[ತಿಂಗಳ
ಹಿಂದೆ ಗೆಳೆಯ ಕೆ.ಎಸ್.ನವೀನ್ ಚರವಾಣಿಸಿ “ಅನಂತರಾಮು ಜಿಟಿಎನ್ ಬಗ್ಗೆ ಬರೆದ ಲೇಖನ ನಿಮ್ಮಲ್ಲಿದೆಯೇ”
ಕೇಳಿದ್ದರು. ನನ್ನಲ್ಲಿರಲಿಲ್ಲ, ನಾನು ನೋಡಿಯೂ ಇರಲಿಲ್ಲ. ಎರಡು ವಾರದ ಹಿಂದೆ ಮಾಯೆಯಲ್ಲಿ
ಎಂಬಂತೆ ಸ್ವತ: ಅನಂತರಾಮು ಅವರೇ ನನ್ನನ್ನು ಮಿಂಚಂಚೆ ಮೂಲಕ, ಇದೇ ಮೊದಲು, ಸಂಪರ್ಕಿಸಿದರು, ಈ
ಲೇಖನವನ್ನು ವಿಶ್ವಾಸಪೂರ್ವಕವಾಗಿ ಕಳಿಸಿದ್ದರು! ಅನಂತರ ತಿಳಿದಂತೆ ನಡೆದದ್ದಿಷ್ಟು: (ನನ್ನ ಮಗ)
ಅಭಯಸಿಂಹ ಮತ್ತು ಗೆಳೆಯರು ತಮ್ಮ ಸಂಚಿ ಟ್ರಸ್ಟಿನ ಜ್ಞಾನಸರಣಿ ಭಾಷಣ ಮಾಲಿಕೆಯಲ್ಲಿ ಮೂರನೇ
ವಿಷಯವಾಗಿ `ಕುದಿಯುತ್ತಿರುವ’ ಬೆಂಗಳೂರ ಕೆರೆಗಳನ್ನಾರಿಸಿಕೊಂಡಿದ್ದರು. ಇದಕ್ಕೆಂದು ಕನ್ನಡದ ಜನಪ್ರಿಯ
ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರನ್ನು ವಾರದ ಹಿಂದೆಂದೋ ಸಂದರ್ಶಿಸಿದ್ದೂ ನನಗೆ ತಿಳಿದಿತ್ತು.
ಅಂದು (೬-೬-೧೫) ಬೆಳಗ್ಗೆ ಅನಂತರಾಮು ಅವರನ್ನು ಸಂದರ್ಶಿಸಿದ್ದು ನನಗೆ ತಿಳಿದಿರಲಿಲ್ಲ. ಸಂದರ್ಶನ
ಚೆನ್ನಾಗಿಯೇ ಆಯ್ತು. ಆಗ ಪ್ರಾಸಂಗಿಕವಾಗಿ ಅನಂತರಾಮು ಅವರಿಗೆ, ಅಭಯ ಜಿಟಿಎನ್ ಮೊಮ್ಮಗನೆಂದು
ತಿಳಿಯಿತಂತೆ. ಆಗ ಅವರಿಗಾದ ಸಂತೋಷ ಸಂಜೆಯಾದರೂ ಮಾಸದೆ, ಒಂದೇ ಬೀಸಿನಲ್ಲಿ ನಮ್ಮಿಬ್ಬರಿಗೂ
ಮಿಂಚಂಚೆ ಮೂಲಕ ಮಾತಿನ ಮಾಲೆ ತೊಡಿಸಿತ್ತು, ಈ ಲೇಖನದ ಕಾಣಿಕೆಯನ್ನು ಕೊಡಿಸಿತ್ತು.
ಈ ಲೇಖನದ
ಮೂಲರೂಪ ೭-೭-೨೦೦೮ರ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಹಾಗೇ ಹಳೆಯ ಸಂಚಿಕೆಯಲ್ಲಿ
ಮಾಸಬಾರದು ಮತ್ತು ಸುಲಭವಾಗಿ ಸಾರ್ವಜನಿಕರಿಗೆ ಸಿಗುವಂತಾಗಬೇಕು ಎಂದು ನಾನು ಬಯಸಿದೆ, ಅನಂತರಾಮು
ಅವರು ಪೂರ್ಣ ಅನುಮೋದಿಸಿದರು. ಮತ್ತೆ ತಮ್ಮ ಪೂರ್ವನಿರ್ಧರಿತ ಜವಾಬ್ದಾರಿಗಳ ನಡುವೆ ಬಿಡುವು
ಮಾಡಿಕೊಂಡು, ಸಂತೋಷದಿಂದ ಪರಿಷ್ಕರಿಸಿಯೂ ಕೊಟ್ಟಿದ್ದಾರೆ.
ಜಿಟಿಎನ್
ತೀರಿಹೋದ ಏಳನೇ ವರ್ಷದ (೨೭-೬-೨೦೦೮) ಸ್ಮೃತಿದಿನಕ್ಕೆ ಆಕಸ್ಮಿಕವಾಗಿಯೇ ಒದಗಿದ ಈ ಸಂತೋಷಕ್ಕೆ
ನಾನು ಅನಂತರಾಮು ಅವರಿಗೆ ಋಣಿ. – ಅಶೋಕವರ್ಧನ]

















