(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ)
ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ!
ಬಾಲ್ಯದಲ್ಲಿ ನಾನು ಭಾರೀ ಕಾರುಭಾರಿಯೇನೂ ಅಲ್ಲ. (ಈಗ ಹೌದೆಂದೂ ಅಲ್ಲ! ಈ ಜಾಲತಾಣದ ದೆಸೆಯಲ್ಲಿ ಅನಿವಾರ್ಯವಾಗಿ ನನಗೆ ಬಂದ ‘ನಾಯಕ’ತ್ವಕ್ಕೆ ಇಷ್ಟು ಹೇಳಬೇಕಾಗಿದೆ) ಆದರೂ ಮಡಿಕೇರಿ ಮತ್ತು ಬಳ್ಳಾರಿಯಲ್ಲಿ ವಿಸ್ತಾರದಲ್ಲೇ ಬೆಳೆದ ನಮಗೆ (ಅತ್ರಿ - ಅಶೋಕ, ಆನಂದ, ಅನಂತ)
ಹನುಮಂತನಗರ ಕಿಷ್ಕಿಂಧೆಯ ನೆನಪನ್ನೇ ಕೊಟ್ಟಿತು! ಅಲ್ಲಿನ
ಸಂಜೆಗಳು ನನಗೆ ಆಸುಪಾಸಿನ ಮನೆಯ ಹುಡುಗರೊಡನೆ ದಾರಿಬದಿಯಲ್ಲೋ ಇನ್ನೂ ನಿವೇಶನಗಳಾಗಿ ಸ್ಪಷ್ಟ ಅಭಿವೃದ್ಧಿಗೊಳ್ಳದ
ಹದಿನೈದನೇ ಅಡ್ಡ ರಸ್ತೆಯಿಂದಾಚಿನ ಮೈದಾನದಲ್ಲೋ ಕಬಡ್ಡಿ, ಕ್ರಿಕೆಟ್,
ಗಾಳಿಪಟ, ಬುಗುರಿಯಾಟಗಳಲ್ಲಿ ಮುಗಿಯುತ್ತಿತ್ತು.
ಆಗ ಇಂದಿನಂತೆ ಸಿದ್ಧ ಗಾಳಿಪಟಗಳು ಮಾರಾಟಕ್ಕೆ ಸಿಗುತ್ತಿದ್ದದ್ದು
ನನಗೆ ತಿಳಿದಿರಲಿಲ್ಲ. ಯಾರೋ ಸಹಪಾಠಿಯಿಂದ ಕಲಿತು,
ಹಳೇ ಪತ್ರಿಕೆಯ ಪುಟಗಳಿಗೆ ಮನೆಯ ಹಿಡಿಸೂಡಿ ಕಡ್ಡಿ ಹೊಸೆದು, ಅನ್ನದ ಅಂಟು ಹಚ್ಚಿ ತೇಲಿಬಿಡುವ ನನ್ನ ಹುಚ್ಚಿಗೆ ಅಮ್ಮನ ಎಂಬ್ರಾಯಿಡರಿ ನೂಲೆಲ್ಲಾ ಖಾಲಿಯಾಗಿತ್ತು.
“ಪಟ್ವೇನೋ ಮಾಡ್ಬೌದೂ. ಸೂಸ್ತ್ರ ಕಟ್ಟೋದೇ ಇರೋದು” ಎನ್ನುವ ಕೋಣಗಳ ನಡುವೆ
ನಾನು ಅದೃಷ್ಟದಲ್ಲೆ ಜಾಣ ಅನ್ನಿಸಿಕೊಂಡಿದ್ದೆ! ಒಂದಕ್ಕೊಂದು ಜಂಟಿ ಹಾಕಿ
ಐದು ಪಟದವರೆಗೂ ನಾನು ಗಾಳಿಗೇರಿಸಿದ್ದಿತ್ತು. ನಮ್ಮ ಮನೆಯ ಬೋಳು ತಾರಸಿಗೇರಿ
(ಎರಡನೇ ಮಾಳಿಗೆ) ಪಟ ಏರಿಸಿದರೆ, ಅದು ಸಾಮಾನ್ಯವಾಗಿ ಯಾವುದೇ ಲೈಟ್ ಕಂಬ, ತಂತಿಗೆ ಸಿಗದಂತೆ ಮೇಲೇರಿ
ಹಾರುತ್ತಿತ್ತು. ಇನ್ನೂ ದೊಡ್ಡ ಲಾಭವೆಂದರೆ ಕೊಳೆಗೇರಿಗಳೇ ಆಗಿದ್ದ ಅತ್ತಿತ್ತಣ
ಹಳ್ಳಿಯ ಪೋಲಿ ಪಟಾಲಮ್ಮು ಎಟುಕಿಗೆ ನನ್ನ ಪಟ ನಿಲುಕದ ಎತ್ತರವನ್ನೂ ಸಾಧಿಸುತ್ತಿತ್ತು.