ಅಧ್ಯಾಯ ಅರವತ್ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ
ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತಾರನೇ ಕಂತು
ಇನ್ನು ಬರೆಯತೊಡಗಿದ ನನ್ನ ಜೀವನ ವೃತ್ತಾಂತವು, ಸಾಧಾರಣ, ಇಲ್ಲಿಗೆ
ಮುಗಿಯುವುದು. ಇಲ್ಲೇ ನಡೆದುಹೋದ ಸಂಗತಿಗಳನ್ನು ಒಮ್ಮೆ ಹಿಂತಿರುಗಿ ನೋಡೋಣವೆಂದು ಮನಸ್ಸಾಗುತ್ತದೆ.
ನನ್ನ ಈ ಜೀವನದ ಸಂಗಾತಿಯಾಗಿ ಏಗ್ನೆಸ್ಸಳು ನನ್ನ ಕೈ ಹಿಡಿದುಕೊಂಡು
ಜತೆಯಲ್ಲೇ ಬರುತ್ತಿರುವಳು. ನನ್ನ ಮಕ್ಕಳು, ಸ್ನೇಹಿತರು, ಪರಿಚಿತರು, ನಮ್ಮ ಸುತ್ತಲೂ ಕಂಡುಬರುತ್ತಾರೆ.
ಈ ಜನಸಮೂಹದಿಂದಲೂ ನನಗೆ ವಿಶೇಷ ಪರಿಚಯವಿಲ್ಲದ ಇತರರಿಂದಲೂ ನನ್ನನ್ನು ಕುರಿತಾಗಿ ಅವರು ಆಡುತ್ತಿರುವ
ಪ್ರಶಂಸೆ, ಹಿತವಚನ ಮೊದಲಾದ ಮಾತುಗಳೂ ಕೇಳಿಬರುತ್ತಿವೆ.
ಜನಸಂದಣಿಯಲ್ಲಿ ಸ್ಪಷ್ಟವಾಗಿ ತೋರಿಬರುವ ಮುಖಗಳು ಕೆಲವಿವೆ. ಅವರೆಲ್ಲರನ್ನೂ
ಒಂದಾವೃತ್ತಿಯಾದರೂ ನೋಡೋಣ. ಮೊದಲು ನನಗೆ ಕಾಣುವವಳು ನನ್ನ ಅತ್ತೆ – ಎಂಬತ್ತು ವರ್ಷ ಪ್ರಾಯ ಕಳೆದರೂ
ನೆಟ್ಟಗೆ ನಿಂತು, ಚಳಿಯಲ್ಲೂ ಆರು ಮೈಲು ನಡೆದು ದಣಿಯದೆ, ಕನ್ನಡಕ ಧರಿಸಿರುವ ಅತ್ತೆ. ಅನಂತರ ಕಾಣುವವಳು
– ಪೆಗಟಿ, ನನ್ನ ಬಾಲ್ಯದ ದಾದಿ. ನನಗೆ ನಡೆಯಲು ಕಲಿಸಿದಂತೆ ನನ್ನ ಕಿರಿಮಗುವಿಗೆ ಈಗ ಅವಳು ನಡೆಯಲು
ಕಲಿಸುತ್ತಿದ್ದಾಳೆ. ನನ್ನ ಹಳೆ `ಮೊಸಳೆ ಪುಸ್ತಕ’ವನ್ನು
ಕಾಪಾಡಿಕೊಂಡು ಬಂದಿದ್ದಾಳೆ ಪೆಗಟಿ – ಎಷ್ಟೊಂದು ಪ್ರೀತಿ!



