
ಸಿನಿಮ ನಿರ್ದೇಶಕ ಪುತ್ರ, ನಟೀಮಣಿ ಸೊಸೆ ಪಡೆದ ನಮ್ಮ ಭಾಗ್ಯವನ್ನು ಕೊಂಡಾಡುವ
ಬಹುತೇಕ ಮಂದಿಗೆ ಸಿನಿಮ ಎಂದರೆ ಗ್ಲಾಮರ್ ಮಾತ್ರ! ಅಂಥವರಿಗೆ
ನನ್ನ ಶಿರೋಭೂಮಿಯಲ್ಲಿ ಸೋತು ಹಿಮ್ಮೆಟ್ಟುತ್ತ ದಿಕ್ಕೇಡಿಯಾದ ಕೇಶ ಶೃಂಗಾರ, ನೋಟಕರಲ್ಲಿ ಹಾಸ, ಹಾಸ್ಯ, ಭಯವನ್ನು
ಏಕಕಾಲಕ್ಕೆ ಉದ್ದೀಪಿಸುವ ಪೊದರುಗಟ್ಟಿದ ಮೀಸೆ, ಒಮ್ಮೊಮ್ಮೆ ಕತ್ತು ಕೈಗಳ
ಅಂಚಿನಲ್ಲಿ ನೂಲು ಕಿತ್ತ ದಗಳೆ ಜುಬ್ಬಾ, ಇಸ್ತ್ರಿಯಿಲ್ಲದ ಇಜಾರ ಕಂಡು ಅಪಾರ
ಕನಿಕರ. (ಪುಣ್ಯಕ್ಕೆ ಯಾರೂ ಇದುವರೆಗೆ ನೇರ ನನ್ನಲ್ಲಿ ಕೇಳಿಲ್ಲ “ಅಭಯ ಓಕೇ ನೀವು ಯಾಕೇ?”) ಯಾವುದೇ ಒಂದು ಮಾಮೂಲೀ ಮುಂಜಾನೆ ಅಭಯನ ಚರವಾಣಿ
ಕರೆ ಬರಬಹುದು. “ಅಪ್ಪಾ ಈಗೊಂದು ಕತೆಯ ಹೊಳಹು ಮಿಂಚಂಚೆ ಕಳಿಸಿದ್ದೇನೆ. ನಿಮ್ಮಿಬ್ಬರ ಅಭಿಪ್ರಾಯ ಬೇಕು.” ನಾವೇನಾದರೂ ಹೇಳಲಿ, ಹೇಳದಿರಲಿ ಆತ ಮತ್ತೆಂದೋ ಹೀರೋಗೆ
‘ಕತೆ ಹೇಳು’ತ್ತಾನೆ. ಎಲ್ಲೋ
ಏನೋ ಕುದುರಿದರೆ, ನಿರ್ಮಾಪಕರೊಡನೆ ‘ಚರ್ಚೆ ಮಾಡಿ,’ ಇತರ ಕಲಾವಿದ, ತಾಂತ್ರಿಕ ಬಳಗ, ಸ್ಥಳ, ಸಮಯ, ಕ್ರಿಯೆ ಎಲ್ಲವನ್ನೂ ನಿಶ್ಚಯವೋ
ರಾಜಿಯೋ ಮಾಡಿಕೊಳ್ಳುತ್ತಾ ಹೋಗುತ್ತಾನೆ. ಹೀಗೆ ಬಸವನಹುಳಕ್ಕಿಂತಲೂ ನಿಧಾನವಾಗಿ
ನಡೆಯುವ ಸಿನಿಮದಲ್ಲಿ ಸಾರ್ವಜನಿಕಕ್ಕೆ ಬೆಳ್ಳಿತೆರೆಯ ಮೇಲೆ ಸಿಗುವ ಪ್ರದರ್ಶನ ಒಂದೆರಡು ಗಂಟೆಯ ದೀರ್ಘ
ಎಂದು ಕಂಡರೂ ವಾಸ್ತವದಲ್ಲಿ ಅದೊಂದು ಮಿಂಚು; ಕ್ಷಣಿಕ! ಈ ಸ್ಪಷ್ಟ ಅರಿವಿನೊಡನೆ ನಾವು ಅವರಿಬ್ಬರ ವೃತ್ತಿ ಕೌಶಲ್ಯದ ವಿಕಾಸವನ್ನಷ್ಟೇ ಪ್ರೀತಿಸುತ್ತೇವೆ;
ಪ್ರಭಾವಳಿಯನ್ನಲ್ಲ. ಆಗ ಕಾಣುವ, ಕಾಡುವ ಚಿತ್ರಗಳೇ ಬೇರೆ.