Showing posts with label ದಾಂಡೇಲಿ. Show all posts
Showing posts with label ದಾಂಡೇಲಿ. Show all posts

28 April 2012

ಶುಭ ನುಡಿಯೇ ಓಂಗಿಲೇ


(ದಂಡಯಾತ್ರೆ ಎರಡನೇ ಹಾಗೂ ಅಂತಿಮ ಭಾಗ)
ನೆನಪುಗಳ ಹೊರೆಯಲ್ಲದಿನ್ನೊಂದ ಒಯ್ಯದಿರು
ನಿನ್ನನಡೆಯಚ್ಚಲ್ಲದಿನ್ನೊಂದ ಉಳಿಸದಿರು
ಡಾ| ಮಂಟಪ ರತ್ನಾಕರ ಉಪಾಧ್ಯರ ಬಹುಮುಖೀ ಹವ್ಯಾಸ ಮತ್ತು ಸಾಮಾಜಿಕ ಕೆಲಸಗಳಿಂದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ (ಹೆಸರು ಬೇಡ) ಆತ್ಮೀಯ ಪರಿಚಯ ಬೆಳೆದಿತ್ತು. ಪರಿಚಯ ಒಡನಾಟಕ್ಕೆ ಬೆಳೆದು ಕೆಲವು ಪ್ರಾಕೃತಿಕ ವೈಶಿಷ್ಟ್ಯ ಅನಾವರಣ ಯಾತ್ರೆಗಳನ್ನು ಇವರ ಅನೌಪಚಾರಿಕ ಮಿತ್ರಮಂಡಳಿ ನಡೆಸಿದ್ದೂ ಇತ್ತು. ಹಾಗೇ ಈಚೆಗೆ ರೂಪುಗೊಂಡಿತ್ತು ಕುಳಗಿ ಕೇಂದ್ರಿತವಾದ ದಾಂಡೇಲಿ-ಅಣಶಿ ವ್ಯಾಘ್ರಧಾಮದ ಭೇಟಿ. ನಾವು (ನಾನು ಮತ್ತು ಹೆಂಡತಿ ದೇವಕಿ) ಸ್ವತಂತ್ರವಾಗಿ ಬೆಳಿಗ್ಗೆ ಬೈಕೇರಿ ಮಂಗಳೂರು ಬಿಟ್ಟದ್ದು ಮತ್ತು ಪಯಣದ ವಿವರ ಕಳೆದ ವಾರ ಹೇಳಿದ್ದೇನಷ್ಟೆ. (ಅವರಿನ್ನೂ ಸಂಜೆ ಟೆಂಪೋದಲ್ಲಿ ಸಂಜೆ ಶಿವಮೊಗ್ಗ ಬಿಡಬೇಕಿತ್ತು)

21 April 2012

ದಾಂಡೇಲೀ ದಂಡಯಾತ್ರೆ


ಏಪ್ರಿಲ್ ಎರಡನೇ ವಾರದಲ್ಲಿ ನಮ್ಮ ಆರು ಜನರ, ಮೂರು ಬೈಕ್‌ಗಳ ‘ಮಧ್ಯ ಭಾರತ ಸೀಳು ಓಟ’ ನಡೆಯುವುದಿತ್ತು. ಸುಮಾರು ಮೂರು ತಿಂಗಳ ಮೊದಲೇ ಅಂಗಡಿ ನಡೆಸಲು ಬದಲಿ ವ್ಯವಸ್ಥೆಯಿಂದ ತೊಡಗಿ, ಸುಮಾರು ಮೂವತ್ತೈದು ದಿನದ ಪ್ರವಾಸದುದ್ದಕ್ಕೆ ಉಳಿಯುವುದೆಲ್ಲಿ, ನೋಡುವುದೇನು, ಓಡುವುದೆಷ್ಟು, ಭಾಗಿಗಳ್ಯಾರು, ಖರ್ಚು ಹೇಗೆ ಎಂಬಿತ್ಯಾದಿ ದೊಡ್ಡ ಚಿತ್ರದ ಹರಕು ತುಂಡುಗಳನ್ನು (ಜಿಗ್ ಸಾ ಪಜ಼ಲ್) ಜೋಡಿಸತೊಡಗಿದ್ದೆ. ಪುಸ್ತಕ, ಪರಿಚಿತರು ಮತ್ತು ಪತ್ರವ್ಯವಹಾರಗಳಿಂದ ಮಾಹಿತಿ ಸಂಗ್ರಹಿಸಿ, ಮಥಿಸಿ, ನಿಷ್ಕರ್ಷಿಸಿ, ಸಚಿತ್ರ ಒಂದೇ ಹಾಳೆಗೆ ಅಡಕಗೊಳಿಸಿದೆ. ಮತ್ತೆ ಹಾಗೇ ಅನುಭವಿಸಿದ್ದೂ ಆಯ್ತು! ಗಡಿಬಿಡಿಯಾಯ್ತಾ? ನಾನು ಹೇಳುತ್ತಿರುವುದು ಸುಮಾರು ಎರಡು ದಶಕಗಳ ಹಿಂದಿನ ಏಪ್ರಿಲ್! ಅಂದಿನ ರಾಶಿ ಫೋಟೋಗಳು, ದೈನಂದಿನ ಟಿಪ್ಪಣಿಗಳು, ಸ್ವಲ್ಪ ಹೆಚ್ಚಿನ ವಿವರಗಳಿರುವಂತೆ ವಿವಿಧೆಡೆಗಳಿಂದ ಮನೆಗೆ ಬರೆದು ಅಂಚಿಸಿದ ಅಸಂಖ್ಯ ಪತ್ರಗಳೆಲ್ಲ ಏಕಕಥನ ಭಾಂಡದಲ್ಲಿ ಕರಗಲು, ಸವಿವರ ಕಥನಕ್ಕೆ ‘ಮುಹೂರ್ತ’ ಕಾದೇ ಇದ್ದವು. ಆದರೆ ಇನ್ನೊಂದೇ ಭಾರತಯಾತ್ರೆ ಸೇರಿದಂತೆ ಅಸಂಖ್ಯ, ವೈವಿಧ್ಯಮಯ ಕಲಾಪಗಳು ಅದರ ಮೇಲೆ ಪೇರುತ್ತಾ ಹೋಗಿ, ನನ್ನ ಅನುಭವ ಕಥನವಿಲ್ಲದೆ ಲೋಕ ಬಡವಾಗದು ಎಂದು ನನ್ನನ್ನೇ ಸಂತೈಸಿಕೊಂಡೆ. ಆದರೆ ಈಗ, ವೃತ್ತಿ ಜಂಜಾಟದಿಂದ ಹೊರಗೆ ನಿಂತಾಗ ಮತ್ತೆ ‘ಹೇಳಿಕೊಳ್ಳುವ’ ಸಂತೋಷ ಚಿಗುರಿದೆ. ಹಳತು, ಹೊಸತರ ಪಾಕಕ್ಕೆ ನಾನು ಸಜ್ಜುಗೊಳ್ಳುತ್ತಿದ್ದಂತೆ, ಅನಿರೀಕ್ಷಿತವಾಗಿ ಪೀಠಿಕಾ ಪ್ರಸಂಗದಂತೇ ಒದಗಿ ಬಂತು...