Showing posts with label ಗೋವಾ. Show all posts
Showing posts with label ಗೋವಾ. Show all posts

17 August 2012

ಕ್ಷೀರಪಥದಿಂದ ಕಾಳಿ ಪಾತ್ರೆಗೆ (ದೂದ್ ಸಾಗರ್ ಸರಣಿಯಲ್ಲಿ ಹನಿ ಮೂರು)


ಗೋವಾ-ಕರ್ನಾಟಕದ ವಾಸ್ತವದ ಗಡಿ ರೇಖೆ ಘಟ್ಟದ ಮೇಲೆಲ್ಲೋ ಇದ್ದರೂ ತನಿಖಾ ಠಾಣೆಯನ್ನು ಮೊಲೆನ್ನಿನಲ್ಲೇ ಇಟ್ಟುಕೊಂಡಿದ್ದರು. ಇವರಿಗೆ ‘ಬಾಟಲಿ-ಪುತ್ರ’ರಿಂದ ಒಳ್ಳೆಯ ಕರ (ಅಥವಾ ಮೇಲ್ಸಂಪಾದನೆ) ಸಂಗ್ರಹವಾಗುತ್ತದಂತೆ. ಕುಡಿಯುವ ಯೋಗ್ಯತೆ ಇಲ್ಲದ ನಮ್ಮನ್ನವರು ಕೀಳ್ಗಣ್ಣಲ್ಲಿ ಕಂಡರು. ಆದರೆ ಅಲ್ಲಿ ಸಹಜವಾಗಿ ವಿಕಸಿಸಿದ್ದ ಧಾಬಾ ಮಾತ್ರ ನಮ್ಮ ಹಸಿವು, ಬಾಯಾರಿಕೆಗಳ ಅಗತ್ಯಕ್ಕೆ ಸಾಕಷ್ಟು ‘ದಂಡ’ ಹಾಕಿದ್ದನ್ನು ಸಂತೋಷದಲ್ಲೇ ಒಪ್ಪಿ ಮುಂದುವರಿದೆವು. ದಾರಿ ನಮ್ಮ  ಶಿರಾಡಿ ಘಾಟಿಯನ್ನೇ ಹೋಲುತ್ತಿತ್ತು. ಡಾಮರೂ ಮೊದಲೇ ಹೇಳಿದಂತೆ ನುಣ್ಣಗೇ ಇತ್ತು. ಆದರೆ ಅದಕ್ಕೆ ತಕ್ಕಂತೆ (ಇಂದು ನಾವು ಹೊಸ ಚತುಷ್ಪಥಗಳಲ್ಲಿ ಕಾಣುತ್ತಿರುವ) ಏರು, ತಿರುವುಗಳ ವ್ಯವಸ್ಥೆಯಲ್ಲಿ ವೈಜ್ಞಾನಿಕ ಕೊರತೆಯಿಂದ ಸಾಕಷ್ಟು ಅಪಘಾತಗಳು ಆಗುತ್ತಿದ್ದುದನ್ನು ಗಮನಿಸಿದೆವು. ಒಂದು ತೀವ್ರ ಏರಿನ ತಿರುವಿನಲ್ಲಿ ದಾರಿಯಲ್ಲಿ ಭಾರೀ ಮೀನುಗಳ ರಾಶಿ. “ಅರೆ, school of fish ಘಾಟಿಯ ಚಂದ ನೋಡಲು ಚಾರಣ ಬಂದಿರಬೇಕು” ಎಂದು ಉದ್ಗರಿಸಿಹೋಯ್ತು! ಸ್ವಲ್ಪ ಮುಂದೆ ಯಾವುದೋ ಗುದ್ದಿ ಜಖಂಗೊಂಡ ಟೆಂಪೋ ಕಂಡ ಮೇಲೆ ಮಾತನ್ನು ಸಂಜೆ ಪತ್ರಿಕಾ ಕಾಲಂಗೆ ಪರಿಷ್ಕರಿಸಿಕೊಂಡೆ: ‘ವಿಹಾರಕ್ಕೆ ಹೊರಟ ಮೀನುಗಳ ದುರ್ಮರಣ! ಕೊಲೆಗಾರ ಲಾರಿ ಕೊಳ್ಳಕ್ಕೆ ಹಾರಿ ಆತ್ಮಹತ್ಯೆ!!’ ಅನುಬಂಧ - ಆರೋಹಣ ಸಾಹಸಿಗಳ ಅಶ್ರು ತರ್ಪಣ!!!

10 August 2012

ಅಮಲಿನ ಗೋವಾ (ದೂದ್ ಸಾಗರ್ ಸರಣಿ - ಹನಿ ಎರಡು)


ಯೋಜನಾವಧಿಯಲ್ಲಿ ನೆನಪಿನ ಬೆರಗಿಗೆ (ನನ್ನದೇ) ಪುಸ್ತಕದಂಗಡಿಯಲ್ಲಿ ನಿಜದ ದಾರಿ ಹುಡುಕುತ್ತ ಸುಮಾರು ಭೂಪಟ, ಪ್ರವಾಸ ಕಥನದ ಪುಸ್ತಕಗಳನ್ನು ಮಗುಚಿ ಹಾಕಿದ್ದೆ. ಇಪ್ಪತ್ನಾಲ್ಕು ವರ್ಷದ ಮೇಲೂ ದೂದ್‌ಸಾಗರ್ ಬಳಿ ರೈಲ್ವೇ ಹಳಿ ಮಾತ್ರ ಕಾಣುತ್ತಿತ್ತು. ಅಸ್ಪಷ್ಟ ದಾರಿ ಸೂಚಕ ಗೀಟುಗಳು ದಕ್ಷಿಣದಲ್ಲಿ ಕಾಲೆಮ್‌ವರೆಗೂ ಉತ್ತರದಲ್ಲಿ ಕೊಲೆನ್‌ವರೆಗೂ ಹರಿದಿತ್ತು. ನಮಗೆ ಮತ್ತೆ ಬೈಕ್ ಬಿಟ್ಟು ರೈಲೇರಲು ಮನಸ್ಸಿರಲಿಲ್ಲ. ಮುಂದೇನು ಎಂಬ ನನ್ನ ಯೋಚನೆಗೆ ಭಂಗ ಬರುವಂತೆ ಒಂದು ಗಿರಾಕಿ, ಕೃಷಿ ಪುಸ್ತಕ ಕೇಳಿ ಬಂದರು. One straw revolution ಕೊಟ್ಟೆ. ಆತ ನಸುನಕ್ಕು “ಇದು ನಮ್ಮ ಗೋವಾದ್ದೇ ಪ್ರಕಟಣೆ” ಎನ್ನಬೇಕೇ. ನಾನು ಗಿರಾಕಿ ಮರೆತು, ಅವರಲ್ಲಿ ಗೋವಾ ಮಾಹಿತಿದಾರ ಎಂ.ವಿ ಹೆಗಡೆಯವರನ್ನು ಕಂಡುಕೊಂಡೆ! ಕೊಲೆನ್ನಿನಲ್ಲೇ ಕೃಷಿ ನಡೆಸಿದ್ದ ಹೆಗಡೆಯವರು ದಾರಿ ವಿವರ ಮತ್ತು ಸ್ವತಃ ಸಹಾಯ ಮಾಡಬಲ್ಲೊಬ್ಬ ಮಿತ್ರನಿಗೆ ಪತ್ರವನ್ನೂ ಕೊಟ್ಟರು. ಹಾಗೆ ರೂಪಿಸಿದ್ದ ಯೋಜನೆ ಮರುದಿನಕ್ಕಿತ್ತು. ಮೊದಲ ದಿನ ರೈಲು ಯಾನದ ಅನಿಶ್ಚಿತತೆಗೇ ಮೀಸಲು. ಅರ್ಧ ದಿನವೇ ಉಳಿದಿದ್ದುದರಿಂದ ಮೊದಲು ಆರಾಮವಾಗಿ ನಮ್ಮ ಮತ್ತು ಬೈಕ್‌ಗಳ ಹೊಟ್ಟೆಗೆ ಆಹಾರ ಹಾಕಿದೆವು.

20 July 2012

ದೂದ್ ಸಾಗರ್ (ಹನಿ ಒಂದು - ಕೊಂಕಣ ರೈಲು ಕಂಡೀರಾ)


ಭೂ ತಾಯಿಯ ಹಾಲಿನ ಭಾಂಡದಲ್ಲಿ ಉಕ್ಕು ಬಂದಿತ್ತು, ಬೆಟ್ಟ ಬಟ್ಟಲ ಅಂಚಿನಲ್ಲಿ ಬೆರಗಿನ ಬುರುಗು ತುಳುಕಿತ್ತು. ಮಳೆತೊಳೆದ ಬೆಟ್ಟ ಸಾಲಿನ ನೆತ್ತಿಯಿಂದ ಹಾಲಹೊಳೆ, ಹೌದು ಹೆಸರೇ ಹಾಗೆ - ದೂದ್ ಸಾಗರ್, ಅಕ್ಷರಶಃ ನೊರೆಯುಬ್ಬಿಸಿ ಧುಮುಗುಡುತ್ತಿತ್ತು. ಆ ಎತ್ತರದಿಂದ ನಮ್ಮ ಪಾದಮೂಲದವರೆಗೆ ಮತ್ತೂ ಕೆಳಕ್ಕೆ ಮಿಂದ ಬಂಡೆಯನ್ನೆ ಮತ್ತೆ ಮೀಯಿಸುವಂತೆ, ಒತ್ತಿನ ಹಸುರಿಗೆ ಪ್ರತಿ ಕ್ಷಣದ ಬೆರಗು ಹೊಸದೇ ಅನ್ನಿಸುವಂತೆ ‘ಉಧೋ’ ಹೇಳುತ್ತಲೇ ಇತ್ತು. ನೊರೆ ಚೆಂಡು ಮುಕ್ಕುಳಿಸಿ, ವಾತಾವರಣದಲ್ಲೆಲ್ಲ ಹುಡಿ ಹಾರಿಸಿ, ಮಳೆಯನ್ನೂ ತಾನೇ ವಹಿಸಿಕೊಂಡು ಸಂಭ್ರಮಿಸುತ್ತಿದ್ದ ದೂದ್ ಸಾಗರ್ ಹೊಳೆಯ ಜಲಪಾತ ಅತಿಶಯೋಕ್ತಿಗಳೆಲ್ಲವನ್ನೂ ಅನ್ವರ್ಥಗೊಳಿಸಿಕೊಂಡಿತ್ತು. ನನ್ನ ನೆನಪಿನ ಮಸುಕು ಎಳೆ ಹಿಡಿದು, ಕನಿಷ್ಠ ಸೌಕರ್ಯಗಳ ಕೊರತೆ ಮೀರಿ, ನಿರುತ್ತೇಜಕ ಮಳೆ ಮಬ್ಬುಗಳ ಪೊರೆ ಹರಿದು ಹದಿಮೂರು ಕಿಮೀ ನಡೆದು ಬಂದ ನಮಗೆ ಪರಮ ಧನ್ಯತೆಯ ಸನ್ನಿವೇಶ. ದೇಶ ಸ್ವಾತಂತ್ರ್ಯ ಸ್ವರ್ಣ ಸಂಭ್ರಮದ ಔಪಚಾರಿಕತೆಗಳಲ್ಲಿ ಸಿಕ್ಕಿಕೊಂಡಿದ್ದಾಗ ನಮಗಿಲ್ಲಿ ನಿಜ ಹಬ್ಬ. ಪಶ್ಚಿಮ ಘಟ್ಟದ, ಗೋವಾ ವಲಯದ, ಕಗ್ಗಾಡಮೂಲೆಯ, ಯುಗಾಂತರಗಳ ರುದ್ರ ನಾಟ್ಯಕ್ಕೆ ಐದು ಮಿನಿಟಿಗಾದರೂ ಪ್ರೇಕ್ಷಕರಾಗುವ ಅವಕಾಶ. ಈ ಸಾಹಸ ಯಾತ್ರೆಯ ರಮ್ಯ ಕಥಾಮೃತವನ್ನಿನ್ನು ಸಾದ್ಯಂತ ಬಣ್ಣಿಸುತ್ತೇನೆ (“...ಬಣ್ಣಿಪೆನೀ ಕಥಾಮೃತವಾ” ಇಲ್ಲಿ ಚಂಡೆ ಬಡಿಬೇಕು!).

23 January 2009

ಗೋವಾ ಚಿತ್ರೋತ್ಸವ ಭಾಗ - ೩

ಇನಾಕ್ಸ್ ಪ್ರವೇಶಿಸುವಲ್ಲಿನ ತನಿಖೆ ಮುಗಿದಮೇಲೆ ಒಳಗೆ ಹತ್ತೆಂಟು ಕಾರ್ಯಕರ್ತರು ಔಪಚಾರಿಕ ಅಗತ್ಯಗಳಿಗೆ ಒದಗುವವರಂತೆ ಹಸನ್ಮುಖಿಗಳಾಗಿ ನಿಂತು ಸ್ವಾಗತಿಸಿದ್ದರು. ನಿಗದಿತ ಸಮಯಕ್ಕೆ ಒಂದೆರಡು ಮಿನಿಟು ಮೊದಲೇ ಕಾರ್ಯಕರ್ತನೊಬ್ಬ ಅಂದಿನ ಚಿತ್ರದ ಕಿರು ಜಾತಕ ಘೋಷಿಸಿ ನೇರ `ರೀಲು’ ಬಿಚ್ಚಲು ಅನುವುಮಾಡಿಕೊಟ್ಟ! (ನಮ್ಮಲ್ಲಿ ನಾಲ್ಕಾಣೆ ಮಗ್ಗಿ ಪುಸ್ತಕ ಬಿಡುಗಡೆ ಮಾಡುವುದಿದ್ದರೂ ಕನಿಷ್ಠ ನಿರ್ವಾಹಕನಿಂದ ತೊಡಗಿ ಪ್ರಾರ್ಥನೆ, ಉದ್ಘಾಟಕ, ಅಧ್ಯಕ್ಷ, ಪ್ರಸ್ತಾವನೆಕಾರ, ಸ್ವಾಗತಕಾರ, ಅತಿಥಿ, ಲೇಖಕ, ವಂದನಾರ್ಪಣೆ ಎಂಬ ಅಷ್ಟೂಗಿರಗಳ ಮೆರೆತದಲ್ಲಿ ಮುಖ್ಯ ವಿಷಯ ಮತ್ತು ಪ್ರೇಕ್ಷಕ ಚಟ್ಟಕ್ಕೇರುವುದು ನಿಸ್ಸಂದೇಹ!)

Fallen Angels ಅಥವಾ ಧರೆಗೆಬಿದ್ದ ಅಪ್ಸರೆಯರು, ಹಾಂಕಾಂಗಿನ ಚಿತ್ರ, ನಿರ್ದೇಶಕ ವಾಂಗ್ ಕರ್ ವಾಯ್ (ಅಭಯನ ಅನುಭವದಲ್ಲಿ ಬಹುಖ್ಯಾತನಂತೆ). ಕ್ಷೌರ, ಧಾಬಾ, ಕಸಹೊಡೆಯುವುದು, ಸೂಳೇಗಾರಿಕೆ ಮುಂತಾದ ನಗಣ್ಯ ಆದರೆ ಅನಿವಾರ್ಯ ವೃತ್ತಿಪರತೆಗಳ ಪಟ್ಟಿಯಲ್ಲಿ ಇಲ್ಲಿ ಕೊಲೆಗಡುಕತನವೂ ಇದೆ ಎಂಬುದು ಭಾರೀ ಆಘಾತಕರ ಅನುಭವ. ಚಿತ್ರ ನನ್ನ ಅನುಭವ ಸ್ತರಕ್ಕೆ ಅಪರಿಚಿತ ಮಾಹಿತಿಗಳ ಓಣಿಯ ಓಟದ ಹಾಗನ್ನಿಸಿತು. ದೇಶ, ಭಾಷೆಗಳ ಅಂತರವೂ ಪ್ರಯಾಣದ ಆಯಾಸವೂ ನನ್ನ ಗ್ರಹಿಕೆಗಳನ್ನು ಮಸಕುಗೊಳಿಸಿರುವ ಸಾಧ್ಯತೆಗಳೂ ಇರುವುದರಿಂದ ಇಷ್ಟು ಸಾಕು.

22 January 2009

ಗೋವಾ ಚಿತ್ರೋತ್ಸವ ಭಾಗ - ೨


ಪಂಚತಾರಾ ಪಂಚ್!

ಉಡ್‌ಲ್ಯಾಂಡ್ಸ್‌ನಲ್ಲಿ ಪುತ್ತಪ್ಪ ಬ್ಯಾರಿ!

ನಮ್ಮ ಅನುಕೂಲಕ್ಕೆ ಹೊರಟರೂ ಕಾದಿದ್ದ ಹವಾನಿಯಂತ್ರಿತ ವ್ಯಾನ್ ಕೂಡಲೇ ನಮ್ಮ ಐವರನ್ನೇ ಉತ್ಸವಾಂಗಣಕ್ಕೆ ಒಯ್ದು ಬಿಟ್ಟಿತು. ಉತ್ಸವದ ಪ್ರಧಾನ ಆಡಳಿತ ಕಚೇರಿ ಬದಿಯ ಹಳೆಯ ಕಟ್ಟಡದಲ್ಲಿತ್ತು (ಅಲ್ಲಿ ಹಿಂದೆ ವೈದ್ಯಕೀಯ ಕಾಲೇಜ್ ಇತ್ತು). ಉತ್ಸವದ ಅತಿಥಿಗಳಿಗೆ ತಲಾ ನಾಲ್ಕು `ಉಪ ಅತಿಥಿ’ಗಳನ್ನು ಸೇರಿಸಿಕೊಳ್ಳುವ ಅವಕಾಶವಿದ್ದುದರಿಂದ ನಮ್ಮಿಬ್ಬರಿಗೆ ಪರಿಚಯ ಬಿಲ್ಲೆ ಮತ್ತು ರಹದಾರಿ ಪತ್ರ ಸಂಗ್ರಹಿಸಿಕೊಂಡೆವು. ಒಟ್ಟಾರೆ ವಠಾರ ಪ್ರವೇಶದಲ್ಲೇ ಅತಿಥಿ ಪತ್ರದ ತಪಾಸಣೆ, ವೈಯಕ್ತಿಕ ಚೀಲ ಹಾಗೂ ದೇಹ ತಡಕುವುದು, ಲೋಹ ಪರೀಕ್ಷಕ ಯಂತ್ರಕ್ಕೆ ಒಡ್ಡುವುದೆಲ್ಲ ಇತ್ತು. ಮುಂದೆ `ನಮ್ಮ’ ಗುರುತಿನ ಪದಕವಿದ್ದರೂ ವಿಸ್ತಾರ ವಠಾರದಲ್ಲಿ ಹರಡಿದ್ದ ಪ್ರತಿ ಕಛೇರಿ, ಪ್ರದರ್ಶನಾಲಯ, ಥಿಯೇಟರ್‌ಗಳ ದ್ವಾರಗಳಲ್ಲೂ ತಡಕು ಸೇವೆ, ಲೋಹ ಪರೀಕ್ಷಕ ಚೌಕಟ್ಟು ಕಡ್ಡಾಯವಾಗಿ ನಡೆದಿದ್ದು ಹರ್ಷದ ಹೊಳೆಯಾಳದ ಅನೂಹ್ಯ ಭಯಗಳನ್ನು ನೆನಪಿಸುತ್ತಲೇ ಇತ್ತು. ಹೆಚ್ಚುವರಿಯಾಗಿ ಥಿಯೇಟರ್ ಪ್ರವೇಶದಲ್ಲಿ ನಮ್ಮ ನೀರಬಾಟಲಿಗಳನ್ನು ಹೊರಗಿಡಿಸುತ್ತಿದ್ದರು. ಇದು ಭದ್ರತೆಯ ಕ್ರಮವಲ್ಲ, ಶುಚಿತ್ವದ ಆವಶ್ಯಕತೆ ಎಂದು ತಿಳಿದಾಗ ನಮ್ಮ `ಸಂಸ್ಕೃತಿ’ಯ ಬಗ್ಗೆ ನಾಚಿಕೆಯೂ ಆಯ್ತು.

18 January 2009

ಗೋವಾ ಚಿತ್ರೋತ್ಸವ ಭಾಗ - ೧



ಮೂಡಿತು ಗರಿ

ಗುಬ್ಬಚ್ಚಿಗಳು ದೀರ್ಘ ಹಾರಾಟದ ಹಕ್ಕಿಗಳಲ್ಲ. ಸಹಜವಾಗಿ ಅಭಯನ ಚೊಚ್ಚಲ (ನಿರ್ದೇಶನದ ಸಿನಿಮಾ) `ಗುಬ್ಬಚ್ಚಿಗಳು’ ಸಾರ್ವಜನಿಕಕ್ಕೆ ಬರುವ ಮೊದಲು ಅಲ್ಲಲ್ಲಿ ಕುಪ್ಪಳಿಕೆಗಳನ್ನು ನಡೆಸಿತು. ಲಾಸ್ ಎಂಜಲೀಸ್, ನ್ಯೂಯಾರ್ಕ್, ಟೊರೊಂಟೋ, ಕೋಲ್ಕೊತ್ತಾಗಳಲ್ಲಿ ಚೂರುಪಾರು ಕುಕ್ಕಿ, ಹೆಕ್ಕಿ ಭಾರತೀಯ ಚಿತ್ರೋತ್ಸವಕ್ಕಾಗುವಾಗ ಭಾರತೀಯ ಇಪ್ಪತ್ತೈದರಲ್ಲಿ, ಕನ್ನಡದ ಮೂರರಲ್ಲಿ ಒಂದಾಗಿ ನಿಂತಿತು. ಸುಮಾರು ಈ ಹೊತ್ತಿಗೆ ಅಭಯನಿಗೆ ರಶ್ಮಿಯೊಡನೆ ಮದುವೆಯಾಯ್ತು. ಬೆನ್ನಿಗೆ ಇವಳಿಗೆ ಪರೀಕ್ಷೆ ಕಾಟ! ಸರಿ ಅವನು ಬೆಂಗಳೂರು, ಇವಳು ಮಂಗಳೂರು. ನಿಮಗೆಲ್ಲಾ ಗೊತ್ತಿರುವಂತೆ ಈಚಿನ ವರ್ಷಗಳಲ್ಲಿ ಭಾರತದ ಅಧಿಕೃತ ಅಂತಾರಾಷ್ಟ್ರೀಯ ಉತ್ಸವಕ್ಕೆ ಖಾಯಂ ನಿವೇಶನ ಗೋವಾ. ಇದಕ್ಕೆ ಹೊಂದಿದಂತೆ ರಶ್ಮಿಯ ಸೆಮೆಸ್ಟರ್ ಪರೀಕ್ಷೆ ಮುಗಿದು ರಜೆ ಆರಂಭವಾಗುವುದೂ ಗೊತ್ತಾಯ್ತು. ಸರಿ, ನವದಂಪತಿಗೆ ಆಧುನಿಕ ಸಂಪ್ರದಾಯವೇ ಆಗಿರುವ ಮಧುಚಂದ್ರವೂ ಚಿತ್ರೋತ್ಸವವೂ ಒಟ್ಟಿಗೇ ನಡೆಯಲಿ ಎಂದೇ ನಾವೆಲ್ಲ ಹಾರೈಸಿದೆವು. ಚಿತ್ರೋತ್ಸವ ಸಮಿತಿ ನಿರ್ಮಾಪಕ (ಬಿ.ಸುರೇಶ) ಮತ್ತು ನಿರ್ದೇಶಕರಿಗೆ ಮಾತ್ರ ನಿರ್ಮಾಣ ಕೇಂದ್ರದಿಂದ ಅಂದರೆ ಬೆಂಗಳೂರಿನಿಂದ ಗೋವಾಕ್ಕೆ ಹೋಗಿಬರುವ ವಿಮಾನ ಸೌಲಭ್ಯ ಕೊಡುತ್ತಿತ್ತು. ಉಳಿದಂತೆ ಅಲ್ಲಿನ ವಸತಿ ವ್ಯವಸ್ಥೆ, ಯಾವುದೇ ಚಿತ್ರ ವೀಕ್ಷಣಾ ವ್ಯವಸ್ಥೆಗಳನ್ನು ನಾಮಾಂಕಿತರೊಡನೆ ನಾಲ್ವರು ಅತಿಥಿಗಳಿಗೆ ಸಮಿತಿ ಉಚಿತವಾಗಿ ಒದಗಿಸುತ್ತಿತ್ತು.  ಹಾಗಾಗಿ ಅಭಯ ಅಲ್ಲಿಗೆ ತಲಪುವ ದಿನ ನೋಡಿಕೊಂಡು ರಶ್ಮಿಯನ್ನು ಮಂಗಳೂರಿನಿಂದ ಅಲ್ಲಿಗೊಯ್ದು ಮುಟ್ಟಿಸುವ ಜವಾಬ್ದಾರಿಯಷ್ಟೇ ನನಗೆ ಬಂತು. ಮತ್ತದಕ್ಕೂ `ಸಂಭಾವನೆ’ ರೂಪದಲ್ಲಿ ಅಭಯನಿರುವ ಉದ್ದಕ್ಕೂ ನಾನಲ್ಲಿದ್ದು ಚಿತ್ರೋತ್ಸವದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದಿತ್ತು. ಆದರೆ ನನ್ನ ಅಂಗಡಿಯ ಕೆಲಸ ಮತ್ತೂ ಮುಖ್ಯವಾಗಿ ಅವರಿಬ್ಬರ ಏಕಾಂತತೆಯ ಅವಕಾಶ ಹಾಳು ಮಾಡದ ಎಚ್ಚರದಲ್ಲಿ ಬರಿಯ ಹೋದ ಹಗಲಿನ ಕಾರ್ಯಕ್ರಮದಲ್ಲಷ್ಟೇ ಭಾಗಿಯಾಗಿ ಮರಳುವಂತೆ ಟಿಕೇಟ್ ಮಾಡಿಕೊಂಡೇ ಹೊರಟೆ.