Showing posts with label ಪರ್ವತಾರೋಹಣ. Show all posts
Showing posts with label ಪರ್ವತಾರೋಹಣ. Show all posts

04 August 2020

ಹನುಮಾನ್ ಚಟ್ಟಿಯ ದುಂಧುಭಿ ವಧ!!

(ಪ್ರಾಕೃತಿಕ ಭಾರತ ಸೀಳೋಟ - ೯) 

ಕಾಗೆ ಹಾರಿದಂತೆ ಡೆಹ್ರಾಡೂನ್ - ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ - ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು ಇನ್ನೂ ಕಡಿದು ಎಂದು ತಿಳಿದು, ಅಲ್ಲೇ ಊಟ ಮುಗಿಸಿಕೊಂಡೆವು. ಅಪರಾಹ್ನದ ದಾರಿ ಬಲು ಸುರುಳಿ ಚಕ್ಕುಲಿಯಂತೆ ಸುತ್ತುತ್ತಿದ್ದಂತೆ, ಕ್ಷಣ ಕ್ಷಣಕ್ಕೂ ವಾತಾವರಣದಲ್ಲೂ ತಂಪು ಏರುತ್ತಿತ್ತು. ದಾರಿಯ ಈ ಭಾಗವನ್ನೇ ಹೀರೊಂಡಾ ಕಂಪೆನಿ ತನ್ನ ಜಾಹೀರಾತುಗಳೆಲ್ಲ ‘ಒಂದು ಲೀಟರ್ ಪೆಟ್ರೋಲ್ ದಾರಿ’ ಎಂದೇ ಮೆರೆಸುತ್ತಿದ್ದದ್ದು ನೆನಪಾಗಿತ್ತು. 

01 May 2020

ಬಲ್ಲಾಳರಾಯನ ದುರ್ಗ - ಬೆಂಬಿಡದ ಭೂತ!

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೬) 

ಎರಡು ದಿನಗಳ ರಜೆ ಬರುವುದನ್ನು ಮುಂದಾಗಿ ಗುರುತಿಸಿ, ಹಳೇ ಚಾಳಿಯವರನ್ನು ಲೆಕ್ಕಕ್ಕೆ ಹಿಡಿದು ಊರು ತಪ್ಪಿಸಿಕೊಳ್ಳುವ ಕಲಾಪ ಹೊಸೆಯುವುದು ನನಗೆ ರೂಢಿಸಿಬಿಟ್ಟಿತ್ತು. ಅಷ್ಟಕ್ಕೆ ಸುಮ್ಮನಾಗದೆ ಅಂಗಡಿಗೆ ಬಂದ ಯಾರೂ ಸ್ವಲ್ಪವೇ ವನ್ಯ ಒಲವನ್ನು ಕಾಣಿಸಿದರೂ ನಮ್ಮ ಕಲಾಪಕ್ಕೆ ಸೆಳೆದುಕೊಳ್ಳಲೂ ಪ್ರಯತ್ನಿಸುತ್ತಿದ್ದೆ. ಹೀಗೆ ಪ್ರಜಾವಾಣಿ ವರದಿಗಾರರಾಗಿ ಮಂಗಳೂರಿಗೆ ಬಂದಿದ್ದ, ಅಪ್ಪಟ ಬಯಲುಸೀಮೆಯ (ದಾವಣಗೆರೆ ಮೂಲ) ಜಿಪಿ ಬಸವರಾಜು, ಶಾಂತಾ ದಂಪತಿಯನ್ನು ‘ಕಡಮಕಲ್ಲು - ಗಾಳೀಬೀಡು’ ಅಸಾಧ್ಯ ದಾರಿಯಲ್ಲಿ ಕರೆದೊಯ್ದು ಸತಾಯಿಸಿಬಿಟ್ಟಿದ್ದೆ. (ನೋಡಿ: ತಲೆ ನೂರ್ಮಲೆ ಘಾಟಿಯಲ್ಲಿ) ಅವರಿಗೊಂದು ಚಂದದ ಬೈಕ್ ಸವಾರಿ ಮತ್ತು ಸ್ಮರಣೀಯ ಶಿಖರಾನುಭವ ಕೊಡಲೆಂಬಂತೆ ಬಲ್ಲಾಳರಾಯನ ದುರ್ಗವನ್ನು ಆರಿಸಿಕೊಂಡೆ. ಇಲ್ಲಿ ಮಂಗಳೂರ ಉರಿ ಸೆಕೆಯಿಂದ ಬಿಡುಗಡೆ ಮತ್ತು ಘಟ್ಟದ ತಂಪು ಮೈಗೆ ಹತ್ತುವಂತೆ ಒಂದೂವರೆ ದಿನದ ಯೋಜನೆ ಹಾಕಿದ್ದೆ. 

29 April 2020

ಹೋಗಿ ಬಲ್ಲಾಳರಾಯ ದುರ್ಗಕ್ಕೆ

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೫) 

ಲೇಖಕ: ಎ.ಪಿ. ಚಂದ್ರಶೇಖರ 

(ಚಿತ್ರಗಳು: ಕೀರ್ತಿ, ಮಂಗಳೂರು) 

[ಪಶ್ಚಿಮ ಘಟ್ಟದಲ್ಲಿ ನನ್ನ ಮೊದಲ ಹೆಜ್ಜೆ ಮೂಡಿಸುವ ದಿನ. ಮೈಸೂರಿನಿಂದ ಅದಕ್ಕೆಂದೇ ಬಂದ ಗೆಳೆಯ ವಿಶ್ವನಾಥ್ ಜತೆಗೆ ದಿಢೀರ್ ಸೇರ್ಪಡೆಯಾದವ, ಅಧಿಕೃತ ಪರ್ವತಾರೋಹಣಕ್ಕೇ ಅದೇ ಮೊದಲು ಪ್ರವೇಶ ಪಡೆದವ, ಸೋದರ ಮಾವನ ಮಗ ಎ.ಪಿ. ಚಂದ್ರಶೇಖರ. ಸಣ್ಣಾಳು, ಇನ್ನೂ ಚಡ್ಡಿ ಪ್ರಾಯ (೮/೯ನೇ ತರಗತಿ). ಆದರೆ ಔಪಚಾರಿಕ ವಿದ್ಯೆಯೊಡನೆ ಹಳ್ಳಿಯ ವಿದ್ಯೆಯಲ್ಲಿ ಅಪ್ಪನ ಗರಡಿಯಲ್ಲಿ (ನೋಡಿ: ಅಸಮ ಸಾಹಸಿ ಮರಿಕೆ ಅಣ್ಣ) ಪಳಗಿದವ ಎನ್ನುವುದೇ ಆತನ ಅರ್ಹತೆ. ಚಿಕ್ಕಪ್ಪ ಗೌರೀಶಂಕರರ ಪ್ಯಾಂಟ್ ಹಾಕಿ, ಬಡಕಲು ಹೊಟ್ಟೆಗೆ ಬೆಲ್ಟ್
ಕಾಯಿಸಿ, ನೇತುಬೀಳುವ ಪ್ಯಾಂಟ್ ಕಾಲುಗಳನ್ನು ಗೋಣಿ ಹಗ್ಗದಲ್ಲಿ ಎತ್ತಿ ಕಟ್ಟಿ, ಇನ್ಯಾರದೋ ಕ್ಯಾನ್ವಾಸ್ ಶೂಗೆ ಮೂರು ಉಣ್ಣೆ ಕಾಲ್ಚೀಲದಲ್ಲಿ ಬಿಗಿ ಕೊಟ್ಟು ಯಶಸ್ವಿಯಾಗಿ ನಡೆದಿದ್ದ. (ನೋಡಿ: ಗಡಿಬಿಡಿಯಲ್ಲಿ ಕುಮಾರಮುಡಿಗೆ) ಮುಂದೊಮ್ಮೆ ಹೀಗೇ ಮಳೆಗಾಲದ ಬಿರುಸಿನಲ್ಲಿ ನಾವು ಮೊದಲ ಬಾರಿಗೆ ಕೂಡ್ಲುತೀರ್ಥ ನೋಡಲು ಹೋಗುವಾಗಲೂ ಚಂದ್ರ ಜತೆಗಿದ್ದ. ಅಷ್ಟೇ ಅಲ್ಲ ಬೆಳೆದಿದ್ದ. ಕೂಡ್ಲುತೋಟದಲ್ಲಿ ನಾವು ಕಂಡ ಪೂರ್ಣ ಬಳ್ಳಿಯದೇ ಸೇತುವೆ ಕುರಿತು ‘ಅಟ್ಟೆ ಬೂರುದ ಕಟ್ಟೆ’ ಎಂದು ಉದಯವಾಣಿಗೆ ಒಂದು ಲೇಖನವನ್ನೂ ಬರೆಯುವಷ್ಟು ಪ್ರೌಢನಾಗಿದ್ದ. ಇಂಥವೇ ಉಮೇದುಗಳೊಡನೆ ಚಂದ್ರ ನಮ್ಮೊಡನೆ ಬಲ್ಲಾಳರಾಯನ ದುರ್ಗವನ್ನೂ ಅನುಭವಿಸಿದ, ವಯಸ್ಕರ ಶಿಕ್ಷಣ ಮಾಲೆಯವರ ಮಾಸಿಕ - ಪುಸ್ತಕ ಪ್ರಪಂಚದಲ್ಲಿ ಪ್ರಕಟವಾಗುವಂತೆ (ಆಗಸ್ಟ್ ೧೯೮೩) ಸಾಹಸಯಾನದ ಲೇಖನವನ್ನೂ ಬರೆದಿದ್ದ. ಅದರ ಪೂರ್ಣ ಪಾಠ ಈಗ ನಿಮ್ಮ ಮುಂದೆ. 

25 April 2020

೫೦೦೦ ಅಡಿ ಎತ್ತರದ ಬಲ್ಲಾಳರಾಯನ ದುರ್ಗಕ್ಕೆ ಆರೋಹಣ


(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೪) 

ಲೇಖಕ - ತಿಲಕನಾಥ ಮಂಜೇಶ್ವರ 


[ಮಂಗಳೂರಿನಲ್ಲಿ ಕನ್ನಡದ ಕಹಳೆಯನ್ನು ಸಾರ್ವಜನಿಕಕ್ಕೆ ಊದಿದವರು ಮಂಗಳಗಂಗೋತ್ರಿಯ ಸ್ಥಾಪಕಾಚಾರ್ಯ, ಸಾಹಿತಿ ಎಸ್.ವಿ. ಪರಮೇಶ್ವರ ಭಟ್. ಅವರ ಬಹುಮುಖೀ ಸಾಧನೆಯ ಒಂದು ಎಳೆ - ಮನೆಮನೆಗೆ ಸರಸ್ವತಿಯನ್ನು ಗಟ್ಟಿಯಾಗಿ ಹಿಡಿದು ನಡೆಸುವುದರಲ್ಲಿ ಮುಂಚೂಣಿಯ ಪಟು ಭಟನಾಗಿ ನನ್ನ ಪರಿಚಯಕ್ಕೆ ಸಿಕ್ಕವರು ತಿಲಕನಾಥ ಮಂಜೇಶ್ವರ. ತನ್ನ ಕಾಳಜಿ ಎಲ್ಲಿ ವ್ಯಕ್ತಿಪ್ರತಿಷ್ಠೆಯ ಸಂಕೇತವಾಗಿ ಕಾಣುತ್ತದೋ ಎಂಬಂತೆ ತಿಲಕನಾಥ್ ಕಟ್ಟಿ ಬೆಳೆಸಿದ ಸಂಸ್ಥೆ ಭಾವ ಗಂಗೋತ್ರಿ. ಇದು ಮಂಗಳೂರು ವಲಯದ ಸಾಹಿತ್ಯಿಕ ಚಟುವಟಿಕೆಗಳನ್ನು ತಿಲಕನಾಥರ ಹೆಸರೇ ಹೇಳುವಂತೆ, ಅವರ ಅಭಿಮಾನದ ನೆಲೆ ಮಂಜೇಶ್ವರದವರೆಗೂ ವ್ಯಾಪಿಸುವಂತೆ ಮಾಡಿತ್ತು. ಮಂಜೇಶ್ವರದ ಧೀಶಕ್ತಿಯ ಸಂಕೇತವಾದ ಗೋವಿಂದ ಪೈಗಳ ಹೆಸರಿನಲ್ಲಿ ಗ್ರಂಥಾಲಯವನ್ನು ಕಟ್ಟುವ ಮೂಲಕ ಇಂದಿನ ಕಾಲೇಜು ಮತ್ತೊಂದಕ್ಕೆ ಮೂಲ ಪ್ರೇರಣೆಯನ್ನು ಕೊಟ್ಟವರು ತಿಲಕನಾಥ್. ಇವರ ಸಾಹಿತ್ಯಪ್ರೇಮ ಸಿನಿಮಾಕ್ಕೂ ವ್ಯಾಪಿಸಿದಾಗ ಮಂಗಳ ಫಿಲಂ ಸೊಸಾಯಿಟಿಯನ್ನೂ ಮಂಗಳೂರು ಕಂಡಿತ್ತು. ತಿಲಕನಾಥ್ ಉದ್ದಕ್ಕೂ ತಾನು ಕನ್ನಡದ ಸೇವಕ ಹೌದು, ಜಿಗಣೆಯಲ್ಲ ಎಂಬುದನ್ನು ತಮ್ಮ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ತೋರಿಕೊಟ್ಟರು. ಅವೆಲ್ಲವೂ ಅನುದಾನ ಶೋಷಕಗಳಾಗಿ ಪ್ರಸಿದ್ಧವಾಗಲಿಲ್ಲ, ಭಾವಪೋಷಕವಾಗಿಯೇ ವಿಕಸಿಸಿದ್ದವು. ಈ ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆ ಬರಬೇಕಿದ್ದರೆ ಸ್ವಂತ ಬದುಕಿಗೊಂದು ಗಟ್ಟಿ ವೃತ್ತಿಯ ನೆಲೆ ತಿಲಕನಾಥರಿಗೆ ಅವಶ್ಯವಿತ್ತು. ಹಾಗೆ ವೃತ್ತಿ ಭದ್ರತೆಯೊಡನೆ ಸಾಹಿತ್ಯಪ್ರೇಮಕ್ಕೆ ಇಂಬು ಎಂಬಂತೆ ಇವರು ತರಂಗ ವಾರಪತ್ರಿಕೆಯ ಸಂಪಾದಕೀಯ ಬಳಗಕ್ಕೇ ಸೇರಿಕೊಂಡರು. ಕುಟುಂಬ ಮಾಲಕತ್ವದ ಸಂಸ್ಥೆಯಲ್ಲಿ ಹೊರಗಿನವರಾಗಿ ತಲಪಬಹುದಾದ ಗರಿಷ್ಠ ಎತ್ತರ, ಗೌರವವನ್ನು ಕಂಡ ತಿಲಕನಾಥರು ಇಂದು ನಿವೃತ್ತ ಜೀವನವನ್ನು ಉಡುಪಿ ವಲಯದಲ್ಲೇ ಚೆನ್ನಾಗಿಯೇ ನಡೆಸಿದ್ದಾರೆ. ಅವರು ಆರೋಹಣದ ಬಲ್ಲಾಳರಾಯನ ದುರ್ಗದ ಸಾಹಸ ಯಾತ್ರೆಯಲ್ಲಿ ಭಾಗವಹಿಸಿದ್ದಲ್ಲದೆ, ಅಷ್ಟೇ ಉತ್ಸಾಹದಲ್ಲಿ ಅನುಭವ ಕಥನವನ್ನೂ ತಮ್ಮ ‘ತರಂಗ’ದ ೬-೩-೧೯೮೩ರ ಸಂಚಿಕೆಯಲ್ಲಿ ಪ್ರಕಟಿಸಿದ್ದರು. ಅದನ್ನು ಬಲ್ಲಾಳರಾಯನ ದುರ್ಗದ ಮಾಲಿಕೆಯ ಎರಡನೆಯ ಕಂತಾಗಿ ಬಳಸಿಕೊಳ್ಳಲು ನಾನು ಸಂತೋಷಿಸುತ್ತೇನೆ - ಅಶೋಕವರ್ಧನ] 

23 April 2020

ಬಂಡಾಜೆ ಅಬ್ಬಿಯ ತಲೆಯಲ್ಲೊಂದು ರಾತ್ರಿ

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೩) 

[೧೯೮೦ರ ಪರ್ವತಾರೋಹಣ ಸಪ್ತಾಹದ ಕೊನೆಯ ಕಲಾಪ - ನೀವೇ ಅನುಭವಿಸಿ - ರಾತ್ರಿ ಚಾರಣ ಮತ್ತು ಏರಿಕಲ್ಲು ಏರೋಣ, ಇವುಗಳ ಕೊನೆಯಲ್ಲಿ ಕೇಳಿದ ಸೊಲ್ಲು - ಮತ್ತೆಂದು, ಇಂಥ ಇನ್ನೊಂದು? ಅದಕ್ಕೆ ಸ್ಪಷ್ಟ ಉತ್ತರ ರೂಪದಲ್ಲಿ ನಡೆದ ಒಂದೇ ಸಾಹಸಯಾತ್ರೆಗೆ ಮೂರು ಭಿನ್ನ ಕಥನ ರೂಪ ಬಂದಿತ್ತು. ಅದರಲ್ಲಿ ಮೊದಲನೆಯದು ‘ಸುಧಾ’ ವಾರಪತ್ರಿಕೆ ೬-೩-೮೩ರ ಸಂಚಿಕೆಯಲ್ಲಿ ಪ್ರಕಟಿಸಿದ ನನ್ನದೇ ಕಥನವಿದು. ಇದರಲ್ಲಿ ಬಳಸಿದ ಚಿತ್ರಗಳು ಯಜ್ಞ ಹಾಗೂ ಕೀರ್ತಿಯವರವು] 

ಬಲ್ಲಾಳ ರಾಯನ ದುರ್ಗದ ನನ್ನ ಮೊದಲ ಕಥನದಲ್ಲಿ (ನೋಡಿ: ಬ.ಬ.ರಾ. ದುರ್ಗ - ೧) ಪರಿಚಯಿಸಿದ ಕಿಲ್ಲೂರಿನ ಕೂಡಬೆಟ್ಟು ಮನೆಯ ಇನ್ನೊಂದು ಗುರುತು ಪಟೇಲರ ಮನೆ. ಆದರೆ ಅದಕ್ಕೂ ಮೂಲದಲ್ಲಿದ್ದವರು ಪಟೇಲ ವೆಂಕಟ ಸುಬ್ಬರಾಯರ ಮಗ

27 November 2018

ಬಂಡಾಜೆ ಅಬ್ಬಿಯಲ್ಲಿ ಗಂಗಾಧರರು!

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೨)


ದುರ್ಗಕ್ಕೆ ನಾವು ಹತ್ತಿದ ಸಾಹಸವನ್ನು ರೋಮಾಂಚಕ ಕಥನ ಮಾಡಿ, ಅದೇ ಡಿಸೆಂಬರಿನಲ್ಲಿ ನಡೆದ ಪರ್ವತಾರೋಹಣ ಸಪ್ತಾಹದಲ್ಲಿ ಗೆಳೆಯ ಸಮೀರರಾವ್ ಪ್ರಸರಿಸಿದ್ದಾಯ್ತು. ನನಗೆ ಮಾತ್ರ ಬಂಡಾಜೆ ಅಬ್ಬಿ ನೋಡಲಿಲ್ಲ ಎನ್ನುವ ಕೊರಗು ಕಾಡುತ್ತಲೇ ಇತ್ತು. ಮುಂದೊಂದು ದಿನ ಅದಕ್ಕೂ ದಾರಿಯನ್ನು ಹೇಳಿದವರು ‘ಮೈದಾನ ಶಿಖರ’ದ ಕತೆ ಹೇಳಿದ ಬಂದಾರು ಶ್ರೀಪತಿರಾಯರೇ! "ಉಜಿರೆ ಕಳೆದ ಮೇಲೆ ಸಿಗುವ ಎಡಗವಲು, ಕಡಿರುದ್ಯಾವರ - ಕಿಲ್ಲೂರು ದಾರಿ ಅನುಸರಿಸಿ. ಮೂರು ನಾಲ್ಕು ಕಿಮೀಯೊಳಗೇ ಬಲಗವಲಿನಲ್ಲಿ ಸಿಗುವ ವಳಂಬ್ರದ ಎಳ್ಯಣ್ಣ ಗೌಡರನ್ನು ಹಿಡಿಯಿರಿ." ನೆನಪಿರಲಿ, ಅದು ಚರವಾಣಿಯ ಕಾಲವಲ್ಲ. ವಳಂಬ್ರ ಮನೆಗೆ ಸ್ಥಿರವಾಣಿಯೇನೋ ಇದ್ದಿರಬೇಕು. ಆದರೆ ಟ್ರಂಕ್ ಕಾಲ್ ಹಾಕಿ ಗಂಟೆಗಟ್ಟಳೆ ಕಾದರೂ ಸಂಪರ್ಕ ಸಾಧ್ಯವಾಗದ ಕಗ್ಗಾಡಮೂಲೆ; ಬಲ್ಲಾಳರಾಯನ ದುರ್ಗದ ನೇರ ತಪ್ಪಲು, ಬಂಡಾಜೆ ಅಬ್ಬಿಯ ಕಣಿವೆ.

22 November 2018

ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ


ಭಾಗ ೧. ದುರ್ಗದ ವಿಜಯ, ಅಬ್ಬಿಯ ಸೋಲು 


[೧೯೮೦ರಲ್ಲಿ ದಕ ಜಿಲ್ಲೆಯೊಳಗೆ ನಡೆಸಿದ ಪರ್ವತಾರೋಹಣ ಸಪ್ತಾಹದ ಮುಂದುವರಿಕೆಯಂತೆ, ಮತ್ತೊಮ್ಮೆ ಸಾರ್ವಜನಿಕ ಪ್ರಚಾರ ನಡೆಸಿ, ಸಂಘಟಿಸಿದ ಕಲಾಪ - ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ. ಹಿಂದೆ ಈ ಜಾಲತಾಣದಲ್ಲಿ ಏಳು ಭಾಗಗಳಲ್ಲಿ ಪರ್ವತಾರೋಹಣ ಸಪ್ತಾಹ ಮಾಲಿಕೆಯ ಧಾರಾವಾಹಿಯಾಗಿಸಿದ ಕೊನೆಯಲ್ಲಿ ಹೇಳಿಕೊಂಡಂತೆ ಇದು ಎಂಟನೆಯ ಭಾಗವಾಗಬೇಕಿತ್ತು. ವಿಳಂಬವಾದರೂ ಈಗ ಅದನ್ನು ಬಲ್ಲಾಳರಾಯನ ದುರ್ಗ ವಲಯದ ನನ್ನ ಹಲವು ಅನುಭವಗಳ ಸ್ವತಂತ್ರ
ಮಾಲಿಕೆಯನ್ನಾಗಿಸುತ್ತಿದ್ದೇನೆ.] 

ಪುತ್ತೂರಿನಲ್ಲಿ ವಕೀಲರಾಗಿದ್ದ ನನಗೆ ಹಿತೈಷಿಯೂ ಹಿರಿಯ ಮಿತ್ರರೂ ಆಗಿದ್ದ ಬಂದಾರ್ ಶ್ರೀಪತಿರಾಯರು ನನ್ನ ಓದುಗರಿಗೆ ಅಪರಿಚಿತರೇನಲ್ಲ. (ಮರೆತಿದ್ದರೆ ಇಲ್ಲಿ ನೋಡಿ: ಅಸಾಧ್ಯ ಅಮೆದಿಕ್ಕೆಲ್) ಅವರೊಂದು ದಿನ (೧೯೭೮-೭೯ರ ಸುಮಾರಿಗೆ) ನನ್ನಂಗಡಿಗೆ ತುಸು ಕುಂಟುತ್ತ ಬಂದರು. ವಿಚಾರಿಸಿದೆ. ಅವರ ಭೂಪಟ ಓದುತ್ತ ನೈಜ ಚಿತ್ರಗಳನ್ನು ಮನೋಪಟಲದ ಮೇಲೆ ಸಾಕ್ಷಾತ್ಕರಿಸಿಕೊಂಡದ್ದರ ಹೊಸದೇ ಕತೆ ಬಂತು. 

28 October 2016

ಯಶಸ್ಸಿನ ಉತ್ತುಂಗದಲ್ಲಿ – ಪರ್ವತಾರೋಹಣ ಸಪ್ತಾಹ

(ಪರ್ವತಾರೋಹಣ ಸಪ್ತಾಹದ ಏಳನೇ ಅಧ್ಯಾಯ)

ಸಪ್ತಾಹದ ಕೊನೆಯ ದಿನದಂದು ಸಮಾರೋಪದ ಸಭಾ ಕಲಾಪವೂ ನೀವೇ ಅನುಭವಿಸಿ ಕಾರ್ಯಕ್ರಮದ ನಾಂದಿಯೂ ಸೇರಿ ಸಮನಿಸಿತ್ತು. ಆರೋಹಣಕ್ಕೆ ಸಲಕರಣೆಗಳ ದಾನಕೊಟ್ಟು, ಪರೋಕ್ಷವಾಗಿ ನಮ್ಮ ಚಟುವಟಿಕೆಗಳಿಗೆ ಸಂಘಟಿತ ರೂಪಗೊಟ್ಟ ಡಿ. ವಿರೇಂದ್ರ ಹೆಗ್ಗಡೆಯವರದೇ ಸಂಸ್ಥೆ – ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅದಕ್ಕೆ ಅಪ್ಯಾಯಮಾನವಾದ ಆತಿಥೇಯ. ನಮ್ಮೆಲ್ಲ ಆಶಯಗಳಿಗೂ ಪೂರ್ಣ ಬೆಂಬಲ ಕೊಟ್ಟವರು ಕಾಲೇಜಿನ ಪ್ರಾಂಶುಪಾಲ ಪ್ರೊ| ಎಸ್. ಪ್ರಭಾಕರ್. ಪ್ರಭಾಕರರಿಗೆ ನನ್ನ ಹೆಂಡತಿ ದೇವಕಿ ಮತ್ತವಳ ತಂಗಿಯಂದಿರಿಬ್ಬರೂ ತಮ್ಮದೇ ಕಾಲೇಜಿನ ವಿದ್ಯಾರ್ಥಿನಿಯರು ಎಂಬ ಹೆಚ್ಚಿನ ಹೆಮ್ಮೆ. ಅವರ ಲೆಕ್ಕದಲ್ಲಿ ಕಲಾಪಗಳು ಕಾಲೇಜಿನದೇ 'ಅಳಿಯ'ನದು!

21 October 2016

ಅನನುಭವ ಎಡವಿತು, ಛಲ ಸಾಧಿಸಿತು!

(ಪರ್ವತಾರೋಹಣ ಸಪ್ತಾಹದ ಆರನೇ ಅಧ್ಯಾಯ)

ದಕ ಜಿಲ್ಲೆಯಲ್ಲಿ ಎರಡು ಮಹಾಬಂಡೆ ಗುಡ್ಡೆಗಳಿವೆ. ಅತ್ಯುನ್ನತಿ ಮತ್ತು ಅಖಂಡತೆಯಲ್ಲಿ ಜಮಾಲಾಬಾದ್ ಹೆಸರಾಂತ ಮಹಾಬಂಡೆ. ಆದರೆ ಶಿಲಾರೋಹಿಗಳಿಗೆ ವೈವಿಧ್ಯಮಯ ಸವಾಲುಗಳನ್ನು ಎಸೆಯುವಲ್ಲಿ ಅದ್ವಿತೀಯ ಸ್ಥಾನದಲ್ಲಿರುವುದು ಮೂಡಬಿದ್ರೆಯ ಕೊಡಂಜೆ ಕಲ್ಲು. ನಮ್ಮ ಪರ್ವತಾರೋಹಣ ಸಪ್ತಾಹದ ಆರನೇ ದಿನದ ಕಲಾಪ ನಡೆದದ್ದು ಇದೇ ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ. ಸಹಜವಾಗಿ ಅಲ್ಲಿ ಹಿಂದೆ ನಮಗೆ ಕೊಡಂಜೆ ಕಲ್ಲಿನಲ್ಲೇ ದಕ್ಕಿದ ರೋಚಕ ಅನುಭವ, ಮಧುಚುಂಬನವನ್ನು – ರಾಕ್ಷಸ ನೊಣಗಳು, ಎಂಬ ಹೆಸರಿನಲ್ಲೇ ವಿಶೇಷ ಭಾಷಣವಾಗಿಸಿದೆ.

14 October 2016

ಆರೋಹಣ, ಪರ್ವತಾರೋಹಣ ವಗೈರೆ

(ಪರ್ವತಾರೋಹಣ ಸಪ್ತಾಹದ ಐದನೇ ಅಧ್ಯಾಯ)

ಸಪ್ತಾಹದ ಚತುರ್ಥ ನಡೆ ಅವಿಭಜಿತ ದಕ ಜಿಲ್ಲೆಯ ದಕ್ಷಿಣ ಭಾಗದ ಪುತ್ತೂರಿನಲ್ಲಾದರೆ, ಪಂಚಮಕ್ಕೆ ಉತ್ತರ ವಲಯದ ಕುಂದಾಪುರ ಆರಿಸಿಕೊಂಡಿದ್ದೆವು. ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿ ವೃಂದಕ್ಕೆ, ಆ ವಲಯದ ಜನತೆಗೇ ಸಮೀಪಿಸಿದ ಪಶ್ಚಿಮ ಘಟ್ಟ, ಅದರಲ್ಲೂ ಕೊಡಚಾದ್ರಿ ಬಲು ದೊಡ್ಡ ಆಕರ್ಷಣೆ. ಸಹಜವಾಗಿ ಅಲ್ಲಿನ ಭಾಷಣಕ್ಕೆ ವಿಷಯ ಘಟ್ಟದ್ದೇ ಆಗಬೇಕು. ಆದರೆ ಪೂರ್ಣ ಅವರು ಕಂಡದ್ದು ಆಗಬಾರದು ಎಂಬ ಕಾರಣಕ್ಕೆ ಕೊಡಚಾದ್ರಿ ಮಗ್ಗುಲಿನಲ್ಲೂ ಇರುವ ಜಲಪಾತಗಳನ್ನೇ ಆರಿಸಿಕೊಂಡಿದ್ದೆ. ವಿಷಯ ವಿವರಗಳ್ಯಾವವೂ ಇಂದು ನನ್ನ ನೆನಪಿನಲ್ಲುಳಿದಿಲ್ಲ. ಮೊದಲೇ ಹೇಳಿದಂತೆ, ಏಳು ದಿನಗಳ ಪ್ರಾಸ್ತಾವಿಕ ಹಾಗೂ ವಿಶೇಷ ಭಾಷಣಗಳೆಲ್ಲವನ್ನೂ ನಾನೊಬ್ಬನೇ ಮಾಡಿದ್ದಲ್ಲ.

ಆರೋಹಣ ಬಳಗದಲ್ಲಿ ಸಪ್ತಾಹದ ವೇದಿಕೆಗಳಿಂದ ನನ್ನನ್ನುಳಿದು ಮಾತಾಡಿದವರ ಕುರಿತು ಯೋಚಿಸಿದರೆ ಮಂಗಳೂರಿನಲ್ಲಿ ಶರತ್, ಉಜಿರೆಯಲ್ಲಿ ಸಮೀರ ರಾವ್

07 October 2016

ಪುತ್ತೂರಿಗಾದ ಸಪ್ತಾಹದನುಭವ

(ಪರ್ವತಾರೋಹಣ ಸಪ್ತಾಹದ ನಾಲ್ಕನೇ ಭಾಗ)

ಪುತ್ತೂರು ನನ್ನ ಅಜ್ಜನ ಊರು. ಅಲ್ಲಿನ ವಿವೇಕಾನಂದ ಕಾಲೇಜು, ಅದರಲ್ಲೂ ಪ್ರಾಂಶುಪಾಲರಾದ ಪ್ರೊ| ಎಂ. ಸೂರ್ಯನಾರಾಯಣಪ್ಪನವರು ನನಗೆ ಆತ್ಮೀಯರು. ಅಜ್ಜನ ಮನೆಯಲ್ಲಿದ್ದುಕೊಂಡು, ಮಂಗಳೂರಿನಲ್ಲಿ ಅಂಗಡಿ ತೆರೆಯುವ ಸಿದ್ಧತೆಯಲ್ಲಿದ್ದ ಕಾಲದಲ್ಲಿ ನಾನು ಬಂಡ್ವಾಳವಿಲ್ಲದ ಸರದಾರ. ಆದರೆ ಅಂದು ವಿವೇಕಾನಂದ ಕಾಲೇಜು ತನ್ನ ಬೇಡಿಕೆಯ ಪೂರ್ಣ ಮೊತ್ತ ನನಗೆ ಮುಂದಾಗಿ ಕೊಟ್ಟು, ಪುಸ್ತಕ ಖರೀದಿಸಿ ಪ್ರೋತ್ಸಾಹಿಸಿದ ಕ್ರಮ ಅನನ್ಯ. ಸಹಜವಾಗಿ ಅಲ್ಲಿ ನಮ್ಮ ಪರ್ವತಾರೋಹಣ ಸಪ್ತಾಹದ ನಾಲ್ಕನೇ ದಿನ ಎಂದರೆ ನನಗೆ ಹೆಚ್ಚಿನ ಉಮೇದು. ಸಾಲದ್ದಕ್ಕೆ ಇಡಿಯ ಕಾಲೇಜು ಮಾತ್ರವಲ್ಲ, ನನ್ನ ಬಹುತೇಕ ಬಂಧುವರ್ಗವೂ ಪ್ರೇಕ್ಷಾಗಡಣದಲ್ಲಿ ಹಾಜರಿದ್ದು ಮಹಾಲಿಂಗೇಶ್ವರನ ಜಾತ್ರೆಯನ್ನೇ ಸೋಲಿಸ ಹೊರಟ ಸನ್ನಿವೇಶ ಅಸಾಮಾನ್ಯವೇ ಇತ್ತು. ಮೈಸೂರಿನ ಪರ್ವತಾರೋಹಣ ದಿನಗಳಲ್ಲಿ ನನ್ನನ್ನು ನೆರಳಿನಂತೇ ಹಿಂಬಾಲಿಸಿದ್ದ ತಮ್ಮ – ಆನಂದವರ್ಧನ, ಪುತ್ತೂರಿನಲ್ಲಿ ನನ್ನನ್ನು ಸೇರಿಕೊಂಡಿದ್ದ. ಶಿಲಾವರೋಹಣದಲ್ಲಿ ಆತ ಕೆಲವು ಹೊಸ ಪ್ರದರ್ಶನ ತಂತ್ರಗಳಲ್ಲೂ ಪರಿಣತನಿದ್ದ. ಹಾಗಾಗಿ ಕಳೆದ ಮೂರು ದಿನಗಳಲ್ಲಿ ಪ್ರದರ್ಶನದ ನೇರ ನಿರ್ವಹಣೆಯಲ್ಲಿ ನಾನು ಕಾಣದಿದ್ದ ಬಿಡುವು ಇಲ್ಲಿ ಸಿಕ್ಕಿತು. ನಾವು ಕಾಲೇಜಿನ ಎತ್ತರದ ತಾರಸಿಗೆ ಮೊದಲೇ ಏರಿ, ನಮ್ಮ ಇಳಿಯುವ ಹಗ್ಗವನ್ನು ಎರಡೆಳೆಯಲ್ಲಿ ಭದ್ರ ಆಧಾರಗಳಿಗೆ ಯುಕ್ತ ಗಂಟುಗಳಿಂದ ಕಟ್ಟಿ, ಕೊಳ್ಳದಾಳಕ್ಕೆ ಬಿಟ್ಟು ಸಿದ್ಧರಾಗಿದ್ದೆವು. ಹಾಗಾಗಿ ಕಲಾಪದುದ್ದಕ್ಕೆ ನಾನು ಮೈಕ್ ಹಿಡಿದು ಕೊಡುತ್ತಿದ್ದ ವೀಕ್ಷಕ ವಿವರಣೆ ಹೆಚ್ಚು ಜನ ರಂಜಿಸಿತು. ಅದರಲ್ಲಿ ನಾನು ಕಲಾಪದ ವಿವರಣೆಯೊಡನೆ ಸದಸ್ಯನ ಆತ್ಮೀಯ ಪರಿಚಯ, ಪ್ರಾಕೃತಿಕ ಪರಿಸರದ ಸಣ್ಣಪುಟ್ಟ ರಂಜನೀಯ ನೆನಪುಗಳು, ಹಾಸ್ಯ, ಪ್ರಶ್ನೋತ್ತರಗಳನ್ನೆಲ್ಲ ಬೆಳೆಸಿ ಆಕರ್ಷಕ ಮಾಡಿದ್ದು ಮುಂದಿನ ದಿನಗಳಿಗೆ ಉತ್ತಮಿಸಲೊಂದು ಮಾದರಿಯಾಗಿಯೇ ನಡೆಯಿತು.

30 September 2016

ಸಪ್ತಾಹ - ಮೂಲ್ಕಿ ಸ್ಮರಣೆಗಳೊಡನೆ

(ಪರ್ವತಾರೋಹಣ ಸಪ್ತಾಹದ ಮೂರನೇ ಭಾಗ)
ಪರ್ವತಾರೋಹಣ ಸಪ್ತಾಹದ ಮೊದಲ ಕಾರ್ಯಕ್ರಮ – ಕಳೆದ ವಾರ ಹೇಳಿದಂತೆ ಮಂಗಳೂರಿನದು, ಹಗಲು ಪೂರ್ತಿ ನಡೆದಿತ್ತು. ಉಳಿದ ಐದು ದಿನ - ಅಂದರೆ ಕ್ರಮವಾಗಿ ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಮೂಲ್ಕಿಯ ವಿಜಯಾ ಕಾಲೇಜು, ಪುತ್ತೂರಿನ ವಿವೇಕಾನಂದ ಕಾಲೇಜು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜು ಮತ್ತು ಮೂಡಬಿದ್ರೆಯ ಮಹಾವೀರ ಕಾಲೇಜುಗಳಲ್ಲಿ, ಅಪರಾಹ್ನದಲ್ಲಷ್ಟೇ ನಡೆಯುತ್ತಿತ್ತು. ಕಲಾಪಗಳನ್ನು ಮುಗಿಸಿ, ನಾವು ಮಂಗಳೂರಿಗೆ ಮರಳುತ್ತಿದ್ದೆವು. ಕೊನೆಯದು – ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನದು ಮಾತ್ರ ವಿಶೇಷಪಟ್ಟದ್ದು. ಅದೂ ಲೆಕ್ಕಕ್ಕೆ ಅಪರಾಹ್ನವೇ ಶುರುವಾದರೂ ಮರುದಿನ ಸಂಜೆಯವರೆಗೂ ವ್ಯಾಪಿಸುವುದಿತ್ತು.

23 September 2016

ಕೊಲಂಬಸ್ ಏರಿಕಲ್ಲನ್ನು ಕಂಡ!

(ಪರ್ವತಾರೋಹಣ ಸಪ್ತಾಹದ ಎರಡನೇ ಭಾಗ)

ಪರ್ವತಾರೋಹಣ ಸಪ್ತಾಹದ ಮೊದಲ ದಿನದ ಸಭಾ ಕಲಾಪಕ್ಕೆ, ಅಂದರೆ ಸಂತ ಅಲೋಶಿಯಸ್ ಕಾಲೇಜಿನ ವಿಶೇಷ ಭಾಷಣಕ್ಕೆ, ನಾನು ಪರ್ವತಾರೋಹಣದ ಕೆಲವು ವಿಶೇಷ ಅನುಭವಗಳನ್ನು ಸೂಕ್ಷ್ಮವಾಗಿ ಮಾತಿನ ಹಂದರಕ್ಕೆ ಅಳವಡಿಸಿದ್ದೆ. ಅವುಗಳಲ್ಲಿ ಅಮೆದಿಕ್ಕೆಲ್ ಏರಲು ಹೋದಾಗ ಆನೆ ಬೆನ್ನಟ್ಟಿದ್ದು, ಮಳೆಗಾಲದ ಜಮಾಲಾಬಾದ್ ಏರಿದ್ದು, ಕುಮಾರಪರ್ವತದಲ್ಲಿ ಕಾಲುಳುಕಿದ್ದನ್ನೆಲ್ಲ ಇಲ್ಲಿ ವಿವರಗಳಲ್ಲಿ ನೀವೀಗಾಗಲೇ ಓದಿದ್ದಾಗಿದೆ. (ಆಸಕ್ತರು ಆಯಾ ಹೆಸರಿನ ಮೇಲೇ ಚಿಟಿಕೆ ಹೊಡೆದು ಈಗಲೂ ಓದಿಕೊಳ್ಳಬಹುದು.)  ಹಾಗೆಯೇ ನಾನು ಸೂಕ್ಷ್ಮವಾಗಿ ಉಲ್ಲೇಖಿಸಿದ್ದ ಏರಿಕಲ್ಲನ್ನು ಪ್ರಥಮ ಬಾರಿಗೆ ಏರಿದ ಅನುಭವವನ್ನು ಮಾತ್ರ ಇಲ್ಲಿ ವಿಸ್ತರಿಸುತ್ತೇನೆ.

ಕರಾವಳಿಯಿಂದ ಚಾರ್ಮಾಡಿ ಘಾಟಿ ಬಳಸುವವರ ಪಾದನಮಸ್ಕಾರ ಸ್ವೀಕರಿಸುವ ಶಿಖರ ಏರಿಕಲ್ಲು (೩೧೩೭ ಅಡಿ ಸಮುದ್ರ ಮಟ್ಟದಿಂದ). ಹಾಗೇ ಕರಾವಳಿಯತ್ತ ಇಳಿದು ಬರುವವರಿಗೂ ಕೊಟ್ಟಿಗೆಹಾರದ ದೂರದಿಂದಲೇ ಎಡದಿಗಂತವನ್ನು ನಿರ್ಧರಿಸುತ್ತ, ಕಣ್ತುಂಬಿ ಬೆರಗು ಹುಟ್ಟಿಸುವ ಏಕೈಕ ಶಿಖರ ಏರಿಕಲ್ಲು. `ಪರ್ವತಾರೋಗಿಗೆ’ – ಅಂದರೆ ತುಳುವರು ಹೇಳುವಂತೆ `ಮಲೆಬಡಪ್ಪುನೆ ಸೀಕ್’ ತಗುಲಿದವರಿಗೆ ಅಷ್ಟೇ ಸಾಕಾಗುವುದಿಲ್ಲ, ಅದರ ನೆತ್ತಿಯ ಎತ್ತರದಿಂದ ಸುತ್ತ ದಿಟ್ಟಿ ಬೀರುವ ಸಂತೋಷವೂ ಬೇಕಾಗುತ್ತದೆ!

16 September 2016

ಆರೋಹಣದ ಹುಟ್ಟು ಮತ್ತು ಪರ್ವತಾರೋಹಣ ಸಪ್ತಾಹ

(ಧಾರಾವಾಹಿಯ ಮೊದಲ ಭಾಗ)

ಮೂವತ್ತಾರು ವರ್ಷಗಳ ಹಿಂದೆ, ದಕ ಜಿಲ್ಲೆ ಮಿತಿಯೊಳಗೆ ಹೀಗೊಂದು ಕಲಾಪ ನಡೆಸಿದ್ದೆವು ಗೊತ್ತೇ? ಹೌದು, ಪಶ್ಚಿಮ ಘಟ್ಟದ ಕೂಸಾದ ನಾಡಿನಲ್ಲೇ ಘಟ್ಟಗಳನ್ನು ವ್ಯವಸ್ಥಿತವಾಗಿ ಅನುಭವಿಸುವ ಚಟುವಟಿಕೆಗೆ ಪ್ರಚಾರ ಕೊಡುವಂತೆ ನಾವು ಕೆಲವು ಮಿತ್ರರು ಸಂಯೋಜಿಸಿದ ಕಲಾಪ ಈ ಪರ್ವತಾರೋಹಣ ಸಪ್ತಾಹ. ಬಾಲ್ಯದ ಊರು – ಮಡಿಕೇರಿ, ನನ್ನೊಳಗೆ ಬೆಟ್ಟಗುಡ್ಡಗಳ ಮೋಹವನ್ನೇನೋ ಬೆಳೆಸಿತ್ತು. ತಂದೆ – ಜಿಟಿ ನಾರಾಯಣ ರಾವ್, ನಡೆಸುತ್ತಿದ್ದ ಎನ್ಸಿಸಿ ಚಟುವಟಿಕೆಗಳ ಪ್ರಭಾವದಲ್ಲಿ ಬೆಟ್ಟ ಏರುವ, ದೀರ್ಘ ನಡಿಗೆಯ ಹವ್ಯಾಸ ನನ್ನಲ್ಲಿ ದೃಢವಾಗಿತ್ತು.  ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ವಿ. ಗೋವಿಂದರಾಜರ ಶಿಷ್ಯತ್ವದಲ್ಲಿ ನಾನು ಪಳಗಿದ ಪರ್ವತಾರೋಹಿಯೇ ಆದೆ. ಮುಂದೊಂದು ದಿನ, ಸಾಹಸಯಾನದಿಂದ ಮರಳುವಲ್ಲಿ ವಿಳಂಬಿಸಿದ ತಂಡವೊಂದರಲ್ಲಿ ಭಾಗಿಯಾದವನ ಹಿರಿಯರೊಬ್ಬರು ಉದ್ಗರಿಸಿದ್ದರು “ಎಂಥದದು ಪರ್ವತಾರೋಹಣ. ಇಲ್ಲೇ ನಮ್ಮ ಹಿತ್ತಿಲಿನ ಗುಡ್ಡೆ ಏರಿದರ ಸಾಲದೇ?” ಅಷ್ಟೇ ಅಲ್ಲ, ಗುಡ್ಡೆಗಳ ಸರಣಿಯನ್ನೇರುವುದು, ಬಂಡೆ ಮೆಟ್ಟುವುದು, ಪ್ರಾಕೃತಿಕ ಋತುಮಾನಗಳ ವಿಪರೀತ – ಅಂದರೆ ಬಿಸಿಲು, ಮಳೆ, ಚಳಿ, ಹಿಮ ಇತ್ಯಾದಿಗಳಿಗೆ ಹೊಂದಿಕೊಳ್ಳುವುದು, ಕಾಡು ತಿಳಿಯುವುದು, ವನ್ಯಜೀವಿಗಳನ್ನು ಅರಿಯುವುದು, ಶಿಬಿರ ವಾಸ ಹೀಗೆ ಪಟ್ಟಿ ಮಾಡಿದಷ್ಟೂ ಮುಗಿಯದ ಪ್ರಾಕೃತಿಕ ಸೋಜಿಗಗಳ ಅನಾವರಣ ಪರ್ವತಾರೋಹಣ. ಮಂಗಳೂರಿನಲ್ಲಿ ನಾನು ೧೯೭೫ರಲ್ಲಿ ಅತ್ರಿ ಬುಕ್ ಸೆಂಟರ್ ಮಳಿಗೆ ತೆರೆದು ವೃತ್ತಿಪರವಾಗಿ ನೆಲೆಸುವುದರೊಂದಿಗೆ ನನ್ನ ಪರ್ವತಾರೋಹಣ ಹವ್ಯಾಸವೂ ಭದ್ರ ನೆಲೆಗಂಡಿತ್ತು.

02 September 2016

ದಿಕ್ಕೆಲ್ ಕಲ್ಲಿಗೆ ಲಗ್ಗೆ

(ಮೂರು ಭಾಗಗಳ ಸಾಹಸ ಕಥನ – ಅಸಾಧ್ಯ ಅಮೆದಿಕ್ಕೆಲ್ಲಿನ ಅಂತಿಮ ಭಾಗ)
ನನ್ನ ಚಾರಣಗಳು ಹಳ್ಳಿ, ಕುಗ್ರಾಮಗಳನ್ನು ದಾಟಿಯೇ ಇರುತ್ತಿದ್ದವು ನಿಜ. ಆದರೆ ಆ ಸಂದರ್ಭಗಳಲ್ಲಿ ಸ್ಥಳೀಯ ಜನ ಮತ್ತು ಜನಪದಗಳನ್ನು ನಮ್ಮ ಮಾರ್ಗದರ್ಶನದ ಆವಶ್ಯಕತೆಗಿಂಥ ಹೆಚ್ಚಿಗೆ ನಾನು ಬಳಸಿಕೊಂಡವನಲ್ಲ, ವಿಶೇಷ ಆಸಕ್ತಿಯೂ ತೋರಿದವನಲ್ಲ. ಅವುಗಳ ಕುರಿತು ನನಗೆ ಕುತೂಹಲವಿರುತ್ತಿತ್ತು, ಆದರೆ ನನ್ನ ವೃತ್ತಿಯ ಸಮಯಮಿತಿಯಲ್ಲಿ ಪ್ರಾಕೃತಿಕ ಸತ್ಯಗಳನ್ನು ಮೀರಿದ ಇನ್ಯಾವುದರಲ್ಲೂ ತೊಡಗಿಕೊಳ್ಳಲು ನನಗೆ ಕಷ್ಟವೇ ಆಗುತ್ತಿತ್ತು; ಖಂಡಿತಕ್ಕೂ ತಿರಸ್ಕಾರವಿರಲಿಲ್ಲ. ಹಾಗೆ ಉಪಯುಕ್ತತೆಯನ್ನಷ್ಟೇ ಲೆಕ್ಕ ಹಾಕಿ ಉಳಿದುಕೊಂಡ ಸಂಬಂಧಗಳು ಮಾತ್ರ ಬಹುತೇಕ ಗಾಢವಾಗಿರುತ್ತಿತ್ತು. ಅಂಥಾ ಸಂಬಂಧಗಳಲ್ಲಿ ಅಮೆದಿಕ್ಕೆಲ್ ನೆಪದಿಂದ ಒದಗಿದ ನೆರಿಯ ಹೆಬ್ಬಾರರ ಕುಟುಂಬದ ಪರಿಚಯ, ನನಗೆ ಹೆಚ್ಚು ಸ್ಮರಣೀಯವಾಗಿರುವುದು ವನ್ಯಬಂಧದಿಂದ.

ನಾನು ಸುಮಾರು ೧೯೭೪ರಿಂದ ೧೯೮೫ರವರೆಗೆ, ಅಂದರೆ ನನ್ನ ಮಂಗಳೂರು ವಾಸದ ಮೊದಲ ದಿನಗಳಲ್ಲಿ ಕೇವಲ ಸಾಹಸ ಚಟುವಟಿಕೆಗಳ ತೋರಗಾಣ್ಕೆಯ ದಿನಚರಿ ಪುಸ್ತಕವನ್ನೇ ಇಟ್ಟಿದ್ದೆ. ಅದು ಡೈರಿಯೊಂದರಲ್ಲಿ ಯಾವ ಔಪಚಾರಿಕ ಅಂಚುಗಳನ್ನೂ ಉಳಿಸದೆ ಒತ್ತೊತ್ತಾಗಿ ತುಂಬಿದ, ಕೇವಲ ಟಿಪ್ಪಣಿ ರೂಪದ ದಾಖಲೆಯಾದರೂ ಸುಮಾರು ಎಪ್ಪತ್ತು ಪುಟಗಳಷ್ಟಿದೆ. ಮುಂದೆ, ಅಂದರೆ ಸುಮಾರು ೧೯೮೫ರಿಂದ ೨೦೦೦ದವರೆಗೆ ನನ್ನದೇ ನಕ್ಷೆಯೊಡನೆ ಅಂಕಿಸಂಕಿಗಳಕಾರ್ಡುಗಳನ್ನು ಮಾಡುತ್ತ ಬಂದೆ.

26 August 2016

ಚಾರ್ಮಾಡಿಯಿಂದ ಶಿರಾಡಿಗೆ


ಅಸಾಧ್ಯ ಅಮೆದಿಕ್ಕೆಲ್  ಸಾಹಸ ಕಥನಮಾಲಿಕೆಯಲ್ಲಿ ಎರಡನೇ ಭಾಗ

ಆರೋಹಣದ ಮಿತ್ರ ಬಳಗದಲ್ಲಿ ಆನೆಗಾವಲಿನ ಅಮೆದಿಕ್ಕೆಲ್ ಸವಾಲು ಎಸೆದೆ. ಪತ್ರಿಕೆಯ ಓದುಗರ ಅಂಕಣದಲ್ಲಿ ಎರಡೆರಡು ಕರೆ ಕೊಟ್ಟೆ – “ಚಾರ್ಮಾಡಿ – ಶಿರಾಡಿ ಚಾರಣಕ್ಕೆ ಬನ್ನಿ!” ಪರಿಚಿತ ಪ್ರಾಂಶುಪಾಲ, ಅಧ್ಯಾಪಕರ ಮೂಲಕ ಕೆಲವು ಕಾಲೇಜುಗಳ ವಿದ್ಯಾರ್ಥಿ ವೃಂದಕ್ಕೂ ಸಾಹಸಾವಕಾಶ ಮುಕ್ತಗೊಳಿಸಿದೆ. ನಾಡಿನ ವಿವಿಧ ಮೂಲೆಗಳಿಂದ, ಹಲವು ಜೀವನ ಸ್ತರದವರ ಪ್ರತಿಕ್ರಿಯೆ ಬಂತು. ನನ್ನ ಬಳಗದವರೇ (ಆರೋಹಣ ಪರ್ವತಾರೋಹಿಗಳು, ಸಾಹಸಿಗಳು) ಆದ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಮೀರ ರಾವ್ ಮತ್ತು ಆತನ ತಮ್ಮ ಇನ್ನೂ ಪ್ರೌಢಶಾಲಾ ವಿದ್ಯಾರ್ಥಿ ಶೌರಿ ರಾವ್ ಮೊದಲು ನಾವಿದ್ದೇವೆ ಎಂದರು. ಮೀನುಗಾರಿಕಾ ಕಾಲೇಜಿನ ಲೋಕೇಶರಿಗೆ ಬಿಡುವಾಗದಿದ್ದರೂ ಅವರ ಅಧ್ಯಾಪಕ, ಹಾಸನ ಮೂಲದ ಶ್ರೀಕಂಠಯ್ಯ, ತಾನು ಕಡಿಮೆಯವನಲ್ಲ ಎಂದು ಸೇರಿಕೊಂಡರು. ಪಶ್ಚಿಮ ಘಟ್ಟಮಾಲೆಯ ತಪ್ಪಲಿನ ಮಾಳದವರೇ ಮುಕುಂದ ಚಿಪ್ಲೂಣಕರ್. ಕಾರ್ಪೊರೇಶನ್ ಬ್ಯಾಂಕಿನ ನೌಕರಿಯ ನೆಪದಲ್ಲಿ ಊರೂರು ತಿರುಗಿದವರು. ಅಲ್ಲೆಲ್ಲ ಮಾತು ಬರುವಾಗ, ಹೇಳಿಕೊಳ್ಳಲು ತಮ್ಮದೇ ಘಟ್ಟಮಾಲೆಯ ದಿಗ್ಗಜಗಳನ್ನು ಏರಿ ಅನುಭವಿಸಿಲ್ಲ ಎಂಬ ಕೊರಗು ಹೆಚ್ಚಿತ್ತಂತೆ. ಅದಕ್ಕೆ ಪರಿಹಾರವೆನ್ನುವಂತೆ ಮುಕುಂದ ಮೊದಲ ಸಮಯಾನುಕೂಲ ನೋಡಿಕೊಂಡು ಮಂಗಳೂರಿಗೇ ಬಂದು ನನ್ನಲ್ಲಿ ಹೆಸರು ದಾಖಲಿಸಿದ್ದರು.

19 August 2016

ಅಸಾಧ್ಯ ಅಮೆದಿಕ್ಕೆಲ್

(ಮೂರು ಭಾಗಗಳ ಸಾಹಸ ಕಥನದಲ್ಲಿ ಪ್ರಥಮ ಭಾಗ)
ಉತ್ತರನ ಸಾಹಸ!

ಪುತ್ತೂರಿನ ಹಿರಿಯ ವಕೀಲ, ನನ್ನ ಸೋದರಮಾವ ಗೌರೀಶಂಕರರ ಗೆಳೆಯ-ಸಹೋದ್ಯೋಗಿ, ಸಾಹಿತ್ಯ, ಸಂಗೀತ, ಇತಿಹಾಸ, ನಕ್ಷಾಶಾಸ್ತ್ರವೇ ಮೊದಲಾದ ಹತ್ತೆಂಟು ಮುಖಗಳಲ್ಲಿ ತೀವ್ರ ಆಸಕ್ತ, ಹಿರಿಯ ಮಿತ್ರ - ಬಂದಾರು ಶ್ರೀಪತಿರಾಯರು ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ತೆರೆದಾಗ ಸಂಭ್ರಮಿಸಿದ್ದು ಸಹಜವೇ ಇತ್ತು. ಅವರ ಸೀಮಿತ ಹಣಕಾಸು, ಅವರನ್ನು ಅಂಗಡಿಯ ದೊಡ್ಡ ಗಿರಾಕಿಯೇನೂ ಮಾಡಲಿಲ್ಲ. ಆದರೆ ಅವರ ಶ್ರೀಮಂತ ಮನಸ್ಸು, ಅವರ ಮಂಗಳೂರು ಭೇಟಿಗಳಲ್ಲಿ `ಅತ್ರಿ ವಿಹಾರ’ವನ್ನು ಮಾತ್ರ ಕಡ್ಡಾಯ ಕಲಾಪ ಮಾಡಿತ್ತು. ಅವರು ಯಥಾನುಶಕ್ತಿ ಖರೀದಿ ಅವಶ್ಯ ಮಾಡುತ್ತಿದ್ದರು. ಅದಕ್ಕೂ ಮಿಗಿಲಾಗಿ ಹಾಗೆ ಬಂದಾಗೆಲ್ಲಾ ನನ್ನ  ಬೆಟ್ಟಕಾಡುಗಳ ಹುಚ್ಚಿಗೊಂದಿಷ್ಟು ಸುಳುಹು, ನಕ್ಷೆಗಳ ಕಿಚ್ಚಿಟ್ಟು ಹೋಗುತ್ತಿದ್ದರು. ಹಾಗೇ ಒಮ್ಮೆ “ಹತ್ತಿದರೆ ಅಮೆದಿಕ್ಕೆಲ್ ಅಯ್ಯ, ಒಂದು ಶಿಖರ” ಎಂದು ಉದ್ಗರಿಸಿದ್ದಿತ್ತು. ಮತ್ತೆ ರಾಯರು ಆವಿಷ್ಟರಾಗಿ ಅಂಗಡಿಯ ಗೀಚು-ಕಾಗದದ ಹರಕಿನ ಮೇಲೆ ನನ್ನದೇ ಪೆನ್ನು ಇಟ್ಟು ಗೆರೆ ಎಳೆಯುತ್ತಿದ್ದಾಗ ಬೆಳ್ತಂಗಡಿಯ ಕಗ್ಗಾಡಮೂಲೆ - ಶಿಶಿಲದಲ್ಲೇ ನಿಂತಂತಿದ್ದರು. ಉತ್ತರಮುಖಿಯಾಗಿ ನಿಂತು, ಕತ್ತೆತ್ತಿ ಸುದೂರದಲ್ಲಿ ಗಗನಕ್ಕಂಟಿದಂತಿದ್ದ ದಿಕ್ಕೆಲ್ ಕಲ್ಲನ್ನೇ ದಿಟ್ಟಿಸುತ್ತ ಆ ಮಹಾಮೇರುವಿನ ನಿಖರ ಸೂಕ್ಷ್ಮ ಬಳಕುಗಳನ್ನೇ ಕಾಗದದ ಸಣ್ಣ ಆಯಕ್ಕಿಳಿಸಿದ್ದರು!

25 March 2016

ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!


ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ ಮನಸ್ಸಾಯ್ತು. ಮಂಗಳೂರು, ಚಾರ್ಮಾಡಿ, ಮೂಡಿಗೆರೆ, ಸಕಲೇಶಪುರ, ಶಿರಾಡಿಗಾಗಿ ವಾಪಾಸುನಮ್ಮ ಯೋಜನೆ. ತಿಂಗಳ ಹಿಂದೆಯೇ ಮಾರ್ಚ್ ೧೨,೧೩ರ ಮುಹೂರ್ತವೇನೋ ನಿಕ್ಕಿಯಾಯ್ತು. ಆದರೆ ನಿವೃತ್ತ ನನ್ನನ್ನುಳಿದು ಮೂವರಿಗೂ ವೃತ್ತಿ ಜವಾಬ್ದಾರಿಯ ಕಟ್ಟುಪಾಡಿನಲ್ಲಿ ಎಲ್ಲ ಗೊಂದಲ. ಕಳೆದು, ಕೂಡಿಸಿ, ಉಂಟೂ ಇಲ್ಲಾ ಮಾಡಿ ಅಂತೂ ಶನಿವಾರ ಬೆಳಿಗ್ಗೆ ಐದೂವರೆಗೆ ಮಂಗಳೂರಿನ ನಂತೂರು ವೃತ್ತದಿಂದ ಹೊರಟವರು ಐದು ಮಂದಿವೇಣುವಿನೋದ್, ಅನಿಲ್ ಶೇಟ್, ಸಮರ್ಥ ರೈ, ಚಿನ್ಮಯ ದೇಲಂಪಾಡಿ ಮತ್ತು ನಾನು.


28 July 2015

ಭಗ್ತಿ ಮಾರ್ಗ, ಭಕ್ತಿ ಮಾರ್ಗ!


ಆಕಾಶ ಇಲ್ಲಿ ಜಡಿಕುಟ್ಟಿ ಮಳೆ ಹೊಡೆಯುತ್ತಿರಬೇಕಾದರೆ ಕುಮಾರ ಪರ್ವತದ ಆಸುಪಾಸಿನ, ಕೊಡಗಿನ ಕಗ್ಗಾಡಮೂಲೆಯ ಭಗ್ತಿಯಲ್ಲಿ ಹೇಗಿರಬಹುದು? ಜನದೂರ, ನಾಗರಿಕ ಸೌಕರ್ಯದೂರ, ಮಂಗಳೂರಿನಿಂದ ನಾವು ಜೀಪು ಒಯ್ದರೂ ಪ್ರಯಾಣಿಸಲು ಕನಿಷ್ಠ ನಾಲ್ಕೈದು ಗಂಟೆಯ ಶ್ರಮಪೂರ್ಣ ಸವಾರಿದೂರವಾಗಿ ಅಲ್ಲಿರುವ ಒಂದೆರಡೇ ಒಕ್ಕಲಿನ ಜೀವನ ಹೇಗಿರಬಹುದುಒಂದೆರಡು ದಿನಕ್ಕಾದರೂ ಅಲ್ಲುಳಿದು, ಮಾತಾಡಿ ಅನುಭವಿಸೋಣ ಎಂಬ ಅತಿರೇಕದ ಕುತೂಹಲ ಗೆಳೆಯ ನಿರೇನ್ ಜೈನಿಗೆ ಬಂತು. ನಾನು ಕಡಿಮೆಯಿಲ್ಲದ ಬೆಂಬಲ ಮತ್ತು ಜೊತೆಯನ್ನೂ ಕೊಟ್ಟೆ. ಬೆಳಿಗ್ಗೆ ಆರು ಗಂಟೆಗೆ ನಿರೇನ್ ಜೀಪಿನಲ್ಲಿ ನಾವಿಬ್ಬರೇ ಮಂಗಳೂರು ಬಿಟ್ಟು, ಕಲ್ಲಡ್ಕದ ಲಕ್ಷ್ಮೀ ಭವನದಲ್ಲಿ ಹೊಟ್ಟೆಪಾಡು ಮುಗಿಸಿದೆವು. ಬಿಟ್ಟೂ ಕುಟ್ಟೀ ಮಾಡುವ ಮಳೆಯಲ್ಲಿ ಪುತ್ತೂರುಸುಳ್ಯ, ಸಂಪಾಜೆ, ಮಡಿಕೇರಿ ಕಳೆದು ಸೋಮವಾರಪೇಟೆ ತಲಪುವಾಗ ನಾವು ಯೋಜನೆಯಿಂದ ಒಂದು ಗಂಟೆ ಹಿಂದೆ ಬಿದ್ದಿದ್ದೆವು.

17 April 2015

ಎಸ್ಸಾರೆಸ್ ಮತ್ತು ಶಿವಗಂಗೆ ಎರಡು ಶಿಲಾಶಿಖರಗಳು

ಅಭಯ ಸಂಚಿ ಟ್ರಸ್ಟಿನ ಜ್ಞಾನಯಜ್ಞಕ್ಕೆ ಕರೆಕೊಟ್ಟಿದ್ದ. (ಮೊದಲ ಭಾಷಣ – ಡಾ| ಉಲ್ಲಾಸಕಾರಂತರದು) ಅದನ್ನು ನಾವು ಅತಿ-ಸಾಂಪ್ರದಾಯಿಕ ಸ್ತರದಲ್ಲಿ ಬಳಸುವವರಂತೆ, ಎರಡು ದಿನ ಮುಂಚಿತವಾಗಿಯೇ ಬೆಂಗಳೂರು ಸೇರಿದ್ದೆವು. ಆದರೆ ಅಲ್ಲಿನ ವಾತಾವರಣ ಬೇರೆಯೇ ಇತ್ತು. ಅಭಯ ವಾರ್ತಾ ಇಲಾಖೆಯ ವತಿಯಿಂದ ದೂರದರ್ಶನಕ್ಕೆ ಐವತ್ತು ವಿಜ್ಞಾನ ಪ್ರಯೋಗಗಳ, ಇಪ್ಪತ್ತು ಸರಣಿಯನ್ನು ತಯಾರು ಮಾಡಲು ಒಂದು ಕೈ, ಎನ್ನೆಫ್ಡಿಸಿ ಮಾನ್ಯತೆ ನೀಡಿದ ಈತನದೇ ಚಿತ್ರಕತೆಯೊಂದನ್ನು ಪುಣೆಯಲ್ಲಿ ನಡೆಯಲಿದ್ದ ಮೂರನೇ ಕಮ್ಮಟಕ್ಕೆ ಪರಿಷ್ಕರಿಸುವಲ್ಲಿ ಇನ್ನೊಂದು ಕೈ, ನೀನಾಸಂನಲ್ಲಿ ಐದು ದಿನಗಳ ಕಿರುಚಿತ್ರ ಕಮ್ಮಟ ಮುಗಿಸಿ ಬಂದದ್ದರ ಉತ್ತರಕ್ರಿಯೆಯಲ್ಲಿ ಮತ್ತೊಂದು ಕೈ, ಯಾವುದೋ ಬ್ಯಾಂಕಿನವರ ಯೋಜನಾ ಯಶಸ್ಸನ್ನು ಸಾರುವ ಸಾಕ್ಷ್ಯಚಿತ್ರದಲ್ಲಿ ಮಗುದೊಂದು ಕೈ ಎಂದೆಲ್ಲಾ ಸಿಕ್ಕಿಸಿಕೊಂಡು, ನಿಜದಲ್ಲಿ ತನಗೆಷ್ಟು ಕೈ ಎಂದೇ ಕಳೆದುಹೋಗಿದ್ದ. (ಖಂಡಿತವಾಗಿಯೂ ಪುರಾಣದಲ್ಲಿ ಬರುವಂತೆ ಸಹಸ್ರಬಾಹುವಲ್ಲ!) ಬೆಳಿಗ್ಗೆ ಎದ್ದ ಕೂಡಲೇ ರಾತ್ರಿಯುದ್ದಕ್ಕೆ ಮಿನುಗುತ್ತಲೇ ಇದ್ದ ಲ್ಯಾಪ್ಟಾಪನ್ನು ನೇವರಿಸಬೇಕು, ನಿತ್ಯ ಕೆಲಸಗಳ ನಡುವೆಯೂ ಅದನ್ನು ತಡವಬೇಕು, ಎಡೆ ಎಡೆಯಲ್ಲಿ ಕುಟ್ಟಬೇಕು. ಎಂಟೂವರೆಗೆ ಅದನ್ನು ಬೆನ್ನಚೀಲಕ್ಕೆ ತುಂಬಿ ಮನೆ ಬಿಟ್ಟೋಡಿದ ಎಂದರೆ ಮತ್ತೆ ಕತ್ತಲಾದ ಮೇಲೇ ದರ್ಶನ. ನಮ್ಮ ಕುರಿತು ಅಕ್ಕರೆ, ಮಾತು ಇಲ್ಲವೆಂದಲ್ಲ – ಕೆಲಸದ ಒತ್ತಡದಲ್ಲಿ ಎಲ್ಲ ಅಸಂಗತ ನಾಟಕದ ಸಂಭಾಷಣೆಗಳೇ ಆಗುತ್ತಿದ್ದುವು. ಗಣಕ ಕೆಲಸದ ಸೆಳೆತ, ಅಪ್ಪಮ್ಮನ ಪ್ರೀತಿಯ ಒಲೆತ – ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ, ಎನ್ನುವುದರ ಹೊಸರೂಪ! ನಾನು ಬರೆಯುತ್ತಿರುವುದು ಆರೋಪಪಟ್ಟಿಯಲ್ಲ, ಅವನ ಮೂಗಿನವರೆಗೆ ಮುಳುಗಿದ ಸ್ಥಿತಿಯ ಸಾನುಕಂಪ ವರದಿ ಮಾತ್ರ.