Showing posts with label ಕೊಡಗಿನ ಸುಮಗಳು. Show all posts
Showing posts with label ಕೊಡಗಿನ ಸುಮಗಳು. Show all posts

25 March 2014

ರಕ್ತದ ಆಸೆ

(ಕೊಡಗಿನ ಸುಮಗಳು – ಜಿಟಿನಾ ಸಮಗ್ರ ಕಥಾ ಸಂಕಲನದ ಕೊನೆಯ ಮತ್ತು ಹನ್ನೆರಡನೆಯ ಕತೆ - ೧೯೪೯)

ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತ ವರ್ಷವದು (೧೯೪೨ ಮಾರ್ಚ್). ಪರೀಕ್ಷೆ ಮುಗಿದ ಮೇಲೆ ನನ್ನ ಚಿಕ್ಕಪ್ಪನವರಲ್ಲಿಗೆ ಹೋದೆನು, ಕೆಲವು ದಿನಗಳನ್ನು ಅಲ್ಲಿ ಕಳೆಯಲೆಂದು. ಅವರು ಕಾರುಗುಂದ ಎಂಬ ಹಳ್ಳಿಯಲ್ಲಿ ವೈದ್ಯರಾಗಿದ್ದರು. ಅವರ ಮನೆಯು ಎತ್ತರ ನೆಲೆಯಲ್ಲಿ ಪ್ರಕಾಶಮಾನವಾಗಿಯೂ ಆಹ್ವಾದಕರವಾಗಿಯೂ ನಿಂತಿತ್ತು. ಒಂದು ಬದಿಯಲ್ಲಿ ಮಡಿಕೇರಿ ಭಾಗಮಂಡಲದ ರಸ್ತೆಯು ನೇರವಾಗಿ ಓಡುತ್ತದೆ. ಇನೊಂದು ಕಡೆ ನಾಪೋಕ್ಲಿಗೆ ಹೋಗುವ ದಾರಿ ಕವಲೊಡೆದಿದೆ. ರಸ್ತೆಗಳ ಮಧ್ಯದಲ್ಲಿ ಒಂದು ದ್ವೀಪದಂತೆ ಈ ಮನೆಯು ಇದೆ. ಹಗಲು ನಮಗೆ ಜನರ ಅಭಾವವೇ ಇರಲಿಲ್ಲ. ಔಷಧಿಗೆ ಬರುವವರು ಬಲುಮಂದಿ ಇರುತ್ತಿದ್ದರು. ಸುತ್ತಲಿನ ಹಳ್ಳಿಗಳಿಗೆ ಇಲ್ಲಿ ದಾಕುದಾರರು ಇರುವುದಾಗಿತ್ತು. ಇಲ್ಲವಾದರೆ ಒಳ್ಳೆ ಔಷಧಿ ದೊರೆಯಲು ಮತ್ತೆ ಹನ್ನೆರಡು ಮೈಲು ದೂರದ ಮಡಿಕೇರಿಗೆ ಹೋಗಬೇಕು. ಚಿಕ್ಕಪ್ಪ ಕಾರುಗುಂದದಲ್ಲಿ ಔಷಧಾಲಯ ಸ್ಥಾಪಿಸಿ ಒಂದು ತಿಂಗಳಾಗಿತ್ತು ಅಷ್ಟೆ. ಆದ್ದರಿಂದ ಅವರಿಗೆ ಸುತ್ತಲಿನ ಜನರ ಪರಿಚಯ ಚೆನ್ನಾಗಿ ಆಗಿರಲಿಲ್ಲ. ಆದರೆ ನನಗೆ ಸಮಯ ಹೋಗಲು ಯಾವ ತೊಂದರೆಯೂ ಇರಲಿಲ್ಲ. ಸೈಕಲ್ ತೆಗೆದುಕೊಂಡು ದೊಡ್ಡ ದಾರಿಯಲ್ಲಿ ದೂರ ಸವಾರಿ ಹೋಗುವುದು. ನಾಪೋಕ್ಲು ಕಡೆ ಹೋದರೆ ಒಂದೂವರೆ ಮೈಲಿನಲ್ಲಿಯೇ ಕಾವೇರಿ ಹೊಳೆಯು ಸಿಗುವುದು. ಅದರ ಪರಂಬು (ಮಳೆಗಾಲದಲ್ಲಿ ಪ್ರವಾಹದ ನೀರು ನಿಂತು ಫಲವತ್ತಾದ ಹೊಳೆಯ ಕರೆಯ ಬಯಲು) ವಿಶಾಲವಾಗಿ ಸುಂದರವಾಗಿ ಹಬ್ಬಿದೆ, ಅಲ್ಲಿ ಹೋಗಿ ಮಲಗಿಕೊಂಡು ಮುಗಿಲನ್ನೂ ನಿಬಿಡವಾಗಿ ಬೆಳೆದಿರುವ ಕಾಡುಗಳನ್ನೂ ನೋಡುವದು; ನೇರಿಳೆ ಹಣ್ಣುಗಳನ್ನು ತಿನ್ನಲು ಹೋಗಿ ಕೆಂಪಿರುವೆಗಳಿಂದ ಕಡಿಸಿಕೊಂಡು ಕೈ ಕುಡುಗುವುದು; ಇನ್ನು ಮನೆಯಲ್ಲಿಯೇ ಕುಳಿತಾಗ ಮಕ್ಕಳೊಡನೆ ಆಡುವುದು, ಕೆಣಕಿ ಅಳಿಸುವುದು; ಅಡುಗೆಮನೆಯೊಳಗೆ ಅವಲಕ್ಕಿ ಕಾಯನ್ನು ಮೆಲ್ಲುತ್ತ ಚಿಕ್ಕಮ್ಮನೊಡನೆ ಪಟ್ಟಾಂಗ - ಇವೇ ಮುಂತಾದವುಗಳು ನನ್ನ ಮುಖ್ಯ ಕಾರ್ಯಗಳಾಗಿದ್ದುವು. ಒಮ್ಮೊಮ್ಮೆ ಹಳ್ಳಿಯವರು ಮಡಿಕೇರಿಯ ಈ ಪ್ರಭೃತಿಯನ್ನು ನೋಡಬೇಕೆಂದು ಬಯಸುತ್ತಿದ್ದರು. ಆಗ ಚಿಕ್ಕಪ್ಪ ನನ್ನನ್ನು ಕರೆಯುತ್ತಿದ್ದರು. ನನ್ನೊಡನೆ ಕೆಲವು ಮಾತಾಡಿ,  ಆ ಹಳ್ಳಿಗನು ಇಂದಿಗೆ ಧನ್ಯನಾದೆ ಎಂಬಂತೆ ಹೋಗುತ್ತಿದ್ದ. ನಾನು ಇದು ಬಹಳ ವಿನೋದಕರವಾಗಿದೆಯಂದು ಒಳಗೆ ಹೋಗುತ್ತಿದ್ದೆನು. ಸಾಯಂಕಾಲ ಪೇಷಂಟುಗಳಿಲ್ಲದಿದ್ದರೆ ನಾನೂ ಚಿಕ್ಕಪ್ಪನೂ ಸ್ವಲ್ಪ ದೂರ ತಿರುಗಾಡಿಕೊಂಡು ಹೋಗುತ್ತಿದ್ದೆವು. ಆದರೆ ದಾರಿಯಲ್ಲಿ ಕೆಲವರು “ಸ್ವಲ್ಪ ಬನ್ನಿ, ಸ್ವಾಮಿ” ಎಂದು ಕರೆದುಕೊಂಡು ತಮ್ಮ ಮನೆಗೆ ಹೋಗಿ ಖಾಯಿಲಸ್ತರನ್ನು ತೋರಿಸುತ್ತಿದ್ದರು. ನಾನು ಅವರನ್ನು ಹಿಂಬಾಲಿಸಬೇಕಿತ್ತು. ಅಲ್ಲಿ ಕಾದು ಕಾದು ಬೇಸರ ಬರುತ್ತಿತ್ತು. ಹೊರಡುವಾಗ ಮಾತ್ರ ಹಾಲು, ಬಾಳೇಹಣ್ಣು, ನೇರಿಳೇ ಹಣ್ಣು ಇವೆಲ್ಲ ತಿನ್ನಲು ದೊರೆಯುತ್ತಿದ್ದುವು. ಯಾರು ನನಗೆ ಸರಿಯೆನ್ನುವ ಭಾವನೆಯಿಂದ ಆ ದಿನಗಳನ್ನು ಸಂತೋಷದಿಂದ ಕಳೆಯುತ್ತಿದ್ದೆನು.

18 March 2014

ಕಾವೇರೀ ಮಾತೆ

(ಕೊಡಗಿನ ಸುಮಗಳು – ಕತೆ ಹನ್ನೊಂದು -೧೯೫೧)
ಇದು ಅಗಸ್ತ್ಯನ ತಪದಮಣೆ ಕಾವೇರಿ ತಾಯ ತವರ್ಮನೆ
ಕದನಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ !
-       ಕವಿಶಿಷ್ಯ

ಕೊಡಗುದೇಶದಿ ಜನಿಸಿ ಕೊಡಗಿನ
ಬೆಡಗ ವರ್ಧಿಸಿ ಸಡಗರದಿ ತಾ
ನಡೆವಳೋಡುವಳೀ ಕವೇರನ ಸುತೆಯು ಕಾವೇರಿ
ಜಡರ ಪಾಪಾಂಬುಧಿಯ ನೀಗುತ
ಕಡುಬಡವರಿಗೆ ಪುಣ್ಯನಿಧಿಯಂ
ಕೊಡುತ ಹರಿವಳು ಪತಿತಪಾವನೆ ದೇವಿ ಕಾವೇರಿ

ಕಮಲಜ ಕುಧರದ ವಿಮಲತಟಾಕದಿ
ತಮವಂ ತೊರೆಯುವ ಜನಿಸುವಳು
ರಮಿಸುತ ನಲಿದು ವಸುಮತಿಗೆ ಹಸುರುಡೆ
ನಮನವಸಲ್ಲಿಸಿ ಮೆರೆಯುವಳು

ಬ್ರಹ್ಮಗಿರಿಯು ಕೊಡಗು ಸಂಸ್ಥಾನದ ಪವಿತ್ರತಮ ಪರ್ವತ. ಲೋಕ ಪಾವನೆಯಾದ ಕಾವೇರೀ ಮಾತೆಯು ಈ ಶೈಲದಲ್ಲಿ ನದೀ ರೂಪ ತಳೆದು ಮಂಗಳಪ್ರದಾಯಿನಿಯಾಗಿ ಪ್ರವಹಿಸಿ ಸಾಗುವಳು. ಯುಗ ಯುಗಾಂತರಗಳಿಂದ ಗಂಭೀರವಾಗಿ ತಲೆಯೆತ್ತಿ ನಿಂತಿರುವ ಪರ್ವತವು ನೋಟಕರಲ್ಲಿ ಆಶ್ಚರ್ಯವನ್ನೂ ಭಕ್ತಿಯನ್ನೂ ಬೀರುವುದು. ಬೃಹತ್ತಾದುದರ ಸುತ್ತಲೂ ಮಹತ್ತ್ವದ ಒಂದು ಕ್ಷೇತ್ರ ವ್ಯಾಪಿಸಿರುವುದು - ಅಯಸ್ಕಾಂತ ಶಿಲೆಯ ಸುತ್ತಲೂ ಆಕರ್ಷಣ ಕ್ಷೇತ್ರವು ಇರುವಂತೆ. ಬ್ರಹ್ಮಗಿರಿಯು ಇಂತಹ ಪವಿತ್ರವಾದ ಆಕರ್ಷಣ ಕ್ಷೇತ್ರ. ಇದು ಪ್ರತಿದಿನವೂ ಹಲವಾರು ಭಕ್ತರನ್ನು ತನ್ನ ಸಮ್ಮುಖಕ್ಕೆ ಸೆಳೆಯುವುದು. ಭಕ್ತವೃಂದ ದಾರಿಯುದ್ಧಕ್ಕೂ ಸೃಷ್ಟಿ ಸೌಂದರ್ಯದ ರಸದೂಟ ಉಣ್ಣುತ್ತ ಪುನೀತರಾಗಿ ಬ್ರಹ್ಮಗಿರಿಯ ದರ್ಶನಕ್ಕೆ ಯೋಗ್ಯತೆ ಪಡೆದು ಮೇಲೆ ಬರುವರು. ಆ ಸೌಂದರ್ಯದ ಸೌಧಕ್ಕೆ ಕಳಶವನ್ನೇರಿಸುವಂತೆ ಧೀರಗಂಭೀರವಾಗಿ, ಸ್ಥಿರತೆಯ ಪ್ರತೀಕವಾಗಿ, ಗಗನ ಚುಂಬಿಯಾಗಿ, ಭವ್ಯವಾಗಿ ನಿಂತಿರುವ ಬ್ರಹ್ಮಗಿರಿಯನ್ನು ಈಕ್ಷಿಸಿ ಸಮೀಕ್ಷಿಸಿ ಪುಳಕಿತಕಾಯರಾಗುವರು. ಮಹಾತ್ಮರ ದರ್ಶನವೇ ಪರಮಸುಖ.

11 March 2014

ಆತ್ಮಯಜ್ಞ

(ಕೊಡಗಿನ ಸುಮಗಳು - ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ - ಧಾರಾವಾಹಿಯಾಗುತ್ತಿರುವಲ್ಲಿ ಇದು... ಹತ್ತನೇ ಸಣ್ಣ ಕತೆ - ೧೯೫೧)

ಸಿರಿಬಾಯಿ ವೀರರಾಜನಿಗೆ ಇಬ್ಬರು ಗಂಡು ಮಕ್ಕಳು: ಹಿರಿಯವನು ಬಸವರಾಜ, ಎರಡನೆಯವನು ಶಿವರಾಜ. ವೀರರಾಜನ ಆಳ್ವಿಕೆಯಲ್ಲಿ ಕೊಡಗು ಸಂಸ್ಥಾನವು ಬಹಳವಾಗಿ ವಿಸ್ತರಿಸಲ್ಪಟ್ಟಿತು. ಇಂತಹ ವಿಶಾಲ ರಾಷ್ಟ್ರದಲ್ಲಿ ಅವನು ಶಾಂತಿ ಸುವ್ಯವಸ್ಥೆಗಳನ್ನು ಸ್ಥಾಪಿಸಿದ್ದನು. ದಕ್ಷನಾದ ಪ್ರಭು ಈ ರಾಜ್ಯ ತನ್ನ ಅನಂತರವೂ ವಂಶಪಾರಂಪರ್ಯವಾಗಿ ಹೀಗೆಯೇ ಮುಂದುವರಿಯಬೇಕೆಂದು ಭಾವಿಸುವುದು ಸಹಜ. ವ್ಯಕ್ತಿಕೇಂದ್ರೀಕೃತವಾಗಿದ್ದ ಅಧಿಕಾರ, ದರ್ಪ ಹಾಗೆಯೇ ಸಾಗಬೇಕಾಗಿದ್ದರೆ ರಾಜಕುಮಾರರು ಸಮಾಧಿಕ ಯೋಗ್ಯತಾ ಸಂಪನ್ನರಾಗಿರಬೇಕು. ರಾಜಪುತ್ರತ್ವವೊಂದೇ ಸಿಂಹಾಸನವನ್ನು ದೊರಕಿಸಿ ಕೊಡುವುದಿಲ್ಲ - ಪ್ರಾಯಶಃ ದೊರಕಿಸಿಕೊಡುವುದು; ಆದರೆ ಅಲ್ಲಿಯೇ ಚಿರಕಾಲ ಮಂಡಿಸಿರುವ ಭದ್ರತೆಯನ್ನು ನೀಡುವುದಿಲ್ಲ. ಅಂತಹ ಯೋಗ್ಯತೆ ಸಿದ್ಧಿಸುವುದು ಬುದ್ಧಿಶಕ್ತಿ ಮತ್ತು ದೇಹಶಕ್ತಿಗಳ ಶ್ರೀಮಂತಿಕೆಯಿಂದ. ಇದನ್ನು ಚೆನ್ನಾಗಿ ಅರಿತಿದ್ದ ರಾಜನು ತನ್ನ ಕುಮಾರರಿಗೆ ಅತ್ಯುತ್ತಮವಾದ ಶರೀರ ಮತ್ತು ಬುದ್ಧಿ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಿದನು. ರಾಜ ಪುತ್ರರು ಸಂಸ್ಕೃತ ಕನ್ನಡ ಸಾಹಿತ್ಯಗಳ ಸವಿಯುಂಡರು. ಕಾವ್ಯಗಳಲ್ಲಿ, ರಾಜ್ಯಭಾರ ಶಾಸ್ತ್ರದಲ್ಲಿ, ಪ್ರಜಾರಂಜನೆಯಲ್ಲಿ ಅವರಿಗೆ ಶಿಕ್ಷಣ ದೊರೆಯಿತು. ಪೂರಕ ಅಂಶವಾಗಿ ಅಂಗಸಾಧನೆಯಿಂದ, ವ್ಯಾಯಾಮಗಳಿಂದ ದೇಹಗಳನ್ನು ಪುಷ್ಟವನ್ನಾಗಿರಿಸಿದರು. ದೃಢಕಾಯರಾಗಿ ಆರೋಗ್ಯಸಂಪನ್ನತೆಯಿಂದ ಮೆರೆಯುವ ರಾಜಕುಮಾರರು ಅಶ್ವಿನಿದೇವತೆಗಳಂತೆ ಶೋಭಿಸಿದರು. ಯುದ್ಧ ಕಲೆ, ಚಾಣಕ್ಯತಂತ್ರ, ಶಶ್ತ್ರಾಸ್ತ್ರ ಪ್ರಯೋಗ ಮುಂತಾದವುಗಳಲ್ಲಿ ಅವರು ಪರಿಣಿತರಾದರು. ಹೀಗೆ ದಿನದಿಂದ ದಿನಕ್ಕೆ ವರ್ಧಿಸುತ್ತಿರುವ ವಂಶದ ಕುಡಿಗಳನ್ನು ನೋಡಿ ನೋಡಿ ವೀರರಾಜನಿಗೆ ಸಂತೋಷ ಉಕ್ಕುತ್ತಿತ್ತು. ಅವರ ಸಾಹಸ ಕಾರ್ಯಗಳನ್ನು ಸಾಹಿತ್ಯಾಭ್ಯಾಸವನ್ನು ಕೇಳಿ ಕೇಳಿ ರಾಜನು ಹರ್ಷ ಹೊಂದುತ್ತಿದ್ದನು. ಮಡಿಕೇರಿಯ ನಿವಾಸಿಗಳಿಗೆ ಈ ತರುಣೇಭದ್ವಯರನ್ನು ನಿತ್ಯವೂ ಕಾಣುವ ಭಾಗ್ಯ. ರಾಜನ ಸುಕೃತದಿಂದ ನಾಡಿನ ಸೌಭಾಗ್ಯದಿಂದ ಇಂತಹ ಯೋಗ್ಯ ರಾಜಕುಮಾರರು ಜನಿಸಿ ಅಭ್ಯುದಯ ಹೊಂದುತ್ತಿದ್ದಾರೆ ಎಂದು ಅವರು ಹೇಳಿಕೊಳ್ಳುತ್ತಿದ್ದರು.

04 March 2014

ಚಂದ್ರವರ್ಮನ ಖಡ್ಗ

(ಕೊಡಗಿನ ಸುಮಗಳು - ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ - ಧಾರಾವಾಹಿಯಾಗುತ್ತಿರುವಲ್ಲಿ ಇದು... ಒಂಬತ್ತನೇ ಸಣ್ಣ ಕತೆ - ೧೯೫೨)

ಗುರುಬಸವನ ಮೇಲೆ ಪಣ್ಯ ಗ್ರಾಮನಿವಾಸಿಗಳಿಗೆಲ್ಲ ಅತುಲವಾದ ಭಕ್ತಿ ಗೌರವ. ಅವನ ನಿಜವಾದ ಹೆಸರು ಬಸವಯ್ಯ ಎಂದಿದ್ದರೂ ಗ್ರಾಮಸ್ಥರು ಅವನಲ್ಲಿ ತಮಗಿದ್ದ ಅಭಿಮಾನ ಮರ್ಯಾದೆಗಳ ಕುರುಹಾಗಿ ಅವನನ್ನು ಗುರುಬಸವಯ್ಯ ಎಂದು ಕರೆಯುತ್ತಿದ್ದರು. ಗುರುಬಸವಯ್ಯನು ಪಣ್ಯಗ್ರಾಮದಲ್ಲಿ ಗಣ್ಯ ವ್ಯಕ್ತಿಯಾಗಿದ್ದನು. ಅವನ ಅಖಂಡ ಏಕಾಂಗೀ ಜೀವನದಲ್ಲಿ ಗ್ರಾಮಸ್ಥರೆಲ್ಲರೂ, ಹಿರಿಯರು ಕಿರಿಯರು ಎನ್ನುವ ವ್ಯತ್ಯಾಸವಿಲ್ಲದೆ, ಅವನು ಬಂಧುಗಳಾಗಿದ್ದರು, ಬಳಗವಾಗಿದ್ದರು. ಅವನಿಗೆ ಮದುವೆಯಾಗಿದ್ದಿತೋ ಇಲ್ಲವೋ, ಅವನಿಗೆ ಆಪ್ತ ಬಂಧುಗಳು ಇರುವರೋ ಇಲ್ಲವೋ ಯಾರಿಗೂ ತಿಳಿದಿರಲಿಲ್ಲ. ಅಂದರೆ ಅವನು ಪಣ್ಯ ಗ್ರಾಮದಲ್ಲಿ ಹುಟ್ಟಿ ಬೆಳೆದವನಾಗಿರಲಿಲ್ಲ. ಏಕಾಂಗಿಯಾಗಿ ಶಿವಧ್ಯಾನದಿಂದ ಜಂಗಮರಂತೆ ದೇಶಪರ್ಯಟನ ಮಾಡುತ್ತಿದ್ದ ಅವನು ಅಲ್ಲಿ ಬಂದು ನೆಲಸಿದನು. ನೆಲಸಿದವನು ಎನ್ನುವುದಕ್ಕಿಂತಲೂ ಶಿವನು ಅವನನ್ನು ಅಲ್ಲಿಯೇ ಉಳಿಯುವಂತೆ ಪ್ರೇರಣೆಯಿತ್ತನು ಎನ್ನುವುದು ಹೆಚ್ಚು ವಾಸ್ತವಿಕವಾಗುವುದು.ಗುರುಬಸವನೇ ಒಂದು ಸಲ ಆ ಅನುಭವವನ್ನು ಹೇಳಿದ್ದನು, ಅವನು ಪರಮೇಶ್ವರನ ಧ್ಯಾನಾಸಕ್ತನಾಗಿ ದೇಶದ ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತ ಶಿವಶರಣರ ದರ್ಶನ ಸೇವೆಗಳಲ್ಲಿ ಆಯುಷ್ಯ ಸವೆಯುತ್ತಿದ್ದನು. ಮೈಸೂರು ಸಂಸ್ಥಾನದ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಮುಂದೆ ಭಗವಂತನ ಪುತ್ರ ಶ್ರೀ ಸುಬ್ರಹ್ಮಣ್ಯ ದೇವರ ಕೃಪೆ ಆಶೀರ್ವಾದ ಪಡೆಯಲೆಂದು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದಯಮಾಡಿಸಿದನು. ಅಲ್ಲಿಂದ ಮುಂದೆ ಘಟ್ಟವನ್ನೇರಿ ಕೊಡಗು ಸಂಸ್ಥಾನವನ್ನು ತಲಪಿದನು. ಈ ಪುಣ್ಯಭೂಮಿಯನ್ನು ಆಗ ದೊಡ್ಡ ವೀರರಾಜನು ಆಳುತ್ತಿದ್ದನು. ರಾಜಕುಲ ಶಿವಭಕ್ತರ ಪಂಗಡವಾಗಿದ್ದಿತು. ಶಂಕರ  ಕಿಂಕರರು ಯಾರೂ ಕೊಡಗು ದೇಶಕ್ಕೆ ಬರದೇ ರಾಜದರ್ಶನ ಮಾಡದೇ ಹೋಗುತ್ತಿರಲಿಲ್ಲ. ಹಾಗೆ ಬಸವಯ್ಯನು ಕೊಡಗು ದೇಶಕ್ಕೆ ಏರಿ ಬಂದನು, ಬರುತ್ತಿದ್ದಂತೆಯೇ - ರಾಜಧಾನಿ ಮಡಿಕೇರಿ ತಲುಪುವ ಮೊದಲೇ - ಬಸವಯ್ಯನನ್ನು ಅಧಿಕ ತೃಷ್ಣೆಯೂ ಹಸಿವೂ ಬಾಧಿಸಿದುವು. ನಿರಾಹಾರ, ಕಠಿಣ ಪ್ರಯಾಣದ ಆಯಾಸ. ಬೋಳು ಗುಡ್ಡೆಯ ಮೇಲೆ ಬೇಸಗೆಯ ಮಧ್ಯಾಹ್ನ ಕಾಲ ಅವನು  ನಡೆಯುತ್ತಿದ್ದನು. ಮುಂದೆ ಒಂದು ಹೆಜ್ಜೆಯನ್ನೂ ಇಡಲಾಗಲಿಲ್ಲ.

25 February 2014

ನ್ಯಾಯ ಪರಿಪಾಲನೆ

(ಕೊಡಗಿನ ಸುಮಗಳು - ಎಂಟನೇ ಸಣ್ಣ ಕತೆ -೧೯೫೧)

ಲಿಂಗರಾಜನ ವಿಷಯವನ್ನು ಹಿಂದೊಮ್ಮೆ (ಪಂಜರದ ಗಿಳಿ) ಹೇಳಲಾಗಿದೆ. ಒಲಿದರೆ ಶಂಕರನೂ ಮುನಿದರೆ ಭಯಂಕರನೂ  ಆಗಿದ್ದ ಲಿಂಗರಾಜನು ಅತಿ ಚಿಕ್ಕ ಪ್ರಾಯದಲ್ಲಿ ಕೊಡಗಿನ ಸಿಂಹಾಸವನ್ನೇರಿದ್ದನು. ಅವನಿಗೆ ಆಗ ಇನ್ನೂ ಹದಿನೈದು ವರ್ಷ ತುಂಬಿರಲಿಲ್ಲ - ಆಗಲೇ ಅವನ ತಂದೆ ವೀರರಾಜನು ಶಿವಾಧೀನನಾದನು, ರಾಜಕುಟುಂಬ ದುಃಖಸಾಗರದಲ್ಲಿ ಮುಳುಗಿತ್ತು. ನಡುನೀರಿನಲ್ಲಿ ಬಿರುಗಾಳಿಯ ತೀವ್ರತೆ ಏರಿದ್ದಾಗ ಹಡಗಿನ ಕೂವೆಮರ ಒಡೆಯಿತು. ಅನೇಕ ಸಾಮಂತರಾಜರು ವೀರರಾಜನ ಕರ್ಮಾಂತರಗಳಿಗೆ ಬಂದು ಭಾವೀ ರಾಜನಾದ ಕಿರಿಯ ಲಿಂಗರಾಜನಿಗೆ ತಮ್ಮ ಗೌರವ, ವಿಧೇಯತನಗಳನ್ನು ಸಲ್ಲಿಸಿ ಮರಳಿದರು. ಆದರೆ ಆ ಔಪಚಾರಿಕವಾದ ವಿನಯ ಪ್ರದರ್ಶನಗಳು ಅವರ ಹಿಂದೆಯೇ ತೆರಳಿದುವು. ಕೆಲವು ಉದ್ಧತ ಸಾಮಂತ ಭೂಪಾಲರು ಈ ಒಂದು ಮರ್ಯಾದೆಯನ್ನೂ ತೋರಿಸಲಿಲ್ಲ. ವೀರರಾಜನ ಮರಣವಾರ್ತೆ ಕೇಳಿದಾಗಲೇ ತಾವೇ ಅರಸರೆಂದು ಸಾರಿ ಹಾಗೆ ವರ್ತಿಸತೊಡಗಿದರು. ರಾಜಕುಲವನ್ನು ಸರಿಯಾದ ದಾರಿಯಲ್ಲಿ ನಡೆಯಿಸುವ ಧೀರರು ಯಾರೂ ಇರಲಿಲ್ಲವೆನ್ನುವಂತೆ ತೋರಿತು. ಅನುಭವಿಗಳಾದ ಮಂತ್ರಿಗಳು, ವೃದ್ಧರು ಇರಲಿಲ್ಲ. ರಾಜ್ಯದ ರಕ್ಷಣೆ ಮತ್ತು ಆಡಳಿತ ಎಳೆ ಹರೆಯದ ಲಿಂಗರಾಜನ ಮೇಲೆ ಬಿದ್ದುವು.

18 February 2014

ಹುಲಿಯ ಪ್ರೇಮ

(ಆರನೇ ಸಣ್ಣ ಕತೆ -೧೯೪೬)
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಅದರ ವಿ-ಧಾರಾವಾಹಿಯಲ್ಲಿ ಇದು ಆರನೇ ಗುಟುಕು. ಆಸಕ್ತರು ಹಿಂದಿನ ಐದೂ ಕತೆಗಳ ಸರಣಿ ನೋಡಲು ಇಲ್ಲಿ ಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ.  - ಅಶೋಕವರ್ಧನ]

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು? - ಕವಿಶಿಷ್ಯ.
ಮಡಿಕೇರಿಯಿಂದ ಐದು ಮೈಲು ದೂರದಲ್ಲಿ ಹುಲಿತಾಳವೆನ್ನುವ ಒಂದು ಹಳ್ಳಿಯಿದೆ. ಪ್ರತಿಯೊಂದು ಪ್ರಖ್ಯಾತ ಸ್ಥಳದ ಹಿನ್ನೆಲೆಯಲ್ಲಿಯೂ ಒಂದು ಸ್ಥಳ ಪುರಾಣವಿರುವಂತೆ ಇದರ ಹಿನ್ನೆಲೆಯಲ್ಲಿಯೂ ಒಂದು ದಂತ ಕಥೆಯಿದೆ. ಎಲ್ಲಾ ಹಳ್ಳಿಗಳಿಗೂ ಬೀಡುಗಳಿಗೂ ಈ ರೀತಿಯ ಇತಿಹಾಸಗಳಿದ್ದರೂ ಅವೆಲ್ಲ ಸಾಕಷ್ಟು ಪ್ರಚಾರವಿಲ್ಲದೆ, ಕೇಳುವವರಿಲ್ಲದೆ ಪ್ರಕಾಶಕ್ಕೆ ಬರುವುದಿಲ್ಲ. ಹುಲಿತಾಳವನ್ನು ಹುಲಿಯು ತಾಳ ಹಾಕುವ ಸ್ಥಳವೆಂದು ಕೆಲವರು ವಿವರಿಸಿದರೆ, ಅದು ಹುಲ್‌ತಆಳ ಅಂದರೆ ಆಳವಾಗಿ ಹುಲ್ಲು ಬೆಳೆದಿರುವ ಸ್ಥಳವೆಂದು ಇನ್ನು ಕೆಲವರು ಅರ್ಥ ಮಾಡುವರು. ಇದೊಂದೂ ಸರಿಯಲ್ಲ, ಬೇರೇನೋ ನಿಗೂಢಾರ್ಥ ಇದರಲ್ಲಿರಬೇಕು ಅಥವಾ ಅರ್ಥವಿಹೀನವಾದ ಅನೇಕ ಶಬ್ದಗಳಂತೆಯೇ ಇದೂ ಒಂದು ಎಂದು ಹಲವರು ತಿಳಿಯುವರು. ಮಡಿಕೇರಿಯೇ ಕಾಡು; ಇನ್ನು ಅದರ ಸಮೀಪದ ಹಳ್ಳಿಯೆಂದರೆ ಅದು ಗೊಂಡಾರಣ್ಯವೆಂದೇ ತಿಳಿಯಬೇಕು. ಈ ಮಹಾರಣ್ಯದ ಮಧ್ಯೆ ಮನುಷ್ಯ ನಿರ್ಮಿತವಾದ ಗದ್ದೆ ಬಯಲುಗಳು ಅಂಚಿನಲ್ಲಿ ಅಲ್ಲಲ್ಲಿ ದೂರದೂರದಲ್ಲಿ ಒಂದೆರಡು ಗುಡಿಸಲುಗಳು ಇವೆ. ಇವುಗಳೇ ಈ ಹಳ್ಳಿಯ ಮುಖ್ಯ ಮಾರ್ಗಗಳು ಮತ್ತು ಜನವಸತಿಯ ನೆಲೆಗಳು. ಕೆಲವು ವರ್ಷಗಳ ಹಿಂದೆ ಈ ಹಳ್ಳಿಯಲ್ಲಿ ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಒಂದು ಮದುವೆ ನಡೆಯಿತು. ಅದಕ್ಕೆ ಹೋಗಿದ್ದಾಗ ಹುಲಿತಾಳದ ವಿಷಯದಲ್ಲಿ ನನ್ನ ಉತ್ಸಾಹ ಕೆದರಿತು. ಮಂಟಪದಲ್ಲಿ ಕುಳಿತಿದ್ದ ಒಬ್ಬ ವೃದ್ಧ ಮಹಾಶಯರನ್ನು, ಆ ಸ್ಥಳಕ್ಕೆ ಸಂಬಂಧಿಸಿದವರನ್ನು, ಇದರ ಕುರಿತು ಪ್ರಶ್ನಿಸಿದೆ. ಅವರೆಂದರು, ಊಟವಾಗ್ಲಿ; ಆ ಮೇಲೆ ಒಂದು ಜಾಗಕ್ಕೆ ಹೋಗೋಣ. ಅಲ್ಲಿ ಕಥೆ ಹೇಳುವೆನು. ಇದು ನನ್ನ ಕುತೂಹಲವನ್ನು ಇನ್ನೂ ಹೆಚ್ಚಿಸಿತು. ಮಾತು ಬೇರೆ ಕಡೆಗೆ ಹರಿಯಿತು.

11 February 2014

ಶಂಭುವಿನ ಕಥೆ

(ಐದನೇ ಸಣ್ಣ ಕತೆ -೧೯೪೭)
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಹಾಗೆ ಮಾಡುವಾಗ ಪ್ರಸ್ತುತ ಒಂದು ಕತೆಯ ಹಳೆಯ ಪ್ರತಿ ಅಲಭ್ಯವಾದ್ದರಿಂದ ಅನಿವಾರ್ಯವಾಗಿ ಸ್ವತಃ ಆಧುನಿಕ ಜಿಟಿನಾ ಅದನ್ನು ನೆನಪಿನಿಂದ ಪುನರ್ನಿರೂಪಿಸಿದ್ದಾರೆ. ಕತಾಸಂಕಲನದ ವಿ-ಧಾರಾವಾಹಿಯಲ್ಲಿ ಇದು ಐದನೇ ಹೆಜ್ಜೆ. ಆಸಕ್ತರು ಹಿಂದಿನ ನಾಲ್ಕೂ ಕತೆಗಳ ಸರಣಿ ನೋಡಲು ಇಲ್ಲಿಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ.  - ಅಶೋಕವರ್ಧನ]

ಮಡಿಕೇರಿಯ ಸುಂಕದ ಕಟ್ಟೆಯಲ್ಲಿ ಬಸ್ಸು ಜಕ್ಕು ಹೊಡೆದು ತನ್ನ ತುಂಬಿ ಬಿರಿವ ಸರಕನ್ನು ಬರಖಾಸ್ತು ಮಾಡಿದಾಗ ನಾನೂ ಹೊರಕ್ಕೆ ರಟ್ಟಿದೆ. ಈ ಮಹಾಘಟನೆಯನ್ನೇ ಕಾಯುತ್ತಿತ್ತೋ ಎಂಬಂತೆ ಆಗ ಕೋಟೆ ಗಡಿಯಾರ ನಟ್ಟಿರುಳ ೧೨ನ್ನು ಢಣಾರಣೆ ಬಜಾಯಿಸಿ ಅನುರಣಿಸಿ ವಿರಮಿಸಿತು. ಕೂಲಿಗಳಿರಲಿ, ತೊಂಡಿದನ ನಾಯಿ ಕೂಡ ಇರದ ಶ್ಮಶಾನ ಭೀಕರತೆ, ಅಮಾವಾಸ್ಯೆಯ ಕರಾಳ ರಾತ್ರಿ. ಮೂಳೆಯೊಳಗಣ ನೆಣ ಮಜ್ಜೆಗಳನ್ನೇ ಝಾಡಿಸುವಂತಿತ್ತು ಚಳಿ. ನಡುಗಿದೆ - ಚಳಿಗೆ, ಮಿಗಿಲಾಗಿ ಎಲ್ಲಿ ಆಸರೆ ಅರಸಲಿ ಆ ಅಕಾಲ ಎಂದರಿಯದೇ.

04 February 2014

ಪಂಜರದ ಅರಗಿಳಿ

(ನಾಲ್ಕನೇ ಸಣ್ಣ ಕತೆ -೧೯೪೮)
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಈಗ ಮತ್ತದೇ ಕಾರಣಕ್ಕಾಗಿ ಇಲ್ಲಿ ಅನಿಯತ ಧಾರಾವಾಹಿಯಾಗಿ ಕೊಡುವಲ್ಲಿ ಇದು ನಾಲ್ಕನೇ ಹೆಜ್ಜೆ. ಆಸಕ್ತರು ಹಿಂದಿನ ಮೂರೂ ಕತೆಗಳ ಸರಣಿ ನೋಡಲು ಇಲ್ಲಿ ಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ.  - ಅಶೋಕವರ್ಧನ]

[೧೯೯೩ರಂದು ಜಿಟಿನಾ ಬರೆದ ಅರಿಕೆಯ ಮುಂದುವರಿದ ಮಾತುಗಳು: ೧೯೫೧ರಲ್ಲಿ ವನಸುಮ ಕತಾಸಂಕಲನಕ್ಕೆ ಬರೆದ ಮುನ್ನುಡಿಯಿಂದ ಉದ್ಧೃತಾಂಶ: ಸಾಹಿತ್ಯದ ಸವಿಯನ್ನು ಲೇಖಕನಿಗೆ [=ನನಗೆ] ಊಡಿಸಿದವರು ಅವನ ಬಾಲ್ಯದ ಗುರುಗಳಾದ ಶ್ರೀ ಎನ್.ಎಸ್. ರಾಮಚಂದ್ರ ಅವರು. ಸಕಲ ಸಂದರ್ಭಗಳಲ್ಲಿಯೂ ಲೇಖಕನಿಗೆ ಉಚಿತ ಹಿತೋಕ್ತಿಗಳನ್ನೂ ಪ್ರೋತ್ಸಾಹವನ್ನೂ ನೀಡಿ ಅವನ ಸಾಹಿತ್ಯತೃಷ್ಣೆಯನ್ನು ವರ್ಧನೆಮಾಡಿದವರು ಶ್ರೀ ಎಂ.ಎಸ್. ಅನಂತಪದ್ಮನಾಭರಾಯರು. ಮಹನೀಯರುಗಳಿಗೆ ಪುಟ್ಟ ಪುಸ್ತಕವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಲು ಸಂತೋಷವಾಗುವುದು. ಗುರುವರ್ಯರುಗಳಿಗೆ ಕೀರ್ತಿಯನ್ನು ತರಲಿ, ತಾರದಿರಲಿ ಅರ್ಪಣೆಯಲ್ಲಿನ ಉದ್ದೇಶವು ಸದ್ಭಾವಪ್ರಚೋದಿತ.

15 November 2013

ಮುನಿದು ಪೊಡವಿ ನುಂಗುವಡೆ

(ಕೊಡಗಿನ ಸುಮಗಳು ಸಂಕಲನದ ಮೂರನೇ ಸಣ್ಣ ಕತೆ -೧೯೪೫)
ಜಿ.ಟಿ ನಾರಾಯಣ ರಾವ್
ಪ್ರಕಾಶಕನ ಮಾತು
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೫ರಲ್ಲಿ ಬರೆದ ಕತೆಯಿದು. ಈ ಹಿಂದೆ ಹೇಳಿದಂತೆ ೧೯೯೩ರಲ್ಲಿ ಇವರ ಸಮಗ್ರ ಕತಾಸಂಕಲನವಾಗಿ ನಾನೇ ಪ್ರಕಟಿಸಿದ ಕೊಡಗಿನ ಸುಮಗಳಲ್ಲಿ ಇದು ಮೂರನೇ ಕತೆ. (ಹಿಂದಿನೆರಡನ್ನು ಓದದವರಿಗೆ ಇಲ್ಲಿದೆ ಸೇತು) ಮುಂದೆ ಹೀಗೇ ಹನ್ನೆರಡರಲ್ಲಿ ಉಳಿದವನ್ನು ಹೀಗೇ ಅನಿಯತವಾಗಿ ಪ್ರಕಟಿಸಿ, ಕೊನೆಯಲ್ಲಿ ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ - ಅಶೋಕವರ್ಧನ]

ಲೇಖಕನ ಅರಿಕೆಯ ಮುಂದುವರಿದ ಮಾತುಗಳು
[ನನ್ನ ದೃಷ್ಟಿ ಮತ್ತು ಶೈಲಿವಿಕಾಸ? ಪ್ರಸಕ್ತ ಸಂಕಲನ ಮುದ್ರಣಗೊಳ್ಳುತ್ತಿರುವಾಗ ಅನಿವಾರ್ಯವಾಗಿ ನಾನು ಮುದ್ರಣ ಕರಡುಗಳನ್ನು ಮತ್ತೆ ಮತ್ತೆ ಓದಬೇಕಾಯಿತು. ‘ಕೈಕೊಡದ ಹಿಲ್‌ಮ್ಯಾನ್ [೧೯೬೭ರಲ್ಲಿ ಬರೆದ ಇದನ್ನು ಮುಂದೆ ತಂದೆಯೇ ಆತ್ಮಕಥೆಯಲ್ಲಿ ಸಹಜ ಸ್ಥಾನ ಕೊಟ್ಟಿರುವುದರಿಂದ ಮತ್ತೆ ಕೊಡಗಿನ ಸುಮಗಳು ಸಂಕಲನದಲ್ಲಿ ಸೇರಿಸುತ್ತಿಲ್ಲ - ಅ.ವ] ಎಂಬ ವಾಸ್ತವ ಅನುಭವವನ್ನು ಮೆಲುಕು ಹಾಕಬೇಕಾಯಿತು. ಅಂದಿನ ಕಲ್ಪನೆ ‘ಶಂಭುವಿನ ಕಥೆಯನ್ನು, ಮೂಲಪ್ರತಿ ಎಲ್ಲಿಯೂ ದೊರೆಯದ್ದರಿಂದ ಅಥವಾ ಅದನ್ನು ‘ಉತ್ಖನಿಸುವ ದಿಶೆಯಲ್ಲಿ ನನ್ನ ಪ್ರಯತ್ನ ಸಾಕಾಗದ್ದರಿಂದ, ಇಂದಿನ ಶೈಲಿಯಲ್ಲಿ ಪುನರ್ನಿರೂಪಿಸಬೇಕಾಯಿತು. ದೇಶ ಕಾಲಗಳಲ್ಲಿ  ಒಬ್ಬ ಲೇಖಕ ಸಾಕಷ್ಟು ಹಿರಿದೂರ ಗಮಿಸಿ, ನಡೆದು ಬಂದ ಜಾಡನ್ನು ಸಿಂಹಾವಲೋಕಿಸಿದಾಗ ಆತನ ದೃಷ್ಟಿ ತಕ್ಕಷ್ಟು ಜ್ಞೇಯನಿಷ್ಠತೆ ಅಥವಾ ನಿರಪೇಕ್ಷತೆ ಗಳಿಸಿರುವುದೆಂದು ಭಾವಿಸಿದ್ದೇನೆ. ಇಂಥ ಒಂದು ಎಕ್ಸ್ ಕಿರಣ ದೃಷ್ಟಿಯಿಂದ ನನ್ನ ‘ಅಂದನ್ನು ಅದೇ ನನ್ನ ‘ಇಂದಿನಿಂದ ಸರ್ವೇಕ್ಷಿಸಿದಾಗ ನನಗೆ ಗೋಚರಿಸುವ ಕಂಕಾಲಗಳು ಎರಡು ಮಾತ್ರ: ೧. ಜೀವನದೃಷ್ಟಿ ಖಂಡಿತ ಬದಲಾಗಿಲ್ಲ: ನೈತಿಕತೆಯುಳಿದ ಜೀವನ ಜೀವನವಲ್ಲ. ಕರ್ತವ್ಯಪಾಲನೆಯೇ ಜೀವನ. ನಿಸರ್ಗದೂರ ಜೀವನ ಮರುಭೂಮಿಯ ಮರೀಚಿಕೆ. ನಂಬಿದ್ದನ್ನು ಮಾಡು, ಮಾಡುವುದರಲ್ಲಿ ನಂಬಿಕೆ ಇಡು. ಸದಾ ಜ್ಞಾನಕೈಲಾಸಾರೋಹಿಯಾಗಿರು, ಎಂದೂ ಅದರ ತಳದಲ್ಲಿ ನಿಂತ ರಾವಣನಾಗದಿರು. ೨. ನಿರೂಪಣೆ, ಪದಪ್ರಯೋಗ, ಶೈಲಿ ಮುಂತಾದ ತಾಂತ್ರಿಕ ವಿವರಗಳಲ್ಲಿ ಅಪಾರ ಕಲಾವಂತಿಕೆಯನ್ನೂ ಅಧಿಕ ಮಿತವ್ಯಯವನ್ನೂ ಸಾಧಿಸಬೇಕಾಗಿತ್ತು, ಸಾಧಿಸಬಹುದಾಗಿತ್ತು - ಆದರೆ ಸಾಧಿಸಲಾಗಲಿಲ್ಲ. (ಮುಂದುವರಿಯಲಿದೆ)]

ಕತೆ: ಮುನಿದು ಪೊಡವಿ ನುಂಗುವಡೆ

ಬಹಳ ಹಿಂದೆ ಕೊಡಗು ರಾಜರ ಆಳ್ವಿಕೆಯ ಕಾಲದಲ್ಲಿ ಕೊಡವರ ಪೂವಯ್ಯನೆಂಬವನು ಅದ್ವಿತೀಯ ಶೌರ್ಯ ಪ್ರದರ್ಶನ ಮಾಡಿದುದಕ್ಕೆ ಉಂಬಳಿಯಾಗಿ ರಾಜನು ಅಗ್ನಿಕುಂಡದ ಪ್ರದೇಶವನ್ನು ಅವನಿಗೆ ಕೊಟ್ಟಿದ್ದನು. ಸೈನ್ಯದಿಂದ ನಿವೃತ್ತನಾದ ಮೇಲೆ, ಈ ನಿರ್ಜನ ಭಯಂಕರ ಪ್ರದೇಶದಲ್ಲಿಯೇ ನೆಲಸುವ ನಿಶ್ಚಯದಿಂದ ಪೂವಯ್ಯನು ಹೆಂಡತಿ ಮಗನೊಡನೆ ಅಲ್ಲಿಗೆ ಹೋದನು. ಗೇಣಗಲ ಭೂಮಿಯಿಂದಲೂ ಹೊನ್ನಮಳೆ ಕರೆಸಬಹುದೆಂದು ಅವನ ನಂಬಿಕೆಯಾಗಿತ್ತು. ಪೂವಯ್ಯನು ಬಡತನದಲ್ಲಿಯೇ ಬೆಳೆದು ಬಂದುದರಿಂದ ದೈಹಿಕ ಕಷ್ಟಗಳಿಗೆ ಹಿಂಜರಿಯುತ್ತಿರಲಿಲ್ಲ. ಅವನಿಗೆ ಪ್ರಾಯವೂ ಬಹಳವಾಗಿರಲಿಲ್ಲ. ಪ್ರಾಯದ ಒಬ್ಬ ಗಂಡು ಮಗನೂ ಇದ್ದನು. ಇವರು ಆಯಕಟ್ಟು ಪ್ರದೇಶವನ್ನು ಆರಿಸಿಕೊಂಡು ಅಲ್ಲಿ ವಾಸಿಸಲು ಒಂದು ಮನೆಯನ್ನು ಕಟ್ಟಿದರು. ಮತ್ತೆ ದನಕರುಗಳನ್ನು ಅಲ್ಲಿಗೆ ಸಾಗಿಸಿ ಗದ್ದೆ ಮಾಡಲು ಪ್ರಾರಂಭಿಸಿದರು. ಹೊಸತಾಗಿ ಗದ್ದೆಯನ್ನಾಗಲೀ ತೋಟವನ್ನಾಗಲೀ ಮಾಡುವುದು ಸಾಮಾನ್ಯದ ಕೆಲಸವಲ್ಲ. ಪ್ರಾರಂಭದಲ್ಲಿ ಇಲ್ಲಿ ಒಂದು ಕದನವೇ ನಡೆಯಿತು. ಸೈನ್ಯದಲ್ಲಿ ಶೌರ್ಯ ಪ್ರದರ್ಶನ ಮಾಡಿದ ಪೂವಯ್ಯನ ಸತ್ತ್ವಪರೀಕ್ಷೆ ಇಲ್ಲಿ ಆಯಿತು. ದಿನನಿತ್ಯ ನಿಸರ್ಗದೊಡನೆ ಹೋರಾಡಿ, ಕಾದಾಡಿ ಅವನಿಗೆ ಸಾಕಾಯಿತು. ವಿಘ್ನಗಳು ಒಂದೆರಡೇ?

06 September 2013

ಹೀಗೆ ಮಾಡುವುದೇ?

(ಎರಡನೇ ಸಣ್ಣ ಕತೆ -೧೯೪೮)
-  ಜಿ.ಟಿ. ನಾರಾಯಣ ರಾವ್)

[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೭ರಲ್ಲಿ ಬರೆದ, ಇಲ್ಲಿ ಕೆಲವು ವಾರಗಳ ಹಿಂದೆ ಪ್ರಕಟವಾದಸುಬ್ಬಪ್ಪನ ದಯೆಯೂ (ಓದದವರು ಇಲ್ಲಿ ಚಿಟಿಕೆ ಹೊಡೆಯಿರಿಸೇರಿದಂತೆ ತನ್ನ ಹನ್ನೆರಡು ಕತೆಗಳ, ಅಂದರೆ ಸಮಗ್ರ ಕಥಾಸಂಕಲನ - ಕೊಡಗಿನ ಸುಮಗಳು, ಇದಕ್ಕೆ ೧೯೯೩ರಲ್ಲಿ ಬರೆದ ಅರಿಕೆಯ ಕೆಲವು ಮಾತುಗಳು ಹೀಗಿವೆ: ವನಸುಮ ಮತ್ತು ಕೊಡಗಿನ ಕತೆಗಳು ಎಂಬಪ್ರಾಚೀನ ಕಥಾಸಂಕಲನಗಳ ಲೇಖಕ ಖುದ್ದು ನಾನೇ ಎಂಬುದು ಮರೆತೇ ಹೋಗಿದ್ದಾಗ, ಮೇರು ಕೃತಿಗಳ ಪ್ರತಿಗಳು ನನ್ನ ಗ್ರಂಥಗೊಂಡಾರಣ್ಯದಲ್ಲಿ ರಜಃಕಣಾಂತರ್ಗತ ಪಳೆಯುಳಿಕೆಗಳಾಗಿ ಮಾಸಿ ಹೋಗಿದ್ದಾಗ, ಲೇಖನಕೃಷಿಯ ಸದ್ಯೋಜಾತ ಉಲ್ಲಾಸ ಇಂಗಿದ ಬಳಿಕ, ನನ್ನ ಯಾವುದೇ ಕೃತಿಯ ಅಥವಾ ಬರೆಹದ ಬಗ್ಗೆ ಏನೊಂದೂ ಆಸಕ್ತಿ ಅಥವಾ ಒಲುಮೆ ಇಲ್ಲದೆ ವರ್ತಮಾನದಲ್ಲಿ ಪೂರ್ಣಮಗ್ನನಾಗಿ ಭವಿಷ್ಯದತ್ತಚುಂಚ ಚಾಚುತ್ತಿರುವಾಗ ನಮ್ಮ ಹಿರಿಯ ಮಗ ಜಿ.ಎನ್. ಅಶೋಕವರ್ಧನ (ಅತ್ರಿ ಬುಕ್ ಸೆಂಟರಿನದೊರೆ) ಈ ಹೊಸ ಕೀಟವನ್ನು ನನ್ನ ತಲೆಗೆ ಹೊಗಿಸಿದ (ದೊರೆಯೇ ಇದು ಸರಿಯೇ ನಿನಗೆ ಹರಿಯೇ): ವನಸುಮ + ಕೊಡಗಿನ ಕತೆಗಳು = ಕೊಡಗಿನ ಸುಮಗಳು ಎಂಬ ಹೊಸ ಸಂಕಲನವನ್ನು ಪ್ರಕಟಿಸಬಾರದೇಕೆ? ಇಂಥ ಒಂದು ಕೃತಿ ಅಂದಿನ ಕೊಡಗಿನ ಬದುಕಿಗೆ ಒಂದು ಇಣುಕುನೋಟ ಒದಗಿಸುವದರ ಜೊತೆಗೆ ನನ್ನ ದೃಷ್ಟಿ ಮತ್ತು ಶೈಲಿಗಳ ವಿಕಾಸ ಅರಿಯಲು ಒಂದು ಅವಕಾಶವನ್ನೂ ಕಲ್ಪಿಸಬಹುದು. ಇದು ಅವನ ವಾದ. ‘ಪಸಿಮಣ್ ನಲ್ವೆಣ್ ತನಿಪಣ್ ಕಲಿಗಳ್ - ಇದು ಕೊಡಗು ಎಂಬ ಅರ್ಥ ಬರುವ ಮಾತನ್ನು ಹಿಂದೊಮ್ಮೆ ನೆಹರೂ ಮಡಿಕೇರಿಯಲ್ಲಿ ಮಾಡಿದ ಭಾಷಣದಲ್ಲಿ ನುಡಿದದ್ದು ನೆನಪಿಸಿಕೊಂಡೆ. ಕುಸಿಯುತ್ತಿರುವ (?) ನನ್ನ ಧೃತಿಗೆ ಕಾಯಕಲ್ಪ ಮತ್ತು ಮುಖಮಾರ್ಜನ ನೀಡಲು ಅವನು ಹೂಡಿರುವ ಹೂಟ ಇದಾಗಿರಬಹುದೇ ಎಂಬ ಗುಮಾನಿ ನನಗುಂಟು - ಅವನೆಷ್ಟು ಖಡಾಖಂಡಿತವಾಗಿ ಇದನ್ನು ನಿರಕಾರಿಸಿದರೂ! 

ಮುಂದೆ ಕೊಡಗಿನ ಸುಮಗಳು ಸಂಕಲನದಲ್ಲಿ ಉಳಿದವನ್ನು ಹೀಗೇ ಅನಿಯತವಾಗಿ ಪ್ರಕಟಿಸಿ, ಕೊನೆಯಲ್ಲಿ ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ - ಅಶೋಕವರ್ಧನ]

28 June 2013

ಸುಬ್ಬಪ್ಪನ ದಯೆ

(ಸಣ್ಣ ಕತೆ೧೯೪೭ ಜಿ.ಟಿ. ನಾರಾಯಣ ರಾವ್)

[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದರು. ಅವುಗಳಲ್ಲಿ ಕೆಲವನ್ನು ತಂದೆಯ ವಿದ್ವಾನ್ ಮಿತ್ರ ಶ್ರೀನಿವಾಸ ಉಡುಪರು ತಮ್ಮ ವಸಂತಮಾಲಿಕೆಯಲ್ಲಿ ವನಸುಮ ಮತ್ತು ಕೊಡಗಿನ ಕತೆಗಳು ಎಂಬ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನು ಮತ್ತು ಹಾಗೆ ಬರದೇ ಉಳಿದವನ್ನೂ ಸೇರಿಸಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ನಾನೂ (ಅತ್ರಿ ಬುಕ್ ಸೆಂಟರ್ ಹೆಸರಿನಲ್ಲಿ) ಪ್ರಕಟಿಸಿದ್ದೆ. ಇಂದು ತಂದೆ ದೇಹ ಕಳೆದ ದಿನ (೨೮--೨೦೦೮).  ಅವರ ಸ್ಮೃತಿಗೆ ಈಗ ಇಲ್ಲಿ ಕೊಡಗಿನ ಸುಮಗಳಿಂದ ಒಂದು ಕತೆಯನ್ನು ಕೊಡುತ್ತಿದ್ದೇನೆ. ಮುಂದೆ ಉಳಿದವನ್ನು ಅನಿಯತವಾಗಿ ಪ್ರಕಟಿಸಿ, ಕೊನೆಯಲ್ಲಿ ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ - ಅಶೋಕವರ್ಧನ]

ನಮ್ಮೂರ ಹೊಲೆಯರ ವಾಲಗ ತಮಟೆಗಳನ್ನು - ತಾಳವಾದ್ಯ ಕಛೇರಿಯನ್ನು - ನೀವೆಂದಾದರೂ ಕೇಳಿರುವಿರಾ? ಇದು ಬಹಳ ವಿನೋದವಾಗಿದೆ. ವಾಲಗ ಬಾರಿಸುವವನು, ಶ್ರುತಿ ಕೊಂಬು ಊದುವವರು, ತಮಟೆ ಬಡಿಯುವವರು ಹೀಗೆ ಇಷ್ಟು ಜನರ ಸಮ್ಮೇಳನ ಇಲ್ಲಿ ನಡೆಯುವುದು. ಶ್ರುತಿಗಾರ ಪ್ಞೆರಞೇ ಎಂದು ನಾದ ತುಂಡು ಮಾಡದೇ ಏಕಾಗ್ರತೆಯಿಂದ ಊದುತ್ತಿರುತ್ತಾನೆ. ಅವನು ಕಲ್ಲಿನ ಪ್ರತಿಮೆಯಂತೆ ನಿಶ್ಚಲ. ಆದರೆ ಕೆನ್ನೆಗಳು ಮಾತ್ರ ಉಬ್ಬುತ್ತ ಚಪ್ಪಟೆಯಾಗುತ್ತ ಇರುತ್ತವೆ. ವಾಲಗದವನು ನಾನಾ ವಿಧದ ಹಾಡುಗಳನ್ನು ಬಾರಿಸುತ್ತಾನೆ. ಎಲ್ಲವೂ ಅಪಸ್ವರಮಯ - ಆ ಅಪಸ್ವರದಿಂದಲೇ ಒಂದು ವಿನೋದವಾಗುವುದು. ಇನ್ನು ತಮಟೆಯವರದು ಎಲ್ಲ ಹಾಡುಗಳಿಗೂ ಒಂದೇ ಅಚ್ಚು. ಪೇಟೆಂಟು ತಾಳ - ಡಂಗಡಕ ಎಂದು ಹೊಡೆಯುತ್ತಿರುತ್ತಾರೆಕೊಂಬಿನವರು ಅರ್ಧ ವೃತ್ತಾಕಾರದ ಆ ವಾದ್ಯವನ್ನು ಆಗಾಗ ಗಂಭೀರವಾಗಿ ಮೇಲೆತ್ತಿ ಚೂಪಾದ ಕೊನೆಯನ್ನು ತುಟಿಯ ಮೇಲಿರಿಸಿ, ಈ ಸಂಗೀತಸೌಧಕ್ಕೆ ಕಳಸವಿಡುವಂತೆ, ದಿಗ್ಭಿತ್ತಿಗಳನ್ನು ಭೇದಿಸುವಂತೆ ಮೊಳಗಿಸುತ್ತಾರೆ! ಅಂತೂ ಏನೋ ಒಂದು ಗಲಭೆ, ಒಂದು ಗದ್ದಲ ನಡೆಯುತ್ತಿರುತ್ತದೆ; ಅದನ್ನು ಸಂಗೀತವೆನ್ನಿ, ಹರಟೆಯೆನ್ನಿ. ಅದನ್ನು ಕೇಳುತ್ತ ನಿಂತರೆ ಒಂದು ವಿಧದ ಆನಂದವೇ ಆಗುತ್ತದೆ. ಕಾಲುಗಳು ಫಕ್ಕನೆ ತಾಳಕ್ಕೆ ಸರಿಯಾಗಿ ಹೆಜ್ಜೆಯಿಡಲು ತೊಡಗುತ್ತವೆ. ಸಣ್ಣ ಮಕ್ಕಳು, ಕೆಲಸಗಾರರು ಮೊದಲಾದವರು ಈ ವಾದ್ಯ ಸಂಭ್ರಮ ನಡೆಯುವಾಗ ಮೇಳಗಾರರ ಸುತ್ತಲೂ ಕುಣಿಯುವುದುಂಟು. ಇದು ಭರತನಾಟ್ಯ ಶಾಸ್ತ್ರಕ್ಕೆ ಸರಿಯಾದ ನೃತ್ಯ ಎಂದು ಇಂದಿಗೂ ಕೆಲವರು ಸಾಧಿಸುತ್ತಿದ್ದಾರೆ! ನೀವು ಬೇರೆ ವಿಷಯದಲ್ಲಿ ತಲ್ಲೀನರಾಗಿದ್ದರೆ, ಸ್ವಲ್ಪ ಹೊತ್ತಿನಲ್ಲಿಯೇ ಇದೊಂದು ವಾದ್ಯಗೋಷ್ಠಿ ನಡೆಯುತ್ತಿದೆ ಎಂದೇ ತಿಳಿಯುವುದಿಲ್ಲ. ಆದರೆ ಈಸಂಗೀತಫಕ್ಕನೆ ನಿಂತರೆ, ಜಡಿಮಳೆ ಸುರಿದು ನಿಂತಾಗ ಆಗುವ ಅನುಭವವೇ ಆಗುವುದು. ಈ ಹೊಲೆಯರು ಹಳ್ಳಿಯಲ್ಲಿ ಹುಟ್ಟಿ, ವಿದ್ಯೆಯ ಯಾವ ಗಂಧವೂ ಇಲ್ಲದೆ ಬೆಳೆದು, ಅಲ್ಲಿಯೇ ಮಣ್ಣುಗೂಡುವವರು ಎಂದು ತಿಳಿದರೆ ನಮಗೆ ಈ ವಾದ್ಯಗಾರರ ವಿಷಯದಲ್ಲಿ ತಿರಸ್ಕಾರ, ತಾತ್ಸಾರ ಮತ್ತು ಕುಚೇಷ್ಟೆ ಉಂಟಾಗುವುದೇ ಇಲ್ಲ. ಬದಲು ಆದರ, ಕುತೂಹಲ, ವಿನೋದ ಜನಿಸುತ್ತವೆ. ತಂಜಾವೂರಿನ ನಾಗಸ್ವರ ವಿದ್ವಾಂಸರ ಗುರುಕುಲಕ್ಕೆ ಸೇರಿದವರಲ್ಲ ಈ ಹರಿಜನರು. ಸರಿಗಮವೆಂದರೇನೆಂದು ಅರಿಯದವರು. ಶ್ರುತಿ ಹೊಂದಿಸುವುದು ಹೇಗೆ, ಏನು ಎಂದು ತಿಳಿಯದಿದ್ದರೂ ಇವರ ವಾಲಗಕ್ಕೆ ಒಂದು ಶ್ರುತಿಯಿದೆ. ಇನ್ನು ತಾಳಾದ ತದ್ಧಿತ್ತೋಂನ್ನಂಗಳ ವೈಖರಿಯಾಗಲೀ, ರಾಗದ ಮೇಳಕರ್ತ ವಿಭಾಗಗಳಾಗಲೀ ಇವರಿಗೆ ತಿಳಿಯದು. ನಮ್ಮೂರಿನ ಜನರು ಸರಳ ಹೃದಯಿಗಳು. ಅಂತೆಯೇ ಮದುವೆಮುಂಜಿಗಳಿಗೆ ಹುತ್ತರಿ ಕುಣಿತ, ಸಾವಿನ ಮೆರವಣಿಗೆ ಮುಂತಾದ ಶುಭ, ಸಂತೋಷ, ಅಶುಭ ಕಾರ್ಯಗಳಿಗೆಲ್ಲ ಈ ಡಂಗಡಕ ವಾದ್ಯವನ್ನೇ ಕರೆಯಿಸುತ್ತಾರೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಬೇಕಾದುದು ಗಲಭೆ, ಕಿವಿಗೆ ತಾಗುವ ಸ್ವರ, ಏನೋ ಸಮಾರಂಭ ನಡೆಯುತ್ತಿದೆ ಎಂದು ಅರಿಯಲು. ಮೈಸೂರು, ತಂಜಾವೂರು ಸಂಗೀತದ ಚಾಕಚಕ್ಯ ಅನಾವಶ್ಯಕ. ಆದರೂ ಈಚೆಗೆ ಕೆಲವರು ಈ ತತ್ತ್ವಕ್ಕೆ ಭಂಗ ತರುತ್ತಿದ್ದಾರೆ. ಮೈಸೂರಿನಿಂದ ವಾಲಗದವರನ್ನು ಕರೆಯಿಸಿ, ಅವರಿಗೆ ಒಂದಕ್ಕೆ ನಾಲ್ಕು ತೆತ್ತು, ಅವರು ಬಾರಿಸುವಉತ್ತಮ ರೀತಿಯ ಅಪಸ್ವರಕ್ಕೆ ಶಾಭಾಸ್ಗಿರಿಯನ್ನೂ ಬಹುಮಾನವನ್ನೂ ಕೊಟ್ಟು ಕಳಿಸುತ್ತಾರೆ. ಆದರೆ ಅಪೂರ್ವ. ಹೆಚ್ಚಿನ ಎಲ್ಲ ಶುಭಾಶುಭ ಕಾರ್ಯಗಳಿಗೆ ಪುರೋಹಿತರ ಮಂತ್ರದಂತೆ (ಈಗ ಇದೂ ಮರೆಯಾಗುತ್ತ ಬರುತ್ತಿದೆ) ಹೊಲೆಯರ ವಾದ್ಯವೂ ಆವಶ್ಯಕ.