Showing posts with label ದೀಪದಡಿಯ ಕತ್ತಲೆ. Show all posts
Showing posts with label ದೀಪದಡಿಯ ಕತ್ತಲೆ. Show all posts

26 July 2016

ಒಂಟಿತನ ಶಾಪವಲ್ಲ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ
 ಅಧ್ಯಾಯ ೩೯


ನಡೆದು ಬಂದ ದಾರಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿದಾಗ ದಾರಿ ಮೊದಲೇ ಇತ್ತೇ? ಅಥವಾ ನಾನೇ ಮಾಡಿಕೊಂಡೆನೇ ಎಂದು ನನಗೆ ಸಂದೇಹವೂ ಆಶ್ಚರ್ಯವೂ ಉಂಟಾಗುತ್ತದೆ. ದಾರಿಯ ನಿರ್ಮಾಣದಲ್ಲಿ ಕೆಲವರು ಹೊಂಡ ತೋಡಿದವರಿದ್ದರು. ಹಲವರು ಹಾರೆ ಗುದ್ದಲಿ ಹಿಡಿದು ನನಗೆ ಸಹಕರಿಸಿದವರೂ ಇದ್ದರು. ಹೊಂಡಕ್ಕೆ ದೂಡಿದವರಿರುವಂತೆ ಕೈ ಹಿಡಿದೆತ್ತಿ ಆಸರೆ ನೀಡಿ ಮುನ್ನಡೆಸಿದವರೂ ಇದ್ದರು. ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರೀತಿಯನ್ನು ಧಾರೆಯೆರೆದವರ ಪಾತ್ರ ಎಷ್ಟು ಮಹತ್ವವೋ ಅದಕ್ಕಿಂತಲೂ ಹೆಚ್ಚು ಮಹತ್ವದ ಪಾತ್ರ ವಹಿಸಿದವರಾರು ಗೊತ್ತೇ? ನಿಂದಕರು ಮತ್ತು ಶತ್ರುಗಳು. ಕೆಟ್ಟ ಮಾತು ಆಡಲಾರೆವು ಎಂಬಷ್ಟು ಸುಲಭದಲ್ಲಿ ಕೆಟ್ಟ ಮಾತು ಕೇಳಲಾರೆವು ಎಂದು ಹೇಳಲು ಸಾಧ್ಯವಿಲ್ಲವಷ್ಟೆ.

19 July 2016

ಅಮ್ಮನೆಂಬೋ ಪ್ರೀತಿಯ ಕಡಲು

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ
 ಅಧ್ಯಾಯ ೩೮

`ತಾಯೊಲವೆ ತಾಯೊಲವು ಲೋಕದೊಳಗೆ
ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ'

ಇದು ಜಿ.ಎಸ್. ಶಿವರುದ್ರಪ್ಪನವರ ಕವನದ ಸಾಲು. ಪ್ರಪಂಚದ ಸಮಸ್ತ ತಾಯಂದಿರಿಗೂ ಮಾತು ಅನ್ವಯವಾಗುತ್ತದೆ. ನನ್ನ ಅಮ್ಮನಂತೂ ಒಂಬತ್ತು ಮಕ್ಕಳನ್ನು ಹೆತ್ತು ಇಬ್ಬರನ್ನು ಮಾತ್ರ ಜೀವಂತವಾಗಿ ಉಳಿಸಿಕೊಂಡವಳು. ಹಾಗಾಗಿ ನಮ್ಮ ಮೇಲೆ ಅವಳ ಪ್ರೀತಿ ಧಾರಾಕಾರವಾಗಿ ಸುರಿದಿದ್ದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಸುಮಾರು ೮೪ ವರ್ಷಗಳ ತುಂಬು ಜೀವನವನ್ನು ಬಾಳಿದ ಆಕೆ ಜೀವನದುದ್ದಕ್ಕೂ ಅನುಭವಿಸಿದ ಮಾನಸಿಕ ಯಾತನೆ ಸಾಮಾನ್ಯವಾದುದಲ್ಲ. ಸಮೃದ್ಧ ಬೇಸಾಯದ ಗೇಣಿಭೂಮಿಯನ್ನು ಧಿಕ್ಕರಿಸಿ  ಬರಿಗೈಯಲ್ಲಿ ಮಂಗಳೂರಿಗೆ ಬಂದು ಬಂಧುಗಳ ಹಂಗಿನಲ್ಲಿ ಬದುಕುವಂತಹ ಸ್ಥಿತಿಯಲ್ಲೂ ತಾಳ್ಮೆಗೆಡದೆ, ದುಡಿಮೆಯಿಲ್ಲದ ನಿತ್ಯರೋಗಿಯಾದ ಗಂಡನನ್ನು ತಾನು ಬೀಜದ ಕಾರ್ಖಾನೆಯಲ್ಲಿ ದುಡಿದು ಸಾಕಬಲ್ಲೆನೆಂಬ ಧೈರ್ಯ ತುಂಬಿದವಳು ಆಕೆ. ಅವರ ದಾಂಪತ್ಯದಲ್ಲಿ ಹೊಂದಾಣಿಕೆ ಮತ್ತು ಸಹನೆಯಿತ್ತೇ ಹೊರತು ಮಾಧುರ್ಯವಿರಲಿಲ್ಲ. ಎಲ್ಲಾ ಸಂಸಾರಗಳಲ್ಲಿ ಗಂಡ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದ. ನಮ್ಮಲ್ಲಿ ಹೆಂಡತಿ ಗಂಡ ಮಕ್ಕಳನ್ನು ಸಾಕುತ್ತಿದ್ದಳು. ಅಪ್ಪ ತೀರಿದ ಬಳಿಕ ದೀರ್ಘ ದಾಂಪತ್ಯದಿಂದ ಬಿಡುಗಡೆಗೊಂಡಾಗ ಅವಳ ಮನಸ್ಸಿಗೆ ಏನನಿಸಿರಬಹುದು? ಒಂದು ಬಂಧನದಿಂದ ಮುಕ್ತಿ ಲಭಿಸಿದ ಅನುಭವವಾಗಿರಬಹುದೇ? ಹೌದು, ಅವಳ ವರ್ತನೆಗಳು ಅದನ್ನೇ ಹೇಳುತ್ತಿದ್ದುವು. ಬಳಿಕ ಮಗನ ಮೇಲೆ ಪ್ರಾಣ ಇಟ್ಟುಕೊಂಡಿರುವ ಅಮ್ಮನಿಗೆ ಅವನೇ ನಮ್ಮ ರಕ್ಷಕ ಎಂಬ ಭಾವವಿತ್ತು. ಅಂತಹ ಮಗನಿಗೆ ಮದುವೆ ಮಾಡಬೇಕೆಂಬ ಉತ್ಸಾಹದಿಂದ ಅತ್ತೆಯೂ ಆದಳು.

12 July 2016

ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ
 ಅಧ್ಯಾಯ ೩೭


ದಕ್ಷಿಣಕನ್ನಡದವರ ಬಗ್ಗೆ ಸಾಮಾನ್ಯವಾಗಿ ಹೇಳುವ ಮಾತೆಂದರೆ ಇಲ್ಲಿಯ ಜನರು ಯಾವುದೇ ಹೋರಾಟ ಅಥವಾ ಚಳುವಳಿಗಳಲ್ಲಿ ಭಾಗವಹಿಸುವುದಿಲ್ಲ. ರಾಜ್ಯದ, ದೇಶದ ಬೇರೆ ಎಲ್ಲಾ ಕಡೆಗಳಲ್ಲಿ ಯಾವ ದೊಡ್ಡ ಚಳುವಳಿಗಳು ನಡೆದರೂ ಇಲ್ಲಿನವರು ಅದಕ್ಕೆ ಫಕ್ಕನೆ ಸ್ಪಂದಿಸುವುದಿಲ್ಲ. ಹೀಗೆ ಅನ್ನೂ ಅನೇಕ ಆರೋಪಗಳು ಜಿಲ್ಲೆಯ ಜನರ ಮೇಲೆ ಹೊರಿಸಿದ್ದಾರೆ. ಯಾಕಿಂತಹ ಆರೋಪ ಹೊರಿಸಿದರೋ ಗೊತ್ತಿಲ್ಲ. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲೂ ಇಲ್ಲಿಯ ಜನರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿದ್ದರು. ಸುಮಾರು ಎಂಬತ್ತಕ್ಕೂ ಹೆಚ್ಚು ಮಂದಿ ಹೋರಾಟದ ನಾಯಕತ್ವ ವಹಿಸಿ ಜೈಲುಶಿಕ್ಷೆ ಅನುಭವಿಸಿದ ದಾಖಲೆಗಳಿವೆ. ದೇಶಭಕ್ತ ಕಾರ್ನಾಡು ಸದಾಶಿವ ರಾವ್ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯರು ಇಡೀ ರಾಷ್ಟ್ರವೇ ಗೌರವಿಸಿದ ಧುರೀಣರಾಗಿದ್ದಾರೆ. ಹಾಗಿದ್ದರೂ ಜಿಲ್ಲೆಯ ಬಗ್ಗೆ ಅದೊಂದು ಮಿಥ್ಯಾರೋಪವೆಂದೇ ತಿಳಿಯಬೇಕಾಗುತ್ತದೆ. ಚರಿತ್ರೆಯಲ್ಲಿ ದಾಖಲಾಗದೆ ಉಳಿದ ಸಂಗತಿಗಳೂ ಇರಬಹುದು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ ಚಳುವಳಿಯಲ್ಲಿ ನೂರಾರು ಮಹಿಳೆಯರು, ಬಿಲ್ಲವರು, ಮೊಗವೀರರು ಭಾಗವಹಿಸಿದರು ಎಂದು ದಾಖಲೆಗಳಿವೆ. ಆದರೆ ಅವರು ಯಾರು ಎಂದು ನಿರ್ದಿಷ್ಟ ಹೆಸರುಗಳಿಲ್ಲ. ಮಂಗಳೂರಿನ ಜೈಲಿನ ಕಡತಗಳನ್ನು ಪರಿಶೀಲಿಸಿದಾಗಲೂ ಶೀನ, ತುಕ್ರ, ದೂಮ ಎಂಬ ಹೆಸರುಗಳಿವೆ. ಅವರು ಯಾವ ಸಮುದಾಯಕ್ಕೆ ಸೇರಿದವರೆಂದು ದಾಖಲೆ ತಿಳಿಸುವುದಿಲ್ಲ. ಹೆಂಗಸರ ಹೆಸರಂತೂ ಇಲ್ಲವೇ ಇಲ್ಲ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರಲ್ಲಿ ಸುಗುಣಾಬಾಯಿ, ಅಂಬಾಬಾಯಿ, ಲಕ್ಷ್ಮೀ ರೈ, ಉಮಾಬಾಯಿ ಕುಂದಾಪುರ ಮುಂತಾದವರ ಹೆಸರಿದ್ದರೂ ಅವರನ್ನು ಮಂಗಳೂರಿನ ಜೈಲಿನಲ್ಲಿರಿಸದೆ ಬೇರೆ ಕಡೆ ಇರಿಸಿರಬೇಕು. ಬಹುಶಃ ಕಣ್ಣೂರು ಕಾರಾಗೃಹದ ಕಡತಗಳನ್ನು ಪರಿಶೀಲಿಸಿದರೆ ವಿವರಗಳು ಸಿಗಬಹುದೇನೋ? ಇದೆಲ್ಲಾ ಯಾಕೆ ಹೇಳಿದೆನೆಂದರೆ ಜಿಲ್ಲೆಯ ಮಹಿಳೆಯರು ಹೋರಾಟದಲ್ಲಿ ಭಾಗವಹಿಸಿದರೂ ಅವರ ದಾಖಲೆ ಇಲ್ಲಿ ಸಿಗುವುದಿಲ್ಲ. ಅವಿಭಜಿತ ದಕ್ಷಿಣಕನ್ನಡದ ಮೊಗವೀರ, ಬಂಟ ಸಮುದಾಯದ ಮಹಿಳೆಯರು ಸ್ವಾತಂತ್ರ್ಯ ಹೋರಾಟದ ಕಣದಲ್ಲಿ ಬಹಳ ಹುಮ್ಮಸ್ಸಿನಿಂದ ಭಾಗವಹಿಸಿದ್ದರು. ಅದನ್ನು ದಾಖಲಿಸುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿಲ್ಲ. ಕೊರತೆಯನ್ನು ಕಂಡು ನಾನು ಮತ್ತು ಗುಲಾಬಿ ಬಿಳಿಮಲೆಯವರು ಸೇರಿ ಪೂರ್ಣ ಮರವೆಗೆ ಜಾರಿ ಹೋಗುವ ಮೊದಲು ಇಲ್ಲಿಯ ಮಹಿಳಾ ಹೋರಾಟದ ದಾಖಲೀಕರಣ ಮಾಡಬೇಕೆಂದು ನಿರ್ಧರಿಸಿ ಕ್ಷೇತ್ರಕಾರ್ಯಕ್ಕೆ ಹೊರಟೆವು.

05 July 2016

ಡಾಕ್ಟರುಗಳಿಂದಾದ ಪ್ರಮಾದಗಳು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತಾರು

``ನಾಳೆ ಎಂಬುದು ನಿನ್ನಿನ ಮನಸು, ಮುಂದೆ ಎಂಬುದು ಅಂದಿನ ಕಣಸು'' ಇದು .ರಾ. ಬೇಂದ್ರೆಯವರ ಕವನದ ಸಾಲು. ನಾಳೆ ಏನಾಗುತ್ತದೋ ಎಂಬ ಭಯ ಮತ್ತು ನಾಳೆಗಾಗಿ ಸಿದ್ಧತೆ, ನಾಳೆಯ ಬಗ್ಗೆ ಮುಂದಾಲೋಚನೆ ಮಾಡದ ಮನುಷ್ಯರಿದ್ದಾರೆಯೇ? ಬಹುಶಃ ಇರಲಾರರು. ಭಿಕ್ಷುಕನೇ ಆಗಿರಲಿ, ಸನ್ಯಾಸಿಯೇ ಆಗಿರಲಿ ಅವನಿಗೂ ಅವನದೇ ಆದ ಕನಸುಗಳಿರುತ್ತವೆ, ಆಶೆಗಳಿರುತ್ತವೆ. ಇದು ಸೃಷ್ಟಿಯ ಎಲ್ಲ ಜೀವಿಗಳಲ್ಲೂ ಇರುವ ಮೂಲಭೂತವಾದ ಮತ್ತು ನಿಸರ್ಗದತ್ತವಾದ ಗುಣಗಳಾಗಿರಬಹುದೇ? ಇರುವೆಗಳು ತಮ್ಮ ಗೂಡಿಗೆ ಆಹಾರವನ್ನು ಹೊತ್ತೊಯ್ಯುವ ಸಡಗರವೂ, ಜೇನನ್ನು ಸಂಗ್ರಹಿಸುವ ಜೇನುನೊಣಗಳ ಪರಿಶ್ರಮವೂ ನಾಳೆಯ ಬಗ್ಗೆ ಅವುಗಳಿಗೆ ಭರವಸೆಯಿದ್ದುದರಿಂದಲೇ ಇರಬೇಕು. ಪರಿಶ್ರಮಿಗಳಿಗೆ, ನೋವುಂಡವರಿಗೆ ಬದುಕಿನಲ್ಲಿ ಪರಿಹಾರ ಸಿಗುವುದು ಭರವಸೆಯಿಂದ ಮಾತ್ರ. ಒಂದರ್ಥದಲ್ಲಿ ಭಯ ಮತ್ತು ಭರವಸೆ ಎರಡೂ ಒಂದನ್ನೊಂದು ಹಿಂಬಾಲಿಸುತ್ತಲೇ ಇರುತ್ತದೆ. ಇದೆಲ್ಲಾ ನೆನಪಾದುದಕ್ಕೆ ಕಾರಣವಿದೆ. ಯಾರಲ್ಲಿ ಭರವಸೆಯಿಡಲಿ? ಎಂದು ಗೊತ್ತಾಗದೆ ಒದ್ದಾಡಿದ ಕ್ಷಣಗಳವು. ಭರವಸೆ ಎನ್ನುವುದು ರಸ್ತೆಯಂತೆ ಎನ್ನುತ್ತಾರೆ. ಯಾಕೆಂದರೆ ಅದು ಮುಂಚೆ ಇರಲಿಲ್ಲ. ಸಾವಿರಾರು ಮಂದಿ ಓಡಾಡಿದ ಮೇಲೆ ಅದು ನಿರ್ಮಾಣವಾಗುತ್ತದಂತೆ. ಅಂದರೆ ನಾವು ಅನೇಕ ಸಾರಿ ಮೆಟ್ಟುಗಳಿಂದ ಕಚ್ಚಿಸಿಕೊಂಡ ಮೇಲೆ ಅದರ ಮೇಲೆ ಭರವಸೆ ಇಡುತ್ತೇವಲ್ಲಾ ಹಾಗೆ ಎಂಬುದು ನನ್ನ ಭಾವನೆ.

28 June 2016

ಲೈಂಗಿಕ ಕಾರ್ಯಕರ್ತೆಯರ ನೋವಿಗೆ ಕಿವಿಯಾಗಿ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತ ಐದು

ಕೆಲವು ವಿಷಯಗಳ ಬಗ್ಗೆ ನಾವು ಪೂರ್ವಗ್ರಹ ಪೀಡಿತರಾಗಿ ನಾವೇ ಏನೇನೋ ಕಲ್ಪನೆ ಮಾಡಿಕೊಂಡಿರುತ್ತೇವೆ. ಅದನ್ನು ವಿಮರ್ಶಿಸುವ ಮನಸ್ಥಿತಿಯನ್ನೇ ಕಳಕೊಂಡಿರುತ್ತೇವೆ. ಅಂತಹ ಒಂದು ಘಟನೆ ನನ್ನಲ್ಲಿ ಪರಿವರ್ತನೆಯನ್ನುಂಟುಮಾಡಿದ್ದು ನೆನಪಾಗುತ್ತದೆ.

ಬಿಕರ್ನಕಟ್ಟೆಯ ಬಾಡಿಗೆ ಮನೆಯಲ್ಲಿದ್ದಾಗ ಮನೆಯ ಮಾಲಕಿಯ ಬಗ್ಗೆ ನಾನು ಒಂದು ಅಂತರವಿಟ್ಟುಕೊಂಡೇ ವ್ಯವಹರಿಸುತ್ತಿದ್ದೆ. ವರ್ಷಕ್ಕೊಮ್ಮೆ ಊರಿಗೆ ಬರುವಾಗ ಗಂಡ ಹೆಂಡತಿ ವಿಮಾನದಲ್ಲೇ ಬರುತ್ತಿದ್ದರು. ಬಂದ ಮೇಲೆ ಇಲ್ಲಿನ ಪ್ರಸಿದ್ಧ ದೇವಸ್ಥಾನಗಳಿಗೆಲ್ಲಾ ಪೂಜೆಗಾಗಿ ಖರ್ಚು ಮಾಡುವ ರೀತಿಯನ್ನು ಕಂಡೇ ಬೆರಗಾಗಿದ್ದೇನೆ. ಮುಂಬಯಿಯಲ್ಲಿ ಅವರಿಗೆ ಹೋಟೆಲ್ ಇದೆಯೆಂದು ಗೊತ್ತಿತ್ತು. ಅದರ ಜೊತೆಗೆ ಇನ್ನೂ ಏನೇನೋ ಉಪಕಸುಬುಗಳಿದ್ದವೆಂಬ ಗುಸು ಗುಸು ಸುದ್ದಿಗಳಿದ್ದುವು. ಅವರು ಊರಿಗೆ ಬಂದಾಗ ಜನರೊಂದಿಗೆ ವ್ಯವಹರಿಸುವ ರೀತಿ, ದೀನ ದಲಿತರ ಬಗ್ಗೆ ಅವರಿಗಿದ್ದ ಕಾಳಜಿ, ಸೌಮ್ಯ ಸ್ವಭಾವ, ಮಧುರವಾದ ಮಾತುಗಳನ್ನು ಕೇಳಿದ ಮೇಲೆ ಯಾರೋ ಇವರ ಮೇಲೆ ಅಸೂಯೆಯಿಂದ ಹೀಗೆ ಮಾತಾಡುತ್ತಾರೆಂದೇ ಭಾವಿಸಿದ್ದೆ. ಆದರೆ ೧೯೭೫ರಲ್ಲಿ ನಡೆದ ಘಟನೆಯ ಬಳಿಕ ಅವರು ನನ್ನೊಂದಿಗೆ ಮನಬಿಚ್ಚಿ ಮಾತಾಡಿದ ಬಳಿಕ ನನ್ನ ಆಪ್ತ ವಲಯಕ್ಕೆ ಅವರನ್ನು ಸೆಳೆದುಕೊಂಡೆ. ಸಮಯ ಸಂದರ್ಭಗಳು ಮನುಷ್ಯನನ್ನು ಎಂತೆಂತಹ ಅಗ್ನಿಪರೀಕ್ಷೆಗೊಡ್ಡುತ್ತವೆ ಎಂಬುದು ಮನದಟ್ಟಾಯಿತು.

21 June 2016

ಮಾಸ್ತಿಯನ್ನರಸುತ್ತಾ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತ ನಾಲ್ಕು

ಕ್ರಿಯಾತ್ಮಕವಾಗಿ ತೊಡಗಿಸಿಕೊಂಡ ಕಾಲ ಎಂದೂ ನಿಷ್ಪ್ರಯೋಜಕವಲ್ಲ. ನನಗೆ ನೆನಪಿರುವಂತೆ ಯಾವುದೇ ಕೆಲಸವಿಲ್ಲದೆ ನಾನು ಕಾಲವನ್ನು ದೂಡಿದ್ದೆಂದೇ ಇಲ್ಲ. ಓದು ಇಲ್ಲವೇ ಬರವಣಿಗೆ ನನ್ನ ಕೈಹಿಡಿದಿತ್ತು. ಏನಾದರೂ ಹೊಸ ಲೇಖನ ಬರೆಯಬೇಕೆಂದೆನಿಸಿದರೂ ಅದಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದೆ. ೨೦೦೬ರಲ್ಲಿ ನನ್ನ ಗೆಳತಿ ಶಶಿಲೇಖಾ ನಿವೃತ್ತೆಯಾದರು. ನನ್ನ ಅಪ್ಪ ಮತ್ತು ಶಶಿಲೇಖನ ಅಪ್ಪ ಗುರುವಪ್ಪ ಮಾಸ್ಟರು ಜಿಗ್ರಿ ದೋಸ್ತ್ಗಳು. ನಾನು ಕಾಪಿಕಾಡ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದು ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡಿದವರವರು. ಕಾವ್ಯವಾಚನ ಮಾಡಿಸಲು ಉತ್ತೇಜನ ನೀಡಿದ್ದಲ್ಲದೆ ನನ್ನ ಅಪ್ಪನ ಅನುಮತಿ ಪಡೆದು ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆದೊಯ್ದವರು ಶಶಿಲೇಖಾನ ಅಪ್ಪ ಗುರುವಪ್ಪ ಮಾಸ್ಟರು. ಪ್ರೀತಿಯ ಅಂತರಗಂಗೆ ಮಕ್ಕಳಾದ ನಮ್ಮಲ್ಲೂ ಹರಿಯುತ್ತಿತ್ತು. ಒಂದು ದಿನ ಪತ್ರಿಕೆಯಲ್ಲಿ ಬಂದ ಪ್ರಕಟಣೆಯೊಂದನ್ನು ಕಂಡು ಶಶಿಲೇಖಾ ನನಗೆ ಪೋನ್ ಮಾಡಿ ವಿಷಯ ತಿಳಿಸಿದರು. “ನಾವಿಬ್ಬರೂ ಒಂದು ಸಣ್ಣ ಸಂಶೋಧನೆ ಮಾಡೋಣ. ಪ್ರಕಟಣೆಗೆ ಅರ್ಜಿ ಹಾಕಲಾಎಂದು ಕೇಳಿದರು. ರೋಗಿ ಬಯಸಿದ್ದನ್ನೇ ವೈದ್ಯ ನೀಡಿದಷ್ಟು ಖುಷಿಯಲ್ಲಿ ಸಮ್ಮತಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಕಟಣೆಗೆ ಅರ್ಜಿ ಹಾಕಿ ಕಾದೆವು. ತಿಂಗಳುಗಳು ಕಳೆದರೂ ಉತ್ತರವಿಲ್ಲದ್ದು ಕಂಡು ನಿರಾಶರಾದದ್ದೂ ಹೌದು. ಅವರು ಕೊಡದಿದ್ದರೇನಂತೆ ಎಂದು ನಿರಾಶರಾಗದೆ `ಇಟ್ಟ ಹೆಜ್ಜೆ ಮುಂದಾಕಾ ಸರಿಯಬೇಡಿ ಹಿಂದಾಕಾ' ಎಂಬ ಹಾಡಿನಂತೆ ದೃಢ ನಿಶ್ಚಯ ಮಾಡಿದೆವು. `ಅಡಿಯ ಮುಂದಿಡೆ ಸ್ವರ್ಗ ಅಡಿಯ ಹಿಂದಿಡೆ ನರಕ’ ಎಂದು ಸರ್ವಜ್ಞನೂ  ಹೇಳಿದ್ದಾನಲ್ಲಾ. ಸರಿ, ಮತ್ತೆ ತಡಮಾಡುವುದೇಕೆ ಎಂದು ಪ್ರತಿ ಗ್ರಾಮಗಳಲ್ಲಿರುವ ಬಿಲ್ಲವ ಸಂಘಗಳಿಗೆ ಒಂದು ಪತ್ರ ಹಾಕಿ ನಿಮ್ಮ ಊರಿನಲ್ಲಿ ಯಾವುದಾದರೂ ಮಾಸ್ತಿಕಲ್ಲುಗಳು ಇವೆಯೇ ಎಂದು ತಿಳಿಸಬೇಕಾಗಿ ವಿನಂತಿಸಿ ನಮ್ಮ ಫೋನ್ ನಂಬ್ರ ನೀಡಿದ್ದೆವು. ಅದರಿಂದ ಹೆಚ್ಚೇನೂ ಪ್ರಯೋಜನವಾಗದಿದ್ದರೂ ಒಂದೊಂದು ಊರಿಗೆ ಹೋದಂತೆಲ್ಲಾ ಅಲ್ಲಿಯ ಜನರು ಇಂತಿಂತಹ ಕಡೆಗಳಲ್ಲಿ ಇವೆ ಎಂಬ ಮಾಹಿತಿ ನೀಡಿದ್ದನ್ನು ಸಂಗ್ರಹಿಸಿಟ್ಟುಕೊಂಡೆವು. ಪ್ರತೀ ವಾರ ಎಲ್ಲೆಲ್ಲಿ ಹೋಗುವುದೆಂದು ಯೋಜನೆ ರೂಪಿಸಿದೆವು.