Showing posts with label ಅಭಯಾರಣ್ಯ. Show all posts
Showing posts with label ಅಭಯಾರಣ್ಯ. Show all posts

02 April 2018

ವೈಲ್ಡ್ ಬೋರ್ ಕಾರಿಡಾರ್!!



ಕಾಡುಬಿದ್ದ ಕೃಷಿಭೂಮಿಗಳನ್ನು ಕಾಡಿಗೇ ಮರಳಿಸುವ ಯೋಜನೆಯ ಪ್ರಥಮ ಹೆಜ್ಜೆ ನಮ್ಮ `ಅಶೋಕವನ’ದ್ದು. (ಡಾ|ಕೃಷ್ಣಮೋಹನ್ ಮತ್ತು ನಾನು ಸ್ವಂತ ಹಣದಲ್ಲಿ ಕೊಂಡ ನೆಲ. ಹೆಚ್ಚಿನ ವಿವರಗಳಿಗೆ ನೋಡಿ: ಅಶೋಕವನ) ನನ್ನ ಪುಸ್ತಕದಂಗಡಿಯನ್ನು ಮುಚ್ಚಿದ ಮೇಲೆ, ಅದೇ ಬಿಸಿಲೆ ವಲಯದಲ್ಲಿ ಹೀಗೇ ಹಡಿಲುಬಿದ್ದ ಇನ್ನಷ್ಟು ಖಾಸಗಿ ಭೂಮಿಗಳನ್ನು, ಇನ್ನಷ್ಟು ವನ್ಯಾಸಕ್ತರ ಮಡಿಲಿಗೆ ಹಾಕಿ, ಸರಕಾರ ಮಾಡದ ವನ್ಯಸಂರಕ್ಷಣೆಯನ್ನು ಸಾಧಿಸುವ ಉತ್ಸಾಹವೂ ನಮ್ಮದಿತ್ತು. ಆದರೆ ಸರಕಾರ `ಎಲಿಫೆಂಟ್ ಕಾರಿಡಾರ್’ ಅರ್ಥಾತ್ ಆನೆಗಳೋಣಿ ಎಂಬ ಹುಸಿ

06 April 2017

ಗೇರುಬೀಜದ ಅನುಬಂಧ

[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ, ಔದ್ಯಮಿಕ ಸತ್ಯಗಳ ಕುರಿತು ಪ್ರತ್ಯಕ್ಷದರ್ಶಿಯ ಹಕ್ಕಿನೋಟ]

ಹರಿಪ್ರಸಾದ್ ಶೇವಿರೆ ತಾನು “ಪುತ್ತೂರು ಮೂಲದವನು,” ಎಂದಾಗಲೇ ಆಪ್ತವೆನ್ನಿಸಿ, “ನನ್ನಜ್ಜನ ಊರು” ಎಂದಿದ್ದೆ. `ಶೇವಿರೆ’ ಅಂದರೆ ಕೆಸುವಂತೆ. ಸಸ್ಯ ವರ್ಗೀಕರಣ ಏನೇ ಇರಲಿ, ತಾವರೆಯಂತೇ ಕೆಸುವೂ ನೀರು ಬಿದ್ದರೂ ಅಂಟಿಸಿಕೊಳ್ಳದ ಜಾತಿ. ಈ ಹರಿಪ್ರಸಾದ್ ಸ್ವಲ್ಪ ಹಾಗೇ; ಗೇರು ಉದ್ಯಮದಲ್ಲಿ ಮುಳುಗಿದ್ದೂ ಇರದಂತಿರುವವರು. ಪುತ್ತೂರು ಹುಟ್ಟೂರಾದರೂ ತಂದೆಯ ಮರಣದಿಂದ, ಮೂಡಬಿದ್ರೆಯ ದೂರಕ್ಕೆಳೆಯಿತು ಇವರ ಜೀವನಕಾಂಡ. ಅಕ್ಕ ಭಾವರ ಸಾಂಗತ್ಯದಲ್ಲಿ ಹರಿಪ್ರಸಾದರ ವ್ಯವಹಾರ ಕೌಶಲ್ಯದ ಎಲೆಯಗಲಿತು. ಮುಂದುವರಿದು ಸಣ್ಣಣ್ಣನ ಉದ್ದಿಮೆ ಭಾಗೀದಾರಿಕೆಯಲ್ಲಿ ದೃಢ ವೃತ್ತಿ-ಹೂವರಳಿತು, ಮಂಗಳೂರಿನ ಉಡಿಯಲ್ಲಿ ಗೃಹಸ್ಥನಾಗಿ ನೆಲೆಕಂಡು ಧನ್ಯವಾಯ್ತು ಈ ಶೇವಿರೆ.

12 July 2011

ಪುಣ್ಯದ ಹೊಳೆಯಲ್ಲಿ ಕೊನೆಯ ಮುಳುಗು

ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರದ ಅಂತಿಮ ಕಂತು
(ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೫)


ಮೂರನೇ ಬೆಳಿಗ್ಗೆಯ ಉದಯರಾಗ - ಜಲಸಂರಕ್ಷಣೆ ಮತ್ತು ಮರುಪೂರಣದ ಪ್ರಾತ್ಯಕ್ಷಿಕೆ. ಇದಕ್ಕೆ ನಾಯಕತ್ವ ಎಡೆಂಬಳೆಯ ಸತ್ಯನಾರಾಯಣನದ್ದೇ. ಎಡೆಂಬಳೆ ಕೃಷಿಕ್ಷೇತ್ರ ವ್ಯಾಪ್ತಿಯಲ್ಲಿ ಐವತ್ತು ಎಕ್ರೆಗೂ ಮಿಕ್ಕ ನೆಲವಾದರೂ ಅಂದು ಸ್ಪಷ್ಟ ಕೃಷಿಗೆ ಒಡ್ಡಿಕೊಂಡ ಜಾಗ ಎರಡು ಮೂರೆಕ್ರೆ ಮಾತ್ರ. ಉಳಿದವು ಮುರಕಲ್ಲಿನ ಹಾಸು, ಮುಳಿಗುಡ್ಡೆ (ಇಂದು ರಬ್ಬರ್ ತೋಟ ಬಂದು ಇವರಿಗೆ ಆರ್ಥಿಕ ಚೈತನ್ಯ ಊಡಿದೆ). ಮನೆ ಸಮೀಪದ ಬಾವಿ, ಕೆರೆ ಒರತೆಯಿಲ್ಲದ ಕಗ್ಗಲ್ಲ ಕೋರೆಯಂತಾಗಿ ಫೆಬ್ರವರಿ ಮಾರ್ಚಿನಲ್ಲೇ ನೀರಿಗೆ ತತ್ವಾರ. ತೋಟದ ಪಾಡು ಬಿಡಿ, ಸ್ವಂತದ ಗೃಹೋಪಯೋಗಕ್ಕೂ ತೋಟದ ಇನ್ನೊಂದೇ ತುದಿಯಲ್ಲಿರುವ ದೂರದ ತೂತುಬಾವಿ ನೆಚ್ಚುವುದು ಅನಿವಾರ್ಯವಾಗಿದೆ. ತೋಟ, ಗುಡ್ಡೆ ಪೂರ್ತಿ ಓಡಾಡಿಸಿ ಮಳೆನೀರಿಗಡ್ಡಗಟ್ಟಿದ ದಿಂಡುಗಳು, ತೋಡಿದ ಇಂಗುಗುಂಡಿಗಳು ಮತ್ತವುಗಳ ಇಳಿದಿಕ್ಕಿನ ದಂಡೆಗಳ ನೆಲಹಿಡಿದಿಡುವ ಸಸ್ಯ ವೈವಿಧ್ಯ, ಅನಿವಾರ್ಯವಾಗಿ ಒದಗಿದ ಮಾಜೀ ಕಲ್ಪಣೆಗಳು ಮತ್ತವಕ್ಕೆ ಪದವಿನ ಹರಿನೀರನ್ನು ಒಡ್ಡಿಸಿಕೊಡುವ ಚರಂಡಿಗಳು, ಗುಡ್ಡೆಯಲ್ಲಿ ನೆಟ್ಟ ಸಸಿಗಳಿಗೆ ಬೇಸಗೆಯಲ್ಲಿ ಸೀಮಿತ ನೀರೂಡುವ ವ್ಯವಸ್ಥೆಗಳು, ಗೃಹ ಬಳಕೆಯ ಕ್ರಮಗಳೊಂದೊಂದೇ ಅನಾವರಣಗೊಂಡಾಗ ನಗರದಲ್ಲಿ ನಲ್ಲಿಯ ಕೊನೆಯನ್ನಷ್ಟೇ ನೋಡುವ ಮಂದಿಗೆ ಹೊಸಬೆಳಗು ಮೂಡಿದ್ದರೆ ಆಶ್ಚರ್ಯವಿಲ್ಲ.

04 July 2011

ಪವಾಡ ಸುಳ್ಳು, ಇರುವುದೆಲ್ಲ ಯಕ್ಷಿಣಿ!

ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರದ ಎರಡನೇ ಕಂತು

[ವರ್ತಮಾನಕ್ಕೆ ಪ್ರಸ್ತುತವಾದ ಸಾಂವಿಧಾನಿಕ ಪ್ರಮಾಣವನ್ನು ಅಣಕಿಸುವಂತೆ ಯಃಕಶ್ಚಿತ್ ‘ಭಕ್ತಿ-ಉದ್ಯಮದ’ ಕೇಂದ್ರಗಳು (ತಿರುಪತಿ, ಶಿರ್ಡಿ, ಧರ್ಮಸ್ಥಳ, ಪುಟ್ಟಪರ್ತಿ ಇತ್ಯಾದಿ), ವ್ಯಕ್ತಿಗಳು (ರಾಮದೇವ್, ರವಿಶಂಕರ್, ಪೇಜಾವರ ಮುಂತಾದವರು) ಮೆರೆಯುತ್ತಿರುವ ಕಾಲದಲ್ಲಿ ನಮ್ಮ ಕಾಡ್ಮನೆಯ ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರದ ಕಲಾಪಗಳ ವ್ಯಾಪ್ತಿ ಅದೆಷ್ಟು ಕ್ಷೀಣ ಎಂದನ್ನಿಸಿದರೂ ಒಂದು ಬೆಳಕಿನ ಕುಡಿ ಹೊಳೆಯಿಸಿದ, ವಿಚಾರದ ಕಿಡಿ ರಟ್ಟಿಸಿದ ಹೆಮ್ಮೆಯಲ್ಲಿ ಎರಡನೇ ಕಂತಿನಲ್ಲಿ ಮುಂದುವರಿಯುತ್ತೇನೆ]

28 June 2011

ಏಳಿ ಎದ್ದೇಳಿ

ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರ (ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೩)

“ಸ್ವಾಮೀ ತುಂಬಾ ಒಳ್ಳೆ ಕೆಲಸ ಮಾಡಿದಿರಿ. ಇನ್ನು ನಮ್ಮಲ್ಲಿ ಅರ್ಜಂಟಿಗೆ ಕಾಡು ನೋಡಬೇಕೆಂಬವರನ್ನು ನಿಮ್ಮ ಅಭಯಾರಣ್ಯಕ್ಕೆ ತರಬಹುದಲ್ಲಾ” ಟೂರ್ ಕಂಡಕ್ಟರ್ ಒಬ್ಬರ ಪ್ರಾಮಾಣಿಕ ಮಾತು. “ಅಶೋಕಣ್ಣಾ ಇನ್ನು ನಮ್ಮ ಧ್ಯಾನ ಬಳಗದ ಸತ್ಸಂಗಗಳು ನಿಮ್ಮ ಔಷಧೀಯ ತರುಲತೆಗಳ ನೆರಳಲ್ಲಿ” ಎಂದರೊಬ್ಬರು ಅಧ್ಯಾತ್ಮ ಜೀವಿ. “ಹೌದಯ್ಯಾ ಅಲ್ಲೇನೇನು ಪ್ರಾಣಿ ಬಿಟ್ಟಿದ್ದೀರಿ?” ಜನ್ಮದಲ್ಲೊಮ್ಮೆ ಯಾವುದೋ ವನಧಾಮಕ್ಕೆ ಕಾರಿನಲ್ಲಿ ಹೋಗಿ ಬಂದವರ ಪ್ರಶ್ನೆ. “ನಿನ್ನ ಜಮೀನಿನಲ್ಲಿ ಈ ವರ್ಷ ಅಡಿಕೆ ಎಷ್ಟಾದೀತು” ಸಮೀಪದ ಕೃಷಿಕ ಬಂಧು ಒಬ್ಬರ ಕುಹಕವಿಲ್ಲದ ಕುತೂಹಲ. “ಸ್ವಲ್ಪ ನಿಮ್ಮ ಅಭಯಾರಣ್ಯದ ದಾರಿ ಹೇಳಿ. ವಾರಾಂತ್ಯದಲ್ಲೊಮ್ಮೆ ನಮ್ಮ ಶಾಲಾ ಮಕ್ಕಳನ್ನು ಪಿಕ್ನಿಕ್ ಮಾಡಿಸ್ತೇನೆ” ಮುಖ್ಯೋಪಾಧ್ಯಾಯ ಉವಾಚ. (ನಮ್ಮಗ) ಅಭಯ ಅವನ ಆರೇಳು ಸಹಪಾಠಿಗಳನ್ನು ಹೀಗೇ ಒಮ್ಮೆ ಅಭಯಾರಣ್ಯಕ್ಕೆ ಒಯ್ದಿದ್ದ. ಮೃಗಜಲದ (ಗೊತ್ತಲ್ಲಾ, ಇದು ನಮ್ಮ ಬಾವಿಯ ಹೆಸರು!) ಕಟ್ಟೆಯಿಂದ ಇಣುಕಿ, ನಲ್ವತ್ತಡಿ ಆಳದ ನೀರು ಮೇಲೆ ತರುವ ಬಗ್ಗೆ ಒಬ್ಬ ನಾಗರಿಕಳಿಗೆ ಗಂಭೀರ ಸಮಸ್ಯೆ ಎದುರಾಯ್ತು. ಅಭಯ ರಾಟೆ, ಹಗ್ಗ ತೋರಿಸಿ “ವ್ಯಕ್ತಿಯೊಬ್ಬರ ಸೊಂಟಕ್ಕೆ ಹಗ್ಗ ಬಿಗಿದು ಇಳಿಸ್ತೇವೆ. ಅವರು ಜೊತೆಗೊಯ್ದ ಕ್ಯಾನಿನಲ್ಲಿ ನೀರು ತುಂಬಿಕೊಂಡ ಮೇಲೆ ಎಳೀತೇವೆ” ಎಂದ. ಮುಗ್ದೆ ಥಟ್ಟಂಥ “I will go this time” ಎಂದದ್ದೇ ಹಗ್ಗ ಬಿಗಿಸಿಕೊಳ್ಳಲು ಗಂಭೀರವಾಗಿ ತಯಾರಾಗಿಬಿಟ್ಟಳಲ್ಲಾ! ಒಮ್ಮೆ ಮಂಗಳೂರಿನಿಂದ ಸುಮಾರು ಮೂವತ್ತು ಕಿಮೀ ದೂರದ ನಂದಿಕೂರಿನಲ್ಲಿದ್ದ ಬಂಡೆಗಳಲ್ಲಿ ಶಿಲಾರೋಹಣಕ್ಕೆ ಆಸಕ್ತರ ಹಿಂಡನ್ನು (ಅವರವರ ದ್ವಿಚಕ್ರ ವಾಹನಗಳಲ್ಲಿ) ಕರೆದೊಯ್ದಿದ್ದೆ. ಜೊತೆಗೊಟ್ಟಿದ್ದ ತರುಣ ಡಾಕ್ಟರ್ ಒಬ್ಬರು “ಫ಼ಸ್ಟ್ ಟೈಮ್ ನಾನಿಷ್ಟು ಲಾಂಗ್ ಸ್ಕೂಟರ್ ಓಡಿಸಿದ್ದು” ಎಂದು ಸಂತೋಷದಲ್ಲಿ ಬೀಗಿದ್ದರು. ಹೀಗೆ ಪಟ್ಟಿಬೆಳೆಸಿ ನಿಮಗೆ ಪುಡಾರಿ ಭಾಷಣ ನೆನಪಾಗುವ ಮೊದಲು ಸ್ಪಷ್ಟಪಡಿಸುತ್ತೇನೆ. ನಾಗರಿಕತೆ ನಮ್ಮಲ್ಲೆಷ್ಟು ಪಾರಿಸರಿಕ, ಪ್ರಾಕೃತಿಕ ಬಿಡಿ, ಸಾಮಾನ್ಯಜ್ಞಾನದ್ದೂ ಅರಿವಿನ ಕೊರತೆಯನ್ನು ಉಂಟುಮಾಡಿದೆ ಎಂದು ಕಾಣುತ್ತಲೇ ಇತ್ತು. ಅದನ್ನು ಸ್ವಲ್ಪಾದರೂ ತುಂಬಿಕೊಡುವಂತೆ, ಮನುಷ್ಯ ಪ್ರಯತ್ನಕ್ಕೆಷ್ಟು ಸಾಧ್ಯತೆಗಳಿವೆ ಎನ್ನುವುದನ್ನು ಆಯ್ದ ಕೆಲವು ತರುಣರಿಗಾದರೂ ನಮ್ಮ ಮಿತಿಯಲ್ಲಿ ಮಾಡಿಕೊಡಬೇಕೆಂದು ಒಮ್ಮೆ ನಮಗೆ (ದೇವಕಿ, ಅಭಯ ಸೇರಿ) ಅನ್ನಿಸಿತು. (ಪ್ರಕೃತಿ ಪ್ರತಿಯೊಬ್ಬರಲ್ಲಡಗಿಸಿದ ಹನುಮಂತತ್ವಕ್ಕೊಂದು ಜಾಂಬವ ಸನ್ನೆಗೋಲಿಕ್ಕುವ ಪ್ರಯತ್ನ!)

23 May 2011

ಮಂಜು ನೆನಪುಗಳು

(ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೨)



“ಮಂಜೂ, ಗುಂಡುಕಟ್ಟೆ ಬಂತು” ಕಂಡಕ್ಟರ್ ಬಿಗಿಲು ಹೊಡೆದು ಹೇಳಿದ. ಒಂದು ಹೋಟ್ಲು, ಕಾಲುಕಟ್ಟಿದ ಒಂಜಿ ಕಟ್ಟದ ಕೋರಿ, ಒಕ ಡಾಕ್ಟ್ರು, ಗೋಳಿಮರದ ಮರೆಯಲ್ಲಿ ಕಸಾಯಿ ಅಡ್ಡೆ-ಮೀನ ಕಟ್ಟೆ, ತಟ್ಟಿ ಜೋಪಡಿಯಂತೆ ಗಡಂಗು, ನಾಲ್ಕು ಗುಟ್ಕಾಮಾಲಾಲಂಕೃತ ಸರ್ವಸರಕಿನ ಅಂಗಡಿ, ಎಂಟು ಮನೆ ಮತ್ತೆ ಬೀಡಾಡಿ ಜನ, ಜಾನುವಾರು, ನಾಯಿ. ಅತ್ತ ಎರಡು ಮಿನಾರು, ಇತ್ತ ಸ್ವಲ್ಪ ತಗ್ಗಿನಲ್ಲಿ ಪರ್ಯಾಯವಾಗಿ ಹಸಿರು, ಕೇಸರಿ ಪತಾಕೆ ಶೋಭಿಸುವ ಸಣ್ಣ ಮೈದಾನ ಹೀಗೆ ಮೋಂಟುಗೋಳಿ ಪೇಟೆ ಮುಗೀತು ಎನ್ನುವಲ್ಲಿ ಇಳಿದದ್ದಾಯ್ತು. ಬೋಳೋಬೋಳು ಪದವು, ರಣಗುಡುವ ಬಿಸಿಲಿನಲ್ಲಿ, ನಾಲ್ಕು ಮುಳ್ಳು ಪೊದರು, ಸುಟ್ಟುಳಿದ ಮುಳಿಕರಿ ಬಿಟ್ಟರೆ ಎಲ್ಲವೂ ಬೆಂಗಾಡಿನದೇ ರೂಪ! ತುಸುವೇ ತಗ್ಗುದಿಣ್ಣೆಗಳ ಮುರಕಲ್ಲ ಹರಹು - ಸುಟ್ಟು ರಸಸೋತ ಜೇನ ಎರಿಯದ್ದೇ ರೂಪ. ಮತ್ತೆ ಎಲ್ಲಿ ನೋಡಿದರೂ ಅಳತೆಗೆ ಕಡಿದಿಟ್ಟ ಕಲ್ಲ ಒಟ್ಟಣೆ, ನಕ್ಕರಿಕಲ್ಲಿನ ರಾಶಿ, ಹರಕು ಡಾಮರಿನಂಚಿನಲ್ಲಿ ಹುಗಿಯುವ ಚರಳು, ಪದವಿನ ಸುಳಿಗಾಳಿಗೇಳುವ ದೂಳು ಎಲ್ಲಾ ಮುರಮಯ! ಕೈಯಲ್ಲಿ ಹಿಡಿದ ಹದಿನಾರು ಪುಟದ ಕರೆಯೋಲೆಯೇನೋ ‘ಬನ್ನಿ ಅಭಯಾರಣ್ಯಕೆ’ ಎಂದರೂ ನಕ್ಷೆ ಸರಿಯಿದ್ದೀಯಾ ಎಂದರೂ ಪುಷ್ಟಿಕೊಡುವಂತೆ ಹಸಿರು, ತಣ್ಪು ಕಾಣುತ್ತಿರಲಿಲ್ಲ. ಕತ್ತು ಹೊರಹೊರಳಿಸುವಾಗ ನಾಲ್ಕು ಹೆಜ್ಜೆ ಹಿಂದೆ, ದಾರಿ ಬದಿಯಲ್ಲೊಂದು ಬ್ಯಾನರು. ಅರ್ಧಂಬರ್ಧ ಕಟ್ಟಿಬಿಟ್ಟ ಕಟ್ಟಡ ಒಂದರ ತುಕ್ಕಿನ ಸರಳಿಗೂ ಗಲಗಲ ಎನ್ನುವ ಅಕೇಸಿಯಾ ಮರದ ರೆಂಬೆಗೂ ಮೈತ್ರಿ ಮಾಡಿ ಕಟ್ಟಿಕೊಂಡಿತ್ತು ‘ಅಭಯಾರಣ್ಯಕ್ಕೆ ದಾರಿ.’

15 May 2011

ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ

ಭಾಗ ೧. ಅಭಯಾರಣ್ಯ

ನಾನು ಪುಸ್ತಕ ವ್ಯಾಪಾರೀತನದ ಬಿಡುವಿನಲ್ಲಿ ಕಾಡುಬೆಟ್ಟ ಸುತ್ತಿದ್ದು ನಿಮಗೆಲ್ಲಾ ತಿಳಿದೇ ಇದೆ. ಹವ್ಯಾಸಿ ಅನುಭವ ಹೆಚ್ಚಿದಂತೆ ಮನುಷ್ಯನ ದುರಾಸೆ, ದುರಾಡಳಿತಗಳು ಪ್ರಕೃತಿಯ ಸಹಜ ಸ್ಥಿತಿಗೆ ಭಂಗ ತರುವುದು ಕಂಡಾಗ “ಪರಿಸರ ಉಳಿಸಿ, ಪಶ್ಚಿಮ ಘಟ್ಟ ಉಳಿಸಿ” ಎಂದೇ ಹುಯ್ಯಲಿಡುವ ಮಂದೆಯಲ್ಲಿ ಒಂದಾದೆ. “ಓ ಬನ್ನಿ, ಗುಡ್ಡ ಬೆಟ್ಟ ಸುತ್ತಿ, ಝರಿ ಜಲಪಾತ ನೋಡಿ, ಕಾಡು ಬೆಳೆಸಿ..." ಇತ್ಯಾದಿ ಮಾತಿನ ಮಂಟಪದಲ್ಲಿ ನನ್ನದೂ ಕಂಠಸೇವೆ ನಡೆಸಿದೆ. ದಿನಗಳೆದಂತೆ ದೊಡ್ಡಗಂಟಲಿನ ವಿರೋಧವಿದ್ದದ್ದು ಬೃಹತ್ ಉದ್ಯಮಗಳ ಅಳವಡಿಕೆ ಮಾತ್ರ. ಹೆಚ್ಚಿನವರ ಕಾಳಜಿ ಇದ್ದದ್ದು ಕೆಲವರ ಸಣ್ಣ ಮನುಷ್ಯ ಸ್ವಾರ್ಥಗಳ ಕುರಿತಷ್ಟೇ. ಪರಿಸರ ಹೆಚ್ಚಿನವರಿಗೆ ಮತ್ತೊಂದು ಅಲಂಕಾರಿಕ ಉಪಾಧಿಯಾಗಿತ್ತು! ಈ ಹಂತದಲ್ಲಿ ನನಗೆ ಪ್ರಕೃತಿ ಶಕ್ತಿಯ ಕಿಂಚಿತ್ ದರ್ಶನ ಕೊಟ್ಟವರು ಮೂಡಬಿದ್ರೆಯ ಡಾ| ಎಲ್.ಸಿ ಸೋನ್ಸ್. ಅವರು ತಮ್ಮ ಕೃಷಿ ವಲಯದಿಂದ ಹೊರಗೊಂದು ತುಂಡು ಭೂಮಿಯನ್ನು ಕೇವಲ ರಕ್ಷಿಸಿ ಉಳಿಸಿಕೊಂಡಿದ್ದರು. ಹತ್ತೇ ವರ್ಷದಲ್ಲಿ ಅದು ಸುತ್ತಣ ಬೋಳು ಮುಳಿ ಗುಡ್ಡೆಗೆ ವ್ಯತಿರಿಕ್ತವಾಗಿ ಪಶ್ಚಿಮ ಘಟ್ಟದ ದಟ್ಟ ಕಾಡಿನ ಪುಟ್ಟ ರೂಪವನ್ನೇ ಅನಾವರಣಗೊಳಿಸಿತ್ತು. ಇದೊಂದು ವೈಭವ ನನಗೂ ಬೇಕೆನ್ನಿಸಿತು. ಆ ನನ್ನ ಕನಸಿನ ಬಳ್ಳಿಗೆ ತತ್ತ್ವದ ಚಪ್ಪರ ಕೊಟ್ಟವರು ಡಾ| ಕೆ. ಉಲ್ಲಾಸ ಕಾರಂತ.

25 December 2009

ತೆರೆಮರೆಯ ಕುಣಿತ

ನಿದ್ದೆಗೇಡಿ ನಾನು ಮೂರು ಗಂಟೆಗೇ ಎದ್ದರೂ (೨೮-೧೨-೨೦೦೯ರಂದು) ನಮ್ಮ ಮನೆಗೆ ಬೆಳಿಗ್ಗೆ ಐದು ಗಂಟೆಗೆ ಆಯ್ತು. ಮನೆಯಲ್ಲಿ ನಾವು ನಾಲ್ಕೇ ಜನವಿದ್ದರೂ ಬೆಂಗಳೂರಿನಿಂದ ಬರಲಿದ್ದ ಕ್ಯಾಮರಾ ತಂಡದ ನಿರೀಕ್ಷೆಯಲ್ಲಿ ಬಾಯ್ಲರ್ ಕುದಿಸಿದೆವು. ಮದುಮನೆಯ ಸಂಭ್ರಮದಲ್ಲಿ ನಮ್ಮ ಪೂರ್ವರಂಗಗಳನ್ನೆಲ್ಲ ಮುಗಿಸಿ, ಆರು ಗಂಟೆಗೆಲ್ಲಾ ಇನ್ನೇನು, ಮುಂದೇನು ಎನ್ನುವ ಸ್ಥಿತಿ. ಕುತೂಹಲಕ್ಕೆ ಅಭಯ ಚರವಾಣಿಯಲ್ಲಿ ಕ್ಯಾಮರಾ ತಂಡದ ನಾಯಕ ಧರ್ಮೇಂದ್ರರನ್ನು ವಿಚಾರಿಸಿಕೊಂಡ. “ಅಯ್ಯೋ ಬಿಡಿ ಸಾರ್, ಇನ್ನಾ ಒನ್ನೆಂಡಾಫ್ ಅವರ್ನಲ್ಲಿ ಮಂಗ್ಲೂರ್ ರೀಚಾಗ್ತೀವಿ.” ನಂಬಿದೆವು, ನನ್ನ ಕಾರು ಅಂಗಳಕ್ಕೆ ಇಳಿಯಿತು, ಹೋಟೆಲಿನ ಇಡ್ಲಿ ಒಡೆ ತಂತು, ತಿಂತು (ಏಯ್! ಕಾರ್ ತಿನ್ಲಿಲ್ಲಾ ಬಿಡಿ). ಡಾ| ಮನೋಹರ ಉಪಾಧ್ಯರ ದೊಡ್ಡ ಕಾರನ್ನು ಚಾಲಕ ತಂದ, ಅದಕ್ಕೂ ನನ್ನದಕ್ಕೂ ಒಂದೊಂದು ಜನರೇಟರ್ ಅಲ್ಲದೆ ಏನೇನೆಲ್ಲಾ ತುಂಬಿ ಸಜ್ಜುಗೊಳಿಸಿದೆವು. ಉಪಾಯ್ದರೂ (ಕೋಟದ ಆಡುನುಡಿಯಲ್ಲಿ ಉಪಾಧ್ಯರು>ಉಪಾಯ್ದರೂಂತ ಹಿಂದೆಯೇ ಹೇಳಿದ್ದು ಇಷ್ಟು ಬೇಗ ಮರೆತಿರಲಾರಿರಿ.) ಬಂದರು, ಆದರೆ ಕ್ಯಾಮರಾ ಟೀಮ್ ಬರಲಿಲ್ಲ! ಬಾಯ್ಲರ್, ಇಡ್ಲಿ ಸಾಂಬಾರ್ ತಣಿದಿತ್ತು, ಅಭಯ ಕುದಿಯುತ್ತಿದ್ದ. “ಒನ್ನೆಂಡಾಫ್ ಅಂತೆ, ಟೂ ಆಯ್ತು. ಮೊಬೈಲ್ ನೋಡಿದರೆ ‘ಸ್ವಿಚ್ಡಾಫ್’ ಬರ್ತಾ ಇದೆ...” ಶತಪಥ ಹಾಕುವುದಷ್ಟೇ ಉಳಿಯಿತು.

07 December 2009

ಎಣ್ಣೆ ಬೇಕು ದೀವಟಿಗೆಗೆ!

ಆಹಾಹೋsssss ಹ್ಹೋss ಹ್ಹೋಯ್!

ಐದು ತಿಂಗಳ ದೂರದಲ್ಲಿ ಕೇಳಿತೀ ಮೊದಲ ಅಟ್ಟಹಾಸ. ಡಾ| ಮನೋಹರ ಉಪಾಧ್ಯ, ಎರಡು ಯಕ್ಷಪ್ರಸಂಗಗಳ ದೀವಟಿಗೆ ಆಟ ದಾಖಲೀಕರಣದ ಯೋಜನೆಗೆ ಬಣ್ಣ ಬಳಿದು, ವೇಷ ತೊಟ್ಟು, ಗೆಜ್ಜೆ ಕಟ್ಟಿಯಾಗಿತ್ತು! ಈ (ಕೆಲಸದಲ್ಲಿ) ರಾಕ್ಷಸನಿಗೆ ಚಂಡೆ ಮದ್ದಳೆಗಳ ಹಿಮ್ಮೇಳವಷ್ಟೇ ನನ್ನದು. ನನ್ನ ಮಗ (ಸಿನಿ-ನಿರ್ದೇಶಕ) ಅಭಯಸಿಂಹನ ಪೂರ್ಣ ತಾಂತ್ರಿಕ ಜವಾಬ್ದಾರಿಯಲ್ಲಿ ದಾಖಲೀಕರಣದ ವೆಚ್ಚಗಳ ಅಂದಾಜುಪಟ್ಟಿ ಮಾಡಿಸಿದೆವು. ತಂಡ ಮತ್ತು ಪ್ರಸಂಗಗಳ ಆಯ್ಕೆಯಲ್ಲಿ ಬಡಗು ತಿಟ್ಟಿಗೆ ಅದ್ವಿತೀಯ ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದ ಉಡುಪಿ ಯಕ್ಷಗಾನ ಕೇಂದ್ರ. ಕೆಲಕಾಲದಿಂದ ಯಕ್ಷಗಾನಕ್ಕೆ ಸಾಂಪ್ರದಾಯಿಕ ಚಂದ ಮರುಕಳಿಸಲು ಕ್ರಿಯಾತ್ಮಕವಾಗಿ ಹೆಣಗುತ್ತಿರುವ ಪೃಥ್ವೀ ರಾಜ್ ಕವತ್ತಾರ್‌ಗೆ ತೆಂಕು ತಿಟ್ಟಿನ ತಂಡವೊಂದರ ಸಂಯೋಜನೆ ಮತ್ತು ನಿರ್ದೇಶನವನ್ನೂ ವಹಿಸಿಕೊಟ್ಟೆವು. ಮಳೆ ಪೂರ್ಣ ನಿಂತ ಮೇಲಿನ ಒಂದು ದಿನವನ್ನು ಪ್ರದರ್ಶನಕ್ಕೆ  ನಿಶ್ಚಯಿಸಿಕೊಂಡದ್ದೂ ಆಯ್ತು.

19 November 2009

ದೀವಟಿಗೆ ಕಥಾನಕವನ್ನು ಬಣ್ಣಿಪೆನು ಪೊಡಮಡುತ



ಕೇಳಿ ಹೊಡೆದ್ರೀ, ಸಭಾಕ್ಲಾಸ್ ಕೊಟ್ರೀ, ನಿಜದ ದೀವಟಿಗೆ ಆಟ ಎಲ್ರೀ ಎನ್ನಬೇಡಿ. ಹಾಡು, ಭಾಷಣಗಳನ್ನಾದರೋ ನನ್ನ ಮಿತಿಯ ಲಿಖಿತ ಸಾಹಿತ್ಯದಲ್ಲಿ ಹಿಂದಿನೆರಡು ಕಥಾನಕಗಳಲ್ಲಿ ‘ಸುಧಾರಿಸಿದ್ದು’ ನಿಜ. ಅಂದ ಮಾತ್ರಕ್ಕೆ ಬಹುಮುಖೀ ಯಕ್ಷಗಾನ ಬಯಲಾಟಕ್ಕೆ ನಾನು ನೇರ ನುಗ್ಗುವುದು ಸರಿಯಾಗದು. ಹಾಗಾಗಿ ಅಂದಿನ ಪ್ರದರ್ಶನದ ಕುರಿತು ಸುಧಾ ವಾರಪತ್ರಿಕೆಯಲ್ಲಿ ನನ್ನ ಹೆಸರಿನಲ್ಲಿ ಪ್ರಕಟವಾದ (ಲಿಪಿಕಾರ ನಾ, ಕವಿ ನಂಬಿಯಾರ್) ಲೇಖನದ ಸಂಕ್ಷಿಪ್ತ ರೂಪವನ್ನು ಮೊದಲು ನಕಲಿಸುತ್ತೇನೆ.

12 November 2009

ದೀವಟಿಗೆಯಲ್ಲಿ ಸಭಾಕ್ಲಾಸ್

ಹೆಸರು ಕ್ಷೀರಸಾಗರ, ಮಜ್ಜಿಗೆಗೆ ಗತಿಯಿಲ್ಲ ಎಂಬಂತೇ ಇತ್ತು ನಮ್ಮ ‘ಅಭಯಾರಣ್ಯ’; ತುಂಡು ನೆರಳಿಲ್ಲ. ಆದರೂ ಪೂರ್ವಾಹ್ನವಿಡೀ ರಣಗುಡುವ ಬಿಸಿಲಿನಲ್ಲಿ, ಕಲ್ಲುಮುಳ್ಳುಗಳ ಪದವಿನಲ್ಲಿ ಕೊನೆಗಳಿಗೆಯ ಸಿದ್ಧತೆಗಳನ್ನು ಮಾಡಿಕೊಂಡೆವು. ದಾರಿಬದಿಗೆ ಅಭಯಾರಣ್ಯದ ಬ್ಯಾನರು ಕಟ್ಟಿದ್ದಾಗಿತ್ತು. ಅಲ್ಲೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಪಾರ್ಕಿಂಗ್, ನಡೆದು ಬರುತ್ತಿದ್ದಂತೆ ಮೊದಲ ಗೇಟಿನ ಬಳಿ ವಿದ್ಯುಜ್ಜನಕ, ಅಭಯಾರಣ್ಯದ ಗೇಟಿನ ಬುಡದಲ್ಲಿ ಜನರೇಟರಿನ ಮೇಲೊಂದು ಕಣ್ಣಿಟ್ಟುಕೊಂಡು, (ನನ್ನ ಪ್ರಕಟಣೆಗಳ ಮತ್ತು ಆಯ್ದ ವನ್ಯ ಸಂಬಂಧೀ) ಪುಸ್ತಕಗಳ ಸಣ್ಣ ಮಾರಾಟ ಪ್ರದರ್ಶನಕ್ಕೆ ಅಂಗಡಿಯ ನನ್ನ ಬಲಗೈ - ಶಾಂತಾರಾಮ ಸಜ್ಜುಗೊಂಡಿದ್ದ. ಅವನ ಎದುರಿಗೆ ಮೊಂಟೆಪದವಿನ ಹೋಟೆಲ್ ಬಾಬು ನಮ್ಮ ಕ್ಯಾಂಟೀನ್ ನಿರ್ವಣೆಯಲ್ಲಿ ನಿರತನಾಗಿದ್ದ. ವೈಭವ ಇಲ್ಲ, ಆದರೆ ಹೊಟ್ಟೆಗಟ್ಟಿಗೆ ಅವಲಕ್ಕಿ, ಉಪ್ಪಿಟ್ಟು, ಬನ್ನು, ಬಾಳೇಹಣ್ಣು, ಮಜ್ಜಿಗೆ, ಕಾಪಿ, ಚಾ ತಿಂದಷ್ಟೂ (ಅದನ್ನು ಕೆಲವು ಪ್ರತಿಷ್ಠಿತರು ‘ಕೇಳಿದಷ್ಟೂ’ ಎಂದು ಅವರ ಅನುಕೂಲಕ್ಕೆ ತಿದ್ದಿಕೊಂಡು ಪಂಟಿಬಿರಿಯ ತಿಂದದ್ದಲ್ಲದೆ ಬನ್ಸು ಕಟ್ಟಿಕೊಂಡು ಹೋದದ್ದನ್ನು ಹೇಳದಿರಲಾರೆ) ಉಚಿತವಾಗಿ ಕೊಡಲು “On your mark” ಆಗಿದ್ದ. ಪ್ರೇಕ್ಷಾಂಗಣದಲ್ಲಿ ದಪ್ಪ ತಾರ್ಪಾಲನ್ನು ಹರಡಿದ್ದಲ್ಲದೆ, ಪ್ರಾಯಸ್ಥರಿಗೆ ಅಥವಾ ಸೊಂಟಬಾಗದವರಿಗೆ ಒಂದು ಬದಿಯಲ್ಲಿ ಇಪ್ಪತ್ತು ಮೂವತ್ತು ಕುರ್ಚಿಗಳನ್ನೂ ಹಾಕಿದ್ದೆವು. ರಂಗ, ಚೌಕಿಗಳಲ್ಲಿ ನಮ್ಮ ಜವಾಬ್ದಾರಿಯನ್ನಷ್ಟೂ ಚೊಕ್ಕ ಮಾಡಿದೆವು. ‘ಕಾಡ್ಮನೆ’ಯೊಳಗೆ ಇರುವ, ಬರಬಹುದಾದ ಜನರ ಲೆಕ್ಕಾಚಾರದಲ್ಲಿ (ನನ್ನ ಹೆಂಡತಿ) ದೇವಕಿ, ನನ್ನಮ್ಮನ ಸಹಾಯದಲ್ಲಿ (ಸುಮಾರು ಮೂವತ್ತು ಮಂದಿಗೆ) ಅಡುಗೆ ಮಾಡಿ ಮುಗಿಸುವುದರೊಳಗೆ ನಮ್ಮ ರಾಗ ಸುರುವಾಗಿತ್ತು “ದೊಡ್ಡ ಬಟ್ಟಲಮ್ಮಾ ದೊಡ್ಡ ಬಟ್ಟಲೂ.”

06 November 2009

ದೀವಟಿಗೆ ಆಟಕ್ಕೆ ಕೇಳಿ ಹೊಡೆಯುತ್ತಾ...

‘ಝಗಮಗಿಸುವ ವಿದ್ಯುದ್ದೀಪಾಲಂಕೃತ’ ಎನ್ನುವುದು ಹೆಚ್ಚುಗಾರಿಕೆಯಾಗಿದ್ದ ಕಾಲದಲ್ಲಿ ಯಕ್ಷವೀಕ್ಷಣೆಗೆ ಬಂದವನು ನಾನು. ಎತ್ತರಿಸಿದ ಚೌಕಾಕಾರದ ವೇದಿಕೆಯ ಮೂರೂ ಬದಿಗೆ ಕಂಬದ ಮೇಲಿನುದ್ದಕ್ಕೂ ಮೇಲಿನಡ್ಡಕ್ಕೂ ಬಿಗಿದ ಟ್ಯೂಬ್ ಲೈಟುಗಳು ಏಕಕಾಲಕ್ಕೆ ರಂಗವನ್ನೂ ನಮ್ಮ ಕಣ್ಣನ್ನೂ ತುಂಬುತ್ತಿದ್ದವು. ರಂಗದ ಎದುರಿನ ಭಾರೀ ಬುರುಡೆಯ ಬಲ್ಬ್‌ಗಳು ನಮ್ಮತ್ತ ಮರೆಕಟ್ಟಿಕೊಂಡರೂ ರಂಗಕ್ರಿಯೆಯನ್ನು ಹೆಚ್ಚಿನ ಪ್ರಖರತೆಯಲ್ಲಿ, ಸೂಕ್ಷ್ಮದಲ್ಲಿ ತೋರಿಸುತ್ತಿದ್ದವು. ಮುಂದುವರಿದ ದಿನಗಳಲ್ಲಿ ಈ ದೀಪಗಳಲ್ಲಿ ಹಲವು ತೆರನ ವರ್ಣ ಸಂಯೋಜನೆಗಳು, ಆರಿಸಿ ಬೆಳಗಿಸುವ ಚಮತ್ಕಾರಗಳು ಹೆಚ್ಚಿನ ರಸಪೋಷಣೆಗೆಂದೇ ಬಂದಂತಿತ್ತು. [ಬ್ರಹ್ಮಕಪಾಲ ಪ್ರಸಂಗದಲ್ಲಿ ಬಿಕ್ಷೆಬೇಡುವ ಶಿವನಿಗೆ ಪ್ರೇಕ್ಷಕ-ಭಕ್ತರು (ಪ್ರದರ್ಶನ ಚಟದವರು?) ಎಸೆದ ನಾಣ್ಯ ಬಲ್ಬ್ ಒಡೆದಾಗ ಪಾತ್ರಧಾರಿಯ ಲಾಭದಲ್ಲಿ ಮೇಳದ ಯಜಮಾನನ ಕಷ್ಟ, ನಷ್ಟ ನನಗೂ ತಟ್ಟಿತ್ತು.] ಬರಬರುತ್ತ ಪ್ರೇಕ್ಷಕನ ಕಣ್ಣು ಕುಕ್ಕುವ ದೀಪಗಳು ಬಹುತೇಕ ಮರೆಸೇರಿದರೂ ರಂಗದ ಬೆಳಕಿನ ಹಬ್ಬ ನಡೆದೇ ಇತ್ತು.