Showing posts with label ಮೈಸೂರು. Show all posts
Showing posts with label ಮೈಸೂರು. Show all posts

26 June 2020

ಅರೆಸೈನಿಕನ ರೂಪಣೆಯಲ್ಲಿ ಮೈಸೂರು

(ಜಾತಿ ಮತಗಳ ಚಕ್ರಸುಳಿ ಮೀರಿ -೪) 


೧. ತಪ್ಪಿಸಿಕೊಳ್ಳಲಾಗದ ಕಂಬಳಿ ಪೆರೇಡ್ 


ಮಹಾರಾಜಾದಲ್ಲಿ ನಾನು ಕಾಲೇಜಿಗಿಂತ ಹೆಚ್ಚಿನ ಮುತುವರ್ಜಿಯಲ್ಲಿ ಎನ್.ಸಿ.ಸಿ ಸೇರಿದ್ದೆ. ಕಾರಣ ಗೊತ್ತಲ್ಲ - ತನ್ಮೂಲಕ ಪರ್ವತಾರೋಹಣ ಶಿಬಿರಕ್ಕೆ ಹೋಗುವುದು! ನಾನು ಬೆಂಗಳೂರಿನಲ್ಲಿದ್ದಾಗ ಕಡ್ಡಾಯ ಎನ್.ಸಿ.ಸಿ ಇತ್ತು. ಸಹಜವಾಗಿ ಸರಕಾರೀ ಕಾಲೇಜು ಒಂದಕ್ಕೇ ಒಂದು ಬಟಾಲಿಯನ್ ವ್ಯವಸ್ಥೆ ಇತ್ತು. ಆದರೆ ಮೈಸೂರಿಗೆ ಬರುವಾಗ ಕಡ್ಡಾಯ ರದ್ದಾಗಿತ್ತು. ಹಾಗಾಗಿ ನಮ್ಮ ಬಟಾಲಿಯನ್ನಿನ ವ್ಯಾಪ್ತಿಗೆ ಮೈಸೂರಲ್ಲದೆ ಸಮೀಪದ ಕೊಳ್ಳೇಗಾಲ, ಮಂಡ್ಯ ಮುಂತಾದ ಊರುಗಳ ಹಲವು ಕಾಲೇಜುಗಳೂ ಸೇರಿಕೊಂಡಿದ್ದವು. (ನನಗೆ ಅಗೋಚರ ಸ್ಪರ್ಧಿಗಳೂ ಇದ್ದರು!) ಮಹಾರಾಜಾದ ಹಾಜರಿ ಪುಸ್ತಕದಲ್ಲಿ ಸುಮಾರು ನಲ್ವತ್ತೈವತ್ತು ಹೆಸರಿದ್ದರೂ ನಿಯತ ಕವಾಯತುಗಳಿಗೆ ನಿಜ ಭಾಗಿಗಳು ಇಪ್ಪತ್ತು ಮೂವತ್ತನ್ನು ಮೀರುತ್ತಿರಲಿಲ್ಲ. 

26 February 2018

ಲಕ್ಷ್ಮಿ ಭಾಗ್ಯ ಮತ್ತು ಸಮಕಾಲೀನ ಟಿಪ್ಪಣಿಗಳು


೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ
ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ ವಿಯೋಗವನ್ನು ನಾವು ಅತ್ರಿ ಸೋದರರು (ಅಶೋಕ, ಆನಂದ, ಅನಂತ) ಸ್ವೀಕರಿಸಿದ ಕ್ರಮ ಲೋಕಮುಖಕ್ಕೆ ಒಂದೇ ಇತ್ತು. ಅಂದರೆ, ಇಬ್ಬರ ದೇಹಗಳನ್ನೂ ವೈದ್ಯಕೀಯ ಆಸ್ಪತ್ರೆಗೆ ದಾನ ಕೊಟ್ಟೆವು. ಅವರಿಬ್ಬರ ಇಚ್ಛೆ ಮತ್ತು ನಮ್ಮ ನಂಬಿಕೆಯ ಭಾಗವಾಗಿಯೂ ಸಾಂಪ್ರದಾಯಿಕ ಸೂತಕ ಮತ್ತು ಶುದ್ಧಕ್ರಿಯೆಗಳನ್ನು ಕೈಗೊಳ್ಳಲಿಲ್ಲ. ಇದ್ದಷ್ಟು ಕಾಲ ತಾಯಿಯ ಬಾಹ್ಯ ಅಲಂಕಾರ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಯಾವುದೇ ಊನ ಬಾರದಂತೆ ಆಕೆಯ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದೆವು. ಇದರ ಮೇಲೆ.....

ಅಪ್ಪಮ್ಮರ ಜತೆಗಿದ್ದು, ಮುಖ್ಯವಾಗಿ ಅವರ ಕಷ್ಟಗಳಲ್ಲಿ ನೇರ
ಭಾಗಿದಾರಿಕೆ ವಹಿಸಿಕೊಂಡ ಅನಂತ - ನಮ್ಮೂವರಲ್ಲಿ ಕಿರಿಯ. ಹಿರಿಯನಾದ ನಾನು ಮತ್ತು ಎರಡನೆಯವನಾದ ಆನಂದ ಹುಟ್ಟಿನ ಆಕಸ್ಮಿಕದ ಹಿರಿತನವನ್ನು ಅನಂತನ ಕ್ರಿಯಾ ಹಿರಿತನಕ್ಕೆ ಎಂದೋ ನಿಸ್ಸಂದೇಹವಾಗಿ ಒಪ್ಪಿಸಿದ್ದೆವು. ಹೋದವರಿಗಿಂತ ಇರುವವರ ಜೀವನ ಹೆಚ್ಚು ಹಸನಾಗಬೇಕೆಂಬ ಮಾತಿದೆ. ತಂದೆಯೂ ಈ ಮಾತನ್ನು ಒಪ್ಪುತ್ತಿದ್ದರು. ಅದಕ್ಕೇ ಅವರು ಸ್ವಂತಕ್ಕೆ ಯಾವ ವೈದಿಕ ಆಚರಣೆಗಳನ್ನು ಇಟ್ಟುಕೊಳ್ಳದಿದ್ದರೂ ತಾಯಿಯ ಪೂಜೆ, ವ್ರತಾದಿ ನಂಬಿಕೆಗಳಿಗೆ ಎಂದೂ ಭಂಗ ಉಂಟುಮಾಡುತ್ತಿದ್ದಿಲ್ಲ. ಅದೇ ರೀತಿಯಲ್ಲಿ, ಮೊದಲು ಅಪ್ಪನ ಉತ್ತರಕ್ರಿಯಾ ಆಶಯಕ್ಕೆ, ಮುಖ್ಯವಾಗಿ ಅಮ್ಮನ ಸಣ್ಣ ಆಸೆಗಳನ್ನೂ ಅನಂತರ ಅಮ್ಮನ ವಿದಾಯದಂದು ಅನಂತನ ಅಗತ್ಯಗಳಿಗಾಗಿಯೂ ಸಣ್ಣ

20 March 2015

ಶಿವರಾತ್ರಿಯಂದು ಶನಿಪ್ರಭಾವ

“ಶ್ರೀ ಶನಿ ಪ್ರಭಾವ ಅಥವಾ ನಳದಮಯಂತಿ, ಈ ಬಾರಿ ನಮ್ಮಲ್ಲಿ ಶಿವರಾತ್ರಿಯ ವಿಶೇಷ ನಾಟಕ. ಕಲಾವಿದರು ಹುಯ್ಲಾಳು ಹುಂಡಿಯ ಹಳ್ಳೀ ಸಮಸ್ತರು” ಅಂತ ನನ್ನ ಮೈಸೂರಿನ ತಮ್ಮ – ಅನಂತವರ್ಧನ, ಎಂದಿನಂತೆ ಅಕ್ಕರೆಯ ಕರೆ(ಯೋಲೆ)-ಕರೆ ನೀಡಿದ. ಮೈಸೂರು ಹೊರವಲಯದ ಕೆ.ಹೆಮ್ಮನ ಹಳ್ಳಿಯಲ್ಲಿ ಅನಂತ ಹಲವು ವರ್ಷಗಳ ಹಿಂದೆ ಆಕಸ್ಮಿಕವಾಗಿ ಕಾಡುಬಿದ್ದ ಪುರಾತನ ರಚನೆಗಳನ್ನು ಕಂಡದ್ದು, ಹಳ್ಳಿಗರನ್ನು ಸಂಘಟಿಸಿ ಜೀರ್ಣೋದ್ಧಾರ ನಡೆಸಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಸರಿನಲ್ಲಿ ಕಾರ್ಯದರ್ಶಿಯಾಗಿಯೇ ನಿಂತು ನಡೆಸುತ್ತ ಬಂದಿರುವುದು ನಿಮಗೆಲ್ಲ ಗೊತ್ತೇ ಇದೆ. ಅಲ್ಲಿನ ನಾಟಕ ಒಂದಕ್ಕೆ ಹಿಂದೊಮ್ಮೆ ನಾನು ನಿಂತು, ಅರ್ಧದಲ್ಲೇ ಓಡಿ ಬಂದ ನೆನಪು ನನಗೆ ಮಾಸಿರಲಿಲ್ಲ. ಅದನ್ನು ನೆಪವಾಗಿಟ್ಟು ಅಮ್ಮನನ್ನೂ ಸೇರಿಸಿದಂತೆ ಇಷ್ಟ ಮಿತ್ರರನ್ನೂ ಭೇಟಿಯಾಗುವ ಸಂತೋಷ ಸಣ್ಣದಲ್ಲ. ಅದಕ್ಕೂ ಮಿಗಿಲಾಗಿ ಹಳ್ಳಿಗರ ಜೀವನೋತ್ಸಾಹವನ್ನು ಹೆಚ್ಚಿಸಲು, ಅವರೇ ಪಾಲ್ಗೊಳ್ಳುವ ಮಹೋತ್ಸವವನ್ನು ತನ್ನದೇ ಎಂಬಂತೆ ಆಯೋಜಿಸಿ ನಡೆಸುವ ಅನಂತನ ಉತ್ಸಾಹ ನೋಡುವಂತದ್ದೇ! ಶಿವರಾತ್ರಿಯಂದು ಹಗಲು ಸುಮಾರು ಹನ್ನೆರಡು ಗಂಟೆಗೆ ನಾನು, ದೇವಕಿ ಮೈಸೂರತ್ರಿಗೆ ಹೋದೆವು.

21 February 2014

ಗೊಡ್ಡೆಮ್ಮೆ ಪುರಾಣ

(ಮಾನಸಗಂಗೋತ್ರಿ ದಿನಗಳು ಭಾಗ ಎರಡು)

"೧೯೭೪ರಲ್ಲಿ ಅಂದರೆ ಸರೀ ನಲ್ವತ್ತು ವರ್ಷಗಳ ಹಿಂದೆ ನಾನೂ ಇಲ್ಲಿ ಈಗ ನಿಮ್ಮಂತೆಯೇ ಇದ್ದೆ ಎನ್ನುವ ಒಂದೇ ಯೋಗ್ಯತೆಯಿಂದ ಇಂದು ನಿಮ್ಮ ಮುಂದೆ ಮಾತಾಡಲು ನಿಂತಿದ್ದೇನೆ. ೧೯೭೨-೭೪ರ ಅವಧಿಯಲ್ಲಿ ನಾನು ಇಂಗ್ಲಿಷ್ ಎಂಎ ಮಾಡಿದ್ದು ಹೌದು. ಆದರೆ ನಾನು ಕಟ್ಟಿಕೊಂಡಿರುವುದು ಗೊಡ್ಡು ಎಮ್ಮೆ! ಸಣ್ಣ ತರಗತಿಗಳಲ್ಲಿದ್ದಾಗ ಉನ್ನತ ಓದು ಎಂಬ ಲಕ್ಷ್ಯ ಇರುವುದು ತಪ್ಪಲ್ಲ. ಶಾಲೆಯಲ್ಲಿ (ಬೆಂಗಳೂರು ಹೈಸ್ಕೂಲು) ಕೊನೆಯ ವರ್ಷ ಎನ್ನುವಾಗ ಏನೋ ಕೋಡು. ನನ್ನ ಕಾಲದಲ್ಲಿ ಪದವಿಪೂರ್ವ ಕಲಿಕೆ ಒಂದೇ ವರ್ಷವಿತ್ತು ಮತ್ತು ಅದು ಬೆಂಗಳೂರಿನ ಸರಕಾರೀ ಪ್ರಥಮ ದರ್ಜೆ ಕಾಲೇಜಿನ ( ಕಾಲದ ಗ್ಯಾಸ್ ಕಾಲೇಜು ಅರ್ಥಾತ್ ಗವರ್ನಮೆಂಟ್ ಸೈನ್ಸ್ ಅಂಡ್ ಆರ್ಟ್ಸ್ ಕಾಲೇಜು!) ಭಾಗವಾಗಿಯೇ ಇದ್ದುದರಿಂದ ಬಚ್ಚಾಗಳಾಗಿಯೇ ಇದ್ದೆವು! ಆದರೆ ಮೈಸೂರಿನ ಮಹಾರಾಜಾಕ್ಕೆ ಬಂದಾಗ ಕಾಲೇಜ್ ಫೈನಲ್ ಇಯರ್ ಎನ್ನುವ ಹಂತದಲ್ಲಿ ಒಂದು ಗತ್ತು,  ಕಲಿತು ಮುಗಿಯಿತು ಎನ್ನುವ ಭಾವ ತುಳುಕುತ್ತಿತ್ತು. ಅದೇ ಸ್ನಾತಕೋತ್ತರ ಕೇಂದ್ರ ಸೇರಿ ಶಿಖರ ಸಮೀಪಿಸುವಾಗ, ಅಂದರೆ ಡಬ್ಬಲ್ ಗ್ರಾಜುಯೇಟ್, ಇಡೀ ಜಗತ್ತೇ ನಮ್ಮನ್ನು ನೋಡುತ್ತಿದೆ ಎನ್ನುವ ಮನೋಸ್ಥಿತಿ ಹೆಚ್ಚು ಅಮಲಿನದು! ಆದರೆ ಅದು ಕಳೆದ ಮೇಲೆ ನಿಜ ಜೀವನರಂಗದ ಅಥವಾ ವೃತ್ತಿ ರಂಗದ ಶಿಖರಗಳು ಅನಾವರಣಗೊಳ್ಳತೊಡಗುತ್ತವೆ; ಅದುವರೆಗೆ ಗುಡ್ಡಕ್ಕೆ ಗುಡ್ಡ ಅಡ್ಡ! ವಿದ್ಯಾರ್ಥಿ ದೆಸೆಯ ಕಲಿಕೆಯೆಲ್ಲಾ ಬರಿಯ ಪ್ರವೇಶದ್ವಾರದ ಅಲಂಕಾರ. ಜೀವನದ ಹರಹಿನಲ್ಲಿ ವಿದ್ಯಾರ್ಥಿಜೀವನದ ಕಲಿಕೆ ಪುಟ್ಟ ಸಲಕರಣೆ ಮಾತ್ರ. ನೇರ ಬಳಸಿ (ಅಧ್ಯಾಪನ, ಸಂಶೋಧನೆ ಇತ್ಯಾದಿ) ಹೆಚ್ಚಿನದನ್ನು ಗಳಿಸಬಹುದು, ಬಿಟ್ಟಂತೆ ಕಂಡರೂ ಪರೋಕ್ಷ ಸಂಸ್ಕಾರದ ಬಲದಲ್ಲಿ ಯಶಸ್ವಿಯೂ ಆಗಬಹುದು. ನನ್ನ ವೃತ್ತಿ ರಂಗದ ಬಳಕೆಯಲ್ಲಿ ಎಂಎ ಇಂಗ್ಲಿಷ್ಗೆ ವಿಶೇಷ ಸ್ಥಾನವೇನೂ ಇರಲಿಲ್ಲ. ಹಾಗಾಗಿ ಇಲ್ಲಿ ಮಾತೃಸಂಸ್ಥೆಯ (ಅಲ್ಮಾಮೇಟರ್) ಮರ್ಯಾದೆಗೂ ನಾಲ್ಕು ತೊಟ್ಟು ಹಾಲು ಕೊಡದ ಗೊಡ್ಡು ಎಮ್ಮೆ. ಬಳಕೆ ತಪ್ಪಿದ ಇಂಗ್ಲಿಷಿನಲ್ಲಿ ಭಾವವಿಸ್ತರಣೆಗಿಳಿಯುವ ಬದಲು ಕನ್ನಡದಲ್ಲೇ ನಿಮ್ಮನ್ನು ಬೋರುತ್ತೇನೆ."

14 February 2014

ಮಾನಸಗಂಗೋತ್ರಿ ದಿನಗಳು

(ಭಾಗ ಒಂದು)
ಅಮ್ಮನ ಆರೈಕೆ ಎಂಬ ಪೀಠಿಕೆ

ಪ್ರಾಕೃತಿಕವಾಗಿ ನನ್ನಮ್ಮ (ಲಕ್ಷಿ ನಾ. ರಾವ್ ೧೯೩೦-) ಸದೃಢವಂತೆ, ನಿರೋಗಿ. ನನ್ನಪ್ಪನೂ (ಜಿ.ಟಿ ನಾರಾಯಣ ರಾವ್ - ೧೯೨೬-೨೦೦೮) ಸ್ವಲ್ಪ ಮಟ್ಟಿಗೆ ಹಾಗೇ - ಸದಾ ಶೀತಪ್ರವೃತ್ತಿಯೊಂದನ್ನು ಹೊರತುಪಡಿಸಿ! ಸೋರುಮೂಗು, ನಾಸಾಬಂದ್, ಕೆಮ್ಮು ಸಂಬಂಧಗಳಲ್ಲಿ ಅಪ್ಪ ಮಾಡದ ಪ್ರಯೋಗಗಳಿಲ್ಲ (ಹೊಮಿಯೋಪಥಿ, ರಾತ್ರಿ ನಿದ್ರಿಸುವ ಮುನ್ನ ಮೂಗಿಗೆ ಬಿಸಿ ತುಪ್ಪ, ಪ್ರಾಣಾಯಾಮ, ನೇತಿ, ರೇಕಿ, ಗಿಡಮೂಲಿಕೆಗಳ ಹಲವು ಬಗೆ ಮತ್ತವುಗಳ ಹಲವು ರೂಪ - ನೇರ ಸೇವನೆ, ಪರಿಷ್ಕರಣೆ, ಲೇಪನೆ ಇತ್ಯಾದಿ). ವ್ಯರ್ಥ ಕದನದ ಹತಾಶಾ ಶಿಖರದಲ್ಲಿ, ಅಂದರೆ ಸುಮಾರು ಹತ್ತು ವರ್ಷಗಳ ಹಿಂದೊಮ್ಮೆ ಅವರು ಭವರೋಗ ಧನ್ವಂತರಿಯೇ ಸರಿ ಎಂದು ನಂಬಿದ್ದ ಓರ್ವ ಯಮ.ಬಿ.ಬೀ.ಯೆಸ್ ವೈದ್ಯ ಹೆಚ್ಚುಕಮ್ಮಿ ಮರಣಾಂತಿಕವಾಗಿ ವಂಚಿಸಿದ್ದ. ಒಂದು ಕಾಲು ಗೋರಿಯೊಳಗೆ ಎಂದೇ ಹೊರಟಿದ್ದ ಅಪ್ಪನನ್ನು ನಿಜಪರಿಣತ ವೈದ್ಯರಿನ್ನೊಬ್ಬರು (ಮೈಸೂರಿನ ಬೀಯೆಮ್ಮೆಸ್ಸ್ ಆಸ್ಪತ್ರೆಯ ಡಾ| ಕುದರಿ) ಇತ್ತ ಎಳೆದು ತಂದಿದ್ದರು. ಆಗ ಸುಮಾರು ಒಂದೂವರೆ ತಿಂಗಳು ಆಸ್ಪತ್ರೆವಾಸ ಮತ್ತೆ ಮನೆಯಲ್ಲೂ ಮುಂದುವರಿದ ಅಪ್ಪನ ಆರೈಕೆಯನ್ನು ಸತಿ ಸಾವಿತ್ರಿಯಂತೇ ಮಾಡಿದವಳು ಅಮ್ಮ. ಆದರೆ ಅಪ್ಪನ ಆರೈಕೆಯಲ್ಲಿ ಸ್ವಂತದ ಪ್ರಾಯ (ಅಪ್ಪನಿಗಿಂತ ನಾಲ್ಕೇ ವರ್ಷಕ್ಕೆ ಸಣ್ಣಾಕೆ), ಅನುಪಾನ ಮತ್ತು ವಿಶ್ರಾಂತಿಗಳನ್ನು ಏರುಪೇರು ಮಾಡಿಕೊಂಡು ಬಳಲಿದ ಅಮ್ಮನಿಗೆ ಗಂಟುವಾತದ ಅನಪೇಕ್ಷಿತ ಸಂಬಂಧ ಕುದುರಿಕೊಂಡಿತು. ಅದರ ವಿವರಗಳು ಯಾವುದೇ ದೀರ್ಘ ಕಾಲೀನ ಕಾಯಿಲೆಗಳನ್ನು  ಅನುಭವಿಸುವವರದ್ದಕ್ಕಿಂತ ಭಿನ್ನವಿರಲಾರದು. ಹಾಗಾಗಿ ಅಂಥ ಅನುಭವ ಇರುವವರಿಗೆ ನಾನಿಲ್ಲಿ ಹೇಳುವ ಅಗತ್ಯವಿಲ್ಲ, ಇತರರಿಗೆ ಹೇಳಿ ಪ್ರಯೋಜನವಿಲ್ಲ! ಸುಮಾರು ಹತ್ತು ವರ್ಷಗಳ ಉದ್ದಕ್ಕೆ ಅನಪೇಕ್ಷಿತ ಅತಿಥಿಯನ್ನುಸಾಕಿಕೊಂಡು ಅಮ್ಮ ನಡೆಸಿದ ಪ್ರಯೋಗಗಳು ಅಪ್ಪನದ್ದರಂತೇ ವೈವಿಧ್ಯಮಯವಾದರೂ ಅನುಭವಿಸುತ್ತಿರುವ ನೋವು ಖಂಡಿತವಾಗಿಯೂ ತೀವ್ರ ಹಾಗೂ ದೀರ್ಘತಮ.

29 November 2013

ಕೆವಿ ಸುಬ್ಬಣ್ಣನವರ ಸ್ಮರಣೆಯೊಡನೆ ಬೆಸೆದುಕೊಂಡ ಮಹಾರಾಜಾ ಕಾಲೇಜು

[೧೯೭೫ ಡಿವಿಕೆ ಮೂರ್ತಿಯವರ ಪೂರ್ಣ ಅಭಯ ಮತ್ತು ತಂದೆ - ಜಿಟಿನಾ ಪುಸ್ತಕ ಲೋಕದೊಡನೆ ಗಳಿಸಿದ್ದ ಸದ್ಭಾವಗಳನ್ನಷ್ಟೇ ಬಂಡವಾಳವಾಗಿಟ್ಟುಕೊಂಡು (ಗಮನಿಸಿ - ಹಣವಲ್ಲ!) ನಾನು ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ತೆರೆದಿದ್ದೆ. ನನ್ನ ತಂದೆಗೆ ಗಣಿತವೇ ಮೊದಲಾಗಿ ವಿಜ್ಞಾನ ವಿಷಯಗಳು ಕಲಿಕೆ ಮತ್ತು ವೃತ್ತಿ ಅಗತ್ಯಕ್ಕೆ ರೂಢಿಸಿಕೊಂಡಿದ್ದರೂ ಅವರ ವೈವಿಧ್ಯಮಯ ಆಸಕ್ತಿಯ ಹರಹು ಸಾಹಿತ್ಯ, ಲಲಿತಕಲೆಗಳನ್ನು ಬಿಟ್ಟಿರಲಿಲ್ಲ. ನಾನು ವಿದ್ಯಾರ್ಥಿ ದೆಸೆಯಲ್ಲೇ ಗಮನಿಸಿದ್ದೆ - ನಮ್ಮ ಮನೆಗೆ ‘ಟೈಮ್ಸ್, ‘ಸೈಂಟಿಫಿಕ್ ಅಮೆರಿಕನ್ ಬಂದಂತೇ ‘ಸಾಕ್ಷಿ (ಸಂ: ಗೋಪಾಲಕೃಷ್ಣ ಅಡಿಗ, ಪ್ರ: ಕೆವಿ ಸುಬ್ಬಣ್ಣ ಅಥವಾ ಅಕ್ಷರ ಪ್ರಕಾಶನ) ಬರುತ್ತಿತ್ತು. ನಾನು ಅವನ್ನೆಲ್ಲ ಕೇವಲ ಪುಟ ಮಗುಚಿ ನೋಡುತ್ತಿದ್ದೆ, ವಿಶೇಷ ಹಚ್ಚಿಕೊಂಡದ್ದಿಲ್ಲ. ಆದರೆ ಅಂಗಡಿ ತೆರೆದಾಗ ಅದೇ ಕೆವಿ ಸುಬ್ಬಣ್ಣ ಅರ್ಥಾತ್ ಅಕ್ಷರ ಪ್ರಕಾಶನ ‘ಒಳ್ಳೆಯ ಪುಸ್ತಕದಂಗಡಿಗೆ ಅದೆಷ್ಟು ಅನಿವಾರ್ಯ ಎಂದು ತಿಳಿದುಕೊಂಡೆ. ನಾನವರಿಗೆ ನೇರ ಪತ್ರಿಸಿದೆ. ಎಲ್ಲರಲ್ಲಿ ಮಾಡಿದಂತೆ ವೈಯಕ್ತಿಕ ನಂಬಿಕೆಯ ಮೇಲೆ ಸಾಲದಲ್ಲಿ ಪುಸ್ತಕ ಕೇಳಿದ್ದೆ. ಕೇಳಿದ ಪುಸ್ತಕಗಳೆಲ್ಲ ಯಾವುದೇ ಪ್ರಕಾಶಕ ಕೊಡುವಂತೇ ಬಂತು, ಮೇಲೊಂದು ಟಿಪ್ಪಣಿ ಈ ಅರ್ಥದಲ್ಲಿ ಬಂತು: ನಿಮ್ಮ ಬಗ್ಗೆ ಡಿವಿಕೆ ಶಿಫಾರಸು ಮಾಡಿದ್ದಾರೆ. ನಿಮಗೆ ಬೇಕಾದಂತೆ ಪುಸ್ತಕ ತರಿಸಿಕೊಳ್ಳಿ, ಅನುಕೂಲವಾದಾಗ ಕಂತಿನಲ್ಲೋ ಬಿಲ್ಲು ಪ್ರಕಾರವೋ ಪಾವತಿ ಕಳಿಸಿ. (ನನ್ನ ಮೂವತ್ತಾರು ವರ್ಷಗಳ ಅನುಭವದುದ್ದಕ್ಕೆ ನಮ್ಮೊಳಗೆ ಲಕ್ಷಾಂತರ ವಹಿವಾಟು ನಡೆದಿತ್ತು; ಅವರು/ ‘ಅಕ್ಷರಪ್ರಕಾಶನ ಒಂದು ದಿನವೂ ಪಾವತಿ ಕೇಳಿದ್ದಿಲ್ಲ!) ಡಿವಿಕೆ ದೊಡ್ಡತನದ ಬಗ್ಗೆ ನನಗೆ ಹೊಸತಾಗಿ ತಿಳಿಯುವಂತದ್ದೇನಿರಲಿಲ್ಲ. ಹೀಗೆ ಅಂದೇ ಬೆಂಗಳೂರಿನ ಸಾಹಿತ್ಯ ಭಂಡಾರ ಅಥವಾ ಮ. ಗೋವಿಂದರಾಯರಿಗೂ ಸಾಲದ ಮೇಲೆ ಪುಸ್ತಕ ಕೋರಿ ಪತ್ರಿಸಿದ್ದೆ. ಅವರೂ ನಿಶ್ಶರತ್ತಾಗಿ ಪುಸ್ತಕಗಳನ್ನು ಕಳಿಸಿಕೊಟ್ಟರು. ಆದರೆ ‘ಸುಬ್ಬಣ್ಣ ನಿಮ್ಮ ಬಗ್ಗೆ ಒಳ್ಳೇ ಮಾತು ಹೇಳಿದರು ಎಂದು ಸೇರಿಸಿದ್ದು ಅಂದಿನ ನನ್ನ ಮಿತಿಯಲ್ಲಿ, ಆಶ್ಚರ್ಯವನ್ನೇ ಉಂಟು ಮಾಡಿತ್ತು. ಸುಬ್ಬಣ್ಣನವರು ತಾನು ನಂಬಿದ್ದರ ಕುರಿತು ಇನ್ನೆಲ್ಲೇ ಜಾಮೀನು ನಿಲ್ಲುವಷ್ಟು ಔದಾರ್ಯವಂತ!

22 November 2013

ನರಕದ ನೀರು ಇದು! ತುಂಬಾ ಕ್ಲೀನ್ ಇದೆ ಸಾರ್!

ಪೀಠಿಕೆ: ಮೊನ್ನೆ ಬೆಂಗಳೂರಿನಲ್ಲಿ ಸಕ್ಕರೆ ತಿಂದು, ನೀರು ಕುಡಿದಮೇಲೆ ನಾನು ದೇವಕಿ ಬೈಕೇರಿ ಮೈಸೂರಿಗೆ ಬಂದೆವು. ನನ್ನ ಮೂಲಮನೆ ಅತ್ರಿಯಲ್ಲಿ ತಾಯಿಯನ್ನು ಕಂಡು, ಎರಡು ದಿನ ವಿರಾಮದಲ್ಲಿದ್ದು ಮಂಗಳೂರಿಸುವ ಯೋಜನೆ ನಮ್ಮದು. ನೆಲವಿರುವುದೇ ನಗರ ವಿಸ್ತರಣೆಗೆಂಬಂತೆ ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣಾದಿ ಊರುಗಳು ಮೈಚಾಚುತ್ತಿವೆಯೋ ಅಥವಾ ಅವೆಲ್ಲ ಬೆಂಗಳೂರು ಮೈಸೂರುಗಳ ವಿಸ್ತರಣೆಗಳೇ ಆಗಿಹೋಗುತ್ತಿವೆಯೋ ಅರ್ಥವಾಗುವುದಿಲ್ಲಮತ್ತಲ್ಲಿನ ವಾಹನಶಿಸ್ತುಗಳನ್ನು ಹಾದು ಹೋಗುವುದು ಒಂದು ಯಜ್ಞ. ಮಾರ್ಗ ಚತುಷ್ಪಥ ಮಾಡಿದರೂ ವೇಗತಡೆಯ ದಿಬ್ಬ ನೂರೆಂಟು; ವೈಜ್ಞಾನಿಕ ರೂಪ, ಗಾತ್ರ, ಬಣ್ಣ ಒಂದಕ್ಕೂ ಇಲ್ಲದ ಕೀಲುಕಂಟಕಗಳು, ಅಸ್ಥಿತಜ್ಞರ ಮಿತ್ರರು! ಮಿನಿಟಿಗೆ ಸಾವಿರದೆಂಟು ಸಾಗುವ ವಾಹನ ಭರಾಟೆಯಲ್ಲಿ ನಾವು ಸಾವಿರದೊಂಬತ್ತನೆಯವರಾಗಿ ಮೈಸೂರು ಮತ್ತು ಸರಸ್ವತೀಪುರವನ್ನೂ ಪ್ರಾಣ, ಅಂಗಹೀನರಾಗದೆ ತಲಪುವಲ್ಲಿ ಯಶಸ್ವಿಯಾದೆವು. ಆದರೂ...

11 October 2013

ಮೋಡಿಗಾರನ ಮಹಾರಾಜಾ!


ಮೋಡಿಗಾರನ ಮಹಾರಾಜಾ!
(ಅಥವಾ ಪ್ರೊ| ಶಂಕರ್ ಕಂಡ ಮಹಾರಾಜ ಕಾಲೇಜು) (ಮಹಾರಾಜ ನೆನಪು ಭಾಗ ಆರು)

[ದೇರಾಜೆ ಮೂರ್ತಿಯ ಲೇಖನದ ಕೊನೆಯಲ್ಲಿ ನಾನು “ಇಂತಿಪ್ಪ ಮಹಾ ‘ಮೂರ್ತಿ’ಯ ಜೀವದ ಗೆಳೆಯ ಶಂಕರ್ ಯಾಕೆ ಏನೂ ಬರೆಯುತ್ತಿಲ್ಲ” ಎಂದು ನನ್ನ ಕೆಣಕನ್ನು ಸಾರ್ವಜನಿಕ ಮಾಡಿದ್ದೆ. ಉತ್ತರ ರೂಪದಲ್ಲಿ ಮೂರ್ತಿ ನನಗೆ ಬರೆದ ಪತ್ರದ ಸಾಲುಗಳನ್ನೂ ಹಾಕಿ, “ಹಣ್ಣು ಉದುರಿದರೆ, ಕಾಲಾಂತರದಲ್ಲಿ ಪ್ರಕಟಿಸುತ್ತೇನೆ” ಎಂದೇ ಮುಗಿಸಿದ್ದೆ. ಅತ್ತ ಶಂಕರ್ ಮಗ -  ತೇಜಸ್ವಿ ಉರುಫ್ ಜೂನಿಯರ್ ಶಂಕರ್ ಮತ್ತು ಅಳಿಯ - ಭಾರವಿ ದೇರಾಜೆ ಉರುಫ್ ಜೂನಿಯರ್ ಮೂರ್ತಿಗಳ ಮೂಲಕವೂ ‘ವಿಚಾರಿಸಿ’ಕೊಳ್ಳುತ್ತಲೇ ಇದ್ದೆ :) ಕಸ ಉಜ್ಜಿ ಹೂಗುಚ್ಛ ಅರಳಿಸುವ, ಜೀವಂತ ಪಾರಿವಾಳವನ್ನೇ ಹಾರಿಬಿಡುವ ಮಾಂತ್ರಿಕ ನನ್ನ ಹುಸಿ ಬೆದರಿಕೆಗಳಿಗೆ ಮನೋಹರ ನೆನಪುಗಳ ಬುತ್ತಿ ಬಿಚ್ಚಿಟ್ಟಿದ್ದಾರೆ! ಸವಿಯುವ ಸಂತೋಷ ನಿಮ್ಮದಾಗಲಿ -ಅವ]

Computer ಎಂದರೆ ನನಗೇಕೋ ಉದಾಸೀನ. ಕಲಿಯಲು ಸಾಧ್ಯ ಇಲ್ಲ ಎಂದಲ್ಲ- ‘ಬೇಡ’ಎಂಬ ಧೋರಣೆ. ಮನೆ ಮಂದಿಯಲ್ಲಿ ಒಬ್ಬನಾದರೂ ಈ ರೀತಿಯ ಅಜ್ಞಾನಿಗಳಾದಲ್ಲಿ ಮನೆಯ ವಾತಾವರಣಕ್ಕೆ ಹಿತ (ಅಹಿತ!) ಎಂಬ ಹಿತಧೋರಣೆ ನನ್ನದು. ಆದ್ದರಿಂದಲೇ ಅಶೋಕವರ್ಧನ ಮಹಾರಾಜಾ ಕಾಲೇಜಿನ ಅನುಭವ ಬರಿ... ಎಂದಾಗಲೆಲ್ಲಾ ಉದಾಸೀನ ತೋರುತ್ತಿದ್ದೆ. ಬೆನ್ನು ಬಿಡದ ಭೇತಾಳನ ಹಾಗೆ ‘ಅವ’ ಕಾಡಿದ್ದರ ಫಲ ಈ ನಾಲ್ಕು ಗೆರೆಗಳು. ಗೆಳೆಯ ಮೂರ್ತಿ ಮತ್ತು ನಾನು ಅವಳಿ ಜವಳಿಗಳಂತೆ. ಮಹಾರಾಜಾ ಕಾಲೇಜಿನವರಿಗೆ - ಹಾಸ್ಟೆಲಿನವರಿಗೆ ಹೆಚ್ಚೇಕೆ ಮಹಾರಾಣೀ ಸರ್ಕಲ್, ದಾಸಪ್ರಕಾಶ್ ಹೋಟೆಲ್‌ವರೆಗೆ.. ಎಲ್ಲಿ ಹೋಗುವಾಗಲೂ ನಾವಿಬ್ಬರೂ ಒಟ್ಟಿಗೆ. ಒಬ್ಬನಿಲ್ಲದೇ ಮತ್ತೊಬ್ಬನಿಲ್ಲ.

ಪಿ.ಯು.ಸಿ ನಂತರ ನನಗೆ ಊರು ಬಿಡಬೇಕೆಂದಿತ್ತು. ಮೂರ್ತಿಗೆ ಮೈಸೂರಿನಲ್ಲಿ ಓದಬೇಕೆಂದಿತ್ತು. ಎಲಿಮೆಂಟರಿ ಶಾಲೆಯ ದಿನಗಳಿಂದಲೂ ಮ್ಯಾಜಿಕ್ ಮಾಡುತ್ತಾ ಬೆಳೆಯುತ್ತಿದ್ದ ನಾನು ಊರಿನವರಿಗೆ ನಮ್ಮ ಸಮಾಜದವರಿಗೆ ಹಿತ್ತಿಲ ಗಿಡವಾಗಿದ್ದೆ. ಮ್ಯಾಜಿಕ್ ಎಂದರೆ “ಡೊಂಬರಾಟ” ಎಂಬ ಭಾವನೆ ಎಲ್ಲರದಾಗಿತ್ತು. ಅಲ್ಲ- ಇದೊಂದು ಸಮರ್ಥವಾದ ಕಲೆ ಎಂದು ಊರಿನವರಿಗೆ ಸಮಾಜದವರಿಗೆ ತೋರಿಸಲು ಊರಲ್ಲೇ ಇದ್ದರೆ ಸಾಧ್ಯವಿಲ್ಲ ಎಂದು ತಿಳಿದ ನಾನು ಮೂರ್ತಿ ಜತೆಗೆ ಮೈಸೂರಿಗೆ ಬಂದು ಮಹಾರಾಜಾ ಕಾಲೇಜಿಗೆ ಸೇರಿದೆ.

20 September 2013

ಟಿ.ಎಸ್ ಗೋಪಾಲ್ ಕಂಡ ಮಹಾರಾಜಾ

[ನನ್ನ ಮಹಾರಾಜಾ ಕಾಲೇಜು ನೆನಪುಗಳನ್ನು ಓದಿ, ಪ್ರತಿಕ್ರಿಯಿಸಿದವರಲ್ಲಿ ಟಿ.ಎಸ್ ಗೋಪಾಲ್ ಒಬ್ಬರು. ಇವರು ನನ್ನ ಕಾಡು-ಹುಚ್ಚಿಗೆ ಆದರ್ಶಪ್ರಾಯರಾಗಿರುವ ಕೆ.ಎಂ ಚಿಣ್ಣಪ್ಪನವರ ಆತ್ಮಕಥೆ -ಕಾಡಿನೊಳಗೊಂದು ಜೀವದ ಸಮರ್ಥ ನಿರೂಪಕರು ಎಂದಷ್ಟೇ ತಿಳಿದಿದ್ದ ನನಗೆ, ಈಗ ಸತೀರ್ಥರು (ತರಗತಿ ಲೆಕ್ಕದಲ್ಲಿ ನನಗಿಂತ ಒಂದು ವರ್ಷ ಕಿರಿಯರು) ಎಂದೂ ತಿಳಿದು ಹೆಚ್ಚಿನ ಉತ್ಸಾಹ ಬಂತು, ಒತ್ತಾಯಿಸಿದೆ. ಸಂಕೋಚದಲ್ಲೇ ಗೆಳೆಯ ಮೂರ್ತಿ ದೇರಾಜೆಯಂತೇ ನಾಲ್ಕೈದು ಕಂತುಗಳಲ್ಲಿ ನೆನಪುಗಳನ್ನು ಹಿಡಿದು ಕೊಟ್ಟಿದ್ದಾರೆ. ಅವನ್ನು ಸಂಕಲಿಸಿ, ಪ್ರಕಟಿಸುವ ಸಂತೋಷವನ್ನು ನನಗೆ ಬಿಟ್ಟಿದ್ದಾರೆ. ಹಿಂದಿನಂತೆ ಇಲ್ಲೂ ನಾನು ಸಾಂದರ್ಭಿಕ ಟಿಪ್ಪಣಿಗಳನ್ನು [-ಅವ] ಒಳಗೆ ಸೇರಿಸಿದ್ದೇನೆ - ಅಶೋಕವರ್ಧನ.]
(ಮಹಾರಾಜ ನೆನಪು ಭಾಗ ಐದು)

ನಿಜ ಹೇಳುತ್ತೇನೆ, ಶ್ರೀಯುತ ರಾಮಚಂದ್ರನ್ ಅವರು ಸಿಡಿಎನ್ ಅವರನ್ನು ಕೊಂಡಾಡಿದಷ್ಟೂ ತೀವ್ರವಾಗಿ ನಮಗೆಲ್ಲ ಹೊಟ್ಟೆಕಿಚ್ಚಾಗತೊಡಗುತ್ತದೆ. ಈ ಥರದಲ್ಲಿ ನನ್ನ ವಿದ್ಯಾರ್ಥಿ ದೆಸೆ ಯಾರಿಗೂ ಅಸೂಯೆ ಮೂಡಿಸುವುದಿಲ್ಲನನ್ನ ಓದಿನ ಅವಧಿಯಲ್ಲಿ ತುಂಬು ಹೃದಯದಿಂದ ಸ್ಮರಿಸಬಹುದಾದ ವ್ಯಕ್ತಿ, ವಿಷಯ, ಕ್ಷಣಗಳಿಗಾಗಿ ಸ್ವಲ್ಪ ತಡಕಾಡಬೇಕಾಗುತ್ತದೆ. ಸದ್ಯ, ಮಿತ್ರ ಅಶೋಕವರ್ಧನ ನನಗೆ  ಮಹಾರಾಜ ಕಾಲೇಜಿನ ನೆನಪಿನ ಬದಲಿಗೆ ಮಾನಸಗಂಗೋತ್ರಿಯ ಬಗೆಗೆ ಬರೆಯುವ ಕೆಲಸ ಒಪ್ಪಿಸಿಲ್ಲವೆಂಬುದೇ ಸಮಾಧಾನ.

30 August 2013

ದೇರಾಜೆ ಮೂರ್ತಿ ಕಂಡ ಮಹಾರಾಜಾ ಕಾಲೇಜು

ನನ್ನ ಮಹಾರಾಜಾ ಕಾಲೇಜು ನೆನಪುಗಳನ್ನು ಓದಿ, ಸಹಪಾಠಿ ಗೆಳೆಯ ಮೂರ್ತಿ ದೇರಾಜೆಗೆ ಈ ಸಲದ ನೆರೆ/ಮಳೆ-ಕಾಲದಂತೆ ಹೆದ್ದೆರೆಗಳಲ್ಲಿ ಭಾವಸ್ಫುರಣಗಳಾಗಿವೆ. ಆದರೆ ಆತ ಆವೇಶಿತನಾಗಿ ಊಊದ್ದದ ಪ್ರತಿಕ್ರಿಯೆಗಾಗಿ ಅಂತರ್ಜಾಲ ತೆರೆದು, ಚಂಡಿಯುಟ್ಟ ಗದುಗಿನ ವೀರನಾರಯಣನ ಕಿಂಕರನಂತೆ ಕೂತಾಗೆಲ್ಲಾ ವಿಟ್ಲದ ಅಂತರ್ಜಾಲ ಅಂತರ್ಲಾಗ ಹೊಡೆಯುತ್ತಿತ್ತಂತೆ. ನನಗೆ ದೂರು-ವಾಣಿಸಿದರು. ಅದು ಬಿಡಿ, ಲಹರಿಗೆ ಬಂದೆಲ್ಲವನ್ನೂ ಅಲಾಯದ ಕುಟ್ಟಿ, ಜಾಲ ಸಿಕ್ಕಾಗ ನನಗೆ ಮಿಂಚಂಚೆ ಮಾಡಿಬಿಡಿ. ಟಿಪ್ಪಣಿಗಳನ್ನು ಲೇಖನದ ರೂಪಕ್ಕೆ ಕಟ್ಟುವ ಕೆಲಸ ನನಗಿರಲಿ ಎಂದದ್ದಕ್ಕೆ ಒಪ್ಪಿ ಐದಾರು ಕಂತುಗಳಲ್ಲಿ ಕೊಟ್ಟಿದ್ದಾರೆ ನೋಡಿ. ಇಲ್ಲಿ ನನ್ನ ಸಾಂದರ್ಭಿಕ ಟಿಪ್ಪಣಿಗಳನ್ನು
[-ಅವ] ಒಳಗೆ ಸೇರಿಸಿದ್ದೇನೆ - ಅಶೋಕವರ್ಧನ.
ಇನ್ನು ಅಂಬಿಗ - ದೇರಾಜೆ ಮೂರ್ತಿ, ಯಾನ ಸುಖ ನಿಮ್ಮದು
(ಮಹಾರಾಜ ನೆನಪು ಭಾಗ ನಾಲ್ಕು)

16 August 2013

ಸೀಯೆನ್ನಾರ್ ಕಂಡ ಮಹಾರಾಜಾ ಕಾಲೇಜು

ಮೊನ್ನೆ ಮಾರ್ಚ್ ತಿಂಗಳಲ್ಲಿ ನಾವು (ದೇವಕಿ ಸಹಿತ) ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಬೇಕಿದ್ದವರು ಎರಡು ದಿನ ಮುಂಚಿತವಾಗಿಯೇ ಹೋದದ್ದು - ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥೆ - ‘ನೆರಳುಗಳ ಬೆನ್ನು ಹತ್ತಿ’ ಮತ್ತು ಪ್ರೊ| ಬಿ.ಎ. ವಿವೇಕ ರೈ ಸಂಪಾದಕತ್ವದಲ್ಲಿ ಸಿಎನ್ನಾರ್ ಅವರಿಗೆ ಕೊಡಲಿದ್ದ ಅರ್ಥಪೂರ್ಣ ಸಂಭಾವನಾ ಗ್ರಂಥ - ‘ರೂಪಾಂತರ’ಗಳ ಲೋಕಾರ್ಪಣದಲ್ಲಿ ಹಾಜರಿರುವ ಸಂತೋಷಕ್ಕಾಗಿ. (ಸಿಎನ್ನಾರ್ ಕುರಿತಂತೆ ನಾನು ಹೊಸತೇನೂ ಹೇಳಬೇಕಿಲ್ಲ. ಪ್ರಾಸಂಗಿಕವಾಗಿ ಎರಡು ವರ್ಷಗಳ ಹಿಂದೆಯೇ ಹೇಳಿದ್ದನ್ನು ಓದಲು ಇಲ್ಲಿ ಚಿಟಿಕೆ ಹೊಡೆಯಿರಿ).  ಅಲ್ಲಿ ಅಂದಿನ ಅತಿ ಗಣ್ಯ ವ್ಯಕ್ತಿ ಸಿಎನ್ನಾರ್ ಸಪತ್ನೀಕರಾಗಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಅಂಗಳದಲ್ಲಿ ನಿಂತುಕೊಂಡು ಬಂದವರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದ್ದ ಪರಿ ನಮ್ಮ ಸಂತೋಷವನ್ನು ಇಮ್ಮಡಿಸಿತು. ಸೀಎನ್ನಾರ್ ಪುಸ್ತಕದ ಮುನ್ನುಡಿಯಲ್ಲಿ “ಇದು ಕೇವಲ ನನ್ನೊಬ್ಬನ ಕಥೆಯಾಗಲು ಸಾಧ್ಯವಿಲ್ಲ” ಎಂದಿರುವುದು ಮಾತಿನ ಅಲಂಕಾರಕ್ಕಾಗಿ ಅಲ್ಲ ಎನ್ನುವಂತೆಯೇ ಇತ್ತು ಅವರ ನಡೆ. ಸಭೆಯಲ್ಲಿ ಆತ್ಮೀಯ ಗೆಳೆಯನಾಗಿ ವಿವೇಕ ರೈ, ಅಭಿಮಾನಿಯಾಗಿ ಚಂದ್ರಶೇಖರ ಕಂಬಾರ ಮತ್ತು ಕುಂ. ವೀರಭದ್ರಪ್ಪ, ಅಭಿನಂದನಕಾರರಾಗಿ ಟಿ.ಪಿ. ಅಶೋಕ ಮತ್ತು ಪುರುಷೋತ್ತಮ ಬಿಳಿಮಲೆ, ಶಿಷ್ಯನಾಗಿ ರವಿ ಭಟ್, ಪ್ರಕಾಶಕನಾಗಿ ‘ಅಂಕಿತ’ದ ಪ್ರಕಾಶ ಕಂಬತ್ತಳ್ಳಿ ಪ್ರತ್ಯೇಕ ಪ್ರತ್ಯೇಕವಾಗಿ ಸೀಎನ್ನಾರ್ ಕುರಿತಂತೆ ಹಾರ್ದಿಕವಾಗಿಯೇ ಮಾತಾಡಿದರು. ಪೂರ್ವರಂಗದಲ್ಲಿ ಸಿಎನ್ನಾರ್ ಅವರ ಓರ್ವ ಮೊಮ್ಮಗಳು ಹಾಡಿದರೆ, ಇನ್ನೋರ್ವಳು ಮೃದಂಗ ಪಕ್ಕವಾದ್ಯ ಕೊಟ್ಟದ್ದೂ ಭಾವಪೂರ್ಣವಾಗಿತ್ತು. ಕೊನೆಯಲ್ಲಿ ಕೃತಜ್ಞತಾಭಾರದಲ್ಲಿ ಬಾಗಿದ ಸೀಎನ್ನಾರ್ ಅವರ ಹೃದಯ ತುಂಬಿದ ಮಾತುಗಳಿಗೆ ನಾನು ದುರ್ಬಲ ಅರ್ಥ ಕಟ್ಟುವುದಕ್ಕಿಂತ ನೀವೇ ಕಂಡು, ಕೇಳಿನೋಡಿ.

09 August 2013

ಮೈಸೂರು - ನೆನಪುಗಳ ಸರಮಾಲೆ

(ಮಹಾರಾಜ ನೆನಪು ಭಾಗ ಎರಡು)

ಮಹಾರಾಜಾ ಕಾಲೇಜಿನ ಒಳಾಂಗಣದಲ್ಲಿದ್ದೆವಲ್ಲಾ? ಇಲ್ಲಿ ಎರಡೂ ಮಗ್ಗುಲಿನಲ್ಲಿ ಒಳಚಾಚಿಕೊಂಡ ಕಟ್ಟಡ ಸಾಲಿನ ಕೊನೆಯಲ್ಲಿ ಎರಡು ಭಾರೀ ಕೊಠಡಿಗಳಿದ್ದಾವೆ. ಇವು ಜೂನಿಯರ್ ಮತ್ತು ಸೀನಿಯರ್ ಬೀಯೇ ಹಾಲೆಂದೇ ಪ್ರಸಿದ್ಧ. ಇವುಗಳ ಒಳಗೆ ಹಿಂದಕ್ಕೆ ಮಜಲುಗಳಲ್ಲಿ ಏರುತ್ತ ಹೋಗುವ ಆಸನ ವ್ಯವಸ್ಥೆಯಿದೆ. ಆ ಹಲಗೆ ನೆಲದ ಮೇಲೆ ನರಪೇತಲ ನಾರಾಯಣನಿಗೂ ನಡೆಯುವಾಗ ವಿಶೇಷ ಗತ್ತು ಬರುವುದಿದೆ! ಕಾಲೇಜಿನಲ್ಲಿ ಎನ್ಸಿಸಿ ಕವಾಯತು ಇದ್ದ ದಿನಗಳಲ್ಲಿ, ಮಾಮೂಲಿನಂತೆ ಬೂಟಿನ ಭಾರಕ್ಕೆ ಹೆಜ್ಜೆ ಎಳೆಯುವ ಕಡ್ಡೀಪೈಲ್ವಾನನೂ ಇಲ್ಲಿ ಮಾತ್ರ ಹಿಮ್ಮಡಿ ಗುದ್ದಿ, ಲಾಳದಡಿಯಲ್ಲಿ ಮರಳ ಕಣಗಳನ್ನು ಞರಕಿಸುವ ಚಂದ ನೋಡಬೇಕು! ಇಲ್ಲಿ ದೊಡ್ಡ ತರಗತಿಗಳು ಮಾತ್ರವಲ್ಲ ವಿಶೇಷ ಭಾಷಣಗಳೂ ನಡೆಯುವುದಿತ್ತು. ಮೊನ್ನೆಯಹೀಗೇ ನಡಿಗೆಯಲ್ಲಿ, ಅಂದರೆ ನಾಲ್ಕು ದಶಕಗಳ ಮೇಲೆ ಆ ಕೊಠಡಿಗಳ ಚಿತ್ರ ಸಂಗ್ರಹಿಸುವ ಬಯಕೆಯಲ್ಲಿ ಆ ತುದಿಗೆ ನಡೆದಿದ್ದೆ. ಆದರೆ ಎರಡೂ ಹಾಲ್ಗಳಲ್ಲಿ ಏನೋ ಪರೀಕ್ಷೆ ನಡೆಯುತ್ತಿದ್ದುದರಿಂದ ನನಗೆ ಅವಕಾಶ ಒದಗಲಿಲ್ಲ. ಅಲ್ಲಿಂದ ಮರಳುವಾಗ ಪಕ್ಕದ ಓಣಿಯಲ್ಲಿ ಮತ್ತೆರಡು ನೆನಪಿನೆಳೆಗಳು ನನ್ನನ್ನು ಜಗ್ಗಿದವು.

02 August 2013

ಮಹಾರಾಜಾ ಕಾಲೇಜು ನೆನಪಿನ ದೋಣಿಯಲೀ...

“ನಮ್ಮಯ ಕಾಲೇಜೂ ಮಹರಜ ಕಾಲೇಜೂ
ಕುವೆಂಪು ಶ್ರೀಗಳಂಥಾ ಕವಿಗಳಿದ್ದ ಕಾಲೇಜೂಊಊಊ ...” (ಮಹಾರಾಜ ನೆನಪು ಮೊದಲ ಭಾಗ)

ಎಡಗಿವಿಯ ಮೇಲೆ ಕೈ ಇಟ್ಟು, ಬಲಗೈಯಲ್ಲಿ ಆಕಾಶ ತಿವಿದು, ಅರವತ್ತು-ಎಪ್ಪತ್ತರ ದಶಕದ ಸಿನಿಮಾಗಳ ಭಕ್ತಿಗಾನದ ಶೈಲಿಯಲ್ಲಿ (“ಶಿವಪ್ಪಾಆಆ ಕಾಯೋತಂದೇ” ಇಷ್ಟೈಲ್ ಅನ್ನಿ ಬೇಕಾದರೆ) ಮಾದೂ ನಾಭಿಯಿಂದಲೂ ಆಚಿನಿಂದ ರಾಗ ಎಳೆಯುತ್ತಿದ್ದರೆ ತರ್ಕಾತೀತವಾಗಿ ಮೊದ ಮೊದಲು ಸಹಪಾಠಿಗಳಾದ ನಮಗೆ (ವಿದ್ಯಾರ್ಥಿಗಳಿಗೆ) ರೋಮಾಂಚನವಾಗುತ್ತಿತ್ತು. ಅದೇನೋ (ಮೈಸೂರು) ಮಹಾರಾಜಾ ಕಾಲೇಜಿನ ಅಘೋಷಿತ ರಾಷ್ಠ್ರಗೀತೆಯಂತೆ ಯಾವುದೇ ಮಹತ್ತಿನ ಕಾರ್ಯಕ್ರಮಗಳಲ್ಲಿ ಮರುಕಳಿಸುತ್ತಲೇ ಇತ್ತು. ಭಾವಗೀತ ಸ್ಪರ್ಧೆಗಳಲ್ಲಿ, ಸಮೂಹಗಾನ ಸ್ಪರ್ಧೆಗಳಲ್ಲಿ ನಾನಿದ್ದ ಆ ಮೂರೂ ವರ್ಷಗಳಲ್ಲಿ (೧೯೬೯-೭೨)  ಮತ್ತೆ ಮತ್ತೆ ಅನುರಣಿಸುತ್ತಿತ್ತು. ಆ ಸಾಹಿತ್ಯ-ರಾಗಗಳ ಅಧಿಕ ಪ್ರಾಶನದಿಂದ ಮುಂದೆ ಕಾಲೇಜಿನಲ್ಲಿ ಸಣ್ಣಪುಟ್ಟ ಗೊಂದಲಗಳಿಗೆ ದೀರ್ಘ ಗಂಟಾನಾದವಾದಾಗ ನಮ್ಮ ಅಣಕವಾಡಿನಲ್ಲೂ ‘ಮಹಾ ರಜ ಕಾಲೇಜೂ’ ನರಳಾಡುತ್ತಿತ್ತು! ಆದರೆ ಅನುಭವ ಮಾಗಿದಂತೆ, ಯಾವುದೇ ಸಂಸ್ಥೆಯ ಮಹತ್ತು ಕಟ್ಟಡ, ಸವಲತ್ತು, ಹೆಚ್ಚೇಕೆ ಇತಿಹಾಸದಿಂದಲೂ ವರ್ಧಿಸುವುದಿಲ್ಲ. ಅಂದಂದಿನ ಉಪಯುಕ್ತತೆ, ಅದಕ್ಕೊದಗುವ ವ್ಯಕ್ತಿ ಮತ್ತು ಚಟುವಟಿಕೆಗಳಲ್ಲಿ ಮಾತ್ರ ಇದೆ ಎಂದು ಸ್ಪಷ್ಟವಾಗುತ್ತ ಹೋಯಿತು. ಹಾಗಾಗಿ ಕಳೆದ ಸುಮಾರು ನಾಲ್ಕು ದಶಕಗಳ ಕಾಲ ನನ್ನ ಕೌಟುಂಬಿಕ ಅಗತ್ಯಗಳಿಗಾಗಿ ನಾನು ಎಷ್ಟೂ ಮೈಸೂರು ಕಂಡಿರಬಹುದಾದರೂ ಕಾಲೇಜಿನ ಪೌಳಿಯ ಹೊರಗಿನ ದಾರಿಗಳಲ್ಲಿ ಎಷ್ಟೂ ಓಡಾಡಿರಬಹುದಾದರೂ ಒಳಗೆ ನುಗ್ಗಿ ನೋಡುವ ಬಯಕೆ ಬಂದದ್ದೇ ಇಲ್ಲ. ವೃತ್ತಿರಂಗದಿಂದ ನಿವೃತ್ತಿಯೊಡನೆ ಮೊನ್ನೆ ಮೈಸೂರಿನಲ್ಲಿದ್ದಾಗ, ತುಸು ಬಿಡುವೂ ಸಿಕ್ಕಾಗ, ‘ಪೂರ್ವಾಶ್ರಮ’ದ ಕ್ಷೇತ್ರವನ್ನು ಸುಮ್ಮನೆ ‘ವಾಕಿಂಗಿನ’ ಅಂಗವಾಗಿ ಸುತ್ತು ಹಾಕಿದೆ.

13 December 2009

ಇನ್ನು ಬರುವುದಿಲ್ಲ ಡೀವೀಕೇ

ಡಿವಿಕೆ ಮೂರ್ತಿ ಬೀಯೇ ಆನರ್ಸಿನಲ್ಲಿ (ಅರ್ಥಶಾಸ್ತ್ರ) ಸ್ವರ್ಣಪದಕ ಗಳಿಸಿ, ಅಧ್ಯಾಪನ ಮತ್ತು ಸಂಶೋಧನ ಅವಕಾಶಗಳು ಕೈಬೀಸಿ ಕರೆಯುತ್ತಿದ್ದಾಗ, ಸ್ವಇಚ್ಛೆಯಿಂದ ಅವನ್ನೆಲ್ಲ ನಿರಾಕರಿಸಿ, ಸ್ಪಷ್ಟ ವಿಚಾರದೊಡನೆ ಪುಸ್ತಕ ಲೋಕಕ್ಕೆ ಕಾಲಿಟ್ಟವರು. ಇವರು ನನ್ನಲ್ಲೇನು ಕಂಡರೋ ಬಿಟ್ಟರೋ ನನ್ನನ್ನೂ ಪುಸ್ತಕಲೋಕಕ್ಕೆ ತಂದರು. ಪ್ರಥಮ ಎಂಎ ಬೇಸಗೆ ರಜೆಯಲ್ಲಿ (೧೯೭೩) ಊರು ಸುತ್ತ ಹೊರಟವನಿಗೆ ಪುಸ್ತಕದ ಗಂಟಿನ ಅಂಟು ಹಾಕಿ, ಮುಂಬೈಯ ನಂಟು ಬೆಳೆಸಿಕೊಟ್ಟರು. ಹಸಿದವನಿಗೆ ಅನ್ನ ಕೊಡುವುದಿರಲಿ, ಅನ್ನ ಗಳಿಸುವ ಮಾರ್ಗವನ್ನೇ ಕಲಿಸಿಬಿಟ್ಟವರಿವರು. ನನಗೊಬ್ಬನಿಗೇಂತ ಅಲ್ಲ, ತನಗೆ ಸಹಜವಾಗಿ ಸ್ಫುರಿಸಿದ್ದನ್ನು (ಪುಸ್ತಕೋದ್ಯಮ) ಸಂಪರ್ಕಕ್ಕೆ ಬಂದವರ ಒಲವು ಗುರುತಿಸಿ ಹೇಳಿಕೊಟ್ಟರು, ಎಷ್ಟು ಕಾಲಕ್ಕೂ ಬಲವಾಗಿ ಬೆಂಬಲಿಸಿದರು. ಏಕಸ್ವಾಮ್ಯ, ವೃತ್ತಿ ಮಾತ್ಸರ್ಯ, ಅನಾರೋಗ್ಯಕರ ಸ್ಪರ್ಧಾಮನೋಭಾವ, ಅನುದಾರತೆ ಮುಂತಾದ ಶಬ್ದಗಳು ಡಿವಿಕೆ ಶಬ್ದಕೋಶದಲ್ಲೇ ಇರಲಿಲ್ಲ! ಈ ಕೆಲಸ ಇವರು ನನಗಿಂತಲೂ ಮೊದಲು ಹಲವರಿಗೆ ಮಾಡಿದ್ದರು. ನನ್ನನಂತರವೂ ಇನ್ನಷ್ಟು ಮಂದಿಗೆ ಮಾಡುತ್ತಲೇ ಇದ್ದರು. ಆದರೆ ಕನ್ನಡಮ್ಮನ ಸೇನೆಗೆ ತಾನೆಷ್ಟು ಹುರಿಯಾಳುಗಳನ್ನು ಸಜ್ಜುಗೊಳಿಸಿದೆನೆಂದು ಲೆಕ್ಕ, ಜಾಹೀರಾತು ಕೊಟ್ಟು ಪರೋಕ್ಷ ಲಾಭಗಳು ಬಿಡಿ, ಕನಿಷ್ಠ ಉಪಕೃತರ ಕೃತಜ್ಞತಾರ್ಪಣೆಗೂ ಅವಕಾಶ ಕೊಟ್ಟವರಲ್ಲ ಡಿವಿಕೆ!