Showing posts with label ಬಿಸಿಲೆ. Show all posts
Showing posts with label ಬಿಸಿಲೆ. Show all posts

11 April 2022

ಸಸ್ಯ ತಪಸ್ವಿ ಗೋಪಾಲಕೃಷ್ಣ ಭಟ್


ಒಂದು ಪುಸ್ತಕ, ಒಂದು ನಮನ



ಡಾ| ಕಾಕುಂಜೆ ಗೋಪಾಲಕೃಷ್ಣ ಭಟ್ಟರ (ಕೆ.ಜಿ ಭಟ್) ಸಹಜ ಹಸನ್ಮುಖವನ್ನು ಹೊತ್ತ, ಹೊಳಪುಳ್ಳ ಉತ್ತಮ ಕಾಗದದ ನೂರಾ ಹದಿನಾರು ಪುಟಗಳ, ಅಸಂಖ್ಯ ಚಿತ್ರಗಳ ಪುಸ್ತಕ - ಟ್ಯಾಕ್ಸೋನೊಮಿ ಭಟ್ಟರ ಯಾನ. ನಿಜ ‘ಎಲೆಗಳ ಹಿಂದೆ’ ಬೀಳುವ ಗೀಳಿನ ಭಟ್ಟರ ವ್ಯಕ್ತಿತ್ವ ಸಾಮಾನ್ಯ ಲೋಕಮುಖಕ್ಕೆ, ಲೋಕೋಕ್ತಿಯಂತೆ ಎಲೆಯ ಮರೆಯಲ್ಲೇ ಉಳಿದಿತ್ತು. ಆ ಕೊರತೆಯನ್ನು ಕಿರಿದರಲ್ಲಿ ನೀಗಿಸುವ ಪ್ರಾಮಾಣಿಕ ಪ್ರಯತ್ನ ಈ ಪುಸ್ತಕ. ಗೋಪಾಲಕೃಷ್ಣ ಭಟ್ಟರು ಸ್ವಪ್ರಚಾರ ಬಿಡಿ, ಅವಶ್ಯವಿದ್ದಲ್ಲಿ ಯುಕ್ತ ಸ್ವಸ್ಥಾಪನೆಯನ್ನೂ ದೋಷ ಎನ್ನುವಂತೆಯೇ ನಿರಾಕರಿಸಿದ ನಿರ್ಮೋಹಿ. ಪುಸ್ತಕದ ಮುನ್ನುಡಿಕಾರ, ಪ್ರಕಾಶಕ - ಎನ್ ರಾಮನಾಥ್, ಒತ್ತು ಕೊಟ್ಟು

21 January 2022

ಡಾ| ಕೃಷ್ಣಮೋಹನ ಪ್ರಭು ಇನ್ನಿಲ್ಲ

(ಈ ಬರಹದ ಮೊದಲ ಪ್ರತಿಯನ್ನು ಐದು ಕಂತುಗಳ ಧಾರಾವಾಹಿಯಾಗಿ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದೆ. ಇಲ್ಲಿ ಅವನ್ನು ಪರಿಷ್ಕರಿಸಿ ಸಂಕಲಿಸಿದ್ದೇನೆ. ಫೇಸ್ ಬುಕ್ಕಿನಲ್ಲಿ ವಿಷಾದ ವ್ಯಕ್ತಪಡಿಸಿದವರು, ತಮ್ಮ ವಲಯದ ಇನ್ನಷ್ಟು ಮಂದಿಗೆ ಮುಟ್ಟಿಸಿದವರು ನೂರಾರು. ಅಲ್ಲಿ ಬಂದ ಕೆಲವು ವಿಷಯಕ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರತಿಕ್ರಿಯಾ ಅಂಕಣದಲ್ಲಿ ಸೇರಿಸಿಕೊಳ್ಳುತ್ತಿದ್ದೇನೆ. ಹಾಗೇ ಸುದೀರ್ಘ ಟಿಪ್ಪಣಿಯನ್ನೇ ಕೊಟ್ಟ ‘ಪವಾಡ ವಿರೋಧಿ’ ನರೇಂದ್ರ ನಾಯಕ್ ಮತ್ತು ಹಿರಿಯ ವೈದ್ಯ ಮಿತ್ರ ಶ್ರೀನಿವಾಸ ಕಕ್ಕಿಲ್ಲಾಯರ ಬರಹಗಳನ್ನು, ಅವರ ಅನುಮತಿಯೊಡನೆ ಇದಕ್ಕೆ ಅನುಬಂಧಗಳಾಗಿ ಬಳಸಿಕೊಂಡಿದ್ದೇನೆ)


ಕೃಶಿ ತೊರೆ ಬತ್ತಿಹೋಯ್ತು

ಮಲೇಶ್ಯಾದಿಂದ ವೈದ್ಯಕೀಯ ಓದಿಗಾಗಿ ಅಸಂಖ್ಯ ವಿದ್ಯಾರ್ಥಿಗಳು ಮಂಗಳೂರು, ಮಣಿಪಾಲಕ್ಕೆ ಬರುತ್ತಿದ್ದ ಕಾಲವದು (ಸುಮಾರು ೧೯೮೪). ಆ ಬಳಗದ್ದೇ ಇದೊಂದು ಕುಡಿ ಎಂದೇ ನಾನೋರ್ವ ಧಡೂತಿ ತರುಣನನ್ನು ಭಾವಿಸಿದ್ದೆ. ಆದರೆ ಒಮ್ಮೆ ನಾನು ಇನ್ಯಾರದೋ ಜತೆ ಕನ್ನಡದಲ್ಲಿ ಮಾತಾಡುತ್ತಿದ್ದಾಗ, ಅಲ್ಲೇ ಇದ್ದ ಈತ ಅರ್ಥಪೂರ್ಣ ನಗೆ ಕೊಟ್ಟ! ಆಗ ತಿಳಿಯಿತು, ಈತ ಅಪ್ಪಟ ಕನ್ನಡಿಗ - ಸಮೀಪದ ಮೂಡಬಿದ್ರೆಯ ಕೃಷ್ಣಮೋಹನ ಪ್ರಭು; ಮಿತ್ರವಲಯಕ್ಕೆ ಕೃಶಿ. ಮುಂದೆ ನನ್ನ ಮಾತಿನ ಚಪಲಕ್ಕೋ, ಕೃಶಿಯದೇ ಮಿತಿಯರಿಯದ ಕುತೂಹಲಕ್ಕೋ ನಮ್ಮೊಳಗೆ ಅಪೂರ್ವ ಗೆಳೆತನದ ಬಂಧ ಏರ್ಪಟ್ಟಿತ್ತು. ಮತ್ತದು ಸುಮಾರು ಮೂವತ್ತೇಳು ವರ್ಷಗಳ ಉದ್ದಕ್ಕೆ ದೃಢವಾಗಿ ಬೆಳೆದಿತ್ತು. ಆದರೆ ಈಚೆಗೆ (೧೧-೧-೨೦೨೨) ತೀರಾ ಅನಿರೀಕ್ಷಿತವಾಗಿ, ಅಕಾಲಿಕವಾಗಿ ಮತ್ತು ಯಾವತ್ತಿಗೂ ಕಡಿದು ಹೋಯ್ತು; ಕೃಶಿ ಇನ್ನಿಲ್ಲ!

29 April 2021

ಮುಕ್ಕಾಂ ಕಪ್ಪೆಗೂಡು

೧. ಬಳಸು ದಾರಿಯಲ್ಲಿ


‘ಏಪ್ರಿಲ್ ೧೬ರಿಂದ ಜೂನ್ ೧ರವರೆಗೆ ಬಿಸಿಲೆ ದಾರಿ ಬಂದ್’ ಹಾಸನ ಜಿಲ್ಲಾಧಿಕಾರಿ ಪ್ರಕಟಣೆ ಬಂತು. ಗಡಿಬಿಡಿಯಾಗಬೇಡಿ, ಇದು ಕೋವಿಡ್ ಸಂಬಂಧಿಯಲ್ಲ. ನಾನೇ ಹಿಂದೆ ಹೇಳಿದ್ದ ಕುಳ್ಕುಂದ - ಬಿಸಿಲೆ ನಡುವೆ ಬಾಕಿಯುಳಿದಿದ್ದ ಮೂರು ಕಿಮೀ ಕಾಂಕ್ರಿಟೀಕರಣ ಪೂರೈಕೆಗೆ. ಆದರೆ ಆರಂಭಕ್ಕೆ ತಡ, ಮುಕ್ತಾಯ ಎಂದೂ ಇಲ್ಲ ಎನ್ನುವ ನಮ್ಮ ಸರಕಾರೀ ಕಾಮಗಾರಿಗಳು ನಂಬಲರ್ಹವಲ್ಲ. ಹಾಗಾಗಿ ನಾನು ಬಿಸಿಲೆ ಗಣೇಶರಲ್ಲಿ ಚರವಾಣಿಸಿ ಕೇಳಿದೆ. "ಅಯ್ಯೋ ಮೂರು ಕಿಮೀ

ಕಾಂಕ್ರೀಟಿಗೆ ಒಂದೂವರೆ ತಿಂಗಳು ಎಲ್ ಸಾಲುತ್ತೇ? ಹಂಗಾಗಿ ಎಂಟು ದಿನ ಮೊದಲೇ ರೋಡ್ ಕ್ಲೋಸ್ ಮಾಡಿ, ಕೆಲಸ ಜೋರಾಗಿ ನಡೆದಿದೆ..." ಎಂದರು.

‘ಕಪ್ಪೇಗೂಡಿ’ಗೆ ಮೇಲ್ಟಾಂಕಿ ಕೂರಿಸಿ ಬಂದ ಮೇಲೆ ನಾನು ಅತ್ತ ತಲೆ ಹಾಕಿರಲಿಲ್ಲ. ಬಾಕಿಯುಳಿದ ಚಿಲ್ಲರೆ ಕೆಲಸ ಸೇರಿಸಿಕೊಂಡು, ಬಳಸು ದಾರಿಯಲ್ಲಿ ಅಶೋಕವನಕ್ಕೆ ಹೋಗುವ, ಮೂರು ದಿನದ ಮೊಕ್ಕಾಂ ಮಾಡುವ ಯೋಜನೆ ಹಾಕಿದೆ. ಹಿಂದಾದರೋ

27 February 2021

ಕಾಡಿನೊಳಗೊಂದು ಮನೆಯ ಮಾಡೀ ......

[ಕಗ್ಗಾಡಿನ ನಡುವೆ ಬೆಚ್ಚನ್ನ ಮನೆ - ಕಂಟೇನರ್ ಹೌಸ್ ಅಥವಾ ‘ಕಪ್ಪೆಗೂಡು’ವಿನ ಹೆರಿಗೆಯ ಕಥೆಯೇನೋ ಓದಿದ್ದೀರಿ. (ಬಿಸಿಲೆಯಲ್ಲಿ ಹೊಸಬೆಳಕು) ಈಗ ಕಲ್ಪನೆಯು ರೂಪ ಪಡೆದು ‘ಮೊದಲ ಅಳು’ ಕೊಡುವವರೆಗಿನ ವಿಕಾಸದ ಕತೆ]


ಮಂಗಳೂರಿನ ನಮ್ಮ ನಿಜನಿವಾಸ - ‘ಅಭಯಾದ್ರಿ’ (೧೯೮೦) ಮತ್ತು ಮೊಂಟೆಪದವಿನ ಪ್ರಯೋಗಭೂಮಿ - ‘ಅಭಯಾರಣ್ಯ’ದ ‘ಕಾಡ್ಮನೆ’ಗಳ (೧೯೯೯) ಮೂಲ ನಕ್ಷೆ ನನ್ನದೇ. ಹಾಗೇ ಕಪ್ಪೆಗೂಡಿನ ಒಳಾಂಗಣದ ವಿವರಗಳನ್ನೂ ನಾನೇ ಆರೆಂಟು ನಕ್ಷೆಗಳಲ್ಲಿ ಮಾಡಿದೆ. ಸಾಮಾನ್ಯವಾಗಿ ಕಂಟೇನರುಗಳು ಇಪ್ಪತ್ತಡಿ ಮತ್ತು ನಲ್ವತ್ತಡಿ ಉದ್ದಗಳಲ್ಲಿ ಬರುತ್ತವೆ. ನನ್ನ ಲಕ್ಷ್ಯ - ‘ಚಿಕ್ಕದು ಚೊಕ್ಕದು’, ಇಪ್ಪತ್ತಡಿ ಗುಣಿಸು ಒಂಬತ್ತಡಿಯದ್ದು. ನಾಲ್ಕು ಅಟ್ಟಳಿಗೆ ಮಂಚ, ಅಡುಗೆ ಕಟ್ಟೆ, ತೊಳೆ ತೊಟ್ಟಿ,

02 February 2021

ಬಿಸಿಲೆಯಲ್ಲಿ ಹೊಸ ಬೆಳಕು - ಕಪ್ಪೆಗೂಡು


ಸ್ವಾಗತ:

"ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ ಆಮಂತ್ರಣದ ಮೇಲೆ, ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಕುತೂಹಲ ಮತ್ತು ಅಪಾರ ಸಹಾನುಭೂತಿ ಇಟ್ಟುಕೊಂಡು ಬಂದ ಎಲ್ಲರಿಗೂ ಹಾರ್ದಿಕ ಸ್ವಾಗತ. ಖಾಸಗಿ ವನ್ಯ ಸಂರಕ್ಷಣೆಯ ತೀರಾ ಸಣ್ಣ ಪ್ರಯೋಗವನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳುವ ತಾಳ್ಮೆ ಹೊತ್ತು ಬಂದ ಒಬ್ಬೊಬ್ಬರ ಪರಿಚಯ ಮತ್ತು ಉಪಸ್ಥಿತಿಯ ಮಹತ್ವ ವಿಸ್ತರಿಸಲು ನನ್ನ ಸಾಮರ್ಥ್ಯವೂ ದಿನವೂ ಸಣ್ಣದಾಗುವುದರಿಂದ ಮಾಡುತ್ತಿಲ್ಲ, ಕ್ಷಮಿಸಿ. ಸಭೆ ತೀರಾ ಸಣ್ಣದು ಮತ್ತು ಅನೌಪಚಾರಿಕವೂ ಇರುವುದರಿಂದ ನೀವು ನೀವೇ ವನ್ಯಸಂರಕ್ಷಣೆಯ ಹಿತಕ್ಕಾಗಿ ಪರಸ್ಪರ ಪರಿಚಯ ಮಾಡಿಕೊಳ್ಳಬೇಕು, ಸ್ನೇಹಸಂಬಂಧ ಬೆಳೆಸಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ." 

27 December 2019

ಕೊಯಂಬತ್ತೂರು ಟಿಪ್ಪಣಿಗಳು

ಮೋಹಕ ಪಯಣ

ಕೊಯಮ್ಬತ್ತೂರು ತಮಿಳುನಾಡಿನಲ್ಲಿ ಚೆನ್ನೈಗೆ ಎರಡನೇ ದೊಡ್ಡ ನಗರ ಮತ್ತು ಯಂತ್ರೋಪಕರಣಗಳಿಗೆ ಪ್ರಸಿದ್ಧ ಕೇಂದ್ರ. ಆದರೆ ನನಗಿದು (ತಮ್ಮ ಅನಂತವರ್ಧನ ಮತ್ತು ರುಕ್ಮಿಣಿಮಾಲಾ ದಂಪತಿಗಳ) ಮಗಳು - ಅಕ್ಷರಿ, ಅಳಿಯ - ಮಹೇಶ ಮತ್ತು ಪುಳ್ಳಿ ಆರುಷರ ಹೊಸ ಊರು. ಅವರ ಪ್ರೀತಿಗೆ ನನ್ನ ಹೊಸತೊಂದು ‘ಸಾಹಸ’ ಅಗತ್ಯವನ್ನು ಬೆಸೆದು, ದೇವಕೀಸಮೇತನಾಗಿ ಹೊರಟೇಬಿಟ್ಟೆ. ಶುಕ್ರವಾರ
ಬೆಳಿಗ್ಗೆ ಹನ್ನೊಂದೂಮುಕ್ಕಾಲರ ಮಂಗಳೂರು - ಕೊಯಂಬತ್ತೂರು ಅಂತರ-ನಗರ ರೈಲೇರಿದ್ದೆವು. ಗೋಡೆಯಂಚಿನ ಉದ್ದಕ್ಕೆ ಹೋಗುವ ಕರಿಮಣಿ ಹುಳದಂತೆ, ಹಗಲಿಡೀ ಇತ್ತ ಕಡಲು ಅತ್ತ ಪ. ಘಟ್ಟಸಾಲು ಎಂದು ಮೂತಿಯಾಡಿಸುತ್ತ ಸಾಗಿದ ಬಂಡಿಗೆ ಪಾಲಕ್ಕಾಡ್ ಅಥವಾ ಪಾಲ್ಘಾಟ್ ಸಂದಿ (ಸುಪ್ರಸಿದ್ಧವೇ ಆದ ‘ಪಾಲ್ಘಾಟ್ ಗ್ಯಾಪ್’) ಅವಕಾಶ ಕೊಟ್ಟಿತು. ಅಸಾಧಾರಣ ಗಾಳಿ ಮಳೆ ರೂಪಿಸಿದ ಘಟ್ಟದ ಆ ಕೊನೆ ಸಂಜೆಯ ಸೂರ್ಯಸ್ನಾನದಲ್ಲಿತ್ತು. ಆ ಮೋಹಕ ಕ್ಷಣಗಳನ್ನು ನಮಗುಣಬಡಿಸುತ್ತ ರೈಲು, ಘಟ್ಟದ

25 June 2019

ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ


‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್ ರಾಮರಾಜ ಮೊನ್ನೆ ಆದಿತ್ಯವಾರ ಸೈಕಲ್ಲಿನಲ್ಲಿ ಕೇವಲ ಬಿಸಿಲೆ ಘಾಟಿ ಏರುವ ಯೋಜನೆ ಸಂಘಟಿಸಿದ್ದರು. ಹಾಗೆ ಬೆಳೀಗ್ಗೆ ಮಂಗಳೂರಿನಿಂದ ನಾಲ್ಕು, ಉಡುಪಿಯಿಂದ ಒಂದು ಕಾರನ್ನೇರಿ ಹನ್ನೊಂದು ಸೈಕಲ್ ಮತ್ತು ಸವಾರರು ಸುಬ್ರಹ್ಮಣ್ಯದತ್ತ ಹೊರಡುವವರಿದ್ದರು. ನಿಮಗೆಲ್ಲ ತಿಳಿದಂತೆ ‘ಅಶೋಕವನ’ದ ರಚನೆಯೊಡನೆ, ಬಿಸಿಲೆಯ ಕುರಿತ ನನ್ನ

28 August 2018

ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ


ಕೊಡಗು, ಕೇರಳಗಳ ಅತಿ-ಮಳೆಯ ಅವಾಂತರ ಅನಾವರಣಗೊಳ್ಳುತ್ತಾ ಬಿಸಿಲೆ ದಾರಿಯ ಮಸುಕು ಚಿತ್ರಗಳೂ ಬಂದವು. ಸಂತ್ರಸ್ತರ ಪ್ರಾಥಮಿಕ ರಕ್ಷಣೆ ಮತ್ತು ಪೋಷಣೆಗೆ ಸ್ವಯಂಸೇವಕರು ತೊಡಗಿಸಿಕೊಂಡದ್ದು ಹೃದಸ್ಪರ್ಷಿಯಾಗಿತ್ತು. ಅದರಲ್ಲೂ ಮುಂದುವರಿದಂತೆ ನಿರಾಶ್ರಿತರ ಪೂರ್ವಸ್ಥಿತಿಸ್ಥಾಪನೆಯಲ್ಲೂ ಪ್ರಜಾಪ್ರತಿನಿಧಿಗಳು ಮತ್ತು ಸರಕಾರ ಬಹ್ವಂಶ ನಿಧಾನಿಗಳೂ ಅದಕ್ಷರೂ (ಭ್ರಷ್ಟತೆಯಿಂದಾಗಿ) ಆಗುವುದು ಇಂದು ನಮ್ಮ ಸಂಸ್ಕೃತಿಯ ಭಾಗವೇ ಆಗಿಹೋಗಿದೆ. ಈ ಜನ, ಆಸ್ತಿಗಳ ಬಹುದೊಡ್ಡ
ದುರಂತದಲ್ಲಿ ಆಡಳಿತ ದೊಡ್ಡ ಧ್ವನಿಯಲ್ಲಿ ದೂಷಿಸುವುದು ಪ್ರಕೃತಿಯನ್ನು! ಪ್ರಸ್ತುತ ಸನ್ನಿವೇಶದಲ್ಲಿ ಮೊದಲನೇ ಖಳಸ್ಥಾನದಲ್ಲಿ ನೀರಿಗಿದ್ದರೆ, ಎರಡನೇದು ನೆಲ. ಪ್ರಕೃತಿ ಎಲ್ಲಕ್ಕೂ ಅತೀತ; ಆರಾಧನೆಗೆ ಉಬ್ಬದು, ಅವಹೇಳನಕ್ಕೆ ಕುಗ್ಗದು, ಮೌನಿ. ಅಂಥ ಪ್ರಕೃತಿಯ ಮೇಲೆ, ನಿಜದಲ್ಲಿ ಎಲ್ಲ ಜೀವಾಜೀವಗಳ ಮೂಲಶಕ್ತಿಯ ಮೇಲೆ ತೀರ್ಪು ಕೊಡುವ ದಾರ್ಷ್ಟ್ಯ ನನ್ನದಲ್ಲ. ಆದರೆ ಅದರೊಡನೆ ಯಥಾಮಿತಿ ಮುಖಾಮುಖಿ ನಡೆಸಿ, ಸ್ವಲ್ಪವಾದರೂ ತಿಳಿದುಕೊಳ್ಳುವ ಹಂಬಲ ನನ್ನನ್ನು ಬಿಟ್ಟದ್ದಿಲ್ಲ. ಹಾಗಾಗಿ ನೀರು ಹಿಂಜರಿದದ್ದೇ

05 October 2017

ಜೀವವೈವಿಧ್ಯ ಗುರುತಿಸುವಲ್ಲಿ......

ವರ್ಷಕ್ಕೊಂದು ಕಪ್ಪೆ ಶಿಬಿರ ಆರೇನೋ ಪೂರೈಸಿತು (ನೋಡಿ: ಕಪ್ಪೆ ಶಿಬಿರಗಳು). ಆದರೆ ಅದು ಇಷ್ಟೂ ಕಾಲ ಮಳೆಗಾಲದ ಮೊದಲ ಹೆಜ್ಜೆಯ ಜೀವ ಕಲಾಪದ ದಾಖಲೆ ಮಾತ್ರ ಆಯ್ತು. ವರ್ಷದ ಇತರ ಋತುಮಾನಗಳಲ್ಲಿ ಇದೇ ಕಪ್ಪೆಗಳ ವರ್ತನೆ ಏನು? ಅದಕ್ಕೂ ಮುಖ್ಯವಾಗಿ ಒಟ್ಟಾರೆ ಪ್ರಾಣಿಪರಿಸರವನ್ನು ಗಾಢವಾಗಿ ಪ್ರಭಾವಿಸುವ ಸಸ್ಯಪರಿಸರದ ತಿಳುವಳಿಕೆ ಗಳಿಸಿದರೆ ಹೇಗೆ? ಎಂಬ ಪ್ರಶ್ನೆಗಳಿಗೆ ತೀರಾ ಸಣ್ಣ ಉತ್ತರವಾಗಿ, ಗುಬ್ಬಿ ಲ್ಯಾಬ್ಸ್ ಮೊನ್ನೆ ಮೂರು ದಿನ (ಸೆಪ್ಟೆಂಬರ್ ೧೫ರಿಂದ ೧೭, ೨೦೧೭) ಮತ್ತೆ ಬಿಸಿಲೆಯ ಅಶೋಕವನ ಕೇಂದ್ರಿತವಾಗಿ ಇನ್ನೊಂದೇ

21 June 2017

ಬಿಸಿಲೆಯಲ್ಲಿ ಪ್ರೇಮ ಪರ್ವ


“ಬಾರೇ ಬಾರೇ ಚಂದದ ಚೆಲುವಿನ ತಾರೇ! ಬಾರೇ ಬಾರೇ....” ಕೊಳದ ನೀರಿನಲ್ಲಿ ಎತ್ತರಿಸಿದ ಕಣ್ಣನ್ನಷ್ಟೇ ಬಿಟ್ಟು ಹಾಡುತ್ತಿದ್ದನೊಬ್ಬ! ಅಂಚಿನ ಗೊಸರಿನ ಮೇಲೆ ಒಂಬತ್ತು ಜೋಡಿ ಬೆರಳುಗಳ ಮುದ್ರೆ ಬೀಳುವಷ್ಟೇ ಹಗುರಕ್ಕೆ ಕುಳಿತು ಧ್ವನಿ ಸೇರಿಸಿದ್ದನಿನ್ನೊಬ್ಬ. ತುಸು ಆಚೆಗೆ ಹುಲ್ಲಿನ ಎಡೆಯಲ್ಲಿ ಮೈಮರೆಸಿಯೂ ಮರೆತಂತೆ ಹಾಡುವವ ಮಗುದೊಬ್ಬ. ಪೊದರ ತಳದ ಕೊಳೆತ ಎಲೆಗಂಟಿದ ಕಸಕ್ಕೂ ಕಿರಿದಾದ ಮೂರ್ತಿಯಾದರೇನು ಗಾನಗೋಷ್ಠಿಗೆ ಕುಂದಿಲ್ಲದ ಎತ್ತರದ ಧ್ವನಿಯವನೀತ, ಕೆರೆಗೆ ವಾಲಿದ ಹಸಿರಗೆಲ್ಲಿನಲ್ಲಿ ಜೋಕಾಲಿಯಾಡುತ್ತ ಸಮೂಹಗಾನಕ್ಕೆ ಕಂಠಕೊಟ್ಟವನಾತ. ಹಸಿರಂಗಿ ಹಳದಿ ಚಡ್ಡಿಯವನಂತೂ ಗಾನಲಹರಿಯಲ್ಲಿ ಆ ಎತ್ತರದಿಂದ ಇನ್ನೊಂದೇ ಬಿತ್ತರಕ್ಕೆ ತೇಲಾಡುತ್ತಿದ್ದ. ಒಡಕು ಬಂಡೆಯ ಇರುಕಿನಲ್ಲಿ, ಭಾರೀ ಮರದ ಬೊಡ್ಡೆಗಂಟಿ, ಸುಯ್ಗುಟ್ಟುವ ವಾಟೆಗೆ ನೇತುಬಿದ್ದಂತೆಲ್ಲ ಕಂಡ, ಕಾಣದ ತಾಣಗಳಿಂದ, ಸರ್ವವ್ಯಾಪೀ ಸ್ಥಿತಿಯಲ್ಲಿ, ಘೋರಾಂಧಕಾರವೇ ಮಧುರಭಾವ ತಳೆದಂತೆ, ಹನಿ ಕುಟ್ಟುವ ತಾಳಕ್ಕೆ, ಬಿಬ್ಬಿರಿಗಳು ಹಿಡಿದ ಶ್ರುತಿಗೆ ಪಲ್ಲವಿಸುತ್ತಿದ್ದ ರಾಗ ಒಂದೇ “ಬಾರೇ ಬಾರೇ ಬಾರೇ ಬಾರೇ......”

29 April 2016

ಪ್ರಕೃತಿಯನ್ನು ಅದರಷ್ಟಕ್ಕೆ ಬಿಡಿ! ಅಥವಾ ಬಿಸಿಲೆಯಲ್ಲೊಂದು ರಜೆಯ ಮಝಾ

ಅಖಂಡ ಕೆರೆಮಣೆ ಧ್ಯಾನದ ಗೆಳೆಯ ವೆಂಕಟ್ರಮಣ ಉಪಾಧ್ಯ (ನೋಡಿ:ಉಪಾಧ್ಯ ಹೆರೆಮಣೆ ೨೦೧೫) ಆಶ್ಚರ್ಯಕರವಾಗಿಬಿಸಿಲೆಗೆ ಹೋಪನಾಅಂತ ಕರೆ ಕೊಟ್ಟ ಮೇಲೆ ಹೇಗೆ ಹೇಳಲಿ ಇಲ್ಲ? ಹಾಗೆಂದು ಒಪ್ಪಿಗೆ ಕೊಟ್ಟರೆ, ಅವರ `ಅಷ್ಟಗ್ರಹ ಕೂಟ ಹೊಂದಾಣಿಕೆಯಲ್ಲಿ ನಾನು ಅನುಮೋದಿಸಿದ ದಿನಗಳ ಕುರಿತು ಉಂಟು, ಇಲ್ಲಗಳ ಸಂತೆ ಮುಗಿದದ್ದೇ ಇಲ್ಲ! ಎಲ್ಲಾ ಆಡಿಕೊಳ್ಳುವಂತೆ ಕೊನೆಗೂ ಅವರ ಒಬ್ಬ ಎಳೆಯ ಗೆಳೆಯಋಷಿರಾಜ್, ಅನ್ಯ ಕಾರ್ಯ ನಿಮಿತ್ತ ಬೆಂಗಳೂರಿಸಿದ್ದವರು, ಶನಿವಾರ ರಾತ್ರಿ ಬಸ್ಸೇರಿ ಸಾಸ್ತಾನಕ್ಕೆ ಆದಿತ್ಯವಾರ ಬೆಳಿಗ್ಗೆ ಮರಳಿದರು. ಹಾಗೇ ದಡಬಡ ತಯಾರಿ ನಡೆಸಿ, ಸ್ವಂತ ಕಾರೇರಿ ಸಾಲಿಗ್ರಾಮದಲ್ಲಿನ ಉಪಾಧ್ಯರ ಮನೆಗೆ ಧಾವಿಸಿದರು. ಅಲ್ಲಿ ಇಪ್ಪತ್ತು ಲೀಟರಿನ ಎರಡು ಕ್ಯಾನ್ ತುಂಬಾ ಬಾವಿ ನೀರು ಸೇರಿ ನೂರೆಂಟು ಶಿಬಿರ ಸರಕುಗಳನ್ನು ತುಂಬಿಕೊಂಡು ಮಂಗಳೂರಿನತ್ತ ಹೊರಟದ್ದೇ ನನಗೆ ಸುದ್ಧಿ ಕೊಟ್ಟರು. ಅದೇ ವೇಳೆಗೆ ಅತ್ತ ಬೆಂಗಳೂರಿನಲ್ಲಿ, ಉಪಾಧ್ಯರ ಇನ್ನೋರ್ವ ಎಳೆಯ ಗೆಳೆಯ, ಋಷಿರಾಜರ ಸಹಪಾಠಿ, ನಮ್ಮೆಲ್ಲರ ಸಮಾನ ಮಿತ್ರ ಡಾ|ರಾಘವೇಂದ್ರ ಉರಾಳರ ಮಗಸುಬ್ರಹ್ಮಣ್ಯ, ಅನ್ಯ ಮಿತ್ರರನ್ನು ಹೊರಡಿಸುವಲ್ಲಿ ವಿಫಲನಾಗಿ, ಅನಿವಾರ್ಯ ಏಕಾಂಗಿಯಾಗಿ ನಮ್ಮನ್ನು ಬಿಸಿಲೆಯಲ್ಲಿ ಸೇರಿಕೊಳ್ಳಲು ತನ್ನ ಕಾರೇರಿ ಹೊರಟ. ನಾನು ಸರದಿಯಲ್ಲಿ ಜೋಡುಮಾರ್ಗದ ಗೆಳೆಯ ಸುಂದರರಾಯರಿಗೆ ಸುದ್ಧಿಯ ಎಳೆ ಮುಟ್ಟಿಸಿದೆ. ಹತ್ತೂಕಾಲರ ಸುಮಾರಿಗೆ ಋಷಿ, ಉಪಾಧ್ಯರ ಕಾರಿಗೆ ನಾನು ಮಂಗಳೂರಿನಲ್ಲಿ ಏರಿಕೊಂಡೆ. ಮತ್ತೆ ಇಪ್ಪತ್ತು ಮಿನಿಟಿನಲ್ಲಿ ಜೋಡುಮಾರ್ಗದ ಸುಂದರರಾವ್ ಜೋಡಿಕೊಂಡರು.

21 July 2015

ಬಿಸಿಲೆ ಕಾಡಿನ ಕೊನೆಯ ದಿನಗಳು!

(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ)

ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ ಎಂದೊರಲಿತು. ದಡಬಡ ಹೊರಡುತ್ತಿದ್ದಂತೆ ಸುರತ್ಕಲ್ಲಿನಿಂದ ಅಭಿ ಚರವಾಣಿ ಮನೆ ಬಿಟ್ಟಿದ್ದೇನೆ, ಪಂಚೇರ್ ಕಿಟ್ ಮರೆತುಬಿಟ್ಟೆ. ಹಿಂದೆ ಹೋಗಿ ತರ್ಲಾ?” “ಬಿಡು, ಪರ್ವಾಗಿಲ್ಲ. ರೈಗಳು ಏನೋ ತರ್ತಾರೆನನ್ನ ಸಮಾಧಾನ. ಐದೂಐವತ್ತಕ್ಕೆ ನಾನೂ ಸೈಕಲ್ ಏರಿದೆ.
ದಾರಿಯೆಲ್ಲ ಮಳೆ ಹೊಯ್ದು ಚೊಕ್ಕ ತೊಳೆದಂತಿತ್ತು. ಸೂರ್ಯಮೇಶ್ಟ್ರು ಕಣ್ಣು ಕೆಕ್ಕರಿಸುವಾಗ, ಪಡ್ಡೆ ಮೋಡಗಳು ಅಡಗುಮೂಲೆಗೆ ಧಾವಿಸಿದ್ದವು. ಆದರೆ ಉಡುಪಿ - ಮಂಗಳೂರು ಹೆದ್ದಾರಿ ಇಷ್ಟು ಸರಳವಾಗಿರಲಿಲ್ಲ. ಅಲ್ಲಿ ಚತುಷ್ಚಕ್ರ (ಮತ್ತು ಅದಕ್ಕೂ ಮೀರಿದವು!) ವಾಹನಗಳಿಗೆ ಹಾವುನಡೆ ಅಭ್ಯಸಿಸಲು ಆಚೆಗೂ ಈಚೆಗೂ ಕೈಕಂಬ ಬದಲಿಸುತ್ತಲೇ ಇರುತ್ತಾರೆ, ಜಲಕ್ರೀಡೆಯಾಡಲು ಅಸಂಖ್ಯ ಕೊಳಗಳನ್ನೂ ಮಾಡಿದ್ದಾರೆ. ಹೀಗಾಗಿ ಅದರಲ್ಲಿ ಸುರತ್ಕಲ್ ಸಮೀಪದಿಂದ, ಅಂದರೆ ಸುಮಾರು ಹನ್ನೆರಡು ಕಿಮೀ ಸೈಕಲ್ ತುಳಿಯಬೇಕಾದ ಅಭಿಗೆ, ಮಳೆ ಬಿಟ್ಟರೂ ಇರಿಚಲು ಬಿಡದ ಕಾಟ! ಆದರೂ ಆರು ಕಳೆದು ಎರಡೋ ಮೂರೋ ಮಿನಿಟಿನಲ್ಲಿ ಅವನು ನಂತೂರು ತಲಪಿದಾಗ, ನಮ್ಮ ಬಿಸಿಲೆ ಮಹಾಯಾನಕ್ಕೆ ಜೀವ ಬಂದಿತ್ತು.

28 March 2014

ವಿಶ್ವ(ವಿ)ರೂಪದ ನಡುವೆ ಮತ್ಸ್ಯ ಸಮೀಕ್ಷೆ

ಅಭಿವೃದ್ಧಿ ಎಂದರೆ ಇರುವುದನ್ನು ಹೆಚ್ಚಿಸುವುದು. ಆದರೆ ನಿಜನೆಲದ ಯಜಮಾನಿಕೆ ವಹಿಸಿದ (ಕೇಂದ್ರ ಅಥವಾ ರಾಜ್ಯ) ಸರಕಾರಗಳು ಯೋಜನೆಗಳನ್ನು ಹೊಸೆಯುವಾಗ ಇರುವುದು ಏನು ಮತ್ತು ಎಷ್ಟು ಎಂದು ತಿಳಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಇರುವುದು ನಾಶವಾಗುತ್ತಿದೆ, ಬರುವುದು ಕ್ಷಣಿಕ ಮತ್ತು ದುರ್ಬಲವಾಗುತ್ತಿದೆ. ಆಡಳಿತ ಕೊಡಬೇಕಾದವರು ಯೋಜಕರ ಮುಖವಾಡ ತೊಟ್ಟಿದ್ದಾರೆ. ಯೋಜಿಸಬೇಕಾದ ನಿಜ ಪರಿಣತರು ಅವರ ತಪ್ಪುಗಳಿಗೆ ಸಮಜಾಯಿಷಿ ಹುಡುಕುವವರಾಗುತ್ತಿದ್ದಾರೆ. ನಮ್ಮ ಸುತ್ತುಮುತ್ತಿನ ಕುದುರೆಮುಖ ಗಣಿಗಾರಿಕೆ, ಎಂಆರ್ಪೀಯೆಲ್, ವಿಶೇಷ ಆರ್ಥಿಕ ವಲಯ, ಪಡುಬಿದ್ರೆಯ ಉಷ್ಣ ವಿದ್ಯುತ್ ಸ್ಥಾವರ, ಕೈಗಾ ಮುಂತಾದವೆಲ್ಲಾ ಸರಕಾರದ ಸಹಯೋಗದಲ್ಲೇ ಆಗುತ್ತಿರುವ ಅನಾಚಾರಗಳು. ಇನ್ನು ಸರಕಾರದ್ದೇ ಇಲಾಖೆಗಳ ಒಂದೊಂದು ಕರ್ಮಕಾಂಡವೂ ಸಾಮಾನ್ಯ ಬುದ್ಧಿಗೆ ಗ್ರಾಹ್ಯವಾಗದ ಒಂದೊಂದು ವಿಶ್ವ(ವಿ)ರೂಪ! (ಮಾಜೀ ಲೋಕಾಯುಕ್ತರುಗಳ ಮಾತಷ್ಟೇ ಸಾಕು.) ಮರಣಾಂತಿಕ ಹೂಳಿನ ನಡುವೆಯೂ ಸ್ವಂತ ಉಮೇದಿನೊಡನೆ, ದೇಶದ ನಿಯಮಗಳಿಗನುಸಾರವಾಗಿ ಸಂಶೋಧನಾವ್ರತವನ್ನು ನಡೆಸುವ ಕೆಲವರಾದರೂ ನಮ್ಮ ನಡುವೆಯಿರುವುದಕ್ಕೇ ಸಮಾಜ ಇಂದು ಎಲ್ಲ ಕಳೆದುಕೊಂಡ ಸ್ಥಿತಿ ಮುಟ್ಟಿಲ್ಲ. ಹಳಗಾಲದವರು ಹೇಳುವಂತೆ, ಮಳೆಬೆಳೆ ಕಾಲಕಾಲಕ್ಕೆ ಆಗುತ್ತಿದೆ!

19 July 2013

ಅದ್ವಿತೀಯ ಕಪ್ಪೆ ಶಿಬಿರ - ೨

[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ ಮಂಡೂಕೋಪಖ್ಯಾನವನ್ನು ಮತ್ತೊಮ್ಮೆ ಓದಿಕೊಳ್ಳುವುದು ಉತ್ತಮ]



“ಬಿಸಿಲೆಯಲ್ಲಿ ಕಪ್ಪೆ ಶಿಬಿರ ನಡೆದದ್ದು ಕಳೆದ ಮಳೆಗಾಲದ ಕೊನೇ ಪಾದ. ಈಗ ಹೊಸ ಮಳೆಗಾಲದ ಮೊದಲಪಾದ. ವೈಜ್ಞಾನಿಕ ಅಧ್ಯಯನಾಸಕ್ತರು ಋತುವೊಂದರಲ್ಲಿ ಕನಿಷ್ಠ ಮೂರು ಹಂತಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಈಗ ನಡೆಸೋಣವೇ” ಸ್ವತಃ ಡಾ| ಕೆವಿ ಗುರುರಾಜ್ (ಕೆವಿಜಿ) ಮೊದಲ ಶಿಬಿರದ ‘ಕ್ಯಾಪ್ಟನ್’ ದೀಪಿಕಾರಿಗೆ ಪತ್ರ ಬರೆದರು. ಅದನ್ನು ಸಂತೋಷದಿಂದಲೇ ಸ್ವಾಗತಿಸಿದೆವು. ದೀಪಿಕಾ ಮತ್ತು ‘ವೈಸ್ ಕ್ಯಾಪ್ಟನ್’ ವಿವೇಕ್ ಹದಿನೈದು ದಿನಗಳ ಮೊದಲೇ ಊಟ ವಾಸಗಳ ವ್ಯವಸ್ಥೆಗೆ ಬಿಸಿಲೆ ‘ಸಂಬಂಧಿ’ಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಬಿಸಿಲೆ ಮಾಮೂಲೀ ದಿನಗಳಲ್ಲೇ ಚರವಾಣಿಗೆ ಬಹುತೇಕ ‘ಅವ್ಯಾಪ್ತ’ವಾದದ್ದು. ಮಳೆಗಾಲದ ಪರಿಣಾಮಗಳೊಡನೆ ಸ್ಥಿರವಾಣಿ ಸಂಪರ್ಕವೂ ಅಸಾಧ್ಯವಾದದ್ದು ಆಶ್ಚರ್ಯವೇನೂ ಅಲ್ಲ. ಇವರು ಖುದ್ದು ಹೋಗುವುದು ಅನಿವಾರ್ಯವಾಯಿತು. ದೀಪಿಕಾಗೆ ಜೊತೆಗೊಡಲೆಂದೇ ವಿವೇಕ್ ಬೆಂಗಳೂರಿನಿಂದ ಮಂಗಳೂರಿಗೆ ಬಂದು, ಇಬ್ಬರೂ ದಿನದ ಮೊದಲ ಸುಬ್ರಹ್ಮಣ್ಯ ಬಸ್ ಹಿಡಿದರು. ಅಲ್ಲಿನ ಎಲ್ಲಾ ‘ಗ್ರಹಗಳೂ’ ಪ್ರಶಸ್ತವಾಗಿದ್ದುದಕ್ಕೆ ಸುಬ್ರಹ್ಮಣ್ಯ-ಬಿಸಿಲೆಯ ನಡುವೆ ದಿನಕ್ಕೊಮ್ಮೆ ಮಾತ್ರ ಓಡಾಡುವ ಬಸ್ಸು ಅಂದು ಇವರಿಗೆ ಎರಡೂ ದಿಕ್ಕಿನಲ್ಲಿ ಸಿಕ್ಕಿತ್ತು! ನಡುವೆ ಸಿಕ್ಕ ಸುಮಾರು ಮೂರು ಗಂಟೆಗಳ ಅವಧಿಯಲ್ಲಿ ಇವರು, ತುಳಸಿ ಹೋಟೆಲಿನ ದೇವೇಗೌಡ ದಂಪತಿ ಹಾಗೂ ಸಮುದಾಯಭವನದ ಮಲ್ಲೇಶಪ್ಪರನ್ನು ನೋಡಿ ಎಲ್ಲ ನಿಗದಿಗೊಳಿಸಿದ್ದರು.

14 September 2012

ಕಪ್ಪೆ ಕಮ್ಮಟ

(ಮಂಡೂಕೋಪಖ್ಯಾನದ ಎರಡನೇ ಮತ್ತು ಅಂತಿಮ ಭಾಗ)

ಆಗಸ್ಟ್ ಇಪ್ಪತ್ನಾಲ್ಕರ ಅಪರಾತ್ರಿ ಎರಡು ಗಂಟೆಯ ಸುಮಾರಿಗೇ ಬೆಂಗಳೂರಿನಲ್ಲೊಂದು ಕ್ವಾಲಿಸ್ ನಗರದ ವಿವಿಧ ಮೂಲೆಗಳಿಗೆ ಓಡಾಡಿ ಐದಾರು ಬಿಸಿಲೆ ‘ಯಾತ್ರಿ’ಗಳನ್ನು ಸಂಗ್ರಹಿಸಲು ತೊಡಗಿತ್ತು. ಮೂರೂವರೆ ಗಂಟೆಯ ಸುಮಾರಿಗದು ನಗರ ಬಿಟ್ಟದ್ದೂ ಆಗಿತ್ತು. ಹಾಗೇ ಇತ್ತ ಮಂಗಳೂರಿನಲ್ಲೊಂದು ಟೆಂಪೋ ಟ್ರಾವಲ್ಲರ್ ಐದು ಗಂಟೆಯ ಸುಮಾರಿಗೆ ಓಡಾಡಿ ಹನ್ನೆರಡು ಮಂದಿಯನ್ನು ಒಟ್ಟು ಮಾಡಿತು. ಮತ್ತೆ ಜೋಡುಮಾರ್ಗ, ಉಪ್ಪಿನಂಗಡಿಗಳಲ್ಲಿ ಇನ್ನು ಕೆಲವರನ್ನು ಸೇರಿಸಿಕೊಂಡು ಮಳೆಯ ಏಕಧಾರೆಯನ್ನು ಅಡ್ಡಕ್ಕೆ ಕತ್ತರಿಸುತ್ತಾ ಕತ್ತಲೆಯನ್ನು ಉದ್ದಕ್ಕೆ ಸೀಳುತ್ತಾ ದಾರಿ ತೆಮರಿನ ಕಲಕು ನೀರನ್ನು ಆಗಸಕ್ಕೆ ಹಾರಿಸುತ್ತಾ ಬಿಸಿಲೆಯತ್ತ ಹೊರಟದ್ದೂ ಆಯ್ತು. ಆದರೆ ನಾವು ನಾಲ್ವರು, ಬಿಸಿಲೆಯ ಸಮುದಾಯ ಭವನದೊಳಗೆ ಬೆಚ್ಚಗೆ ಮಲಗಿದ್ದವರು ಮಾತ್ರ, ಸುಂದರ ಕನಸುಗಳಲ್ಲಿ, ಕೊಳಕುಕಪ್ಪೆ ಸುಂದರ ರಾಜಕುಮಾರನಾಗಿ ಕತೆ ಕಾಡಿಗೆ ಹೋದ ಮೇಲೇ ಸುಖವಾಗಿ ಬೆಳಗ್ಗೆ ಮಾಡಿದೆವು. ಆರಾಮದಲ್ಲಿ ಪ್ರಾತರ್ವಿಧಿಗಳನ್ನು ಮುಗಿಸಿ, ದೇವೇ ಗೌಡರ ಚಾ ಹಾಕಿ ಯಾರ್ಯಾರು ಎಲ್ಲೆಲ್ಲಿ ಎಂದು ತಿಳಿಯಲು ಚರವಾಣಿಯಲ್ಲಿ ಪ್ರಯತ್ನ ಮಾಡಿದೆವು.

07 September 2012

ಮಂಡೂಕೋಪಖ್ಯಾನ

Nyctibatrachus ಚಿತ್ರ ಕೃಪೆ ಡಾ. ಕೆ.ವಿ. ಗುರುರಾಜ್

“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ...” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ) ಸ್ಲೇಟಿನಲ್ಲಿದ್ದ ಹಳೇ ಬರಹಗಳನ್ನು ಚಂದಕ್ಕೆ ಒರೆಸುತ್ತಿದ್ದರು. (ಇಂದು ಬಿಡಿ, ಹಲಗೆ ಬಳಪವ ಪಿಡಿಯದಗ್ಗಳಿಕೆಯವರೇ ಎಲ್ಲ) ಆದರೆ ವಾಸ್ತವದಲ್ಲಿ ಹಾಗಲ್ಲ “ಪಸೆ ಎಲ್ಲಿದೆಯೋ ಅಲ್ಲಿಗೆ ಕಪ್ಪೆಗಳು ಆಕರ್ಷಿತವಾಗುತ್ತವೆ. ಬಾಯಿಯಿಂದ ನಾವು ನೀರು ಕುಡಿದಂತೇ ಕೆಲವು ಜಾತಿಯ ಕಪ್ಪೆಗಳಂತು ತೊಡೆಯ ತಳದ ಚರ್ಮದಿಂದಲೂ ನೀರನ್ನು ದೇಹವ್ಯವಸ್ಥೆಗೆ ಸೇರಿಸಿಕೊಳ್ಳುತ್ತವೆ” ಎನ್ನುತ್ತಾರೆ ಡಾ| ಕೆ.ವಿ. ಗುರುರಾಜ್. ಅವರ ಎರಡು ದಿನಗಳ (ಆಗಸ್ಟ್ ೨೫, ೨೬) ಕಪ್ಪೆ ಕಮ್ಮಟದಲ್ಲಿ ಮುಂದುವರಿಯುತ್ತಾ ನನಗೆ ಇನ್ನೂ ಹೆಚ್ಚು ತಿಳಿವು ಮೂಡಿತು. ನಮ್ಮನೆಯಲ್ಲಿ ತೊಳೆದಿಟ್ಟ ತಟ್ಟೆಗಳ ಸ್ಟ್ಯಾಂಡಿನಲ್ಲಿ ತಟ್ಟೆಯ ಪಸೆಗೋ ಲೋಟದ ಹಸಿಗೋ ವರ್ಷದ ಕೆಲವು ತಿಂಗಳುಗಳಲ್ಲಿ ಕೆಲವು ನಿಶಾಚರಿ ಕಪ್ಪೆಗಳು ನಿಯತವಾಗಿ ಬಂದು ಕುಳಿತು ‘ನಿದ್ರೆ’ಗೆ ಜಾರುತ್ತಿದ್ದವು. ಹಾಗೆಯೇ ಕೆಲವು ಮನೆ ಗೋಡೆಯ ಯಾವುದೋ ಒಳ ಮೂಲೆಯಲ್ಲಿ (ನಮಗರಿವಾಗದ ತೇವಾಂಶ ಗುರುತಿಸಿ) ಧ್ಯಾನಸ್ಥವಾಗುತ್ತಿದ್ದದ್ದೂ ಇತ್ತು. ಇವು ಕೇವಲ ಗಲೀಜು ಮಾಡಲು ವಕ್ಕರಿಸುವವಲ್ಲ ಎಂಬ ಅರಿವಿನ ದೀಪವೂ ಝಗ್ಗೆಂದಿತು! (ಅದೊಂದು ಶುಭ ಪ್ರಾತಃಕಾಲ ದೇವಕಿ ಲೋಟದಲ್ಲಿದ್ದ ಅಂಥಾ ಒಂದು ‘ಪುಟ್ಟಪ್ಪ’ನನ್ನು ಗಮನಿಸದೆ ಬಿಸಿ ಕಾಫಿ ಹಾಕಿ ನನಗೆ ಕೊಟ್ಟಿದ್ದಳು. ನಾನು ಅರಿವಿಲ್ಲದೆ ಬಾಯಿಗಿಟ್ಟದ್ದಕ್ಕೆ ಕಾಫಿ ಕೆಫೆಡೇಯ ಲಭ್ಯ ನೂರಾ ಒಂದು ಕಾಫಿ ವೈವಿಧ್ಯದ ಮೇಲಿನೊಂದು ಹೊಸ ರುಚಿ ನೋಡಲು ಸಾಧ್ಯವಾಯ್ತು!) ಹೊಸ ಅರಿವಿನ ಬೆಳಕಿನ ಮೂಲ - ಯಾರೀ ಕಪ್ಪೆ-ಪಂಡಿತ? ಏನೀ ಕಪ್ಪೆ-ಕಮ್ಮಟ?

11 May 2012

ಬಿಸಿಲೆಯಲ್ಲಿ ಕಥಾಸಮಯ


(ಕುಮಾರಪರ್ವತದ ಸುತ್ತ ಮುತ್ತ ಭಾಗ ಒಂಬತ್ತು)

ಅಡ್ಡಹೊಳೆ ಸಂಕಕ್ಕೂ ನೂರಡಿ ಮೊದಲು ಬಲಬದಿಯ ತಟ್ಟೊಂದರಲ್ಲಿ ಇಲಾಖೆ ವನ್ಯ-ಸಸಿಮಡಿಯನ್ನು ನಡೆಸತೊಡಗಿರುವುದನ್ನು ಹಿಂದೆಯೇ ಹೇಳಿದ್ದೇನೆ. ಪ್ರಾಕೃತಿಕವಾಗಿಯೇ ನಡೆದುಹೋಗುವ ಬೀಜಪ್ರಸಾರ, ಸಸ್ಯ ಪುನರುತ್ಪಾದನೆಯನ್ನು ಮೀರುವ ಯೋಜನೆ ಇವರದು. ಮಣ್ಣು ಅಥವಾ ನೆಲ ಹದಗೊಳಿಸಿ, ಬಿಸಿಲಮರೆ ನಿಲ್ಲಿಸಿ, ತೊಟ್ಟೆಕೊಟ್ಟಣ ತುಂಬಿ, ವರ್ಗೀಕೃತ ವಿಭಾಗ ಮಾಡುವುದು. ಮತ್ತೆ ಕಾಡಿನ ವಿವಿಧೆಡೆಗಳಿಂದ ವಿವಿಧ ಋತುಗಳಲ್ಲಿ ಬೀಜ, ಗೆಲ್ಲಿನ ತುಂಡುಗಳನ್ನು ಒಟ್ಟುಮಾಡಿ, ಹದಬರಿಸಿ, ಸಕಾಲಕ್ಕೆ ಬಲು ದೊಡ್ಡ ಸಂಖ್ಯೆಯಲ್ಲಿ ಸಸಿ ತಯಾರಿಡುವುದು ಬಹಳ ಮುಖ್ಯ ಕೆಲಸವೇ. ಆದರೆ ಹಾಗೆ ಮಾಡುವಾಗ ಆರಿಸಿಕೊಳ್ಳುವ ಸಸ್ಯವರ್ಗ, ಅದಕ್ಕೂ ಮುಖ್ಯವಾಗಿ ಅವುಗಳ ವಿತರಣೆಯಲ್ಲಿನ ಆಶಯಗಳು ‘ವನರಹಿತ’ ಜಾಗಗಳಲ್ಲಿ ಹಸುರೀಕರಣಕ್ಕೆ ವ್ಯತಿರಿಕ್ತವಾಗಿರುವುದೇ ಹೆಚ್ಚು! ಆ ಕುರಿತು ಮೊದಲು ಮೂರು ಅಪಗತೆಗಳು.

12 April 2012

ಬಿಸಿಲೆಯಲ್ಲಿ ಭಾರೀ ಜಿಗಣೆ

(ಕುಮಾರಪರ್ವತದ ಸುತ್ತ ಮುತ್ತ ಭಾಗ ಎಂಟು)

ಅಡ್ಡಹೊಳೆಯತ್ತ
ವನ್ಯ ಸಂವರ್ಧನೆಯ ಪ್ರಥಮಾವಶ್ಯಕತೆ ಮನುಷ್ಯ ನಿರುದ್ಯೋಗಿ ಆಗುವುದರಲ್ಲಿದೆ. ಹಿಂಬಾಲಿಸುವ ತತ್ತ್ವ ಕನಿಷ್ಠ ಹಸ್ತಕ್ಷೇಪದಿಂದ ಗರಿಷ್ಠ ರಕ್ಷಣೆ. ಕಾಡಿನ ಯೋಗ್ಯತಾನುಸಾರವೇ ದಾರಿಯ ಜೀರ್ಣೋದ್ಧಾರವಿರಲಿ, ನವನಿರ್ಮಾಣವಿರಲಿ ವನನಾಶ ಕನಿಷ್ಠವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಅರಣ್ಯ ಇಲಾಖೆಯದು. ಆದರೆ ಈಚಿನ ದಿನಗಳಲ್ಲಿ ವನ್ಯದ ನಡುವಣ ಅಕ್ರಮ ದಾರಿಗಳನ್ನು, ರಚನೆಗಳನ್ನು ಸಾಮಾಜಿಕ ಸೋಗಿನಲ್ಲಿ ಅರಣ್ಯ ಇಲಾಖೆ (ಅಥವಾ ವನ್ಯ ಇಲಾಖೆಯೂ) ಸಮರ್ಥಿಸಿಕೊಳ್ಳತೊಡಗಿರುವುದು ಸರಿಯಲ್ಲ. ಹಾಗೇ ವಿಸ್ತರಣೆ, ನವೀಕರಣಗಳನ್ನು ವೈಜ್ಞಾನಿಕ ವಿವೇಚನೆಯಿಂದ ಹೊರಗಿಟ್ಟಿರುವುದು ತೀರಾ ಅಪಾಯಕಾರಿ. (ಕೆಲವೇ ವರ್ಷಗಳ ಹಿಂದೆ ನಡೆದ ‘ಗುಂಡ್ಯ-ಸುಬ್ರಹ್ಮಣ್ಯ’ ರಸ್ತೆ ವಿಸ್ತರಣ ಕಾಲದಲ್ಲಿ ಯೋಜನೆಯಂತೆ ಉರುಳುವ ಮರಗಳ ಲೆಕ್ಕ ಸುಮಾರು ಮೂವತ್ತರಲ್ಲಿದ್ದರೆ ವಾಸ್ತವದಲ್ಲಿ ನೂರಕ್ಕೂ ಮಿಕ್ಕು ಉರುಳಿದ್ದರ ಜಾಡು ಹಿಡಿದವರೇ ಇಲ್ಲ) ಈ ನಿಟ್ಟಿನಲ್ಲಿ ಅರಣ್ಯದೊಳಗಿನ ಮನುಷ್ಯ ಕಲಾಪಗಳ ನಾಡಿ ಹಿಡಿಯುವಲ್ಲಿ ತನಿಖಾ ಠಾಣೆಗಳು (ಚೆಕ್ ಪೋಸ್ಟ್ ಅಥವಾ ಫಾರೆಸ್ಟ್ ಗೇಟ್) ತುಂಬಾ ಮುಖ್ಯವಾದವು. ಅವನ್ನು ಉಪೇಕ್ಷಿಸಿ ಏನೆಲ್ಲಾ ಕಾಮಗಾರಿಗಳಲ್ಲಿ ಇಲಾಖೆ ಅಬ್ಬರದಲ್ಲಿ ತೊಡಗಿಕೊಳ್ಳುವುದಕ್ಕೆ ಕೆಲವು ಗಟ್ಟಿ ಉದಾಹರಣೆಗಳನ್ನು ಬಿಸಿಲೆ ದಾರಿಯಲ್ಲೂ ಕಾಣಬಹುದು.

12 March 2012

ಕನ್ನಡಿ ಕಲ್ಲು

ಕುಮಾರಪರ್ವತದ ಸುತ್ತ ಮುತ್ತ ಭಾಗ ಏಳು


To see the location and the terrain in Google Map, please click here.

ಕುಳ್ಕುಂದದಲ್ಲಿ ಸ್ಪಷ್ಟ ಪೂರ್ವಮುಖಿಯಾಗಿ ಹೊರಟ ಬಿಸಿಲೆ ದಾರಿ ಅಡ್ಡ ಹೊಳೆಯಗುಂಟ ಏರೇರುತ್ತಾ ಪೂರ್ಣ ಉತ್ತರಮುಖಿಯೇ ಆಗುವ ಹಂತದಲ್ಲಿ ನಾನು ಹಿಂದೆಲ್ಲಾ ಹೇಳಿದ ಸಂಕ ಹಿಡಿಯುತ್ತದೆ. ಅಲ್ಲಿದು ಹೊಳೆಯ ಪೂರ್ವ ದಂಡೆ ಸೇರಿದರೂ ಹಿಮ್ಮುರಿ ತಿರುವು ತೆಗೆದುಕೊಂಡಂತೇ ಪೂರ್ಣ ದಕ್ಷಿಣ ಮುಖಿಯಾಗಿ ಘಟ್ಟ ನಿಭಾಯಿಸ ತೊಡಗುತ್ತದೆ. ಇಲ್ಲಿನ ದಟ್ಟ ಹಸಿರಿನ ನಡುವೆ ಅನತಿ ದೂರದಲ್ಲೇ ನಮಗೆ ಪುಂಡುಪಾತ್ರವೊಂದು ತೆರೆಕುಣಿತ (=ಪೊರ್ಪಾಟ್, ಯಕ್ಷಗಾನದಲ್ಲಿ ವಿಶಿಷ್ಟ ಪಾತ್ರಗಳ ರಂಗಪ್ರವೇಶ ತಂತ್ರ) ಕೊಟ್ಟಂತೆ, ಪಶ್ಚಿಮಕ್ಕೆ ಬಂಡೆಮೈ ತೆರೆದುಕೊಂಡ ಶಿಖರ ಬಾಳೆಕಲ್ಲು ಬೆಟ್ಟ (ಸಮುದ್ರ ಮಟ್ಟದಿಂದ ೬೫೨ ಮೀ) ನಮ್ಮ ಕುತೂಹಲ ಕೆರಳಿಸುತ್ತದೆ. ಈ ಶಿಖರ ಮಂಕಾಡಿಸುತ್ತ ಇನ್ನೇನು ಅದರೆತ್ತರಕ್ಕೆ ತಲಪಿದೆವೆನ್ನುವಾಗ, ಐದನೆಯ ಹಿಮ್ಮುರಿ ತಿರುವು ಕಳೆದು ಉತ್ತರ-ಪೂರ್ವ ಮುಖಿಗಳಾಗುವಾಗ, ಒಮ್ಮೆಗೆ ಭಾರೀ ಶಿಲಾ ಮುಖದ ಶಿಖರವೊಂದು ಕಣ್ಣ ತುಂಬುತ್ತದೆ. ತೆರೆಮರೆಯ ಕಲಾಪಗಳೆಲ್ಲಾ ಮುಗಿದು ಒಡ್ಡೋಲಗ ದೃಶ್ಯಕ್ಕಾಗುವಾಗ ರಾಜ ವೇಷಧಾರಿ ತಣ್ಣಗೆ ಬಂದು ಸಿಂಹಾಸನ ಆವರಿಸಿಕೊಂಡಹಾಗೆ! ಪಶ್ಚಿಮಕ್ಕೆ ಎದೆ ಸೆಟೆಸಿ ನಿಂತಂತಿರುವ ಈ ಕಡಿದಾದ ಬಂಡೆಮೈ ಬುಡದಿಂದ ಸುಮಾರು ಒಂದುನೂರಾ ಹತ್ತು ಮೀಟರ್ ಎತ್ತರವೂ ಅದರ ಶಿಖರ ಸಮುದ್ರ ಮಟ್ಟದಿಂದ ೮೭೫ ಮೀಟರ್ ಎತ್ತರವೂ ಇದೆ. ಸರ್ವೇಕ್ಷಣ ಇಲಾಖೆಯ ಭೂಪಟ ಇದನ್ನು ಕರ್ಣಕಲ್ ಬೆಟ್ಟವೆಂದು ಹೆಸರಿಸುತ್ತದೆ. ಈ ಬಂಡೆ ಮಳೆ ಕಳೆದ ಮೊದಲಲ್ಲಿ ಮತ್ತೆ ಮಂಜು ಮಿಂದ ಕಾಲಗಳಲ್ಲಿ ಅದರಲ್ಲೂ ಇಳಿಸೂರ್ಯನ ನೇರ ಪ್ರತಿಫಲನಕ್ಕೇ ಇಟ್ಟ ಕನ್ನಡಿಯೋ ಎಂಬಂತೆ ಜನಪದರಿಗೆ ಕಂಡದ್ದಕ್ಕೇ ಜನಜನಿತ ಹೆಸರು ಕನ್ನಡಿಕಲ್ಲು.

20 February 2012

ಡಾ| ಕಾಕುಂಜೆ ಗೋಪಾಲ ಕೃಷ್ಣ ಭಟ್ (ಅಡ್ಡಹೊಳೆ ಆಸುಪಾಸು ಭಾಗ ಎರಡು)


ಕಳೆದ ಬಾರಿ ಉಲ್ಲಾಸ ಕಾರಂತರನ್ನು ಸಣ್ಣದಾಗಿ ಅಭಿನಂದಿಸಿ, ಅವರು ಪ್ರತಿನಿಧಿಸುವ ವನ್ಯಾಭಿಯಾನವನ್ನೇ ವಿಸ್ತರಿಸಿದ್ದೆ. ಅದರಲ್ಲಿ (ಬಿಸಿಲೆ) ಅಡ್ಡಹೊಳೆ ಆಸುಪಾಸಿನ ಅನುಭವಗಳನ್ನು ವಿಸ್ತರಿಸಲು ಪೀಠಿಕೆ ಹಾಕಿದ್ದೆ. ಆದರೆ ಅದರ ಬೆನ್ನಿಗೇ ಬಂದ ಪತ್ರಿಕಾ ವರದಿಗಳಲ್ಲಿ (ಶಿರಾಡಿ) ಅಡ್ಡಹೊಳೆ ಚಾರಣಕ್ಕೆ ಹೋದ ತಂಡ ಒಂದರ ತರುಣನೋರ್ವನ ದುರ್ಮರಣದ ವಿವರಗಳನ್ನು ಕಂಡು ನನಗೆ ವಿಷಾದವಾಯ್ತು. ಅದಕ್ಕೂ ಮಿಗಿಲಾಗಿ ಆಕಸ್ಮಿಕಗಳು ಘಟಿಸಿದಾಗ ತಮ್ಮ ಚರ್ಮ ಉಳಿಸಿಕೊಳ್ಳಲು ಜಾಗೃತವಾಗುವ ಅರಣ್ಯ ಇಲಾಖೆಯ ಕಲಾಪಗಳು ತೀವ್ರ ಅಸಮಾಧಾನವನ್ನು ಉಂಟುಮಾಡಿತು. ತಮ್ಮ ಸಾರ್ವಜನಿಕ ಶಿಕ್ಷಣ ಜವಾಬ್ದಾರಿಯನ್ನು ದುಬಾರಿ ಆದರೆ ಅದಕ್ಷ ಹೊಟೆಲ್ ಸಂಸ್ಕೃತಿಯಲ್ಲೋ ಅನಾವಶ್ಯಕ ಆದರೆ ಅನ್ಯಾನ್ಯ ಲಾಭಗಳ ಉದ್ದೇಶದ  ಮಾಧ್ಯಮಗಳ ಜಾಹೀರಾತು ಮತ್ತು ಭಾರೀ ಫಲಕಗಳ ಮೆರೆತದಲ್ಲೋ ಕೊನೆಗೆ ತೀರಾ ಅಪರಿಪೂರ್ಣ ‘ಪ್ರವೇಶಧನ’ ಸಂಗ್ರಹದಲ್ಲಷ್ಟೇ ತೊಡಗಿಸಿ, ಕುಂಭಕರ್ಣ ನಿದ್ರೆಗೆ ಜಾರುವುದು ಅರಣ್ಯ ಇಲಾಖೆಯ ಪ್ರಕೃತಿ! ಅರಣ್ಯದೊಳಗಿನ ಅಪಘಾತದ ಸುದ್ದಿಗೆ ಗಡಬಡಿಸಿ ಎದ್ದ ಇಲಾಖೆ, ವಾಸ್ತವದಲ್ಲಿ ತಂಡವನ್ನು ಪಾರುಗಾಣಿಸಿದ ಮತ್ತು ಶವಶೋಧಿಸಿದವರನ್ನು ಅಜ್ಞಾತಕ್ಕೋ (ಹೆಚ್ಚೆಂದರೆ ಎರಡನೇ ಸಾಲಿಗೋ) ತಳ್ಳಿ, ಬದುಕುಳಿದವರ ಮೇಲೆ ಅಕ್ರಮ ಪ್ರವೇಶಕ್ಕೆ ಕಾನೂನಿನ ಕ್ರಮ ಕೈಗೊಳ್ಳುತ್ತಿದೆ. ಖಂಡಿತಕ್ಕೂ ಕಾನೂನು ಬೇಕು. ಆದರೆ ಆಪತ್ಕಾಲದಲ್ಲಿ ಮಾತ್ರ, ಅದೂ ಕಾನೂನಿನ ಅಕ್ಷರಗಳನ್ನಷ್ಟೇ ಬಳಸಿಕೊಳ್ಳುತ್ತ, ಆಶಯಗಳನ್ನು ಗಾಳಿಗೆ ತೂರುವ ಇಲಾಖೆಯ ಧೋರಣೆ ಏನೇನೂ ಆರೋಗ್ಯಕರವಲ್ಲ. ಇದಕ್ಕೆ ನನ್ನದೇ ಅನುಭವವನ್ನು ಪೋಣಿಸುತ್ತಾ ಬಿಸಿಲೆ-ಅಡ್ಡಹೊಳೆಯ ಕಥನವನ್ನು ಮುಂದುವರಿಸುತ್ತೇನೆ.