Showing posts with label ಭವಿಷ್ಯ ವಿಜ್ಞಾನ. Show all posts
Showing posts with label ಭವಿಷ್ಯ ವಿಜ್ಞಾನ. Show all posts

22 January 2013

ನವಶತಮಾನದ ಅರುಣೋದಯ - ವೈಜ್ಞಾನಿಕ ರೂಪಕ


[ಭವಿಷ್ಯ ವಿಜ್ಞಾನ - ಅನುಬಂಧ - ಒಂದು, ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಏಳನೇ ಮತ್ತು ಕೊನೆಯ ಕಂತು]

ಇಪ್ಪತ್ತನೆಯ ಶತಮಾನ ಇನ್ನು ಕೆಲವೇ ವರ್ಷಗಳಲ್ಲಿ (೧೯೯೩ರಲ್ಲಿ ಬರೆದ ಮಾತು.) ನೇಪಥ್ಯಕ್ಕೆ ನಿರ್ಗಮಿಸಿ ಇಪ್ಪತ್ತೊಂದನೆಯ ಶತಮಾನ ರಂಗ ಪ್ರವೇಶಿಸಿರುತ್ತದೆ. ಸದ್ಯದಲ್ಲಿ ಮಾನವ ನವ ಶತಮಾನದ ಅರುಣೋದಯ ಕಾಲದಲ್ಲಿದ್ದಾನೆ.

ವರ್ತಮಾನ ಜೀವನ ಹೇಗಿದೆ? ಎಲ್ಲಿ ನೋಡಿದರೂ ಅಶಾಂತಿ, ತುಮುಲ, ಮಾಲಿನ್ಯ, ಬಿಕ್ಕಟ್ಟು, ಮನುಕುಲದ ಅಂತ್ಯಕಾಲವೇ ಸನ್ನಿಹಿತವಾಗಿದೆಯೇ ಎನ್ನುವ ಸನ್ನಿವೇಶ. ಆಹಾರೋತ್ಪಾದನೆಯ ಆಧಿಕ್ಯದ ಜೊತೆಗೇ ಹಸಿವಿನ ಭೂತದ ಕರಾಳ ಕೂಗು. ತಂತ್ರವಿದ್ಯೆಯ ಪರಾಕಾಷ್ಟೆಯ ಬೆನ್ನಿಗೇ ತೀವ್ರ ಶಕ್ತಿ ಬಿಕ್ಕಟ್ಟಿನ ಸಮಸ್ಯೆ. ನಾಗರಿಕತೆಯ ಉಚ್ಛ್ರಾಯದ ಹಿನ್ನೆಲೆಯಲ್ಲಿ ಪಾಶವೀಯತೆಯ ಉಗ್ರ ಮುಖ. ಈ ವೈರುದ್ಧ್ಯಗಳನ್ನು ಗಮನಿಸಿ ಮಾನವ ಪ್ರಜ್ಞೆಯ ಮೂಲಭೂತ ವಿವೇಕದಲ್ಲಿ ಭರವಸೆ ಇರಿಸಿ ಬರಲಿರುವ ಶತಮಾನದಲ್ಲಿ ಬದುಕು ಹೇಗಿರಬಹುದೆನ್ನುವುದನ್ನು ವೈಜ್ಞಾನಿಕವಾಗಿ ಮುನ್ನುಡಿಯುವುದು ಸಾಹಸವೇ ಸರಿ. ಈ ನಿಟ್ಟಿನಲ್ಲಿ ಒಂದು ಪ್ರಯತ್ನ ಪ್ರಸಕ್ತ ರೂಪಕ. ಮಾನವ ವಿವೇಕಯುತನಾಗಿ ತನ್ನ ಮನೆಯನ್ನೂ ಬದುಕನ್ನೂ ಹದದಲ್ಲಿಟ್ಟುಕೊಂಡು ತಂತ್ರವಿದ್ಯೆಯ ದಾಸನಾಗದೇ ಯಜಮಾನನಾಗಿ ಉಳಿದದ್ದಾದರೆ ಇಪ್ಪತ್ತೊಂದನೆಯ ಶತಮಾನ ಅವನೆದುರು ಭವ್ಯ ನವ ಜೀವನವನ್ನು ಅನಾವರಣಗೊಳಿಸಬಲ್ಲುದೆಂಬ ಆಶಾವಾದ ಪ್ರಸಕ್ತ ರೂಪಕದ ಪ್ರಧಾನ ಶ್ರುತಿ.

ಇದೊಂದು ವೈಜ್ಞಾನಿಕರೂಪಕ, ೧೯೮೩ರಲ್ಲಿ ಬರೆದದ್ದು ಬೆಂಗಳೂರು ಆಕಾಶವಾಣಿಯ ಕೋರಿಕೆ ಮೇರೆಗೆ. ಅದೇ ವರ್ಷ ಇದು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಇಲ್ಲಿ ಬರುವ ಪಾತ್ರಗಳು ಪ್ರತೀಕಾತ್ಮಕ.
ಕಾಲಪುರುಷ - ಚಿರಂತನ ಕಾಲದ ಪ್ರತೀಕ. ಎಲ್ಲ ಶತಮಾನಗಳ ಸಾರ್ವತ್ರಿಕ ಪ್ರಜ್ಞೆ.
ಇಪ್ಪತ್ತನೆಯ ಶತಮಾನ - ವರ್ತಮಾನ ಕಾಲದ ಪ್ರತೀಕ. ಪ್ರಸಕ್ತ ಶತಮಾನದ ಅನುಭವಗಳ ಸಾರ.
ಇಪ್ಪತ್ತೊಂದನೆಯ ಶತಮಾನ - ಸದ್ಯವೇ ರಂಗಪ್ರವೇಶಿಸಲಿರುವ ಹೊಸ ಕಾಲದ ಪ್ರತೀಕ. ಮಾನವನ ಭವಿಷ್ಯ ಆಶೋತ್ತರಗಳ ಮೂರ್ತರೂಪ.

15 January 2013

ಭವಿಷ್ಯ ಸಾಧ್ಯತೆಗಳು - ಇಪ್ಪತ್ನಾಲ್ಕು


[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಆರನೇ ಕಂತು]

ತಾಂತ್ರಸ್ಥಾಪಕರು ವಿನಾಶಪ್ರವಾಚಕರು, ಮಧ್ಯವರ್ತಿಗಳು: ಭವಿಷ್ಯ ವಿಜ್ಞಾನಿಗಳ ಪ್ರಕಾರ ಇಂದು ಮಾನವ ಅಖಂಡವಾದ ಒಂದೇ ಭೂಮಿಯಲ್ಲಿ ಬಾಳುತ್ತಿಲ್ಲ. ಬದಲು, ತಂತ್ರವಿದ್ಯೆಯ ಕಾರಣವಾಗಿ ಮೈದಳೆದಿರುವ ತಾಂತ್ರಗೋಳದಲ್ಲಿಯೂ ಆತನ ನೈಸರ್ಗಿಕ ನೆಲೆಯಾದ ಜೈವಿಕಗೋಳದಲ್ಲಿಯೂ ಏಕಕಾಲದಲ್ಲಿ ಬಾಳುತ್ತಿದ್ದಾನೆ.

ಯಂತ್ರ ಸ್ಥಾವರಗಳು, ಇವನ್ನು ಪೋಷಿಸುವ ಕೈಗಾರಿಕೆಗಳು ಇವೆಲ್ಲವೂ ಸೇರಿ ಉತ್ಪಾದಿಸುವ ಉಪಯುಕ್ತ ಹಾಗೂ ಮಲಿನ ವಸ್ತುಗಳು ಮುಂತಾದವು ಒಟ್ಟಾಗಿ ತಾಂತ್ರಗೋಳವನ್ನು ರೂಪಿಸುತ್ತವೆ. ಜೀವಿಗಳ ಉಗಮ ಹಾಗೂ ವಿಕಾಸಕ್ಕೆ ಕಾರಣವಾದ ಭೂ ತೊಗಟೆಯ ತೀರ ಮೇಲು ಭಾಗವೇ (ವಾಯುಮಂಡಲವನ್ನೂ ಒಳಗೊಂಡಂತೆ) ಜೈವಿಕಗೋಳ. ಸೀಮಿತ ಪ್ರದೇಶದಲ್ಲಿ ಸಸ್ಯ, ಪ್ರಾಣಿ ಹಾಗೂ ಅಜೈವಿಕ ಪದಾರ್ಥಗಳಾದ ನೆಲ ಜಲ ಮತ್ತು ವಾಯುಮಂಡಲ ಇವುಗಳ ನಡುವೆ ಅನ್ಯೋನ್ಯ ಅವಿಭಾಜ್ಯ ಸಂಬಂಧ ಹಾಗೂ ಅಂತರಕ್ರಿಯೆ ಬೆಸೆಯಲ್ಪಟ್ಟಿವೆ. ಸಸ್ಯ, ಪ್ರಾಣಿ ಮತ್ತು ಅಜೈವಿಕ ಪದಾರ್ಥಗಳು ಇವು ಜೈವಿಕಗೋಳದ ಮೂರು ಘಟಕಗಳು. ಇವುಗಳ ಪೈಕಿ ಯಾವುದೇ ಒಂದಕ್ಕೆ ಗಾಸಿ ಉಂಟಾದರೂ ಅದು ಇಡೀ ಜೈವಿಕಗೋಳದ ಮೇಲೆಯೇ ಮಾರಕ ಪರಿಣಾಮ ಬೀರದಿರದು. ಸದ್ಯದಲ್ಲಿ ತಾಂತ್ರಗೋಳ ಜೈವಿಕಗೋಳವನ್ನು ಅತಿಯಾಗಿ ಶೋಷಿಸಿ ಶಕ್ತಿಯನ್ನು ಚೂಷಿಸಿ ನೆಲ ಜಲ ಗಗನಗಳಿಗೆ ವ್ಯಾಪಿಸಿ ತ್ರಿವಿಕ್ರಮಾವತಾರ ತಳೆದಿದೆ. ಇದರಿಂದಾಗಿ ಮೂರು ದುಷ್ಪರಿಣಾಮಗಳು ತಲೆದೋರಿವೆ. ನೈಸರ್ಗಿಕ ಸಂಪನ್ಮೂಲಗಳ ನಾಶ, ಪರಿಸರ ಮಾಲಿನ್ಯ, ಬಹುಸಂಖ್ಯಾತರ ಬದುಕಿನ ಮಟ್ಟದಲ್ಲಿ ಕ್ರಮಶಃ ಕುಸಿತ.

08 January 2013

ನಿಸರ್ಗದ ಸಮತೋಲ - ಹತ್ತೊಂಬತ್ತು


[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಐದನೇ ಕಂತು
ಮೊದಲನೆಯದಾಗಿ ಜನರ ವಸತಿ, ಸಂಚಾರ, ವಿಹಾರ ಮೊದಲಾದವುಗಳಿಗಾಗಿ ಹೆಚ್ಚು ಹೆಚ್ಚು ನೆಲವನ್ನು ಆಕ್ರಮಿಸಬೇಕಾಗುತ್ತದೆ. ಎರಡನೆಯದಾಗಿ ಆಹಾರೋತ್ಪಾದನೆಗಾಗಿ ಹೆಚ್ಚು ಹೆಚ್ಚು ನೆಲವನ್ನು ನಿರ್ದಿಷ್ಟ ಕೃಷಿಗಳಿಗಾಗಿ ಬಳಸಬೇಕಾಗುತ್ತದೆ. ಇವೆರಡೂ ಒಟ್ಟಾಗಿ ನೈಸರ್ಗಿಕ ಪರಿಸ್ಥಿತಿಗಳ ಮೇಲೆ - ಅರಣ್ಯ ಸಂಪತ್ತು, ಸಸ್ಯ ಪ್ರಾಣಿಗಳು, ಬೆಟ್ಟ, ಕಣಿವೆ, ಕೆರೆ, ತೊರೆ, ವಾಯುಮಂಡಲ, ಕಡಲು - ದುಷ್ಪರಿಣಾಮ ಬೀರುತ್ತವೆ. ಮಾನವನ ಉಳಿವಿಗೆ ಅವಶ್ಯವಾದ ಶುದ್ಧ ವಾಯು ಮತ್ತು ಶುದ್ಧ ಜಲ ಮಲಿನಗೊಂಡು ಬದುಕು ಅಸಹನೀಯವಾಗುತ್ತದೆ.

ನಿಸರ್ಗದ ಸಮತೋಲವೆಂಬುದು ಒಂದು ಗತ್ಯಾತ್ಮಕ ಸಾಮರಸ್ಯ. ಅಸಂಖ್ಯಾತ ಸಸ್ಯ ಪ್ರಾಣಿ ಬಗೆಗಳು ನೆಲ ಜಲ ವಾಯುವಿನ ವಿವಿಧ ಸಂಪನ್ಮೂಲಗಳ ಮೇಲೆ ಮಾತ್ರವಲ್ಲ ಪರಸ್ಪರವಾಗಿಯೂ ಅವಲಂಬನೆಗೊಂಡು ಸಮತೋಲ ಏರ್ಪಟ್ಟಿದೆ. ಯಾವುದೇ ಕಾಡನ್ನು ಸ್ಥೂಲವಾಗಿ ನೋಡಿದಾಗಲೂ ಸಂಗತಿ ವೇದ್ಯವಾಗುತ್ತದೆ. ಅಲ್ಲಿಯ ಸಸ್ಯ ಪ್ರಾಣಿ ವೈವಿಧ್ಯವೇ ಅದರ ತ್ರಾಣ, ವಿಶೇಷೀಕರಣ ಅಥವಾ ಏಕತಾನತೆ ಅಲ್ಲ. ಕೀಟಬಾಧೆಯಾಗಲಿ ಬೂಷ್ಟುರೋಗವಾಗಲಿ ಸಾಂಕ್ರಾಮಿಕ ಪಿಡುಗುಗಾಗಲಿ ಕಾಡಿಗೆ ಸಾಧಾರಣವಾಗಿ ತಾಗದು. ಒಂದು ಬಗೆಯ ಜೀವಿಗೆ ತಾಗಿದ ರೋಗ ಕೇವಲ ಅದನ್ನು ನಿರ್ನಾಮ ಮಾಡೀತೇ ವಿನಾ ಸಮಗ್ರ ಅರಣ್ಯವನ್ನಲ್ಲ. ಪ್ರತಿಯೊಂದು ಜೀವಿಗೂ ಸಾಧಾರಣವಾಗಿ ವೈರಿಜೀವಿಯೂ ಒಂದಿರುವುದು ವಾಡಿಕೆ. ಹೀಗಾಗಿ ಯಾವುದೇ ಜೀವಿ - ಸಸ್ಯವಾಗಲಿ, ಪ್ರಾಣಿಯಾಗಲಿ - ಕಾಡಿನ ಒಡೆಯ ಆಗಿ ಇತರ ಜೀವಿಗಳ ನಾಶಕ್ಕೆ ಕಾರಣವಾಗುವುದು ಅಸಾಧ್ಯ.

01 January 2013

ನೈಸರ್ಗಿಕ ಸಂಪನ್ಮೂಲಗಳು - ಹದಿಮೂರು


[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ನಾಲ್ಕನೇ ಕಂತು]

ನಿಸರ್ಗದ ಸಂಪನ್ಮೂಲಗಳಲ್ಲಿ ವ್ಯಾಪಕವಾಗಿ ಎರಡು ವರ್ಗಗಳನ್ನು ಗುರುತಿಸಬಹುದು. ಪುನರಾವರ್ತನಶೀಲ ಸಂಪನ್ಮೂಲಗಳು, ಅಪುನರಾವರ್ತನಶೀಲ ಸಂಪನ್ಮೂಲಗಳು. ಪ್ರಾಣಿ, ಗಿಡ, ಮರ, ನೀರು, ವಾಯು ಮುಂತಾದವು ಮೊದಲನೆಯ ವರ್ಗಕ್ಕೆ ಸೇರುತ್ತವೆ. ಏಕೆಂದರೆ ಇವನ್ನು ರೂಪಿಸಲು ವಿನಿಯೋಗವಾಗುವ ವಿವಿಧ ಧಾತುಗಳು, ವಸ್ತುಗಳು ಉಪಯೋಗದಿಂದ ಇಲ್ಲವೇ ಸಾವಿನಿಂದ ಕೊನೆಗೊಂಡ ಬಳಿಕ, ಮತ್ತೆ ನಿಸರ್ಗಕ್ಕೆ ಅವೇ ಧಾತುಗಳಾಗಿ ಸೇರಿಹೋಗುತ್ತವೆ. ಉದಾಹರಣೆಗೆ ಯಾವುದೇ ಪ್ರಾಣಿಯನ್ನು ಪರಿಶೀಲಿಸಬಹುದು. ನೀರು, ಸಾರಜನಕ, ಮೇದಸ್ಸು, ಶರ್ಕರ ಮತ್ತು ಹಲವಾರು ಖನಿಜಲವಣಗಳ ಸಂಕೀರ್ಣ ಮೇಳನವದು - ಅರ್ಥಾತ್ ಹೈಡ್ರೋಜನ್, ಆಕ್ಸಿಜನ್, ನೈಟ್ರೋಜನ್ ಮತ್ತು ವಿವಿಧ ಖನಿಜಲವಣಗಳು ನಿರ್ದಿಷ್ಟ ಅಲೇಖ್ಯಾನುಸಾರ ಸಂಯೋಗಗೊಂಡು ಪ್ರಾಣಿ ಮೈದಳೆದಿರುತ್ತದೆ. ಅದರ ಮರಣಾನಂತರ ನೈಸರ್ಗಿಕ ಕಾರಕಗಳ ಸತತ ಕ್ರಿಯೆಯ ಪರಿಣಾಮವಾಗಿ ದೇಹ ವಿಘಟಿಸಲ್ಪಟ್ಟು ವಿವಿಧ ಧಾತುಗಳು ಬೇರ್ಪಟ್ಟು ನಿಸರ್ಗದಲ್ಲಿ ಲೀನವಾಗುತ್ತವೆ; ಹಾಗೂ ನಿಸರ್ಗದ ಮಹಾಪ್ರಯೋಗಮಂದಿರದಲ್ಲಿ ಉಪಯೋಗಕ್ಕೆ ಪುನಃ ಲಭಿಸುತ್ತವೆ. ಫಾಸಿಲ್ ಇಂಧನ (ಕಲ್ಲಿದ್ದಲು, ಪೆಟ್ರೋಲ್ ಇತ್ಯಾದಿ) ಹೀಗಲ್ಲ. ಅಂತೆಯೇ ಲೋಹ ಹಲವಾರು ಖನಿಜಗಳು, ಪ್ಲ್ಯಾಸ್ಟಿಕ್, ಕೃತಕನಾರು, ಸಂಶ್ಲೇಷಿತ ರಾಸಾಯನಿಕಗಳು ಮುಂತಾದವು ಕೂಡ. ಉಪಯೋಗಾನಂತರ ನಿಸರ್ಗಕ್ಕೆ ಜಮಾವಣೆ ಆಗುವ ಇವುಗಳ ಶೇಷ ಪದಾರ್ಥಗಳು ನಿಸರ್ಗದಲ್ಲಿ ಸುಲಭವಾಗಿ ಆಗಲಿ ಕ್ಷಿಪ್ರವಾಗಿ ಆಗಲಿ ಲೀನವಾಗುವುದಿಲ್ಲ. ಸಾವಿರಾರು ವರ್ಷಗಳ ಕಾಲ ಇವು ಪ್ರತ್ಯೇಕವಾಗಿಯೇ ಉಳಿದಿರುತ್ತವೆ. ಏಕೆಂದರೆ ಇವನ್ನು ಶೀಘ್ರವಾಗಿ ವಿಘಟಿಸಬಲ್ಲ ಸಾಮರ್ಥ್ಯಯುತ ನೈಸರ್ಗಿಕ ಕಾರಕಗಳಿಲ್ಲ. ಇತ್ತ ವಿಕಿರಣಪಟು ಧಾತುಗಳ ಬಳಕೆಯಿಂದ ಪರಮಾಣು ಶಕ್ತಿಯನ್ನು ಹಿಂಡುವ ತಂತ್ರವಿದ್ಯೆಯ ಉಪೋತ್ಪನ್ನ ಪದಾರ್ಥಗಳು ಶತಮಾನಪರ್ಯಂತ ವಿಕಿರಣಪಟುಗಳಾಗಿಯೇ ಉಳಿದಿದ್ದು ಜೀವಿಗಳಿಗೆ ಮಾರಕವಾಗುತ್ತವೆ. ಒಟ್ಟಾರೆ, ನಿಸರ್ಗದಿಂದ ಒಮ್ಮೆ ಬಸಿಯಲಾದ ಫಾಸಿಲ್ ಇಂಧನ ಮೊದಲಾದ ಸಂಪನ್ಮೂಲಗಳು ಸನಿಹದ ಭವಿಷ್ಯದಲ್ಲೇನೂ ಅದರ ಮಹಾ ಪ್ರಯೋಗಮಂದಿರಕ್ಕೆ ಮರುಬಳಕೆಗೆ ಲಭಿಸುವುದಿಲ್ಲ ಎಂಬುದಂತೂ ಖರೆ. ಹೀಗಾಗಿ ಅಷ್ಟರಮಟ್ಟಿಗೆ ಪ್ರಪಂಚ ಕಚ್ಚಾ ಸಾಮಗ್ರಿಗಳ ಕೊರತೆಯಿಂದ ನರಳಬೇಕಾಗುತ್ತದೆ.

ಜನಸಂಖ್ಯೆ - ತಂತ್ರವಿದ್ಯೆ - ಶಕ್ತಿ ತ್ರಿಭುಜದ ಸಲೆ ನಿಸರ್ಗ ಭರಿಸಬಹುದಾದ ಸಂಪನ್ಮೂಲಗಳ ಪರಿಮಿತಿಯೊಳಗೆ ಇರುವಾಗ ತ್ರಿಭುಜದ ಇರವಿನ ಅರಿವು ಮಾನವನಿಗೆ ಆಗುವುದಿಲ್ಲ. ಇಂಥ ನಿರ್ಣಾಯಕ ಪರಿಮಿತಿಯನ್ನು - ದೇಹಲಿ (= ಹೊಸ್ತಿಲು) ಪರಿಮಿತಿಯನ್ನು - ಪ್ರಪಂಚ ೧೯೫೦ರ ಅಂದಾಜಿಗೆ ಅಡ್ಡ ಹಾಯ್ದದಂತೆ ತೋರುತ್ತದೆ. ಆಗ ಪರಿಸರಮಾಲಿನ್ಯ ಪಿಡುಗಾಗಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸತೊಡಗಿತು. ಜೀವನ ಗುಣಮಟ್ಟದ ಮೇಲೆ, ಉಳ್ಳವರನ್ನೂ ಉಳ್ಳದವರನ್ನೂ ಸಮಾನವಾಗಿಯೇ ಒಳಗೊಂಡಂತೆ, ದುಷ್ಪರಿಣಾಮ ಬೀರತೊಡಗಿತು.

25 December 2012

ಮೂಕ ನಿರ್ಝರಿಣಿ - ಏಳು


[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಮೂರನೇ ಕಂತು]

ಬಲು ಹಿಂದಿನ ಕತೆಯೇನೂ ಅಲ್ಲವಿದು. ಅದೊಂದು ದೊಡ್ಡ ದೇಶ. ಅದರ ವಕ್ಷಸ್ಥಳದಲ್ಲಿ ಪುಟ್ಟ ಒಂದು ಹಳ್ಳಿ. ಉಲ್ಲಾಸವೇ ಅದರ ಉಸಿರು. ಅಲ್ಲಿಯ ಬದುಕು ಪರಿಸರದೊಡನೆ ಸಂಗತವಾಗಿಯೂ ಸಂತತವಾಗಿಯೂ ಹೊಂದಿಕೊಂಡಿದ್ದು ಎಲ್ಲೆಲ್ಲಿಯೂ ಸಂತೋಷ ಸಂಭ್ರಮ ಹರಿಯುತ್ತಿದ್ದುವು. ಬೇಸಾಯದಿಂದ ಬಂದ ಗಳಿಕೆಯಿಂದ ನೆಮ್ಮದಿಯ ಬದುಕನ್ನು ಬಾಳುತ್ತಿದ್ದ ಆರೋಗ್ಯವಂತ ಜನ, ಶ್ರಾಯಾನುಸಾರ ಕಂಗೊಳಿಸುತ್ತಿದ್ದ ಹಲ ಬಗೆಯ ಪೈರುಪಚ್ಚೆ, ಎಲ್ಲೆಲ್ಲೂ ಗಗನ ನಿವೇದಿತವಾಗಿ ನೆಟ್ಟಗೆ ನಿಂತಿದ್ದ ವೃಕ್ಷಸಮೂಹ, ಇವುಗಳಿಗೆ ರಕ್ಷಣೆ ನೀಡಲು ಹಳ್ಳಿಯನ್ನು ಬಳಸಿ ಹರಡಿಹೋಗಿದ್ದ ಬೆಟ್ಟ ಕಣಿವೆಗಳ ಸಾಲು, ಬೆಟ್ಟಗಳ ಒಡಲಿನಿಂದ ನಿರಂತರವಾಗಿ  ಸ್ರವಿಸುತ್ತಿದ್ದ ಸಲಿಲಧಾರೆ, ಹಸುರು ಹಚ್ಚಡದ ಮೇಲೆ ಹಾದಿ ಬಿಡಿಸಿ ಸಾಗುತ್ತಿದ್ದ ನೀರಿನ ಹರಿವು ನೇಯ್ದ ಬೆಳ್ಳಿ ಚಿತ್ತಾರ, ಸಮೃದ್ಧ ನೆಲ ಜನ ಬಾನುಗಳಲ್ಲಿ ವಿಹರಿಸುತ್ತಿದ ಪ್ರಾಣಿ ಜಲಚರ ಪಕ್ಷಿ ಸಂಕುಲ - ಇವೆಲ್ಲ ಅಲ್ಲಿಯ ಜೀವಿಪರಿಸರ ಅಖಂಡತೆಯ ಅವಿಭಾಜ್ಯ ಅಂಗಗಳಾಗಿ ಎರಕಗೊಂಡಿದ್ದುವು. ನಿಸರ್ಗವಲ್ಲಿ ಹಾಡುತ್ತಿತ್ತು, ಕೊಳಲೂದುತ್ತಿತ್ತು, ಚೆಲುವು ಸೂರೆ ಹೋಗಿತ್ತು, ಪರಿಮಳ ಸರ್ವವ್ಯಾಪಿ ಆಗಿತ್ತು, ಸೌಂದರ್ಯ ಸೀಮೆಯದು.

18 December 2012

ಪರಿಸರದರ್ಶನ - ಮೂರು


[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಎರಡನೇ ಕಂತು]

ಕವಿ ಖಲೀಲ್ ಗಿಬ್ರಾನ್ ಬರೆದಿರುವ Vision ಭಾವಾನುವಾದ:
ಸ್ಫಟಿಕ ನಿರ್ಮಲ ಸಲಿಲದ ತೊರೆ, ಬಳಿಯಲ್ಲೇ ಹುಲುಸಾದ ಹೊಲ. ನಡುವಿನಲ್ಲೊಂದು ಹಕ್ಕಿಪಂಜರ - ಒಬ್ಬ ಯಂತ್ರಪರಿಣತ ರಚಿಸಿದ ಕಲಾಕೃತಿಯೋ ಎಂಬಂತಿತ್ತು ಅದರ ಸರಳುಗಳ ಜೋಡಣೆ ಮತ್ತು ಬಿಜಾಗರದ ಅಳವಡಿಕೆ. ಪಂಜರದ ಮೂಲೆಯಲ್ಲೊಂದು ಮೃತಪಕ್ಷಿ. ಎದುರು ಮೂಲೆಯಲ್ಲಿ ಎರಡು ಬೋಗುಣಿಗಳು: ಒಂದರಲ್ಲಿ ನೀರು ಖಾಲಿ, ಇನ್ನೊಂದರಲ್ಲಿ ಕಾಳು ನಾಸ್ತಿ. ಅಲ್ಲೇ ನಿಂತೆ ನಿವೇದಿತನಾಗಿ - ಜೀವರಹಿತ ಪಕ್ಷಿ ಮತ್ತು ನೀರಿನ ಕಲರವ ಎರಡೂ ಗಂಭೀರ ಮೌನ ಮತ್ತು ಪರಮಗೌರವ ಭಾಜನವಾಗಿದ್ದುವೋ ಹೃದಯ ಮತ್ತು ಮನಸ್ಸಾಕ್ಷಿಗಳ ಪರಿಗಣನೆಗೆ ಅರ್ಹವಾದ ವಿಶೇಷಗಳೋ ಎಂಬಂತೆ.

ನೋಡುತ್ತ ಬಗೆಯುತ್ತ ತನ್ಮಯತೆ ತಳೆಯುತ್ತ ನಿಂತಿದ್ದಂತೆ ಗೊತ್ತಾಯಿತು: ಬಾಳ ತೊಟ್ಟಿಲಾದ ನೀರ ಸೆಲೆಯ ಬಳಿಯಲ್ಲೇ ಮುಗ್ಧ ಜಂತು ತೃಷೆಯಿಂದ, ಅಂತೆಯೇ ಸಮೃದ್ಧ ಪೈರು ಪಚ್ಚೆಯ ಕಡಲ ನಡುವಲ್ಲೇ ಹಸಿವಿನಿಂದ ಅಸುನೀಗಿತ್ತು - ಕಬ್ಬಿಣದ ಪೆಠಾರಿಯೊಳಗೆ ಬಂಧಿತನಾದ ಶ್ರೀಮಂತ, ಹೊನ್ನ ಹೆಗ್ಗೆಗಳ ನಡುವೆಯೇ ಅಶನವಿಲ್ಲದೆ ಮಡಿದಂತೆ.

ನನ್ನ ಕಣ್ಣೆದುರೇ ಹಠಾತ್ತನೆ ಪಂಜರ ಮಾನವ ಕಂಕಾಲವಾಗಿಯೂ ಮೃತಪಕ್ಷಿ ಮಾನವ ಹೃದಯವಾಗಿಯೂ ರೂಪ ಪರಿವರ್ತನೆಗೊಂಡುದನ್ನು ಕಂಡೆ. ದುಃಖತಪ್ತ ಸ್ತ್ರೀಯ ತುಟಿಗಳಿಂದ ರಕ್ತ ಒಸರುವಂತೆ ಹೃದಯದಿಂದ ಜೀವರಸ ಜಿನುಗುತ್ತಿತ್ತು. ಗಾಯಕ್ಕೆ ಬಂತು ಬಾಯಿ ನಾನು ಮಾನವ ಹೃದಯ - ವಿಧಿಜಾಲಗಳ ಕೈದಿ, ನೆಲದ ನಿಯಮಗಳ ಬಂಧಿ.
ಭಗವಂತನ ಔದಾರ್ಯಸಾಗರದ ವಿಸ್ತಾರದಲ್ಲಿ, ಜೀವನದಿಯ ಅಂಚಿನಲ್ಲಿ, ನಾನು ಮನುಷ್ಯಕೃತ ಬೋನಿನಲ್ಲಿ ಸೆರೆಹಿಡಿಯಲ್ಪಟ್ಟೆ.
ಭಗವಂತ ಅನುಗ್ರಹಿಸಿದ ಸಮೃದ್ಧಿಯನ್ನು ಸವಿಯುವ ಮುಕ್ತಾವಕಾಶ ವಂಚಿತನಾಗಿ ಸುಂದರಸೃಷ್ಟಿಯ ನಡುವಿನಲ್ಲೇ ಮರಣವಪ್ಪಿದೆ.
ನನ್ನೊಳಗೆ ಅನುರಾಗ ಮತ್ತು ಹಂಬಲ ಪ್ರೇರಿಸುವ ಸೌಂದರ್ಯದ ಪ್ರತಿಯೊಂದು ಛಾಯೆಯೂ ಮನುಷ್ಯನ ದೃಷ್ಟಿಯಲ್ಲಿ ಅಸಹ್ಯ. ಒಳ್ಳೆಯದೆಲ್ಲಕ್ಕೂ ನಾನು ಹಾತೊರೆಯುತ್ತೇನೆ. ಆದರೆ ಆತನ ತೀರ್ಮಾನದಲ್ಲಿ ಅದಕ್ಕೆ ದುಗ್ಗಾಣಿ ಬೆಲೆಯೂ ಇಲ್ಲ.
ನಾನಾರು ಗೊತ್ತೇ? ವಿನಷ್ಟಗೊಂಡ ಮಾನವ ಹೃದಯ. ಮನುಷ್ಯನ ಕ್ರೂರ ಆಣತಿಗಳ ಹೊಲಸು ನೆಲಮಾಳಿಗೆಯಲ್ಲಿ ಕೈದಿ. ಪಾಶವೀ ನೆಲದ ಅಧಿಕಾರ ಸರಪಳಿಗಳು ನನ್ನ ಕೈಕಾಲು ಕಟ್ಟಿ ಹಾಕಿವೆ. ನಾನು ಸತ್ತು ಹೋಗಿದ್ದೇನೆ. ಕೆಲೆತ ಉಲಿತಗಳಲ್ಲಿ ಉನ್ಮತ್ತರಾಗಿರುವ ಜನಮಂದಿ ನನ್ನನ್ನು ಮರೆತಿದ್ದಾರೆ. ಅವರ ನಾಲಗೆಗಳು ಸೀದು ಹೋಗಿವೆ, ಕಣ್ಣುಗಳು ಅಶ್ರು ಶೂನ್ಯವಾಗಿವೆ.