Showing posts with label ಅನ್ಯರ ಬರಹಗಳು. Show all posts
Showing posts with label ಅನ್ಯರ ಬರಹಗಳು. Show all posts

15 December 2015

ಶಾಲೆಯಲ್ಲದು, ಬದುಕ ಕಟೆದ ಕಮ್ಮಟ!

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆಯ
(ಭಾಗ ಆರು)

ನನ್ನ ಹೆಲೆನ್ ಟೀಚರ್ - ಬರೆದರೆ ಒಂದು ಅಧ್ಯಾಯವೇ ಬೇಕಾದೀತೇನೋ! ಕೆಲವೇ ತಿಂಗಳು ನನಗೆ ಶಿಕ್ಷಕಿಯಾಗಿ ವೃತ್ತಿಜೀವನದುದ್ದಕ್ಕೂ ನನ್ನ ಸಹೋದ್ಯೋಗಿಯಾಗಿ ಅವರೊಂದಿಗೆ ಬೆರೆತು ನಾನು ಕಲಿತ ಪಾಠಗಳು ನನ್ನ ಶಿಕ್ಷಕ ವೃತ್ತಿ ಬದುಕಿನ ಯಶಸ್ಸಿಗೆ ಕಾರಣಗಳಾಗಿವೆ. ಬಿಸಿಲ ಬೇಗೆಯಿಂದ ಬಳಲಿದವನಿಗೆ ವಿಶಾಲ ವೃಕ್ಷದ ನೆರಳಿನಂತೆ, ಹಸಿದ ಮಗುವಿಗೆ ತಾಯಿ ಎದೆಹಾಲು ದೊರೆತಂತೆ, ತಪ್ಪು ಮಾಡಿ ತಪ್ಪಿಸಿಕೊಳ್ಳಲು ಮಕ್ಕಳು ತಾಯ ಸೆರಗಿನಾಶ್ರಯ ಪಡೆದಂತೆ, ಕತ್ತಲೆಯಲ್ಲಿ ತಡಕಾಡುತ್ತಿದ್ದವನಿಗೆ ಹಣತೆಯ ದೀಪ ಕೈಗಿತ್ತಂತೆ ಅವರ ಸಹವಾಸ ಮತ್ತು ಪಾಠ ಪ್ರವಚನಗಳು ನನ್ನಲ್ಲಿ ಪ್ರಭಾವ ಬೀರಿದೆ.

ಅವರಿಂದ ಪಾಠ ಹೇಳಿಸಿಕೊಂಡವರಾರೂ ಅವರನ್ನು ಮರೆಯಲು ಸಾಧ್ಯವಿರಲಿಲ್ಲ. ಶಾಲೆ ಬಿಟ್ಟು ಎಷ್ಟೋ ವರ್ಷಗಳ ಬಳಿಕ ಅವರನ್ನು ಕಂಡು ಮಾತಾಡಲಿಕ್ಕಾಗಿಯೇ ಬರುತ್ತಿದ್ದ ಶಿಷ್ಯರಿದ್ದರು. ಅವರ ಅಧ್ಯಾಪನವು ಅಷ್ಟೊಂದು ವೈಶಿಷ್ಟಪೂರ್ಣವಾಗಿತ್ತು. ಅವರ ಶಿಷ್ಯವಾತ್ಸಲ್ಯ ಗಾಢವಾಗಿತ್ತು. ಗಣಿತ ಪಾಠವನ್ನು ಅವರ ಹಾಗೆ ಕಲಿಸುವ ಶಿಕ್ಷಕರನ್ನು ನಾನು ಕಂಡಿಲ್ಲ. ಗಣಿತದಲ್ಲಿ ಮಾರ್ಕ್ಸ್ ಕಡಿಮೆ ತೆಗೆದವರನ್ನು ಅವರು ಹರಸುವ ರೀತಿಯೇ ವಿನೂತನವಾಗಿತ್ತು. ಮಾರ್ಕ್ಸ್ ಕಡಿಮೆ ಆಯ್ತು ಅಂತ ಬೇಸರಿಸಬೇಡಿ. ತುಂಬಾ ಮಾರ್ಕ್ಸ್ ಪಡೆದವರು ಅವರು ಬಯಸಿದಂತೆ ಡಾಕ್ಟರೋ ಇಂಜಿನಿಯರೋ ಏನಾದರೂ ಆಗಲಿ. ನೀವು ನನ್ನ ಹಾಗೆ ಟೀಚರಾಗಿ ಆಯ್ತಾ ಎಂದು ಕೆನ್ನೆ ತಟ್ಟಿ ಸಮಾಧಾನ ಮಾಡಿದಾಗ ಯಾವ ವಿದ್ಯಾರ್ಥಿಯಲ್ಲೂ ಗಣಿತವನ್ನು ದ್ವೇಷಿಸದೆ ಪ್ರೀತಿಸುವ ಹುಮ್ಮಸ್ಸುಂಟಾಗುತ್ತಿತ್ತು. ಕೆಲವು ಪಾಠಗಳು ಮಕ್ಕಳಿಗೆ ಕಷ್ಟ ಎಂದು ಅನಿಸುವುದಕ್ಕೆ ಶಿಕ್ಷಕರ ವ್ಯಕ್ತಿತ್ವವೂ ಕಾರಣವಾಗಿರುತ್ತದೆಂಬುದು ಸಾಬೀತಾದ ಸತ್ಯ. ಟೀಚರನ್ನು ಪ್ರೀತಿಸಿದವರು ಅವರ ಪಾಠವನ್ನೂ ಪ್ರೀತಿಸಲು ತೊಡಗುತ್ತಾರೆ. ನಾನೂ ಅವರೂ ವೃತ್ತಿಯಿಂದ ನಿವೃತ್ತರಾದ ಮೇಲೂ ತಿಂಗಳಿಗೊಮ್ಮೆಯಾದರೂ ಭೇಟಿಯಾಗುತ್ತಿದ್ದೆವು. ಒಳ್ಳೆಯ ಓದುಗಳಾದ ಅವರಿಗೆ ನಾನು ಓದಿದ ಉತ್ತಮ ಪುಸ್ತಕಗಳನ್ನು ಕೊಡುತ್ತಿದ್ದೆ. ಪುಸ್ತಕದ ಧನಾತ್ಮಕ ಅಂಶಗಳನ್ನು ಲೋಪ ದೋಷಗಳನ್ನು ನನ್ನೊಂದಿಗೆ ಚರ್ಚಿಸುತ್ತಿದ್ದರು. ಅದು ಗಂಭೀರ ಸಾಹಿತ್ಯ ಚರ್ಚೆಯೇನೂ ಅಲ್ಲದಿದ್ದರೂ ಅವರ ಸಾದಾ ಸರಳ ಜೀವನದ ಆದರ್ಶಗಳಿಗೆ ಪೂರಕವಾಗಿತ್ತು. ಯಾರಿಗೂ ತೊಂದರೆ ಕೊಡದೆ ಬದುಕಬೇಕೆಂಬ ವ್ರತ ತೊಟ್ಟ ಟೀಚರು ತನ್ನ ಮಗಳು ಎಷ್ಟೇ ಒತ್ತಾಯ ಮಾಡಿದರೂ ಮನೆ ಬಿಟ್ಟು ವಿದೇಶವಾಸಕ್ಕೆ ಒಪ್ಪಲಿಲ್ಲ. ನನಗೆ ಅವರನ್ನು ಕಂಡಾಗ ಗಾಂಧೀಜಿಯ ಸಂತತನದ ಹಠಮಾರಿತನವೂ, ಇಂದಿರಾಗಾಂಧಿಯ 'ಡಿಕ್ಟೇಟರ್ಶಿಪ್' ಮೊಂಡುತನವೂ ಎರಡೂ ಸಮ್ಮಿಲನಗೊಂಡ ಮೂರ್ತಿಯಂತೆ ಭಾಸವಾಗುತ್ತಿತ್ತು. ೮೫ ವರ್ಷದಲ್ಲಿ ನಿಧನರಾಗುವವರೆಗೂ ಸಾಮಾನ್ಯರನ್ನು ಬಾಧಿಸುವ ಯಾವ ಕಾಯಿಲೆಗಳೂ ಅವರ ಹತ್ತಿರ ಸುಳಿಯಲಿಲ್ಲ. ಹೊಟ್ಟೆನೋವು ಎಂದರೇನೆಂದೇ ಗೊತ್ತಿಲ್ಲದ ಅವರು ಜ್ವರ ಬಂದು ಮಲಗಿದವರಲ್ಲ. ಅನುಭವವಿಲ್ಲದವರೂ ಇದ್ದಾರೆಂದರೆ ಕಾಲದಲ್ಲಿ ಯಾರೂ ನಂಬಲಾರರು ಅಲ್ಲವೇ? ಕೃಶ ಶರೀರದ ನೇರ ನಿಲುವಿನ ಅವರು ೮೦ ವರ್ಷದ ಬಳಿಕ ಸ್ವಲ್ಪ ಬಾಗಿದಂತೆ ಕಾಣುತ್ತಿದ್ದರು. ಹಗಲಲ್ಲಿ ಕೆಲಸದಾಳಿನ ಸಹಾಯ ಪಡೆದವರೂ ರಾತ್ರಿ ಒಂಟಿಯಾಗಿಯೇ ಬದುಕುತ್ತಿದ್ದ ಅವರ ಧೈರ್ಯವನ್ನು ಕಂಡರೆ ಅವರ ನಿರ್ಧಾರವನ್ನು ಎಲ್ಲರೂ ಆಕ್ಷೇಪಿಸುತ್ತಿದ್ದರು. ಯಾರ ಮಾತಿಗೂ ಸೊಪ್ಪು ಹಾಕದ ಅವರು ಕೊನೆಗಾಲದಲ್ಲಿ ಒಮ್ಮೆ ಮನೆಯೊಳಗೆ ಎಡವಿ ಬಿದ್ದು ಕಾಲಿನ ಮೂಳೆ ಮುರಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಯಿತು. ಮಗಳು ವಿದೇಶದಿಂದ ಬಂದು ಆರೈಕೆಯಲ್ಲಿ ನಿರತಳಾದಳು. ಆದರೆ ಹೆಲೆನ್ ಟೀಚರು ಮೊದಲೇ ಮನಸ್ಸಿನಲ್ಲಿ ನಿರ್ಧಾರ ಮಾಡಿದಂತೆ 'ಸಲ್ಲೇಖನ ವ್ರತ' ಆಚರಿಸಿ ಆಸ್ಪತ್ರೆಯಿಂದ ಮನೆಗೆ ಮರಳಿದ ನಾಲ್ಕೇ ದಿನದಲ್ಲಿ ಮೃತರಾದರು. ಸಾವನ್ನು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಾವಿನ ಭಯದಿಂದ ತಪ್ಪಿಸಿಕೊಳ್ಳುವವರು ವಿರಳ. ಪ್ರಪಂಚವೆಂಬ ಬಂಧೀಖಾನೆಯಲ್ಲಿ ನಾವೆಲ್ಲಾ ಕೈದಿಗಳಂತೆ ಬದುಕುತ್ತೇವೆ. ಬಾಗಿಲು ತೆರೆದು ಓಡಿ ಹೋಗಲು ಯಾರಿಗೂ ಸಾಧ್ಯವಿಲ್ಲ. ದೇವರು ಕರೆಯುವವರೆಗೂ ಕಾಯಬೇಕು ಎಂದು ನಂಬಿದ ಟೀಚರು ತಾನೇ ಬಾಗಿಲು ತೆರೆದು ಹೋದರೇ? 'ಸಲ್ಲೇಖನ ವ್ರತ'ವನ್ನು ತಪ್ಪು ಎಂದು ವಾದಿಸುವವರಿದ್ದಾರೆ. 'ದಯಾಮರಣ'ವನ್ನೂ ಅಪರಾಧವೆಂದು ಕಾನೂನು ಹೇಳುತ್ತದೆ. ಆತ್ಮಹತ್ಯೆಯಂತೂ ಮಹಾಪಾಪವೆಂದು ಎಲ್ಲಾ ಮತಗಳೂ ಸಾರುತ್ತವೆ. ಹಾಗಿದ್ದರೆ ನನಗೆ ಇನ್ನು ಬದುಕುವುದು ಇಷ್ಟವಿಲ್ಲ. ತನ್ನಿಂದ ಇತರರಿಗೆ ತೊಂದರೆಯಾಗುತ್ತದೆ. ನಾನು ಮಾಡಬೇಕಾದ ಕೆಲಸಗಳೆಲ್ಲಾ ಪೂರ್ಣಗೊಂಡಿವೆ. ಆದುದರಿಂದ ನಾನು ಮರಣವನ್ನು ಆಮಂತ್ರಿಸುತ್ತೇನೆ ಎಂದು ದೃಢಚಿತ್ತದಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿದ ಟೀಚರರ ನಿರ್ಧಾರವನ್ನು ಯಾರು ವಿರೋಧಿಸಿದರೂ ನನಗಂತೂ ಅದು ತಪ್ಪು ಎಂದು ಅನಿಸಲಿಲ್ಲ. ಸತ್ಕಾರ್ಯದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿದರೆ ಸಾವಿನ ಭಯ, ನೋವು ಕಡಿಮೆಯಾಗುತ್ತದೆ. ಹೆಲೆನ್ ಟೀಚರು ತನ್ನ ಬದುಕಿನುದ್ದಕ್ಕೂ ವಿದ್ಯೆ ಮಾತ್ರ ಕಲಿಸಿದ್ದಲ್ಲ. ಅನೇಕ ಬಡ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾನಾ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಸದ್ದಿಲ್ಲದೆ ಮಾಡಿದ ಇಂತಹ ಅನೇಕ ಉದಾಹರಣೆಗಳು ನನ್ನ ಕಣ್ಣ ಮುಂದಿವೆ. ಗಿಡದಲ್ಲಿ ಹೂ ಮೌನವಾಗಿ ಅರಳಿದಂತೆ, ಮರಗಳು ಯಾವುದೇ ಗೌಜಿಗದ್ದಲ ಮಾಡದೆ ಹಣ್ಣುಗಳನ್ನು ನೀಡಿದಂತೆ ಹೆಲೆನ್ ಟೀಚರರ ಜೀವನ ಸಾರ್ಥಕವಾಯಿತು. ಹೇಡಿಗಳು ಅನೇಕ ಸಲ ಸಾಯುತ್ತಾರಂತೆ, ಧೈರ್ಯವಂತರು ಮಾತ್ರ ಒಂದೇ ಸಲ ಸಾಯುತ್ತಾರಂತೆ. ಯಾರೋ ಹೇಳಿದ ಮಾತು ನೆನಪಾಗುತ್ತದೆ. ಹೌದು, ಸಾವು ಬೆಟ್ಟಕ್ಕಿಂತ ದೊಡ್ಡದೂ ಹೌದು, ಕೂದಲಿಗಿಂತ ಸಣ್ಣದೂ ಹೌದು. ಅದರ ಮಹತ್ವವನ್ನು ತಿಳಿಯುವುದು ಕಷ್ಟ. ತಿಳಿದವರೂ ವಿರಳ.

11 December 2015

ಬದುಕು ರೂಪಿಸಿದ ಶಾಲೆ

(ಬಿ.ಎಂ ರೋಹಿಣಿಯವರ ಧಾರಾವಾಹಿ ಆತ್ಮಕಥಾನಕ - ದೀಪದಡಿಯ ಕತ್ತಲೆ ಭಾಗ ಐದು)

ಬಿಕರ್ನಕಟ್ಟೆಯಲ್ಲಿ ಹಲವಾರು ಕಟ್ಟೆಗಳಿದ್ದು ವರ್ಷಕ್ಕೊಮ್ಮೆ ಕದ್ರಿ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಉತ್ಸವ ಮೂರ್ತಿಯನ್ನು ಕಟ್ಟೆಗಳಲ್ಲಿರಿಸಿ ಪೂಜೆ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣದಿಂದಾಗಿ ದೊಡ್ಡ ಕಟ್ಟೆಗಳು ಈಗ ಕೇವಲ ಪೀಠಗಳಾಗಿ ಉಳಿದುಕೊಂಡಿವೆ.
ನಾವು ಚಿಕ್ಕಂದಿನಲ್ಲಿ ಕೇಳಿದ ಕತೆಯಂತೆ ಬಿಕ್ಕನಾಯ್ಕನೆಂಬವನು ಅಲ್ಲಿನ ಕಟ್ಟೆಯಲ್ಲಿ ದಾರಿಹೋಕರಿಗೆಲ್ಲ ನೀರು ಸರಬರಾಜು ಮಾಡುತ್ತಿದ್ದನಂತೆ. ಬಿಕ್ಕನಾಯ್ಕನ ಕಟ್ಟೆ ಬಿಕ್ಕನ ಕಟ್ಟೆಯಾಯಿತು ಎಂದು ಹೇಳುತ್ತಿದ್ದರು. ಬಿಕ್ಕನ ಕಟ್ಟೆಯಾಗಬೇಕಿದ್ದುದು ಬಿಕರ್ನಕಟ್ಟೆ ಹೇಗಾಯ್ತು ಎಂದು ಗೊತ್ತಿಲ್ಲ. ಇನ್ನೊಂದು ಕತೆಯ ಪ್ರಕಾರ ಇಲ್ಲಿನ ಕಟ್ಟೆಯಲ್ಲಿ ಬಂಗರಸನನ್ನು ತಂದು ನಿಲ್ಲಿಸಿ ನ್ಯಾಯ ತೀರ್ಮಾನ ಮಾಡಿ ಸಮೀಪದ ಬಂಗರ ಪದವಿನಲ್ಲಿ ಗಲ್ಲಿಗೇರಿಸಿದರೆಂದೂ ಹೇಳುತ್ತಾರೆ. ಅಲ್ಲಿ ಇರುವ ಒಂದು ಕಟ್ಟೆಯಲ್ಲಿರುವ ಕಲ್ಲಿನಲ್ಲಿ ಭೀಕರ ನ್ಯಾಯ ಕಟ್ಟೆ ಎಂಬ ಬರಹವಿದೆ. ಭೀಕರ ನ್ಯಾಯ ಕಟ್ಟೆಯೇ ಬಿಕರ್ನಕಟ್ಟೆಯಾಯಿತೆಂದು ಹೇಳುತ್ತಾರೆ. ಆದರೆ ನನ್ನ ಅಪ್ಪನ ತಿಳುವಳಿಕೆಯಂತೆ ಬ್ರಿಟೀಷರು ಬಂಗರಸನನ್ನು ಗಲ್ಲಿಗೇರಿಸುವ ಮೊದಲೇ ಸ್ಥಳಕ್ಕೆ ಬಿಕರ್ನಕಟ್ಟೆ ಎಂಬ ಹೆಸರಿತ್ತು. ಹಾಗಾದರೆ ಭೀಕರ ನ್ಯಾಯಕಟ್ಟೆ ಎಂದು ಶಿಲೆಯಲ್ಲಿ ಬರೆಸಿದವರಾರು? ಗೊತ್ತಿಲ್ಲ.

08 December 2015

ವಿಂಗಡದ ಗುಡಿ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ - ದೀಪದಡಿಯ ಕತ್ತಲೆ -

ಸದ್ದುಗದ್ದಲ, ದುಃಖ-ದುಮ್ಮಾನಗಳಿಂದ ಕೂಡಿದ್ದು ಜೀವನವಲ್ಲ. ಮೌನವಾಗಿ ನಡೆದ ಪರಿವರ್ತನೆಗಳೂ ಜೀವನದ ಭಾಗವೇ ಆಗಿದೆ. ನನಗೆ ಬುದ್ಧಿ ತಿಳಿಯುವಾಗಿನಿಂದ ಒಂದು ಭಯದ ವಾತಾವರಣದಲ್ಲಿ ಬದುಕಿದ ನನಗೆ ದೊರೆತ ಮೊದಲ ಬಿಡುಗಡೆಯೇ ನಮ್ಮ ಸ್ಥಳಾಂತರ. ಒಂದು ಕೋಳಿಗೂಡಿನಂತಹ ಸಣ್ಣ ಮನೆಗೆ ನಮ್ಮ ಸಂಸಾರ ಸ್ಥಳಾಂತರವಾಯಿತು. ಸ್ವಾತಂತ್ರ್ಯವೇನೆಂದು ಅರ್ಥವಾಗಬೇಕಾದರೆ ಅವರಿಗೆ ಪಾರತಂತ್ರ್ಯದ ನೋವಿನ ಅರಿವಿರಬೇಕು. ಒಂದು ಶುಭದಿನದಲ್ಲಿ ದೊಡ್ಡಮ್ಮ (ದೂಮ ದೊಡ್ಡಪ್ಪನ ಪತ್ನಿ) ಮನೆಯ ಹಿಂದುಗಡೆಯಲ್ಲಿದ್ದ ಸಣ್ಣ ಎರಡು ಕೋಣೆಗಳಲ್ಲಿ ಬಾಡಿಗೆದಾರರಾಗಿ ಪ್ರವೇಶ ಪಡೆದೆವು. ನಾವು ಹೋಗುವ ಮೊದಲ ದಿನ ಚಂದು ಭಾವನಲ್ಲಿ ಅಪ್ಪ ವಿಷಯ ತಿಳಿಸಿದಾಗ ತುಂಬಾ ನೊಂದುಕೊಂಡರಂತೆ. ಅವರ ಕಲ್ಲುಕೋರೆ ಉದ್ದಿಮೆಯೇನೋ ಚೆನ್ನಾಗಿ ನಡೆಯುತ್ತಿತ್ತು. ಆದರೆ ಹಣ ಬಂದಷ್ಟೇ ವೇಗದಲ್ಲಿ ಮಾಯವಾಗುವಂತಹ ವಿಷಯಾಸಕ್ತಿಯುಳ್ಳ ಮಿತ್ರಕೂಟ ಅವರನ್ನು ಕೈವಶ ಮಾಡಿಕೊಂಡಿತ್ತು. ನಾವು ಬಾಡಿಗೆ ಮನೆಗೆ ಹೋಗಿ ವರ್ಷ ಕಳೆಯುವಷ್ಟರಲ್ಲಿ ಆಘಾತದ ಸುದ್ದಿ ಬಂತು. ಚಂದು ಭಾವ ಅವರ ಪ್ರೇಯಸಿಯ ಮನೆಯಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ದರು. ಅಲ್ಲಿಂದ ಹೆಣವನ್ನು ಬಿಕರ್ನಕಟ್ಟೆಯ ಮನೆಗೆ ಸಾಗಿಸಲಾಯಿತು. ನಾನು ನೋಡಿದ ಮೊದಲ ಮರಣವದು.

01 December 2015

ಗಡಗಡ ಚಂಡೀಗಢ


(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನೈದು)

ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ನಮ್ಮ ಪ್ರವಾಸ ಮುಗಿಸಿ ವಾಪಾಸು ಬರಲು ವಿಮಾನವೇರುವುದು ಚಂಡೀಗಢದಲ್ಲಿ ಎಂದು ಅದನ್ನೂ ಬಾಲಂಗೋಚಿಯಾಗಿ ಸೇರಿಸಿಕೊಂಡಿದ್ದೆವು. ಅಲ್ಲಿನ  ರಾಕ್ ಗಾರ್ಡನ್, ರೋಸ್ ಗಾರ್ಡನ್, ನಗರ ಪ್ರದಕ್ಷಿಣೆ, ಸರೋವರ ವಿಹಾರ ಮುಂತಾದವುಗಳು ಅರ್ಧ ದಿನದಲ್ಲಿ ಮುಗಿದು ಹೋಗಬಹುದಾದ್ದರಿಂದ, ಚಂಡೀಗಢಕ್ಕೆ ೯೦ ಕಿ.ಮೀ ದೂರದಲ್ಲಿರುವ ಹರ್ಯಾಣ ರಾಜ್ಯದ ಕುರುಕ್ಷೇತ್ರವನ್ನೂ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೆವು.

ಚಂಡಿ ದೇವಿಯ ಕೋಟೆ ಎಂಬ ಶಬ್ದಾರ್ಥದ ಚಂಡೀಗಢದಲ್ಲಿ ಚಂಡಿ ಮಂದಿರವಿರುವುದು ನಗರದಿಂದಾಚೆ ೧೫ ಕಿ.ಮೀ ದೂರದಲ್ಲಿ. ಹಲವು ವಿದೇಶೀಯರ ಯೋಜನೆಯಲ್ಲಿ ರೂಪುಗೊಂಡ ನಗರ ನೇರ, ಅಗಲ ರಸ್ತೆಗಳು, ಉತ್ತಮವಾದ ಸಂಪರ್ಕ ವ್ಯವಸ್ಥೆಗೂ, ಸ್ವಚ್ಚತೆ, ಶುದ್ಧ ಗಾಳಿ ದೊರಕುವ ಹಸಿರಿಗೂ ಪ್ರಸಿದ್ಧ. ಇಲ್ಲಿನ ಜನ ತುಂಬಾ ಶ್ರೀಮಂತರು. ವ್ಯಾಪಾರ ವಹಿವಾಟುಗಳಿಗೆ ಕೇಂದ್ರ. ಕೇಂದ್ರಾಡಳಿತ ಪ್ರದೇಶವಾಗಿದ್ದೂ, ಪಂಜಾಬಕ್ಕೂ, ಹರ್ಯಾಣಕ್ಕೂ ಇದುವೇ ರಾಜಧಾನಿ!

27 November 2015

ಒಂಬತ್ತರಲ್ಲಿ ಏಳು ಕಳೆದು ಉಳಿದವು

(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ –
ದೀಪದಡಿಯ ಕತ್ತಲೆ - ೩)

ಬಾಲ್ಯದ ಅಭದ್ರತೆಯ ಜೀವನ ನನ್ನಲ್ಲಿ ಎಷ್ಟು ಕೀಳರಿಮೆಯನ್ನು ತುಂಬಿಸಿತೆಂದರೆ ಹೆಚ್ಚು ಕಡಿಮೆ ನಾನು ಮೂಕಳೇ ಆಗಿಬಿಟ್ಟಿದ್ದೆ. ಯಾರು ಪ್ರೀತಿ ತೋರಿಸಿದರೂ ನನ್ನ ಕಣ್ಣು ತೇವಗೊಳ್ಳುತ್ತಿತ್ತು. ಇನ್ನು ನಿಂದಿಸಿದರೆ, ಬೈದರೆ ಪ್ರವಾಹವೇ ಹರಿದು ಬರುತ್ತಿತ್ತು. ಕೀಳರಿಮೆಗೆ ಇನ್ನು ಒಂದು ಕಾರಣವಿತ್ತು. ನನ್ನ ಅಪ್ಪ ಅಮ್ಮ ಇಬ್ಬರೂ ಗೋಧಿ ಮೈ ಬಣ್ಣದವರಾಗಿ ನಾನು ಮಾತ್ರ ತೊಳೆದ ಕೆಂಡದಂತಿದ್ದು ಎಲ್ಲರಿಗೂ ಆಶ್ಚರ್ಯದ ವಿಷಯವೂ ಗೇಲಿಯ ವಿಷಯವೂ ಆಗಿತ್ತು. ಆಸ್ಪತ್ರೆಯಲ್ಲಿ ಮಗು ಬದಲಾಗಿದೆಯೆಂದೂ ನನ್ನ ಅಪ್ಪ ಅಮ್ಮ ಬೇರೆ ಯಾರೋ ಎಲ್ಲೋ ಇದ್ದಾರೆಂದೂ ರೇಗಿಸುವುದನ್ನು ಕೇಳಿ ಬಹುಶಃ ಇದು ಸತ್ಯವಿರಬಹುದೆಂದು ನಾನು ನಂಬಿದ್ದೆ. ನನ್ನನ್ನು ಕರಿಚ್ಚಿಪೆಣ್ ಎಂದು ಕರೆದಾಗ ಸಿಟ್ಟೇನೋ ಉಂಗುಷ್ಠದಿಂದ ಏರುತ್ತಿತ್ತು. ಆದರೆ ಸಿಟ್ಟು ಪ್ರಕಟವಾದರೆ ನನಗೇ ಅಪಾಯವೆಂದು ಗೊತ್ತಿದ್ದುದರಿಂದ ಕೆನ್ನೆ ಮೇಲೆ ಗಂಗಾ ಕಾವೇರಿಯರು ಇಳಿದು ಬರುತ್ತಿದ್ದರು.

24 November 2015

ಅಮೃತಸರ ಸುತ್ತ

ಅಮೃತಸರ ಸುತ್ತ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನಾಲ್ಕು)

ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ವೈಷ್ಣೋದೇವಿಯ ದರ್ಶನದ ಬಳಿಕ ರಘುನಾಥನ ನೋಡಲು ಹೋಗುವುದು ಎಂದು ನಿಶ್ಚಯಿಸಿ, ಕಾತ್ರಾದ ಹೋಟೆಲ್ಲನ್ನು  ಬಿಟ್ಟು ಜಮ್ಮುವಿನೆಡೆಗೆ ಹೊರಟೆವು. ಮತ್ತೆ ೪೯ ಕಿ.ಮೀಗಳ ರಸ್ತೆ ಪ್ರಯಾಣ, ಪ್ರಯಾಣದಲ್ಲೂ ಬೆಟ್ಟಗುಡ್ಡಗಳು, ವಿವಿಧ ಜಾತಿಯ ಮರಗಳು, ಮೇಯುತ್ತಿರುವ ಪಶುಸಂಕುಲಗಳು ಕಾಣಸಿಕ್ಕವು.
ಬೆಟ್ಟಗಳ ಕಲ್ಲು ಸಂದಿಗಳ ಎಡೆಯಲ್ಲಿ ಮೇಯುತ್ತಿದ್ದ,  ಮಕಮಲ್ಲಿನ ಕೂದಲ ರಾಶಿಯ ಪಾಶ್ಮಿನಾ ಆಡುಗಳನ್ನು ಕಂಡೆ. ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಕೆಲವು ಸುರಂಗಗಳಿದ್ದು, ಗುಡ್ಡ ಕೊರೆದು ರಸ್ತೆ ಮಾಡಿದ್ದಾರೆ. ಒಂದೆರಡು ತುಂಬಾ ಉದ್ದವೂ ಇದ್ದು, ದಾಟಲು ಒಂದು ನಿಮಿಷವೇ ಬೇಕಾಯ್ತೋ ಏನೊ.  ಹೀಗೆ ಬರುತ್ತಿರುವಾಗ ಟೋಲ್ ಬಳಿ ನಮ್ಮ ಗಾಡಿ ನಿಂತಿತು. ರಸ್ತೆಯಲ್ಲಿ ಒಬ್ಬಾತ ಏನೋ ಬಿಳಿಯ ವಸ್ತು ತಟ್ಟೆಯಲ್ಲಿಟ್ಟು ಮಾರುತ್ತಿದ್ದುದು ಕಂಡೆ. ನೋಡಿದರೆ ದೊಡ್ಡ ದೊಡ್ಡ ಕೊಬ್ಬರಿ ತುಂಡುಗಳು. ನಮ್ಮಲ್ಲಿ ಬಚ್ಚಂಗಾಯಿ( ಕಲ್ಲಂಗಡಿ) ತುಂಡುಗಳನ್ನು ಇಟ್ಟು ಮಾರುವಂತೆ ಮಾರುತ್ತಿದ್ದ. ನಮಗೆ ಮಾಮೂಲಿಯಾದರೂ ಅಲ್ಲಿಗೆ ಕೊಬ್ಬರಿ ಅಪರೂಪದ್ದೇ ತಾನೇ?