ಗುಡ್ಡ ಬೆಟ್ಟಗಳು ಬರಿಯ ಮಣ್ಣ ದಿಬ್ಬವಲ್ಲ - ಬಜ್ಪೆ
(ಚಕ್ರೇಶ್ವರ ಪರೀಕ್ಷಿತ ೨೪
ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ)
ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ ಕಾಂಕ್ರೀಟೀಕರಣ ಮುಗಿದಿದೆ. ಏಕಮುಖ ಸಂಚಾರದ ನಿರ್ಬಂಧ ಏರುವವರ ಪರವಾಗಿಯೇ ಇತ್ತು. ವೃತ್ತದಲ್ಲಿ ನೇರ ಸಾಗಿ, ಪದವು ಶಾಲೆ, ಯೆಯ್ಯಾಡಿ, ಬೊಂದೇಲ್, ಕಾವೂರು ವೃತ್ತ, ಮರಕಡ, ಫಲ್ಗುಣಿ ನದಿ ದಾಟಿ, ವಿಮಾನ ನಿಲ್ದಾಣದ ಹೊಸ ದಾರಿಯವರೆಗೂ ಓಟಕ್ಕೊಂದು ಚೂಪು ಇರಲಿಲ್ಲ. ಇಲ್ಲಿ ಹಳೆಯ ಆದ್ಯಪಾಡಿ ರಸ್ತೆಗೆ ಹೊಸ ಬಾಯಿ ಕೊಟ್ಟು, ಇಲಿ ಹಿಡಿಯಲೆಂದೇ ಭಾರೀ ಗುಡ್ಡ ಅಗೆದದ್ದರ ವರ್ತಮಾನ ನೋಡುವ ಉತ್ಸಾಹದಲ್ಲಿ ತಿರುಗಿದೆ.

















