ಅತ್ರಿ ಜಾಲತಾಣದಲ್ಲಿ ನಾನು ಚದುರಿದಂತೆ ಬರೆದ, ಮುಖ್ಯವಾಗಿ ಶಿಲಾರೋಹಣ ಸಾಹಸಗಳ ಸಂಕಲನ, ಈಗ ಸುಂದರ ಮುಖಪುಟ ಹೊತ್ತು ‘ಶಿಲಾರೋಹಿಯ ಕಡತ’ ಎಂಬ ಪುಸ್ತಕವಾಗಿ ಬಂದಿದೆ. ಇದನ್ನು ಬೆಂಗಳೂರಿನ ಬರಹ ಪಬ್ಲಿಷಿಂಗ್ ಹೌಸ್ ಅಥವಾ ಪ್ರಗತಿ ಗ್ರಾಫಿಕ್ಸಿನ ಡಾ| ಎಂ. ಭೈರೇಗೌಡರು ಬಯಸಿ ಪಡೆದು, ಪ್ರಕಟಿಸಿದ್ದಾರೆ. ಸುಮಾರು ನೂರಾಮೂವತ್ತು ಪುಟಗಳ, ಸುಂದರ ಮುದ್ರಣದ ಸಚಿತ್ರ ಪುಸ್ತಕ ರೂಪಾಯಿ ನೂರರ ಬೆಲೆಯಲ್ಲಿ ಪುಸ್ತಕಮಳಿಗೆಗಳಲ್ಲಿ ನಿಮ್ಮ ಕೈ ಸೇರಲು ಕಾದಿವೆ. ಅಲ್ಲಿ ನಿರಾಶೆಯಾದರೆ ನೇರ ನನಗೆ ಅದರ ಪೂರ್ಣ ಮೊತ್ತವನ್ನು (ರೂ. ನೂರು) ಮನಿಯಾರ್ಡರ್ ಮೂಲಕ ಕಳಿಸಿಕೊಟ್ಟರೆ, ಅಂಚೆ ವೆಚ್ಚ ನಾನೇ ಭರಿಸಿಕೊಂಡು ಕಳಿಸಿಕೊಡಬಲ್ಲೆ. ಮಾರ್ಚಿನಲ್ಲಿ ಹೀಗೇ ಅಭಿನವ ಪ್ರಕಾಶನದಿಂದ ಪ್ರಕಟವಾದ ನನ್ನ ಇನ್ನೊಂದು ಕೃತಿ - ದ್ವೀಪ ಸಮೂಹದ ಕಥೆ (ಅಂಡಮಾನ್ ಮತ್ತು ಲಕ್ಷದ್ವೀಪಗಳ ಪ್ರವಾಸ ಕಥನ) ರೂ ಎಪ್ಪತ್ತೈದು ಮತ್ತು ಸದ್ಯ ಅತ್ರಿ ಪ್ರಕಾಶನದಲ್ಲೇ ದಾಸ್ತಾನು ಉಳಿದಿರುವ ಯಾವವು ಬೇಕಿದ್ದರೂ (ಕೊನೆಯಲ್ಲಿ ಪಟ್ಟಿ ಲಗತ್ತಿಸಿದ್ದೇನೆ) ಕೇವಲ ಮುದ್ರಿತ ಬೆಲೆಯನ್ನು ಮಾತ್ರ ಸೇರಿಸಿ ಕಳಿಸಿ, ಸಾಗಣೆ ವೆಚ್ಚ ನಾನೇ ವಹಿಸಿಕೊಂಡು ಕಳಿಸುತ್ತೇನೆ.
Showing posts with label ಕೊಡಂಜೆ ಕಲ್ಲು. Show all posts
Showing posts with label ಕೊಡಂಜೆ ಕಲ್ಲು. Show all posts
04 May 2012
24 February 2011
ಮಧು ಚುಂಬನ
[ಕೊಡಂಜೆಕಲ್ಲಿನ ಕಥಾಜಾಲ ಭಾಗ ಮೂರು]
೧೯೭೫ರಲ್ಲಿ ಮಂಗಳೂರಿನಲ್ಲಿ ನಾನು ಅಂಗಡಿ ತೆರೆದಂದಿನಿಂದ ಪರ್ವತಾರೋಹಣ ಮತ್ತು ತತ್ಸಂಬಂಧೀ ಚಟುವಟಿಕೆಗಳನ್ನು ನನ್ನ ಸಂತೋಷಕ್ಕಾಗಿ ಮಾಡುವುದರೊಡನೆ ಸಾರ್ವಜನಿಕದೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದರಲ್ಲೂ ತೊಡಗಿದ್ದೆ. ಈ ಹಂಚುವ ಕ್ರಿಯೆಯ ಪರಾಕಾಷ್ಠೆ ಎಂಬಂತೆ ಕೆಲವು ಗೆಳೆಯರನ್ನು ಸೇರಿಸಿಕೊಂಡು ಜಿಲ್ಲೆಯೊಳಗಿನ ಏಳು ಕಾಲೇಜುಗಳನ್ನು ಆಯ್ದು ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು’ ಹೆಸರಿನಲ್ಲಿ ಪರ್ವತಾರೋಹಣ ಸಪ್ತಾಹವನ್ನೇ ನಡೆಸಿದ್ದೆವು. (ವಿವರಗಳನ್ನು ಮುಂದೆಂದಾದರೂ ಹೀಗೇ ಹಂಚಿಕೊಳ್ಳುತ್ತೇನೆ) ಅದರ ಫಲವಾಗಿ ಕೆಲವು ಕಾಲೇಜುಗಳು ಸ್ವತಂತ್ರ ಪರ್ವತಾರೋಹಣ ಸಂಘಗಳನ್ನು ಕಟ್ಟಿಕೊಂಡದ್ದು, ನಾವವರಿಗೆ ಉಚಿತವಾಗಿ ಶಿಲಾರೋಹಣದ ಮತ್ತು ಇಳಿಯುವ ಮೂಲ ತರಬೇತು ನೀಡಿದ್ದು ನಡೆಯಿತು. ಇದರಲ್ಲಿ ತುಂಬಾ ಗಮನಾರ್ಹ ಸಾಧನೆ ‘ಭುವನೇಂದ್ರದ ಆರೋಹಿ’ಗಳದು.
16 February 2011
ಚಿಮಣಿಯಿಂದಾಚೆ ಇಣುಕಿದಾಗ...
(ಕೊಡಂಜೆ ಕಲ್ಲಿನ ಕಥಾಜಾಲ - ೨)
ಕೊಡಂಜೆ ಕಲ್ಲನ್ನು ಕತ್ತೆಕಿವಿ ಎಂದು ಗುರುತಿಸಿದವರು ಐತಿಹಾಸಿಕ ನಾವಿಕರು. ನಾನು ಅದರಲ್ಲೇ ಮುಂದುವರಿದು ಗುರುತಿಸುವ ಅನುಕೂಲಕ್ಕೆ ಮೊದಲ ಕೋಡುಗಲ್ಲನ್ನು ‘ನಿಮಿರುಗಿವಿ’ ಎಂದೂ ಆಚಿನದ್ದು, ಸುಮಾರು ಐವತ್ತು ಅರವತ್ತಡಿ ತಗ್ಗಿನದ್ದನ್ನು ‘ಮೊಂಡುಗಿವಿ’ ಎಂದೇ ಗುರುತಿಸಿಕೊಂಡಿದ್ದೆ. ಮತ್ತೂ ಮುಂದುವರಿದು ಎರಡೂ ಕಿವಿಗಳ ನಡುವಣ ಸಂಪರ್ಕ ದಿಬ್ಬವನ್ನು ಕತ್ತೆಯ ‘ಮಂಡೆ’ ಎಂದೂ ಆಶ್ರಮಕ್ಕೆ ಸಾಗುವ ಕಾಲ್ದಾರಿ ವಲಯವನ್ನು ‘ಹೆಕ್ಕತ್ತು’ ಎಂದೂ ಭಾವಿಸಿಕೊಳ್ಳಿ. ಸಾಹಸ ಬಯಸಿ ಕೊಡಂಜೆ ಕಲ್ಲಿಗೆ ಹೋಗುವವರಿಗೆ ಎರಡು ಜಾಡುಗಳಿವೆ. ಹೆಚ್ಚಿನವರು ಕಾಲ್ದಾರಿಯಲ್ಲೇ ಹೆಕ್ಕತ್ತು ಹಾಯ್ದು, ಗುಹಾಶ್ರಮದ ಆವರಣದವರೆಗೆ ಸಾಗಿ, ಎಡದ ಅಸ್ಪಷ್ಟ ಜಾಡಿಗೆ ಕವಲೊಡೆಯುತ್ತಾರೆ. ಇದು ಆಶ್ರಮದ ಚಪ್ಪರವೇ ಆಗಿರುವ ಭಾರೀ ಹಾಸುಬಂಡೆಯ ನೆತ್ತಿಯಲ್ಲೇ ಸಾಗಿ ಪೂರ್ವ ಮಗ್ಗುಲಿನ ಕುರುಚಲು ಕಾಡು ಸೇರಿಸುತ್ತದೆ. ಅಲ್ಲಿರುವ ಸ್ಪಷ್ಟ ಸವಕಲು ಜಾಡಿನಲ್ಲಿ ಹತ್ತೇ ಮಿನಿಟಿನ ನಡಿಗೆಯಲ್ಲಿ ನಿಮಿರುಗಿವಿಯನ್ನಷ್ಟೇ ಬಳಸಿ ಕತ್ತೆಯ ಮಂಡೆಗೇರುತ್ತಾರೆ. ಇನ್ನೂ ಕೆಲವರು ಡಾಮರು ದಾರಿ ಮತ್ತು ಮಣ್ಣ ದಾರಿ ಬಿಟ್ಟ ಮೇಲೆ ಪಶ್ಚಿಮ ಮಗ್ಗುಲಲ್ಲೇ ಹಾಯ್ದು, ಪುಡಿಗಲ್ಲು ಮಣ್ಣು ತುಳಿದು, ಹುಲ್ಲು ಮುಳ್ಳು ನುಗ್ಗುನುರಿ ಮಾಡಿ ಕತ್ತೆಮಂಡೆ ಸೇರುವುದೂ ಇದೆ. ಒಟ್ಟಾರೆ ಸಾರ್ವಜನಿಕರಿಗೆ ಕತ್ತೆ ಮಂಡೆಯಿಂದಲೇ ನಿಜ ಶಿಲಾರೋಹಣ ಸುರು. ವಾಸ್ತವವಾಗಿ ನನ್ನ ಮೊದಲ ಪ್ರಯತ್ನದಂದು ಅದಕ್ಕೊಂದು ಬಳಕೆಯ ಜಾಡಿದೆ ಎಂದು ನನಗೆ ತಿಳಿದೇ ಇರಲಿಲ್ಲ. ಕೊಡಂಜೆಗೆ ನಾನೇ ವಾಸ್ಕೋಡಗಾಮಾ ಎನ್ನುವ ಹುಮ್ಮಸ್ಸು; ಅದಕ್ಕೊಂದು ಏರುಮಾರ್ಗ ನಿಷ್ಕರ್ಷಿಸುವವನ ಹಮ್ಮು! ಶಿಲಾರೋಹಣದ ಪಾಠವೇ ಹಾಗೆ - ಬಂಡೆಗಳಲ್ಲಿ ಎರಡೇ ವಿಧ, ಏರಿದ್ದು, ಏರದ್ದು. ಏರಲಾಗದ್ದು ಎಂದಿಲ್ಲ. ಕೊಡಂಜೆಯ ಕುರಿತು ನನಗೆ ಸಿಕ್ಕ ಸ್ಥಳಪುರಾಣಗಳೆಲ್ಲ ಪೂರ್ವತಪ್ಪಲಿನ ಗುಹಾಶ್ರಮದ ಮಹಿಮೆಯನ್ನು ಮಾತ್ರ ಬಿತ್ತರಿಸಿದ್ದು ನನಗೆ ಹಿಡಿಸಿರಲಿಲ್ಲ. ನನ್ನ ಸ್ಪಷ್ಟ ಲಕ್ಷ್ಯ ನಿಮಿರುಗಿವಿ.
10 February 2011
ಸುಲಭದ ತುತ್ತಲ್ಲ ಕತ್ತೆಕಿವಿ
ಕೊಡಂಜೆ ಕಲ್ಲಿನ ಕಥಾಜಾಲ - ಭಾಗ ೧ನನ್ನ ಈ ವಲಯದ ಬೆಟ್ಟಗಾಡು ಸುತ್ತಾಟಕ್ಕೆ ಪ್ರಾಯ ಮೂವತ್ತೈದು ಕಳೆಯಿತು. ನನ್ನಜ್ಜ (ಅಪ್ಪನಪ್ಪ) ಪ್ರಾಯ ಎಂಬತ್ತರ ಹತ್ತಿರವಿದ್ದಾಗಲೂ ಮಡಿಕೇರಿಗೆ ಹೊರಟರೂಂದ್ರೆ ಕೋಟೂ ಬೂಟೂ ಹಾಕಿ ತಲೆಗೆ ಹ್ಯಾಟು ಇಟ್ಟು, ಕೈಯಲ್ಲೊಂದು (ಕೋಲಲ್ಲ) ಭಾರದ ಹ್ಯಾಂಡ್ ಬ್ಯಾಗ್ ಹಿಡಿದುತೋಟದ ಮನೆಯಿಂದ (ಮೋದೂರಿನ ಶುಭೋದಯ ಕೃಷಿಕ್ಷೇತ್ರ), ಎಂದರೆ ಅಕ್ಷರಶಃ ಪಾತಾಳದಿಂದ ಒಮ್ಮೆಯೂ ಉಸಿರಿಗಾಗಿ ನಿಲ್ಲದೆ ದಾರಿಗೆ ನಡೆದು ಬರುತ್ತಿದ್ದರು! ನನ್ನಪ್ಪ ಎಪ್ಪತ್ತೈದರ ಪ್ರಾಯದವರೆಗೂ ಮೈಸೂರಿನ ಅಳತೆ ಮಾಡಲು ಸೈಕಲ್ಲೇ ಬಳಸುತ್ತಿದ್ದರು. ನಾನು ಮಾಡುವುದೇನೇ ಇರಲಿಕೊಚ್ಚಿಕೊಳ್ಳುವುದು ಕೇಳಿದ ಈ ಕಾಲದ ಹಲವು ಚಾರಣ ಗೆಳೆಯರು ಶುದ್ಧ ಶಿಲಾರೋಹಣದ ದರ್ಶನ ಮತ್ತು ಅನುಭವ ತನಗೆ ಬೇಕಿತ್ತು ಎಂದು ಬಯಸುತ್ತಲೇ ಇದ್ದರು. ಆಗೆಲ್ಲಾ ನಾನು, ಒಂದಿನ ಕೊಡಂಜೆಕಲ್ಲಿಗೇ ಹೋಗೋಣ ಬನ್ನಿ ಎನ್ನುವುದೂ ನಡೆದೇ ಇತ್ತು. ಧರ್ಮಕರ್ಮ ಸಂಯೋಗದಿಂದ ಈಚೆಗೆ ನಾವೊಂಬತ್ತು ಮಂದಿ ಬೆಳಿಗ್ಗೆಯೇ ಕೊಡಂಜೆಗೆ ಸಕಲ ಸಜ್ಜಿಕೆಗಳೊಡನೆ ಲಗ್ಗೆಯಿಟ್ಟೆವು. ಕಾರೇರಿ ಮೂಡಬಿದ್ರೆ. ಹೊಟೆಲಿನಲ್ಲಿ ತಿಂಡಿ ತಿಂದದ್ದಲ್ಲದೆ ಮಧ್ಯಾಹ್ನಕ್ಕೆ ಬುತ್ತಿಯನ್ನೂ ಕಟ್ಟಿಸಿಕೊಂಡೆವು. ಅನಂತರ ಶಿರ್ತಾಡಿ ದಾರಿಯಲ್ಲಿ ಸುಮಾರು ನಾಲ್ಕೇ ಕಿಮೀ ರ್ರುಮ್ಮ. ಎಲ್ಲ ಕಾಲಕ್ಕೆ ಇದು ಹೀಗಿರಲಿಲ್ಲ. ಮೂಡಬಿದ್ರೆಯಿಂದ ಬೇರೇ ಬಸ್ಸು ಹಿಡಿದೋ ಬೈಕ್ ಸ್ಕೂಟರ್ ಏರಿಯೋ ಬಂದದ್ದೂ ಇತ್ತು. ಹಿಂದೆ ಹೋಗುವಾಗ ಏನೂ ಸಿಗದೆ ಮೂಡಬಿದ್ರೆಯವರೆಗೆ ನಡೆದು ಹೋದದ್ದೂ ಇತ್ತು.
Subscribe to:
Posts (Atom)
