ಲೇಖನ ಮತ್ತು ಚಿತ್ರ: ಗಿರೀಶ ಪಾಲಡ್ಕ
[ಎರಡು ವಾರಗಳ ಹಿಂದೆ ಗೆಳೆಯ ಗಿರೀಶ್ ಫೇಸ್ ಬುಕ್ಕಿನಲ್ಲಿ ನಾಲ್ಕು ಚಿತ್ರ ಹಾಕಿ, ಕೇಳಿದವರಿಗೆ "ನಿರ್ಜನ ದ್ವೀಪ - ಪೆರುಮಾಳ ಪಾರ" ಎಂದು ಸುಧಾರಿಸಿ ಮುಗಿಸುವುದರಲ್ಲಿದ್ದರು. ಆದರೆ ಈಗ ನನ್ನ ಒತ್ತಾಯಕ್ಕೆ, ಪುಟ್ಟ ಲೇಖನ ಮತ್ತು ಹೆಚ್ಚಿನ ಪಟಗಳನ್ನೂ ಪೂರೈಸಿದ್ದಾರೆ. ಗಿರೀಶ್ ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದಾಗಲೇ ಅಂದರೆ, ಸುಮಾರು ಐದು ವರ್ಷಗಳ ಹಿಂದೆಯೇ ತಮ್ಮ ಡಾರ್ಜಿಲಿಂಗ್ ಚಾರಣಾನುಭವವನ್ನು ಇಲ್ಲಿ ಮೂರು ಕಂತುಗಳಲ್ಲಿ ಹಂಚಿಕೊಂಡದ್ದು ನೀವೆಲ್ಲ ಓದಿಯೇ ಇರುತ್ತೀರಿ. ಕಳೆದ ವರ್ಷ ಅವರು ವೃತ್ತಿ ಸಹಜವಾದ ವರ್ಗಾವಣೆಯಲ್ಲಿ ಲಕ್ಷದ್ವೀಪಕ್ಕೆ ಹೊರಟಾಗ ನಾನು ಎಚ್ಚರಿಸಿದ್ದಿತ್ತು "ಬರವಣಿಗೆಗೆ ವಿರಾಮ ಕೊಡಬೇಡಿ." ಅದನ್ನು ನೆನಪಿನಲ್ಲಿಟ್ಟು ಅವರು ಕಳೆದ ವರ್ಷ ‘ಲಕ್ಷದ್ವೀಪದತ್ತ ಒಂದು ಲಕ್ಷ್ಯ’ ಹರಿಸಿದ್ದೂ ನಿಮ್ಮ ಗಮನಕ್ಕೂ ಬಂದೇ ಇದೆ. ಈಗ ಕುಸುರಿ ಕೆಲಸದಲ್ಲಿ ಪೆರುಮಾಳ್ ಪಾರ. ಮೂಲತಃ ಎರಡೂವರೆ ಎಕ್ರೆ ವಿಸ್ತೀರ್ಣದ ನಿರ್ಜನ ದ್ವೀಪ, ಕಡಲು ಹೆಚ್ಚುತ್ತಿರುವ ಭೌಗೋಳಿಕ ವಿದ್ಯಮಾನದ ಅಂಗವೋ ಎನ್ನುವಂತೆ ಒಂದೂವರೆ ಎಕ್ರೆಗೆ ಇಳಿದಿದೆ. ಆ ಪುಟ್ಟ ನೆಲವೂ ನಡು ರಾತ್ರಿಯಲ್ಲಿ, ಕಡಲಿನ ಭರತದ ವೇಳೆ, ಮುಳುಮುಳುಗುತ್ತ ಕೇವಲ ಹದಿನಾಲ್ಕು ಚದರ ಮೀಟರ್ ಮುಟ್ಟುವುದನ್ನು ನಿಶ್ಚಿಂತೆಯಿಂದ ನೋಡಿ, ಆಡಿ, ಉಂಡು, ಮಲಗಿ ಬಂದ ಕಥನ ಈಗ ನಿಮಗಾಗಿ - ಅಶೋಕವರ್ಧನ]
ನಾನು ಮಂಗಳೂರಿನಿಂದ ಲಕ್ಷದ್ವೀಪ ಸಮೂಹದ ಅಗಾತ್ತಿ ದ್ವೀಪದ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಬಂದು ಒಂದು ವರ್ಷ ಕಳೆಯಿತು. ಇಲ್ಲಿನ ಎಲ್ಲಾ ದ್ವೀಪಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವುದು ನನ್ನ ಆಸೆ. ಆದರೆ ದುರದೃಷ್ಟಕ್ಕೆ ಈ ಕೊರೊನಾ ಬಾಧೆ ವಕ್ಕರಿಸಿ ಕೆಲವು ತಿಂಗಳಕಾಲ ಎಲ್ಲವೂ ಅಸ್ತವ್ಯಸ್ತವಾಯಿತು. ದ್ವೀಪಕಲ್ಪದ ಹೊರಗಿನವರು ಇತರ ಮುಖ್ಯ ದ್ವೀಪಗಳಿಗೆ ತೆರಳಲು ಅಧಿಕೃತ ಅನುಮತಿ



