Showing posts with label ರಂಗನಾಥ ಸ್ತಂಭ ವಿಜಯ. Show all posts
Showing posts with label ರಂಗನಾಥ ಸ್ತಂಭ ವಿಜಯ. Show all posts

26 July 2010

ಏರಿದವನಿಳಿಯಲೇಬೇಕು

ರಂಗನಾಥ ವಿಜಯ ಭಾಗ ಏಳು
ಮಾನವ ಚಂದ್ರನ ಮೇಲಿಟ್ಟ ಮೊದಲ ಹೆಜ್ಜೆ ಮನುಕುಲಕ್ಕೆ ಏನೇ ಇರಲಿ, ಆರ್ಮ್ ಸ್ಟ್ರಾಂಗ್ ಎನ್ನುವ ವ್ಯಕ್ತಿಗೆ ಅದು ಮರಳುವಲ್ಲಿ ಅಷ್ಟಷ್ಟು ಒಜ್ಜೆಯೇ ಎಂಬುದನ್ನು ಯಾರೂ ಮರೆಯುವಂತಿಲ್ಲ. ನಮ್ಮ ಸ್ಥಿತಿಯೂ ಅದಕ್ಕೇನೂ ಕಡಿಮೆಯದ್ದಲ್ಲ. ‘ಗಗನಗಾಮಿತನ’ ದೊಡ್ಡ ಅನುಭವದ ಒಂದು ತುಣುಕು ಮಾತ್ರ. ಅದರ ಪೂರ್ಣತೆಗಾಗಿ ನಾವು ಬೇಗನೆ ಸ್ಮರಿಸಿಕೊಂಡೆವು - ಏರಿದವನಿಳಿಯಲೇಬೇಕು. ಹಾಂ, ಆದರೆ ಹೇಳಿದಷ್ಟು ಸುಲಭವಲ್ಲ ಬಂಡೆ ಇಳಿಯುವುದು. ಕಡಿದಾದ ಏರಿನಲ್ಲಿ ನಡೆಯನ್ನು ನಿರ್ದೇಶಿಸಲು ನಮ್ಮ ನೇರ ದೃಷ್ಟಿಯೊಡನೆ ಕೈಕಾಲುಗಳನ್ನು ತೊಡಗಿಸುತ್ತೇವೆ. ಹಾಗೇ ಇಳಿದರಾಯ್ತು ಎನ್ನುವಂತಿಲ್ಲ. ನಾವು ಹಲ್ಲಿ ಉಡಗಳಂತೆ ತಲೆಕೆಳಗಾಗಿ ಇಳಿಯುವ ಭಾಗ್ಯ ಪಡೆದಿಲ್ಲವಲ್ಲಾ! ಮತ್ತೆ ಕಾಲಿಗೇ ದೃಷ್ಟಿ ಸಂಯೋಜಿಸಿದರಾಯ್ತು ಎನ್ನಲು ನಾವು ಏಡಿಗಳಂತೆ ಚಾಚು ನೇತ್ರರೂ ಅಲ್ಲ. ಸೀದಾ ನಡೆದಿಳಿಯಲಾಗದ ಜಾರಿನಲ್ಲೆಲ್ಲಾ ನಾವು ಮೊದಲು ಪ್ರಪಾತಕ್ಕೆ ಬೆನ್ನು ಹಾಕಿ, ಕೈಗಳನ್ನು ಭದ್ರ ಹಿಡಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅನಂತರ ಪ್ರತಿ ಹೆಜ್ಜೆಯಲ್ಲಿ ಇಳಿದಿಕ್ಕು ಸ್ಪಷ್ಟಪಡಿಸಿಕೊಳ್ಳುತ್ತಿರಬೇಕು. ಮತ್ತೆ ಏಣಿ ಇಳಿಯುವವನಂತೆ ಒಂದೊಂದೇ ಹೆಜ್ಜೆ ಕೆಳಬಿಟ್ಟು ‘ಮೆಟ್ಟಿಲು’ ದಕ್ಕುವವರೆಗೆ ಸಣ್ಣದಾಗಿ ಪರದಾಡಬೇಕು. ಮೇಲೆ ಹತ್ತುವಾಗ ಕೊಳ್ಳ ನಿರುಕಿಸುವ ಭಯದಿಂದ ವಿನಾಯ್ತಿ ಪಡೆದವರಿಗೆ ಇಲ್ಲಿ ಚಳಿ ಕೂರುವುದು ಖಾತ್ರಿ. ನೈಜ ಶಿಲಾರೋಹಣದಲ್ಲಿ ಹತ್ತಿದೆಲ್ಲಾ ಶಿಲಾಮುಖಗಳು ಇಳಿಯಲು ಹಾಗೇ ದಕ್ಕುತ್ತವೆ ಎಂದಿಲ್ಲ. ಹಾಗಾಗಿ ಕಡಿದಾದ ಶಿಲಾರೋಹಣದಲ್ಲಿ ‘ನೈಜ’ ಮತ್ತು ‘ಕೃತಕ’ ಎಂಬೆರಡು ಪಾಠ ಇದ್ದರೆ ಶುದ್ಧ ಶಿಲಾವರೋಹಣದಲ್ಲಿ ಹಗ್ಗಗಳನ್ನು ಬಳಸಿ ಮಾಡುವ ಕೃತಕ - ರ್ಯಾಪೆಲಿಂಗ್ (rapelling) ತಂತ್ರ ಒಂದೇ.

21 July 2010

ಆಕಾಶ ಪಾತಾಳಗಳ ನಡುವೆ

ರಂಗನಾಥ ವಿಜಯ ಭಾಗ ಆರು
[ಕಳೆದ ಕಂತಿನ ಕೊನೆಯಲ್ಲಿ ಇಷ್ಟು ಹತ್ತಿರವಾದರೂ ಅಷ್ಟು ದೂರ (ತದ್ದೂರೇ ತದಂತಿಕೇ ಎಂದೇನೋ ಅಂತಾರಲ್ಲಾ ಹಾಗೆ) ಎನ್ನುವ ಭಾವದೊಡನೆ ರಂಗನಾಥ ಸ್ತಂಭ ಎಂಬ ದೈತ್ಯನ ಭುಜದಂಚಿನಲ್ಲಿ ನಿಲ್ಲಿಸಿದ್ದೆ. ‘ಬೊಬ್ಬೆ ವಿನಿಮಯದಲ್ಲಿ ನಮ್ಮ ನಿರಾಶೆಯನ್ನು ಹುಗಿದಿಟ್ಟರೂ ಸವೆದ ಜಾಡನ್ನು ಮರಳಿ ಸವೆಸಲು ತಿರುಗಿದೆವು’ ಎಂದೇ ಮುಗಿಸಿದ್ದೆ. ಓ ಅದು ನಾವು ತಿರುಗಿದ್ದಲ್ಲ ಮಾರ್ರೇ ನಮ್ಮ ಕತ್ತು ಮಾತ್ರ ತಿರುಗಿದ್ದಪ್ಪಾ! ಬನ್ನಿ ಬನ್ನಿ ಮುಂದ್ ಹೋಪಾ...]
ರಂಗನಾಥ ಸ್ತಂಭದ ಉತ್ತರಮೈ ಕೆಳಗಿನಿಂದ ಮುಂಚಾಚಿಕೆಯಂತೇ ಇದ್ದರೂ ಮೇಲಿನಂಶ ನಮ್ಮಲ್ಲಿ ನವಚೇತನವನ್ನೇ ತುಂಬಿತು. ಉತ್ತಮ ಮಹಲುಗಳ ಹಿತ್ತಲ ಕುಪ್ಪೆಯಂತೆ ಇಲ್ಲಿ ಪುಡಿ ಬಂಡೆಗಳ ಒಟ್ಟಣೆ, ಹುಲ್ಲು, ಮುಳ್ಳು, ಬಳ್ಳಿಯೂ ಸಾಕಷ್ಟು ಕುದುರಿತ್ತು. ನಾವೋ ಚಿಂದಿ ಆಯುವವರು. ಆದರೂ ಒಂದು ಹೊತ್ತಿನ ದಿವ್ಯಕ್ಕಾಗಿ ‘ಕುಪ್ಪೆ’ ಕಂಡ ಸಂಭ್ರಮದಲ್ಲಿ ಆತುರ ತೋರದ ಸಂಯಮಿಗಳು. ಸುಮಾರು ಐವತ್ತಡಿ ಅಂತರದವರೆಗೆ ಸಣ್ಣ ಡುಬ್ಬದಂತೇ ಕಂಡರೂ ಅಭದ್ರ ರಚನೆಯಂತಿತ್ತು. ಆಚೆಗೆ ಅನತಿ ದೂರದಲ್ಲಿ ಶಿಖರವೇ ಕಾಣಿಸುತ್ತಿತ್ತು. ಇನ್ನಷ್ಟು ಉತ್ತರ ಮೈಗೆ ಸರಿದು ಅನ್ಯ ಸಾಧ್ಯತೆಗಳನ್ನು ಹುಡುಕಲು ಸಮಯವಿರಲಿಲ್ಲ. ಹಾಗಾಗಿ ಸ್ವಲ್ಪ ಅಪಾಯಕಾರಿಯೇ ಆದರೂ ಸರಿ ಎಂದು ಶಿಖರ ಸಾಧನೆಗೆ ಹೊಸ ಕೆಚ್ಚು ಮೂಡಿಸಿಕೊಂಡೆವು.

ಹಿಂದೆಂದೋ ಸಿಡಿಲಿನ ಬಹು ಹೊಡೆತ ತಿಂದು ಸೀಳುಸೀಳಾಗಿದ್ದ ಬಂಡೆ ಎದೆಗಳ ಮೇಲೆ ಮೊದಲ ಇಪ್ಪತ್ತು ಅಡಿಗಳು. ಬಂಡೆ ಕಳಚಿ ಬಂದರೂ ಆಧಾರಕ್ಕೆ ಮುಷ್ಠಿಮಾಡಿ ಹಿಡಿಯುವ ಹುಲ್ಲು ಕಿತ್ತು ಕೈಗೆ ಬಂದರೂ ನೇರ ಎಂಟನೂರಡಿ ಆಳಕ್ಕೆ ಸಂದುಹೋಗುವ ಚಿತ್ರ ಎಲ್ಲರಿಗಿಂತಲೂ ಹೆಚ್ಚು ಮುಂದಾಳಾಗಿ ಹೋಗುವ ನನಗಿತ್ತು. ಸಹಜವಾಗಿ ಅಲ್ಲಿ ಪ್ರತಿ ಹೆಜ್ಜೆ, ಪ್ರತಿ ಹಿಡಿಕೆಯಲ್ಲಿ ನಾನು ಪೂರ್ತಿ ಇರಲಿಲ್ಲ. ‘ಅರೆ! ಇದೇನು, ಎಲೆಯ ಮೇಲಿದ್ದೂ ಎಲೆಗಂಟದ ನೀರಹನಿಯಂತೆ... ಎಂಬರ್ಥದ ಅಧ್ಯಾತ್ಮಿಕ ಮಾತುಗಳು’ ಎಂದು ಹುಬ್ಬೇರಿಸಬೇಡಿ. ಹೆದರಬೇಡಿ, ಗೀತಾಪ್ರವಚನ ಚಟವೇನೂ ಇಲ್ಲ. ಆಕಸ್ಮಿಕ ಸಂಭವಿಸಿದರೆ ಯಾವ ಕ್ಷಣದಲ್ಲೂ ಇನ್ನೊಂದು ಹಿಡಿಕೆ ಬಾಚಿಕೊಳ್ಳುವ, ನಿಂತ ನೆಲೆಗೊಂದು ಬದಲಿ ದಕ್ಕಿಸಿಕೊಳ್ಳಲು ಸಜ್ಜಾಗಿದ್ದೆ ಎಂದಷ್ಟೇ ಅರ್ಥ. ಬಿದ್ದರೆ ಪಾತಾಳ, ಗೆದ್ದರೆ ಆಕಾಶ. ನನ್ನ ರಕ್ಷಣಾ ಹಗ್ಗವನ್ನು ದೇವು ಕೆಳಗಿನೊಂದು ಭದ್ರ ನೆಲೆಯಲ್ಲಿ ಕುಳಿತು ನಿಯಂತ್ರಿಸುತ್ತಿದ್ದಂತೆ ಏರಿದೆ (ರೇಖಾಚಿತ್ರ ನೋಡಿ). ನನ್ನಿಂದ ಏನೂ ತಪ್ಪಾಗಲಿಲ್ಲ. ಇಲ್ಲವೇ ಇಲ್ಲ ಎನ್ನಲಾಗದಂತೆ ಹಗ್ಗದ ಚಲನೆಗೆ ಸಿಕ್ಕು ಸಣ್ಣ ಎರಡು ಮೂರು ಕಲ್ಲ ಚೂರುಗಳು ನಿರಪಾಯಕರವಾಗಿ ಉರುಳಿಹೋದವು. ಮತ್ತೆ ನಾನು ಭದ್ರ ನೆಲೆ ಹಿಡಿದು ಕುಳಿತು ಒಬ್ಬೊಬ್ಬರನ್ನೇ ಬಲು ಎಚ್ಚರದಿಂದ ನನ್ನೆತ್ತರಕೆ ಏರಿಸಿಕೊಳ್ಳತೊಡಗಿದೆ.

15 July 2010

ಸಂದುಗೊಂದಿನಲ್ಲಿ ಉನ್ನತ ಚಿಂತನ

ರಂಗನಾಥ ವಿಜಯ - ಭಾಗ ಐದು

“ಸುರುಳಿ ಸುತ್ತಿದ ಹಗ್ಗ ಬಿಡಿಸಿ, ಒಂದು ತುದಿಯನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡು ಅಶೋಕರು ಚಕ್ರವ್ಯೂಹ ಪ್ರವೇಶಿಸಿದ ಅಭಿಮನ್ಯುವಿನಂತೆ ಕಣ್ಮರೆಯಾದರು. ದೇವಕಿಗೆ ಅಳುಕು, ಉಪಾಧ್ಯರಿಗೆ ನರಸೆಳೆತ, ಜೊನಾಸ್ ಬುರೂಸ್! ನಾನು?” ಬೆದರಿದ ಕಣ್ಣಿನಲ್ಲಿ ಎಲ್ಲ ಗ್ರಹಿಸುತ್ತ ಗಣಪತಿ ಭಟ್ಟರ ಸ್ವಗತ ನಡೆದಿತ್ತು. “ದೇವು ಸೊಂಟಕ್ಕೆ ಗಂಟು ಕೊಟ್ಟರು. ಮೇಲಿನಿಂದ ಅಭಯ ರೈಟ್ ಅಂದ. ನಾನು ಆ ಮೂವರ ಮೊತ್ತವೇ ಇರಬೇಕೆಂದುಕೊಳ್ಳುತ್ತಾ ಬಂಡೆ ಎದುರಿಸಿದೆ. ಕೆಳಮುಖವಾಗಿ ಹಿಡಿದ ಬೊಗಸೆ ಕೈಯಂತಿದ್ದ ೨೦-೨೫ ಅಡಿ ಎತ್ತರದ ಕೊರಕಲು - ಮೊದಲ ಸವಾಲು. ಅಂಚು ತುಳಿಯಬೇಕು, ಬಿರುಕಿಗೆ ಕಾಲು ಜಾರಬಾರದು. ಜಾರಿದರೆ ಕಾಲು ತುಂಡು ಗ್ಯಾರಂಟಿ. ಅವರಿವರ ಮಾರ್ಗದರ್ಶನದಲ್ಲಿ ಧೈರ್ಯ ಒಟ್ಟುಗೂಡಿಸಿ ಏರಿಯೇ ಬಿಟ್ಟೆ.”

ದೇವಕಿ, ಜೊನಾಸರು ಶಿಬಿರ ಸ್ಥಾನದತ್ತ ಪಾದ ಬೆಳೆಸಿದ್ದನ್ನು ನಾವು ಮೇಲಿನಿಂದ ನೋಡುತ್ತಾ ಇದ್ದೆವು. ನಾವು ಇಳಿದ ದಿಕ್ಕಿಗಿಂತಲೂ ಪಶ್ಚಿಮಕ್ಕೆ, ಅಂದರೆ ಹೆಚ್ಚು ಕಡಿಮೆ ಸ್ತಂಭದ ಬುಡದಿಂದ ಶಿಬಿರಸ್ಥಾನಕ್ಕೆ ನೇರ ಹೊಸ ಜಾಡು ಮೂಡಿಸುವುದೇ ಒಳ್ಳೆಯದೆಂದು ನಮಗೆ ಕಾಣಿಸಿತು. ಆ ಪ್ರಕಾರವೇ ಅವರಿಬ್ಬರು ಸಾಕಷ್ಟು ಮೇಲೇರಿದ್ದರು. ಹೊಸ ಮುಳ್ಳುಬಲ್ಲೆಗಳೊಡನೆ ಜಟಾಪಟಿ. ಮತ್ತಷ್ಟು ಸಡಿಲ ನೆಲದೊಡನೆ ಏಗಾಟ ಎಲ್ಲ ಮುಗಿಸಿ ಇನ್ನೇನು ತೆರೆಮೈ ಬಂತು. ಹುಲ್ಲಗುತ್ತಿಗಳನ್ನು ಬಾಚಿ ಹಿಡಿದು ಏರಿಬಿಡುತ್ತಾರೆಂದು ಭಾವಿಸುವಾಗ ಎದುರಾಯ್ತು ಮಳೆಗಾಲ ರೂಪಿಸಿದ್ದ ಭಾರೀ ಕೊರಕಲು. ಅಕ್ಷರಶಃ ಮಳೆಗಾಲದಲ್ಲಿ ಅಲ್ಲಿ ಜಲಪಾತವೇ ರೂಪುಗೊಳ್ಳುವುದಿರಬೇಕು; ಅಷ್ಟೂ ಕಡಿದು. ಹಗ್ಗದ ರಕ್ಷಣೆ, ಅನುಭವೀ ಶಿಲಾರೋಹಿಗಳ ಸಲಹೆ ಇಲ್ಲದೆ ಮುಂದುವರಿಯುವುದು ಅಸಾಧ್ಯ. ಕನಿಷ್ಠ ಅಡ್ಡ ಹಾಯ್ದು, ಇಳಿಜಾಡನ್ನು ಸೇರೋಣವೆಂದರೂ ಒಡ್ಡಿಕೊಳ್ಳದ ಅಸ್ಥಿರತೆ. ನಿಜ, ಎತ್ತರದಲ್ಲಿ ಕುಳಿತ ನಮ್ಮ ಬಿಟ್ಟಿಸಲಹೆಗಳು ಅವರ ನೆಲಮಟ್ಟದ ವಾಸ್ತವಗಳು ಕಾಣಿಸದೇ ಅವರಿಬ್ಬರನ್ನು ಸೋಲಿಸಿತ್ತು. ಆದರೆ ಅವರು ತಲ್ಲಣಿಸಲಿಲ್ಲ. ಇನ್ನೊಂದೇ ದಿಕ್ಕಿನಲ್ಲಿ ಹೊಸ ಪ್ರಯತ್ನ ಬೆಳೆಸುವ ಛಲದಲ್ಲಿ ಮತ್ತೆ ಸ್ತಂಭದ ಬುಡಕ್ಕೇ ಮರಳಿದರು. ಈಗ ಉಪಾಧ್ಯ ಅವರಿಗೆ ಹೊಸ ಸದಸ್ಯನಾಗಿ ಸೇರಿಕೊಂಡರು. ಮತ್ತೆ ಕಷ್ಟವೋ ಸುಖವೋ ಯೋಚನೆ ಬಿಟ್ಟು, ಒಟ್ಟು ತಂಡ ಇಳಿದು ಬಂದ ಹಳೆಯ ಜಾಡನ್ನೇ ಅನುಸರಿಸಿದರು.

09 July 2010

ರಂಗನಂಘ್ರಿಗೆ ಮಣಿದೂ...

ರಂಗನಾಥ ಸ್ತಂಭ ವಿಜಯ - ಭಾಗ ನಾಲ್ಕು


ಬಂಡೆ ಬೊಬ್ಬಿಟ್ಟಿತು, ಕಾಡು ಚೀರಿತು, ತಂಡದವರಂತೂ “ಅಶೋಕ್ ಹೇಗಿದ್ದೀರಿ? ಪ್ರಸನ್ನಾ ಹುಶಾರಾ? ಗಣಪತಿ ಭಟ್ಟರ ಕೈ ಹ್ಯಾಗಿದೇ?” ಉದ್ಗಾರಗಳದೇ ಸಂತೆ. ಆದರೆ ಅದೃಷ್ಟ ನಮ್ಮೆಲ್ಲರ ಜೊತೆಗಿತ್ತು. ಬಂಡೆ ಜಾರಿದಾಗ ನಾನು ನೇರದಲ್ಲಿದ್ದದ್ದು ನಿಜ. ಆದರೆ ಅದು ಗಿಡಕ್ಕೆ ತಾಗಿ ಹೊರಳಿ ಬೀಳುವ ಕ್ಷಣಾರ್ಧದಲ್ಲಿ ಮುಂದಿನ ಹೆಜ್ಜೆಗೆ ಅರಿವಿಲ್ಲದೆ ಪೂರ್ಣ ದಾಟಿಬಿಟ್ಟಿದ್ದೆ. ಅಕ್ಷರಶಃ ನನ್ನ ಕೂದಲೂ ಕೊಂಕಲಿಲ್ಲ. ಮೊದಲು ಆತಂಕದ ಭಾವ ಮತ್ತೆ ಬೈಗುಳ, ಎಚ್ಚರಿಕೆಗಳ ಸುರಿಮಳೆ. ಕೊನೇಗೆ ತರಹೇವಾರಿ ನಂಬಿಕೆಗಳ ಮೇಲೆ ಅದೃಷ್ಟದಿಂದ ದೇವರವರೆಗೆ ವಂದನಾರ್ಪಣೆ! ತೀವ್ರ ಏರಿಳಿತಗಳಲ್ಲಿ ನೇರ ಸಾಲು ಹಿಡಿಯಬಾರದು. ನಡೆಯುವಾಗಲೂ ಸೂಕ್ಷ್ಮ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಇತರರ ಚಲನವಲನಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾ ಮುಂದುವರಿಯಬೇಕು. ಮೋಜಿಗೇ ಆದರೂ ಪ್ರಕೃತಿಯ ನೈಜ ಸಮತೋಲನವನ್ನು ತಪ್ಪಿಸಬಾರದು ಎಂಬಿತ್ಯಾದಿ ಪಾಠಗಳ ಮನನಕ್ಕೆ ಈ ಆಕಸ್ಮಿಕ ಅವಕಾಶ ಮಾಡಿಕೊಟ್ಟದ್ದಂತೂ ಖರೆ.


01 July 2010

ಇಷ್ಟಸಿದ್ಧಿ ಹೋಮಂ ಕರಿಷ್ಯೇ


ರಂಗನಾಥ ಸ್ತಂಭ ವಿಜಯ ಭಾಗ ಮೂರು


ಚಳಿಗೆ ಕಾಲವೂ ನಡುಗುವುದು: ಶ್ರೀರಂಗನಾಥ ಸ್ವಾಮಿಯು ಆದಿಶೇಷನ ಮೇಲೆ ಒರಗಿ, ಒಂದೆಸಳು ಶ್ರೀತುಳಸಿಗೋ ಬಿಂದು ಗಂಗೋದಕಕ್ಕೋ ಭಕ್ತಾಭೀಷ್ಟವರಪ್ರದಾಯಕನಾಗಿರುವುದನ್ನು ನಾನು ಶ್ರೀರಂಗಪಟ್ಟಣದಲ್ಲಿ ಕಂಡವನಿದ್ದೇನೆ. ಕಾಲಹತಿಯಲ್ಲಿ ಆರಾಧನೆ ಆರತಿ ತಟ್ಟೆಯ ಆದಾಯವನ್ನು ಆತುಕೊಂಡಾಗ, ಮೇಲ್ವಿಚಾರಣೆ ಮೇಲ್ಸಂಪಾದನೆಯ ಮೇಲೇ ಮಲೆತುಬಿದ್ದಾಗ, ‘ದೇವಾಲಯ ಶಿಥಿಲಗೊಂಡು ಬಿರುಕುಬಿಟ್ಟ’ ವಾರ್ತೆಯನ್ನೂ ಓದುತ್ತಲಿದ್ದೇನೆ. ದೇವಬಿಂಬ ದೂಳೀ ಸ್ನಾನಕ್ಕೂ ನಿರ್ಮಾಲ್ಯ ಪೂಜನಕ್ಕೂ ಮೀಸಲಾದುದನ್ನೂ ಕಂಡವನಿದ್ದೇನೆ. ಆದರೆ ಭವಾನಿ ಕೊಳ್ಳದ ನಮ್ಮ ರಂಗನಾಥ ನಿಂತೇ ಇದ್ದರೂ ಪ್ರಕೃತಿಯ ಪೂಜೆ ಸ್ವೀಕರಿಸುತ್ತಾ ಸದಾ ಸುಖಿ, ಭಜಕರಿಗೆ ನಿತ್ಯ ನೂತನ. ಇವನಿಗೆ ಸಾಹಸವೇ ಸೇವೆ ಎಂದು ನಂಬಿದ ಕಿಂಕರರು ನಾವು. ಶಿಬಿರ ಹೂಡಿದ ಮೇಲಿನ ತಿರುಗಾಟದಲ್ಲಿ ನಾವು ಕಣ್ಣ ನೋಟಕ್ಕೆ ದಕ್ಕಿದಷ್ಟನ್ನು ಗರಿಕೆ ಸಮಿತ್ತುಗಳ ವಿವರದಲ್ಲಿ (ವೈದಿಕ ಸಂಭಾರದಂತೆ) ನೆನಪಿನ ಜೋಳಿಗೆಗೆ ಸೇರಿಸಿಕೊಂಡು ಮರಳಿದೆವು. ದೇವಾಲಯಗಳಲ್ಲಿ ದೇವಬಿಂಬಕ್ಕೆ ಖಾಸಾ ಸೇವೆಗೆ ಮುನ್ನ (ಎಷ್ಟೋ ಬಾರಿ ಜಿಡ್ಡುಹಿಡುಕಲು, ಕೊಳಕು) ತೆರೆಯೆಳೆಯುವುದನ್ನು ನೋಡಿದ್ದೇನೆ. ಆದರೆ ನಮ್ಮ ರಂಗನಾಥನಿಗೆ ದಿನಮಣಿಯೇ ಪರದೆಯವ. ಶಯನೋತ್ಸವಕ್ಕೆ ಕತ್ತಲಾವರಿಸಿತು.

24 June 2010

ಹೂಡಿದೆವು ಶಿಬಿರ - ರಂಗನಾಥ ಸ್ತಂಭ ವಿಜಯ ಭಾಗ ಎರಡು


ಗಣಪತಿಭಟ್ಟರ ಸ್ವಗತ: “ಊಟಿಗೆ ಬರ್ತೀರಾ” ಅದೊಂದು ದಿನ ಹೀಗೇನೋ ಅಶೋಕರು ಕೇಳಿದರು. ಊಟಿಯ ಆಕರ್ಷಣೆಯಲ್ಲಿ ವಿಳಂಬಿಸದೆ ಒಪ್ಪಿದ್ದೆ. ವಿರಾಮದಲ್ಲಿ ತಯಾರಿ ನಡೆಸಿದ್ದಂತೆ, ‘ಕೆಲಸ’ ಸಣ್ಣದಿರಲಾರದು ಎಂದನಿಸಿತು. ಕನಿಷ್ಠ ರಾತ್ರಿ ಬಸ್ಸಿನಲ್ಲಿ ನಿದ್ರೆಯಾದರೂ ಗಟ್ಟಿ ಮಾಡಬೇಕೆಂದು ನಿರ್ಧರಿಸಿದ್ದೆ. ಬಸ್ಸೇರಿದ ಕೂಡಲೇ ಎಲ್ಲರ ನಿದ್ರೆ ತಾನೇ ವಹಿಸಿಕೊಂಡಂತೆ ಪ್ರಸನ್ನ ಬಸ್ಸಿನ ಸದ್ದಿಗೆ ಶ್ರುತಿ ಸೇರಿಸಿದರು. ದೇವು ಕಡಿಮೆ ಸ್ಪರ್ಧೆ ಕೊಡಲಿಲ್ಲ. ನಾನು ಯೋಜನೆಯಲ್ಲೇ ಬಾಕಿ, ನಿದ್ದೆ ನಾಸ್ತಿ. ಮರುದಿನ ಹಗಲಿನ ಸುಮೋ ಯಾನದಲ್ಲಿ ಹೊಸದಾರಿ ನೋಡುವ ಉತ್ಸಾಹ. ನಂಜನಗೂಡು, ಗುಂಡ್ಲುಪೇಟೆಗಳವರೆಗೆ ದೃಶ್ಯಗಳ ಬಗ್ಗೆ ಉದಾಸೀನವಿದ್ದರೂಪರ್ಸ್ಪರ ಪರಿಚಯ ಬೆಳೆಸುವ ಮಾತಿಗೆ ಬರವಿರಲಿಲ್ಲ. ಮುಂದೆ ವೀರಪ್ಪನ್ ವಲಯ - ಬಂಡಿಪುರ, ಕರ್ನಾಟಕದ ಗಡಿ ದಾಟಿದ ಮೇಲೆ ಮುದುಮಲೈ. ವನಧಾಮಗಳನ್ನು ಹಾದುಹೋಗುವಾಗ ನಮ್ಮ ಕತ್ತು ಜಿರಾಫೆ. ದಕ್ಕಿದ್ದು ಮಾತ್ರ ನವಿಲು, ಜಿಂಕೆ, ಬರೀ ಮಂಗ (ಮುಸುವ).


18 June 2010

ಕಾಪಾಡಿ! ಬಲಕೊಡೀ!!

(ರಂಗನಾಥ ಸ್ತಂಭ ವಿಜಯ ಭಾಗ -೧)

ಇಲ್ಲಿ ನನ್ನ ಲಕ್ಷದ್ವೀಪ ಕಥನ ಸಾಪ್ತಾಹಿಕ ಕಂತಿನಲ್ಲಿ ಸಾಗಿದ್ದಂತೆ ಲೋಕಮುಖದಲ್ಲಿ ಎಂತವರನ್ನೂ ಕಲಕುವ ಅಸಾಮಾನ್ಯ ಘಟನೆಗಳು ಬೆಳೆಯುತ್ತಲೇ ಇದ್ದವು/ ಇವೆ. ಕೆಂಜಾರಿನಲ್ಲಿ ದುಬೈ ಕೂಲಿಕಾರರೂ ಹರಪನಹಳ್ಳಿಯಲ್ಲಿ ಬೆಂಗಳೂರು ಕೂಲಿಕಾರರೂ ದಾರುಣವಾಗಿ ಸುಟ್ಟುಹೋದರು. ದಾಂತೇವಾಡ ಸಾಲದೆಂದು ಬಂಗಾಳದಲ್ಲೂ ನಡೆದ ನಕ್ಸಲ್ ನರಮೇಧ ರಾಷ್ಟ್ರವನ್ನೇ ತಲ್ಲಣಿಸಿತು. ಪ್ರಕೃತಿ ಧಾರಾಳವಿದ್ದರೂ ದುರಾಸೆಗಳ ರಾಜ್ಯದಲ್ಲಿ ವಿದ್ಯುತ್ತಿಲ್ಲ, ನೀರಿಲ್ಲ, ದವಸಧಾನ್ಯಗಳ ಬೆಲೆ ಮುಟ್ಟದ ಎತ್ತರವಿಲ್ಲ, ತರಕಾರಿ (ಕೃಷಿಕರ) ತಕರಾರು ಮುಗಿದದ್ದೇ ಇಲ್ಲ. ವೇದಿಕೆ ಕೊಡುವ ಎಲ್ಲಾ ವಿಷಯಗಳ ಮೇಲೆ (ಅಂದರೆ, ಆಶಯದಲ್ಲಿ ಪರಸ್ಪರ ಬದ್ಧ ವಿರೋಧವಿರುವ ವಿಚಾರಗಳಲ್ಲೂ) ಕಳೆದ ಕ್ಷಣದ ನೆನಪಿಲ್ಲದಂತೆ ‘ಪ್ರಚಾರ ಭಾಷಣವನ್ನೇ’ ಮಾಡುವ ಅಧಿಕಾರಿಗಳು, ರಾಜಕಾರಣಿಗಳು, ಮಠಾಧಿಪತಿಗಳು, ಕೊನೆಗೆ ಕಾವಲು ನಾಯಿಗಳೂ (ಮಾಧ್ಯಮಗಳು) ಯಾವ ಮುಚ್ಚುಮರೆಯಿಲ್ಲದೇ ಸ್ವಾರ್ಥವೊಂದನ್ನೇ ಪ್ರತಿನಿಧಿಸುತ್ತಿದ್ದಾರೆ. ಸಾರ್ವಜನಿಕಹಿತ ಎಂಬ ಅತ್ಯುನ್ನತ ಮೌಲ್ಯ ತಲಪಿದ ರಸಾತಳ ಯಾವ ಲೆಕ್ಕಕ್ಕೂ ಸಿಗದು.