Showing posts with label ಜಮಾಲಾಬಾದ್. Show all posts
Showing posts with label ಜಮಾಲಾಬಾದ್. Show all posts

08 August 2009

ಗಡಾನ್ ಹತ್ರೀ ಗಡಾಯಿ ಕಲ್ಲು

(ಕುದ್ರೆಯ ನೆರಳಲ್ಲೊರಗಿದ ಕರಿರಾಯ ಭಾಗ 3)


ಕಳೆದ ಶತಮಾನದ ಅಪರ ಭಾಗದ ಕಥೆಯಿದು. ಅಂದರೆ ಸನ್ ಸಾವಿರದೊಂಬೈನೂರಾ ಎಪ್ಪತ್ತಾರನೇ ಇಸವಿಯ ಸುಮಾರಿಗೆ (ಇನ್ನೂ ಮಂಗಳೂರು ವಿಶ್ವವಿದ್ಯಾನಿಲಯ ಕಣ್ಣುಬಿಡದ ಕಾಲ) ಮಿತ್ರ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯ ಕನ್ನಡ ಅಧ್ಯಾಪಕ (ಇಂದು ಮಾನಸಗಂಗೋತ್ರಿಯಲ್ಲಿದ್ದಾರೆ) ಪಂಡಿತಾರಾಧ್ಯರಿಗೆ ನನ್ನೊಡನೆ ಕುಮಾರ ಪರ್ವತ ಹತ್ತಿ ಹಿಡಿದ ಪರ್ವತಾರೋಹಣ ಗೀಳು ಜಮಾಲಾಬಾದ್ ಹತ್ತಿದ ಮೇಲೆ ‘ಹುಚ್ಚೇ’ ಆದಂತಿತ್ತು. ಕಂಡವರಿಗೆಲ್ಲಾ ಕೊರೆದರು, ಶಿಷ್ಯವೃಂದಕ್ಕಂತೂ ತುರ್ತು ಕರೆಯನ್ನೇ ಕೊಟ್ಟರು "ಗಡಾನ ಹತ್ರೀ ಗಡಾಯಿಕಲ್ಲೂ!" ಸರಿ, ಹತ್ತು ಜನರ ಮಂಗ(ಗ?)ಳಗಂಗೋತ್ರಿ ತಂಡ ಅದೊಂದು ಆದಿತ್ಯವಾರ ನನ್ನ ಬೆನ್ನು ಹಿಡಿದು, ಬಸ್ಸೇರಿ ಹೊರಟೇಬಿಟ್ಟಿತು.


ಆ ಕಾಲದಲ್ಲಿ ನಡ ಗ್ರಾಮ ದಾಟಿ ಬಂಗಾಡಿಗೆ ವಿರಳವಾಗಿ ಸರ್ವಿಸ್ ಕಾರುಗಳು ಮಾತ್ರ ಓಡುತ್ತಿದ್ದವು, ಇಂದಿನ ಬಸ್ಸೋ ವಟವೃಕ್ಷಾವೋ ಇರಲಿಲ್ಲ. ಹಾಗಾಗಿ ನಾವು ಬೆಳ್ತಂಗಡಿಯಿಂದಲೇ ನಡಿಗೆಗಿಳಿದೆವು. ಚಾರ್ಮಾಡಿಯತ್ತ ಅರ್ಧ ಕಿಮೀ ಮತ್ತೆ ಬಂಗಾಡಿ ದಾರಿಯಲ್ಲಿ ಅರ್ಧ ಕಿಮೀ ಕಳೆದದ್ದೇ ಮಾಮೂಲು ದಾರಿ ಬಿಟ್ಟೆವು. ತೋರುತ್ತಿದ್ದ ಜಮಾಲಾಬಾದ್‌ನ ದಕ್ಷಿಣ ಮೈಯನ್ನೇ ಗುರಿಮಾಡಿಕೊಂಡು ಸಿಕ್ಕ ಕಚ್ಚಾ ಮಣ್ಣದಾರಿ (ಲಾಯ್ಲಾ ದಾರಿ) ಹಿಡಿದು ಹೊಳೆದಂಡೆಗಿಳಿದೆವು. ಬೇಸಗೆಯ ದಿನಗಳು -- ತೆಳು ನೀರಿತ್ತು. ಕೆಲವರು ಶೂ ಬಿಚ್ಚಿ ಹಿಡಿದುಕೊಂಡು ನೀರು ದಾಟಿದರು. ಬುದ್ಧಿವಂತರು (ಕಪಿವೀರರು?) ಆಯಕಟ್ಟಿನ ಜಾಗಗಳಲ್ಲಿ ಕಾಡಕಲ್ಲುಗಳನ್ನು ಹಾಕಿ ಸೇತುಬಂಧನ ಮಾಡಿದರು. ಅನಂತರ ಸರ್ಕಸ್ ಕಲಾವಿದರಂತೆ ಆಚೀಚೆ ಕೈಯೆಸೆದು ಅಸ್ಥಿರ ಕಲ್ಲಿನಿಂದ ಕಲ್ಲಿಗೆ ಲಂಘಿಸಿದರು. ಹೀಗೆ ಹೊರಟವರೆಲ್ಲ ಹನುಮಂತರೇನಲ್ಲ - ಒಬ್ಬಿಬ್ಬರು ಮಾತ್ರ ದಾಟಿದರು! ಹೆಚ್ಚಿನವರು ಕಾಲುಜಾರಿಯೋ ಸಮತೋಲನ ತಪ್ಪಿಯೋ ಬೂಟು ಬುಳುಂಕಾಯಿಸಿ, ಶೂ ಮಾತ್ರವಲ್ಲ ಮೊಣಕಾಲವರೆಗೆ ಪ್ಯಾಂಟೂ ತೊಯ್ಯಿಸಿಕೊಂಡು ಹೆಡ್ಡು ನಗೆ ಬೀರಿದ್ದರು. ಮುಂದೆ ತೆಂಗು, ಬಾಳೆತೋಟಗಳನ್ನು ಹಾದು, ಕುರುಚಲು ಕಾಡು ಕಳೆದು, ಜಮಾಲಾಬಾದಿನ ನೇರ ತಪ್ಪಲಿನ ಸವಕಲು ಜಾಡು ಸವೆಸಿದೆವು. ದಿಣ್ಣೆಗಳಂತಹ ಪುಟ್ಟಗುಡ್ಡಗಳನ್ನು ಏರಿಳಿಯುತ್ತ ಅಡಗುವಾಟ ಆಡುವಂತಿದ್ದ ಜಮಾಲಾಬಾದನ್ನು ದೃಷ್ಠಿ ಸಂಕಲೆಯಿಂದಲೇ ಎಳೆದು ಹತ್ತಿರ ಮಾಡಿದಂತೆ ಬುಡ ಸೇರಿದೆವು.

03 August 2009

ಬಿರುಮಳೆಗೆ ಜಗ್ಗದ ಕರಿರಾಯ

MAP
(ಕುದುರೆಯ ನೆರಳಲ್ಲೊರಗಿದ ಆನೆ ೨)



ಬೆಳ್ತಂಗಡಿಯ ದಿಗಂತದಲ್ಲಿ, ಬಂಗಾಡಿ - ಕಿಲ್ಲೂರು ಕೊಳ್ಳದ ಬಾಗಿಲಲ್ಲಿ ನಿಂತ ಏಕಶಿಲಾ ಶಿಖರ ಜಮಾಲಾಬಾದ್. ಉತ್ತರ ದಕ್ಷಿಣವಾಗಿ ಹಬ್ಬಿದ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯಿಂದ ಕರಾವಳಿಯತ್ತ ಚಾಚಿದ ಒಂದು ಕಿರುಶ್ರೇಣಿಯ ಪೂರ್ಣ ಶಿಲಾಕೊನೆಯಿದು. ಅಂತಿಂಥ ಬಂಡೆ ಇದಲ್ಲ! ಪಶ್ಚಿಮ ಘಟ್ಟದ ತಪ್ಪಲಲ್ಲಿ ಇಂಥ ಮಹಾಕಾಯ ಇನ್ನೊಂದಿಲ್ಲ. ಸುತ್ತಣ ನೆಲದಿಂದ ಸುಮಾರು ೧೨೦೦ ಅಡಿಗಳವರೆಗೂ ಸಮುದ್ರ ಮಟ್ಟದಿಂದ ೧೭೭೮ ಅಡಿಗಳ ಎತ್ತರಕ್ಕೂ ಮಲೆತಿದೆ ಇದರ ತಲೆ. (ಶಿಖರದ ನೆಲ ಸುಮಾರು ದಕ್ಷಿಣೋತ್ತರಕ್ಕೆ ಚಾಚಿಕೊಂಡಂತಿದೆ.) ಹಿಂದೆ ಕರಾವಳಿ ಘಟ್ಟಸೀಮೆಗಳ ನಡುವೆ ನಿತ್ಯ ಸಂಚಾರಕ್ಕೆ ಅಸಂಖ್ಯ ಕಾಲ್ದಾರಿಗಳನ್ನು ಜನ ಗುರುತಿಸಿಕೊಂಡಿದ್ದರು. ಅವುಗಳಲ್ಲಿ ಕಿಲ್ಲೂರು ಮೂಲಕ ಏರುವ ಯಳನೀರು ಘಾಟಿಯೂ ಒಂದು. ಆ ಕಾಲದ ರಾಜ್ಯ ರಕ್ಷಣಾ ತಂತ್ರದಲ್ಲಿ ಇದು ಮುಖ್ಯ ಕಣ್ಗಾಪು ಕೇಂದ್ರವಾಗಿ ಮಹತ್ತ್ವ ಪಡೆದಿರಬೇಕು. ಸಹಜವಾಗಿ ಇದರ ಪ್ರಾಕೃತಿಕ ದುರ್ಗಮತೆಗೆ ಮಾನವ ರಚನೆಯ ಒಪ್ಪ ಸಿಕ್ಕಿತು. ಜನ ಕೆಲವು ರಚನೆಗಳ ಖ್ಯಾತಿಯನ್ನು ನರಸಿಂಹನೆಂಬೊಬ್ಬ ಪಾಳೇಗಾರನ ಖಾತೆಗೆ ಸೇರಿಸುತ್ತಾರೆ. ಹಾಗೆ ಇದು ನರಸಿಂಹ ಗಢ. ಟಿಪ್ಪುಸುಲ್ತಾನ ಗಢ ಗೆದ್ದ. ಹೆಚ್ಚಿನ ಭದ್ರತೆ ಒದಗಿಸಿದ. ಖ್ಯಾತಿ ಮತ್ತು ಖಾತೆ ಆತ ನಾಮಕರಣ ಮಾಡಿದಂತೆ ಆತನ ತಾಯಿ ಹೆಸರಿಗೆ ವರ್ಗಾವಣೆಗೊಂಡು ಮುಂದೆ ಇದು ಜಮಾಲಬಾದ್ ಗಢ.

29 July 2009

ಕುದುರೆಯ ನೆರಳಲ್ಲೊರಗಿದ ಆನೆ ೧. ಜಮಾಲಾಬಾದ್


2೧೯೬೬ರ ಸುಮಾರಿಗೆ ನಾನಿನ್ನೂ ಬೆಂಗಳೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ. ನನ್ನ ತಂದೆ, ತನ್ನ ಕಾಲೇಜಿನ ಎನ್‌ಸಿಸಿ ಶಿಷ್ಯರ ತಂಡದೊಡನೆ ಕುದುರೆಮುಖ ಶಿಖರಕ್ಕೆ ನಡೆಸಿದ ಸಾಹಸ ಯಾತ್ರೆ ನನ್ನ ಮನೋಭಿತ್ತಿಯಲ್ಲಿ ಎವರೆಸ್ಟ್ ಸಾಧನೆಯಂತೇ ದಾಖಲಾಯಿತು. ಆ ಸಾಹಸ ಯಾತ್ರೆಯ ಪ್ರಾಥಮಿಕ ಆಯ್ಕಾ ಪರೀಕ್ಷೆಗಳಲ್ಲಿ ಹೊರಗಿನವನಾಗಿಯೇ ನಾನು ಭಾಗವಹಿಸಿದ್ದೆ ಮತ್ತು ಅತ್ಯುತ್ತಮವಾಗಿಯೇ ತೇರ್ಗಡೆಯಾಗಿದ್ದೆ. ಆದರೆ ನಿಜ ಯಾತ್ರೆಗಾಗುವಾಗ ಎಸ್.ಎಸ್.ಎಲ್.ಸಿ ಪರೀಕ್ಷೆ ಹತ್ತಿರ ಬಂದ ಕಾರಣಕ್ಕೆ ತಂದೆ ನನ್ನನ್ನು ಹೊರಗಿಟ್ಟರು. ಅವರ ಸಾಹಸ ಯಾತ್ರೆ ಯಶಸ್ವಿಯಾಯ್ತು. ಆದರೆ ಅದಕ್ಕೆ ಹೆಚ್ಚಿನ ರಂಗು ಬಂದದ್ದು ನನ್ನ ತಂದೆಯೇ ಬರೆದ ‘ಕುದುರೆಮುಖದೆಡೆಗೆ’ ಎಂಬ ಹೆಸರಿನ ಪುಸ್ತಕದಿಂದ. ಇದು ಕನ್ನಡದಲ್ಲಿ ಸ್ವತಂತ್ರವಾಗಿ ಬಂದ ಪ್ರಥಮ ಸಾಹಸ ಪ್ರವಾಸ ಕಥನ. (ಸದ್ಯ ಇದು ‘ಎನ್‌ಸಿಸಿ ದಿನಗಳು’ ಮತ್ತು ‘ಸವಾಲನ್ನು ಎದುರಿಸುವ ಛಲ’ ಎಂಬ ಎರಡು ಪುಸ್ತಕಗಳ ಭಾಗವಾಗಿ ಸೇರಿಹೋಗಿದೆ). ಆ ಬರೆಹದ ಒಂದು ದೊಡ್ಡ ಅಧ್ಯಾಯದ ವಸ್ತು ಜಮಾಲಾಬಾದ್, ಸದಾ ನನಗೊಂದು ಕಾಡುವ ಕನಸಾಗಿ ಉಳಿದಿತ್ತು.