ಪ್ರಿಯ ಆನಂದಾ,
[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನನನ್ನು ಉದ್ದೇಶಿಸಿದ ಅರೆ-ಖಾಸಗಿ ಪತ್ರವಿದು. ಹೆಚ್ಚಿನ ವಿವರಗಳಿಗೆ ‘ಮೆಕ್ಸಿಕೋಕ್ಕೆ ಬನ್ನಿ, ಅಂಡಮಾನ್ ಬಿಡಿ’ ಸೇರಿದಂತೆ ಇದರದ್ದೇ ಹಿಂದಿನ ಆರು ಭಾಗಗಳನ್ನು ಇಲ್ಲೇ ನೋಡಿ. ಪ್ರತಿ ಓದುಗನ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ ಎಂದು ಉದ್ದಕ್ಕೂ ಕೇಳಿಕೊಂಡಿದ್ದೆ, ಬಂದವು ಕೆಲವೇ ಕೆಲವು. ನಾನು ಕೊರೆತಕ್ಕೆ ಮುಕ್ತಾಯ ಕಾಣಿಸಿದ್ದಕ್ಕಾದರೂ ನೀವು ಉದಾರಿಗಳಾಗುತ್ತೀರೋ ಕಾದಿದ್ದೇನೆ - ಅಶೋಕವರ್ಧನ]
ಕಾಂಡ್ಲವನದ ದೋಣಿಗಟ್ಟೆಯಲ್ಲಿಳಿದ ನಾವು ನಾವಿಕನೊಬ್ಬೊಬ್ಬನ ನೇತೃತ್ವದಲ್ಲಿ, ಸಣ್ಣ ಸಣ್ಣ ತಂಡಗಳಲ್ಲಿ, ಪಾಳುಬಿದ್ದ ಗದ್ದೆಯಂತಹ ಹರಹಿನಲ್ಲಿ, ಕೇವಲ ಸವಕಲು ಜಾಡಿನಲ್ಲಿ ಒಳನಾಡಿನತ್ತ ನಡೆದೆವು. ನಿಂಬೇ ಶರಬತ್, ಸಣ್ಣಪುಟ್ಟ ತಿನಿಸು ಪಾನೀಯಗಳ ಒಂದೆರಡು ಜೋಪಡಿ ಬಿಟ್ಟರೆ ಏನೂ ಮನುಷ್ಯ ರಚನೆಗಳ ಹಾವಳಿ ಅಲ್ಲಿಗೆ ತಲಪಿದಂತಿರಲಿಲ್ಲ. ಮುಂದುವರಿದಂತೆ ಕೃಷಿಯ ವೈಭವ ಒಂದನ್ನು ಕಳೆದು ಪಕ್ಕಾ ನಮ್ಮದೇ ಹಳ್ಳಿಗಳನ್ನು ನೆನಪಿಗೆ ತರುವ ಪುಟ್ಟ ಜನವಸತಿ ಕಾಣಿಸಿತು. ಒಂದೋ ಎರಡೋ ಬಿಡಾರ ಕಂಡ ನೆನಪು. ಆದರೆ ಅವರ ಜೀವನಯಾಪನೆಯ ಪರಿ ಏನೆಂದು ಯೋಚಿಸಲೂ ಪುರುಸೊತ್ತಿಲ್ಲದ ಧಾವಂತ ನಮ್ಮದು. ನಮ್ಮ ಬಿಸಲೇ ಹಳ್ಳಿಯಲ್ಲಿ ಹೀಗೇ ಗದ್ದೆಯೊಂದರ ಕಟ್ಟಪುಣಿಯಲ್ಲಿ (=ದಂಡೆ, ಬದು) ಪುಟ್ಟ ಶಿಖರವೊಂದರ ಗುರಿ ಇಟ್ಟುಕೊಂಡು ಧಾವಿಸುತ್ತಿದ್ದಾಗ ಒಮ್ಮೆಗೆ ಮೆಟ್ಟಿದ ಬಿಸಿ ಆನೆಲದ್ದಿ ನೆನಪಾಯ್ತು. ಮತ್ತೆ ಪ್ರತಿ ಹೆಜ್ಜೆಗೂ ಎದುರಿನ ಕಾಡಿನ ಸಂಚಲನ, ಅಲ್ಲಿಗೆ ಸಹಜವಾದ ಸದ್ದುಗಳು ನಮಗೆ ಗಜಮೂಲದವಿರಬಹುದೇ ಎಂಬ ತವಕ. ಅದು ಬೇಸಗೆಯ ಕೊನೆಯ ಪಾದ. ಸಿಕ್ಕ ವಿಸ್ತಾರ ಪಾತ್ರೆಯ ತೋಡಿನಲ್ಲಿ ಗೊಸರು ಹೆಚ್ಚಾಗಿದ್ದರೂ ತೆಳು ನೀರಿನ ಹರಿವು ಇದ್ದೇ ಇತ್ತು. ಆ ತೋಡಿನುದ್ದಕ್ಕೆ ನಡೆಯುವಲ್ಲಿ ಇನ್ನೂ ಪೂರ್ತಿ ನೀರು ತುಂಬದ ಆನೆಯ ಹೆಜ್ಜೆ ಗುಂಡಿಗಳು. ಇದ್ದಕ್ಕಿದ್ದಂತೆ ಅನತಿ ದೂರದಿಂದ ಮರದ ಗೆಲ್ಲು ಮುರಿದ ಸದ್ದು. ಮುಂಚೂಣಿಯ ಕರಿಯಣ್ಣನ ಹವಾಯ್ ಚಪ್ಪಲಿ ಗೊಸರಿನಂಟಿನಿಂದ ಮೇಲೇಳಲಿಲ್ಲವೋ ಇವನೇ ಮರವಟ್ಟು ಕಾಲೆತ್ತಲಿಲ್ಲವೋ ತಿಳಿಯುವುದರೊಳಗೆ ದಟ್ಟ ಪಿಸುನುಡಿ - ಆನೆ! ಇಡೀ ಸಾಲಿನ ಲಯ ತಪ್ಪಿಹೋಯ್ತು. ಹೌದು ಹಾಗೇ ಇಲ್ಲೂ ಆಯ್ತು. ಒಳನಾಡಿನತ್ತ ಧಾವಿಸುತ್ತಿದ್ದ ಮುಂದಾಳು ಒಮ್ಮೆಲೆ ಹಾವು ಮೆಟ್ಟಿದವನಂತೆ ನಿಂತ! ಇದು ಅಕ್ಷರಶಃ ನಿಜ, ಸಣ್ಣ ತಿದ್ದುಪಡಿಯೊಡನೆ - ಕಟ್ಟುಕಟ್ಟಿನ ಈ ಭಾರೀ ಹಾವು ಸತ್ತುಬಿದ್ದಿತ್ತು. ವಾಸ್ತವವಾಗಿ ಅದೇನೂ ಅಂಥ ದೊಡ್ದ ಸಂಗತಿಯಲ್ಲ. ದ್ವೀಪಸ್ತೋಮದಲ್ಲಿ ಯಾವುದೇ ಆಕ್ರಮಣಕಾರೀ ಪ್ರಾಣಗಳಿಲ್ಲ ಎಂದು ತಿಳಿದಿದ್ದದ್ದಲ್ಲದೆ, ಐದಾರು ದಿನಗಳನ್ನು ಕಳೆದ ಸ್ಥಿತಿಯಲ್ಲಿ ನಮ್ಮ ಮನಸ್ಸೂ ಗಟ್ಟಿಗೊಂಡಿತ್ತು. ಒಮ್ಮೆಗೆ ಹಾವು, ಅದೂ ಭಯಂಕರ ವಿಷಕಾರಿಯೇ ಇರಬಹುದು ಎಂದೆಲ್ಲಾ ತಲೆಯಲ್ಲಿ ಒಮ್ಮೆಗೆ ಮಿಂಚು ಹೊಡೆದಂತಾಯ್ತು ಅಷ್ಟೇ. ಮರುಕ್ಷಣದಲ್ಲಿ ಚೇತರಿಸಿಕೊಂಡು ಮುಂದುವರಿದೆವು.