Showing posts with label ತೀರ್ಥ ಯಾತ್ರೆ. Show all posts
Showing posts with label ತೀರ್ಥ ಯಾತ್ರೆ. Show all posts

10 November 2018

ಬದರೀನಾಥದೊಡನೆ ಯಾತ್ರಾ ಫಲಶ್ರುತಿ


(ಕೇದಾರ ಇಪ್ಪತ್ತೆಂಟು ವರ್ಷಗಳ ಮೇಲೆ! - ಉತ್ತರಾರ್ಧ)


ಸೆರ್ಸಿಯಿಂದ ಬದರಿಗೆ ಹೋಗುವ ವಾಹನಗಳ ಸಾಂಪ್ರದಾಯಿಕ ದಾರಿ ಹೆದ್ದಾರಿಗಳಲ್ಲೇ ಇತ್ತು. ಅಂದರೆ ನಾವು ಬಂದಿದ್ದ ಹೆದ್ದಾರಿ ೧೦೭ರಲ್ಲಿ ರುದ್ರಪ್ರಯಾಗಕ್ಕೆ ಮರಳಿ, ಡೆಹ್ರಾಡೂನಿನಿಂದ ಬಂದಿದ್ದ ಹೆದ್ದಾರಿ ೭ರಲ್ಲಿ ಎಡ ತಿರುವು ತೆಗೆದುಕೊಂಡು, ಕರ್ಣಪ್ರಯಾಗ್ ಎಂದೆಲ್ಲ ಮುಂದುವರಿಯಬೇಕಿತ್ತು. ಅಲ್ಲಿನ ದಾರಿ-ದುರವಸ್ಥೆಯಲ್ಲಿ ನಮಗೆ ‘ಹೆದ್ದಾರಿ’ ಎನ್ನುವ ವಿಶೇಷಣವೇ ತಮಾಷೆಯಾಗಿ ಕೇಳುತ್ತಿತ್ತು. ಸಾಲದ್ದಕ್ಕೆ ನಕ್ಷೆಯಲ್ಲಿ ಅದೊಂದು ಬಳಸಂಬಟ್ಟೆ ಎಂದೂ ಕಾಣಿಸಿತು. ಬದಲಿಗೆ, ರುದ್ರಪ್ರಯಾಗದ ಅರ್ಧ
ದಾರಿಯಲ್ಲೇ ಸಿಗುವ ಊಖಿಮಠದ ಎಡದಾರಿ ಹಿಡಿದು, ಕರ್ಣ ಪ್ರಯಾಗದಿಂದಲೂ ಮುಂದಿನ ಚಮೋಲಿಗೆ ಹೋಗುತ್ತಿದ್ದ ದಾರಿ ಉತ್ತಮ ಒಳದಾರಿ ಎಂದೇ ಅನಿಸಿತು. "ಏನಲ್ಲದಿದ್ದರೂ ಅದರ ಡಾಮರ್ ಒಳ್ಳೇದಿದೆ" ಎಂದೇ ಹಿಂದೆ ಹೋದವರ ಅನುಭವದ ನುಡಿ ಸೇರಿಕೊಂಡಿತು. ಕೊನೆಯಲ್ಲಿ ಕಿಮೀ ಲೆಕ್ಕದ ಉಳಿತಾಯ ನಿಜವಾದರೂ (೧೩ ಕಿಮೀ!) ತುಂಬ ಸಪುರ ಮತ್ತು ವಿಪರೀತ ತಿರುವುಮುರುವುಗಳಿದ್ದುದರಿಂದ ಸತಾವಣೆಯ ಅಂಶವೇ ಹೆಚ್ಚು. 

08 November 2018

ಕೇದಾರನಾಥ - ಇಪ್ಪತ್ತೆಂಟು ವರ್ಷಗಳ ಮೇಲೆ

(ಪೂರ್ವಾರ್ಧ) 

‘ಪುರಾಣ ಜಪ’ದಲ್ಲಿ ನನಗೆ ದೊಡ್ಡ ಕುಖ್ಯಾತಿ ಇದೆ. ಅಂತರ್ಜಾಲದಲ್ಲಿ ಯಾರೇನು ಕಥಿಸಿದರೂ ಕೆಲವೊಮ್ಮೆ ತಡವಾಗಿ ನನಗೇ ಮುಜುಗರವುಂಟಾಗುವಂತೆ "ನಾನೂ....." ಬರೆಯುತ್ತಲೇ ಇರುತ್ತೇನೆ, ಪ್ರಕಟಿತ ಲೇಖನಗಳಿಗೆ ಸೇತು ತುರುಕುತ್ತಿರುತ್ತೇನೆ. ಇದರ ಪುಣ್ಯ ಫಲವಾಗಿ, ಇಪ್ಪತ್ತೆಂಟು ವರ್ಷಗಳ ಹಿಂದೆ ನಾನು, ದೇವಕಿಯೂ ನೋಡಿದ ಕೇದಾರ, ಆಗ ನೋಡಲಾಗದ ಬದರೀ ಕ್ಷೇತ್ರಗಳಿಗೆ ಹೊರಟು ನಿಂತ ಯಾತ್ರಾ ತಂಡದಲ್ಲಿ ಸೇರಿಹೋಗಿದ್ದೆವು. ಸನ್ನಿವೇಶವನ್ನು ಕಿರಿದರಲ್ಲಿ
ಹೇಳುವುದಿದ್ದರೆ..... 

ಅದೊಂದು ಅಪರಾಹ್ನ, ಸೈಕಲ್ ಗೆಳೆಯ ಹರಿಪ್ರಸಾದ್ ಶೇವಿರೆಯಿಂದ ಅನಿರೀಕ್ಷಿತ ಚರವಾಣಿ ಬಂತು, "ನಮ್ಮ ಕೇದಾರ ಬದರೀ ಯಾತ್ರೆಗೆ ನೀವಿಬ್ಬರು ಅತಿಥಿಗಳಾಗಿ ಬರಬೇಕು." ಯಾವ ಮುನ್ಸೂಚನೆ ಇಲ್ಲದ, ನಿಶ್ಶರ್ತ, ನಿಃಶುಲ್ಕ, ಪ್ರೀತಿಯೊಂದೇ ಆಧಾರವಾದ ಕರೆ, ಅದೂ ನಮ್ಮದೇ ಬಯಕೆಯ ಮೂರ್ತ ರೂಪ! ಹರಿಪ್ರಸಾದರ ಅಣ್ಣ - ಅನಂತಕೃಷ್ಣರಾವ್ (ಎಕೆ ರಾವ್), ಮೂಡಬಿದ್ರೆಯ

22 November 2010

ಕಾಸರವಳ್ಳಿ ಮನೆ

(ತೀರ್ಥಯಾತ್ರೆ ಭಾಗ-೪ ಮಂಗಳ)

ಕಾಸರವಳ್ಳಿ ಮನೆ ಕಾಷ್ಠ ವೈಭವಕ್ಕೆ, ವಾಸ್ತು ಸುಸಂಬದ್ಧತೆಗೆ, ಶತಮಾನಕ್ಕು ಮಿಕ್ಕು ಹಳಗಾಲದ ರಚನೆಯೇ ಆದರೂ ಮುಂದುವರಿದ ವಾಸಯೋಗ್ಯತೆಗೆ ನಾನು ಬಹು ಮೂಲಗಳಿಂದ ತಿಳಿದಿದ್ದೆ, ಪತ್ರಿಕಾ ಲೇಖನಗಳಲ್ಲೂ ಓದಿದ್ದೆ. ಮಣಿಪಾಲದ ವಿಜಯನಾಥ ಶೆಣೈಯವರು ತನ್ನ ಹಸ್ತಶಿಲ್ಪ ಕಟ್ಟುತ್ತಿದ್ದ ಕಾಲಕ್ಕೆ ಕಾಸರವಳ್ಳಿ ಮನೆ ಗುರುತಿಸಿದ್ದರು. ಅದು ಇದ್ದಲ್ಲೇ ಚೆನ್ನಾಗಿ ಉಳಿದು ಮುಂದುವರಿಯಲು ಅವರು ಈಚೆಗೂ ಮಾಡಿದ ಪ್ರಯತ್ನಗಳ ಬಗ್ಗೆ ಅವರದೇ ಉದಯವಾಣಿ ಅಂಕಣದಲ್ಲಿ ಓದಿದ್ದಂತೂ ನನ್ನ ನೆನಪಿನಂಕಣದಲ್ಲಿ ಹೊಸದಾಗಿತ್ತು. ಗಿರೀಶ ಕಾಸರವಳ್ಳಿಯವರ ಘಟಶ್ರಾದ್ಧದ ಬಹುಭಾಗ ಇಲ್ಲೇ ಚಿತ್ರೀಕರಣಗೊಂಡದ್ದೂ ತಿಳಿದಿದ್ದೆ. ಈ ಎಲ್ಲ ದುರ್ಬಲ ಹಂದರದ ಮೇಲೆ ಪ್ರತ್ಯಕ್ಷದರ್ಶನದ ಅವಕಾಶದ ಬಳ್ಳಿ ದಾಂಗುಡಿ ಸುರುಮಾಡಿದ್ದು ರತ್ನಾಕರರ ಯಜಮಾನಿ ವಾಣಿಯವರ ಪ್ರಸ್ತಾಪದಿಂದ. ವಾಣಿ ಇದೇ ಕಾಸರವಳ್ಳಿ ಮನೆತನದ ಮೂಲಪುರುಷ ಶೇಷಪ್ಪಯ್ಯ(ಕಾರಂತ)ರ, ಮೂರನೇ ಮಗ - ರಾಮಕೃಷ್ಣರಾಯರ ಐದನೇ ಸಂತತಿ. (ಗಿರೀಶ ಕಾಸರವಳ್ಳಿ ನಾಲ್ಕನೇ ಮಗ ಗಣೇಶರಾಯರ ಮಗ, ಅಂದರೆ ವಾಣಿಗೆ ಚಿಕ್ಕಪ್ಪನ ಮಗ - ಅಣ್ಣ) ಇವರಪ್ಪನಿಗೆ ಪಾಲಿನಲ್ಲಿ ಒದಗಿದ ಜಾಗ (ವಾಣಿಯವರ ತವರ್ಮನೆ) ಪಕ್ಕದ ಹಳ್ಳಿಯೇ ಆದ ರಾಮಕೃಷ್ಣಪುರವಾದರೂ  ದೊಡ್ಡಪ್ಪ ನಾಗಭೂಷಣರಾಯರ ಹಿರಿಯ ಮಗ, ಇಂದಿನ ಕಾಸರವಳ್ಳಿ ಮೂಲಮನೆಯ ಹಕ್ಕುದಾರ ರಾಮಸ್ವಾಮಿ ಮತ್ತು ಸಂಬಂಧದಲ್ಲಿ ತಮ್ಮನಾಗುವ ಆದರ್ಶ ಮತ್ತು ಆ ಮನೆಯ ಭಾವನಾತ್ಮಕ ಆಗುಹೋಗುಗಳಲ್ಲಿ ಹೊಕ್ಕು ಬಳಕೆ ಚೆನ್ನಾಗಿಯೇ ಇದೆ. ಸಹಜವಾಗಿ ಆ ಮನೆಯನ್ನು ನೋಡುವ ಉತ್ಸಾಹ ನಮಗೆ ಹೊಸದಾಗಿ ಹುಟ್ಟಿಕೊಂಡಿತ್ತು. ಆದರೆ ಅಲ್ಲಿ ವಾಸವಿರುವವರ ಅನುಕೂ ತಿಳಿಯದೆ ಮತ್ತು ಅನುಮತಿ ಪಡೆಯದೆ ಹೋಗಲು ಮನಸ್ಸು ಬರಲಿಲ್ಲ. ಈ ಔಪಚಾರಿಕತೆಯನ್ನು ರತ್ನಾಕರ್ ದೂರವಾಣಿಸಿ ಸುಲಭದಲ್ಲಿ ಪರಿಹರಿಸಿಕೊಟ್ಟಿದ್ದರು.

15 November 2010

ಇಲಾಖೆ ಊರಿಗೆಳೆದರೆ ಸನ್ಯಾಸಿ ಕಾಡಿಗೆಳೆದರು!

(ತೀರ್ಥಯಾತ್ರೆ ಭಾಗ ಮೂರು)

[ನಾನೊಂದು ಎಣಿಸಿದರೆ ಗಣಕವಿನ್ನೊಂದೇ ಫಿತೂರಿಸಿತು! ಕಳೆದ ಆದಿತ್ಯವಾರ ಸಂಜೆ ಇನ್ನೇನು ನೆನಪಿನ ಹಂಡೆಯ ಕೊನೆಯ ಎರಡು ಚೊಂಬು ಮೊಗೆದು "ತೀರ್ಥಳ್ಳಿ ಗೋವಿಂದಾನೆ ಗೋವಿಂದಾ ಗೋsssssವಿಂದಾ" ಎಂದು ಕಥೆ ಮುಗಿಸುವುದರಲ್ಲಿದ್ದಾಗ ಗಣಕಕ್ಕೆ ಕಣ್ಣು ಕತ್ತಲಿಟ್ಟಿತು. ಯುಕ್ತ ಚಿಕಿತ್ಸೆ ಮುಗಿಯುವಾಗ ಕುಟ್ಟಿಟ್ಟದಷ್ಟೂ ಖಾಲಿಯಾಗಿ ಮತ್ತೆ ನಾಂದಿಗೀತೆಗೆ ಬಂದು ನಿಂತಿದ್ದೆ!! ಸಂಕಲ್ಪ ಸಿದ್ಧಿಗೆ ಮತ್ತೆ ಒಂದು ವಾರ ತಪಸ್ಸು ಮಾಡಿದ್ದೇನೆ. ಮರುರೂಪಣೆಯಲ್ಲಿ ಹೊಸಸಿದ್ಧಿಗಳು ಒದಗಿವೆ. ಪ್ರಸಿದ್ಧಿಗೆ ನಿಮ್ಮ ಸಮ-ಸಿದ್ಧಿಯೊಡನೆ ಓದಿನ ಕೊನೆಯಲ್ಲಿ ಮಾತಿನ ತೊಡವು ಕೊಡ್ತೀರಲ್ಲಾ?]

31 October 2010

ಅಪ್ಪಟ ಜವಳಿ, ಹೊಳೆಯುವ ರತ್ನ

ತೀರ್ಥಯಾತ್ರೆ (ಭಾಗ ಎರಡು)

‘ಶಿಕಾರಿ’ ಅಭಯನ ನಿರ್ದೇಶನದಲ್ಲಿ ತಯಾರಾಗುತ್ತಿರುವ ಎರಡು-ಮೂರನೇ ಚಿತ್ರ! (ಹೌದು, ಇದು ಏಕಕಾಲಕ್ಕೆ ಕನ್ನಡ ಮತ್ತು ಮಲಯಾಳಗಳ ಸ್ವತಂತ್ರ ಚಿತ್ರೀಕರಣ ನಡೆಯುತ್ತಿದೆ (ವಿವರಗಳಿಗೆ ಇಲ್ಲಿ ನಿಮ್ಮ ಇಲಿಯ ಬಾಲ ತಿರುಚಿರಿ! ಏನು ಯೋಚಿಸ್ತೀರಿ, ಚಿಟಿಕೆ ಹೊಡೀರಿ ಅರ್ಥಾತ್ ಇಲ್ಲಿ ನಿಮ್ಮ ಮೌಸ್ ಕ್ಲಿಕ್ ಮಾಡೀ!!) ಸಿನಿಮಾದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಮತ್ತು ಕೊಚ್ಚಿನ್ನಿನಲ್ಲಿ ಆಗಿತ್ತು. ಅನಂತರ ಎರಡನೆಯ ಮತ್ತು ಬಲು ದೊಡ್ಡ ಅಂಶದ ಚಿತ್ರೀಕರಣಕ್ಕಾಗಿ ಯುಕ್ತ ಮನೆ ಹಾಗೂ ಪರಿಸರದ ಹುಡುಕಾಟ ನಡೆಸಿದರು. ಶಿವಮೊಗ್ಗ, ಉಡುಪಿ ಜಿಲ್ಲೆಗಳ ಮೂಲೆ ಮೊಡಕು ಸುತ್ತಿ ತೀರ್ಥಳ್ಳಿಯ ಸಮೀಪದ ಒಂದು ಹಳೆಗಾಲದ ಮನೆ ಮತ್ತು ಪರಿಸರವನ್ನು ತಿಂಗಳ ಹಿಂದೆಯಷ್ಟೇ ನಿಷ್ಕರ್ಷಿಸಿದ್ದರು. ಅದಕ್ಕೆ ಪೂರಕವಾಗಿ ಒದಗಿದ್ದು, ತೀರ್ಥಳ್ಳಿ - ಶಿವಮೊಗ್ಗ ದಾರಿಯಲ್ಲಿ ಐದನೇ ಕಿಮೀ ಕಲ್ಲಿನ ಬಳಿ ಬಲಕ್ಕೆ ಕವಲೊಡೆದು ಸ್ವಲ್ಪವೇ ಒಳಕ್ಕೆ ಸರಿದರೆ ಅಡಿಕೆ ಕಾಫಿ ತೋಟಗಳ ನಡುವೆ ಮೈಚಾಚಿಕೊಂಡಿದೆ ವಿಹಂಗಮ ಹೆಸರಿನ ವಿಹಾರಧಾಮ. ತುಂಗಾ ತೀರ ಸೇರಿದಂತೆ ಮಲೆನಾಡಿನ ಸೌಂದರ್ಯವನ್ನೂ ಆಧುನಿಕ ಆತಿಥ್ಯದ ಸಕಲ ಸವಲತ್ತುಗಳನ್ನೂ ಹೊಂದಿರುವ ಇದು ಈ ವಲಯಕ್ಕೆ ಏಕೈಕ. ಕುವೆಂಪು ಕುಟುಂಬಸ್ಥರೇ ಆದ ಕಡಿದಾಳು ದಯಾನಂದರ ಕಲ್ಪನೆ ಮತ್ತು ವೈಯಕ್ತಿಕ ಉಸ್ತುವಾರಿ ಇದಕ್ಕಿದೆ. ಅಭಯನಿಗೆ ಹೆಚ್ಚಿನ ಆಕರ್ಷಣೆ, ದಯಾನಂದರ ಮಗ ಕನೀನ ಅವನ ಕಾಲೇಜು ಸಹಪಾಠಿ. ಆತ ಈಗ ಅಪ್ಪನೊಡನೆ ವಿಹಾರಧಾಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾನೆ. ಅಲ್ಲಿನ (ಸುಮಾರು ಇಪ್ಪತ್ತೈದು) ವಸತಿಗೃಹಗಳ ವ್ಯವಸ್ಥೆ ಶಿಕಾರಿ ಚಿತ್ರ ತಂಡದ ಉನ್ನತ ವರ್ಗದವರಿಗೆ ಕಾಯ್ದಿರಿಸಲಾಗಿತ್ತು. ಎರಡು ಮತ್ತು ಮೂರನೇ ವರ್ಗಗಳಿಗೆ ತೀರ್ಥಹಳ್ಳಿಯ ಬಹುತೇಕ ಹೋಟೆಲುಗಳೂ ಚಿತ್ರೀಕರಣ ನಡೆಯುವ ಸ್ಥಳದ ಸಮೀಪದ ಒಂದು ಛತ್ರವೂ ನಿಗದಿಯಾಗಿತ್ತು.

24 October 2010

ದಾರಿ ತಪ್ಪಿದ ದಾರಿ


(ತೀರ್ಥ ಯಾತ್ರೆ ಭಾಗ ೧)


ನಾನು ಗೆಳೆಯರೊಡನೆ ವನ್ಯ ರಕ್ಷಣೆ ಬಗ್ಗೆ ಭಯಂಗರ ಮಾತಾಡುತ್ತಾ ಚೂರುಪಾರು ಕೆಲಸ ಮಾಡುತ್ತಾ ಇದ್ದರೆ, ಮಗ - ಅಭಯ ತಣ್ಣಗೆ ಮಲೆನಾಡಿನಲ್ಲಿ (ತೀರ್ಥಳ್ಳಿ ಆಸುಪಾಸು) ಶಿಕಾರಿ ನಡೆಸಲು ಹೊರಟಿದ್ದ! ಅದೂ ನಮ್ಮ ಪೂರ್ಣ ಮಾನಸಿಕ ಸಹಮತದೊಡನೆ ಎಂದರೆ ಆಶ್ಚರ್ಯಚಿಹ್ನೆ!! ಇದಕ್ಕೆಲ್ಲಾ ನಾನು ಸ್ಪಷ್ಟೀಕರಣ ಕೊಡುವ ಬದಲು ನೀವೇ ಆತನ ಶಿಕಾರಿಗೆ ಈಡಾಗಲು ಇಲ್ಲಿ ಟ್ರಿಗರ್ ಒತ್ತಿರಿ.

ಮೊನ್ನೆ ಸೆಪ್ಟೆಂಬರ್, ಹತ್ತು ಹನ್ನೊಂದು ಸರಕಾರೀ ರಜೆ, ಹಿಂಬಾಲಿಸಿದಂತೆ ಆದಿತ್ಯವಾರ ಎಂದು ಕಂಡ ಕೂಡಲೇ ಶಿಕಾರಿ ತಂಡ ನೋಡುವ ಕುತೂಹಲದೊಡನೆ ಊರು ತಿರುಗುವ ಹುಚ್ಚು ತಳಕು ಹಾಕಿ ಕಾರು ಹೊರಡಿಸಿಬಿಟ್ಟೆ. ಮೂರು ದಿನ ಅಂಗಡಿಗೆ ಯಾಕೆ ರಜೇಂತ ಕೇಳಿದವರಿಗೆಲ್ಲಾ  “ನಾನು ಖಾಯಂ ಮತಾಂತರಿ! ಶುಕ್ರವಾರ ನನಗೆ ರಂಜಾನ್ ಹಬ್ಬ, ಶನಿವಾರ ವಿನಾಯಕ ಚೌತಿ. ಮತ್ತುಳಿದ ಆದಿತ್ಯವಾರ, ಆರು ದಿನ ದುಡಿದ ದೇವನೇ ವಿಶ್ರಾಂತನಂತೆ, ನಾನು ಪಾಪಿ ಬಿಡಲುಂಟೇ?” ಗೆಳೆಯ ಗೋವಿಂದ ಬಹಳ ಹಿಂದೆಯೇ “ಮಕ್ಕೊಗೆ ಶೂಟಿಂಗ್ ತೋರಿಶೆಕ್ಕು” ಅಂತ ಭಾರೀ ಹಿಂದೆಯೇ ಹೇಳಿದ್ದರೂ ಈ ಸುತ್ತಿನಲ್ಲಿ ಅದು ಸಿಗುವುದಿಲ್ಲ ಎಂದು ನಮಗೆ ತಿಳಿದಿತ್ತು. ಹಾಗೇ ಸುತ್ತಾಡಲು “ಬರ್ತೀರಾ” ಅಂತ ಅವರಿವರನ್ನು ಕೇಳಿದೆ. ಉತ್ಸಾಹಿಗಳು ಸಿಗಲಿಲ್ಲ. ಮತ್ತೆ ಮೈಸೂರಿನಿಂದ ಅಭಿಜಿತ್ ಮತ್ತು ಮೂರ್ನಾಲ್ಕು ಎಳೆಯ ಗೆಳೆಯರು ಹಾಗೂ ಬೆಂಗಳೂರಿನಿಂದ ಸೊಸೆ ರಶ್ಮಿ ತೀರ್ಥಳ್ಳಿಯಲ್ಲೇ ನಮಗೆ ಸಿಗುತ್ತಾರೆಂದು ಅಂದಾಜಾದ ಮೇಲೆ ಹೆಚ್ಚು ಯಾರನ್ನೂ ಒತ್ತಾಯಿಸದೆ ನಾನು ಮತ್ತು ದೇವಕಿ ಬೆಳಿಗ್ಗೆ ಆರು ಗಂಟೆಗೇ ಮಂಗಳೂರು ಬಿಟ್ಟೆವು.