Showing posts with label ಜಲಪಾತಗಳು. Show all posts
Showing posts with label ಜಲಪಾತಗಳು. Show all posts

01 May 2020

ಬಲ್ಲಾಳರಾಯನ ದುರ್ಗ - ಬೆಂಬಿಡದ ಭೂತ!

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೬) 

ಎರಡು ದಿನಗಳ ರಜೆ ಬರುವುದನ್ನು ಮುಂದಾಗಿ ಗುರುತಿಸಿ, ಹಳೇ ಚಾಳಿಯವರನ್ನು ಲೆಕ್ಕಕ್ಕೆ ಹಿಡಿದು ಊರು ತಪ್ಪಿಸಿಕೊಳ್ಳುವ ಕಲಾಪ ಹೊಸೆಯುವುದು ನನಗೆ ರೂಢಿಸಿಬಿಟ್ಟಿತ್ತು. ಅಷ್ಟಕ್ಕೆ ಸುಮ್ಮನಾಗದೆ ಅಂಗಡಿಗೆ ಬಂದ ಯಾರೂ ಸ್ವಲ್ಪವೇ ವನ್ಯ ಒಲವನ್ನು ಕಾಣಿಸಿದರೂ ನಮ್ಮ ಕಲಾಪಕ್ಕೆ ಸೆಳೆದುಕೊಳ್ಳಲೂ ಪ್ರಯತ್ನಿಸುತ್ತಿದ್ದೆ. ಹೀಗೆ ಪ್ರಜಾವಾಣಿ ವರದಿಗಾರರಾಗಿ ಮಂಗಳೂರಿಗೆ ಬಂದಿದ್ದ, ಅಪ್ಪಟ ಬಯಲುಸೀಮೆಯ (ದಾವಣಗೆರೆ ಮೂಲ) ಜಿಪಿ ಬಸವರಾಜು, ಶಾಂತಾ ದಂಪತಿಯನ್ನು ‘ಕಡಮಕಲ್ಲು - ಗಾಳೀಬೀಡು’ ಅಸಾಧ್ಯ ದಾರಿಯಲ್ಲಿ ಕರೆದೊಯ್ದು ಸತಾಯಿಸಿಬಿಟ್ಟಿದ್ದೆ. (ನೋಡಿ: ತಲೆ ನೂರ್ಮಲೆ ಘಾಟಿಯಲ್ಲಿ) ಅವರಿಗೊಂದು ಚಂದದ ಬೈಕ್ ಸವಾರಿ ಮತ್ತು ಸ್ಮರಣೀಯ ಶಿಖರಾನುಭವ ಕೊಡಲೆಂಬಂತೆ ಬಲ್ಲಾಳರಾಯನ ದುರ್ಗವನ್ನು ಆರಿಸಿಕೊಂಡೆ. ಇಲ್ಲಿ ಮಂಗಳೂರ ಉರಿ ಸೆಕೆಯಿಂದ ಬಿಡುಗಡೆ ಮತ್ತು ಘಟ್ಟದ ತಂಪು ಮೈಗೆ ಹತ್ತುವಂತೆ ಒಂದೂವರೆ ದಿನದ ಯೋಜನೆ ಹಾಕಿದ್ದೆ. 

29 April 2020

ಹೋಗಿ ಬಲ್ಲಾಳರಾಯ ದುರ್ಗಕ್ಕೆ

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೫) 

ಲೇಖಕ: ಎ.ಪಿ. ಚಂದ್ರಶೇಖರ 

(ಚಿತ್ರಗಳು: ಕೀರ್ತಿ, ಮಂಗಳೂರು) 

[ಪಶ್ಚಿಮ ಘಟ್ಟದಲ್ಲಿ ನನ್ನ ಮೊದಲ ಹೆಜ್ಜೆ ಮೂಡಿಸುವ ದಿನ. ಮೈಸೂರಿನಿಂದ ಅದಕ್ಕೆಂದೇ ಬಂದ ಗೆಳೆಯ ವಿಶ್ವನಾಥ್ ಜತೆಗೆ ದಿಢೀರ್ ಸೇರ್ಪಡೆಯಾದವ, ಅಧಿಕೃತ ಪರ್ವತಾರೋಹಣಕ್ಕೇ ಅದೇ ಮೊದಲು ಪ್ರವೇಶ ಪಡೆದವ, ಸೋದರ ಮಾವನ ಮಗ ಎ.ಪಿ. ಚಂದ್ರಶೇಖರ. ಸಣ್ಣಾಳು, ಇನ್ನೂ ಚಡ್ಡಿ ಪ್ರಾಯ (೮/೯ನೇ ತರಗತಿ). ಆದರೆ ಔಪಚಾರಿಕ ವಿದ್ಯೆಯೊಡನೆ ಹಳ್ಳಿಯ ವಿದ್ಯೆಯಲ್ಲಿ ಅಪ್ಪನ ಗರಡಿಯಲ್ಲಿ (ನೋಡಿ: ಅಸಮ ಸಾಹಸಿ ಮರಿಕೆ ಅಣ್ಣ) ಪಳಗಿದವ ಎನ್ನುವುದೇ ಆತನ ಅರ್ಹತೆ. ಚಿಕ್ಕಪ್ಪ ಗೌರೀಶಂಕರರ ಪ್ಯಾಂಟ್ ಹಾಕಿ, ಬಡಕಲು ಹೊಟ್ಟೆಗೆ ಬೆಲ್ಟ್
ಕಾಯಿಸಿ, ನೇತುಬೀಳುವ ಪ್ಯಾಂಟ್ ಕಾಲುಗಳನ್ನು ಗೋಣಿ ಹಗ್ಗದಲ್ಲಿ ಎತ್ತಿ ಕಟ್ಟಿ, ಇನ್ಯಾರದೋ ಕ್ಯಾನ್ವಾಸ್ ಶೂಗೆ ಮೂರು ಉಣ್ಣೆ ಕಾಲ್ಚೀಲದಲ್ಲಿ ಬಿಗಿ ಕೊಟ್ಟು ಯಶಸ್ವಿಯಾಗಿ ನಡೆದಿದ್ದ. (ನೋಡಿ: ಗಡಿಬಿಡಿಯಲ್ಲಿ ಕುಮಾರಮುಡಿಗೆ) ಮುಂದೊಮ್ಮೆ ಹೀಗೇ ಮಳೆಗಾಲದ ಬಿರುಸಿನಲ್ಲಿ ನಾವು ಮೊದಲ ಬಾರಿಗೆ ಕೂಡ್ಲುತೀರ್ಥ ನೋಡಲು ಹೋಗುವಾಗಲೂ ಚಂದ್ರ ಜತೆಗಿದ್ದ. ಅಷ್ಟೇ ಅಲ್ಲ ಬೆಳೆದಿದ್ದ. ಕೂಡ್ಲುತೋಟದಲ್ಲಿ ನಾವು ಕಂಡ ಪೂರ್ಣ ಬಳ್ಳಿಯದೇ ಸೇತುವೆ ಕುರಿತು ‘ಅಟ್ಟೆ ಬೂರುದ ಕಟ್ಟೆ’ ಎಂದು ಉದಯವಾಣಿಗೆ ಒಂದು ಲೇಖನವನ್ನೂ ಬರೆಯುವಷ್ಟು ಪ್ರೌಢನಾಗಿದ್ದ. ಇಂಥವೇ ಉಮೇದುಗಳೊಡನೆ ಚಂದ್ರ ನಮ್ಮೊಡನೆ ಬಲ್ಲಾಳರಾಯನ ದುರ್ಗವನ್ನೂ ಅನುಭವಿಸಿದ, ವಯಸ್ಕರ ಶಿಕ್ಷಣ ಮಾಲೆಯವರ ಮಾಸಿಕ - ಪುಸ್ತಕ ಪ್ರಪಂಚದಲ್ಲಿ ಪ್ರಕಟವಾಗುವಂತೆ (ಆಗಸ್ಟ್ ೧೯೮೩) ಸಾಹಸಯಾನದ ಲೇಖನವನ್ನೂ ಬರೆದಿದ್ದ. ಅದರ ಪೂರ್ಣ ಪಾಠ ಈಗ ನಿಮ್ಮ ಮುಂದೆ. 

25 April 2020

೫೦೦೦ ಅಡಿ ಎತ್ತರದ ಬಲ್ಲಾಳರಾಯನ ದುರ್ಗಕ್ಕೆ ಆರೋಹಣ


(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೪) 

ಲೇಖಕ - ತಿಲಕನಾಥ ಮಂಜೇಶ್ವರ 


[ಮಂಗಳೂರಿನಲ್ಲಿ ಕನ್ನಡದ ಕಹಳೆಯನ್ನು ಸಾರ್ವಜನಿಕಕ್ಕೆ ಊದಿದವರು ಮಂಗಳಗಂಗೋತ್ರಿಯ ಸ್ಥಾಪಕಾಚಾರ್ಯ, ಸಾಹಿತಿ ಎಸ್.ವಿ. ಪರಮೇಶ್ವರ ಭಟ್. ಅವರ ಬಹುಮುಖೀ ಸಾಧನೆಯ ಒಂದು ಎಳೆ - ಮನೆಮನೆಗೆ ಸರಸ್ವತಿಯನ್ನು ಗಟ್ಟಿಯಾಗಿ ಹಿಡಿದು ನಡೆಸುವುದರಲ್ಲಿ ಮುಂಚೂಣಿಯ ಪಟು ಭಟನಾಗಿ ನನ್ನ ಪರಿಚಯಕ್ಕೆ ಸಿಕ್ಕವರು ತಿಲಕನಾಥ ಮಂಜೇಶ್ವರ. ತನ್ನ ಕಾಳಜಿ ಎಲ್ಲಿ ವ್ಯಕ್ತಿಪ್ರತಿಷ್ಠೆಯ ಸಂಕೇತವಾಗಿ ಕಾಣುತ್ತದೋ ಎಂಬಂತೆ ತಿಲಕನಾಥ್ ಕಟ್ಟಿ ಬೆಳೆಸಿದ ಸಂಸ್ಥೆ ಭಾವ ಗಂಗೋತ್ರಿ. ಇದು ಮಂಗಳೂರು ವಲಯದ ಸಾಹಿತ್ಯಿಕ ಚಟುವಟಿಕೆಗಳನ್ನು ತಿಲಕನಾಥರ ಹೆಸರೇ ಹೇಳುವಂತೆ, ಅವರ ಅಭಿಮಾನದ ನೆಲೆ ಮಂಜೇಶ್ವರದವರೆಗೂ ವ್ಯಾಪಿಸುವಂತೆ ಮಾಡಿತ್ತು. ಮಂಜೇಶ್ವರದ ಧೀಶಕ್ತಿಯ ಸಂಕೇತವಾದ ಗೋವಿಂದ ಪೈಗಳ ಹೆಸರಿನಲ್ಲಿ ಗ್ರಂಥಾಲಯವನ್ನು ಕಟ್ಟುವ ಮೂಲಕ ಇಂದಿನ ಕಾಲೇಜು ಮತ್ತೊಂದಕ್ಕೆ ಮೂಲ ಪ್ರೇರಣೆಯನ್ನು ಕೊಟ್ಟವರು ತಿಲಕನಾಥ್. ಇವರ ಸಾಹಿತ್ಯಪ್ರೇಮ ಸಿನಿಮಾಕ್ಕೂ ವ್ಯಾಪಿಸಿದಾಗ ಮಂಗಳ ಫಿಲಂ ಸೊಸಾಯಿಟಿಯನ್ನೂ ಮಂಗಳೂರು ಕಂಡಿತ್ತು. ತಿಲಕನಾಥ್ ಉದ್ದಕ್ಕೂ ತಾನು ಕನ್ನಡದ ಸೇವಕ ಹೌದು, ಜಿಗಣೆಯಲ್ಲ ಎಂಬುದನ್ನು ತಮ್ಮ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ತೋರಿಕೊಟ್ಟರು. ಅವೆಲ್ಲವೂ ಅನುದಾನ ಶೋಷಕಗಳಾಗಿ ಪ್ರಸಿದ್ಧವಾಗಲಿಲ್ಲ, ಭಾವಪೋಷಕವಾಗಿಯೇ ವಿಕಸಿಸಿದ್ದವು. ಈ ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆ ಬರಬೇಕಿದ್ದರೆ ಸ್ವಂತ ಬದುಕಿಗೊಂದು ಗಟ್ಟಿ ವೃತ್ತಿಯ ನೆಲೆ ತಿಲಕನಾಥರಿಗೆ ಅವಶ್ಯವಿತ್ತು. ಹಾಗೆ ವೃತ್ತಿ ಭದ್ರತೆಯೊಡನೆ ಸಾಹಿತ್ಯಪ್ರೇಮಕ್ಕೆ ಇಂಬು ಎಂಬಂತೆ ಇವರು ತರಂಗ ವಾರಪತ್ರಿಕೆಯ ಸಂಪಾದಕೀಯ ಬಳಗಕ್ಕೇ ಸೇರಿಕೊಂಡರು. ಕುಟುಂಬ ಮಾಲಕತ್ವದ ಸಂಸ್ಥೆಯಲ್ಲಿ ಹೊರಗಿನವರಾಗಿ ತಲಪಬಹುದಾದ ಗರಿಷ್ಠ ಎತ್ತರ, ಗೌರವವನ್ನು ಕಂಡ ತಿಲಕನಾಥರು ಇಂದು ನಿವೃತ್ತ ಜೀವನವನ್ನು ಉಡುಪಿ ವಲಯದಲ್ಲೇ ಚೆನ್ನಾಗಿಯೇ ನಡೆಸಿದ್ದಾರೆ. ಅವರು ಆರೋಹಣದ ಬಲ್ಲಾಳರಾಯನ ದುರ್ಗದ ಸಾಹಸ ಯಾತ್ರೆಯಲ್ಲಿ ಭಾಗವಹಿಸಿದ್ದಲ್ಲದೆ, ಅಷ್ಟೇ ಉತ್ಸಾಹದಲ್ಲಿ ಅನುಭವ ಕಥನವನ್ನೂ ತಮ್ಮ ‘ತರಂಗ’ದ ೬-೩-೧೯೮೩ರ ಸಂಚಿಕೆಯಲ್ಲಿ ಪ್ರಕಟಿಸಿದ್ದರು. ಅದನ್ನು ಬಲ್ಲಾಳರಾಯನ ದುರ್ಗದ ಮಾಲಿಕೆಯ ಎರಡನೆಯ ಕಂತಾಗಿ ಬಳಸಿಕೊಳ್ಳಲು ನಾನು ಸಂತೋಷಿಸುತ್ತೇನೆ - ಅಶೋಕವರ್ಧನ] 

23 April 2020

ಬಂಡಾಜೆ ಅಬ್ಬಿಯ ತಲೆಯಲ್ಲೊಂದು ರಾತ್ರಿ

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೩) 

[೧೯೮೦ರ ಪರ್ವತಾರೋಹಣ ಸಪ್ತಾಹದ ಕೊನೆಯ ಕಲಾಪ - ನೀವೇ ಅನುಭವಿಸಿ - ರಾತ್ರಿ ಚಾರಣ ಮತ್ತು ಏರಿಕಲ್ಲು ಏರೋಣ, ಇವುಗಳ ಕೊನೆಯಲ್ಲಿ ಕೇಳಿದ ಸೊಲ್ಲು - ಮತ್ತೆಂದು, ಇಂಥ ಇನ್ನೊಂದು? ಅದಕ್ಕೆ ಸ್ಪಷ್ಟ ಉತ್ತರ ರೂಪದಲ್ಲಿ ನಡೆದ ಒಂದೇ ಸಾಹಸಯಾತ್ರೆಗೆ ಮೂರು ಭಿನ್ನ ಕಥನ ರೂಪ ಬಂದಿತ್ತು. ಅದರಲ್ಲಿ ಮೊದಲನೆಯದು ‘ಸುಧಾ’ ವಾರಪತ್ರಿಕೆ ೬-೩-೮೩ರ ಸಂಚಿಕೆಯಲ್ಲಿ ಪ್ರಕಟಿಸಿದ ನನ್ನದೇ ಕಥನವಿದು. ಇದರಲ್ಲಿ ಬಳಸಿದ ಚಿತ್ರಗಳು ಯಜ್ಞ ಹಾಗೂ ಕೀರ್ತಿಯವರವು] 

ಬಲ್ಲಾಳ ರಾಯನ ದುರ್ಗದ ನನ್ನ ಮೊದಲ ಕಥನದಲ್ಲಿ (ನೋಡಿ: ಬ.ಬ.ರಾ. ದುರ್ಗ - ೧) ಪರಿಚಯಿಸಿದ ಕಿಲ್ಲೂರಿನ ಕೂಡಬೆಟ್ಟು ಮನೆಯ ಇನ್ನೊಂದು ಗುರುತು ಪಟೇಲರ ಮನೆ. ಆದರೆ ಅದಕ್ಕೂ ಮೂಲದಲ್ಲಿದ್ದವರು ಪಟೇಲ ವೆಂಕಟ ಸುಬ್ಬರಾಯರ ಮಗ

04 September 2019

ದಿಡುಪೆ ದುರಂತದ ಪ್ರತ್ಯಕ್ಷದರ್ಶನ

ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ - ಮುಕ್ಕಾಲು ಗಂಟೆಯಷ್ಟೇ ಬಂತು - ಮೇಘಸ್ಫೋಟದಂಥ ಮಳೆ. ಚಾರ್ಮಾಡಿಯಿಂದ ದಿಡುಪೆಯವರೆಗಿನ ವಲಯಕ್ಕಷ್ಟೇ ಮಿತಿಗೊಂಡ ಬಾನಬೋಗುಣಿ ಕವುಚಿದಂತಹ ಈ ನೀರು ನಡೆಸಿದ ಉತ್ಪಾತಗಳು ಸಾಮಾನ್ಯ ಲೆಕ್ಕಕ್ಕೆ ಸಿಗುವಂತದ್ದಲ್ಲ. ಅದರ ಸಣ್ಣ ನೋಟವಾದರೂ ನಮಗೊಂದು ಪಾಠವೆಂದುಕೊಂಡೇ ನಾವು ನಾಲ್ವರು ಮೊನ್ನೆ (೨೫-೮-೧೯) ಕಾರೇರಿ ಹೋಗಿದ್ದೆವು.
ಮಂಗಳೂರು - ಬೆಳ್ತಂಗಡಿ ಮಾಡಿ, ಎಡದ ಬಂಗಾಡಿ - ಕಿಲ್ಲೂರು ದಾರಿಗಳಲ್ಲಾಗಿ ಮೊದಲು ನಿಂತ ಸ್ಥಳ ಕಾಜೂರು. 

27 November 2018

ಬಂಡಾಜೆ ಅಬ್ಬಿಯಲ್ಲಿ ಗಂಗಾಧರರು!

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೨)


ದುರ್ಗಕ್ಕೆ ನಾವು ಹತ್ತಿದ ಸಾಹಸವನ್ನು ರೋಮಾಂಚಕ ಕಥನ ಮಾಡಿ, ಅದೇ ಡಿಸೆಂಬರಿನಲ್ಲಿ ನಡೆದ ಪರ್ವತಾರೋಹಣ ಸಪ್ತಾಹದಲ್ಲಿ ಗೆಳೆಯ ಸಮೀರರಾವ್ ಪ್ರಸರಿಸಿದ್ದಾಯ್ತು. ನನಗೆ ಮಾತ್ರ ಬಂಡಾಜೆ ಅಬ್ಬಿ ನೋಡಲಿಲ್ಲ ಎನ್ನುವ ಕೊರಗು ಕಾಡುತ್ತಲೇ ಇತ್ತು. ಮುಂದೊಂದು ದಿನ ಅದಕ್ಕೂ ದಾರಿಯನ್ನು ಹೇಳಿದವರು ‘ಮೈದಾನ ಶಿಖರ’ದ ಕತೆ ಹೇಳಿದ ಬಂದಾರು ಶ್ರೀಪತಿರಾಯರೇ! "ಉಜಿರೆ ಕಳೆದ ಮೇಲೆ ಸಿಗುವ ಎಡಗವಲು, ಕಡಿರುದ್ಯಾವರ - ಕಿಲ್ಲೂರು ದಾರಿ ಅನುಸರಿಸಿ. ಮೂರು ನಾಲ್ಕು ಕಿಮೀಯೊಳಗೇ ಬಲಗವಲಿನಲ್ಲಿ ಸಿಗುವ ವಳಂಬ್ರದ ಎಳ್ಯಣ್ಣ ಗೌಡರನ್ನು ಹಿಡಿಯಿರಿ." ನೆನಪಿರಲಿ, ಅದು ಚರವಾಣಿಯ ಕಾಲವಲ್ಲ. ವಳಂಬ್ರ ಮನೆಗೆ ಸ್ಥಿರವಾಣಿಯೇನೋ ಇದ್ದಿರಬೇಕು. ಆದರೆ ಟ್ರಂಕ್ ಕಾಲ್ ಹಾಕಿ ಗಂಟೆಗಟ್ಟಳೆ ಕಾದರೂ ಸಂಪರ್ಕ ಸಾಧ್ಯವಾಗದ ಕಗ್ಗಾಡಮೂಲೆ; ಬಲ್ಲಾಳರಾಯನ ದುರ್ಗದ ನೇರ ತಪ್ಪಲು, ಬಂಡಾಜೆ ಅಬ್ಬಿಯ ಕಣಿವೆ.

25 October 2013

ಮಂತ್ರಸ್ನಾನ? ವನವಾಸ!

(ಕೊಡಚಾದ್ರಿಯ ಸುತ್ತ ಮುತ್ತ ನಾಲ್ಕನೆಯ ತುಣುಕು)
(ಚಕ್ರವರ್ತಿಗಳು ಸುತ್ತು ಹದಿಮೂರು)
[೧೯೯೦ರಲ್ಲಿ ಪುಸ್ತಕ ರೂಪದಲ್ಲಿಪ್ರಕಟವಾಗಿದ್ದ ನನ್ನ ಪುಸ್ತಕ - ಚಕ್ರವರ್ತಿಗಳನ್ನು ವಿಸ್ತರಿಸಿ ಪರಿಷ್ಕರಿಸುತ್ತ ೩೧-೮-೨೦೧೨ರಿಂದ ಈ ಜಾಲತಾಣದಲ್ಲಿ ಧಾರಾವಾಹಿಯಾಗಿಸುತ್ತಿರುವುದು ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ. ಈಗಲೂ ಸರಣಿಯಲ್ಲೇ ಓದುವಾಸಕ್ತರು ಇಲ್ಲೇ ಎಡ ಮಗ್ಗುಲಲ್ಲಿರುವ ಚಕ್ರವರ್ತಿಗಳು’ ವಿಭಾಗವನ್ನು ಆಯ್ದುಕೊಂಡು ಕ್ರಮವಾಗಿ ಹನ್ನೆರಡೂ ಸುತ್ತುಗಳನ್ನು ಮುಗಿಸಿ ಇಲ್ಲಿಗೆ ಬರಲೂಬಹುದು.]

ಅಂಗಳದಾಚೆ ಹಸುರು ಗದ್ದೆ, ಗದ್ದೆಗೆ ಅಂಚುಕಟ್ಟಿದಂತೆ ಪಶ್ಚಿಮ ಘಟ್ಟ ಮಾಲೆಯ ನೇರ ಮೈ; ಬಿಳಿ+ಕಲ್ಲ+ಬರೆ> ಬೆಳ್ಕಲ್ಬರೆ. ಅಲ್ಲೆಲ್ಲೋ ಹುದುಗಿದೆ ಜಲಪಾತ - ಬೆಳ್ಕಲ್ ತೀರ್ಥ, ನಮ್ಮ ಗುರಿ. ಗದ್ದೆಯ ಏರಿಯಲ್ಲಿ ಅಲ್ಲಲ್ಲಿ ಲಾವಂಚದ ಬೇರಿನಿಂದ ಎಣ್ಣೆ ತೆಗೆಯುವ ಭಟ್ಟಿಗಳು ಸುವಾಸನೆ ಬೀರುತ್ತಿದ್ದುವು. ಅರ್ಥಮಾಡಿಕೊಳ್ಳಬಲ್ಲವರಿಗೆ, ಎಲ್ಲೆಲ್ಲಿನದೋ ಶೋಕಿಗೆ ಇಲ್ಲಿ ಪ್ರಕೃತಿ ತೆರುವ ದಂಡದ ಬಗ್ಗೆದುರ್ನಾತ ಸಾರುತ್ತಲೂ ಇದ್ದುವು. ಸಣ್ಣ ಒಂದೆರಡು ತೊರೆದಾಟಿ ಕುರುಚಲು ಪೊದರುಗಳ ನಡುವೆ ತುಸು ಏರಿದೆವು. ಜಾಡು ಬೇರುಕಾಲುಗಳನ್ನು  ಕಿಸಿದು ನಿಂತ ಕಿರು ಮರಗಳ ನಡುವೆ ಹಾಯ್ದು, ಝರಿ - ಬೆಳ್ಕಲ್ ತೀರ್ಥದ ಪಾತ್ರೆ ಸೇರಿಸಿತು. ಮತ್ತೆ ನಾಲ್ಕೇ ಹೆಜ್ಜೆಯಲ್ಲಿ ಬೆಳ್ಕಲ್ ತೀರ್ಥದ ಅಬ್ಬಿಮುಖ - ಸುಮಾರು ಇಪ್ಪತ್ತೆರಡು ಮೀಟರ್ (ಅರವತ್ತೆಪ್ಪತ್ತು ಅಡಿ) ಎತ್ತರದ ಬಂಡೆಗೋಡೆ, ಬೆಟ್ಟದ ತೆರೆದೆದೆಗೇ ಮುಗಿಸಿತು.

27 September 2013

ಬೆಳ್ಳಿಧಾರೆಯಗುಂಟ ಇಳಿಯುವ ನಂಟೇ?

(ಕೊಡಚಾದ್ರಿಯ ಸುತ್ತ ಮುತ್ತ ಮೂರನೆಯ ತುಣುಕು - ಚಕ್ರವರ್ತಿಗಳು ಸುತ್ತು ಹನ್ನೆರಡು)
[೧೯೯೦ರಲ್ಲಿ ಪುಸ್ತಕ ರೂಪದಲ್ಲಿಪ್ರಕಟವಾಗಿದ್ದ ನನ್ನ ಪುಸ್ತಕ - ಚಕ್ರವರ್ತಿಗಳನ್ನು ವಿಸ್ತರಿಸಿ ಪರಿಷ್ಕರಿಸುತ್ತ ೩೧-೮-೨೦೧೨ರಿಂದ ಈ ಜಾಲತಾಣದಲ್ಲಿ ಧಾರಾವಾಹಿಯಾಗಿಸುತ್ತಿರುವುದು ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ. ಈಗಲೂ ಸರಣಿಯಲ್ಲೇ ಓದುವಾಸಕ್ತರು ಇಲ್ಲೇ ಎಡ ಮಗ್ಗುಲಲ್ಲಿರುವ ಚಕ್ರವರ್ತಿಗಳುವಿಭಾಗವನ್ನು ಆಯ್ದುಕೊಂಡು ಕ್ರಮವಾಗಿ ಹನ್ನೊಂದೂ ಸುತ್ತುಗಳನ್ನು ಮುಗಿಸಿ ಇಲ್ಲಿಗೆ ಬರಲೂಬಹುದು. ವಿಸೂ: ಲೇಖನಕ್ಕೆ ಸಂಬಂಧಿಸಿದಂತೆ ನನ್ನ ಹಳಗಾಲದ ಚಿತ್ರಗಳ ತೀವ್ರ ಕೊರತೆಗೆ ವಿಷಾದಿಸುತ್ತೇನೆ.]

“ಕೊಡಚಾದ್ರಿ - ಚಿತ್ರಮೂಲದ ತಪ್ಪಲೆಂದರೆ ಬೆಳಕಲ್ ತೀರ್ಥದ ತಳ. ಭಾರೀ ಚಂದ ಇತ್ ಕಾಣಿ” ಎಂದಿರಬೇಕು ಗೆಳೆಯ ಶಶಿಧರ ಹಾಲಾಡಿ (೧೯೮೦ರ ಆಸುಪಾಸಿನಲ್ಲಿ ಈತ ಕುಂದಾಪುರ  ಭಂಡಾರ್ಕಸ್ ಕಾಲೇಜಿನ ವಿದ್ಯಾರ್ಥಿ, ಹಾಗಾಗಿ ಪರ್ವತಾರೋಹಣದಲ್ಲಿ ಪರೋಕ್ಷವಾಗಿ ನನ್ನ ಶಿಷ್ಯ. ಸದ್ಯ ಮೈಸೂರು ಬ್ಯಾಂಕಿನ ಹಿರಿಯ ಮಣೆಗಾರರಲ್ಲೊಬ್ಬ!). ಹವನಗಳೆಲ್ಲ ವಿಶಿಷ್ಟ ಅಡುಗೆಗಳಿಗೆ ನೆಪ ಎಂದೆಲ್ಲೋ ಕೇಳಿದ್ದೆ. ಹಾಗೇ ನಾನು ಕಂಡಂತೆ ಪ್ರಾಕೃತಿಕ ತೀರ್ಥಗಳೆಲ್ಲಾ ಅದ್ಭುತ ಸ್ನಾನಕ್ಕೇ ಮೀಸಲು (ಸಾಬೂನು ಮುಂತಾದ ಮಾರ್ಜಕಗಳನ್ನು ಇಂಥಲ್ಲಿ ಬಳಸಲೇ ಬಾರದು). ಕೊಡಚಾದ್ರಿಯಿಂದ ಮರಳಿದಾಗ ಉಳಿದ ಕೊರಗಿಗೆ ಈಗ ಮೆರುಗು ಬಂದಿತ್ತು. ಶಶಿಧರ ಒದಗಿಸಿದ ಸೂಚನೆಗಳಂತೆ ಕೊಲ್ಲೂರಿಗೆ ಕುಂದಾಪುರ, ವಂಡ್ಸೆ ದಾರಿಯಲ್ಲಿ ಹೋಗುವಾಗ ಸಿಗುವ ಜಡ್ಕಲ್ ಎಂಬಲ್ಲಿಂದ ಸುಮಾರು ಹತ್ತು ಕಿಮೀ ದೂರದ ಮಟ್ಟಸ ದಾರಿಯ ಕೊನೆ ಬೆಳ್ಕಲ್ ತೀರ್ಥ.  ಅದರಲ್ಲೂ ನಡುವೆ ಸಿಗುವ “ನಮ್ಮ ಮೂದೂರಿಗೆ ಬಸ್ ಸಾರಿಗೆಯೂ ಇದೆ” ಎಂದೂ ಶಶಿಧರ ಸೇರಿಸಿದ್ದರು. ‘ಬೆಳ್‌ಕಲ್ ತೀರ್ಥದ ಸ್ನಾನ’ಕ್ಕೆ ನಾನು ಅವಸರದ ಕರೆ ಕೊಟ್ಟೆ.

25 January 2013

ಬರ್ಕಣದಿಂದ ಹೊತ್ತು ತಂದ ಡೆಡ್ ಬಾಡಿ!


ಬರ್ಕಣ ತಳಶೋಧ ಈ ಬಾರಿ ಶತಸ್ಸಿದ್ಧ ಎಂದು ಎಂಟು ಬೈಕೇರಿದ ನಮ್ಮ ಹದಿನೈದು ಸದಸ್ಯರ ತಂಡ ಆಗುಂಬೆಯ ತಪ್ಪಲಿನಲ್ಲಿರುವ ಸೋಮೇಶ್ವರ ಕಾಡು ನುಗ್ಗಿತು. ಕುಗ್ರಾಮ ಮೂಲೆಯ ತಣ್ಣೀರಬೈಲು (ಸುಮಾರು ನಾಲ್ಕೂವರೆ ಕಿಮೀ) ಎಂಬ ಕೊನೆಯ ಒಕ್ಕಲು ಮನೆಯವರೆಗೆ ಹಳ್ಳಿಯ ಸಾಮಾನ್ಯ ಮಣ್ಣುದಾರಿಯಿತ್ತು. ಅನಂತರ ಸುಮಾರು ಒಂದೂವರೆ ಕಿಮೀಯಷ್ಟು ಕೂಪು ದಾರಿಯಲ್ಲಿ ಬೈಕು ಓಡಿದ್ದಲ್ಲ. ನಾವು ಸಾಗಿಸಿದ್ದು! ಕವಿದುಕೊಂಡ ಪೊದರು, ಅಡ್ಡಬಿದ್ದ ಮರ, ಕೊರಕಲಾದ ಜಾಡು, ರಭಸದ ತೊರೆ, ಹೂಳುವ ಗೊಸರು ಸುಧಾರಿಸಿ ಸಾಕಾಗಿ ಪೂರ್ಣ ನಡಿಗೆಗೇ ಶರಣಾದೆವು. ಗುಡ್ಡದ ಓರೆಯಲ್ಲಿ ತೊರೆಯೊಂದಕ್ಕೆ ಸಮಸಮವಾಗಿ ಹಗುರವಾಗಿ ಏರಿ ನಡೆದೆವು. ಜರಿದದ್ದನ್ನು ಸರಿಸದೆ, ಮುಚ್ಚಿ ಬೆಳೆದ ಮರ ಪೊದರನ್ನು ಸವರದೆ ನಡೆದಂತೆ, ಜಾಡಿನ ಬಗ್ಗೆ ಸಂಶಯ ಪೀಡಿಸತೊಡಗಿತು. ಗೊಂದಲ ನಿವಾರಿಸಲು ಹೊಳೆ ಪಾತ್ರೆಗೆ ಇಳಿದೆವು.

18 January 2013

ಬರ್ಕತ್ತಿಲ್ಲದ ಹುಡುಕಾಟದಲ್ಲಿ ಅಬ್ಬಿಗಳು


ದುರ್ಗಮ ಕಾಡುಕೊಳ್ಳದಲ್ಲಿ ಎದ್ದುಬಿದ್ದು ಬಂದ ಶ್ರಮಕ್ಕೆ ಮೈಯನ್ನು ಗಾಳಿಗೊಡ್ಡಿಕೊಳ್ಳುತ್ತಾ ಉಶ್ ಎಂದು ಬಂಡೆಯಂಚಿನಿಂದ ಕೂಡ್ಲು ಝರಿ ಹಾರಿಕೊಳ್ಳುತ್ತಲೇ ಇತ್ತು. ಗಾಳಿಯ ಲಹರಿಯಲ್ಲಿ ಬಳುಕಿ, ಅತ್ತಿತ್ತ ತೆಳು ಪರದೆಯನ್ನೇ ಬಿಡಿಸಿ, ಅಲ್ಲಿಲ್ಲಿ ನೀರಹುಡಿಯಲ್ಲಿ ಕಾಮನಬಿಲ್ಲು ಮೂಡಿಸಿ, ದರೆಯ ಗೋಡೆಗಂಟಿದ ಅಷ್ಟೂ ತನ್ನ ಖಾಸಾ ಹಸಿರಿನ ವೈವಿಧ್ಯದ ಮೈದಡವಿ, ಸೀತಾಳೆಹೂಗಳಲ್ಲಿ ಮುತ್ತಿನ ಹನಿಯಿಟ್ಟು, ಮಡುವಿನ ಮೇಲೆ ಸೂರ್ಯ ಕೋಲೂರಿದಲ್ಲೆಲ್ಲಾ ಬೆಳಕಿನ ಬೀಜಗಳನ್ನು ಬಿತ್ತುತ್ತಿತ್ತು. ಕೆಲವೊಮ್ಮೆ ಗಾಳಿಯ ಆತುರಕ್ಕೆ ಪ್ರಪಾತದಂಚಿನಲ್ಲೇ ಕ್ಷಣಕಾಲ ನೀರೆ ಹಿಂಜರಿದು, ಹೆಚ್ಚಿನ ರಭಸದಲ್ಲಿ ಧುಮುಕುತ್ತಿದ್ದಳು! ಅನುಮಾನ ಧಾವಂತಗಳ ಈ ಅಲೆ ಮಾತ್ರ ಮಡುವನ್ನು ಕಲ್ಲೋಲಗೊಳಿಸುತ್ತ ಅಬ್ಬರಿಸುತ್ತಿತ್ತು. ಸುಮಾರು ಮೂವತ್ತಡಿ ವ್ಯಾಸದ ಕನ್ನಡಿಕೊಳ, ಸುತ್ತ ಮತ್ತಷ್ಟು (ಸುಮಾರು ನೂರಡಿ ವ್ಯಾಸ) ಅಂತರದಲ್ಲಿ ಪ್ರಕೃತಿಯೇ ಕಟ್ಟಿಕೊಟ್ಟ ಮನೋಹರ ಆವರಣ ಯಾರನ್ನೂ ನೀರಾಟಕ್ಕಿಳಿಯಲು ಆಹ್ವಾನಿಸುತ್ತಿತ್ತು. ನಮಗೋ ಕಲ್ಲೆದ್ದು ಕೊರಕಲುಬಿದ್ದ ದಾರಿ ಎಂಬ ಅವಶೇಷದಲ್ಲಿ ಸುಮಾರು ಎಂಟೊಂಬತ್ತು ಕಿಮೀ ಬೈಕಿನಲ್ಲಿ ಉರುಡಾಡಿದ ಶ್ರಮ ಒಂದು ಕಡೆ. ಅಲ್ಲಿ ಮೆತ್ತಿಕೊಂಡ ದೂಳು, ಹೊಗೆಯನ್ನು ಕೂಡ್ಲು ತೋಟದಲ್ಲಿ ಬೈಕ್ ಬಿಟ್ಟು, ಜಲಪಾತದೆಡೆಗಿನ ಓಟದಲ್ಲಿಳಿದ ಬೆವರಿನಲ್ಲಿ ಕಲಸಿದ್ದೆವು. (ಮಡಿಕೇರಿ ಬಾಲ್ಯದಲ್ಲಿ ಕೊಹಿನೂರು ಟೂರಿಂಗ್ ಟಾಕೀಸಿನಲ್ಲಿ ಸಿನಿಮಾಕ್ಕೆಂದು ನಡೆದು ಹೊರಟವರಿಗೆ ಮುಖ್ಯ ರಸ್ತೆ ಬಿಡುವ ಮೊದಲೇ “ನಮೋ ವೆಂಕಟೇಷಾ...” ಕೇಳಿದ ಅನುಭವವಾಗಿ, ಸಿನಿಮಾ ಮುಗಿದೇ ಹೋಯ್ತೋ ಎಂಬ ಕಾತುರ ಏರಿ, ಹಿರಿಯರೆಲ್ಲಾ ಎಷ್ಟು ನಿಧಾನಿಗಳೆಂದು ಕೋಪ ತಲೆಗಡರಿದ್ದೆಲ್ಲಾ ನೆನಪಾಗದೆ ಇಲ್ಲ!) ಅಬ್ಬಿಯ ಆವರಣದೊಳಗೆ ನುಗ್ಗುತ್ತ ಎಡಕ್ಕೆ ಸಾಕಷ್ಟು ವಿಸ್ತಾರಕ್ಕೆ ಉರುಟುರುಟು ಕಲ್ಲು, ಅಚ್ಚ ಬಿಳಿ ಮರಳಿನ ದಂಡೆ. ಮಡುವಿನ ಹೊರಹರಿವು ಬಲಪಾತ್ರೆಯಲ್ಲಿ ಕಲಕಲಿಸುತ್ತಿತ್ತು. ಮಳೆಗಾಲಕ್ಕೆ ಸೊಕ್ಕಿದ್ದನ್ನು ಉಳಿಗಾಲಗಳಲ್ಲಿ ನಾಚಿಕೊಂಡಂತೆ ಹತ್ತೆಂಟು ಜಾಡುಗಳಲ್ಲಿ ತೆಳುವಾಗಿ ಹರಿದಿತ್ತು.

11 January 2013

ಎದೆ ನಡುಗಿಸಿದ ಕೂಡ್ಲು ತೀರ್ಥ


ತಿಂಗಳೆ ಕಣಿವೆಯ ಜಲಪಾತಗಳು - ಭಾಗ ಎರಡು

[ತಿಂಗಳೆ ಕಣಿವೆಯ ಕೂಡ್ಲು ತೀರ್ಥದ ದರ್ಶನ ಮತ್ತು ಬರ್ಕಣ ಅಬ್ಬಿಯ ತಳಶೋಧದ ನೆಪದಲ್ಲಿ ನಮ್ಮ ಬಳಗ (ಆರೋಹಣ ಪರ್ವತಾರೋಹಿಗಳು ಸಾಹಸಿಗಳು) ಅಸಂಖ್ಯ ಚಾರಣಗಳನ್ನು ನಡೆಸಿತ್ತು. ಅವುಗಳಲ್ಲಿ ಸ್ವಾರಸ್ಯವಾದದ್ದನ್ನು ಮಾತ್ರ ಇಲ್ಲಿ ಹಿಡಿದಿಡುವ ಕಥನ ಮಾಲಿಕೆಗೆ ತಿಂಗಳ ಹಿಂದೆಯೇ ಕಳೆದ ಕಂತು - ಮಂಗಳೂರಿನ ಆದಿ ಉರಗೋದ್ಯಾನದಲ್ಲಿ ಪೀಠಿಕೆ ಬರೆದಿದ್ದೆ. ಕ್ಷಮಿಸಿ, ಆಗ ನಿಮ್ಮನ್ನು ಕಾರ್ಗಾಲದಬ್ಬರದ ಕೂಡ್ಲು ಹೊಳೆದಂಡೆಯ ಮೇಲೆ ಅನಾಥವಾಗಿ ಬಿಟ್ಟಿದ್ದೆ. ಕಗ್ಗಾಡ ಮೂಲೆಯ ತಿಂಗಳೆಗೆ ಸ್ವಂತ ವಾಹನಗಳಲ್ಲೇ ಬಂದಿದ್ದ ನಮಗೆ - ಅಪರಿಚಿತರಿಗೆ, ರವೀಂದ್ರ ಹೆಗ್ಡೆಯವರು ಔದಾರ್ಯದಲ್ಲೇ ಮಾರ್ಗದರ್ಶಿ ಕೊಟ್ಟು ಕಳಿಸಿದ್ದರು. ಆದರೆ ಇಂದು ಅಲ್ಲಿನ ಸಾಮಾಜಿಕ ಪರಿಸರ ಅಷ್ಟು ಸರಳವಿಲ್ಲ. ನಕ್ಸಲ್ ಬಳಗದ ಒಬ್ಬ ಸೇನಾನಿ ವಿಕ್ರಮ್ ಗೌಡ ಇದೇ ವಲಯದವನು]

ಆಳದ ಬೋಗುಣಿಯಂತೇ ಸುತ್ತುವರಿದ ಪರ್ವತಾವಳಿ, ಮೋಡದ ಮುಚ್ಚುಳಿಕ್ಕಿ ನಮ್ಮನ್ನು ಕುಟ್ಟುತ್ತಿದ್ದ ಬಿರುಮಳೆ, ಮಹಾ ಅಜಗರದಂತೆ ಸೊಕ್ಕಿದ ಹೊಳೆ, ನಿಗೂಢ ಕಾಡು ಇತ್ಯಾದಿ ವಿವರಗಳಲ್ಲಿ ನೋಡುತ್ತಿದ್ದಂತೆ ನಾವು ಒಮ್ಮೆ ಕಂಗಾಲಾದದ್ದು ನಿಜ. ಆದರೆ ರವೀಂದ್ರ ಹೆಗ್ಡೆಯವರು ಕೊಟ್ಟ ಮಾರ್ಗದರ್ಶಿ - ನಾರಾಯಣ ಶೆಟ್ಟರು, ಪ್ರಾಯ ಅರವತ್ತು ಮೀರಿದ್ದರೂ ಪರಿಸರದಲ್ಲಿ ದೃಢ ಜೀವಿ. ತೋಟದ ಪರಿಸರದಲ್ಲಿ ಅಷ್ಟಾಗಿ ಅಗತ್ಯ ಬರದಿದ್ದ ಅವರ ಜಿಗಣೆ ಮಂತ್ರ ದಂಡಕ್ಕೆ (ಪುಟ್ಟ ಬಟ್ಟೆಯ ಗಂಟಿನೊಳಗೆ ಸುಣ್ಣ ತುಂಬಿ, ಕಾಡುಕೋಲೊಂದರ ತುದಿಗೆ ಕಟ್ಟಿಕೊಂಡಿದ್ದರು. ಅದನ್ನು ಜಿಗಣೆಗೆ ಮುಟ್ಟಿಸಿದರೆ ಸಾಕು, ತಕ್ಷಣವೇ ಅದರ ಕಾರಕ್ಕೆ ಜಿಗಣೆ ಕಳಚಿಕೊಳ್ಳುತ್ತಿತ್ತು.) ಕಾಡಿನ ಪರಿಸರದಲ್ಲಿ ಬೇಡಿಕೆ ಜಾಸ್ತಿಯಾಗಿತ್ತು. ಅವರ ಬೀಸ ನಡಿಗೆಗೆ ಹೆಜ್ಜೆ ಸೇರಿಸಲು ಹಿಂದುಳಿಯುವವರೂ ಓಡೋಡಿ ದಂಡ ಸ್ಪರ್ಷ ಬಯಸುತ್ತಿದ್ದದ್ದು ಪರೋಕ್ಷವಾಗಿ ತಂಡದ ಪ್ರಗತಿಯನ್ನು ಚುರುಕಾಗಿರಿಸಿತ್ತು. ಹೊಳೆ ದಂಡೆಯಲ್ಲೆ ಪೊದರು ಮುಚ್ಚಿದ್ದ ಜಾಡನ್ನು ಕತ್ತಿಯಲ್ಲಿ ಸವರಿ ಬಿಡಿಸುತ್ತ ತುಸು ದೂರ ನಡೆಸಿ, ಅನಿವಾರ್ಯತೆಗೆ ಹಳ್ಳಿಗರೇ ಮಾಡಿಕೊಂಡ ಒಂದು ಮಹಾ ಕಾಡುಸೇತು ಸೇರಿಸಿದರು.

21 December 2012

ಮಂಗಳೂರಿನ ಆದಿ ಉರಗೋದ್ಯಾನ!


ತಿಂಗಳೆ ಕಣಿವೆಯ ಜಲಪಾತಗಳು - ಭಾಗ ಒಂದು

ಆಗುಂಬೆಯ ದಾರಿ ಬದಿಯಲ್ಲಿ ಒನಕೆ ಅಬ್ಬಿ ಉತ್ತರ ದಿಕ್ಕಿಗಾದರೆ ಬರ್ಕಣ ದಕ್ಷಿಣಕ್ಕೆ. ಬರ್ಕಣ ದೂರದರ್ಶನದಲ್ಲಿ ದಕ್ಕಿದ್ದರೂ ಅದರ ತಲೆ ತಳ ನೋಡಲು ಇನ್ನೊಮ್ಮೆಬರ್ಕಣ್ಣಾಎಂಬುದು ನಮ್ಮ ದೊಡ್ಡ ಯೋಜನೆಗೆ ಪಲ್ಲವಿಯೇ ಆಗಿತ್ತು. ಯಾಕೆಂದರೆ ಕಣ್ಣಿಗೆ ಕಾಣುವಂತೆಯೂ, ಸರ್ವೇಕ್ಷಣ ಭೂಪಟ ಹೇಳುವಂತೆಯೂ ಕಣಿವೆ ಸೀತಾ ನದಿಯ ಬಲು ಮುಖ್ಯ ಜಲಾನಯನ ಪ್ರದೇಶ. ಅದನ್ನು ಗುರುತಿನ ಸೌಕರ್ಯಕ್ಕಾಗಿ ಕಣಿವೆಯ ಹೆಚ್ಚು ಕಡಿಮೆ ಕೇಂದ್ರದಲ್ಲಿರುವ ಹಳ್ಳಿಯೊಡನೆ ಗುರುತಿಸಿ ತಿಂಗಳೆ ಕಣಿವೆ ಎನ್ನಬಹುದು. ಅಲ್ಲಿ ಘಟ್ಟ ಮಾಲೆ ತೆಗೆದುಕೊಂಡ ತೀವ್ರ ತಿರುವಿನಲ್ಲಿ ಹಲವು ಜಲಪಾತಗಳೇ ಹುದುಗಿದ್ದವು. ಬರ್ಕಣ ಅವುಗಳಲ್ಲಿ ಒಂದು. ಆದರೆ ಅವರಿವರ ಸೂಚನೆಯಂತೆ ಕಣಿವೆಯಾಳದ ಕಾಡಿನಲ್ಲಿ ನಿಜ ದರ್ಶನೀಯ ಜಲಪಾತವೆಂದರೆ ಕೂಡ್ಲುತೀರ್ಥ. ಮತ್ತದಕ್ಕೆ ಹೋಗಲು ಸ್ಪಷ್ಟ ಮಾರ್ಗದರ್ಶನ ಕೊಡಬಹುದಾದ ವ್ಯಕ್ತಿ ತಿಂಗಳೆಯ ಯಜಮಾನ (ಜಮೀನ್ದಾರ) ರವೀಂದ್ರ ಹೆಗ್ಡೆ (ಇಂದು ನಮ್ಮೊಂದಿಗಿಲ್ಲ). ಹೀಗೆ ಅಂದಾಜುಗಳಿಗೆ ಆಧಾರ ಸಿಕ್ಕ ಮೇಲೆ ಮುಹೂರ್ತ ನೋಡಲಿಲ್ಲ.

05 October 2012

ಬರ್ಕಣದಿಂದ ತೀರ್ಥಳ್ಳಿಗೆ

(ಚಕ್ರವರ್ತಿಗಳು ಮೂರನೆಯ ಸುತ್ತು - ಮೂಲ ಪುಸ್ತಕದಲ್ಲಿ ಮೂರುದಾರಿಗಳು ಅಧ್ಯಾಯದ ಅಂಗಭಾಗ)

ದಕ್ಷಿಣದ ಚಿರಾಪುಂಜಿ ಎಂದೇ ಹೆಸರಾಂತ ಆಗುಂಬೆಪೇಟೆಗೆ ಒನಕೆ ಅಬ್ಬಿ ಕವಲಿನಿಂದೇ ಒಂದೇ ಕಿಮೀ ಅಂತರ. ವಾತಾವರಣಕ್ಕೆ ಸಹಜವಾಗಿ ಮುದುರಿ ಕುಳಿತ ಕೆಲವು ಮನೆಗಳ ಸಾಲು, ನಡುವೆ ಒಂದೆರಡು ಅಂಗಡಿಯೇ ಊರು. [ಇಂದು ಆಗುಂಬೆಯ ಚಹರೆ ತೀವ್ರವಾಗಿ ಬದಲುತ್ತಿದೆ. ಅಂದು ಮಾಲ್ಗುಡಿ ಹಳ್ಳಿಯನ್ನು ಇಲ್ಲೇ ಕಂಡ ಶಂಕರನಾಗ್ ಇಂದು ಬಂದರೆ ಹೆದರಿ ಓಡಿಹೋದಾರು!] ಈ ವಲಯದಲ್ಲಿ ನಮ್ಮ ಎರಡನೆಯ ಲಕ್ಷ್ಯ ಬರ್ಕಣ ಅಬ್ಬಿ. ಬಸ್ ನಿಲ್ದಾಣ ಕಳೆದು ಹೋಗುವ ನೇರ ದಾರಿ ತೀರ್ಥಳ್ಳಿಗಾದರೆ ಬಲದ ದಾರಿ ಶೃಂಗೇರಿಗೆ. ಶೃಂಗೇರಿ ದಾರಿಯಲ್ಲಿ ನೂರಿನ್ನೂರು ಮೀಟರ್ ಕಳೆದು ಬಲಕ್ಕೊಂದು ಮಣ್ಣ ಮಾರ್ಗ. ಅದರಲ್ಲಿ ಸ್ವಲ್ಪ ದೂರ ಮಾತ್ರ ಜಲ್ಲಿ ಹಾಸಿನ ಬಿಗಿ. ಮುಂದೆ ಚದರಿದ ಪೊದರು, ಕುರುಚಲು ಕಾಡು, ಬಿಳಿ ಸೇಡಿಮಣ್ಣಿನ ನೆಲ. ವಾಹನ ಜಾಡುಗಳೇನೋ ಸ್ಪಷ್ಟವಿದ್ದರೂ ಕವಲುದಾರಿಗಳನ್ನು ದೂಳಹೂಳು ತಪ್ಪಿಸಲು ರೂಪುಗೊಂಡ ಪರ್ಯಾಯ ದಾರಿಗಳಿಂದ ಪ್ರತ್ಯೇಕಿಸುವುದು ಕಷ್ಟದ ಕೆಲಸ. ಈ ಹುಡುಕಾಟ ಮತ್ತು ತಂಡ ಪರಸ್ಪರ ಕಣ್ಣಳವಿಯಿಂದ ಚದುರದಂತೆ ಅನುಸರಿಸುವಲ್ಲಿ ಏಳುವ ದೂಳಿನ ಅಲೆ ಹಿಂಬಾಲಕರಿಗೆ ಗೋಳು. ಮತ್ತೆ ಕೆಲವರು ದೂಳು ತುಂಬಿದ ತಗ್ಗುಗಳಲ್ಲಿ ಅಂದಾಜು ತಪ್ಪಿದ ಓಟದಿಂದ, ಬೈಕಿನ ಚಕ್ರ ಕಚ್ಚಿದಂತಾಗಿ ತೂರಾಡಿ ಹೋದದ್ದೂ ಉಂಟು. ಆ ವಲಯದಲ್ಲಿ ಕೃಷಿ, ಹಳ್ಳಿಗಳು ಹೆಚ್ಚಿದ್ದಂತಿರಲಿಲ್ಲ. ಸಹಜವಾಗಿ ಜನಸಂಚಾರವೂ ಇಲ್ಲದಾಗಿ ಸೋಲಬಹುದಾಗಿದ್ದ ನಮ್ಮನ್ನು ಕೆಲವು ಅಸ್ಪಷ್ಟ ಸೂಚನೆಗಳು (ಹವ್ಯಾಸೀ ಚಾರಣಿಗರೋ ಸಮೀಪದ ಹಳ್ಳಿಗರೋ ರಟ್ಟಿನಲ್ಲೋ ಪುಟ್ಟ ಮರಗಳ ಕಾಂಡದಲ್ಲೋ ಹಾಕಿದ ಬಾಣದ ಗುರುತುಗಳು) ಬಚಾಯಿಸಿದವು. ತೀರಾ ಸಣ್ಣ ಒಂದೆರಡು ಬಳಸೋಟವಾದರೂ ನಾವು ಪ್ರಚುರಿತ ‘ಬರ್ಕಣ’ ತಾಣವೇನೋ ಸೇರಿದೆವು. ಆದರೆ ವಾಸ್ತವದಲ್ಲಿ ಅದು ಹೆಸರಾಂತ ಜಲಪಾತವೇ ಅಲ್ಲ, ಅದರ ಬಲು ದೂರದ ವೀಕ್ಷಣ ಕಟ್ಟೆ ಮಾತ್ರ.

21 September 2012

ವರಂಗದಿಂದ ಒನಕೆ ಅಬ್ಬಿಗೆ


(ಚಕ್ರವರ್ತಿಗಳು ಎರಡನೆಯ ಸುತ್ತು - ಮೂಲ ಪುಸ್ತಕದಲ್ಲಿ ಮೂರುದಾರಿಗಳು ಅಧ್ಯಾಯದ ಅಂಗಭಾಗ)

‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು ಇಲ್ಲಿ ಭೇಟಿಯಾಗುತ್ತಾರೆ’ ಎನ್ನುವ ಸಣ್ಣ ನಾಮಫಲಕ ನನ್ನಂಗಡಿಯ ಹೊರ ಮೂಲೆಯಲ್ಲಿ ತುಂಬಾ ವರ್ಷಗಳವರೆಗೆ ಶೋಭಿಸುತ್ತಿತ್ತು. ಅದನ್ನು ನೋಡಿಯೇ ಪರ್ವತಾರೋಹಣದ ಕುರಿತು ವಿಚಾರಿಸಿದವರು, ತಂಡದಲ್ಲಿ ಬಂದವರು ತುಂಬ ಕಡಿಮೆ. ಆದರೆ ದಿನಪೂರ್ತಿ ನಾನಂತು ಪುಸ್ತಕ ವ್ಯಾಪಾರಿ ಎಷ್ಟೋ ಆರೋಹಣದ ವಕ್ತಾರನೂ ಅಷ್ಟೇ ಆಗಿರುತ್ತಿದ್ದೆ. ಸಹಜವಾಗಿ ನಮ್ಮ ಅನೌಪಚಾರಿಕ ಕೂಟ ಹೊಸ ಹೊಳಹು ಕಾಣುತ್ತಲೇ ಇತ್ತು. ವರ್ಷದ ಮೊದಲಲ್ಲಿ ಕ್ಯಾಲೆಂಡರ್ ನೋಡಿ, ಬರಲಿರುವ ರಜಾದಿನಗಳನ್ನು ಹೊಂದಿಸಿ, ಊರಿನಿಂದ ದೂರ ಓಡಲು ನೆಪಗಳನ್ನು ನಾವು ಹುಡುಕುತ್ತಲೇ ಇದ್ದೆವು. ಹೀಗೆ ೧೯೮೫ರ ಜನವರಿ ೨೬ ಶನಿವಾರ ಬರುತ್ತದೆಂದು ಕಂಡಾಗ ಆದಿತ್ಯವಾರ ಸೇರಿಸಿ, ಎರಡು ದಿನಕ್ಕೆ ಹಾಕಿಕೊಂಡ ಯಾತ್ರೆ ವರಂಗದಿಂದ ವರಾಹಿಗೆ.

17 August 2012

ಕ್ಷೀರಪಥದಿಂದ ಕಾಳಿ ಪಾತ್ರೆಗೆ (ದೂದ್ ಸಾಗರ್ ಸರಣಿಯಲ್ಲಿ ಹನಿ ಮೂರು)


ಗೋವಾ-ಕರ್ನಾಟಕದ ವಾಸ್ತವದ ಗಡಿ ರೇಖೆ ಘಟ್ಟದ ಮೇಲೆಲ್ಲೋ ಇದ್ದರೂ ತನಿಖಾ ಠಾಣೆಯನ್ನು ಮೊಲೆನ್ನಿನಲ್ಲೇ ಇಟ್ಟುಕೊಂಡಿದ್ದರು. ಇವರಿಗೆ ‘ಬಾಟಲಿ-ಪುತ್ರ’ರಿಂದ ಒಳ್ಳೆಯ ಕರ (ಅಥವಾ ಮೇಲ್ಸಂಪಾದನೆ) ಸಂಗ್ರಹವಾಗುತ್ತದಂತೆ. ಕುಡಿಯುವ ಯೋಗ್ಯತೆ ಇಲ್ಲದ ನಮ್ಮನ್ನವರು ಕೀಳ್ಗಣ್ಣಲ್ಲಿ ಕಂಡರು. ಆದರೆ ಅಲ್ಲಿ ಸಹಜವಾಗಿ ವಿಕಸಿಸಿದ್ದ ಧಾಬಾ ಮಾತ್ರ ನಮ್ಮ ಹಸಿವು, ಬಾಯಾರಿಕೆಗಳ ಅಗತ್ಯಕ್ಕೆ ಸಾಕಷ್ಟು ‘ದಂಡ’ ಹಾಕಿದ್ದನ್ನು ಸಂತೋಷದಲ್ಲೇ ಒಪ್ಪಿ ಮುಂದುವರಿದೆವು. ದಾರಿ ನಮ್ಮ  ಶಿರಾಡಿ ಘಾಟಿಯನ್ನೇ ಹೋಲುತ್ತಿತ್ತು. ಡಾಮರೂ ಮೊದಲೇ ಹೇಳಿದಂತೆ ನುಣ್ಣಗೇ ಇತ್ತು. ಆದರೆ ಅದಕ್ಕೆ ತಕ್ಕಂತೆ (ಇಂದು ನಾವು ಹೊಸ ಚತುಷ್ಪಥಗಳಲ್ಲಿ ಕಾಣುತ್ತಿರುವ) ಏರು, ತಿರುವುಗಳ ವ್ಯವಸ್ಥೆಯಲ್ಲಿ ವೈಜ್ಞಾನಿಕ ಕೊರತೆಯಿಂದ ಸಾಕಷ್ಟು ಅಪಘಾತಗಳು ಆಗುತ್ತಿದ್ದುದನ್ನು ಗಮನಿಸಿದೆವು. ಒಂದು ತೀವ್ರ ಏರಿನ ತಿರುವಿನಲ್ಲಿ ದಾರಿಯಲ್ಲಿ ಭಾರೀ ಮೀನುಗಳ ರಾಶಿ. “ಅರೆ, school of fish ಘಾಟಿಯ ಚಂದ ನೋಡಲು ಚಾರಣ ಬಂದಿರಬೇಕು” ಎಂದು ಉದ್ಗರಿಸಿಹೋಯ್ತು! ಸ್ವಲ್ಪ ಮುಂದೆ ಯಾವುದೋ ಗುದ್ದಿ ಜಖಂಗೊಂಡ ಟೆಂಪೋ ಕಂಡ ಮೇಲೆ ಮಾತನ್ನು ಸಂಜೆ ಪತ್ರಿಕಾ ಕಾಲಂಗೆ ಪರಿಷ್ಕರಿಸಿಕೊಂಡೆ: ‘ವಿಹಾರಕ್ಕೆ ಹೊರಟ ಮೀನುಗಳ ದುರ್ಮರಣ! ಕೊಲೆಗಾರ ಲಾರಿ ಕೊಳ್ಳಕ್ಕೆ ಹಾರಿ ಆತ್ಮಹತ್ಯೆ!!’ ಅನುಬಂಧ - ಆರೋಹಣ ಸಾಹಸಿಗಳ ಅಶ್ರು ತರ್ಪಣ!!!

10 August 2012

ಅಮಲಿನ ಗೋವಾ (ದೂದ್ ಸಾಗರ್ ಸರಣಿ - ಹನಿ ಎರಡು)


ಯೋಜನಾವಧಿಯಲ್ಲಿ ನೆನಪಿನ ಬೆರಗಿಗೆ (ನನ್ನದೇ) ಪುಸ್ತಕದಂಗಡಿಯಲ್ಲಿ ನಿಜದ ದಾರಿ ಹುಡುಕುತ್ತ ಸುಮಾರು ಭೂಪಟ, ಪ್ರವಾಸ ಕಥನದ ಪುಸ್ತಕಗಳನ್ನು ಮಗುಚಿ ಹಾಕಿದ್ದೆ. ಇಪ್ಪತ್ನಾಲ್ಕು ವರ್ಷದ ಮೇಲೂ ದೂದ್‌ಸಾಗರ್ ಬಳಿ ರೈಲ್ವೇ ಹಳಿ ಮಾತ್ರ ಕಾಣುತ್ತಿತ್ತು. ಅಸ್ಪಷ್ಟ ದಾರಿ ಸೂಚಕ ಗೀಟುಗಳು ದಕ್ಷಿಣದಲ್ಲಿ ಕಾಲೆಮ್‌ವರೆಗೂ ಉತ್ತರದಲ್ಲಿ ಕೊಲೆನ್‌ವರೆಗೂ ಹರಿದಿತ್ತು. ನಮಗೆ ಮತ್ತೆ ಬೈಕ್ ಬಿಟ್ಟು ರೈಲೇರಲು ಮನಸ್ಸಿರಲಿಲ್ಲ. ಮುಂದೇನು ಎಂಬ ನನ್ನ ಯೋಚನೆಗೆ ಭಂಗ ಬರುವಂತೆ ಒಂದು ಗಿರಾಕಿ, ಕೃಷಿ ಪುಸ್ತಕ ಕೇಳಿ ಬಂದರು. One straw revolution ಕೊಟ್ಟೆ. ಆತ ನಸುನಕ್ಕು “ಇದು ನಮ್ಮ ಗೋವಾದ್ದೇ ಪ್ರಕಟಣೆ” ಎನ್ನಬೇಕೇ. ನಾನು ಗಿರಾಕಿ ಮರೆತು, ಅವರಲ್ಲಿ ಗೋವಾ ಮಾಹಿತಿದಾರ ಎಂ.ವಿ ಹೆಗಡೆಯವರನ್ನು ಕಂಡುಕೊಂಡೆ! ಕೊಲೆನ್ನಿನಲ್ಲೇ ಕೃಷಿ ನಡೆಸಿದ್ದ ಹೆಗಡೆಯವರು ದಾರಿ ವಿವರ ಮತ್ತು ಸ್ವತಃ ಸಹಾಯ ಮಾಡಬಲ್ಲೊಬ್ಬ ಮಿತ್ರನಿಗೆ ಪತ್ರವನ್ನೂ ಕೊಟ್ಟರು. ಹಾಗೆ ರೂಪಿಸಿದ್ದ ಯೋಜನೆ ಮರುದಿನಕ್ಕಿತ್ತು. ಮೊದಲ ದಿನ ರೈಲು ಯಾನದ ಅನಿಶ್ಚಿತತೆಗೇ ಮೀಸಲು. ಅರ್ಧ ದಿನವೇ ಉಳಿದಿದ್ದುದರಿಂದ ಮೊದಲು ಆರಾಮವಾಗಿ ನಮ್ಮ ಮತ್ತು ಬೈಕ್‌ಗಳ ಹೊಟ್ಟೆಗೆ ಆಹಾರ ಹಾಕಿದೆವು.

20 July 2012

ದೂದ್ ಸಾಗರ್ (ಹನಿ ಒಂದು - ಕೊಂಕಣ ರೈಲು ಕಂಡೀರಾ)


ಭೂ ತಾಯಿಯ ಹಾಲಿನ ಭಾಂಡದಲ್ಲಿ ಉಕ್ಕು ಬಂದಿತ್ತು, ಬೆಟ್ಟ ಬಟ್ಟಲ ಅಂಚಿನಲ್ಲಿ ಬೆರಗಿನ ಬುರುಗು ತುಳುಕಿತ್ತು. ಮಳೆತೊಳೆದ ಬೆಟ್ಟ ಸಾಲಿನ ನೆತ್ತಿಯಿಂದ ಹಾಲಹೊಳೆ, ಹೌದು ಹೆಸರೇ ಹಾಗೆ - ದೂದ್ ಸಾಗರ್, ಅಕ್ಷರಶಃ ನೊರೆಯುಬ್ಬಿಸಿ ಧುಮುಗುಡುತ್ತಿತ್ತು. ಆ ಎತ್ತರದಿಂದ ನಮ್ಮ ಪಾದಮೂಲದವರೆಗೆ ಮತ್ತೂ ಕೆಳಕ್ಕೆ ಮಿಂದ ಬಂಡೆಯನ್ನೆ ಮತ್ತೆ ಮೀಯಿಸುವಂತೆ, ಒತ್ತಿನ ಹಸುರಿಗೆ ಪ್ರತಿ ಕ್ಷಣದ ಬೆರಗು ಹೊಸದೇ ಅನ್ನಿಸುವಂತೆ ‘ಉಧೋ’ ಹೇಳುತ್ತಲೇ ಇತ್ತು. ನೊರೆ ಚೆಂಡು ಮುಕ್ಕುಳಿಸಿ, ವಾತಾವರಣದಲ್ಲೆಲ್ಲ ಹುಡಿ ಹಾರಿಸಿ, ಮಳೆಯನ್ನೂ ತಾನೇ ವಹಿಸಿಕೊಂಡು ಸಂಭ್ರಮಿಸುತ್ತಿದ್ದ ದೂದ್ ಸಾಗರ್ ಹೊಳೆಯ ಜಲಪಾತ ಅತಿಶಯೋಕ್ತಿಗಳೆಲ್ಲವನ್ನೂ ಅನ್ವರ್ಥಗೊಳಿಸಿಕೊಂಡಿತ್ತು. ನನ್ನ ನೆನಪಿನ ಮಸುಕು ಎಳೆ ಹಿಡಿದು, ಕನಿಷ್ಠ ಸೌಕರ್ಯಗಳ ಕೊರತೆ ಮೀರಿ, ನಿರುತ್ತೇಜಕ ಮಳೆ ಮಬ್ಬುಗಳ ಪೊರೆ ಹರಿದು ಹದಿಮೂರು ಕಿಮೀ ನಡೆದು ಬಂದ ನಮಗೆ ಪರಮ ಧನ್ಯತೆಯ ಸನ್ನಿವೇಶ. ದೇಶ ಸ್ವಾತಂತ್ರ್ಯ ಸ್ವರ್ಣ ಸಂಭ್ರಮದ ಔಪಚಾರಿಕತೆಗಳಲ್ಲಿ ಸಿಕ್ಕಿಕೊಂಡಿದ್ದಾಗ ನಮಗಿಲ್ಲಿ ನಿಜ ಹಬ್ಬ. ಪಶ್ಚಿಮ ಘಟ್ಟದ, ಗೋವಾ ವಲಯದ, ಕಗ್ಗಾಡಮೂಲೆಯ, ಯುಗಾಂತರಗಳ ರುದ್ರ ನಾಟ್ಯಕ್ಕೆ ಐದು ಮಿನಿಟಿಗಾದರೂ ಪ್ರೇಕ್ಷಕರಾಗುವ ಅವಕಾಶ. ಈ ಸಾಹಸ ಯಾತ್ರೆಯ ರಮ್ಯ ಕಥಾಮೃತವನ್ನಿನ್ನು ಸಾದ್ಯಂತ ಬಣ್ಣಿಸುತ್ತೇನೆ (“...ಬಣ್ಣಿಪೆನೀ ಕಥಾಮೃತವಾ” ಇಲ್ಲಿ ಚಂಡೆ ಬಡಿಬೇಕು!).

01 May 2011

ಸಾಗರದಾಚಿನ ಭಗೀರಥ

(ಜಲಪಾತಗಳ ದಾರಿಯಲ್ಲಿ ಅಂತಿಮ ಮತ್ತು ಆರನೇ ಭಾಗ)

[ಭಗೀರಥನ ಧ್ಯಾನದೊಡನೆ ಒಂದೇ ವಾರದಲ್ಲಿ ಬಂದು ಈ ಸರಣಿಯನ್ನು ಮುಗಿಸುತ್ತೇನೆಂದವನಿಗೆ ಎರಡು ವಾರದ ಹಿಂದೆ ಡಾ| ರವೀಂದ್ರನಾಥ ಶಾನುಭಾಗರ ಭೇಟಿಯಾಯ್ತು. ಇವರು ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿದ್ದುಕೊಂಡು ಬಸ್ರೂರು ಹೆಸರಿನಲ್ಲಿ ಅಸಂಖ್ಯ ಬಳಕೆದಾರರ ಮತ್ತು ಸಾಮಾಜಿಕರ ನ್ಯಾಯಯುತವಾದ ಸಮಸ್ಯೆಗಳಿಗೆ ಅಪ್ಪಟ ಪ್ರಜಾಸತ್ತಾತ್ಮಕ ಹೋರಾಟವನ್ನು ಕೊಟ್ಟು ಬಗೆಹರಿಸಿದ್ದು ಯಾರೂ ಮರೆಯುವಂತದ್ದಲ್ಲ. ಒಂದು ಹಂತದಲ್ಲಿ ಇವರಿಗೂ  ಎಲ್ಲ ಸಾಕೆನ್ನಿಸಿದಾಗ ದೇಶದ ಉತ್ತರ ತಲೆಯಲ್ಲಿ (ವಾಸ್ತವಾಗಿ ಪರದೇಶಿಯಾಗಿ) ಹೋಗಿ ತಣ್ಣಗೆ ನೆಲೆಸಿದ್ದರು. ಆದರೆ ಇಲ್ಲಿನ ಸಂಕಟಗಳು ಬೇರೊಂದೇ ಆಯಾಮಪಡೆದುಕೊಳ್ಳುತ್ತಿರುವುದನ್ನು ನೋಡಲಾಗದೇ ಮತ್ತೆ (ಗುಜರಾತಿನ ಮೂಲಕ) ಹೋರಾಟದ ಕೆಚ್ಚುಳಿಸಿಕೊಂಡು ಬಂದಿದ್ದಾರೆ. ಹಣ ಸೇವೆಗಳ ಸಮಸ್ಯೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗಗಳನ್ನು ಮೀರಿದ ಪಾರಿಸರಿಕ ಸಮಸ್ಯೆ, ಒಂದು ಜನ್ಮಕ್ಕಲ್ಲ ಹಲವು ತಲೆಮಾರುಗಳಿಗೆ ವ್ಯಾಪಿಸುವ, ಮಾನವ ಮಾತ್ರರಿಗಲ್ಲ ಜೀವಜಾಲಕ್ಕೇ ಕುತ್ತಾಗುವ ಎಂಡೋ ಸಲ್ಫಾನ್ ಹೆಮ್ಮಾರಿಯ ವಿರುದ್ಧ ಇವರು ರಂಗಕ್ಕಿಳಿದರು. ಶಾನುಭಾಗರನ್ನು ಗುರುವೆಂದೇ ಪರಿಗಣಿಸಿ ಬಂದ ಗೆಳೆಯ ಸುಂದರರಾಯರು ತಿರುಗಲಿರುವ ನೇತ್ರಾವತಿಯಲ್ಲಿ ಮುಳುಗಿದ್ದವರೂ ದಡಬಡಿಸಿ ಹೊರಟು ಆದರೆ ಧೃಢವಾಗಿ ಹಿಂಬಾಲಿಸಿದ್ದಾರೆ. (ಅವಶ್ಯ ಇಲ್ಲೇ ಇರುವ ಸುಂದರ ವಸುಂಧರ ಸೇತನ್ನು ಬಳಸಿ ಅವರ ಬ್ಲಾಗಿಗೆ ಹೋಗಿ ನೋಡಿ) ನನಗೋ ಇವರನ್ನು ಅನುಸರಿಸುವ ಉಮೇದು ಆದರೆ ನಾನೇ ನಡೆಸಬೇಕಾದ ಜವಾಬ್ದಾರಿಯನ್ನು ಬಿಡಲಾಗದ ತುರ್ತಿನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳನ್ನು ತುರುಕಿಬಿಟ್ಟೆ. ಈಗ ಬನ್ನಿ, ಜಲಪಾತದೋಟದ ಕೊನೆಯ ಮುಳುಗಿಗೆ ನಿಮ್ಮನ್ನು ಒಯ್ಯುತ್ತಿದ್ದೇನೆ.]

09 April 2011

ಮಾಗೋಡು, ಕವಡಿ ಕೆರೆ

(ಜಲಪಾತಗಳ ದಾರಿಯಲ್ಲಿ ಭಾಗ ಐದು)


ಕೆಂಜಳಿಲಿಗೆ ಕಿವಿಯಾಗುವಂತೆ ಮಾಡಿ, ಜಗತ್ತಿನ ಅತಿ ಎತ್ತರದ ಜಲಪಾತ ಚಿರಿಪಿರಿಯಡಿಯಲ್ಲಿ ನಿಮ್ಮನ್ನು ವಾರಕಾಲ ಮಾತ್ರ ಕಾಯಲು ಬಿಟ್ಟವನು ಸುಮಾರು ಹದಿನೈದು ದಿನದ ಮಟ್ಟಿಗೆ ದಾರಿ ತಪ್ಪಿ ಹೋದೆ. ವಾಸ್ತವದಲ್ಲಿ ಯಲ್ಲಾಪುರ ದಾರಿಯಂಚಿನಲ್ಲಿ ನಿಂತ ನಮ್ಮನ್ನು ಮಳೆ, ಅಲ್ಲಲ್ಲ ಜಲಪಾತ ಬೇಗನೇ ಬಿಡುಗಡೆ ಮಾಡಿತ್ತು. ಆದರೆ ನಮ್ಮ ಒಟ್ಟಾರೆ ಓಡಾಟದ ಫಲವಾಗಿ ನಾವು ಎಷ್ಟು ಚುರುಕಾಗಿ ಮುಂದುವರಿದು ಯಲ್ಲಾಪುರ ತಲಪಿದರೂ ಹೋಟೆಲುಗಳಲ್ಲಿ ಊಟಾ ಖೋತಾ ಆಗಿತ್ತು. ಅವಸರವಸರವಾಗಿ ಏನೋ ಒಂದಿಷ್ಟು ಹೊಟೆಲ್ ತಿನಿಸುಗಳನ್ನು (ಜಡ್ಡಿಗದ್ದೆಯ ವಿರಹದಲ್ಲೇ) ಹೊಟ್ಟೆಗೆ ಜಡಿದು, ರಾತ್ರಿಯ ಊಟ-ವಾಸಕ್ಕಿದ್ದ ಅನಿಶ್ಚಿತತೆಯನ್ನು ನಿವಾರಿಸಲು ಮಾಗೋಡಿನತ್ತ ದೌಡಾಯಿಸಿದೆವು.


ಉತ್ತರಕನ್ನಡದಲ್ಲಿ (ಸರಕಾರೀ ಭಾಷೆ) ‘ಸುಮ್ಮನೇ ಸಮುದ್ರ ಸೇರುವ ನೀರನ್ನು ಜನೋಪಯೋಗಿ ಮಾಡುವ ಅಥವಾ ಜನಜೀವನಕ್ಕೇನೂ ಬಾಧೆಯಾಗದಂತೆ ಬರಿಯ ಕಾಡು ಮಾತ್ರ ಮುಳುಗಿಸಿ’ ವಿದ್ಯುತ್ ಬಸಿಯುವ ಭಾರೀ ಯೋಜನೆಗಳು ಬಹು ಪ್ರಚಾರದಲ್ಲಿದ್ದ ಕಾಲವದು. (ಈಗ ಅಭಿವೃದ್ಧಿ ಸಮಷ್ಟಿಗಾಗಿ ವ್ಯಕ್ತಿ ಎಂದು ಘೋಷಿಸಿ, ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ಯೋಜನೆಯಲ್ಲಿ ಹುತಾತ್ಮರನ್ನಾಗಿಸುವಷ್ಟು ಮುಂದುವರಿದಿದೆ. ಕೆಲವೊಮ್ಮೆ ನೀವು ಯಜಮಾನರಾಗಿದ್ದ ನೆಲದಲ್ಲೇ ಕಾಯಿಲಸ್ಥ ಗುಮಾಸ್ತನೋ ಪ್ಯಾದೆಯೋ ಆಗಿ ಉಳಿಯುವಷ್ಟು ಔದಾರ್ಯವನ್ನು ತೋರಿಸುವುದೂ ಇದೆ!) ಸೋಂದಾ ಸ್ವರ್ಣವಲ್ಲಿ ಮಠದ ಸ್ವಾಮಿಗಳು ಇವೆಲ್ಲವುಗಳ ಪ್ರಬಲ ವಿರೋಧೀ ಚಳವಳಿಯ ಮುಂದಾಳ್ತನವನ್ನು ವಹಿಸಿಕೊಂಡು ಮಾಧ್ಯಮಗಳಲ್ಲೆಲ್ಲಾ ರಾರಾಜಿಸುತ್ತಿದ್ದ ಕಾಲವೂ ಹೌದು. ಆಗ ನಾನು ಕೇಳಿದಂತೆ ಒಂದೋ ಜಲಸಮಾಧಿಯಾಗುವ ಅಥವಾ ಜೋಗದಂತೆ ಕೇವಲ ಗತವೈಭವವಾಗುಳಿಯುವ  ದೊಡ್ಡ ಹೆಸರು ಮಾಗೋಡು ಅಬ್ಬಿ. ಉ.ಕದಲ್ಲಿ ಪ್ರವಾಸಿಗಳನ್ನೇ ನೆಚ್ಚಿ ಅಂದ ಕಾಲತ್ತಿಲೇ ‘ಅಭಿವೃದ್ಧಿ’ಗೊಂಡ ಏಕೈಕ ಪ್ರಾಕೃತಿಕ ತಾಣ ಈ ಮಾಗೋಡು ಅಬ್ಬಿ. ಆದರೆ ಎಲ್ಲಾ ಸರಕಾರೀ ಯೋಜನೆಗಳಂತೆ ಇಲ್ಲೂ ಹೂಡಿಕೆಯ ತೋರಿಕೆಗೇ ಪ್ರಾಶಸ್ತ್ಯ. ‘ಬಾಳ್ತನ’ ಅಥವಾ ‘ಊರ್ಜಿತ’ ಎಂಬ ಶಬ್ದಗಳು ಸರಕಾರೀ ಕೋಶದಲ್ಲಿ ಎಂದೋ ಅಪಮೌಲ್ಯಗೊಂಡಿರುವುದಕ್ಕೆ ಸ್ಪಷ್ಟ ಸಾಕ್ಷಿ ಇಲ್ಲಿ ಕಾಣಬಹುದಿತ್ತು. ಹುಬ್ಬಳ್ಳಿ ಬಿಟ್ಟ ಹೆದ್ದಾರಿ ಯಲ್ಲಾಪುರ ದಾಟಿ ಕರಾವಳಿಯ ಅಂಕೋಲೆಯತ್ತ ಕೊಳ್ಳ ಹಾರಿಕೊಳ್ಳುವ ಮುನ್ನ ನಾವು ಎಡದ ಕವಲು ಹಿಡಿದೆವು. ಆರೇಳು ಕಿಮಿ ಅಂತರದಲ್ಲಿ ನಿರ್ವಸಿತಗೊಂಡ ಪೊಲೀಸ್ ತರಬೇತಿ ಕೇಂದ್ರ (ಬರಲಿದ್ದ ಅಣೆಕಟ್ಟೆಯ ಮುಳುಗಡೆ ವಲಯವಾದ್ದರಿಂದ ಈಚೆಗಷ್ಟೇ ಸ್ಥಳಾಂತರಗೊಂಡಿತ್ತು) ಮುಂದೆ ಯಾವುದೋ ಹಳ್ಳಿಯತ್ತ ಸಾಗುವ ದಾರಿಯನ್ನು ಬಲಕ್ಕೆ ಬಿಟ್ಟು ನೇರ ಅಬ್ಬಿವಲಯಕ್ಕೊಳಪಟ್ಟೆವು.

23 March 2011

ಬನವಾಸಿ, ಶಿವಗಂಗೆ, ಸಹಸ್ರಲಿಂಗೇಶ್ವರ

(ಜಲಪಾತಗಳ ದಾರಿಯಲ್ಲಿ ಭಾಗ ನಾಲ್ಕು)
ಸರಬರ ಊಟ ಮುಗಿಸಿ ಸೊರಬದ ದಾರಿ ಹಿಡಿದೆವು. ನಮ್ಮ ಧಾವಂತ ನೋಡಿ ನಿಧಾನಿಸಲು ಯಾರೇ ಹೇಳಿದರೂ ಉತ್ತರ ಸಿದ್ಧವಿತ್ತು “ಆರು ಭರ್ಚಿಗಳಲ್ಲಿ ಚುಚ್ಚಿದರೂ ನಮ್ಮ ಗುರಿ ಬನವಾಸಿ ದೇಶ.” ಕಿಮೀ ಕಲ್ಲುಗಳನ್ನು ಎಳೆದೆಳೆದು ಹಿಂದಿಕ್ಕಿದಂತೆ ನಾವು ಸಾಗಿದ್ದರೂ ಮಳೆ ನಮ್ಮಿಂದ ಒಂದು ಕೈ ಮುಂದೆ ಇದ್ದದ್ದು ಒಮ್ಮೆಗೇ ಅರಿವಾಯ್ತು. ಬನವಾಸಿ ಪೇಟೆಯಂಚು ತಲಪುತ್ತಿದ್ದಂತೆ ಬಾನ ಬೋಗುಣಿ ಕವುಚಿದಂತಪ್ಪಳಿಸಿತು ಮಳೆ. ಪುಡಾರಿ ಭಾಷಣದಿಂದ ದಿಕ್ಕೆಟ್ಟು ಓಡಿದಂತೆ ನಾವು ದಾರಿ, ಬೈಕ್ ಬಿಟ್ಟು ಸಿಕ್ಕ ಅಂಗಡಿ, ಮನೆ, ಮರಗಳ ಮರೆಗೆ ಓಡಿದೆವು (ಇಲ್ಲವಾದರೆ ನೆನೆವುದೆಮ್ಮ ದೇಹಂ ಬನವಾಸಿ ದೇಶದಿಂ!). ಅರ್ಧ ಗಂಟೆಯಲ್ಲಿ ಆಕಾಶ ತಿಳಿಯಾದ ಮೇಲೆ ನಮ್ಮ ಸೈನ್ಯವನ್ನು ಮರುಸಂಘಟಿಸಿ ಮಹಾಕವಿ ಪಂಪನನ್ನು ಸ್ಮರಿಸುತ್ತಾ ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಮುತ್ತಿಗೆ ಹಾಕಿದೆವು.