“ನಮ್ಮಯ ಕಾಲೇಜೂ ಮಹರಜ ಕಾಲೇಜೂ
ಕುವೆಂಪು ಶ್ರೀಗಳಂಥಾ ಕವಿಗಳಿದ್ದ ಕಾಲೇಜೂಊಊಊ ...” (ಮಹಾರಾಜ ನೆನಪು ಮೊದಲ ಭಾಗ)

ಎಡಗಿವಿಯ ಮೇಲೆ ಕೈ ಇಟ್ಟು, ಬಲಗೈಯಲ್ಲಿ ಆಕಾಶ ತಿವಿದು, ಅರವತ್ತು-ಎಪ್ಪತ್ತರ
ದಶಕದ ಸಿನಿಮಾಗಳ ಭಕ್ತಿಗಾನದ ಶೈಲಿಯಲ್ಲಿ (“ಶಿವಪ್ಪಾಆಆ ಕಾಯೋತಂದೇ” ಇಷ್ಟೈಲ್ ಅನ್ನಿ ಬೇಕಾದರೆ) ಮಾದೂ ನಾಭಿಯಿಂದಲೂ ಆಚಿನಿಂದ ರಾಗ ಎಳೆಯುತ್ತಿದ್ದರೆ
ತರ್ಕಾತೀತವಾಗಿ ಮೊದ ಮೊದಲು ಸಹಪಾಠಿಗಳಾದ ನಮಗೆ (ವಿದ್ಯಾರ್ಥಿಗಳಿಗೆ) ರೋಮಾಂಚನವಾಗುತ್ತಿತ್ತು. ಅದೇನೋ
(ಮೈಸೂರು) ಮಹಾರಾಜಾ ಕಾಲೇಜಿನ ಅಘೋಷಿತ ರಾಷ್ಠ್ರಗೀತೆಯಂತೆ ಯಾವುದೇ ಮಹತ್ತಿನ ಕಾರ್ಯಕ್ರಮಗಳಲ್ಲಿ ಮರುಕಳಿಸುತ್ತಲೇ
ಇತ್ತು. ಭಾವಗೀತ ಸ್ಪರ್ಧೆಗಳಲ್ಲಿ, ಸಮೂಹಗಾನ ಸ್ಪರ್ಧೆಗಳಲ್ಲಿ ನಾನಿದ್ದ ಆ ಮೂರೂ ವರ್ಷಗಳಲ್ಲಿ (೧೯೬೯-೭೨) ಮತ್ತೆ ಮತ್ತೆ ಅನುರಣಿಸುತ್ತಿತ್ತು. ಆ ಸಾಹಿತ್ಯ-ರಾಗಗಳ
ಅಧಿಕ ಪ್ರಾಶನದಿಂದ ಮುಂದೆ ಕಾಲೇಜಿನಲ್ಲಿ ಸಣ್ಣಪುಟ್ಟ ಗೊಂದಲಗಳಿಗೆ ದೀರ್ಘ ಗಂಟಾನಾದವಾದಾಗ ನಮ್ಮ ಅಣಕವಾಡಿನಲ್ಲೂ
‘ಮಹಾ ರಜ ಕಾಲೇಜೂ’ ನರಳಾಡುತ್ತಿತ್ತು!
ಆದರೆ ಅನುಭವ ಮಾಗಿದಂತೆ, ಯಾವುದೇ ಸಂಸ್ಥೆಯ ಮಹತ್ತು ಕಟ್ಟಡ, ಸವಲತ್ತು, ಹೆಚ್ಚೇಕೆ ಇತಿಹಾಸದಿಂದಲೂ
ವರ್ಧಿಸುವುದಿಲ್ಲ. ಅಂದಂದಿನ ಉಪಯುಕ್ತತೆ, ಅದಕ್ಕೊದಗುವ ವ್ಯಕ್ತಿ ಮತ್ತು ಚಟುವಟಿಕೆಗಳಲ್ಲಿ ಮಾತ್ರ
ಇದೆ ಎಂದು ಸ್ಪಷ್ಟವಾಗುತ್ತ ಹೋಯಿತು. ಹಾಗಾಗಿ ಕಳೆದ ಸುಮಾರು ನಾಲ್ಕು ದಶಕಗಳ ಕಾಲ ನನ್ನ ಕೌಟುಂಬಿಕ
ಅಗತ್ಯಗಳಿಗಾಗಿ ನಾನು ಎಷ್ಟೂ ಮೈಸೂರು ಕಂಡಿರಬಹುದಾದರೂ ಕಾಲೇಜಿನ ಪೌಳಿಯ ಹೊರಗಿನ ದಾರಿಗಳಲ್ಲಿ ಎಷ್ಟೂ
ಓಡಾಡಿರಬಹುದಾದರೂ ಒಳಗೆ ನುಗ್ಗಿ ನೋಡುವ ಬಯಕೆ ಬಂದದ್ದೇ ಇಲ್ಲ. ವೃತ್ತಿರಂಗದಿಂದ ನಿವೃತ್ತಿಯೊಡನೆ
ಮೊನ್ನೆ ಮೈಸೂರಿನಲ್ಲಿದ್ದಾಗ, ತುಸು ಬಿಡುವೂ ಸಿಕ್ಕಾಗ, ‘ಪೂರ್ವಾಶ್ರಮ’ದ ಕ್ಷೇತ್ರವನ್ನು ಸುಮ್ಮನೆ ‘ವಾಕಿಂಗಿನ’ ಅಂಗವಾಗಿ ಸುತ್ತು ಹಾಕಿದೆ.