(ಕರಾವಳಿಗೆ ಹೊಸ ಸಾಹಸ ಕ್ರೀಡೆ - ಭಾಗ ಒಂದು)
೧೯೮೦ರ ದಶಕದ ಮೊದಲ ಭಾಗದಲ್ಲಿ ಸ್ಕೈ ರೈಡರ್ಸ್ ಎಂಬ ಇಂಗ್ಲಿಷ್ ಸಿನಿಮಾ ನೋಡಿದಾಗ ಒಮ್ಮೆಲೇ ನನಗೆ ಬಗಲಲ್ಲಿ ರೆಕ್ಕೆ ಮೊಳೆಯುವ ನೋವು ಶುರುವಾಗಿತ್ತು. ಗಡಿಬಿಡಿಯಾಗಬೇಡಿ, ಅದು ಹ್ಯಾಂಗ್ ಗ್ಲೈಡಿಂಗ್ ಅಥವಾ ನೇತು ತೇಲಾಟದ ಹುಚ್ಚು. ಯಾವುದೇ ಕೋಡುಗಲ್ಲ ನೆತ್ತಿ, ಶಿಖರಾಗ್ರಕ್ಕೆ ಹೋದರೆ “ಹೂಪ್” ಎಂದು ಉದ್ಗರಿಸಿ, ಬಾನಾಡಿಗಳೊಡನೆ ರೆಕ್ಕೆ ಜೋಡಿಸುವ ತುಡಿತಕ್ಕೆ ಇಲ್ಲಿತ್ತು ಸುಲಭ ದಾರಿ. ಕಡಲತಡಿಯ ಗಾಳಿಯ ಹೆಗಲೇರಿ ಸುಂದರ ದೃಶ್ಯ ಹೊಸೆಯುವ ಕಡಲಕ್ಕಿಗಳ ಗೆಣೆಕಾರರಾಗುವ ಅವಕಾಶ ನೇತು ತೇಲಾಟದಲ್ಲಿತ್ತು. ಸೂರ್ಯನತ್ತ ಹಾರಿದ ಮರಿ ವೈನತೇಯ ಇನ್ನು ಪುರಾಣ ಕಲ್ಪನೆಯಲ್ಲ. ಫ್ಯಾಂಟಮ್ ಸಾಹಸಗಳ ಚಿತ್ರಕಥೆಯಲ್ಲಿ ಬಂದ ಗರುಡನ ಬಳಗದ ಠಕ್ಕು, ಇಲ್ಲಿ ವಾಸ್ತವ. ಎಲ್ಲಕ್ಕೂ ಮಿಗಿಲಾಗಿ ರೈಟ್ ಸೋದರರ ಮೂಲ ಆಶಯ - ಸಾಮಾನ್ಯನಿಗೆ ಹಾರಾಟ, ನೇತು ತೇಲಾಟದಲ್ಲಿ ನಮಗೂ ದಕ್ಕುವಂತಿತ್ತು; ಕಾರ್ಯರೂಪಕ್ಕೆ ಇಳಿಸುವುದಷ್ಟೇ ಬಾಕಿ!