Showing posts with label ದೋಣಿಯಾನ. Show all posts
Showing posts with label ದೋಣಿಯಾನ. Show all posts

28 November 2019

ಹೋಗಿ ಬರುವೆ ಶರಾವತಿ

(ಶರಾವತಿ ಸಾಗರದ ಉದ್ದಕ್ಕೆ ಕೊನೆಯ ಅರ್ಧ) 

ಬುತ್ತಿಯೂಟ ಮುಗಿಸಿದ್ದೇ ಹಿತ್ತಲಿನ ಗುಡ್ಡೆಯತ್ತ ಪಾದ ಬೆಳೆಸಿದೆವು. ಗುಡ್ಡೆಯ ಮೇಲೆ ಅಡ್ವೆಂಚರ್ ಬಳಗದ್ದೇ ಹೆಚ್ಚುವರಿ ವಾಸದ ಕಟ್ಟಡಗಳು ಕಾಣಿಸಿದವು. ಅಡ್ವೆಂಚರರ್ಸಿನಲ್ಲಿ ಜಲಕ್ರೀಡೆಗಳಲ್ಲದೆ ಚಾರಣ ಶಿಬಿರಗಳೂ ನಡೆಯುತ್ತವೆ. ನೆಲದ ಸತ್ವ ಬೆಳಗುವಂತೆ ಜನಪದ, ಮಹಿಳಾಪರ ಮುಂತಾದ ವಿವಿಧ ಅನುಭವ ಸಂಗ್ರಹ ಮತ್ತು ವಿಚಾರ ಸಂಕಿರಣಗಳಿಗೂ (ಕನ್ನಡ ವಿವಿ ಸಹಯೋಗ) ಇದು ನೆಲೆಯಾಗುತ್ತದೆ. ಇವಕ್ಕೆಲ್ಲ ಅಖಿಲ ಭಾರತ ಮಟ್ಟದಲ್ಲೂ (ಐಯೇಎಸ್, ಐಪೀಯೆಸ್ ವಿದ್ಯಾರ್ಥಿಗಳು ಇತ್ಯಾದಿ) ಹಲವು
ತಂಡಗಳು ಅನಿಯತವಾಗಿ, ಅದೂ ಕೆಲವೊಮ್ಮೆ ದೊಡ್ಡ ಸಂಖ್ಯೆಯಲ್ಲೇ ಬರುವುದಿದೆಯಂತೆ. ಬಹುಶಃ ಅಂಥ ಸಂದರ್ಭಗಳಲ್ಲಿ ಈ ಕಟ್ಟಡಗಳೂ ಬಳಕೆಗೊದಗುವುದಿರಬೇಕು. ಅಲ್ಲೇ ಆಚೆಗೆ ಇನ್ನೊಂದು ದೊಡ್ಡ ದುಂಡು ಚಪ್ಪರ ರಚನೆಯ ಕೊನೆಯ ಹಂತದಲ್ಲಿತ್ತು. "ಇನ್ನೊಂದೆರಡು ತಿಂಗಳಲ್ಲಿ ಪರಿಸರ ಸಂಬಂಧೀ ಭಾರೀ ಸಂಕಿರಣವನ್ನು ನಡೆಸುವ ಮೂಲಕ ಅದರ ಕಾರ್ಯಾಚರಣೆಯಾಗಲಿದೆ" ಎಂದೇ ಸ್ವಾಮಿದಂಪತಿ ಹೇಳಿದ್ದರು. ಮತ್ತದಕ್ಕೆ ನಮ್ಮೆಲ್ಲರಿಗೆ ಸ್ವಯಂಸೇವಕರಾಗಿ ಬಂದು ಭಾಗವಹಿಸಲು ಮುಂಗಡ ಆಮಂತ್ರಣವನ್ನೂ ಕೊಟ್ಟದ್ದು ನೆನಪಾಯ್ತು.

24 November 2019

ಶರಾವತಿ ಸಾಗರದ ಉದ್ದಕ್ಕೆ


(ಮೊದಲ ಅರ್ಧ - ಪ್ರಥಮ ಚುಂಬನೇ....) 


ಶರಾವತಿಯ ಕೆಳಪಾತ್ರೆಯಲ್ಲಿ ಲಿಂಗನಮಕ್ಕಿ ಅಣೆಕಟ್ಟು (೧೯೬೪) ಬಂದಾಗ ಹಿರೇಭಾಸ್ಕರ ಅಣೆಕಟ್ಟು (೧೯೪೮) ಮುಳುಗಿತು. ಸಹಜವಾಗಿ ಇದು ಮತ್ತಷ್ಟು ಕಣಿವೆ ಬಯಲುಗಳಿಗೂ ತನ್ನ ಹಿನ್ನೀರ ಸೆರಗನ್ನು ಹಾಸಿತ್ತು. ಕಟ್ಟೆ ಪೂರ್ಣ ತುಂಬಿದ (೧೮೧೯ ಅಡಿ) ದಿನಗಳಲ್ಲಿ ‘ಶರಾವತಿ ಸಾಗರ’ದ ವ್ಯಾಪ್ತಿ ೩೫೦ ಚದರ ಕಿಮೀ. ಇದರ ನಾಲೆಗಳ ಇನ್ನೊಂದು ಸಂಸ್ಕೃತಿ ಶಿಬಿರದ ನಿರೀಕ್ಷೆಯಲ್ಲಿ)
ಜಾಲ ಅಸಂಖ್ಯ. ಇಲ್ಲಿ ಮುಳುಗದುಳಿಯದ ಎತ್ತರಗಳೆಲ್ಲ ದ್ವೀಪಗಳೇ. ಹಾಗಾಗಿ ಕಟ್ಟೆ ಪೂರ್ವದಲ್ಲಿ ಚಾಲ್ತಿಯಿದ್ದ ಎಲ್ಲ ಸಾರ್ವಜನಿಕ ಹಕ್ಕುಗಳನ್ನು ಸರಕಾರ ವಜಾ ಮಾಡಿ, ಶರಾವತಿ ಕಣಿವೆ ವನ್ಯಧಾಮವೆಂದೇ ಹೆಸರಿಸಿತು. (ಅಂದಿನ ಜನ, ವೃತ್ತಿಗಳ ಮರುವಸತಿಯ ಬಹುತೇಕ ದುರಂತದ ಕತೆಗಳು ಇಂದಿಗೂ ಕಾಡುತ್ತವೆ. ಇಲ್ಲಿ ವಿಸ್ತರಿಸುವುದಿಲ್ಲ) ವರ್ಷಂಪ್ರತಿ ಶರಾವತಿ ಸಾಗರ ಬೇಸಗೆಯಲ್ಲಿ ಸೊರಗಿ, ಮಳೆಗಾಲದಲ್ಲಿ ಸೊಕ್ಕಿದಂತೆಲ್ಲ ದ್ವೀಪಗಳ ರೂಪ, ಮುಖ್ಯ ನೆಲದೊಡನೆ ಸಂಪರ್ಕ ಬದಲಾಗುತ್ತಲೇ ಇರುತ್ತದೆ.

15 May 2019

ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ....


ಅದೊಂದು ಶುಕ್ರವಾರ "ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್" ಎಂದು ಸೈಕಲ್ ಗೆಳೆಯ ಅನಿಲ್ ಶೇಟ್ ಕೇಳಿದ್ದರು. ನಾನು ಎಂದೋ ಯೋಚಿಸಿಟ್ಟಂತೆ "ಶೆರಿ, ಶಿರಿಯಾಕ್ಕೆ ಶಲೋ..." ಎಂದುಬಿಟ್ಟೆ. ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ, ಉಚ್ಚಿಲಾದಿ ನದಿಗಳನ್ನು ಕಂತುಗಳಲ್ಲಿ ತೇಲಿ ಮುಗಿಸಿದ ಹೊಸತರಲ್ಲಿ, ನಾನು ಅಂತರ್ಜಾಲದಲ್ಲಿ (ಗೂಗಲಿಸಿ) ಹುಡುಕಾಡಿದಾಗ, ಕುತೂಹಲ ಮೂಡಿಸಿತ್ತು ಈ ಶಿರಿಯಾ ಹೊಳೆ. ಮಂಗಳೂರು - ಕಾಸರಗೋಡು ದಾರಿಯನ್ನು ಬಂದ್ಯೋಡಿನಿಂದ ತುಸು ಮುಂದೆ, ಪೂರ್ವ- ಉತ್ತರದಿಂದ ಇಳಿದು, ಅಡ್ಡ ಹಾಯುವ ತೋರ ನೀಲಿ ರೇಖೆಯಿದು. ಮತ್ತೆ ಒತ್ತಿನಲ್ಲೇ ಹರಿಯುವ ರೈಲ್ವೇ ದಾರಿಯನ್ನು ದಾಟಿ, ಸ್ಪಷ್ಟ ದಕ್ಷಿಣ ತಿರುವು ತೆಗೆಯುತ್ತದೆ. ಅಲ್ಲಿ ಎಡ ಮಗ್ಗುಲಿನಲ್ಲೊಂದು ಸಣ್ಣ ಭೂಭಾಗ ಕತ್ತರಿಸಿಟ್ಟು (ಶಿರಿಯಾ ಪಾರ್ಕ್ ಎಂಬ ಕುದುರು, ಅರ್ಥಾತ್ ನದಿ ದ್ವೀಪ), ಬಲ ಹೊರಳಿ ಸಮುದ್ರ ಸೇರುತ್ತದೆ.
ಆದರೆ ಅದೇನು ಭೂ ರಚನಾ ಚೋದ್ಯವೋ - ನೀಲ ಹರಹು ಮಾತ್ರ ಅತ್ತ ಸಮುದ್ರಕ್ಕೊಂದು ಕಂದು ಮರಳರೇಖೆ ಇಟ್ಟು ಸಮಾಂತರದಲ್ಲಿ, ಸುಮಾರು ಐದು ಕಿಮೀ ಉದ್ದಕ್ಕೆ, ಅಂದರೆ ಕುಂಬ್ಳೆಯವರೆಗೂ ವ್ಯಾಪಿಸಿರುವುದು ಕಾಣುತ್ತಿತ್ತು. 

ಹೊಳೆಗೆ ನಮ್ಮ ದೋಣಿ ಇಳಿಸುವುದೆಲ್ಲಿ, ಸುತ್ತುವ ಪರಿಸರ ಎಂತದ್ದು ಎಂಬಿತ್ಯಾದಿ ಮುನ್ನೋಟಕ್ಕಾಗಿ, ಮಾರಣೇ ದಿನವೇ ಸಂಜೆ ಬೈಕಿನಲ್ಲಿ ದೇವಕಿಯನ್ನು ಬೆನ್ನಿಗೆ ಹಾಕಿಕೊಂಡು ಹೋಗಿದ್ದೆ. ಮಂಗಳೂರಿನಿಂದ ಸುಮಾರು ಮೂವತ್ಮೂರು

01 October 2018

ಫಲ್ಗುಣಿ - ಒಂದು ನದಿಯ ಅವಹೇಳನ ದರ್ಶನ


ಮಂಗಳೂರಿನ ನಾವು ನಾಲ್ಕೈದು ದೋಣಿಮಿತ್ರರು ಮಳೆಗಾಲ ತಗ್ಗುವುದನ್ನು ಕಾದಿದ್ದೆವು. ನಾವಿನ್ನೂ ಕಡಲಿಗಿಳಿಯುವ ಕಲಿಗಳಲ್ಲ, ನದಿಗಳಲ್ಲೂ ಮಳೆಗಾಲದ ಸೆಳವು, ಸೆಡೆತಗಳೊಡನೆ ಸೆಣಸುವ ಸಾಹಸಿಗಳೂ ಅಲ್ಲ. ಸಣ್ಣದಕ್ಕೆ ಬಡಕಲು ಫಲ್ಗುಣಿ ನದಿಯನ್ನು ಆಯ್ದುಕೊಂಡೆವು. ಸುಲ್ತಾನ್ ಬತೇರಿಯಿಂದ ಕೂಳೂರು, (ಸ್ವಚ್ಛಭಾರತದಲ್ಲಿ ನಮ್ಮ ಹೊಳೆಗಳಿಲ್ಲವೇ?) ಕೂಳೂರಿನಿಂದ ಮೇಲಿನೊಂದು ಕುದ್ರುವಿನವರೆಗೆ (ಫಲ್ಗುಣಿಯ ಮೇಲೊಂದು ಪಲುಕು) ಎರಡು ಕಂತು ದೋಣಿಯಾನ ಹಿಂದೆ ಮಾಡಿದ್ದೆವು. ಆ ಸರಣಿಯನ್ನೇ
ಈ ಬಾರಿ (೧೬-೯-೧೮) ಮುಂದುವರಿಸುವ ಹೊಳಹು ನಮ್ಮದು. ಆದರೆ ಅದಕ್ಕಿದ್ದ ಸಣ್ಣ ಅಡ್ಡಿ ಮಳವೂರು ಕಟ್ಟೆ. ಕಟ್ಟೆಯ ತೂಬುಗಳಿಗೆ ಹಲಿಗೆ ಇಳಿಸಿದ್ದರೆ ತೇಲಿ ಸಾಗುವ ಪ್ರಶ್ನೆಯೇ ಇರುತ್ತಿರಲಿಲ್ಲ. ಈಗ ಅದು ಮುಚ್ಚಿರದಿದ್ದರೂ ಕಂಡಿಗಳಲ್ಲಿನ ಹರಿವಿನ ವಿರುದ್ಧ ನಮ್ಮ ರಟ್ಟೆಬಲ ಪರೀಕ್ಷಿಸಲು ಧೈರ್ಯವಿರಲಿಲ್ಲ. ಹಾಗಾಗಿ ಅದರಿಂದಲೂ ತುಸು ಮೇಲೆಯೇ ನಮ್ಮ ದೋಣಿಗಳನ್ನು ನೀರಿಗಿಳಿಸಿ, ಮೇಲ್ಮುಖವಾಗಿ ಸಾಗಬೇಕು. ಗುರುಪುರ ಮತ್ತು ಪೊಳಲಿ ಸೇತುವೆಗಳನ್ನು ದಾಟಿ, ಮೂಲರಪಟ್ನದ ಕುಸಿದ ಸೇತುವೆಗೆ ಮುಗಿಸಬೇಕು.

11 August 2018

ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!


ಮೊನ್ನೆ ಗೆಳೆಯ ವೆಂಕಟ್ರಮಣ ಉಪಾಧ್ಯರು "ಇದೊಂದು ವಿಚಿತ್ರ ನದಿ ನೋಡಿ ಮಾರಾಯ್ರೇ. ಜನರ ಹುಚ್ಚಾಟವನ್ನಿದು ಮನ್ನಿಸಿ, ಮತ್ತೆ ಮತ್ತೆ ಸಂಭ್ರಮಕ್ಕೆ ಅವಕಾಶ ಕೊಡುತ್ತಲೇ ಇದೆಯಂತೆ!" ಎಂದು ಈ ಸೇತು ಕೊಟ್ಟರು: 

ನಾನು ನೋಡಿದೆ, ನಿಸ್ಸಂದೇಹವಾಗಿ ಸಂತೋಷಪಟ್ಟೆ. ಆದರೆ ಮರುಕ್ಷಣಕ್ಕೆ ಉದ್ಗರಿಸಿದ್ದಿಷ್ಟೇ "ಅಯ್ಯೋ ಇದು ನಮ್ಮ ಉಚ್ಚಿಲ ಬಟಪಾಡಿಯ ತ್ರಿವೇಣೀ!"

01 May 2018

ಫಲ್ಗುಣಿಯ ಮೇಲೊಂದು ಪಲುಕು.....


ಯಾರೇ ವಿಚಾರಿಸಿದಾಗ, ನನ್ನ ವಾಹನಪಟ್ಟಿಯಲ್ಲಿ ನಾನು ಮರೆಯದೆ ಸೇರಿಸುವ ಹೆಸರು ‘ದೋಣಿ.’ ಆದರೆ ಒಳಗೊಳಗೇ "ಅದರ ಬಳಕೆ ಮಾತ್ರ ಕಡಿಮೆ" ಎಂಬ ಕೀಳರಿಮೆ ನನ್ನನ್ನು ಬಿಟ್ಟದ್ದೂ ಇಲ್ಲ. ಅದನ್ನು ಸ್ವಲ್ಪವಾದರೂ ಹೋಗಲಾಡಿಸುವಂತೆ ನಮ್ಮ ‘ಅನಾಮಧೇಯ ಕಯಾಕೀ ಸಂಘ (ಅನೋಂ)’ದೊಳಗೆ  ‘ಆದಿತ್ಯವಾರ (೨೯-೪-೧೮) ಕೂಳೂರು - ಮರವೂರು’ ಕರೆ ಕೊಟ್ಟೆ. ನಾನು ಕಂಡಂತೆ ಸೈಕಲ್ ಮೆಟ್ಟುವ ಹವ್ಯಾಸ/ಕ್ರೀಡೆ/ವ್ಯಾಯಾಮ ಈ ವಲಯದಲ್ಲಿ ಕಾಡಬೆಂಕಿಯಂತೆ, ಬಹಳ
ವೇಗದಿಂದ ಹಬ್ಬಿಕೊಂಡಿತು. ನಿತ್ಯ ಓಡಾಡಿದ್ದೇ ಗಬ್ಬೆದ್ದ ದಾರಿ, ಅಶಿಸ್ತಿನ ಇತರ ವಾಹನ ಸಮ್ಮರ್ದ, ಪ.ಘಟ್ಟಗಳ ತಪ್ಪಲಾದ್ದರಿಂದ ವಿಪರೀತ ಏರಿಳುಕಲು, ರಣಗುಡುವ ಬಿಸಿಲು, ಭೋರ್ಗರೆವ ಮಳೆ ಎಲ್ಲವನ್ನೂ ಸುಧಾರಿಸಿಕೊಂಡು, ಲಕ್ಷದ ಮೇಲಿನ ಹಣ ಹಾಕಿಯೂ ಸೈಕಲ್ಲಿಗರು ಹೆಚ್ಚಿದರು. ಇದು ಖಂಡಿತವಾಗಿಯೂ ಸಂತೋಷದ ವಿಚಾರ. ಆದರೆ ಅಸಂಖ್ಯ ನದಿ, ಹಿನ್ನೀರ ಹರಹು, ಸಾಕ್ಷಾತ್ ಅರಬ್ಬೀ ಸಮುದ್ರವೇ ನಮ್ಮಲ್ಲಿದೆ. ಇವೆಲ್ಲವೂ ಪರಿಚಯಿಸುವ ಪ್ರಾಕೃತಿಕ ಲೋಕ ಅಸಾಧಾರಣ, ನಿತ್ಯ

04 January 2018

ಉಚ್ಚಿಲದ ಕಾಳಿಂದೀ ಮಡುವಿನಲ್ಲಿ ಕಯಾಕ್


"ದೋಣಿ ಸಾಗಲಿ ಮುಂದೆ ಹೋಗಲಿ, ೨೦೧೮ ಸೇರಲಿ....." ಹಾಡುತ್ತ ಮೊನ್ನೆ (೩೧-೧೨-೨೦೧೭) ಮೂರು ಕಯಾಕ್‍ಗಳಲ್ಲಿ (ಫೈಬರ್ ಗ್ಲಾಸಿನ ಎರಡು ಪದರದ, ತೆಪ್ಪದಂಥ ದೋಣಿ) ನಾವು ಆರು ಮಂದಿ (ಪ್ರವೀಣ್, ಯಶಸ್, ಅನಿಲ್ ಶೇಟ್, ಶಿವಾನಂದ್, ದೇವಕಿ ಮತ್ತು ನಾನು) ಉಚ್ಚಿಲದ ತ್ರಿವೇಣಿ ಸಂಗಮದಲ್ಲಿ ಮನಸೋಯಿಚ್ಛೆ ವಿಹರಿಸಿ ಮರಳಿದೆವು. ಚಳಿಗಾಲದ ತೆಳು ಮಂಜು ಹರಿಯುವ ಸಮಯ ಕಾದು, ಅಂದರೆ ಸುಮಾರು ಎಂಟು ಗಂಟೆಯಿಂದ ಹನ್ನೊಂದೂವರೆಯವರೆಗೂ ಈ ‘ಸುಂದರಬನ’ದ ಮೂಲೆ
ಮೊಡಕುಗಳನ್ನು ನಿಶ್ಚಿಂತೆಯಿಂದ ತೊಳಸುಗೈಗಳಲ್ಲಿ ಹುಟ್ಟು ಹಾಕುತ್ತ, ತೇಲಾಡಿ, ಒಂದಿಬ್ಬರು ಈಜಿನ ಶಾಸ್ತ್ರ ಮಾಡಿಯೂ ಸಂತೋಷಿಸಿದೆವು.

ಈಚೆಗೆ ಪಡುಗಡಲಿನಿಂದ ಎರಗಿದ ಓಖಿ ಚಂಡಮಾರುತ ಉಚ್ಚಿಲ ಬಟಪಾಡಿಯ ಈ ಕೊನೆಯ ಭೌಗೋಳಿಕ ಲಕ್ಷಣಗಳನ್ನು ಪ್ರಭಾವಿಸಿದೆ ಎಂಬ ಸುದ್ದಿ ಬರುವಾಗ ನಾನು ಮೈಸೂರಿನಲ್ಲಿದ್ದೆ. ಮೊನ್ನೆ ಬಂದವನೇ ಅತ್ತ ಸೈಕಲ್

08 May 2015

`ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು

(ಇದುವರೆಗಿನ ದೋಣಿಯಾನದ ಟಿಪ್ಪಣಿಗಳ ಎರಡನೇ ಸಂಕಲನ) 
ವಿಶ್ವ ಜಲದಿನ (೨೩-೩-೧೫), “ನೇತ್ರಾವತಿ ಉಳಿಸಿ” ಅರಣ್ಯರೋದನಂತೇ ಕೇಳುತ್ತಿತ್ತು. ಈಗ ಇರುವಷ್ಟನ್ನಾದರೂ ಸ್ವಲ್ಪ ವಿವರಗಳಲ್ಲಿ ನೋಡಲು ನಾನು, ದೇವಕಿ ಹೊರಟೆವು. ಬಹುದಿನಗಳ ಬಿಡುವಿನ ಮೇಲೆ ದೋಣಿ ಸವಾರಿಗೆ ಸಜ್ಜಾದೆವು. ಅದುವರೆಗಿನ ನಮ್ಮ ದೋಣಿ ಚಲಾವಣೆಗಳೆಲ್ಲ ಲೆಕ್ಕಕ್ಕೆ ಹೊಳೆಗಳಲ್ಲೇ ನಡೆದಿತ್ತು. ಆದರೆ ವಾಸ್ತವದಲ್ಲಿ ಅವೆಲ್ಲಕ್ಕೆ ಅತ್ತ ನೀರ ಮೂಲಬಲ (ಜಲಾನಯನ ಪ್ರದೇಶ) ಹೆಚ್ಚಿಲ್ಲದೆ, ಇತ್ತ ಸಮುದ್ರದ ಒತ್ತಡವೂ ಪ್ರಭಾವಿಸದೆ ನಮಗೆ ಸರೋವರ ಸ್ಥಿತಿಯೇ ಸಿಕ್ಕಿತ್ತು. 

ದೋಣಿ ಹುಟ್ಟು ಹಾಕಿದತ್ತ ಸುಲಭದಲ್ಲಿ ಚಲಿಸುತ್ತಿತ್ತು, ಇಲ್ಲವಾದರೆ ಬಹುತೇಕ ನಿಂತಂತೆಯೇ ಇರುತ್ತಿತ್ತು. ಆದರೆ ಈ ಬಾರಿ ನಾವಾರಿಸಿದ ನೇತ್ರಾವತಿಯ ಭಾಗ ಹಾಗಿಲ್ಲವೆಂದು ನಮಗೆ ತಿಳಿದಿತ್ತು. ಅತ್ತ ಮಂಗಳೂರು ನೀರು ಸರಬರಾಜು ವ್ಯವಸ್ಥೆಯ ತುಂಬೆ ಅಣೆಕಟ್ಟು ಈ ವರ್ಷ ಇನ್ನೂ ತುಂಬಿಯೇ ಇದ್ದು, ಕೆಳಪಾತ್ರೆಯಲ್ಲಿ ಹರಿವಿತ್ತು. ಇತ್ತ ಸಮುದ್ರದ ಸಂಪರ್ಕವೂ ನೇರವೇ ಇದ್ದುದರಿಂದ ಅಲ್ಲಿನ ಉಲ್ಲೋಲ ಕಲ್ಲೋಲಗಳು ನದೀ ಪಾತ್ರೆಯನ್ನು ಪ್ರಭಾವಿಸುವುದು ಸ್ಪಷ್ಟವಿತ್ತು. ಹಾಗಾಗಿ ನನ್ನದೇ ತರ್ಕದಲ್ಲಿ, ಭರತ ಕಾಲದಲ್ಲಿ ನದಿಯ ಎದುರು ಸವಾರಿ ಅನುಕೂಲವೆಂದು ಯೋಚಿಸಿದೆ. ದಿನ ಮುಂಚಿತವಾಗಿ ಉಚ್ಚಿಲದ ದಿನೇಶರನ್ನು ಸಂಪರ್ಕಿಸಿ ಮರುದಿನ ಭರತ ಇಳಿತಗಳ (ಭರತ = ಉಕ್ಕು, ಉಬ್ಬು, ಏರು, ಹೈ ಟೈಡ್. ಇಳಿತ = ಲೋ ಟೈಡ್) ವೇಳೆಯಷ್ಟೇ ವಿಚಾರಿಸಿಕೊಂಡೆ. ಆ ಲೆಕ್ಕದಲ್ಲಿ ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ನಮ್ಮ ಕಯಾಕ್ ಹೊತ್ತ ಕಾರು ಉಳ್ಳಾಲದ ಒಂದು ಖಾಸಗಿ ನೆಲೆ ತಲಪಿತು.

01 May 2015

ಸ್ವಚ್ಛ ಭಾರತದಲ್ಲಿ ನಮ್ಮ ಹೊಳೆಗಳಿಲ್ಲವೇ?

(ಇದುವರೆಗಿನ ದೋಣಿಯಾನದ ಟಿಪ್ಪಣಿಗಳ ಮೊದಲ ಸಂಕಲನ)
ಇಂದು ರಸ್ತೆ ನಿರ್ಮಾಣ (ಮತ್ತದಕ್ಕೆ ಬಳಸುವ ಯಂತ್ರ ಸಾಮರ್ಥ್ಯವೂ) ಅದ್ಭುತ ಉನ್ನತಿಯಲ್ಲಿದೆ. ಸಹಜವಾಗಿ ದಿಬ್ಬಗಳು ಮಟ್ಟವಾಗುವುದು, ತಿರುವುಗಳು ನೇರವಾಗುವುದು, ಆಳಗಳು ತುಂಬಿಬರುವುದು, ವಿಸ್ತಾರಗಳು ಸುಲಭಸಂಧಿಸುವುದು, ಕಗ್ಗಲ್ಲು ಕರಗುವುದು, ಜವುಗು ಘನವಾಗುವುದೆಲ್ಲ ಆಗುತ್ತಿದೆ; ಒಳ್ಳೆಯದೇ. ಆದರೆ ಜತೆಗೆ ಸೇವಾನಿವೃತ್ತವಾದ ಹಳೆಯ ಮನುಷ್ಯ ರಚನೆಗಳನ್ನು ಕಳಚಿ ಪ್ರಾಕೃತಿಕ ಶಕ್ತಿಗಳನ್ನು ಗೌರವಿಸುವುದು ತೀರಾ ಅಲಕ್ಷಿತವಾಗಿದೆ. ಹೊಟ್ಟು ತೂತುಬಾವಿಗಳನ್ನು ನಿರ್ಲಕ್ಷಿಸಿ ನಡೆದ ಮಕ್ಕಳ ದುರ್ಮರಣ, ಕಲ್ಲಕೋರೆಗಳನ್ನು ಉಪೇಕ್ಷಿಸಿ ಮುಳುಗಿ ಸತ್ತವರ ಲೆಕ್ಕ, ಶಿಥಿಲ ಕಟ್ಟಡಗಳ ವಾಸಯೋಗ್ಯತೆಯನ್ನು ಒರೆಗೆ ಹಚ್ಚದೆ ನಡೆದ ಜೀವ ಸೊತ್ತು ಹಾನಿ, ದುರ್ಬಲ ಸೇತುಗಳನ್ನು ಮುರಿಬೀಳುವವರೆಗೆ ಬಳಸಿ ಸಂಭವಿಸಿದ ಅಪಘಾತಗಳಾದಿ ನಮಗೆ ಕೊಟ್ಟ ಪಾಠ ಸಾಲದೇ? ಆ ಬೆಳಕಿನಲ್ಲಿ, ನಾನು ಮತ್ತು ದೇವಕಿ ಈಚೆಗೆ ನಡೆಸಿದ ದೋಣಿಯಾನದ (ಕಯಾಕ್) ಅನುಭವಗಳ ಕೆಲವು ಟಿಪ್ಪಣಿಗಳನ್ನು ಇಲ್ಲಿ ಸಂಕಲಿಸಿದ್ದೇನೆ.

02 January 2015

ದೋಣಿ ದಂಡ ಯಾತ್ರೆ -೨೦೧೪

ಶಾಂಭವಿ ಮತ್ತು ಉಚ್ಚಿಲ ಹೊಳೆಗಳ ಮೇಲೆ ವಿಜಯ ಪತಾಕೆ ಹಾರಿಸಿ ಬಂದಮೇಲೆ, “ವರ್ತಮಾನ ಕಾಲದಲ್ಲಿ ಮಂಗಳೂರಿನ ಆಸುಪಾಸಿನ ದೊಡ್ಡ ನೀರಹರಹುಗಳಿಗೆ ಹವ್ಯಾಸೀ ನಾವಿಕರು ಯಾರೂಂತ ಕೇಳಿದ್ದೀರಿ” ಎಂದು ನಾವು ಸಭೆ ಕೊಟ್ಟಿದ್ದೆವು. ಭಟ್ಟಂಗಿಗಳು ಬಿದಿರಾವಳಿ ಸಹಿತ ನಮ್ಮ ನಾಮೋದ್ಧರಣ ಮಾಡುತ್ತಿರುವ ಕಾಲದಲ್ಲಿ, ತರುಣಮಿತ್ರ ರೋಶನ್ ಕಾಮತನ ಅಶರೀರವಾಣಿ (ಚರವಾಣಿ) ಮೊಳಗಿತು “(ದುಷ್ಟಾ, ಅತ್ತ ಯಮುನಾ ತೀರದಲ್ಲಿ ಕೃಷ್ಣ ಬಲರಾಮರೆಂಬ ನಾಮದಲ್ಲಿ...) ಅಶೋಕರೇ ಅಲ್ಲಿ ನೇತ್ರಾವತೀ ಪಾತ್ರೆಯಲ್ಲಿ ಆನಂದ ಪ್ರಭು ಮತ್ತು ಜಾಹೀರ್ ಮಣಿಪ್ಪಾಡಿ ಎಂಬಿಬ್ಬರು ಈಗಾಗಲೇ ಸ್ವಂತ ಕಯಾಕಿನಲ್ಲಿ ಪ್ರಯೋಗ ನಡೆಸಿದ್ದಾರೆ.” ಕೂಡಲೇ ನಾವು ಪರಿಚಯ, ಸಂಬಂಧ ಬೆಳೆಸಿದ್ದಾಯ್ತು. ಉಚ್ಚಿಲದ ತ್ರಿವೇಣಿ ಸಂಗಮವನ್ನು ಜತೆಯಲ್ಲಿ ಮಥಿಸುವ ಕಲಾಪವನ್ನೂ ಹಾಕಿದ್ದಾಯ್ತು.

14 November 2014

ಕಯಾಕ್ ಬಂತು! ಪೂರ್ವರಂಗದ ಕಸರತ್ತುಗಳು

“ಕೇಳ್ರಪ್ಪೋ ಕೇಳಿ! ಒಂಟಿ ದೋಣಿ, ಕತ್ತಿ ದೋಣಿ, ಜೋಡು ದೋಣಿ, ಸ್ಟೀಮರ್ ಲಾಂಚ್, ಜೆಟ್ ಬೋಟ್, ಉಗಿ ಹಡಗು, ಹಾರುವ ದೋಣಿ ತಯಾರಿಯಲ್ಲಿ ನಾನು ಪರಿಣತನಿದ್ದೇನೆ, (ಕುರುಕ್ಷೇತ್ರದ ಧರ್ಮರಾಯನ ಇಳಿಧ್ವನಿಯಲ್ಲಿ) ಕಾಗದ ಮಡಚುವುದರಲ್ಲಿ!” ಆದರೆ ಇಲ್ಲಿ ಪರಿಸ್ಥಿತಿ ಮಕ್ಕಳಾಟದ್ದಲ್ಲ, ವಾಸ್ತವದೊಡನೆ ಮುಖಾಮುಖಿಯದು. ನಮ್ಮದೇ ದೋಣಿ ಬರುತ್ತಾ ಇದೆ. ಕೊಚಿನ್ನಿನ `ಸಮುದ್ರ ಶಿಪ್ಪಿಂಗ್ ಯಾರ್ಡ್ ಪ್ರೈ. ಲಿ’., ಸಂಸ್ಥೆಯ ಸೋದರರಿಗೆ ಬಹುವಿಧದ ದೋಣಿ ತಯಾರಿಯಲ್ಲಿ ಮೈಪೂರಾ ಕೆಲಸ. ಭಾರತವೇನು ಹಲವು ವಿದೇಶೀ ಸಂಸ್ಥೆಗಳೂ ಇವರ ಖಾಯಂ ಗಿರಾಕಿಗಳು. ಆದರೂ ಮಙ್ಗಳಾಪುರದಿಂದ ಶುದ್ಧ ವೈಯಕ್ತಿಕ ದೋಣಿಚಾಲನೆಯ ಸಂತೋಷಕ್ಕೆ ತಮ್ಮ ಕಯಾಕ್ ಕೊಳ್ಳಲು ಬಂದರಲ್ಲಾಂತ ಭಾರೀ ಕುಶಿ. ನಮ್ಮ ಉತ್ಸಾಹ ಕಂಡು, ಪ್ರತ್ಯೇಕ ಹವಾನಿಯಂತ್ರಿತ ಕೋಣೆಯಲ್ಲಿದ್ದ ಎಂ.ಡಿ., (ಹಿರಿಯಣ್ಣ-ಸುಧಾಕರನ್) ತಯಾರಿ ಘಟಕ ವರಿಷ್ಠ (ಎರಡನೇ ಸೋದರ) ಹಾಗೂ  ಮಾರಾಟ ವಿಭಾಗದ ಮುಖ್ಯಸ್ಥರೆಲ್ಲ (ಮೂರನೆಯವ - ಮುರಳೀಧರನ್) ಕೈಯಲ್ಲಿದ್ದ ಕೆಲಸ ಬಿಟ್ಟು ಬಂದು, ಮಾತಾಡಿಸಿದರು. ಕೊನೆಯಲ್ಲಿ ಕೆಲವು ರಿಯಾಯಿತಿಗಳನ್ನೂ ಕೊಟ್ಟು, ಒಂದೇ ವಾರದಲ್ಲಿ ನಮ್ಮ ಅಗತ್ಯ ಪೂರೈಸುವುದಾಗಿ ಭರವಸೆ ಕೊಟ್ಟರು. ಕುಶಿಯಲ್ಲೇ ಮುಂಗಡ ಕೊಟ್ಟು ಮರಳಿದ್ದೇನೋ ಸರಿ. ಈಗ ವಾರ - ಹತ್ತು ದಿನಗಳಲ್ಲಿ ಲಾರಿಯೇರಿ ಬರುವ ದೋಣಿಯನ್ನು ಮನೆ ತುಂಬಿಕೊಳ್ಳುವುದು ಹೇಗೆ ಎಂಬಲ್ಲಿಂದಲೇ ಕೆಲಸಗಳು ಶುರುವಾದವು. ದೋಣಿ ಹೊರಲು ನನ್ನ ವ್ಯಾಗನರ್ ಕಾರಿಗೆ ತಲೆಗೊಂದು ಬಲವಾದ ಕಿರೀಟ ತೊಡಿಸಿದೆ. ಬಿಗಿದು ಕಟ್ಟಲು ಹಳತಾದ ನನ್ನ ಪರ್ವತಾರೋಹಣದ ನೂರಡಿ ಹಗ್ಗವನ್ನೇ ಸಜ್ಜುಗೊಳಿಸಿಟ್ಟುಕೊಂಡೆ. ಮನೆಯಲ್ಲಿ ಕಾರು ಶೆಡ್ಡಿನ ತಾರಸಿಯಿಂದ ಎರಡು ಹಗ್ಗದ ಬಳೆ ಇಳಿಸಿ, ಬಳಕೆಯಿಲ್ಲದಾಗ ದೋಣಿ ವಿರಮಿಸಲು ವ್ಯವಸ್ಥೆ ಮಾಡಿದೆ; ಕನಸಿನ ಕೂಸಿಗೆ ತೊಟ್ಟಿಲು ಕಟ್ಟಿದ್ದೆ! ಇನ್ನು ಸವಾರಿ ಎಲ್ಲಿಂದ ಶುರು? ತರಬೇತಿ? ರಕ್ಷಣೆ??

31 October 2014

ಜಲಮುಖೀ ಅನುಭವಗಳಿಗೊಂದು ಅಡಿಪಾಯ

ಮಂಗಳೂರು ವರ್ಣಿಸುವಾಗ `ಅತ್ತ (ಘಟ್ಟದ) ದರಿ, ಇತ್ತ (ಕಡಲ) ಕಮರಿಸವಕಲು ಮಾತಾಗಿ ಕೇಳಬಹುದು. ಆದರೆ ಅದನ್ನು ತಮ್ಮ ಅನುಭವದ ಭಾಗವಾಗಿಸುವಲ್ಲಿ ಸೋಲುವವರೇ ಹೆಚ್ಚು. ದರಿಯನ್ನು ಕಂಡವರು ಎಷ್ಟೂ ಸಿಗಬಹುದುನೇರ ಚಾರಣ ಮಾಡದಿದ್ದರೂ ವಿವಿಧ ವಾಹನ ಸೌಕರ್ಯಗಳಲ್ಲಾದರೂ ಘಾಟಿ ದಾರಿಯನ್ನು ಹಾಯ್ದುಹೋಗುವ ಅನಿವಾರ್ಯತೆ ಹೆಚ್ಚಿನೆಲ್ಲರಿಗೂ ಬರುತ್ತಲೇ ಇರುತ್ತದೆ. ಆದರೆ ಕಮರಿ? ಹೊಳೆ, ಹಿನ್ನೀರು, ಕೊನೆಯಲ್ಲಿ ಸಮುದ್ರ ಸೇತುವೆಯಿಂದಲೋ, ದಂಡೆಯಿಂದಲೋ ಸಾಕಷ್ಟು ಕಂಡುಹೋಗುತ್ತದೆ, ಅಪರೂಪಕ್ಕೆ ತೀರ್ಥ ಸ್ನಾನ ಮಾಡುವುದೂ ಇರಬಹುದು, ಹೆಚ್ಚಿಗೆ ದಕ್ಕಿಸಿಕೊಳ್ಳುವವರು (ವೃತ್ತಿಪರರನ್ನು ಬಿಟ್ಟು) ಕಡಿಮೆ. 

ಬಿಡು ದಿನಗಳಲ್ಲಿ, ನೆಂಟರಿಷ್ಟರ ಕೂಟದಲ್ಲಿ (ಪುಣ್ಯ ಸಂದರ್ಶನ, ಸಿನಿಮಾ, ಪೇಟೆ/ಮಾಲ್-ಸುತ್ತಾಟ ಏನೂ ಇಲ್ಲದಾಗಬೀಚಿಗೋಗುವಾಅಂದದ್ದಿರಬಹುದು. ಆದರೆ ಪುಳಿನ ಕಿನಾರೆ ತಲಪಿದ್ದೇ ಬಹಳ ದೊಡ್ಡ ಜವಾಬ್ದಾರೀ ಎಂಬಂತೆ ಚರುಮುರಿ ಧ್ವಂಸ ಮಾಡಿ, ಐಸ್ಕ್ರೀಂ ನೆಕ್ಕಿ ಮುಗಿಸುತ್ತೇವೆ. ಪ್ಯಾಂಟೆತ್ತರಿಸಿ ಅಲೆ ಸೋಂಕಿಸಿಕೊಂಡದ್ದು, ಸೋಮಾರಿ ಮಾತುಗಳೆಡೆಯಲ್ಲಿ ಮರಳು ಗೀಚಿದ್ದು, ಪುರಾಣಪುರುಷ ಸೂರ್ಯಮುಳುಗಿದಾಗ ಮುಖಪುಸ್ತಕದಲ್ಲಿ `ಲಾಯಕ್ಹೊಡೆದಷ್ಟೇ ನಿಷ್ಠೆಯಿಂದ ವೊವ್ಗುಟ್ಟಿದ್ದೂ ಯಾವ್ಯಾವುದೋ ಜಾಹೀರಾತಿನ ನೆರಳು-ಚಿತ್ರದ ಅಣಕದಂತೆ ಕುಣಿದು ಕುಪ್ಪಳಿಸಿದ್ದೂ ಸರಿಯೇ. ಅಪರೂಪಕ್ಕೆ ಒಂದೆರಡು ದೋಣಿ ಸವಾರಿ ಬಿಟ್ಟರೆ ಸಾಮಾನ್ಯವಾಗಿ `ಕಮರಿಯ ಸಹವಾಸ ಮುಗಿದೇ ಹೋಯ್ತು. ಮಳೆಗಾಲದ ಅಬ್ಬರ, ಕೊರೆತ ಪತ್ರಿಕಾ ವರದಿಗಳಲ್ಲೇ SAFE! ಹಿನ್ನೀರ ಹರಹು, ಅಂಚುಗಟ್ಟಿದ ವೈವಿಧ್ಯಮಯ ಗೊಸರು ಮತ್ತು ಹಸುರು, ಅಖಂಡ ಪಾರಾವಾರ ಮತ್ತೆಲ್ಲೆಲ್ಲೂ ವ್ಯಾಪಿಸಿದ ಜೀವಕೋಟಿಗಳೆಲ್ಲ ನಮಗೆ ಒಂದೋ ಪುರಾಣದ ಬದನೇಕಾಯಿ (ಒಂದಾಲದೆಲೆಯ ಮೇಲೆ..., ಅಥವಾ ರಾಮಸೇತು ಇತ್ಯಾದಿ) ಇಲ್ಲವೇ ಪಾಶ್ಚಾತ್ಯರ (ಡಿಸ್ಕವರಿ, ಆನಿಮಲ್ ಪ್ಲೇನೆಟ್, ನ್ಯಾಶನಲ್ ಜಿಯಾಗ್ರಫಿಕ್ ಇತ್ಯಾದಿ) ಸಾಧನೋಚ್ಚಿಷ್ಟ

17 October 2014

ಸಾಗರ ಸವಾರರು!

`ವಿಜಯಾಬ್ಯಾಂಕ್ ರವಿ’ ಎಂದಷ್ಟೇ ನನ್ನ ನೆನಪಿನಾಳದಲ್ಲಿ ಮೂರು ದಶಕಗಳ ಹಿಂದೆಂದೋ ಸೇರಿಬಂದ ಉಚ್ಚಿಲದ ರವೀಂದ್ರನಾಥ್ ಸದಾ ಸಾರ್ವಜನಿಕ `ತಲೆನೋವು’ಗಳನ್ನು ಪ್ರೀತಿ ಉತ್ಸಾಹದಿಂದ ತೆಗೆದುಕೊಂಡು, ಪ್ರಾಮಾಣಿಕವಾಗಿ ನಿರ್ವಹಿಸುವಲ್ಲಿ ಎತ್ತಿದ ಕೈ. ಇವರು ಮಿತಭಾಷಿ, ಮೃದುಭಾಷಿ ಮತ್ತು ಮಾಡಿದ ಕೆಲಸಕ್ಕೆ ಪ್ರತಿಫಲ ಕೇಳುವುದಿರಲಿ, ವಂದನಾರ್ಪಣೆಗೂ ಸಿಕ್ಕದ ವಿನಯಿ. ನನ್ನ ಕಾಡುಬೆಟ್ಟದ ಹುಚ್ಚು ನೋಡಿ, ಸುಮಾರು ಇಪ್ಪತ್ಮೂರು ವರ್ಷಗಳ ಹಿಂದೊಮ್ಮೆ ರವಿ ನನ್ನನ್ನು ಕಡಲಯಾನಕ್ಕೆ ಆಹ್ವಾನಿಸಿದ್ದರು. ಪ್ರಾಕೃತಿಕ ಸಾಹಸಾವಕಾಶಗಳು ನನ್ನನುಕೂಲಕ್ಕೆ ಒದಗಿದಾಗ ನಾನೆಂದೂ ದೂರ ತಳ್ಳಿದವನಲ್ಲ. ಅಷ್ಟಲ್ಲದೆ ನನ್ನ ಸಂಪರ್ಕಕ್ಕೆ ಬಂದವರಿಗೆಲ್ಲ ಅದನ್ನು ಸ್ವಲ್ಪ ಉತ್ಪ್ರೇಕ್ಷಿಸಿಯೇ ಹೇಳಿ ತಂಡ ಕಟ್ಟಿ ಅನುಭವಿಸುವುದು, ಅಲ್ಲದಿದ್ದರೂ ಇತರರಿಗೆ ಪ್ರೇರಣೆ ಕೊಡುವುದು ನನಗೆ ಬಹು ಪ್ರಿಯವಾದ ಕೆಲಸ. “ಆಳ ಸಮುದ್ರದ ಮೀನುಗಾರಿಕೆಗೆ ಬನ್ನಿ” ಟಾಂ ಟಾಂ ಹೊಡೆದೆ. ಒಂದೆರಡಲ್ಲ ಇಪ್ಪತ್ತೆರಡು ಮಂದಿಯೇ ಒಟ್ಟಾಗಿದ್ದೆವು.