(ಚಕ್ರೇಶ್ವರ ಪರೀಕ್ಷಿತ ೬)
ಜಂಟಿ ಸೈಕಲ್ ಇನ್ನಿಲ್ಲ...
“ಆನಂದನಿಗೆ ಬೇರೆ ಕೆಲಸವಿಲ್ಲ” ಎಂದು ಅರೆ-ಕೋಪದೊಡನೇ ಉಡುಪಿಯ ಮಿಂಚಂಚೆಗೆ ಉತ್ತರಿಸಿದೆ. “ನಿಮ್ಮ ಸಹಪಾಠಿಯ ಗಂಡ, ಅಂದರೆ ನನ್ನ ತಮ್ಮ ಆನಂದನಿಗೆ, ನಮ್ಮ ಜಂಟಿ ಸೈಕಲ್ ಮಾರಾಟಕ್ಕಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ನಾವದನ್ನು ಕೊಂಡು ಈ ಚೌತಿಗೆ ಎರಡು ವರ್ಷವಾಗುತ್ತಿದೆ. ನಾನದರ ಗೇರ್ಯುಕ್ತ ಪರಿಷ್ಕೃತ ಆವೃತ್ತಿಯ ನಿರೀಕ್ಷೆಯಲ್ಲಿದ್ದೇನೆ. “ಅದು ಬಂದರೆ, ಇದು ಮಾರಬಹುದು” ಎಂದು ನನ್ನಷ್ಟಕ್ಕೇ ಹೇಳಿಕೊಂಡದ್ದಿದೆ - ಅಷ್ಟೆ. ಏನೇ ಇರಲಿ, ನೀವು ಕೇಳಿದ್ದಕ್ಕೆ...” ಎಂದು ಕೆಲವು ನಿರುತ್ತೇಜಕ ಕರಾರುಗಳ ಮೇಲೆ ಮಾರಾಟಕ್ಕೆ ಒಪ್ಪಿದೆ. ನನ್ನ ಗ್ರಹಚಾರಕ್ಕೆ ಆ ದಿಟ್ಟ ಮಹಿಳಾ ಗಿರಾಕಿ ಮರು-ಟಪಾಲಿಗೆ “ನನಗೆ ಆ ಬೈಸಿಕಲ್ ನೀವು ಹೇಳಿದ ಸ್ಥಿತಿ ಮತ್ತು ಬೆಲೆಯಲ್ಲಾದರೂ ಬೇಕೇ ಬೇಕು. ಹಣ ತಯಾರಿದೆ. ನೀವೇ ತಂದೊಪ್ಪಿಸುವ ಹಠ ಬಿಟ್ಟರೆ, ನಾನು ಅದನ್ನು ಅಲ್ಲಿಂದಲೇ ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಬೇಕಾದರೂ ಮಾಡಬಲ್ಲೆ.”
ಎರಡು ದಿನ ಹಗಲು ಒಳ್ಳೇ ಮಳೆ. ಮೂರನೇ ದಿನಕ್ಕಾಗುವಾಗ, ಪೂರ್ವಾಹ್ನ ಮತ್ತೆ ಮಳೆರಾಯ ಚಿಟಪಟ ಹನಿಗಳ ಬಿತ್ತನೆ ನಡೆಸಿದ್ದ. ಆದರೆ ಸಂಜೆಗೂ ಮುನ್ನ ಆತನ ಬುಟ್ಟಿ ಖಾಲಿಯಾಗಿತ್ತು. ಮೂರು ದಿನದಿಂದ ಕಾಡಿದ್ದ ನನ್ನ ಶೀತ ಇಳಿಮುಖದಲ್ಲಿತ್ತು, ದೇವಕಿಗೆ ಶೀತ ಹಿಡಿಯುವುದರಲ್ಲಿತ್ತು. ಹಾಗಾಗಿ ಬರಿಯ ಸಂಜೆ ಸರ್ಕೀಟೆಂದು ಜಂಟಿ ಸೈಕಲ್ ಏರಿದ್ದೆವು. ಶಕುನದ ಸುಭಗತನಕ್ಕೆ ಪಕ್ಕದ ಮನೆಯ ಅತ್ತೆಯ ಹತ್ತಿರ “ನಮ್ಮ ಅಂತಿಮ ಯಾತ್ರೆ” ಎಂದೂ ಹೇಳಿ ಬೈಸಿಕೊಂಡೇ ಬೈಸಿಕಲ್ ಹೊಡೆದೆವು. ಲೇಡಿಹಿಲ್, ಕೊಟ್ಟಾರ, ಕೂಳೂರು ತಲಪುವಾಗ ನಮ್ಮ ತಲೆಯೊಳಗೊಂದು ಹುಳ ಹೊಕ್ಕಿತು. ಸರಿ, ಅದಕ್ಕೆ ಒಲಿದು ಮತ್ತೂ ಮುಂದುವರಿದೆವು. ಅದುವರೆಗೆ ಜಂಟಿ ಸೈಕಲ್ಲನ್ನು ನಾವು ಬೈಕಂಪಾಡಿಯಾಚೆ ಒಯ್ಯುವ ಧೈರ್ಯ ಮಾಡಿರಲಿಲ್ಲ. ಈಗ ಸರಾಗ ಸುರತ್ಕಲ್, ಪಾವಂಜೆ, ಎನ್ನುತ್ತಾ ಮೂಲ್ಕಿ ಹೊರವಲಯದ ಕಿಲ್ಪಾಡಿಯವರೆಗೂ ಓಡಿಸಿದೆವು. ಅಲ್ಲಿ ನನ್ನ ಗೆಳೆಯ ಮೋಹನರಾಯರ ಮನೆ ಸೇರುವಾಗ ನಮ್ಮ ನಿತ್ಯದ ಗರಿಷ್ಠ ಸಮಯ ಎರಡು ಗಂಟೆ ಸಂದಿತ್ತು. ನಿಜ ಅತಿಥಿಗಳಿಗೆ (=ಹೇಳದೇ ಬಂದವರು) ಪಪ್ಪಾಯಿ ಕೊಟ್ಟು ಸತ್ಕರಿಸಿದ ಮೋಹನರಾವ್ ದಂಪತಿ, ಸಂತೋಷದಿಂದ ನಮ್ಮ ಸೈಕಲ್ಲಿಗೆ ರಾತ್ರಿಯ ತಂಗುದಾಣ ಕಲ್ಪಿಸಿದರು. ಅವರು ನಮಗೂ ಆಶ್ರಯ ಕೊಡುವ ಉತ್ಸಾಹದಲ್ಲಿದ್ದರೂ ನಾವು ಒಪ್ಪಿಕೊಳ್ಳಲಿಲ್ಲ. ಬೆಳಕು ಮಾಸಿದ್ದ ಹೊತ್ತಿನಲ್ಲಿ ಬಸ್ಸೇರಿ, ಕತ್ತಲಲ್ಲಿ ಮಂಗಳೂರಿಗೆ ಮರಳಿದೆವು.








