Showing posts with label ಎತ್ತಿನ ಹೊಳೆ ಯೋಜನೆ. Show all posts
Showing posts with label ಎತ್ತಿನ ಹೊಳೆ ಯೋಜನೆ. Show all posts

29 April 2021

ಮುಕ್ಕಾಂ ಕಪ್ಪೆಗೂಡು

೧. ಬಳಸು ದಾರಿಯಲ್ಲಿ


‘ಏಪ್ರಿಲ್ ೧೬ರಿಂದ ಜೂನ್ ೧ರವರೆಗೆ ಬಿಸಿಲೆ ದಾರಿ ಬಂದ್’ ಹಾಸನ ಜಿಲ್ಲಾಧಿಕಾರಿ ಪ್ರಕಟಣೆ ಬಂತು. ಗಡಿಬಿಡಿಯಾಗಬೇಡಿ, ಇದು ಕೋವಿಡ್ ಸಂಬಂಧಿಯಲ್ಲ. ನಾನೇ ಹಿಂದೆ ಹೇಳಿದ್ದ ಕುಳ್ಕುಂದ - ಬಿಸಿಲೆ ನಡುವೆ ಬಾಕಿಯುಳಿದಿದ್ದ ಮೂರು ಕಿಮೀ ಕಾಂಕ್ರಿಟೀಕರಣ ಪೂರೈಕೆಗೆ. ಆದರೆ ಆರಂಭಕ್ಕೆ ತಡ, ಮುಕ್ತಾಯ ಎಂದೂ ಇಲ್ಲ ಎನ್ನುವ ನಮ್ಮ ಸರಕಾರೀ ಕಾಮಗಾರಿಗಳು ನಂಬಲರ್ಹವಲ್ಲ. ಹಾಗಾಗಿ ನಾನು ಬಿಸಿಲೆ ಗಣೇಶರಲ್ಲಿ ಚರವಾಣಿಸಿ ಕೇಳಿದೆ. "ಅಯ್ಯೋ ಮೂರು ಕಿಮೀ

ಕಾಂಕ್ರೀಟಿಗೆ ಒಂದೂವರೆ ತಿಂಗಳು ಎಲ್ ಸಾಲುತ್ತೇ? ಹಂಗಾಗಿ ಎಂಟು ದಿನ ಮೊದಲೇ ರೋಡ್ ಕ್ಲೋಸ್ ಮಾಡಿ, ಕೆಲಸ ಜೋರಾಗಿ ನಡೆದಿದೆ..." ಎಂದರು.

‘ಕಪ್ಪೇಗೂಡಿ’ಗೆ ಮೇಲ್ಟಾಂಕಿ ಕೂರಿಸಿ ಬಂದ ಮೇಲೆ ನಾನು ಅತ್ತ ತಲೆ ಹಾಕಿರಲಿಲ್ಲ. ಬಾಕಿಯುಳಿದ ಚಿಲ್ಲರೆ ಕೆಲಸ ಸೇರಿಸಿಕೊಂಡು, ಬಳಸು ದಾರಿಯಲ್ಲಿ ಅಶೋಕವನಕ್ಕೆ ಹೋಗುವ, ಮೂರು ದಿನದ ಮೊಕ್ಕಾಂ ಮಾಡುವ ಯೋಜನೆ ಹಾಕಿದೆ. ಹಿಂದಾದರೋ

30 April 2019

ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ


‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ ನಾನು ದೂರ, ಸಮಯಗಳನ್ನು ಅಲಕ್ಷಿಸಿದೆ. ದೇವಕೀ ಸಮೇತನಾಗಿ ಮೊನ್ನೆ (೨೫-೪-೧೯) ಮಧ್ಯಾಹ್ನ ಸುಮಾರು ಒಂದೂಮುಕ್ಕಾಲಕ್ಕೆ ಸಿಕ್ಕ ಮಂಗಳೂರು-ಬೆಂಗಳೂರು ಬಸ್ಸೇರಿ ಹೋದೆ. ಸಂಜೆ ಐದಕ್ಕೆ ನಾವು ಸಕಲೇಶಪುರದಲ್ಲಿ ಇಳಿಯುವುದನ್ನೇ ಕಾದಿದ್ದಂತೆ, ಮೂಡಿಗೆರೆ ಬಸ್ ನಮ್ಮನ್ನು ತುಂಬಿಕೊಂಡಿತು. ಐದೂಮುಕ್ಕಾಲಕ್ಕೆ ರಕ್ಷಿದಿಯಲ್ಲಿದ್ದೆವು. ನಾಟಕ ಒಂಬತ್ತೂಕಾಲರ ಅಂದಾಜಿಗೆ ಮುಗಿದಿತ್ತು. ಮತ್ತೆ ಪ್ರಸಾದರ ಕೃಪೆಯಲ್ಲಿ ಸಕಲೇಶಪುರ, ಬಸ್ಸಿಡಿದು ಅಪರಾತ್ರಿಯಲ್ಲೇ ಮಂಗಳೂರಿಗೆ ಮರಳಿದ್ದೆವು. ಪ್ರತಿಯಾಗಿ ನಾನು ಪ್ರಸಾದರಿಗೆ ಕಳಿಸಿದ ಕೃತಜ್ಞತಾ ಸಂದೇಶದ ಭರತ ವಾಕ್ಯ ಹೀಗಿತ್ತು - ‘ಆನೆ ಜಾಡಿನಲ್ಲಿ ಅಲ್ಲೋಲ ಕಲ್ಲೋಲ’ ಒಂದು ನಾಟಕವೇ ಅಲ್ಲ!’

28 August 2018

ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ


ಕೊಡಗು, ಕೇರಳಗಳ ಅತಿ-ಮಳೆಯ ಅವಾಂತರ ಅನಾವರಣಗೊಳ್ಳುತ್ತಾ ಬಿಸಿಲೆ ದಾರಿಯ ಮಸುಕು ಚಿತ್ರಗಳೂ ಬಂದವು. ಸಂತ್ರಸ್ತರ ಪ್ರಾಥಮಿಕ ರಕ್ಷಣೆ ಮತ್ತು ಪೋಷಣೆಗೆ ಸ್ವಯಂಸೇವಕರು ತೊಡಗಿಸಿಕೊಂಡದ್ದು ಹೃದಸ್ಪರ್ಷಿಯಾಗಿತ್ತು. ಅದರಲ್ಲೂ ಮುಂದುವರಿದಂತೆ ನಿರಾಶ್ರಿತರ ಪೂರ್ವಸ್ಥಿತಿಸ್ಥಾಪನೆಯಲ್ಲೂ ಪ್ರಜಾಪ್ರತಿನಿಧಿಗಳು ಮತ್ತು ಸರಕಾರ ಬಹ್ವಂಶ ನಿಧಾನಿಗಳೂ ಅದಕ್ಷರೂ (ಭ್ರಷ್ಟತೆಯಿಂದಾಗಿ) ಆಗುವುದು ಇಂದು ನಮ್ಮ ಸಂಸ್ಕೃತಿಯ ಭಾಗವೇ ಆಗಿಹೋಗಿದೆ. ಈ ಜನ, ಆಸ್ತಿಗಳ ಬಹುದೊಡ್ಡ
ದುರಂತದಲ್ಲಿ ಆಡಳಿತ ದೊಡ್ಡ ಧ್ವನಿಯಲ್ಲಿ ದೂಷಿಸುವುದು ಪ್ರಕೃತಿಯನ್ನು! ಪ್ರಸ್ತುತ ಸನ್ನಿವೇಶದಲ್ಲಿ ಮೊದಲನೇ ಖಳಸ್ಥಾನದಲ್ಲಿ ನೀರಿಗಿದ್ದರೆ, ಎರಡನೇದು ನೆಲ. ಪ್ರಕೃತಿ ಎಲ್ಲಕ್ಕೂ ಅತೀತ; ಆರಾಧನೆಗೆ ಉಬ್ಬದು, ಅವಹೇಳನಕ್ಕೆ ಕುಗ್ಗದು, ಮೌನಿ. ಅಂಥ ಪ್ರಕೃತಿಯ ಮೇಲೆ, ನಿಜದಲ್ಲಿ ಎಲ್ಲ ಜೀವಾಜೀವಗಳ ಮೂಲಶಕ್ತಿಯ ಮೇಲೆ ತೀರ್ಪು ಕೊಡುವ ದಾರ್ಷ್ಟ್ಯ ನನ್ನದಲ್ಲ. ಆದರೆ ಅದರೊಡನೆ ಯಥಾಮಿತಿ ಮುಖಾಮುಖಿ ನಡೆಸಿ, ಸ್ವಲ್ಪವಾದರೂ ತಿಳಿದುಕೊಳ್ಳುವ ಹಂಬಲ ನನ್ನನ್ನು ಬಿಟ್ಟದ್ದಿಲ್ಲ. ಹಾಗಾಗಿ ನೀರು ಹಿಂಜರಿದದ್ದೇ

04 December 2015

ಎತ್ತಿನಹೊಳೆ ಯೋಜನೆ – ಇದುವರೆಗೆ

``ಎತ್ತಿನಹೊಳೆ ಯೋಜನೆಯ ಇಂದಿನ ಸ್ಥಿತಿ ನೋಡಲು ನಾಳೆ ಬೆಳಿಗ್ಗೆ ಕೆಲವು ಚೆನ್ನೈಗೆಳೆಯರು ಬರುತ್ತಿದ್ದಾರೆ. ನೀವೂ ಬಂದಿದ್ದರೆ ಚೆನ್ನಾಗಿತ್ತು'' ಹಾಸನದ ವಕೀಲ, ಹೊಂಗಡಳ್ಳದ ಮೂಲವಾಸಿ ಕಿಶೋರ್ ಕುಮಾರ್ ಚರವಾಣಿಸಿದರುತಾತ್ತ್ವಿಕ ಹೋರಾಟವನ್ನಷ್ಟೇ ನೆಚ್ಚುವ ನಿರೇನ್ ಜೈನ್ ಮತ್ತು ಎಚ್. ಸುಂದರ ರಾವ್ ಸೇರಿದಂತೆ ಮೂವರೂ ಹೋಗುವುದೆಂದು ಕಾರು ಹೊರಡಿಸಿದ್ದೆ. ಸುಂದರರಾಯರಿಗೆ ಅನ್ಯ ಕಾರ್ಯ ಒತ್ತಡ ಬಂದುದರಿಂದ ನಾವಿಬ್ಬರೇ ಹೋಗಬೇಕಾಯ್ತು. ಸಕಲೇಶಪುರದ ಐಬಿಯನ್ನು ನಾವು ಬೆಳಿಗ್ಗೆ ಸಕಾಲಕ್ಕೇ ತಲಪಿದ್ದೆವು. ಎತ್ತಿನಹೊಳೆ ಯೋಜನೆಯಲ್ಲಿ ಎತ್ತಂಗಡಿಯ ಬೆದರಿಕೆಯಿದ್ದ ಕೆಲವು ಕೃಷಿಕರು, ಕೆಲವು ಮಾಧ್ಯಮ ಪ್ರತಿನಿಧಿಗಳೂ ಹಾಜರಿದ್ದರು. ಚೆನ್ನೈಗೆಳೆಯರು ರಾತ್ರಿ ಯಾನದಲ್ಲಿ ಬೆಂಗಳೂರು, ಮೊದಲ ಬಸ್ಸಿನಲ್ಲಿ ಹಾಸನವಾಗಿ ಸಕಲೇಶಪುರಕ್ಕೆ ಬಂದು ತಲಪುವಾಗ ಗಂಟೆ ಹನ್ನೊಂದೇ ಆಗಿತ್ತು.

ಮೊದಲು ರೈಲ್ವೇ ನಿಲ್ದಾಣ ಹಾಯ್ದ ಮೇಲೆ ಸಿಗುವ ದಡಬಡ ದಾರಿಯ ಪಕ್ಕದಲ್ಲೇ ವಿಸ್ತಾರ ಗದ್ದೆಗಳು - ಬಹುತೇಕ ಹಡ್ಲು ಬಿದ್ದವಕ್ಕೆ, ಹೋದೆವು. ಅವಕ್ಕೆ ದೂರದಂಚು ಕಟ್ಟಿದಂತೆ ದಟ್ಟ ಕಾಡು. ಗದ್ದೆಗಳು ಹಡ್ಲು ಬೀಳಲು ಕಾರಣವೇನಿರಬಹುದು - ಕೃಷಿ ಆರ್ಥಿಕತೆಯ ಸೋಲೇ? ಪೇಟೆಯ ಒತ್ತಡವೇ? `ಅಭಿವೃದ್ಧಿ' ಆಮಿಶವೇ? ನಮಗೆ ಜೊತೆಗೊಟ್ಟ ಕೃಷಿಕರಲ್ಲೇ ಸ್ಪಷ್ಟ ಉತ್ತರವಿರಲಿಲ್ಲ. ಸದ್ಯ ಅದರ ತುಂಬಾ ಭಾರೀ ಉಕ್ಕಿನ ಕೊಳವೆಗಳು ಹರಡಿ ಬಿದ್ದಿದ್ದುವು. ಬಂದು ಬೀಳುವ ಕಬ್ಬಿಣದ ಕೊಳವೆಗಳಿಗೆ ತಂತಿಬಲೆ ಸುತ್ತಿ, ಕಾಂಕ್ರೀಟ್ ಲೇಪ ಹಾಕುವ ಪುಟ್ಟ ಕಾರ್ಯಾಗಾರವೂ ಅಲ್ಲೇ ಇತ್ತು. ಇಂಥದ್ದೇ ಇನ್ನೊಂದು ವ್ಯವಸ್ಥೆಯನ್ನು ನಾನು ಎರಡು ವಾರದ ಹಿಂದೆ ಮಂಜರಾಬಾದಿನಿಂದ ಬಿಸಿಲೆಯತ್ತ ಹೋಗುವ ದಾರಿಯ ಪಕ್ಕದ ಗುಡ್ಡೆಯಲ್ಲೂ ಕಂಡಿದ್ದೆ. ಕೃಷಿಕರು ತಿಳಿಸಿದಂತೆ, ಎತ್ತಿನಹೊಳೆ ವಲಯದಲ್ಲಿ ಒಟ್ಟು ನಾಲ್ಕು ಕಡೆ ಇಂಥ ಕಾರ್ಯಾಗಾರಗಳೇ ಇವೆಯಂತೆ. ಮುಂದುವರಿದು ಮತ್ತೆಷ್ಟೋ ಸಾರ್ವಜನಿಕ ಸ್ಥಳಗಳಲ್ಲಿ, ಅಂದರೆ ಕೊಳವೆ ಸಾಲು ಸಾಗಬೇಕಾದ ಜಾಡಿನಲ್ಲಿ ಪರಿಷ್ಕೃತ ಕೊಳವೆಗಳನ್ನು ಹಂಚಿ ಹಾಕಿದ್ದೂ ಆಗಿದೆಯಂತೆ. ಕೆಲವೆಡೆ ಹೂಳಲೂ ಶುರು ಮಾಡಿದ್ದರು! ಆದರೆ ಅಲ್ಲೂ ಮುಂದೆ ದಿನದುದ್ದಕ್ಕೆ ನಾವು ಕಂಡ ಇತರ ಜಾಗಗಳಲ್ಲೂ ನಮಗೆ ತಿಳಿಯದ ಕಾರಣಕ್ಕೆ ಕೆಲಸ ನಡೆದಿರಲಿಲ್ಲ, ಕಾರ್ಮಿಕರೂ ವಿಶೇಷ ಇರಲಿಲ್ಲ.

09 January 2015

ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ

“ಎತ್ತಿನ ಹೊಳೆ ನೇತ್ರಾವತಿ ಅಲ್ಲ” -  ಸದಾನಂದ ಗೌಡರ ಸುಳ್ಳಿಗೆ ಈಚಿನ ಹಿರಿ ಸುಳ್ಳು ವಿನಯಕುಮಾರ್ ಸೊರಕೆಯವರದು – “ನದಿ ತಿರುವು ನೇತ್ರಾವತಿಯದ್ದೇ ಅಲ್ಲ, ಕುಮಾರಧಾರೆಯದ್ದು.” “ಜೈಶ್ರೀರಾಮ್” ಎನ್ನುತ್ತಲೇ ಬಂದವರು ಅಧಿಕಾರದ ಮದದಲ್ಲಿ, ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಇನ್ನೂರು ಮೆಗಾ ವಿದ್ಯುತ್ ಯೋಜನೆಯ ಅತ್ಯಾಚಾರಕ್ಕೆ ಇಳಿದಿದ್ದರು. (ಬಲಾತ್ಕಾರದಲ್ಲೇ ಅಡಿಗಲ್ಲು ಹಾಕಿದ್ದರು.) ದಿಲ್ಲಿಯಿಂದ ಜೈರಾಮ್ (ರಮೇಶ್) ಘೋಷ ಕೇಳಿದ್ದೇ ಹಸುರು ಸೆರಗನ್ನು ಬಿಟ್ಟು, ಕಲ್ಲು-ಕಿತ್ತೋಡಿದ್ದರು. ಆದರೆ ಇಂದು ನೇತ್ರಾವತಿಯ ಮೇಲಿನ ಕೆಟ್ಟ ದಿಟ್ಟಿಗೆ ಪಕ್ಷಾತೀತ ರಾಜಕೀಯದ ರೋಗವೇ ಬಡಿದಿದೆ. ಮುಕ್ಕಿಯಾ (?) ಮಂತ್ರಿ ಇನ್ನೂರು ಕೋಟಿ ಹರಿಸಿದ್ದು, ಸ್ವಂತ ಮಗ ಸಂಸತ್ಸ-ದಸ್ಯು (!) ಫಲಾನುಭವಿಯಾದದ್ದು – ನದಿ ತಿರುವಿನ ಹೆಸರಿನಲ್ಲೇ. ಚುನಾವಣಾ ಬನಾವಣೆಗಾಗಿ ವಿರೋಧಪಕ್ಷಿ ಮೊಯಿಲಿ ಚಿಕ್ಕಬಳ್ಳಾಪುರದಲ್ಲಿ (ಹುಟ್ಟದ ಮಗುವಿಗೆ ಕುಲಾವಿ ಹೊಲಿದಷ್ಟೇ ಜಾಣತನದಲ್ಲಿ) ಸಮೃದ್ಧ ನೀರಿನ `ಸ್ವಾಗತ ವ್ಯವಸ್ಥೆ’ಗೆ ಅಡಿಗಲ್ಲು ಹಾಕಿದ್ದೂ ಎತ್ತಿನಹೊಳೆ ಹೆಸರಿನಲ್ಲೇ.

ಪಕ್ಷ ರಾಜಕೀಯದಲ್ಲಿ ಚುನಾವಣೆಗಳ ಪಶ್ಚಾತ್-ಕಂಪನ ಇದ್ದದ್ದೇ. ಹಾಗೇ ಎತ್ತಿನಹೊಳೆಯ ಕುರಿತೂ ಖಂಡನೆ, ಮಂಡನೆಗಳು ನಡೆದಿದ್ದಂತೇ ಕೆಲಸ ನಿಧಾನಕ್ಕೆ ಶುರುವಾಗಿದೆ ಎಂಬ ಸುದ್ದಿ ಘಟ್ಟದ ಕೆಳಗಿನ ನಮ್ಮ ಕಿವಿಗೂ ಬಿತ್ತು. ಗುಂಡ್ಯ ೨೦೦ ಮೆಗಾವಾಟ್ ವಿದ್ಯುಚ್ಛಕ್ತಿ ಯೋಜನಾ ಕಾಲದಿಂದ ಬಹಳ ವ್ಯವಸ್ಥಿತವಾದ, ಕಾನೂನುಬದ್ಧವಾದ ಹೋರಾಟವನ್ನು ಸಂಘಟಿಸುತ್ತಾ ಬಂದಿರುವವರು ಹೊಂಗಡಳ್ಳ ಮೂಲದ, ಪ್ರಸ್ತುತ ಹಾಸನದಲ್ಲಿ ವಕೀಲ ವೃತ್ತಿ ನಿರತರಾಗಿರುವ ಕಿಶೋರ್ ಕುಮಾರ್. ಇವರು ಮಲ್ನಾಡು ಜನಪರ ಹೋರಾಟ ವೇದಿಕೆ ಹೆಸರಿನಲ್ಲಿ, ಸ್ವಂತ ಸಮಯ, ಖರ್ಚು ಹಾಕಿಕೊಂಡು ಊರಿನ ಮನೆಮನೆಗೆ ಸಾಲದೆಂಬಂತೆ, ನಿದ್ರೆಯಲ್ಲಿರುವ ಬೆಂಗಳೂರಿನಿಂದ ಮಂಗಳೂರಿನ ತನಕ ಓಡಾಡಿ ಅನ್ಯಾಯದ ವಿರುದ್ಧ ಜಾಗೃತಿ ನಡೆಸಿಯೇ ಇದ್ದಾರೆ. ಕಿಶೋರ್ ಕೂಡಾ “ಬನ್ನಿ, ಅಣೆಕಟ್ಟುಗಳ ನಿವೇಶನವನ್ನೂ ನಡೆದಿರುವ ಕೆಲಸವನ್ನೂ ಸ್ಪಷ್ಟವಾಗಿ ದಾಖಲಿಸೋಣ” ಎಂದರು.

28 March 2014

ವಿಶ್ವ(ವಿ)ರೂಪದ ನಡುವೆ ಮತ್ಸ್ಯ ಸಮೀಕ್ಷೆ

ಅಭಿವೃದ್ಧಿ ಎಂದರೆ ಇರುವುದನ್ನು ಹೆಚ್ಚಿಸುವುದು. ಆದರೆ ನಿಜನೆಲದ ಯಜಮಾನಿಕೆ ವಹಿಸಿದ (ಕೇಂದ್ರ ಅಥವಾ ರಾಜ್ಯ) ಸರಕಾರಗಳು ಯೋಜನೆಗಳನ್ನು ಹೊಸೆಯುವಾಗ ಇರುವುದು ಏನು ಮತ್ತು ಎಷ್ಟು ಎಂದು ತಿಳಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಇರುವುದು ನಾಶವಾಗುತ್ತಿದೆ, ಬರುವುದು ಕ್ಷಣಿಕ ಮತ್ತು ದುರ್ಬಲವಾಗುತ್ತಿದೆ. ಆಡಳಿತ ಕೊಡಬೇಕಾದವರು ಯೋಜಕರ ಮುಖವಾಡ ತೊಟ್ಟಿದ್ದಾರೆ. ಯೋಜಿಸಬೇಕಾದ ನಿಜ ಪರಿಣತರು ಅವರ ತಪ್ಪುಗಳಿಗೆ ಸಮಜಾಯಿಷಿ ಹುಡುಕುವವರಾಗುತ್ತಿದ್ದಾರೆ. ನಮ್ಮ ಸುತ್ತುಮುತ್ತಿನ ಕುದುರೆಮುಖ ಗಣಿಗಾರಿಕೆ, ಎಂಆರ್ಪೀಯೆಲ್, ವಿಶೇಷ ಆರ್ಥಿಕ ವಲಯ, ಪಡುಬಿದ್ರೆಯ ಉಷ್ಣ ವಿದ್ಯುತ್ ಸ್ಥಾವರ, ಕೈಗಾ ಮುಂತಾದವೆಲ್ಲಾ ಸರಕಾರದ ಸಹಯೋಗದಲ್ಲೇ ಆಗುತ್ತಿರುವ ಅನಾಚಾರಗಳು. ಇನ್ನು ಸರಕಾರದ್ದೇ ಇಲಾಖೆಗಳ ಒಂದೊಂದು ಕರ್ಮಕಾಂಡವೂ ಸಾಮಾನ್ಯ ಬುದ್ಧಿಗೆ ಗ್ರಾಹ್ಯವಾಗದ ಒಂದೊಂದು ವಿಶ್ವ(ವಿ)ರೂಪ! (ಮಾಜೀ ಲೋಕಾಯುಕ್ತರುಗಳ ಮಾತಷ್ಟೇ ಸಾಕು.) ಮರಣಾಂತಿಕ ಹೂಳಿನ ನಡುವೆಯೂ ಸ್ವಂತ ಉಮೇದಿನೊಡನೆ, ದೇಶದ ನಿಯಮಗಳಿಗನುಸಾರವಾಗಿ ಸಂಶೋಧನಾವ್ರತವನ್ನು ನಡೆಸುವ ಕೆಲವರಾದರೂ ನಮ್ಮ ನಡುವೆಯಿರುವುದಕ್ಕೇ ಸಮಾಜ ಇಂದು ಎಲ್ಲ ಕಳೆದುಕೊಂಡ ಸ್ಥಿತಿ ಮುಟ್ಟಿಲ್ಲ. ಹಳಗಾಲದವರು ಹೇಳುವಂತೆ, ಮಳೆಬೆಳೆ ಕಾಲಕಾಲಕ್ಕೆ ಆಗುತ್ತಿದೆ!

21 March 2014

ಎತ್ತಿನ ಹೊಳೆ ಮತ್ತು ಸಂಶೋಧನೆ


ಅರಿವಿಲ್ಲದ ಪರಿಸರಪ್ರೇಮ, ಸಂಶೋಧನಾರಹಿತ ವನ್ಯ ಸಂರಕ್ಷಣೆಗಳೆಲ್ಲ ಬರಿಯ ಬೊಬ್ಬೆ ಎನ್ನುವ ಬಳಗ ನಮ್ಮದು. ಸಹಜವಾಗಿ ಪುಡಾರಿಗಳು ಎತ್ತಿನಹೊಳೆ ಎಂದಾಗ, ಅಲ್ಲ, ನೇತ್ರಾವತಿ ಎನ್ನುವಲ್ಲಿ ನಮ್ಮ ಮಾತು ಸ್ಪಷ್ಟವಿತ್ತು (ಧ್ವನಿ ದೊಡ್ಡದು ಮಾಡಿದವರೂ ಇದ್ದಾರೆ, ಆದರೆ ಗಾದೆ ಹೇಳುತ್ತದೆ - ಖಾಲಿ ಡಬ್ಬ ಹೆಚ್ಚು ಸದ್ದು ಮಾಡುತ್ತದೆ!). ಅದಕ್ಕೆ ಹಿನ್ನೆಲೆಯಲ್ಲಿ ನಮ್ಮಲ್ಲಿನ ಕೆಲವು ದಶಕಗಳ ಏಕ ನಿಷ್ಠೆಯ ವನ್ಯಸಂರಕ್ಷಣೆಯ ಸ್ವಯಂಸೇವೆ, ಮೇಲಿನಿಂದ ಮಾಹಿತಿ ಹಕ್ಕಿನಲ್ಲಿ ಕಾಲಕಾಲಕ್ಕೆ ತರಿಸಿದ ದಾಖಲೆಗಳು ನಕ್ಷೆಗಳು. ಸಾಲದೆಂಬಂತೆ ಎತ್ತಿನಹೊಳೆಯ ಮೊದಲ ಉಲ್ಲೇಖ ಪ್ರಕಟವಾದ ಹೊಸತರಲ್ಲೇ ನಮ್ಮೊಂದು ತಂಡ ಅದನ್ನು ವಾಸ್ತವದಲ್ಲೂ ಕಣ್ಣು ತುಂಬಿಕೊಂಡು ಬರುವುದಕ್ಕೆ ಕಾರೇರಿ ಸಕಲೇಶಪುರದತ್ತ ಧಾವಿಸಿದ್ದೆವು.

28 January 2014

ನೇತ್ರಾವತಿ ನದಿ ತಿರುವು - ರಾಷ್ಟ್ರೀಯ ಕಮ್ಮಟ


ದಕಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಮೂಲದಲ್ಲೇ (ಜಲಾನಯನ ಪ್ರದೇಶದಲ್ಲೇ) ಪೂರ್ಣ ಕುಲಗೆಡಿಸುವ ಕೆಲಸಕ್ಕೆ ಹೊಸ ಮತ್ತು ದೊಡ್ಡ ಹೆಸರು - ‘ಎತ್ತಿನಹೊಳೆ (ಎತ್ತು ನೀರಾವರಿ) ತಿರುವು ಯೋಜನೆ. ‘ನೇತ್ರಾವತಿ ನದಿ ತಿರುವು ಎಂಬ ಮಹಾಯೋಜನೆ ನಾಡಿನಾದ್ಯಂತ ಪರಿಸರಾಸಕ್ತರು ಮತ್ತು ಸ್ವಲ್ಪ ಹೆಚ್ಚೇ ದಕ ಜಿಲ್ಲೆಯ ವಿಚಾರಪರರು ಒಡ್ಡಿದ ಪ್ರಾಥಮಿಕ ಪರೀಕ್ಷೆಗಳನ್ನು ಎದುರಿಸಲು ಹೆಣಗುತ್ತಲೇ ಇದೆ. ಏತನ್ಮಧ್ಯೆ ಮತ-ಮಾರುಕಟ್ಟೆಯಲ್ಲಿ ಬಯಲುಸೀಮೆಯ ಸಾಮಾನ್ಯರನ್ನು ಮರುಳುಗೊಳಿಸಲು, ಮುಖ್ಯವಾಗಿ ಭಾಜಪ ಸರಕಾರದ ಮುಖ್ಯಮಂತ್ರಿಗಳು (ಯಡ್ಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರು ಅಲ್ಲದೆ ಜನತಾದ ಕುಮಾರಸ್ವಾಮಿಯೂ) ನಮ್ಮ ಜಿಲ್ಲೆಯವರಿಗೆ ಅಪರಿಚಿತ ಹೆಸರಿನ ಮುಸುಕು ಕೊಟ್ಟು ಘೋಷಿಸಿ, ಪೋಷಿಸಿದ ಯೋಜನೆಯ ಹೆಸರು ಎತ್ತಿನಹೊಳೆ ತಿರುವು. ವಾಸ್ತವದಲ್ಲಿ ಎತ್ತಿನಹೊಳೆಯ ಹೆಸರಿನಡಿಯಲ್ಲಿ ಇಲ್ಲಿ ಸೇರಿಕೊಳ್ಳುವ ಹಳ್ಳಗಳೆಲ್ಲ (ಕಾಡುಮನೆ, ಕೇರೀಹಳ್ಳ, ಹೊಂಗಡಳ್ಳ) ನೇತ್ರಾವತಿ ನದಿಯ ಮೂರು ಮುಖ್ಯ ಜಲಾನಯನ ಪ್ರದೇಶಗಳಲ್ಲಿ ಒಂದಾದ  ಸಕಲೇಶಪುರ-ಶಿರಾಡಿ ವಲಯದಲ್ಲಿರುವವೇ ಆಗಿವೆ. (ಉಳಿದೆರಡು ವಲಯಗಳು . ಬೆಳ್ತಂಗಡಿ-ಚಾರ್ಮಾಡಿ . ಕುಮಾರ ಪರ್ವತ-ಸುಬ್ರಹ್ಮಣ್ಯ.)

01 November 2013

ಎತ್ತಿನ ಹೊಳೆ ಮತ್ತು ಸುಂದರರಾಯರು

ಜೋಡುಮಾರ್ಗದ ಸುಂದರರಾಯರಿಗೂ ನನಗೂ ಆ-ಅತ್ರಿ ಅಥವಾ ಆ-ಆರೋಹಣ (ಆಜನ್ಮ ಇದ್ದ ಹಾಗೆ!) ಗೆಳೆತನ. ಪ್ರಾಯದಲ್ಲಿ ನನ್ನಿಂದ ತುಸು ಹಿರಿಯರಾದರೂ ಔಪಚಾರಿಕ ಕಲಿಕೆಯಲ್ಲಿ, ಹಾಗಾಗಿ ವೃತ್ತಿ ರಂಗದಲ್ಲೂ ನನ್ನಿಂದ ತುಸು ಕಿರಿಯರು. ಇವರು ಇಲ್ಲೇ ಮಂಗಳೂರು ವಿಶ್ವವಿದ್ಯಾನಿಲಯದ ಪೂರ್ವಾಶ್ರಮ ಅರ್ಥಾತ್ ಮೈಸೂರು ವಿಶ್ವವಿದ್ಯಾನಿಯಲದ ಸ್ನಾತಕೋತ್ತರ ಕೇಂದ್ರ - ಮಂಗಳಗಂಗೋತ್ರಿಯಲ್ಲೇ ಕನ್ನಡ ಎಂಎ ಮಾಡಿ ‘ಸಂಶೋಧನಾ’ ಪದವಿಗೂ ತುಸು ಮಣ್ಣು ಹೊತ್ತಿದ್ದರು. ಆದರೆ ಕಾರಣ ಏನೇ ಇರಲಿ (ನನಗೆ ಸ್ಪಷ್ಟ ಗೊತ್ತಿಲ್ಲ), ನನ್ನ ಹಾಗೇ ಕಲಿತದ್ದೊಂದು ಮಾಡಿದ್ದೊಂದು ಎಂಬಂತೆ ಜೋಡುಮಾರ್ಗದಲ್ಲಿ ಮುದ್ರಣಾಲಯ (ನೇಸರ ಮುದ್ರಣ) ತೆರೆದರು. ಅವರ ಹುಟ್ಟು, ಬಾಲ್ಯ ಮಾತ್ರವೇನು ಇಂದಿಗೂ ಹೊಕ್ಕುಳ ಬಳ್ಳಿ ಸೆಳೆತ ಕೊಪ್ಪದ್ದೇ ಇದೆ. ಆದರೆ ಪ್ರಜ್ಞೆ ನಿಂತ ನೆಲದ್ದು, ಬಳಕೆಯ ಜನರದ್ದು. ಪುತ್ತೂರಿಗೆ ಹೋಗಿ ಸಂಗೀತ (ವಿಶೇಷವಾಗಿ ಕೊಳಲು) ಕಲಿತರು. ಅದಕ್ಕೂ ಹೆಚ್ಚಿಗೆ ಒಳ್ಳೆಯ ಶೋತೃವಿಗೆ ಬೇಕಾದ ಶಿಕ್ಷಣ ಪಡೆದರು. ಮುಂದುವರಿದು ತಮ್ಮ ಕ್ರಿಯಾಶೀಲ ಭಾಗಿತ್ವವನ್ನು ಜೋಡುಮಾರ್ಗದ ಸಾಂಸ್ಕೃತಿಕ ಸಂಘಟನೆ ಅಭಿರುಚಿಗೆ ಕೊಟ್ಟು ಸಂಗೀತ, ನಾಟಕ, ಸಾಹಿತ್ಯ ಕಲಾಪಗಳಿಗೆ ಗುಣೈಕ ವೇದಿಕೆಯಾಗುವಲ್ಲೂ ನಿರತರಾಗಿದ್ದಾರೆ.

19 July 2013

ಅದ್ವಿತೀಯ ಕಪ್ಪೆ ಶಿಬಿರ - ೨

[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ ಮಂಡೂಕೋಪಖ್ಯಾನವನ್ನು ಮತ್ತೊಮ್ಮೆ ಓದಿಕೊಳ್ಳುವುದು ಉತ್ತಮ]



“ಬಿಸಿಲೆಯಲ್ಲಿ ಕಪ್ಪೆ ಶಿಬಿರ ನಡೆದದ್ದು ಕಳೆದ ಮಳೆಗಾಲದ ಕೊನೇ ಪಾದ. ಈಗ ಹೊಸ ಮಳೆಗಾಲದ ಮೊದಲಪಾದ. ವೈಜ್ಞಾನಿಕ ಅಧ್ಯಯನಾಸಕ್ತರು ಋತುವೊಂದರಲ್ಲಿ ಕನಿಷ್ಠ ಮೂರು ಹಂತಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಈಗ ನಡೆಸೋಣವೇ” ಸ್ವತಃ ಡಾ| ಕೆವಿ ಗುರುರಾಜ್ (ಕೆವಿಜಿ) ಮೊದಲ ಶಿಬಿರದ ‘ಕ್ಯಾಪ್ಟನ್’ ದೀಪಿಕಾರಿಗೆ ಪತ್ರ ಬರೆದರು. ಅದನ್ನು ಸಂತೋಷದಿಂದಲೇ ಸ್ವಾಗತಿಸಿದೆವು. ದೀಪಿಕಾ ಮತ್ತು ‘ವೈಸ್ ಕ್ಯಾಪ್ಟನ್’ ವಿವೇಕ್ ಹದಿನೈದು ದಿನಗಳ ಮೊದಲೇ ಊಟ ವಾಸಗಳ ವ್ಯವಸ್ಥೆಗೆ ಬಿಸಿಲೆ ‘ಸಂಬಂಧಿ’ಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಬಿಸಿಲೆ ಮಾಮೂಲೀ ದಿನಗಳಲ್ಲೇ ಚರವಾಣಿಗೆ ಬಹುತೇಕ ‘ಅವ್ಯಾಪ್ತ’ವಾದದ್ದು. ಮಳೆಗಾಲದ ಪರಿಣಾಮಗಳೊಡನೆ ಸ್ಥಿರವಾಣಿ ಸಂಪರ್ಕವೂ ಅಸಾಧ್ಯವಾದದ್ದು ಆಶ್ಚರ್ಯವೇನೂ ಅಲ್ಲ. ಇವರು ಖುದ್ದು ಹೋಗುವುದು ಅನಿವಾರ್ಯವಾಯಿತು. ದೀಪಿಕಾಗೆ ಜೊತೆಗೊಡಲೆಂದೇ ವಿವೇಕ್ ಬೆಂಗಳೂರಿನಿಂದ ಮಂಗಳೂರಿಗೆ ಬಂದು, ಇಬ್ಬರೂ ದಿನದ ಮೊದಲ ಸುಬ್ರಹ್ಮಣ್ಯ ಬಸ್ ಹಿಡಿದರು. ಅಲ್ಲಿನ ಎಲ್ಲಾ ‘ಗ್ರಹಗಳೂ’ ಪ್ರಶಸ್ತವಾಗಿದ್ದುದಕ್ಕೆ ಸುಬ್ರಹ್ಮಣ್ಯ-ಬಿಸಿಲೆಯ ನಡುವೆ ದಿನಕ್ಕೊಮ್ಮೆ ಮಾತ್ರ ಓಡಾಡುವ ಬಸ್ಸು ಅಂದು ಇವರಿಗೆ ಎರಡೂ ದಿಕ್ಕಿನಲ್ಲಿ ಸಿಕ್ಕಿತ್ತು! ನಡುವೆ ಸಿಕ್ಕ ಸುಮಾರು ಮೂರು ಗಂಟೆಗಳ ಅವಧಿಯಲ್ಲಿ ಇವರು, ತುಳಸಿ ಹೋಟೆಲಿನ ದೇವೇಗೌಡ ದಂಪತಿ ಹಾಗೂ ಸಮುದಾಯಭವನದ ಮಲ್ಲೇಶಪ್ಪರನ್ನು ನೋಡಿ ಎಲ್ಲ ನಿಗದಿಗೊಳಿಸಿದ್ದರು.

20 November 2012

ಜಲಜಾಗೃತಿಗೊಂದು ಬೀದಿ ನಾಟಕ


ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕೊಳಗೆ ಸಂಜೆ, ಹಿರಿಯರು ಹರಡಿ ಬಿದ್ದ ಬೆಂಚು ಬಿಸಿಮಾಡಿ, ಎಂದಿನ ಶುದ್ಧ ಹವಾ ಸೇವಿಸಿ ಹೋಗುವಂತಿರಲಿಲ್ಲ. ನಡು ವಿಸ್ತರಿಸಿದವರು ಬೆಲ್ಟಿನ ಒಂದು ತೂತು ಕಡಿಮೆ ಮಾಡಲು ಅಷ್ಟೂ ಪುಟ್ಟಪಥಗಳಲ್ಲಿ ಬಿರುಸಿನ ಹೆಜ್ಜೆ ಹಾಗಿ ಮುಗೀತು ಎನ್ನಲಾಗದಂತೆ ಒಳಗೊಂದು ವ್ಯಾನು ಬಂದು ಅಡ್ಡಿ ಮಾಡಿತ್ತು. ಸೂರಕ್ಕ ಮೊನ್ನೆ ನೀರಿಗೆ ಹೋಪಾಗ ಜಾರೀ ಬಿದ್ದಳಂತೇ...ಗೆ (ಕಾರಂತರ ಗೀತನಾಟಕ) ಹೊಸ ಚರಣ ಸೇರಿಸಲು, ಕಾರಂಜಿ ಕಟ್ಟೆಗೆ ಒರಗಿ ಒಂದೂವರೆ ಕಾಲಿನಲ್ಲಿ ನಿಂತವರ ಪಿಸುಮಾತಿಗೆ ವ್ಯಾನಿನೊಳಗಿನ ವಿದ್ಯುಜ್ಜನಕ ಗಲಾಟೆ ಮಾಡಿತು. ಹುಲ್ಲ ಹಾಸಿನ ಮೇಲೆ ವಿಹರಿಸುವ ಜೋಡಿಗಳಿಗೆ ಅಂಚಿನ ಕಟ್ಟೆ ತೋರಿ, ಆರೆಂಟು ಜನ ಮೈಕ್ ಕೋಲು ನಿಲ್ಲಿಸಿ, ಏನೇನೋ ತತ್ಕಾಲೀನ ಪತಾಕೆಗಳನ್ನು ಊರಿ ಗಡಿಬಿಡಿ ನಡೆಸಿದ್ದರು. ಪೊದರ ನೆರಳಿನಲ್ಲಿ ಪ್ರೇಮಕಥನ ಬಿಡಿಸುವವರು ಸಾರ್ವಜನಿಕವಾದ ಬೇರೊಂದೇ ದುರಂತಕಥನಕ್ಕೆ ಸಾಕ್ಷಿಯಾಗಬೇಕಾಯ್ತು. ಹಗ್ಗ ಸೇತುವೆ, ಉಯ್ಯಾಲೆ, ಜಾರುಬಂಡೆಯನ್ನೆಲ್ಲಾ ಆಕ್ರಮಿಸಿದ್ದ ಕಪಿಸೈನ್ಯಕ್ಕಂತು ಇಲ್ಲೇನೋ ರಾಗ, ಡೋಲು, ಬೊಬ್ಬೆ, ಮಣಿತಗಳ ಚೋದ್ಯ ಬನ್ರಪ್ಪೋ ಬನ್ನೀ, ಕೇಳ್ರಪ್ಪೋ ಕೇಳೀ.

07 September 2012

ಮಂಡೂಕೋಪಖ್ಯಾನ

Nyctibatrachus ಚಿತ್ರ ಕೃಪೆ ಡಾ. ಕೆ.ವಿ. ಗುರುರಾಜ್

“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ...” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ) ಸ್ಲೇಟಿನಲ್ಲಿದ್ದ ಹಳೇ ಬರಹಗಳನ್ನು ಚಂದಕ್ಕೆ ಒರೆಸುತ್ತಿದ್ದರು. (ಇಂದು ಬಿಡಿ, ಹಲಗೆ ಬಳಪವ ಪಿಡಿಯದಗ್ಗಳಿಕೆಯವರೇ ಎಲ್ಲ) ಆದರೆ ವಾಸ್ತವದಲ್ಲಿ ಹಾಗಲ್ಲ “ಪಸೆ ಎಲ್ಲಿದೆಯೋ ಅಲ್ಲಿಗೆ ಕಪ್ಪೆಗಳು ಆಕರ್ಷಿತವಾಗುತ್ತವೆ. ಬಾಯಿಯಿಂದ ನಾವು ನೀರು ಕುಡಿದಂತೇ ಕೆಲವು ಜಾತಿಯ ಕಪ್ಪೆಗಳಂತು ತೊಡೆಯ ತಳದ ಚರ್ಮದಿಂದಲೂ ನೀರನ್ನು ದೇಹವ್ಯವಸ್ಥೆಗೆ ಸೇರಿಸಿಕೊಳ್ಳುತ್ತವೆ” ಎನ್ನುತ್ತಾರೆ ಡಾ| ಕೆ.ವಿ. ಗುರುರಾಜ್. ಅವರ ಎರಡು ದಿನಗಳ (ಆಗಸ್ಟ್ ೨೫, ೨೬) ಕಪ್ಪೆ ಕಮ್ಮಟದಲ್ಲಿ ಮುಂದುವರಿಯುತ್ತಾ ನನಗೆ ಇನ್ನೂ ಹೆಚ್ಚು ತಿಳಿವು ಮೂಡಿತು. ನಮ್ಮನೆಯಲ್ಲಿ ತೊಳೆದಿಟ್ಟ ತಟ್ಟೆಗಳ ಸ್ಟ್ಯಾಂಡಿನಲ್ಲಿ ತಟ್ಟೆಯ ಪಸೆಗೋ ಲೋಟದ ಹಸಿಗೋ ವರ್ಷದ ಕೆಲವು ತಿಂಗಳುಗಳಲ್ಲಿ ಕೆಲವು ನಿಶಾಚರಿ ಕಪ್ಪೆಗಳು ನಿಯತವಾಗಿ ಬಂದು ಕುಳಿತು ‘ನಿದ್ರೆ’ಗೆ ಜಾರುತ್ತಿದ್ದವು. ಹಾಗೆಯೇ ಕೆಲವು ಮನೆ ಗೋಡೆಯ ಯಾವುದೋ ಒಳ ಮೂಲೆಯಲ್ಲಿ (ನಮಗರಿವಾಗದ ತೇವಾಂಶ ಗುರುತಿಸಿ) ಧ್ಯಾನಸ್ಥವಾಗುತ್ತಿದ್ದದ್ದೂ ಇತ್ತು. ಇವು ಕೇವಲ ಗಲೀಜು ಮಾಡಲು ವಕ್ಕರಿಸುವವಲ್ಲ ಎಂಬ ಅರಿವಿನ ದೀಪವೂ ಝಗ್ಗೆಂದಿತು! (ಅದೊಂದು ಶುಭ ಪ್ರಾತಃಕಾಲ ದೇವಕಿ ಲೋಟದಲ್ಲಿದ್ದ ಅಂಥಾ ಒಂದು ‘ಪುಟ್ಟಪ್ಪ’ನನ್ನು ಗಮನಿಸದೆ ಬಿಸಿ ಕಾಫಿ ಹಾಕಿ ನನಗೆ ಕೊಟ್ಟಿದ್ದಳು. ನಾನು ಅರಿವಿಲ್ಲದೆ ಬಾಯಿಗಿಟ್ಟದ್ದಕ್ಕೆ ಕಾಫಿ ಕೆಫೆಡೇಯ ಲಭ್ಯ ನೂರಾ ಒಂದು ಕಾಫಿ ವೈವಿಧ್ಯದ ಮೇಲಿನೊಂದು ಹೊಸ ರುಚಿ ನೋಡಲು ಸಾಧ್ಯವಾಯ್ತು!) ಹೊಸ ಅರಿವಿನ ಬೆಳಕಿನ ಮೂಲ - ಯಾರೀ ಕಪ್ಪೆ-ಪಂಡಿತ? ಏನೀ ಕಪ್ಪೆ-ಕಮ್ಮಟ?

21 November 2008

ಕಾನನದೊಳಗಿಂದೆದ್ದು ಬಂದವನಾವನಿವಂ?

nilgiri-martenಘಟ್ಟ ಇಳಿಯುವವರಿಗೆ ಬಿಸಿಲೆ ಒಂದು ಸುಂದರ ಅನುಭವ. ಅದರಲ್ಲೂ ಮುಖ್ಯವಾಗಿ ಬಿಸಿಲೆ ಹಳ್ಳಿಯಿಂದ ಕುಳ್ಕುಂದ ಗೇಟಿನವರೆಗೆ ಸುಮಾರು ಇಪ್ಪತ್ಮೂರು ಕಿ.ಮೀ ಕಂಡಷ್ಟು ಮುಗಿಯದ ಪ್ರಾಕೃತಿಕ ಅನಾವರಣಗಳ ಸರಣಿ. ಎತ್ತೆತ್ತರದ ಮರಗಳ ನೆತ್ತಿಯಿಂದ ನಮ್ಮನ್ನು ಇಣುಕಿ ನೋಡುವ ಕಲ್ಲುಗುಡ್ಡ, ಪಶ್ಚಿಮದ ಧಾಳಿಗೆ ಎದೆಗೊಟ್ಟ ಕನ್ನಡಿಗಲ್ಲು, ಕುಮಾರಧಾರೆಯ ಬಲು ದೀರ್ಘ ಓಟದೊಂದು ವಿಹಂಗಮ ನೋಟ ಕೊಡುವ ಬಾಳೇಕಲ್ಲು, ಕಣಿವೆಯಾಚೆ ನಿಂತರೂ ಎಲ್ಲವನ್ನು ಆಳುವ ಔನ್ನತ್ಯ ಕುಮಾರಾದ್ರಿ. ಕಾಡೊಳಗೆ ನುಸಿಯುತ್ತ ಕಣಿವೆಯಂಚಿನಲ್ಲಿ ಇಣುಕುತ್ತಾ ಸಾಗುವ ದಾರಿಯೂ ದಟ್ಟ ಕಾಡು ಮತ್ತು ಹೊಳೆಯಂಚಿಗೆ ಎಂದೋ ಹಾಕಿದ ಓಡು-ಹೊಲಿಗೆ. ಬೆಂಗಳೂರು-ಮಂಗಳೂರು ಹೆದ್ದಾರಿ ಶಿರಾಡಿಯಲ್ಲಿ ಸತ್ತ ಮೇಲೆ, ಪಕ್ಷಾತೀತವಾಗಿ ಪುಡಾರಿಗಳ `ಧರ್ಮ ಜಾಗೃತಿ’ ಅತಿಯಾಗುತ್ತಿದ್ದಂತೆ, ಮಾಧ್ಯಮಗಳ ವಿಮರ್ಶೆಯಿಲ್ಲದ ವರದಿ ಉತ್ಸಾಹದಿಂದ ಸುಬ್ರಹ್ಮಣ್ಯದಲ್ಲಿ ಕುಮಾರಧಾರೆ ಸೊರಗಿ, ಚರಂಡಿಗಳಲ್ಲಿ ಪ್ರವಾಹ ಉಕ್ಕೇರಿತ್ತು. ಗೂಟದ ಕಾರು, ಚೇಲರ ಸಂಭ್ರಮ, ಕುರುಡುಭಕ್ತರ ಸಾರಿಗೆ ಸಾವಿರ, ಬಸ್ಸುಗಳಿಂದ ತೊಡಗಿ ಆರು ಚಕ್ರದ ಅಸಂಖ್ಯ ಲಾರಿಗಳೂ ಹರಿದದ್ದು ಬಿಸಿಲೆ ದಾರಿಗೆ. ಸಹಜವಾಗಿ  ಪ್ರಕೃತಿ ಸಂಸ್ಕೃತಿಯ ಸುಂದರ ಬೆಸುಗೆ, ಕಿಲುಬು ಹಿಡಿದಂತಾಗಿರುವುದು ದೊಡ್ಡ ದುರಂತ! ಅರಣ್ಯ ಇಲಾಖೆಯ (ಹಾಸನ ಜಿಲ್ಲೆ) ಅದಕ್ಷತೆ ಮತ್ತು ಎಲ್ಲಾ ಅಧಿಕಪ್ರಸಂಗಗಳ ನಡುವೆಯೂ ಈ ವಲಯದಲ್ಲಿ ಇನ್ನೂ ಮನುಷ್ಯ ವಸತಿ ಮತ್ತದರ ವ್ಯಾಪಕ ಹಾನಿಗಳು ಬರದಿರುವುದು ಅದೃಷ್ಟವೇ ಸರಿ. ಇದಕ್ಕೆ ಭಂಗ ತರಬಹುದಾಗಿದ್ದ ಒಂದಷ್ಟು ಖಾಸಗಿ ಕೃಷಿಭೂಮಿಯನ್ನು ನಾವು ಕೆಲವು ಮಿತ್ರರು ಕೊಂಡು, ವನ್ಯಸ್ಥಿಯಲ್ಲಿ ಏನೂ ಬದಲಾವಣೆ ಬಾರದಂತೆ ಕಾಪಾಡುತ್ತಿದ್ದೇವೆ (ಅಶೋಕವನ - ಅದರ ಹೆಸರು). ಅಲ್ಲಿನ ನಮ್ಮ ದರ್ಶನಗಳಲ್ಲಿ ಒಂದು ಈ ಮರನಾಯಿ.

ಅಶೋಕವನದಲ್ಲಿ ಅದೊಂದು ಎರಡು ರಾತ್ರಿಯ ಶಿಬಿರದ ಒಂದು (೨೭-೦೧-೨೦೦೭) ಸಂಜೆ. ವನ್ಯ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗೆ ಓದುತ್ತಿದ್ದ ನಾಲ್ಕು ಉತ್ಸಾಹದ ಚಿಲುಮೆಗಳು, ವನ್ಯ ಸಂರಕ್ಷಣೆಯ ಕಠಿಣ ವ್ರತಧಾರಿ ನಿರೇನ್ ಜೈನ್, ನಾನು ಮತ್ತು ನನ್ನ ಮಗ - ಅಭಯಸಿಂಹ (ಸಿನಿಮಾ ಮಾಡುವವ) ದಿನದ ಹತ್ತೆಂಟು ಕಲಾಪಕ್ಕೆ ತೆರೆಯೆಳೆಯುವಂತೆ ದಾರಿಗಿಳಿದಿದ್ದೆವು. ಬಿಸಿಲೆಗೇಟಿನಿಂದ ಸುಮಾರು ಮೂರು ಕಿಮೀ ಕೆಳಗಿನ ಮೊದಲ ಹಿಮ್ಮುರಿ ತಿರುವಿನವರೆಗೆ ನಿಧಾನಕ್ಕೆ ಹೋದೆವು. ಕೊಳ್ಳದ ಝರಿ, ಹೊಳೆಗಳ ಏಕನಾದಕ್ಕೆ ಪಲುಕು ಬೆಸೆಯುವವರನ್ನು (ಹೆಚ್ಚಾಗಿ ಹಕ್ಕಿಗಳು) ಮೂರ್ತಗೊಳಿಸಲು ಹೆಣಗುತ್ತ, ಕಂಡದ್ದಕ್ಕೆ ಹಕ್ಕಿಯಜ್ಜನ (ಸಲೀಂ ಆಲಿ) ಹೊತ್ತಗೆಯಲ್ಲೋ ಇನ್ನೂ ಹೊಸ ತಲೆಮಾರಿನ ಪಕ್ಷಿವೀಕ್ಷಕರ ಕೈಪಿಡಿಗಳಲ್ಲೋ ಸಾಮ್ಯ ಹುಡುಕಿ, ನೆನಪಿನ ಭಿತ್ತಿಯಲ್ಲಿ ಶಾಶ್ವತಗೊಳಿಸುತ್ತಿದ್ದೆವು. `ಪಾತರಗಿತ್ತಿ ಪಕ್ಕಾ ನೋಡೋದೆಷ್ಟೇ ಅಕ್ಕಾ’ ಎಂದು ಕುಣಿದದ್ದೇ ಕುಣಿದದ್ದು. ಪ್ರತಿ ಗಿಡ, ಮರ, ಬಳ್ಳಿ ಮತ್ತವುಗಳ ಎಲೆ, ಹೂ, ಕಾಯಿ ನಮಗೆ ಜೀವ ಇತಿಹಾಸದ ದಫ್ತರಗಳು. ನಮೂದುಗಳನ್ನು ಖಚಿತಗೊಳಿಸದೆ ನಮಗೆ ಮುಂದಡಿಯಿಲ್ಲ!

03 September 2008

ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಸರಕಾರದ ಬತ್ತಳಿಕೆಯಲ್ಲಿರುವ ಅಭಿವೃದ್ಧಿ ಎಂಬ ಅಸ್ತ್ರವೇಕೋ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಕಾಣುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸದ್ಯ ಪಶ್ಚಿಮಘಟ್ಟದ ಪರಿಸರವನ್ನು ಅದರಲ್ಲೂ ಮುಖ್ಯವಾಗಿ ವನ್ಯ ಪರಿಸರವನ್ನು ಜಲವಿದ್ಯುತ್ತು ಯೋಜನೆಗಳು ಅಪಾರವಾಗಿ ಹಾಳುಗೆಡವುತ್ತಿವೆ. ಇಲ್ಲಿ ಪ್ರಧಾನ ಉತ್ಪನ್ನಕ್ಕಿಂತ ಉಪೋತ್ಪನ್ನಗಳ ಆಕರ್ಷಣೆ ಹೆಚ್ಚು. ಸಾಲ, ಸಬ್ಸಿಡಿ, ಮರ, ಕಲ್ಲು, ಸಾಗಣೆ, ನಿರ್ಮಾಣ ಕಂತ್ರಾಟು ಎಲ್ಲವೂ ಬಹು ಕೋಟಿಗಳ ಲೆಕ್ಕ. ಅವನ್ನೆಲ್ಲ ತಿಳಿದು ನಿರಾಕರಿಸಬೇಕಾದವರು ದಿನ ನಿತ್ಯದ ಗಂಜಿ, ಬೀಡಿಗಳಿಗೆ ಪರದಾಡುವ ಜನಗಳು. ಇವರ ಅಹವಾಲುಗಳು ಸಾಮಾನ್ಯವಾಗಿ `ಯಥೇಚ್ಛ’ ಪರಿಹಾರ ದಕ್ಕುವುದರೊಡನೆ ಸಮಾಧಿಯಾಗುತ್ತವೆ! ಅದನ್ನು ಮೀರಿದ ಪರಿಸರದ ಕೊರಗು ಅವರಿಗೆ ಬರುವುದು ಸಾಧ್ಯವಿಲ್ಲ. ಅವರಿಗೆ ಮನೆ, ಕೃಷಿ, ನಾಗರಿಕ ಮರುವಸತಿಯೋ ಪರಿಹಾರವೋ ಕೊಡುವುದು ಸಾಧ್ಯವಾಗಬಹುದು. ಆದರೆ ಯಾವುದೇ ಪ್ರಾತಿನಿಧ್ಯ ಬಿಡಿ, ಸೊಲ್ಲೂ ಇಲ್ಲದ ಅಸಂಖ್ಯ ಮನುಷ್ಯೇತರ ಜೀವಾಜೀವಗಳಿಗೇನು ಪರಿಹಾರ? ಈ ಹಿನ್ನೆಲೆಯೊಡನೆ ಪರಿಸರ ಅಧ್ಯಯನ ವರದಿ ಮತ್ತು ಯೋಜನೆಯ ಅನುಷ್ಠಾನದ ಪರಿಸರದಲ್ಲೇ ಜನಾಭಿಪ್ರಾಯದ ಕ್ರೋಢೀಕರಣ (Environmental Impact Assessment - EIA) ಇಂದು ಯಾವುದೇ ಯೋಜನೆಗೆ ಕಡ್ಡಾಯವಾಗಿದೆ.