(ವಿಠಲ ಶಾಸ್ತ್ರಿಗಳ ೯೧ ನೇ ಜಯಂತಿಯ ಸಂದರ್ಭ ಬರೆದದ್ದು)
ಮೂರ್ತಿ ದೇರಾಜೆ, ವಿಟ್ಲ
[೧೯೬೯ ಮೈಸೂರು ಮಹಾರಾಜ ಕಾಲೇಜಿನಲ್ಲಿ ನಾನು (ಇಂಗ್ಲಿಷ್ ಮತ್ತು) ಕನ್ನಡ ಐಚ್ಛಿಕ ವಿಷಯದ ವಿದ್ಯಾರ್ಥಿ. ಅಸಂಖ್ಯ ಸಹಪಾಠಿಗಳಲ್ಲಿ ಇಂದಿಗೂ ನೆನಪಲ್ಲುಳಿದ ಹೆಸರುಗಳು ಕೆಲವು, ಒಡನಾಟದಲ್ಲುಳಿದ ಸ್ನೇಹಗಳು ಇನ್ನಷ್ಟು ಕಡಿಮೆ. ಈ ವಿರಳರ ಗುಂಪಿನಲ್ಲಿ ಅಂದಿನಿಂದ ಇಂದಿನವರೆಗೂ ಯಮಳರಂತೆ ಬಳಕೆಯಿರುವ ಹೆಸರು, ವ್ಯಕ್ತಿಗಳು - ಶಂಕರ್, ಮೂರ್ತಿ. “ನಮ್ಮ ಸಹಪಾಠಿಗಳಂತೆ, ದಕ ಜಿಲ್ಲೆಯವರಂತೆ, ಹಾಸ್ಟೆಲ್ ವಾಸಿಗಳಂತೆ, ಶತಮಾನೋತ್ಸವ ಭವನದಲ್ಲಿ ಮ್ಯಾಜಿಕ್ ಪ್ರದರ್ಶನ ನೀಡ್ತಾರಂತೆ” ಹೀಗೇನೋ ನನಗಿವರ ಮೊದಲ ಪರಿಚಯ. ವಾಸ್ತವದಲ್ಲಿ ಈ ‘ಯಕ್ಷಿಣಿ ಯಮಳ’ರು ಕೇವಲ ಚಡ್ಡಿದೋಸ್ತರು (ಇಬ್ಬರೂ ಸುಮಾರು ಏಳನೇ ತರಗತಿಯಲ್ಲಿ ಓದುತ್ತಿದ್ದ ಕಾಲದಲ್ಲಿ ಮೂರ್ತಿಯ ಅಪ್ಪ - ದೇರಾಜೆ ಸೀತಾರಾಮಯ್ಯನವರು ಶಂಕರನ ಅಪ್ಪನ ಮನೆಯ ಬಳಿ ಆಸ್ತಿ ಮಾಡಿ ನೆಲೆಸಿದ್ದರಿಂದ ತೊಡಗಿದ್ದಂತೆ). ಮತ್ತೆ ಸಾಂಪ್ರದಾಯಿಕ ಓದಿನ ಹೊರಗಿನ ನೂರೆಂಟು ‘ಬೇಡಂಗಟ್ಟೆ’ಗಳಲ್ಲಿ ಸಮಾನಾಸಕ್ತರು. ಸಹಜವಾಗಿ ಆ ಎಳವೆಯಲ್ಲೆ ಶಂಕರ್ ‘ಗಿಲಿ ಗಿಲಿ ಮ್ಯಾಜಿಕ್’ ಎಂದದ್ದೂ ಮೂರ್ತಿ ತಟ್ಟೆ ತಪಲೆಯಲ್ಲಿ ‘ಮ್ಯೂಜಿಕ್ ಬೊಟ್ಟಿ’ದ್ದೂ ನನ್ನ ಬಗೆಗಣ್ಣಿಗೆ ಕಾಣಿಸುತ್ತದೆ! ಮಹಾರಾಜದದಿಂದ ಕನ್ನಡ, ಮನಶಾಸ್ತ್ರದಲ್ಲಿ ಇವರೀರ್ವರು ಸ್ನಾತಕರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಸ್ವಯಂ ನಿವೃತ್ತಿ ಯೋಗ ಒದಗುವವರೆಗೂ ನೌಕರರು. ಆದರೆ ಆ ಕಾಲಕ್ಕೆ ತಮಾಷೆಯ ವಿಷಯವೆಂದರೆ ಇವರ ಬ್ಯಾಂಕಿನ ಹುದ್ದೆ ಯಕ್ಷಿಣಿಯದ್ದೇ; ಬ್ಯಾಂಕಿನ ಪ್ರಚಾರ ವಿಭಾಗದಲ್ಲಿ ಇವರದು ‘ಮಾಯಾ ಮಂತ್ರ.’
ಇಂದಿವರ ಯಕ್ಷಿಣಿ ಜೋಡಿ ಸಾಮಾಜಿಕ ಮುಖದಲ್ಲಿ ವಿಶ್ವಖ್ಯಾತಿಯನ್ನೂ ವೈಯಕ್ತಿಕ ಮಟ್ಟದಲ್ಲಿ ಕೌಟುಂಬಿಕ ವ್ಯಾಪ್ತಿಯನ್ನೂ ಪಡೆದು ಧನ್ಯವಾಗಿ ಮುಂದುವರಿದಿದೆ. ಸಣ್ಣದಾಗಿ ಹೇಳುವುದಾದರೆ ಶಂಕರರ ಮಗ, ಮಗಳು ಮೂರ್ತಿಯ ಅಳಿಯ, ಸೊಸೆ. ಇಂದು ಎಲ್ಲರೂ ವೃತ್ತಿ ಮತ್ತು ವಾಸ್ತವ್ಯದ ನೆಲೆಗಳಲ್ಲಿ ಸ್ವತಂತ್ರರೇ ಇದ್ದರೂ ಅಧಿ-ವೃತ್ತಿರಂಗ, ಅರ್ಥಾತ್ ಯಕ್ಷಿಣೀ ಲೋಕದಲ್ಲಿ ಒಂದಾಗಿ, ಬಾಟಲಿ ಬಿಟ್ಟ ಭೂತದಂತೆ ಭೂಮವಾಗಿ ಬೆರಗುಗೊಳಿಸುವುದು ಬಿಟ್ಟಿಲ್ಲ!
ಮೂರ್ತಿಯ ಯಕ್ಷಿಣಿಗೆ ಅಪ್ಪ - ದೇರಾಜೆ ಸೀತಾರಾಮಯ್ಯನವರ, ಯಕ್ಷನ (ಯಕ್ಷಗಾನ) ಉಪದ್ರ ಕಡಿಮೆಯದ್ದೇನೂ ಅಲ್ಲ. ಮೂರ್ತಿಯ ಸಣಕಲ ಶರೀರ ವೇಷಕ್ಕೆ ಕುಣಿತಕ್ಕೆ ಹೇಳಿದ್ದಲ್ಲ, ನಾದವಿಲ್ಲದ ಶಾರೀರ ಗಾಯನಕ್ಕೆ ಸಲ್ಲ, ಅರ್ಥಧಾರಿಗೆ ಬೇಕಾದ ಕೃಷಿಯನ್ನೂ ಇವರು ಮಾಡಿದ್ದಿಲ್ಲ. ಆದರೆ ಅವೆಲ್ಲವನ್ನೂ ಹೆಚ್ಚಿನದನ್ನೂ ಬೌದ್ಧಿಕವಾಗಿ ಗ್ರಹಿಸಿ, ನಾಟಕರಂಗದ ನೇಪಥ್ಯದ ಕಲಾಪಗಳಲ್ಲಿ, ಮುಖ್ಯವಾಗಿ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವುದು ದೇರಾಜೆ ಮೂರ್ತಿತ್ವ. ಇವರು ಈಚೆಗೆ ಕೆಲವು ರಂಗ ಪ್ರಮಾಣಿತ ನಾಟಕಗಳನ್ನು ಬರೆದು ಪ್ರಕಟಿಸುವಷ್ಟೂ ಮುಂದುವರಿದಿದ್ದಾರೆ. ನನ್ನ ಜಾಲತಾಣದ ಓದಿನೊಡನೆ ಇವರು ತನ್ನ ಯಕ್ಷ-ಮುಖವರ್ಣಿಕೆಯನ್ನು ಇಲ್ಲಿ ಕೈಗೆತ್ತಿಕೊಂಡಿದ್ದಾರೆ. ನಮ್ಮೊಳಗಿನ ಮಾತುಕತೆಯಲ್ಲಿ ಮೂರ್ತಿ, ಹೀಗೆ ಎಲ್ಲೋ ಬರೆದ, ಎಂದೋ ಪ್ರಕಟವಾದ ಅಥವಾ ಆಗದ, ಆಪ್ತ ಯಕ್ಷ ವಿವರಗಳ ಬಗ್ಗೆ ಉಲ್ಲೇಖಿಸಿದರು. “ಅಂತರ್ಜಾಲದಲ್ಲಿ ಬರೆದವರಿಗೆ ಮತ್ತು ಪ್ರಕಟಿಸಿದವರಿಗೆ ಆರ್ಥಿಕ ಉಪಯುಕ್ತತೆ ಇಲ್ಲದಿರಬಹುದು. ಆದರೆ ಪ್ರಕಟಣೆಗೆ ವೆಚ್ಚವಿಲ್ಲ, ಸಾರ್ವಜನಿಕ ಉಪಯುಕ್ತತೆಗೆ ಮೇರೆಯಿಲ್ಲ” ಎನ್ನುವ ನನ್ನ ಧೋರಣೆಯಲ್ಲಿ ರುಚಿಕಂಡು ಮೂರ್ತಿ ಒಂದು ಲೇಖನ ಮತ್ತು ಅವರ ಸಂಗ್ರಹದಲ್ಲೇ ಇದ್ದ ಆ ಕಾಲದ ಎರಡು ಸೂಕ್ತ ಚಿತ್ರಗಳನ್ನೂ ಕಳಿಸಿಕೊಟ್ಟಿದ್ದಾರೆ. ಅದನ್ನು ಓದಿ, ಇನ್ನಷ್ಟು ಈ ಮಾಧ್ಯಮವನ್ನು ಸಮೃದ್ಧಗೊಳಿಸುವಂತೆ ನಿಮ್ಮ ಪ್ರತಿ-ಬರಹಗಳನ್ನು ಕೊಡುವಿರಾಗಿ ನಂಬಿದ್ದೇನೆ. ಇನ್ನು ಓದಿ, ದೇರಾಜೆ (ಕೃಷ್ಣ) ಮೂರ್ತಿ...]