ಕಪ್ಪೆ ಕಮ್ಮಟವೆಂದು ಸಾರ್ವಜನಿಕವಾಗಿ ನಾನು ವಟಗುಟ್ಟುವ (= ಘೋಷಿಸು) ಮುನ್ನ ನೆನಪಾದದ್ದು ಎರಡು ಹೆಸರು. ನನ್ನ ಕಣ್ಣೆದುರೇ ಪ್ರಾಣಿಶಾಸ್ತ್ರಜ್ಞರಾಗಿ ಬೆಳೆದ ಸೂರ್ಯ (ಉರುಫ್ ಸೂರ್ಯನಾರಾಯಣ ರಾವ್ ಅಡ್ಡೂರು, (‘ಹಾವಾಡಿಗ’ ಗೆಳೆಯ ಶರತ್ತನ ಚಡ್ಡಿದೋಸ್ತ್) ಮತ್ತು ಸವಿತಾ (ಶರತ್ತನ ಹೆಂಡತಿ). ಇಬ್ಬರೂ ಸ್ನಾತಕೋತ್ತರ ಪದವಿಯನಂತರ ಕಪ್ಪೆಯನ್ನೇ ಸಂಶೋಧನಾ ವಿಷಯವಾಗಿ ತೆಗೆದುಕೊಂಡು ಪಚ್ಚಡಿಧಾರಿಗಳಾದವರು! ಸವಿತಾ ಅಮೆರಿಕಾದ ದೂರದಲ್ಲಿದ್ದರೆ, ಸೂರ್ಯ ನನ್ನ ಒಡನಾಟ ದೂರನಾಗಿದ್ದ.
ಶಿಬಿರದಲ್ಲಿ ಭಾಗವಹಿಸುವ ಕುರಿತಂತೆ ಹಲವು ಗೆಳೆಯರು ಪೂರಕವಾಗಿ ಟ್ರೋಂಯ್ (=ಒಪ್ಪಿಗೆ) ಕೊಡುತ್ತ ಬಂದರು. ಉಡುಪಿಯಿಂದ ಈಚೆಗೆ ಪರಿಚಿತರಾದ ಇನ್ನೊಬ್ಬ ‘ಹಾವಾಡಿಗ’ ಗೆಳೆಯ ಗುರುರಾಜ ಸನಿಲ್ ಅಂತೂ ಎರಡು ದಿನ ಹಿಂದಿನವರೆಗೂ ಟ್ರೋಂಯ್ ಹೇಳುತ್ತಲೇ ಬಂದವರು, ಅನಿವಾರ್ಯ ಕರ್ತವ್ಯಗಳ ಕಟ್ಟುಪಾಡಿನಲ್ಲಿ ವಟರ್ (= ನಿರಾಕರಣೆ) ಹೇಳಿದರು. ದಂತವೈದ್ಯ ಗಣೇಶ್ ಭಟ್ ತುಂಬ ತಡವಾಗಿ ಉತ್ಸಾಹ ತೋರಿ ಟ್ರಿ ಟ್ರಿ ಟ್ರಿ (= ಪ್ಲೀಸ್ ಪ್ಲೀಸ್) ಹೇಳುತ್ತಲಿದ್ದಾಗ, ಸದಸ್ಯ ಸಂಖ್ಯೆ ಹದಿನೆಂಟರ ಮೇಲೇರಿ ‘ಸಂತೆ’ಯಾಗಿದ್ದಕ್ಕೆ ಸಖೇದ ದೀಪಿಕಾ ವಟರ್ಗುಟ್ಟಿದರು. (ಡಾ| ಕೆ.ವಿ. ಗುರುರಾಜ್ ಸ್ಪಷ್ಟವಾಗಿ ಹೇಳಿದ್ದರು “ಕಮ್ಮಟದ ಗರಿಷ್ಠ ಯಶಸ್ಸಿಗೆ, ಭಾಗಿಗಳ ಸಂಖ್ಯೆ ಕಡಿಮೆಯಿದ್ದಷ್ಟೂ ಅಂದರೆ ಸುಮಾರು ಹತ್ತರಿಂದ ಹನ್ನೆರಡು, ಒಳ್ಳೇದು.”) ಪದ್ಮಹಾಸ, ಅಭಿಜಿತ್ ಭಟ್ ಕಡೇ ಗಳಿಗೆಗೆ ಟ್ರಿಕ್, ಟ್ರಿಕ್, ಟ್ರಿಕ್ (= ವಶೀಲಿ) ಮಾಡಿ ದೀಪಿಕಾರ ಟ್ರೋಂಯ್ಕ್ ಪಡೆದಿದ್ದರು.