Showing posts with label ರಾಮಚಂದ್ರನ್ ಸಿ.ಎನ್. Show all posts
Showing posts with label ರಾಮಚಂದ್ರನ್ ಸಿ.ಎನ್. Show all posts

16 August 2013

ಸೀಯೆನ್ನಾರ್ ಕಂಡ ಮಹಾರಾಜಾ ಕಾಲೇಜು

ಮೊನ್ನೆ ಮಾರ್ಚ್ ತಿಂಗಳಲ್ಲಿ ನಾವು (ದೇವಕಿ ಸಹಿತ) ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಬೇಕಿದ್ದವರು ಎರಡು ದಿನ ಮುಂಚಿತವಾಗಿಯೇ ಹೋದದ್ದು - ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥೆ - ‘ನೆರಳುಗಳ ಬೆನ್ನು ಹತ್ತಿ’ ಮತ್ತು ಪ್ರೊ| ಬಿ.ಎ. ವಿವೇಕ ರೈ ಸಂಪಾದಕತ್ವದಲ್ಲಿ ಸಿಎನ್ನಾರ್ ಅವರಿಗೆ ಕೊಡಲಿದ್ದ ಅರ್ಥಪೂರ್ಣ ಸಂಭಾವನಾ ಗ್ರಂಥ - ‘ರೂಪಾಂತರ’ಗಳ ಲೋಕಾರ್ಪಣದಲ್ಲಿ ಹಾಜರಿರುವ ಸಂತೋಷಕ್ಕಾಗಿ. (ಸಿಎನ್ನಾರ್ ಕುರಿತಂತೆ ನಾನು ಹೊಸತೇನೂ ಹೇಳಬೇಕಿಲ್ಲ. ಪ್ರಾಸಂಗಿಕವಾಗಿ ಎರಡು ವರ್ಷಗಳ ಹಿಂದೆಯೇ ಹೇಳಿದ್ದನ್ನು ಓದಲು ಇಲ್ಲಿ ಚಿಟಿಕೆ ಹೊಡೆಯಿರಿ).  ಅಲ್ಲಿ ಅಂದಿನ ಅತಿ ಗಣ್ಯ ವ್ಯಕ್ತಿ ಸಿಎನ್ನಾರ್ ಸಪತ್ನೀಕರಾಗಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಅಂಗಳದಲ್ಲಿ ನಿಂತುಕೊಂಡು ಬಂದವರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದ್ದ ಪರಿ ನಮ್ಮ ಸಂತೋಷವನ್ನು ಇಮ್ಮಡಿಸಿತು. ಸೀಎನ್ನಾರ್ ಪುಸ್ತಕದ ಮುನ್ನುಡಿಯಲ್ಲಿ “ಇದು ಕೇವಲ ನನ್ನೊಬ್ಬನ ಕಥೆಯಾಗಲು ಸಾಧ್ಯವಿಲ್ಲ” ಎಂದಿರುವುದು ಮಾತಿನ ಅಲಂಕಾರಕ್ಕಾಗಿ ಅಲ್ಲ ಎನ್ನುವಂತೆಯೇ ಇತ್ತು ಅವರ ನಡೆ. ಸಭೆಯಲ್ಲಿ ಆತ್ಮೀಯ ಗೆಳೆಯನಾಗಿ ವಿವೇಕ ರೈ, ಅಭಿಮಾನಿಯಾಗಿ ಚಂದ್ರಶೇಖರ ಕಂಬಾರ ಮತ್ತು ಕುಂ. ವೀರಭದ್ರಪ್ಪ, ಅಭಿನಂದನಕಾರರಾಗಿ ಟಿ.ಪಿ. ಅಶೋಕ ಮತ್ತು ಪುರುಷೋತ್ತಮ ಬಿಳಿಮಲೆ, ಶಿಷ್ಯನಾಗಿ ರವಿ ಭಟ್, ಪ್ರಕಾಶಕನಾಗಿ ‘ಅಂಕಿತ’ದ ಪ್ರಕಾಶ ಕಂಬತ್ತಳ್ಳಿ ಪ್ರತ್ಯೇಕ ಪ್ರತ್ಯೇಕವಾಗಿ ಸೀಎನ್ನಾರ್ ಕುರಿತಂತೆ ಹಾರ್ದಿಕವಾಗಿಯೇ ಮಾತಾಡಿದರು. ಪೂರ್ವರಂಗದಲ್ಲಿ ಸಿಎನ್ನಾರ್ ಅವರ ಓರ್ವ ಮೊಮ್ಮಗಳು ಹಾಡಿದರೆ, ಇನ್ನೋರ್ವಳು ಮೃದಂಗ ಪಕ್ಕವಾದ್ಯ ಕೊಟ್ಟದ್ದೂ ಭಾವಪೂರ್ಣವಾಗಿತ್ತು. ಕೊನೆಯಲ್ಲಿ ಕೃತಜ್ಞತಾಭಾರದಲ್ಲಿ ಬಾಗಿದ ಸೀಎನ್ನಾರ್ ಅವರ ಹೃದಯ ತುಂಬಿದ ಮಾತುಗಳಿಗೆ ನಾನು ದುರ್ಬಲ ಅರ್ಥ ಕಟ್ಟುವುದಕ್ಕಿಂತ ನೀವೇ ಕಂಡು, ಕೇಳಿನೋಡಿ.