Showing posts with label ಚಕ್ರವರ್ತಿಗಳು. Show all posts
Showing posts with label ಚಕ್ರವರ್ತಿಗಳು. Show all posts

12 April 2018

ಮೂರು ಮೂರುಕಣ್ಣರ ಭೇಟಿ, ಮೊ.ಸೈಕಲ್ ಸರ್ಕೀಟಿನಲ್ಲಿ!


ಜಂಟಿ ಸೈಕಲ್ ಮಾರಿಹೋದ ಮೇಲೆ, ಒಂಟಿ ಸೈಕಲ್ಲೇರಿ ನಾ ಕಂಡ ಲೋಕದ ‘ಪ್ರಥಮಾನುಭವ ವರದಿ’ ದೇವಕಿಗೆ ಸಾಕಾಗುತ್ತಿರಲಿಲ್ಲ. ಅದನ್ನು ಸ್ವಲ್ಪ ತುಂಬಿಕೊಡುವಂತೆ ಕಳೆದ ವರ್ಷ (೭-೩-೨೦೧೭) ಇಂಥದ್ದೇ ಉರಿಬಿಸಿಲಿನಲ್ಲಿ ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ನಾವಿಬ್ಬರು ಮನೆಯಲ್ಲೇ ತಿಂಡಿ ಮುಗಿಸಿ ಮೋಟಾರ್ ಸೈಕಲ್ ಏರಿದೆವು. ತೊಕ್ಕೋಟು, ಕಿನ್ಯ ಅಡ್ಡ ರಸ್ತೆಗಾಗಿ ಮೊದಲ ಭೇಟಿ ಗೆಳೆಯ ಪ್ರಸನ್ನನ ಸಾವಯವ ಕೃಷಿಕ್ಷೇತ್ರ. ಇಲ್ಲಿಗೆ ಇದಕ್ಕೂ ಎರಡು ತಿಂಗಳ ಹಿಂದಿನ ನನ್ನೊಂದು ಸೈಕಲ್ ಸರ್ಕೀಟಿನ ಪೀಠಿಕೆ ಬೇಕಾಗುತ್ತದೆ: 

ಪ್ರಸನ್ನನ ಕುಟುಂಬ, ಕಿನ್ಯದ ಬಳಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಅನುಕೂಲಕ್ಕೊದಗಿತೆಂದು ಮೂರು ತುಂಡು ಕುರುಚಲು ಕಾಡುಗುಡ್ಡೆ ಕೊಂಡಿದ್ದರು (ಒಟ್ಟು ವಿಸ್ತೀರ್ಣ ಒಂದೆರಡು ಎಕ್ರೆಯಿರಬಹುದು). ನನ್ನ ಸಹಜ ಸಸ್ಯ ಪುನರುಜ್ಜೀವನದ ಪ್ರಯೋಗವನ್ನು (ಅಭಯಾರಣ್ಯದ್ದು) ಪ್ರಸನ್ನ ಅನುಸರಿಸಲೆಂದು ನಾನು ಒತ್ತಾಯ ಹೇರಿದ್ದಿತ್ತು. ಆದರೆ ಆಗ ಅವನ ಕುಟುಂಬ ಸಣ್ಣದಾಗಿ ಹಣಪ್ರಪಂಚದಲ್ಲಿ ಕೈಕಟ್ಟಿದ್ದಕ್ಕೆ, ಹಾಗೇ ಬಿಟ್ಟಿದ್ದರು. ಇದ್ದಕ್ಕಿದ್ದಂತೆ ಮೂರು ತಿಂಗಳ ಹಿಂದೊಮ್ಮೆ ಪ್ರಸನ್ನ "ಕಿನ್ಯದ ಜಮೀನಿನಲ್ಲಿ ಕೃಷಿ

04 September 2015

ಕರಿಗಿರಿಯ ಬಿಳಿಗಿರಿಗೆ

(ಚಕ್ರವರ್ತಿಗಳು – ೩೪)
[೨೦-೧೦-೧೯೭೪ರ ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ]

ಮೈಸೂರಿನಲ್ಲಿ ನನ್ನ ಮಹಾರಾಜ ಕಾಲೇಜಿನ ದಿನಗಳು ತೊಡಗುವ ಕಾಲಕ್ಕೆ ಅಲ್ಲಿನ ದಪಸಂ (ದಖ್ಖಣ ಪರ್ವತಾರೋಹಣ ಸಂಸ್ಥೆ), ಪರ್ಯಾಯವಾಗಿ ಸಾಹಸಿಯಾಗಿ ಬಹುಖ್ಯಾತರಾದ ವಿ.ಗೋವಿಂದರಾಜ್ ಪರಿಚಯವೂ ಆಗಿತ್ತು.
ನಮ್ಮ ಬಳಗ ವಾರಾಂತ್ಯದ ಶಿಲಾರೋಹಣ, ಚಾರಣ ಚಟುವಟಿಕೆಗಳಿಗೆ ಚಾಮುಂಡಿ ಬೆಟ್ಟದ (ಸುಮಾರು ಮೂರ್ನಾಲ್ಕು ಕಿಮೀ) ಕಿರಿದಂತರದಿಂದ ತೊಡಗಿ ಕರಿಘಟ್ಟ (೧೭ ಕಿಮೀ), ಪಾಂಡವಪುರದವರೆಗಿನ (೨೨ ಕಿಮೀ), ಹಿರಿದಂತರದ ದಾರಿ ಸವೆಸಿ, ಬಂಡೆ ಶಿಖರಗಳಿಗೆ ಬೆಳಿಗ್ಗೆ ಹೋಗಿ ಸಂಜೆಗೆ ಮರಳುತ್ತಿದ್ದೆವು.


ಬಂಡೆ, ಬೆಟ್ಟಗಳಲ್ಲಿ ನಮ್ಮ ಅಸಾಮಾನ್ಯ ಚಟುವಟಿಕೆಗಳೇನಿದ್ದರೂ ಹೋಗಿ ಬರುವ ಸಾಧನ ಮಾತ್ರ ಸೈಕಲ್ಲೇ. ಇಂದಿನ ಹಗುರ ಆದರೆ ದೃಢ ದೇಹಿ, ಅದರಲ್ಲೂ ವಿವಿಧ ವೇಗಗಳ ಸೌಕರ್ಯದ ಕಲ್ಪನೆಗಳೆಲ್ಲ ನಮ್ಮನ್ನು ಮುಟ್ಟಿಯೇ ಇರಲಿಲ್ಲ. ನಮ್ಮವೆಲ್ಲ ಫೋರ್ಕ್ ಮುರಿದರೆಂದು ಹೆಚ್ಚುವರಿ ತಿರುಚಿದ ಕಬ್ಬಿಣ ಸರಳಿನ ರಕ್ಷಣೆ, ಸಾರ್ವಕಾಲಿಕ ಮಡ್ಗಾರ್ಡ್, ಚಂದದ ಪೂರ್ಣ ಚೈನ್ ಕವರ್ರು, ಕ್ಯಾರಿಯರ್, ದೊಡ್ಡ ಸ್ಟ್ಯಾಂಡ್ ಮುಂತಾಗಿ ಸಕಲಾಲಂಕಾರವೂ ಕಬ್ಬಿಣದ ರಚನೆಗಳೇ. ಈ ಹೊರೆಯ ಮೇಲೆ ನಮ್ಮ ಮಧ್ಯಾಹ್ನದ ಬುತ್ತಿ, ನೀರು ಮತ್ತು ಪರ್ವತಾರೋಹಣ ಸಲಕರಣೆಗಳ ಹೊರೆಯೂ ಇರುತ್ತಿತ್ತು.

28 August 2015

ಪ್ರವಾಸೋದ್ಯಮ ಮತ್ತು ಮಾಧ್ಯಮ


(ಚಕ್ರವರ್ತಿಗಳು – ೩೩)

[ಪ್ರವಾಸ ಎಂದರೆ ಬದಲಾವಣೆ, ಬಿಡು ಸಮಯದ ಹವ್ಯಾಸ ಎಂದಿತ್ತು. ಇದು ೧೯೮೦ರ ಸುಮಾರಿಗೆ ಬಹುಶಕ್ತವಾದ ಉದ್ದಿಮೆಯಾಗಿ ವಿಕಾಸಗೊಂಡಿತ್ತು. ಆಗ ಬೆಂಗಳೂರಿನಲ್ಲಿ ಪ್ರವಾಸೋದ್ದಿಮೆಯನ್ನೇ ಉದ್ದೇಶಿಸಿ ಹುಟ್ಟಿಕೊಂಡ ಸ್ವಯಂಸೇವಾ ಸಂಸ್ಥೆ ಈಕ್ವೇಷನ್ಸ್. ಇದು ಅಧ್ಯಯನ, ಆರೋಗ್ಯಕರ ಪರ್ಯಾಯಗಳ ಸೂಚನೆ ಮತ್ತು ಅವನ್ನು ಪ್ರಜಾಸತ್ತಾತ್ಮಕವಾಗಿ ರೂಢಿಸುವಲ್ಲಿ ಒತ್ತಡಗಳನ್ನು ರೂಪಿಸುತ್ತಿತ್ತು. ಅದು ೧೯೮೯ರ ಆಗಸ್ಟ್ ೨೬ರಂದು ತೊಡಗಿದಂತೆ ಎರಡು ದಿನ ಬೆಂಗಳೂರಿನಲ್ಲೇ `ಪ್ರವಾಸೋದ್ಯಮ ಮತ್ತು ಮಾಧ್ಯಮ’ ಎಂಬೊಂದು ವಿಚಾರಕಮ್ಮಟ ನಡೆಸಿತು. ಅದಕ್ಕೆ ನನ್ನನ್ನು ಪರಿಚಯಿಸಿದವರು ಸುಧಾ ಪತ್ರಿಕೆಯ ಸಂಪಾದಕೀಯ ಬಳಗದ ಆನಂದ. (ಆನಂದರು ನನ್ನ ಪತ್ರಿಕಾ ಬರೆಹಗಳನ್ನು ಚಿಕಿತ್ಸಕವಾಗಿ ಗಮನಿಸಿದ್ದು ಬಿಟ್ಟರೆ ನನಗೆ ಅಪರಿಚಿತರು.) ಬೆಂಗಳೂರಿನ ಕಮ್ಮಟದಲ್ಲಿ ನಾನು ಮಂಡಿಸಿದ ಪ್ರಬಂಧದ ತುಸು ಪರಿಷ್ಕೃತ ರೂಪ ಇಲ್ಲಿದೆ. ನೆನಪಿರಲಿ, ಇದು ೧೯೮೯ರ ಪ್ರಬಂಧದ ತುಸು ಪರಿಷ್ಕೃತ ರೂಪ ಮಾತ್ರ]


22 May 2015

ಊಟಿಯಲ್ಲಿ ಮುಂದುವರಿದ ದೃಶ್ಯ ಲೂಟಿ!

(ಚಕ್ರವರ್ತಿಗಳು೩೨, ದಕ್ಷಿಣಾಪಥದಲ್ಲಿ… – )
ರಂಗನಾಥ ಸ್ತಂಭವನ್ನು ನಮ್ಮ ತಂಡ ಸಾಧಿಸಿದ ಧನ್ಯತೆಯಲ್ಲಿ ಕಳೆದು ಹೋಗಲಿಲ್ಲ. ಬಹುಶಃ ಕೋತಗೇರಿಯಲ್ಲಿ ಊಟ ಮುಗಿಸಿಕೊಂಡೆವು. ಅನಂತರ ಮನೆಯ ದಾರಿಯಲ್ಲಿ ವರ್ಮ ನಮ್ಮನ್ನು ಆತನ ಗೆಳೆಯನೋರ್ವನ ಚಾ ಕಾರ್ಖಾನೆಗೆ ಒಯ್ದರು.

ಸೊಪ್ಪು ಚೂರ್ಣವಾಗುವ ಕಥೆ:  ಚಾ ಸೊಪ್ಪು ಕೊಯ್ದ ಹದಿನೈದೇ ಮಿನಿಟುಗಳಲ್ಲಿ, ಪರಿಸರದ ಪ್ರಭಾವದಲ್ಲಿ ಬಾಡಲು ಅಥವಾ ಕೊಳೆಯಲು ತೊಡಗುತ್ತದಂತೆ. ಇದನ್ನು ನಿಯಂತ್ರಿಸಲು ಸೊಪ್ಪನ್ನು ಕಾರ್ಖಾನೆಗೆ ಮುಟ್ಟಿಸುವುದು ಅವಶ್ಯ. ಹಾಗಾಗಿ ಮೂವತ್ತು ನಲವತ್ತು ಕಿಮೀ ಉದ್ದಗಲಕ್ಕೆ ಹಬ್ಬಿದ್ದ ಮೂನಾರಿನಂಥ ಚಾ ತೋಟಗಳ ನಡುವೆ ಜಗತಿನಲ್ಲೇ ಅತಿ ದೊಡ್ಡದೂ (ಚಂದುವರೈ) ಸೇರಿದಂತೆ ಹಲವು ಚಾ ಕಾರ್ಖಾನೆಗಳಿವೆ, ಮತ್ತದು ಅನಿವಾರ್ಯ! ಮೂನಾರಿನಲ್ಲಿ ನಮಗೆ ಚಾ ಕಾರ್ಖಾನೆ ನೋಡಲು ಸಮಯಾವಕಾಶ ಸಿಗಲಿಲ್ಲವೆನ್ನುವ ಕೊರಗು ಇಲ್ಲಿ ಪೂರೈಸಿತು.

15 May 2015

ನೋಡಲು ಆರು ಓಡಲು ಅರುವತ್ತು

(ಚಕ್ರವರ್ತಿಗಳು೩೧, ದಕ್ಷಿಣಾಪಥದಲ್ಲಿ… – )

ಕೋಡಿ- ಪಳನಿ ರಸ್ತೆ ಉನ್ನತ ಪರ್ವತ ಶ್ರೇಣಿಯ ವಿಸ್ತಾರ ಮೈಯ್ಯ ಮೇಲೆ ಹರಿದಿದೆ. ಬೆಟ್ಟದ ಓರೆಯ ಬಾಳೇ ತೋಟ ಮಳೆಯಿಲ್ಲದೇ `ಮದದಾನೆ ಹೊಕ್ಕಂದದಲಿಹಾಳು ಸುರಿದಿತ್ತು. ಹೀಗಾಗಿ ದಾರಿ ತುಂಬ ಮುನ್ನೋಟಕ್ಕೆ ಒಡ್ಡಿಕೊಳ್ಳುತ್ತದೆ. ಇಳಿದಿಳಿದು ಸ್ವಲ್ಪ ಏರಿ ಬೆಟ್ಟ ಸಾಲುಗಳ ಮಗ್ಗಲು ಬದಲಿಸಿತು. ಈಗ ದೃಶ್ಯ ಬೇರೆ: ಬೆಟ್ಟದ ಬುಡ ಬಿಟ್ಟಲ್ಲಿಂದ ದಿಗಂತದವರೆಗೂ ಮಟ್ಟಸ ಭೂಮಿ. ಎಲ್ಲೋ ದೂರಕ್ಕೆ ಒಂದೊಂದು ಸಣ್ಣ ಕಲ್ಲು ಗುಡ್ಡಗಳುನುಣುಪು ಕದಪಿನ ಮೇಲೆ ಮೊಡವೆ ಬಿದ್ದಂತೆ. ಅವುಗಳಲ್ಲೇ ಸಮೀಪದ್ದೊಂದು ಅಂದರೆ ಕಣ್ಣಳವಿಯಲ್ಲಿ ಸುಮಾರು ಐದಾರು ಕಿಮೀ ದೂರದ್ದು ಪಳನಿ ಗುಡ್ಡೆ.


ಆದರೆ ದಾರಿ ಮಾತ್ರ ೩೮ ಕಿಮೀ ದೀರ್ಘ. ಹಾಗಾಗಿ ನಿಂತರೂ ಬೆಟ್ಟದೇಣುಗಳನ್ನು ಮುರಿಯುತ್ತ ಹೋದರೂ ದೃಶ್ಯ ಅದದೇ ಆಗಿ, ಉಳಿದದ್ದು ಪಳನಿ ನಾಮಜಪದೊಂದನೆ ಕಿಮೀ ಕಲ್ಲುಗಳೊಡನೆ ಸ್ಫರ್ಧೆಯೊಂದೇ. ಘಟ್ಟ ಇಳಿದಂತೆಲ್ಲ ಹವೆಯ ತಣ್ಪು ತಗ್ಗಿ ಬಿಸಿಯೇರುತ್ತಿತ್ತು. (ನಮ್ಮಲ್ಲಿನ ಮಡಿಕೇರಿಯಿಂದ ಸಂಪಾಜೆಗಿಳಿಯುವಾಗ, ಆಗುಂಬೆಯಿಂದ ಸೋಮೇಶ್ವರಕ್ಕಿಳಿಯುವಾಗ, ಕೊಟ್ಟಿಗೆಹಾರದಿಂದ ಚಾರ್ಮಾಡಿಗಿಳಿಯುವಾಗ... ಇತ್ಯಾದಿಗಳ ಹಾಗೇ.)  ಪಳನಿ ತಲಪಿದಾಗ ಸಂಜೆಯಾಗಿತ್ತು. ನಮ್ಮ ಅದೃಷ್ಟಕ್ಕೆ ಕಡಿಮೆ ದರದಲ್ಲೇ ಸುವಿಸ್ತಾರ ಕೋಣೆಯ ಒಳ್ಳೆ ಹೋಟೆಲ್ಲೇ ಸಿಕ್ಕಿತು. ಹಾಗೆಂದು ನಮ್ಮ ಪ್ರವಾಸೀ ಶಿಸ್ತಿನಲ್ಲಿ ವಿರಾಮ/ವಿಶ್ರಾಂತಿ ಎಂದೂ ಮುಂದಿನ ಪಙ್ಕ್ತಿಯಲ್ಲಿ ಬಂದದ್ದಿಲ್ಲ. ಗಂಟುಮೂಟೆ ಮತ್ತು ಬೈಕನ್ನೂ ಅಲ್ಲೇ ಬಿಟ್ಟು, ಊರಿನ ವಿಶೇಷ ನೋಡಲು ಹೊರಟೆವು.

24 April 2015

ಎರಡು ಮಾನಗಳ ಊರು – ಕೊಡೈಕೆನಾಲ್!

(ಚಕ್ರವರ್ತಿಗಳು೩೦, ದಕ್ಷಿಣಾಪಥದಲ್ಲಿ… – )

ಮರೆಯಬೇಡಿ, ಇದು ಸುಮಾರು ಮೂರು ದಶಕಗಳ ಹಿಂದಿನ ಅನುಭವಕಥನದ ವಿಸ್ತೃತ ರೂಪ. ಪ್ರವಾಸ ಯೋಜಿಸುವಾಗ ನನಗಿದ್ದ ಏಕೈಕ ಗಟ್ಟಿ ಆಕರ ಆಸ್ಟ್ರೇಲಿಯಾ ಪ್ರಕಾಶನ ಸಂಸ್ಥೆ ಲೋನ್ಲೀ ಪ್ಲಾನೆಟ್ ಅವರ ಪುಸ್ತಕ - ಇಂಡಿಯಾ ಟ್ರಾವೆಲ್ ಸರ್ವೈವಲ್ ಕಿಟ್!

(ಗಣಕ, ಉಪಗ್ರಹಗಳಾಧಾರಿತ ನಕ್ಷೆ ಗೊತ್ತೇ ಇರಲಿಲ್ಲ) ಯಾವುದೇ ನಕ್ಷೆ ನೋಡಿದರೂ ಮೂನಾರ್ ಮತ್ತು ಕೊಡೈಕೆನಾಲ್ ಒಂದೇ ಪರ್ವತ ಶ್ರೇಣಿಯ ಭಿನ್ನ ಸ್ಥಳಗಳೆಂದಷ್ಟೇ ಕಾಣುತ್ತಿತ್ತು. ಕೊಡೈಕೆನಾಲ್ ಮೂನಾರಿನಿಂದ ನೇರ ಉತ್ತರ-ಪೂರ್ವಕ್ಕಿದೆ ಎಂದು ಕಂಡರೂ ನಡುವೆ ದುರ್ಗಮ ಬೆಟ್ಟ, ಗೊಂಡಾರಣ್ಯ. ಜನಪ್ರಿಯ ಭಾರತೀಯ ನಕ್ಷೆಗಳೆಲ್ಲ ತೋರುವ ರಸ್ತೆ ಸಂಪರ್ಕ - ಮೂನಾರಿನಿಂದ ಮಧುರೈಯತ್ತ ಹೋಗುವ, ಅಂದರೆ ದಕ್ಷಿಣ-ಪೂರ್ವಕ್ಕೋಡುವ ಸಾರ್ವಜನಿಕ ಮತ್ತು ಬಳಸು ದಾರಿ. (ಸುಮಾರು ನೂರರವತ್ತು ಕಿಮೀ.) ಆದರೆ ಲೋನ್ಲೀ ಪ್ಲಾನೆಟ್ ಕೇವಲ ಎಪ್ಪತ್ತೈದು ಕಿಮೀ ಅಂತರದ ನೇರ, ಆದರೆ ಕಚ್ಚಾದಾರಿಯನ್ನು ತೋರಿಸಿತ್ತು. ನಾವು ಅದನ್ನೇ ನಂಬಿದ್ದೆವು. ಇದರ ಕುರಿತು ಮೂನಾರ್ ಚಾ ತೋಟದ ಮ್ಯಾನೇಜರ್ ಅಯ್ಯಮ್ಮನವರನ್ನು ವಿಚಾರಿಸಿದಾಗ ಖಚಿತ ಮಾಹಿತಿ ಸಿಕ್ಕಿತ್ತು. “ಹತ್ತಿರ ಮತ್ತು ಭಾರೀ ಏರಿಳಿತವೇನೂ ಇಲ್ಲದ ದಾರಿಯೇನೋ ಹೌದು. ಆದರೆ ಪಕ್ಕಾ ಕಾಡುದಾರಿಕೊರಕಲು ಬಿದ್ದಿರಬಹುದು, ಆನೆಗಳು ಎದುರಾಗಬಹುದು, ಎಲ್ಲಕ್ಕೂ ದೊಡ್ಡ ಕೊರತೆ ದಾರಿ ತೋರಲು, ಸಹಾಯಕ್ಕೊದಗಲು ಜನ ಸಿಕ್ಕುವುದೇ ಇಲ್ಲ. ನೆನಪಿರಲಿ, ಕವಲು ದಾರಿಗಳಲ್ಲಿ ಮಾರ್ಗಸೂಚಿಗಳಿಲ್ಲ.”

24 October 2014

ಗಿರಿಧಾಮ ಮೂನಾರ್

(ಚಕ್ರವರ್ತಿಗಳು – ೨೯, ದಕ್ಷಿಣಾಪಥದಲ್ಲಿ… – ೬)

ಮೂನಾರ್ ದಕ್ಷಿಣ  ಭಾರತದ ವಿರಳ ಪರಿಚಿತ ಗಿರಿಧಾಮವೆಂದೇ ನನ್ನ ಕಾಲೇಜು ದಿನಗಳಲ್ಲಿ ಯಾವುದೋ ಪತ್ರಿಕೆಯಲ್ಲಿ ಓದಿದ್ದೆ. ಅಣೈಮುಡಿ, ದಕ್ಷಿಣ ಭಾರತದಲ್ಲೇ ಅತ್ಯುನ್ನತ ಶಿಖರವೂ ಅಲ್ಲೇ ಇದೆ ಎಂಬ ಅಂಶ ನನ್ನನ್ನು ಮುಖ್ಯವಾಗಿ ಆಕರ್ಷಿಸಿತ್ತು. ಪತ್ರಿಕಾ ಕಛೇರಿಯಿಂದ ಅದರ ಲೇಖಕರ ವಿಳಾಸ ಪಡೆದು ಹೆಚ್ಚಿನ ವಿವರ ಕೋರಿ ಪತ್ರಿಸಿದ್ದೆ. ಆ ಹಿರಿಯರು (ನನ್ನ ನೆನಪು ಸರಿಯಾದರೆ – ರಾಮಕೃಷ್ಣನ್ ಎಂದವರ ಹೆಸರು), ಅಪ್ಪಟ ಮಲೆಯಾಳಿಯಾದರೂ ಕನ್ನಡಿತಿ ಹೆಂಡತಿಯ ಸಹಾಯದಿಂದ ನನ್ನ ಪತ್ರ ಓದಿಸಿಕೊಂಡು, ಮಾರ್ಗ ಮಾಹಿತಿಗಳ ಕುರಿತು ನನಗೆ ಇಂಗ್ಲಿಷಿನಲ್ಲಿ ಉತ್ತರ ಬರೆದಿದ್ದರು. ಪ್ರಸ್ತುತ ಪ್ರವಾಸ ಯೋಚಿಸಿದಾಗ ನನ್ನ ಆದ್ಯತೆಯ ಪಟ್ಟಿಯಲ್ಲಿ ದೊಡ್ಡ ಹೆಸರು – ಮೂನಾರ್ ಮತ್ತು ಅಣೈಮುಡಿ. ಈ ಕಾಲಕ್ಕೆ ಕಾಲಧರ್ಮದಲ್ಲಿ ಅಣೈಮುಡಿ ಒಂದು ವನಧಾಮದ ಭಾಗವಾಗಿತ್ತು. ಹಾಗಾಗಿ ಆ ಶಿಖರ ಸಾಧನೆಗೆ ನಾನು ವನ್ಯ ಸಂಶೋಧಕ ಗೆಳೆಯ ಉಲ್ಲಾಸ ಕಾರಂತರ ಸಹಾಯ ಕೋರಿದೆ. ಅವರು ಮೂನಾರಿನ ಗೆಳೆಯ ಅಯ್ಯಮ್ಮರನ್ನು ಪರಿಚಯಿಸಿದ್ದರು. ಅಯ್ಯಮ್ಮರೊಡನೆ ಬೆಳೆದ ಪತ್ರವ್ಯವಹಾರದ ಫಲವಾಗಿ ನಾವಂದು ಅಪರಾಹ್ನ ಎರಡು ಗಂಟೆಯ ಸುಮಾರಿಗೆ, ನಿಶ್ಚಿಂತೆಯಿಂದ ಮೂನಾರ್ ಪ್ರವೇಶಿಸಿದ್ದೆವು.

12 September 2014

ಪಿರಮಿಡ್ಡಿನ ಉಣ್ಣೆ ಕೋಟು ಕಳೆದು ತೇಕಡಿ

(ಚಕ್ರವರ್ತಿಗಳು – ೨೮, ದಕ್ಷಿಣಾಪಥದಲ್ಲಿ... – ೫)

ಚಾಲಕ್ಕಾಯಂನಿಂದ ವಾಪಾಸು ಹೊರಟವರಿಗೆ ಮುಂದಿನ ಗುರಿ – ಕುಮಲಿ, ಬೇಗ ಸೇರುವ ತವಕ. ಹಾಗಾಗಿ ಪ್ಲಪಳ್ಳಿಯಿಂದ ಒಳದಾರಿ ಹಿಡಿದೆವು. ಆದರೆ ಎರಡು ಕಿಮೀ ಹೋಗುವಾಗಲೇ ಮುಂದಿನ ಸುಮಾರು ೭೦-೮೦ ಕಿಮೀ ದೀರ್ಘ ದಾರಿಯ ದುಃಸ್ಥಿತಿಯ ಅಂದಾಜಾಗಿ ಪ್ಲಪಳ್ಳಿಗೇ ಮರಳಿದೆವು. ಮತ್ತೆ ಹಳೇ ದಾರಿಯಲ್ಲೇ ರಾಣ್ಣಿ. ಅಲ್ಲಿ ಹೋಟೆಲ್ ಊಟ. ಪಂಟಿ ಬಿರಿಯ (ಹೊಟ್ಟೆ ಒಡೆಯುವಷ್ಟು) ಉಂಡವರಿಗೆ ಕೂಡಲೇ ಉರಿಬಿಸಿಲಿನಲ್ಲಿ ದಾರಿಗಿಳಿಯಲು ಮನಸ್ಸೇ ಬರಲಿಲ್ಲ. ಆದರೆ ಪೇಟೆ ಬಿಟ್ಟದ್ದೇ ಸಿಕ್ಕ ರಬ್ಬರ್ ತೋಟದ ನೆರಳು ತುಸು ಸಮಾಧಾನಿಸಿತು. ಮಣಿಮಾಲಾದಿಂದ ಸ್ವಲ್ಪ ಮುಂದೆ ಒಳದಾರಿಯೊಂದನ್ನು ಹಿಡಿದು ಕೊಟ್ಟಾಯಂ ಮಧುರೆ ಹೆದ್ದಾರಿ ತಲಪಿದೆವು. ಮುಂದೆ ಒಳ್ಳೆಯ ಘಟ್ಟ ದಾರಿ.

ಎಡಕ್ಕೆ ವಿಸ್ತಾರ ಕಣಿವೆ. ಅದರ ಆಳಕ್ಕೂ ಎತ್ತರಕ್ಕು ವಿಸ್ತಾರಕ್ಕು ಜನ ಛಲದಲ್ಲೇ ಕೃಷಿ ರೂಢಿಸಿದಂತಿತ್ತು. ಒಂದೇ ಸಮನೆ ಘಟ್ಟ ಏರುತ್ತಾ ದಿಗಂತವನ್ನೇ ಹಿಂತಳ್ಳಿದ, ಕೊಳ್ಳದ ಆಳವನ್ನೇ ಹೆಚ್ಚಿಸಿದ ಹಮ್ಮು ನಮ್ಮದು. ದಾರಿ ಬೆಟ್ಟ ಸಾಲಿನ ಮಗ್ಗಲು ಬದಲಿಸಿತು. ಈಗ ಸಣ್ಣಪುಟ್ಟ ಬೋಳು ಗುಡ್ಡೆಗಳ ಸರದಿ. ಅವುಗಳ ನಡುವಣ ಓಟ ಲಕ್ಷ್ಯದ ಹೊರೆಯನ್ನಾಗಲೀ ಮಾರ್ಗಾಯಾಸವನ್ನಾಗಲೀ ಹೇರದೆ ಉಲ್ಲಾಸದಾಯಕವಾಗಿತ್ತು. ಇಲ್ಲೊಂದು ದೊಡ್ಡೂರು – ಪಿರಮಿಡ್.

13 June 2014

ಶಬರಿಮಲೆಯಲ್ಲಿ ಕಂಡ `ಬೆಳಕು’

(ಚಕ್ರವರ್ತಿಗಳು ಸುತ್ತು ಇಪ್ಪತ್ತೇಳು)
ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ನಾಲ್ಕು

ಪಂಬಾ ನದೀ ತೀರೇ, ಚಾಲಕ್ಕಾಯಮ್ – ಶಬರಿಮಲೈ ಕುರಿತು ಹೋಗುವ ಯಾವುದೇ ವಾಹನಕ್ಕೂ ಕೊನೆಯ ನಿಲ್ದಾಣ. ನಮ್ಮ ನಿರೀಕ್ಷೆಗೆ ಮೀರಿ ಸಾರ್ವಕಾಲಿಕ ಬಳಕೆಗೆ ಸುಸಜ್ಜಿತವಿತ್ತು. ಆದರೆ ಅಯ್ಯಪ್ಪಸ್ವಾಮಿ ಸಾರ್ವಕಾಲಿಕ ದರ್ಶನ ಕೊಡುವ ದೇವನಲ್ಲವಾದ್ದರಿಂದ ಅನ್ಯ ಕ್ಷೇತ್ರಗಳಂತೆ ಇಲ್ಲಿ ಬಹುಶಃ ಶುದ್ಧ ವ್ಯಾಪಾರ ಸೋಲುತ್ತದೆ. ಹಾಗಾಗಿ ಪೆಟ್ರೋಲ್ ಬಂಕ್, ಅಂಚೆತಂತಿ ವ್ಯವಸ್ಥೆಗಳೂ  ಅಯ್ಯಪ್ಪ-ಋತುಗಳಲ್ಲಿ ಮಾತ್ರ ಕೆಲಸ ಮಾಡುತ್ತವೆ. ಅಂಗಡಿ ಹೋಟೆಲುಗಳಂತೂ ತತ್ಕಾಲೀನ ರಚನೆಗಳಲ್ಲೇ ನಿಂತು, ಉಳಿದಂತೆ ಗಂಟುಮೂಟೆ ಕಟ್ಟುತ್ತವೆ! ಕುಡಿಯುವ ನೀರು, ವಿದ್ಯುಚ್ಛಕ್ತಿ, ದೇವಸ್ವಂ ಇಲಾಖೆಯ ಅಭಿವೃದ್ಧಿ ವ್ಯವಸ್ಥೆಗಳಷ್ಟೇ ಸಾರ್ವಕಾಲಿಕ.



06 June 2014

ಕಾಲಡಿ...? ಶಬರಿ!

(ಚಕ್ರವರ್ತಿಗಳು ಸುತ್ತು ಇಪ್ಪತ್ತಾರು)
ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ಮೂರು

ಶಾಲೆ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಎನ್ನುವ ಒಂದು ಪಠ್ಯೇತರ ಚಟುವಟಿಕೆ ಎಷ್ಟೋ ಬಾರಿ ಸಂಘಟಕರ (ಹೆಚ್ಚಾಗಿ ಅಧ್ಯಾಪಕರು) ದೌರ್ಬಲ್ಯದ ಮೇಲೆ ಕೇವಲ ತೀರ್ಥಯಾತ್ರೆಯಾಗುವ ದುರವಸ್ಥೆಯನ್ನು ನಾನು ತಿಳಿದಿದ್ದೇನೆ. (ಮಂಗಳೂರು ವಿವಿನಿಲಯದ ಸ್ನಾತಕೋತ್ತರ ಸಂಶೋಧನೆಯ ಕ್ಷೇತ್ರಾಧ್ಯಯನದ್ದೇ ಅಂಥಾ ಒಂದು ಉದಾಹರಣೆಯನ್ನು ಇಲ್ಲಿ ನೋಡಬಹುದು.) ಮತ್ತೆ ಸಾರ್ವಜನಿಕ ಸಾಂಪ್ರದಾಯಿಕ ಪ್ರವಾಸಯೋಜನೆಗಳಲ್ಲಂತೂ ತೀರ್ಥಕ್ಷೇತ್ರಗಳದ್ದು ಸಿಂಹಪಾಲೇ ಇರುತ್ತದೆ. ದಾರಿಯಲ್ಲಿ ಅಯಾಚಿತವಾಗಿ ಸಿಗಬಹುದಾದ ಇತರ ಆಕರ್ಷಣೆಗಳನ್ನು ಅಂಥವರು ಸೇರಿಸಿಕೊಂಡರೂ ಕಾಲಮಿತಿ ತುಂಬಾ ಬಿಗಿಯಿರುತ್ತದೆ. ಆದರೆ ನನ್ನ ಪ್ರವಾಸೀ ಲಕ್ಷ್ಯವಾದರೋ ಪ್ರಾಕೃತಿಕ ಮತ್ತು ಐತಿಹಾಸಿಕ ವೈಶಿಷ್ಟ್ಯಗಳು. ಅಯಾಚಿತವಾಗಿ ಮಾರ್ಗಕ್ರಮಣದಲ್ಲಿ ಒದಗುವ ಭಾರೀ ಪೇಟೆ, ಪುಣ್ಯಕ್ಷೇತ್ರಗಳಿಗೆ ಯಾವ ಪೂರ್ವಾಗ್ರಹಗಳನ್ನಿಟ್ಟುಕೊಳ್ಳದೇ ಭೇಟಿ ಕೊಡುತ್ತೇನಾದರೂ ಸಂಗ್ರಹಿಸುವುದು ಮನುಷ್ಯ ಸಂಬಂಧಗಳನ್ನು ಮಾತ್ರ. (ಇಲ್ಲೇ ಹಿಂದಿನ ಕಂತಿನಲ್ಲಿನ ಗುರುವಾಯೂರು ಭೇಟಿಯನ್ನು ಗಮನಿಸಬಹುದು) ಆ ನಿಟ್ಟಿನಲ್ಲಿ ಬಿಟ್ಟ ಮೇಲೆ ನಾವು ಹಾದು ಹೋಗುವ ಸ್ಥಳ ಕಾಲಡಿ – ಶಂಕರಾಚಾರ್ಯರ ಜನ್ಮ ಸ್ಥಳ.

16 May 2014

ಕಣ್ಣಾನೂರು ಕೋಟೆ – ಒಂದು ಸ್ಮಾರಕ

(ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ಎರಡು)
ಸುತ್ತು ಇಪ್ಪತ್ತೈದು
ಪಾಶ್ಚಾತ್ಯರು ವ್ಯಾಪಾರೀ ಸೋಗಿನಲ್ಲಿ ಭಾರತಕ್ಕೆ ಒಂದು ಹೂಡಿದ ಮೊದಲ ಬಿಡಾರಗಳಲ್ಲಿ ಕಣ್ಣಾನೂರು ಅಥವಾ ಕಣ್ಣೂರು ಕೋಟೆ ಬಲು ಮುಖ್ಯವಂತೆ. ಹದಿನಾರನೇ ಶತಮಾನದ ಇದು ಪೋರ್ಚುಗೀಸರ ರಚನೆ. ಎತ್ತರದ ಭವ್ಯಗೋಡೆ, ಮೇಲೆ ಹೂಡಿದ ಫಿರಂಗಿಗಳು, ವಿಸ್ತಾರ ಕಂದಕ, ಅದರಲ್ಲಿ ಸಮುದ್ರದ ನೀರು ಹಿಡಿದಿಡುವ ವ್ಯವಸ್ಥೆ, ಕಮಾನುಗಳಲ್ಲೇ ರಚಿಸಲ್ಪಟ್ಟ ವಾಸಯೋಗ್ಯ ಜಗಲಿಗಳು, ಗುಪ್ತ ದ್ವಾರಗಳು ದರ್ಶನಯೋಗ್ಯವಾಗಿ ಉಳಿದಿವೆ. ಆದರೇನು ನಮ್ಮ ಹೆಚ್ಚಿನ ಸ್ಮಾರಕಗಳಂತೆ ಇವೂ ಮುಖ್ಯ ಜನವಾಹಿನಿಯಿಂದ ದೂರ ಸರಿದಿವೆ. ಇನ್ನೊಂದು ಬದಿಯಿಂದ ಕಡಲ ಕೊರೆತವೂ ಕೋಟೆಯನ್ನು ಕಬಳಿಸುತ್ತಿದೆ. ಅಧಿಕೃತ ಇಲಾಖೆ ಕೋಟೆಯ ಭದ್ರ ಮೂಲೆಯೊಂದರಲ್ಲಿ ಇತಿಹಾಸ ಪ್ರಜ್ಞೆ ಹೂತು, ಆಧುನಿಕ ಬಂಗ್ಲೆ ರಚಿಸಿ, ರಾಷ್ಟ್ರೀಯ ಸ್ಮಾರಕದ ರಕ್ಷಣೆಗೆ ಸಜ್ಜಾಗಿ, ಸುಸ್ತಾಗಿ, ಬೀಗ ಜಡಿದಾಗಿತ್ತು, ಅದಕ್ಕೂ ತುಕ್ಕುಹಿಡಿದುಹೋಗಿತ್ತು! 

09 May 2014

ದಕ್ಷಿಣಾಪಥದ ಚಕ್ರವರ್ತಿಗಳು

ಸುತ್ತು ಇಪ್ಪತ್ತ್ನಾಲ್ಕು
[ಚಲಿಸದ ಕತ್ತಿ ಕೊಯ್ಯುವುದಿಲ್ಲ, ಚಲಿಸುವ ಬೆಂಕಿ ಸುಡುವುದಿಲ್ಲ - ಇದು ಕತ್ತಿ ಅಲಗಿನ ಮೇಲೆ ನಿಲ್ಲುವವರ ಮತ್ತು ಕೊಂಡ ಹಾಯುವವರ `ದೈವಿಕ ಸಿದ್ಧಿ.' ಅಂತೆಯೇ ಕಳಕ್ಕೆ ಇಳಿಯದ, ಇಳಿದು ನಡೆಯದ, ನಡೆದು ಎಡವದ, ಎಡವಿ ಬಿದ್ದು ಎದ್ದು ಗುರಿಯೆಡೆಗೆ ಸಾಗದ `ಸಾಹಸಿ' ಪದಧ್ವಂಸಿಯಾಗುತ್ತಾನೆ. ವಾಸ್ತವ ಸಾಹಸಿಯಾದರೋ ಪದಗಳಿಗೆ ಹೊಸ ಆಯಾಮವೀಯುವ ಸಾಹಿತಿಯೇ ಆಗುತ್ತಾನೆ. - ಜಿಟಿನಾ ಸಂಪಾದಕೀಯ ಟಿಪ್ಪಣಿ]
`ಸಾಹಸ ಒಂದು ದೃಷ್ಟಿಕೋನ. ಇದು ಅತಿಮಾನುಷ ಆಗಬೇಕೆಂದಿಲ್ಲ(ನೋಡಿ: ಸಾಹಸ ಎಂದರೇನು?) ಎಂಬ ವಿಚಾರದ ಮುಂದುವರಿಕೆಯಾಗಿಯೇ ಅರಳಿತು `ಆರೋಹಣ' ಹತ್ತು ದಿನಗಳ, ಆರು ಮಂದಿಗಳ, ಮೂರು (ಎಲ್ಲ ಯೆಜ್ದಿ) ಬೈಕುಗಳ ಯಾನ. ವಾರಾಂತ್ಯಗಳಲ್ಲಿ, ಸಾರ್ವಜನಿಕ ರಜಾ ದಿನಗಳಲ್ಲಷ್ಟೇ ಅಂಗಡಿ ಮುಚ್ಚಿ ಹವ್ಯಾಸಗಳನ್ನು ಹಮ್ಮಿಕೊಳ್ಳುತ್ತಿದ್ದ ನಾನು, ಹೆಂಡತಿ ಸಮೇತನಾಗಿ ಅದೇ ಮೊದಲು ಅಂಗಡಿಯನ್ನು ತಂದೆ ಜಿಟಿ ನಾರಾಯಣ ರಾಯರಿಗೂ ಮನೆಯನ್ನು ತಾಯಿ ಲಕ್ಷ್ಮೀ ದೇವಿಗೂ ಮೂರು ವರ್ಷದ ಮಗ ಅಭಯನನ್ನು ಅಜ್ಜನ ಮನೆ ಕೊಂದಲಕಾನಕ್ಕೂ ವಹಿಸಿಕೊಟ್ಟು ಬಿಡುವು ಮಾಡಿಕೊಂಡಿದ್ದೆವು. ಅರವಿಂದ ರಾವ್ ತನ್ನ ಅಂಶಕಾಲಿಕ ವೃತ್ತಿ ಕೊಳಚೆ ಜಲಮಂಡಲಿಯ ಪ್ರಯೋಗಾಲಯ ತಜ್ಞತೆಗೇನೋ ರಜೆ ಹಾಕಬಹುದಿತ್ತು. ಆದರೆ ಇನ್ನೂ ಪ್ರಾಥಮಿಕ ಹಂತದಲ್ಲಿ ವಿಕಸಿಸುತ್ತಿದ್ದ ಅವರ ಸ್ವೋದ್ಯೋಗ ಕಮಲಜೀತ್ ಪ್ರಯೋಗಾಲಯ ಸೇವೆಗಳನ್ನು ಹತ್ತು ಹನ್ನೊಂದು ದಿನಕ್ಕೆ ತ್ಯಜಿಸಿ ಹೊರಡುವುದು ಸಣ್ಣ ಮಾತಾಗಿರಲಿಲ್ಲ; ಆದರೂ ಹೊರಟಿದ್ದರು. ಅವರ ಸಹವಾರ ಬಾಲಕೃಷ್ಣ ಮಜ್ಗಾಂ ಡಾಕ್ ನೌಕರ, ರಜಾರ್ಜಿ ಎಸೆದು ಸೊಂಟಪಟ್ಟಿ ಬಿಗಿ ಮಾಡಿದ್ದರು. ಭಾರೀ ಜಮೀನ್ದಾರರ ಮುದ್ದಿನ ಮಗ, ವೃತ್ತಿ-ಹವ್ಯಾಸಗಳ ತುರ್ತು-ಬಿಡುವುಗಳ ಒತ್ತಡವೇನೂ ಇಲ್ಲದ ಅರುಣ್ ನಾಯಕ್ ಎಲ್ಲ ನೀವು ಹೇಳಿದ ಹಾಗೇ ಅಶೋಕ್ ಎಂದು ಕಣ್ಣುಮುಚ್ಚಿ ಹಿಂಬಾಲಿಸಲು ಸಜ್ಜಾಗಿ ತಂಡಾ ಸೇರಿದ್ದರು. ನನಗೆ ಅಷ್ಟಾಗಿ ಪರಿಚಿತರಲ್ಲದ ಅವರ ಆಪ್ತ ಮಿತ್ರ ಆಲ್ವಿನ್ ಕೂಡಾ ಅದೇ ಮನೋಭಾವದಲ್ಲೇ ಅರುಣ್ `ಬೆಂಗಾವಲಿಗೆ ಸೇರಿಕೊಂಡಿದ್ದರು. [ನಮ್ಮನ್ನುಳಿದು ನಾಲ್ವರೂ ಅವಿವಾಹಿತರೇ.]

25 April 2014

ಕೊಡಚಾದ್ರಿ ಭಟ್ಟರು, ನಿಟ್ಟುಸಿರೂರು

ಚಕ್ರವರ್ತಿಗಳು - ಸುತ್ತು ಇಪ್ಪತ್ಮೂರು

ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ ಭಾಗ ೫


“ನಿಮ್ಮನ್ನೆಲ್ಲೋ ಕಂಡ ಹಾಗಿದೆಯಲ್ಲಾ” ಎಂಬ ದೇಶಾವರಿ ಪಾತಾಳಗರಡಿ ಬಿಟ್ಟು ನಿಮ್ಮ ಪ್ರವರ ಬಿಚ್ಚಿಸುವಲ್ಲಿ ನಿಸ್ಸೀಮ ಪರಮೇಶ್ವರ ಭಟ್ಟರು - ನಮ್ಮ ಆತಿಥೇಯರು! ವಾಸ್ತವದಲ್ಲಿ ನಾಗೋಡಿ ಕೊಲ್ಲೂರಿಗೂ ಆಚೆ ಭಟ್ಟರು ಹೋದವರೇ ಅಲ್ಲ. ಮತ್ತೆ ನೀವು, ನಿಮ್ಮ ಮನೆ ಹಿತ್ತಲಿಂದಾಚೆಗೆ ಸುತ್ತಿದವರೂ ಆಗಬೇಕಿಲ್ಲ. ಆದರೂ ಅಂಬಾವನ ಹೊಕ್ಕು ಎದ್ದವರಿಗೆ, ಕೊಡಚಾದ್ರಿ ನೆತ್ತಿ ಮೆಟ್ಟಿದವರಿಗೆ ಪರಮೇಶ್ವರ ಭಟ್ಟರ ಬಾದರಾಯಣ ಸಂಬಂಧ ಗ್ಯಾರಂಟಿ. ಬೆಟ್ಟಕ್ಕೆ ಬಂದವರಿಗೆ ಊಟಕ್ಕೆ ವಾಸಕ್ಕೆ ಇವರ ಮನೆ ಸದಾ ಮುಕ್ತ. ಇವರು ಕಾಫಿ ಎಂದು ಬಿಸಿ ನೀರೇ ಕೊಟ್ಟರೂ ಸಕ್ಕರೆ ಕಡಿಮೆಯಾಯ್ತೇ ಎಂದು ಆತಂಕಿಸುತ್ತಾರೆ. ಊಟಕ್ಕೆ ಕುಳಿತವರು ತಿಳಿದೋ ತಿಳಿಯದೆಯೋ ಮೊಸರೂ ಎಂದು ಬೊಬ್ಬಿಟ್ಟರೆ ನೀನೀರು ಮಜ್ಜಿಗೆ ಕೊಟ್ಟರೂ ಪಂಚ ಭಕ್ಷ್ಯ ಪರಮಾನ್ನ ಉಣಿಸಿದಂತೆ ಕಾಣಿಸಿಯಾರು. ಭಟ್ಟರ ಆರ್ಥಿಕ ಬಿಕ್ಕಟ್ಟು, ಬೆಟ್ಟದ ಇಕ್ಕಟ್ಟು ಮತ್ತು ಹವಾಮಾನದ ಚೌಕಟ್ಟಿನಲ್ಲಿ ಆ ಮನೆ ಅಲ್ಲಿನವರಿಗೇ ಕಿಷ್ಕಿಂಧೆ. ಆದರೂ ರಾತ್ರಿಯಲ್ಲಿ ಬಂದಷ್ಟೂ ಜನಗಳಿಗೆ, ಮನೆಯೊಳಗೆ ಕಾಲು ಚಾಚಲು ಎಡೆ ಇದ್ದಲ್ಲೆಲ್ಲಾ ಚಾಪೆ, ಕಂಬಳಿ ಕೊಟ್ಟು “ಸಂಕೋಚ ಮಾಡಿಕೊಳ್ಳಬೇಡಿ” ಎನ್ನುವುದೂ ಇವರ ನಿರ್ವಹಣಾ ಶಾಸ್ತ್ರದ ಗರಿಷ್ಠ ಸಿದ್ಧಿ! ಊಟಕ್ಕೆ ಮೊದಲು ಗುಡಿಯಲ್ಲಿ ಪೂಜೆ, ನೈವೇದ್ಯ, ಪ್ರಸಾದ, ಆರತಿ ತಟ್ಟೆಗಳ ಮೂಲಕ ಯಾತ್ರಿಗಳಿಗೆ ಕ್ಷೇತ್ರ ಭಾವದ ಮಾನಸಿಕ ಹದಕೊಡುತ್ತಾರೆ. ನಾವು ಉಪಯೋಗಿಸಿದ ತಟ್ಟೆ ಲೋಟಗಳನ್ನು ನಮ್ಮಲ್ಲೇ ತೊಳೆಸಿ ಸೇವಾಭಾವ’ವನ್ನೂ ಜಾಗೃತಗೊಳಿಸುತ್ತಾರೆ. ಆದರೂ ಅವರ ಊಟೋಪಚಾರಗಳು ಉಚಿತವೆಂದು ಯಾರೂ ಭಾವಿಸುವುದಿಲ್ಲ. ಭಟ್ಟರೇ ಹೇಳುವಂತೆ ತಲೆತಲಾಂತರದಿಂದ ಕೊಡಚಾದ್ರಿ ಅಮ್ಮನ ಮತ್ತು ಭಕ್ತರ ಸೇವೆಯೇ ಇವರ ಕುಟುಂಬ ವೃತ್ತಿ ಮತ್ತು ಜೀವನ.

14 March 2014

ಸರ್ವಜ್ಞಪೀಠದಲ್ಲಿ...

ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ - ನಾಲ್ಕು
ಚಕ್ರವರ್ತಿಗಳು - ಸುತ್ತು ಹದಿನೇಳು

ಕಲ್ಲು ಚೂರುಗಳ ಮೇಲಿನ ಉರುಡು, ಹಾವಂದಾರಿಯ  ಸವಾರಿಸುಖ - ಅನುಭವಿಸಿದವನೇ ಬಲ್ಲ ಬೆಲ್ಲದ ಸವಿ!! ಸಡಿಲ ಕಲ್ಲುಗಳು ಮಗುಚಿದವು, ಪುಟ್ಟ ಕಲ್ಲುಗಳು ಆಚೀಚೆ ಸಿಡಿದು ಸರಿದು ಸಂದುಳಿಸಿ ಅಸ್ಥಿರತೆಯುಂಟು ಮಾಡಿ ಚಕ್ರ ನೆಲ ಕಚ್ಚಿ ಸವಾರಿಗಳು ಅಸ್ಥಿರವಾದುವು. ಕಲ್ಲು ಹಾಸಿನ ಹೊರ ಅಂಚಿನಲ್ಲಿ ಬಹುತೇಕ ಉಳಿಯದ ಹಸನಾದ ನೆಲವನ್ನು ಹುಡುಕಿ ಬಲು ನಿಧಾನಗತಿಯಷ್ಟೇ ಸಾಧ್ಯವಾಯ್ತು. ಕೆಲವೆಡೆಗಳಲ್ಲಿ ಚಕ್ರಕ್ಕಾಗುವ ಆಘಾತವನ್ನೂ ಪರಿಗಣಿಸಿ ಸಹವಾರರನ್ನು ಚಾರಣ ಸಾಹಸಕ್ಕಿಳಿಸಿ ಸವಾರರು ಸವಾರಿ ಸಾಹಸವನ್ನು ನಡೆಸಬೇಕಾಯ್ತು! ಇಲ್ಲಿ ನಿಧಾನವೇ ಪ್ರಧಾನ, ಅವಸರ ಸಲ್ಲ. ಹೆಚ್ಚೆಂದರೆ ಒಂದೆರಡು ಚಕ್ರಗಳು ಪಂಚೇರ್ ಆಗಬಹುದಿತ್ತು. ಆದರೆ ನಾವು ಚಕ್ರ ಮತ್ತು ಟ್ಯೂಬ್ ಕಳಚುವ ಕಲೆ, ಹೆಚ್ಚುವರಿ ಟ್ಯೂಬ್, ತೇಪೆ ಸಾಮಗ್ರಿ ಸಜ್ಜಿತರೇ ಇದ್ದುದರಿಂದ ನಿರಾತಂಕರಿದ್ದೆವು. ವೇಳೆ ಅಪರಾಹ್ನದ ಮೂರು ಗಂಟೆಯಾದ್ದರಿಂದ ಕಾಲವೂ ನಮ್ಮ ಪಕ್ಷದಲ್ಲೇ ಇತ್ತು. ಮುಳ್ಳೆದ್ದ ದಾರಿಯ ಮೇಲೆ ಸುಮಾರು ಮೂರು ಕಿಮೀ ಗಡಬಡಿಸಿದ ಮೇಲೆ ತುಸು ವಿರಮಿಸಿದೆವು. ಅಲ್ಲಿ ಬಲದಿಂದೊಂದು ಹೆಚ್ಚು ಬಳಕೆಯ ದಾರಿ - ಕೊಲ್ಲೂರು ಬದಿಯಿಂದ ಶಿಖರಗಾಮಿ ವಾಹನಗಳು ಅನುಸರಿಸುವ ನಿಟ್ಟೂರು ದಾರಿ, ನಮ್ಮದನ್ನು ಕೂಡಿತ್ತು. ನಾವು ನಿಟ್ಟೂರ ಒಳದಾರಿಯನ್ನು ಮಾರಣೇ ದಿನದ ಮರು-ಯಾನಕ್ಕೆ ಮನದಲ್ಲೇ ಗುರುತು ಮಾಡಿಕೊಂಡೆವು. (ಸಂಪೆಕಟ್ಟೆ ಮುರ್ಕಾಯಿಯಲ್ಲಿ ಅಂದು ನಾವು ಅನುಸರಿಸಿದ ಎಡ ಕವಲನ್ನು ಅವಗಣಿಸಿದರೆ ನಿಟ್ಟೂರು ಎಂಟೂವರೆ ಕಿಮೀ ಮಾತ್ರ. ವಾಸ್ತವದಲ್ಲಿ ಆ ದಿನಗಳಲ್ಲಿ ಶೃಂಗೇರಿ (ಹೊಸನಗರ) - ಕೊಲ್ಲೂರ ಯಾತ್ರಿಗಳ ರಾಜಮಾರ್ಗದಲ್ಲಿ ಕೊಡಚಾದ್ರಿಗೆ ಕವಲು ಮತ್ತು ಲಕ್ಷ್ಯ ಬಹುಮಾನ್ಯವಾಗಿರಲೇ ಇಲ್ಲ.)

07 February 2014

ಕುಂದಾದ್ರಿ

ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ - ಮೂರು
ಚಕ್ರವರ್ತಿಗಳು - ಸುತ್ತು ಹದಿನಾರು

ಆಗುಂಬೆ - ದಕ್ಷಿಣ ಭಾರತದ ಚಿರಾಪುಂಜಿ, ಎನ್ನುವುದೀಗ ಸವಕಲು ನಾಣ್ಯವೇ ಇರಬಹುದು. ಆದರೆ ಮಳೆಗದು ಗೊತ್ತಿಲ್ಲದೇ ದಾಖಲೆ ಪುಸ್ತಕದ ಹೊಸ ನಮೂದಿಗೆ ಹೋರುತ್ತಿದ್ದಂತಿತ್ತು. ಆಗುಂಬೆ ವಲಯ ಪ್ರವೇಶಿಸುತ್ತಿದ್ದ ನಮ್ಮ ಬೈಕ್ ಸೈನ್ಯವನ್ನು ಮಳೆ ನಿರ್ದಾಕ್ಷಿಣ್ಯವಾಗಿ (ದಾಕ್ಷಿಣ್ಯರಹಿತ ನೀರು?) ಸ್ವಾಗತಿಸಿತು. ಆಗುಂಬೆ ಪೇಟೆಯಲ್ಲಿ ಪ್ರೇಕ್ಷಣೀಯವೇನೂ ಇಲ್ಲ. ಆದರೆ ಅತಿ ಕಡಿಮೆ ಅಂತರದಲ್ಲಿ ಕರಾವಳಿ ವಲಯದಿಂದ ಘಟ್ಟ ಏರುವ ದಾರಿ, ಸೂರ್ಯಾಸ್ತ ದೃಶ್ಯ ವೀಕ್ಷಣೆ, ಒನಕೆ ಬರ್ಕಣ ಜೋಗಿಗುಂಡಿ ಅಬ್ಬಿಗಳು ಮುಂತಾದವೆಲ್ಲಾ ಪೇಟೆಯಿಂದ ಐದು-ಹತ್ತು ಕಿಮೀ ಸುತ್ತಳತೆಯಲ್ಲಿ ಹರಡಿವೆ. ಹಾಗೆಯೇ ಪೇಟೆಯಿಂದ ಕಾಗೆ ಹಾರಿದ ಲೆಕ್ಕ ತೆಗೆದರೆ, ಐದಾರು ಕಿಮೀ ಅಂತರದಲ್ಲಿರುವ ಅವಶ್ಯ ಪ್ರೇಕ್ಷಣೀಯ ಸ್ಥಳ ಕುಂದಾದ್ರಿ. ಆ ಶಿಖರಕ್ಕಿರುವ ವಾಹನಯೋಗ್ಯ ದಾರಿ ಮತ್ತು ಅಲ್ಲಿರುವ ಕಟ್ಟಡಗಳು ಎಷ್ಟು ಶಿಥಿಲವಾದರೂ ಒಂದು ರಾತ್ರಿಯ ಮಳೆಗಾಳಿಯಿಂದ ನಮಗೆ ರಕ್ಷಣೆಯಂತೂ ಅವಶ್ಯ ಕೊಡುತ್ತವೆ ಎಂದೇ ನಾನು ನಂಬಿದ್ದೆ. ಸಹಜವಾಗಿ ಆ ರಾತ್ರಿ ವಾಸಕ್ಕೆ ಅದನ್ನೇ ನಾವು ಆಯ್ದುಕೊಂಡಿದ್ದೆವು. ಆಗುಂಬೆ, ತೀರ್ಥಳ್ಳಿ ಮತ್ತು ಶೃಂಗೇರಿ ಎಂಬ ತ್ರಿಕೋನ ರಚಿಸಿದರೆ ನಡುವೆ ಎದ್ದು ಕಾಣುವ ಶುದ್ಧ ಶಿಲಾಮಯ ಶಿಖರ ಕುಂದಾದ್ರಿ. ಅದನ್ನು ಹಿಂದೊಮ್ಮೆ ನಾನು ಆಗುಂಬೆ-ತೀರ್ಥಳ್ಳಿಮಾರ್ಗದಿಂದ ಹೋಗಿ ನೋಡಿದ್ದು ಜಾಲತಾಣದ ಹೆಚ್ಚಿನ ಓದುಗರಿಗೆ ಗೊತ್ತೇ ಇದೆ. ಈ ಸಲ ನಮ್ಮದು ಶೃಂಗೇರಿ ಬದಿಯ ಮಾರ್ಗ ಅರಸುವುದು ಅದೂ ಮಳೆಗಾಲದ ಇಳಿ ಸಂಜೆಯ ನಿರ್ಜನ ಮುಹೂರ್ತದಲ್ಲಿ ತುಸು ತ್ರಾಸದಾಯಕವೇ ಆಯ್ತು. ಶೃಂಗೇರಿ ಬಿಟ್ಟ ಸ್ವಲ್ಪ ಮುಂದೆಲ್ಲೋ ಸೇತುವೆ ಕುಸಿದು ದಾರಿ ಬಂದಾಗಿರುವುದು ತಿಳಿಯಿತು. ಅನಿವಾರ್ಯವಾಗಿ ಬದಲಿ ಮಣ್ಣು ದಾರಿ ಹಿಡಿದೆವು. ಅದೃಷ್ಟವಶಾತ್ ಅದು ಒಳದಾರಿಯಾಗಿಯೇ ಒದಗಿತು. ತೀರ್ಥಹಳ್ಳಿಯಿಂದ ಬರುತ್ತಿದ್ದ ಡಾಮರು ದಾರಿಯನ್ನು ನಿರೀಕ್ಷೆಗೂ ಮುನ್ನವೇ ತಲಪಿದೆವು. ಅಲ್ಲಿನ ಕೈಕಂಬವೇನೋ ಶಿಖರಕ್ಕೆ ನಾಲ್ಕೇ ಕಿಮೀ ಅಂತರ ಎಂದರೂ ಸವಾರಿ ಅಷ್ಟು ಹಗುರವಾಗಿರಲಿಲ್ಲ! ಮೊದಲ ಸುಮಾರು ಒಂದೂವರೆ ಕಿಮೀ ಅಗಲಕಿರಿದಾದ ಅಂಕುಡೊಂಕಿನ ಮಾರ್ಗ. ಮತ್ತೆ ಸುತ್ತ ಕಾಡು ಬಲಿದಂತೆ ನೇರ ಬೆಟ್ಟಕ್ಕೇ ಲಗ್ಗೆಯಿಟ್ಟಿತ್ತು ದಾರಿ. ಅದುವರೆಗೆ ಗಟ್ಟಿ ಸವಾರಿಗೆ ಇದ್ದ ಡಾಮರಿನ ಅವಶೇಷದ ಆಶ್ವಾಸನೆಯೂ ಆ ಮಾರ್ಗ ಕೊಡುತ್ತಿರಲಿಲ್ಲ. ಆದರೆ ಅಲ್ಲಿ ವಾಹನ ಬಳಕೆ ತೀರಾ ಕಡಿಮೆಯಿದ್ದುದರಿಂದ (ಇಲ್ಲವೇನೋ ಎನ್ನುವಷ್ಟು) ನೆಲಗಟ್ಟು, ದಾರಿಯ ಅಂಚುಗಳು ಸಾಕಷ್ಟು ಬಿಗಿಯಾಗೇ ಇದ್ದುವು. ಒಂದೆರಡು ಕಡೆ ಮೇಲಂಚಿನ ಮರಗಳು ದಾರಿಗಡ್ಡಲಾಗಿ ಧರಾಶಾಯಿಯಾಗಿದ್ದುವು. ಅಂಥಲ್ಲಿ ನಾವು ದರೆಯ ಬದಿಗೆ ಸರಿದು, ಸಂದಿನಲ್ಲಿ ಹುಶಾರಾಗಿ ಬೈಕ್‌ನ್ನು ನೂಕಿ ದಾಟಿಸಿ ಮುಂದುವರಿದೆವು. ಕೆಲವೆಡೆಗಳಲ್ಲಿ ಮಳೆನೀರು ಕೊಚ್ಚಿ ತಂದ ತೆಳು ಕೆಸರು ನಮ್ಮ ಸ್ವಾಗತಕ್ಕೆ (?) ರತ್ನಗಂಬಳಿಯನ್ನೇ ಹಾಸಿದಂತೆ ದಪ್ಪ ಪಾಚಿ ಬೆಳೆಸಿ ಸುಂದರವಾಗಿ ಕಾಣುತ್ತಿತ್ತು. ಆದರೆ ಒಂದೊಂದು ಬೈಕ್ ನುಗ್ಗಿದಂತೆ `ರತ್ನಗಂಬಳಿ' ಹರಿದು, ಚೂರುಗಳು ಹಾರುತ್ತಿದ್ದುವು. ನಮ್ಮ ಸವಾರಿಯೋ ತೂಫಾನಿಗೆ ಸಿಕ್ಕ ಬಡ ನಾವೆಯಂತಾಗಿತ್ತು. ದಾರಿಯ ಪೂರ್ಣ ಅಗಲವನ್ನು ಬಳಸುವಂತೆ ಹಾವಾಡುವುದೇನು, ಅಡ್ಡ ಮಲಗುವುದೇನು, ನೇರ ದಾರಿಯಲ್ಲಿ ಅನಿಯಂತ್ರಿತ ಹಿಮ್ಮುರಿ ತಿರುವು ತೆಗೆದೇ ನಿಲ್ಲುವುದೇನು!! ಒಂಟಿ ಸವಾರಿಯಲ್ಲಿ ಸುಧಾರಿಸಿಯೇವು ಎಂದು ಸಹವಾರರನ್ನು ಇಳಿಸುವುದು ಇದ್ದದ್ದೇ. ನಿಜ ಹಿಮ್ಮುರಿ ತಿರುವುಗಳ ತೀವ್ರತೆಯಲ್ಲಂತೂ ಸಹವಾರನ ನೂಕುಬಲವನ್ನು ಸೇರಿಸಿಕೊಂಡು ದಾರಿ ನಿಭಾಯಿಸುವುದು ಯಾರಿಗೂ ನಾಚಿಕೆಯ ವಿಷಯವಾಗಲೇ ಇಲ್ಲ. ಅಂತದ್ದರಲ್ಲಿ ಒಮ್ಮೆ ಪ್ರಸನ್ನನ ಬೈಕ್ ಏರಿದ್ದು ಹತ್ತಡಿಯಾದರೆ ಹಿಂಜಾರಿಳಿದದ್ದು ಇಪ್ಪತ್ತಡಿಯಾದದ್ದು, ನನ್ನ ಬೈಕ್ ಜಾರಿಕೆಯಲ್ಲಿ ಪೂರ್ಣ ಜಾಡು ಕಳೆದು ದರೆಬದಿಯ ಚರಂಡಿಯಲ್ಲಿ ಕರ್ಣರಥವಾದದ್ದು ವಿಶಿಷ್ಟ ಮತ್ತು ಹೇಳಲೇಬೇಕಾದ ಘಟನೆಗಳು. ಅಂದು ಅಲ್ಲಿನ ಕಾಡು, ಮೋಡ, ಮಳೆಗೆ ರೋಸಿಹೋಗಿ ಸೂರ್ಯ ಸಂಜೆ ನಾಲ್ಕಕ್ಕೇ ಅಸ್ತಮಿಸಿದಂತಿತ್ತು. ನಮಗೆ ಒದಗಿದ ಮಸುಕು ಬೆಳಕೇನಿದ್ದರೂ ಹಗಲಿನಿಂದ ಪಡೆದ ಕಡವೇ ಸರಿ ಎಂದುಕೊಳ್ಳುತ್ತಲೇ ಇದ್ದೆವು. ಆದರೆ ಎಲ್ಲ ಸರ್ಕಸ್ ಮುಗಿದು ಶಿಖರ ವಲಯದ `ಪ್ರವಾಸಿ ಬಂಗ್ಲೆ' ತಲಪುವಾಗ ಗಂಟೆ ಏಳಾಗಿತ್ತು, ನಿಜ ಕಾವಳವೇ ಗಾಢವಾಗಿ ಕವಿದಿತ್ತು.

17 January 2014

ಋಷ್ಯಶೃಂಗನ ತಪೋಮಣೆ

(ತಪೋಮಣೆಯಿಂದ ಸರ್ವಜ್ಞನ ಪೀಠಕ್ಕೆ ಭಾಗ-೨ ಚಕ್ರವರ್ತಿಗಳು ಸುತ್ತು ೧೫)

ಮಳೆಗಾಲದಲ್ಲಿ ಮೂರು ಹಗಲು, ಎರಡು ರಾತ್ರಿಗಳ ಸಾಹಸೀ ಪ್ರಾಕೃತಿಕ ಒಡನಾಟದ ಮೊದಲ ಭಾಗ -೧೨-೨೦೧೩ರಂದು ಇಲ್ಲೇ ಪ್ರಕಟವಾಗಿದೆ ಗಮನಿಸಿ. ಹಾಗೇ ಚಕ್ರವರ್ತಿಗಳು ಪುಸ್ತಕದ ವಿ-ಧಾರಾವಾಹಿಯ ಹಿಂದಿನ ಎಲ್ಲ ೧೪ ಸುತ್ತುಗಳನ್ನೂ ಇಲ್ಲೇ ಆಯ್ದುಕೊಂಡು ನೋಡಲೂಬಹುದು.

ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು, ತನ್ನ ವಿವಿಧ ದಿಕ್ಕಿನ ಓಟಗಳ ಅನುಕೂಲಕ್ಕೆ ಕೆಲವು ಹೋಟೆಲುಗಳನ್ನು ಖಾಯಂ ಆಗಿ ನೆಚ್ಚುವುದಿತ್ತು. ಹಾಗೆ ಉಡುಪಿ ದಾರಿಯಲ್ಲಿ ಪಡುಬಿದ್ರೆ ಪೇಟೆಗೂ ತುಸು ಮೊದಲು ಹೆದ್ದಾರಿಯಂಚಿನಲ್ಲಿ ನಮಗೆ ಒಗ್ಗಿದ ಶುದ್ಧ ಸಸ್ಯಾಹಾರಿ ಹೋಟೆಲ್ ನಾಗರಾಜ ಶೆಟ್ಟಿ ಎಸ್ಟೇಟಿನದ್ದು. ಅದರ ಅವನತಿಯಲ್ಲಿ ಪಡುಬಿದ್ರೆ ಪೇಟೆಯದ್ದೇ ವಿಜಯ ವಿಹಾರಕ್ಕೆ ಬದಲಿದೆವು. ಹೆದ್ದಾರಿಯಲ್ಲಿ ಮುಂದುವರಿಯುವುದೇ ಇದ್ದರೆ, ಕುಂದಾಪುರದ ಶೆರೋನ್ ತುಂಬಾ ಕಾಲ ಬಳಸಿದ್ದೆವು. ಆದರೆ ಸಾಲಿಗ್ರಾಮದಲ್ಲಿ ಮಂಟಪ ಹೊಟೆಲ್ ಬಂದ ಮೇಲೆ ಕುಟುಂಬದ ಒಡನಾಟದ ನೆನಪೂ ಬೆಸೆದು ಶೆರೋನ್ ಬಿಟ್ಟಿದ್ದೇವೆ. ಕಾರ್ಕಳದಲ್ಲಿ ನಮಗೆ ಆಯ್ಕೆಯಿಲ್ಲದೆ ಕೆಲವು ಕಾಲ ಬಸ್ ನಿಲ್ದಾಣದ ಹೋಟೆಲಿಗೆ ಹೋಗುವುದಿತ್ತು. ಅಲ್ಲಿನ ರುಚಿ ಸಾಮಾನ್ಯ, ಶುಚಿ ಅಷ್ಟಕ್ಕಷ್ಟೆ. ಆದರೆ ಮೂಡಬಿದ್ರೆಯಲ್ಲಿ ಹೋಟೆಲ್ ಪಡಿವಾಳ್ ಬಂದ ಮೇಲೆ ನಮಗೆ ರುಚಿಶುಚಿಗೆ ನೆಲೆ ಸಿಕ್ಕಿದಂತಾಗಿತ್ತು. ಈಚೆ ಸುಮಾರು ಹತ್ತು ವರ್ಷಗಳಿಂದ ಕಾರ್ಕಳದ ಅನಂತಶಯನದ ಬಳಿಯ ಹೊಸ ಹೋಟೆಲ್ ಪ್ರಕಾಶ್ ತನ್ನ ಸಾಹಿತ್ಯಕ ಕಾರ್ಯಕ್ರಮಗಳಿಗೆ ಆಶ್ರಯ ಕೊಡುವ ಕಂಪು ಸೇರಿ, ಶುಚಿ ಮತ್ತು ಜೈನರುಚಿಯೊಡನೆ ನಮ್ಮಂಥತಿರುಗೂಳಿಗಳ ಮನ ಗೆದ್ದಿದೆ.

ಏನೇ ಇರಲಿ, ಅಂದು ನಮ್ಮ ಬೆಳಗಿನ ಉಪಾಹಾರಕ್ಕೆ ನಾಗರಾಜಶೆಟ್ಟಿ ಎಸ್ಟೇಟ್ ಹೋಟೆಲ್ನಲ್ಲಿ ನಿಂತೆವು. ಅದು ಹೆದ್ದಾರಿಹೋಕರ ಅಗತ್ಯಗಳನ್ನು ಸರಿಯಾಗಿ ಗ್ರಹಿಸಿ ದಿನದಲ್ಲಿ ಹೆಚ್ಚು ಕಡಿಮೆ ಹದಿನಾರು ಗಂಟೆಯೂ ಸೇವಾತತ್ಪರವಾಗಿಯೂ ಇರುತ್ತಿತ್ತು. ಎಸ್ಟೇಟಿನ ನೇರ ಮುಂಬಯಿ ಸಂಪರ್ಕದಿಂದ ಮುಂದುವರಿದ ದಿನಗಳಲ್ಲಿ ಹೋಟೆಲಿನ ಆಡಳಿತ ಒತ್ತಿನಲ್ಲಿ ಭಾರೀ ಸ್ಟೇಯಿನ್ಲೆಸ್ ಸ್ಟೀಲ್ ಪಾತ್ರೆಗಳ ಮಳಿಗೆಯನ್ನೂ ತೆರೆದಿತ್ತು. ಕಾಲಕ್ಕೆ ಮದುವೆ ಮುಂಜಿಗಳ ಜವುಳಿಗೆ ಗುರುಪುರಕ್ಕೆ ಹೋಗುತ್ತಿದ್ದ ಜಿಲ್ಲೆಯ ಜನ ಸ್ಟೀಲ್ ಸಾಮಾನುಗಳಿಗೆ ಪಡುಬಿದ್ರೆ ಇದು ಖ್ಯಾತವೂ ಆಗಿತ್ತು. ಕಾಲಾನುಕ್ರಮದಲ್ಲಿ ಕೇಳಿಬಂದಂತೆ (ನನಗೆ ತೀರಾ ಅಪರಿಚಿತರಾದ) ನಾಗರಾಜ ಶೆಟ್ಟರ ಕೌಟುಂಬಿಕ ಕಲ್ಲೋಲಗಳಲ್ಲಿ ಎಲ್ಲ ವಹಿವಾಟೂ ಬಂದಾಗಿ ಇಂದು (೨೦೧೪) ಸಾಂಪ್ರದಾಯಿಕ ಬಾರ್ ಅಂಡ್ ರೆಸ್ಟೂರಾ ಮಟ್ಟದಲ್ಲಿ ಮಸಕಾಗಿದೆ! ಆದರೆ ಅಂದು ನಮಗೆ ರುಚಿಕರ ಉಪಾಹಾರವನ್ನು ಅದು ಧಾರಾಳ ಕೊಟ್ಟಿತ್ತು. ತಿಂಡಿ ತಿನ್ನುವ ಬಿಡುವು, ಬೈಕಿನಲ್ಲಿ ಗಂಟುಮೂಟೆ ಕಟ್ಟುವ ಕಲೆಯಲ್ಲಿ ಪಳಗದವರಿಗೆ ಸಾವರಿಸಿಕೊಳ್ಳಲೂ ಅವಕಾಶ ಚೆನ್ನಾಗಿ ಒದಗಿಸಿತ್ತು.