನದಲ್ಲಿ ಊಟಿಯನ್ನು ಮುಟ್ಟಿ ಬಂದರು. ಎರಡೂವರೆ ಜನ (ಹೆಂಡತಿ ವಿದ್ಯಾ ಮತ್ತು ಮಗ ಸುಧನ್ವ, ಸಣ್ಣವನಾದ್ದರಿಂದ ೧/೨) ಮಾತ್ರ ತುಂಬಿಕೊಂಡು ಎರಡು ದಿನದ ಹೋ-ಬರುವ ಚಾಲನೆಯ ನಡುವೆ ಉಳಿದ ಎರಡೂವರೆ ದಿನದಲ್ಲಿ ಎಷ್ಟು ನೋಡಿರಬಹುದು, ಏನು ಅನುಭವಿಸಿರಬಹುದು ಎಂದು ಉಪೇಕ್ಷೆಯಲ್ಲೇ ವಿಚಾರಿಸಿದೆ. ಕಾಸರಗೋಡು, ಸುಲ್ತಾನ್ ಬತ್ತೇರಿಯ ದಾರಿ ಹಿಡಿದಿರಬೇಕು ಎಂಬ ನನ್ನೂಹೆ ತಪ್ಪಾಗಿತ್ತು. ಮನೋಹರ್ ಮೈಸೂರು ದಾರಿಯನ್ನೇ ಹಿಡಿದಿದ್ದರು. ೧೯೭೧ರಲ್ಲಿ ಇದೇ ಊಟಿವಲಯದಲ್ಲಿ ನನ್ನೊಂದು ಸಾಹಸ ಯಾತ್ರೆ ತೊಡಗಿದ್ದೂ ಮೈಸೂರಿನಿಂದ ಎಂದು ಮನಸ್ಸು ಒಮ್ಮೆಲೇ ಜಾಗೃತವಾಯ್ತು. ಮನೋಹರ್ ಮುಂದುವರಿದು “ನಾವ್ short cut, ಮಾಸ್ನಿಗುಡಿ ದಾರಿ ಹಿಡಿತ್ತ್” ಎಂದರು. ಅವರಿಗೆ ಬಲುದೂರದಿಂದಲೇ ಆಕಾಶಕ್ಕೆದ್ದ ದಿಗಂತದಂತೇ ತೋರುವ ಉದಕಮಂಡಲ ಶ್ರೇಣಿ ಒಟ್ಟಾರೆ ವಾಹನಸಾಧ್ಯ ಹತ್ತಿರದ ದಾರಿಯಲ್ಲಿ ಹತ್ತುವುದಷ್ಟೇ ಗುರಿ. ಒತ್ತಿನ ಕಾಡು, ಮಂಜುಮೋಡ ಮುಡಿದ ಬೆಟ್ಟಸಾಲುಗಳೆಲ್ಲ ದಾರಿ ಸಾಗುವಾಗ ದಕ್ಕುವ ಸಹಜ ಸುಂದರ ದೃಶ್ಯ ಮಾತ್ರ. ಸುಮಾರು ನಾಲ್ಕು ದಶಕದ ಹಿಂದೆ ನನಗೋ ‘ಮಸಣಿಗುಡಿ’ ಮಹಾಸಾಹಸಕ್ಕೆ ತಳಶಿಬಿರ. ಇನ್ನು ಕಾಡು, ನಡಿಗೆಯಲ್ಲಿ ಪಾರುಗಾಣಲೇಬೇಕಾದ ‘ದುಷ್ಟಮೃಗ’ಗಳ ಬೀಡು. ಮತ್ತೆ ಬೆಟ್ಟ, ಹತ್ತಿ ಜಯಿಸಲೇ ಬೇಕಾದ ತಾತಾರ್ ಶಿಖರದ ಸವಾಲು. ನನ್ನ ಉದಕಮಂಡಲದ ಪ್ರಥಮ ಸಂದರ್ಶನದ ನೆನಪು ಇನ್ನಿಲ್ಲದಂತೆ ಒತ್ತರಿಸಿ ಬಂತು. ಉಪಾಯ್ದರು ಸ್ವಭಾವತಃ ದಾಕ್ಷಿಣ್ಯಪರರು, ಮಾತು ಕಡಿಮೆಯವರು. ಇನ್ನು ಅನ್ಯರ ಅನುಭವಗಳಿಗೆ ಕಿವಿಯಾಗುವ ನೆಪದಲ್ಲಿ ತಮ್ಮ ಕಡತ ಬಿಚ್ಚುವವರ ‘ಮುದಿತನ’ವನ್ನು ನಾನು ಪ್ರಕಟಿಸಿಬಿಟ್ಟಿದ್ದರೆ ಫಜೀತಿಯಾಗುತ್ತಿತ್ತು; ಬಹಳ ಕಷ್ಟದಿಂದ ನಿಯಂತ್ರಿಸಿದೆ! ಆದರೆ ಅನೂಹ್ಯಲೋಕದ, ಅಸಂಖ್ಯಭಾವದ ಜಾಲಿಗರೇ ನಿಮ್ಮೆದುರು ನನಗೇನೂ ಸಂಕೋಚವಿಲ್ಲ. (ನಿಮಗೆ ಬೇಡವೆನ್ನಿಸಿದಾಗ ಇಲ್ಲೇ ಮೇಲಿನ ಬಲಮೂಲೆಯಲ್ಲಿ ಚಿಟಿಕೆ ಹೊಡೆದು, ಮೌನವಾಗಿದ್ದರೆ ನಾನು ಕೇಳಲುಂಟೇ!)
Subscribe to:
Posts (Atom)