ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೇಳು
ಅಧ್ಯಾಯ ೮೧ (ಮೂಲದಲ್ಲಿ ೫೩)
೧೯೮೬ರ ಸೆಪ್ಟೆಂಬರ್ ಕೊನೆಗೆ ನಾನು
ನಿವೃತ್ತನಾಗಬೇಕಿತ್ತು. ಆಗ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದವರು ವೈ.ಪಿ.
ರುದ್ರಪ್ಪ ಮತ್ತು ಕುಲಸಚಿವ ಎಸ್. ನಾರಾಯಣಶೆಟ್ಟಿ
(ಸುಜನಾ ಎಂಬ ಕಾವ್ಯನಾಮದ ಖ್ಯಾತ ಕವಿ). ಇನ್ನು ನಮ್ಮ ಸಂಸ್ಥೆಯ
ನಿರ್ದೇಶಕರಾಗಿದ್ದವರು ಎಚ್. ತಿಪ್ಪೇರುದ್ರಸ್ವಾಮಿ. ರುದ್ರಪ್ಪ ಹೆಸರಿಗೆ ತಕ್ಕಂತೆ ಶಿಸ್ತುನಿಷ್ಠುರರು, ಸತ್ಯಸಂಧರು
ಮತ್ತು ಉಗ್ರಕೋಪಿಷ್ಠರೆಂದೇ ಪ್ರಸಿದ್ಧರು. ಆ ವೇಳೆಗೆ ವಿಶ್ವವಿದ್ಯಾನಿಲಯದೊಳಗಿನ
ಸ್ಥಿತಿ ಏನಾಗಿತ್ತು ಗೊತ್ತೇ?
ಮನೆಯೊಳಗೆ ಮನೆಯೊಡೆಯನಿದ್ದಾನೊ
ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ
ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೊ
ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ
ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ
ಮತ್ತು, “ದಾರುಗಟ್ಟಿ
ಮಾಳ್ಪರಿಲ್ಲದೆ ಕಾಲ ಕತ್ತಲೆಯೊಳಗೆ.... ಸೋರುತಿಹುದು ಮನೆಯ ಮಾಳಿಗಿ”
(ಶಿಶುನಾಳ ಶರೀಫ).
ವಿಶ್ವಕೋಶದಲ್ಲಿಯ ನಮ್ಮ ಭವಿಷ್ಯವೇ
ಶೂನ್ಯಗಾಮಿಯಾಗುತ್ತಿದೆಯೋ ಎಂಬ ಆತಂಕದ ದಿನಗಳವು. ಇಂಥ ಅರಾಜಕತೆಗೆ ಶಾಸ್ತಿ ಮಾಡಲು ಒಬ್ಬ ಉಕ್ಕಿನ ಆಡಳಿತಗಾರರಾಗಿ
ಬಂದವರೇ ರುದ್ರಪ್ಪ. ಕೇವಲ ಬೆರಳೆಣಿಕೆಯ ದಿನಗಳಲ್ಲೇ ಅವರು ತಮ್ಮ ಉಕ್ಕುತನವನ್ನು
ಆಡಳಿತೆಯ ಜಡಯಂತ್ರಕ್ಕೆ ಪ್ರಹಾರಿಸಿ ಎಲ್ಲ ಕೆಲಸಗಳ್ಳ ಅಲಸಿಗರಿಗೂ ಸಿಂಹಸ್ವಪ್ನವಾದರು. ಅವರ ಕಾರ್ಯವೈಖರಿಯ ವಿವರಗಳು ಜನಜನಿತವಾಗಿ ನನ್ನ ಕಿವಿಗೂ ಮುಟ್ಟುತ್ತಿದ್ದುವು.
“ಭಲೇ ರುದ್ರಪ್ಪ!” ಎಂದುಕೊಳ್ಳುತ್ತಿದ್ದೆ ಮನದೊಳಗೆ.