೧. ಕಥನಾರಂಭದಲ್ಲಿ
ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ: ಸಿನಿಮಾವಲ್ಲ, ದಾಖಲೀಕರಣ) ಅಂಥದ್ದೇ ಯೋಜನೆಯ ಭಾಗವಾಗಿ ೨೦೧೯ರ ಒಂದು ದಾಖಲೀಕರಣಕ್ಕೆ ಜತೆಗೊಟ್ಟ ನನಗೆ, ಅಯಾಚಿತವಾಗಿ ಆ ವರ್ಷದ ನೀನಾಸಂ ರಂಗ ಶಾಲೆಯ ಹೊಸ ವಿದ್ಯಾರ್ಥಿಗಳ ಮೊದಲ ದಿನವನ್ನೂ ನೋಡುವ ಅವಕಾಶ ಒದಗಿತ್ತು. (ನೋಡಿ: ನೀನಾಸಂ ಕಥನ ಮಾಲಿಕೆ...) ಅಂದು ಪ್ರಾಸಂಗಿಕವಾಗಿ, ಆದರೆ ಶುದ್ಧ ಪ್ರಾಯೋಗಿಕವಾಗಿ ಕೆವಿ ಅಕ್ಷರ ಮಾತಾಡುತ್ತಾ (ವಿದ್ಯಾರ್ಥಿಗಳನ್ನು ಉದ್ದೇಶಿಸಿ) "ನೀವೆಲ್ಲ ವರ್ಷದ ಕೊನೆಯಲ್ಲಿ ದಶ ಶಿರನನ್ನು ಮೀರಿಸಿದ ರಂಗಪುರುಷನನ್ನು ಇಲ್ಲಿ ರೂಪಿಸಬೇಕು..." ಎಂದಿದ್ದರು. ಆದರೆ ನಿಮಗೆಲ್ಲ ತಿಳಿದಂತೆ, ‘ಕೋವಿಡ್’ ಮಹಾಮಾರಿಯ ಗೊಂದಲದಲ್ಲಿ ಇಲ್ಲೂ ವಿದ್ಯಾವರ್ಷ ಮೊಟಕುಗೊಂಡಿತ್ತು.ಈಚೆಗೆ ಸರಕಾರದ ಬಿಗಿತಗಳು ಕಡಿಮೆಯಾದ ಮೇಲೆ, ನೀನಾಸಂ ಕಡಿದ ಎಳೆಗಳನ್ನು ಜೋಡಿಸಿ, ಆ ಬಳಗದ ಶಿಕ್ಷಣವನ್ನು ಪೂರ್ಣಗೊಳಿಸಿತ್ತು. ಮತ್ತದನ್ನು ಸಣ್ಣದಾಗಿ ಲೋಕಕ್ಕೆ ಸಾರುವಂತೆ ಎರಡು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. ಹೀಗೆ ಮೈದಳೆದ ಸುಮಾರು ಇಪ್ಪತ್ತು ತಲೆಗಳ (ವಿದ್ಯಾರ್ಥಿ ಸಂಖ್ಯೆ) ರಂಗಪುರುಷನ ಎರಡು ಅವತಾರಗಳನ್ನು (ಪರಮಪದ ಸೋಪಾನಪಟ ಮತ್ತು ಮಳ್ಳಗಿಂಪೆಲ್) ಕ್ಯಾಮರಾದಲ್ಲಿ ಹಿಡಿಯಲು, ಅತ್ತ ಬೆಂಗಳೂರಿನಿಂದ ಅಭಯನ ಬಳಗ ಹದಿನೇಳರ ರಾತ್ರಿ ಬಸ್ ಹಿಡಿದಿತ್ತು. ‘ಮಗನನ್ನು ಕರೆದರೆ ಪೋಷಕರು ಮುಫತ್ತು’ ಎಂದು ನೀನಾಸಂ ತಿಳಿದರೂ ಸರಿ, ಎಂದು ಇತ್ತ ಮಂಗಳೂರಿನಿಂದ ನಾವೂ ಹೊರಟೆವು. ಹೊಸ ಎರಡು ನಾಟಕಗಳನ್ನು ಕಣ್ದುಂಬಿಕೊಳ್ಳುವುದರೊಡನೆ, ನಮ್ಮ ತಿರುಗಾಡಿತನಕ್ಕೊಪ್ಪುವಂತೆ (ಹೀರೊ ಹೊಂಡಾ ಸೂಪರ್ ಸ್ಪ್ಲೆಂಡರ್ - ೧೨೫ ಸಿಸಿ) ಬೈಕೇರಿದ್ದೆವು.
೨. ಹೀಗೊಬ್ಬ ಚಾಯ್ವಾಲಾ
ಸೋಮಾರಿ ಅರುಣ ಜಡ ಕಳೆದು, ಲೋಕವನ್ನು ಹುರಿಯಲು ಕಾವೇರಿಸುವ ಮೊದಲು ನಾವು ಪಡುಬಿದ್ರೆಗಾಗಿ ಕಾರ್ಕಳ ಮುಟ್ಟಿದ್ದೆವು. ಕಾರ್ಕಳದ ಹೊರಬಳಸಿನ ರಸ್ತೆಯಲ್ಲಿದ್ದ ಸಣ್ಣ ಹೋಟೆಲಿಗೆ ನುಗ್ಗಿದೆವು. ಬಟವಾಡೆ ಹಿರಿಯ ಎದುರು













