21 September 2022

ಮಡಿಕೇರಿ ಟಿಪ್ಪಣಿಗಳು

[ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು - ಮಡಿಕೇರಿಗೆ, ಕೆಲವು ಭೇಟಿ ಕೊಡುವುದು ಅನಿವಾರ್ಯವಾಯ್ತು. ಆಗ ಮೂಡಿದ ಸಾಮಾಜಿಕ ಕಾಳಜಿಯ ಸಾಮಯಿಕ ಟಿಪ್ಪಣಿಗಳನ್ನು ಫೇಸ್ ಬುಕ್ಕಿನಲ್ಲಿ ಪ್ರಕಟಿಸುತ್ತ ಬಂದಿದ್ದೆ. ಇಲ್ಲಿ ಅವುಗಳನ್ನು ಪರಿಷ್ಕರಿಸಿ, ಕಾಲಾನುಕ್ರಮದಲ್ಲೇ ಸಂಕಲಿಸಿದ್ದೇನೆ.]



೧. ಭಾಗಮಂಡಲ ಮುಳುಗಿದರೂ ಸೇತುವೆ...



ಕೌಟುಂಬಿಕ ಕಾರ್ಯಕ್ರಮ (೨-೯-೨೧) ಒಂದಕ್ಕಾಗಿ ತಲಕಾವೇರಿಯ ಸಮೀಪದ ‘ಕಾವೇರಿ ಯಾತ್ರಿಕ ಧಾಮ’ಕ್ಕೆ ಹೋಗಿ ಬರುವಾಗ ಭಾಗಮಂಡಲದಲ್ಲಿ ಕಾವೇರಿಯ ಮೇಲಿನ ಈ ಅಪೂರ್ಣ ಸೇತುವೆ ಕಂಡೆ. ಅದರ ಸ್ಥಗಿತಗೊಂಡ ಕಾರ್ಯದ ಪ್ರಾಚೀನತೆ ಮತ್ತು ಅಪೂರ್ಣತೆ ನೋಡಿ, ಖಂಡಿತವಾಗಿಯೂ ಇದು ಜವಾಹರಲಾಲ್ ನೆಹರೂ ಮಾಡಿದ ಇನ್ನೊಂದು ಮಹಾಪರಾಧ ಎಂದೇ ನಿರ್ಧರಿಸಿದ್ದೆ. ಆದರೆ ಈಗ ಮಂಗಳೂರು ಪಂಪ್ವೆಲ್ ವೃತ್ತ, ಕುಂದಾಪುರದ ಮೇಲ್ಸೇತುಗಳೆಲ್ಲ ದೇಶಭಕ್ತರ

23 May 2022

ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ



"ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ ಮನೆಯಲ್ಲಿ ಸೇರುತ್ತಿದ್ದೆವು. ಅಲ್ಲಿ ಆಡದ ಮಾತಿಲ್ಲ, ಮಾಡದ ಚಟುವಟಿಕೆಗಳಿಲ್ಲ...." ಎಂದೇ ತೊಡಗಿತ್ತು ಎನ್.ಜಿ ಮೋಹನರ ಪ್ರಾಸ್ತಾವಿಕ ಮಾತುಗಳು. ಸಂದರ್ಭ - ಮೋಹನ್ನರ ತಾಯಿ - ವಸಂತಿ ಟೀಚರ್ ಅವರ ಜನ್ಮ ಶತಾಬ್ದಿ, ಅವರ ಪುಸ್ತಕ - ಬೀದಿ

ದೀಪದ ಬೆಳಕು, ಇದರ ಲೋಕಾರ್ಪಣ ಮತ್ತು ‘ದ ಅನಿರುದ್ಧ್ ಚಾರಿಟೆಬಲ್ ಟ್ರಸ್ಟ್’ ಉದ್ಘಾಟನೆ. ಎನ್.ಜಿ ಮೋಹನ್ ಮಂಗಳೂರಿನಲ್ಲಿ ಕೆಲವು ಔಷಧ ಕಂಪೆನಿಗಳ ಯಶಸ್ವೀ ಸಗಟು ವಿತರಕರು. ಈ ತ್ರಿವಳಿ ಸಂತೋಷಕೂಟವನ್ನು ಮೋಹನ್ ಅವರ ಕಂಪೆನಿ - ‘ಬೆಟಾ ಏಜನ್ಸೀಸ್ ಅಂಡ್ ಪ್ರಾಜೆಕ್ಟ್ಸ್ ಪ್ರೈ.ಲಿ’, ಅವರ ಪ್ರಿಯ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್ ಕಾಲೇಜ್ ಸಹಯೋಗ ಮತ್ತು ಸಭಾಂಗಣದಲ್ಲಿ (೧೫-೫-೨೦೨೨, ಆದಿತ್ಯವಾರ ಸಂಜೆ) ವ್ಯವಸ್ಥೆ ಮಾಡಿತ್ತು.

15 April 2022

ಚಿತ್ರಪಟ ರಾಮಾಯಣ - ಚಿತ್ರ, ಕತೆ


ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ನಾಟಕ ಶಾಲೆ ವಾರಣಾಸಿಯಲ್ಲೊಂದು ಶಾಖೆ ತೆರೆಯಿತು. ಅದರ ನಿರ್ದೇಶಕರು ರಾಮ್ ಜಿ. ಬಾಲಿ (/ವಾಲಿ). ಪುರಾಣ, ಕಲೆಗಳಲ್ಲೆಲ್ಲ ರಾಮ ಮತ್ತು ವಾಲಿಯ ಹೆಸರುಗಳು ಎದುರು ಬದಿರಾಗಿ ಕಂಡರೆ ಇವರಲ್ಲಿ ಅಪೂರ್ವವಾಗಿ ಸಮನ್ವಯಗೊಂಡಿದೆ. ರಾಮ್ಜೀ ಅಧಿಕಾರದ ಹೊಸತರಲ್ಲೇ ಉಡುಪಿಯ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣರನ್ನು ಯುಕ್ತ ಸಮ್ಮಾನದೊಡನೆ ವಾರಣಾಸಿಗೆ ಕರೆಸಿಕೊಂಡಿದ್ದರು. ನಾಟಕ ಕಲಿಕೆಯ ಹಿಂದಿ ವಿದ್ಯಾರ್ಥಿಗಳಿಗೆ ಸುವರ್ಣರ ಮೂಲಕ ಕನ್ನಡದ ಯಕ್ಷಗಾನವನ್ನೂ ಕಲಿಸಿದರು! ಅದು ಸಾಲದೆನ್ನುವಂತೆ, ತಿಂಗಳ ಹಿಂದೆ ಇಪ್ಪತ್ತು ವಿದ್ಯಾರ್ಥಿ ವೃಂದವನ್ನು, ಸ್ವತಃ ಉಡುಪಿಗೇ ತಂದು ಯಕ್ಷಗಾನ ಕೇಂದ್ರದಲ್ಲೇ ಬೀಡುಬಿಟ್ಟರು.


ಕನ್ನಡ ಮತ್ತು ಯಕ್ಷಗಾನಗಳನ್ನು ಉಸಿರಾಡುವ ಪರಿಸರದಲ್ಲಿ, ಸಂಜೀವ ಸುವರ್ಣರ ‘ಗುರುಕುಲ’ದಲ್ಲಿ, ಅಹೋರಾತ್ರಿ ಯಕ್ಷ-ಧ್ಯಾನದಲ್ಲಿ ಮುಳುಗೆದ್ದರು. ಅವರ ಕಲಿಕೆಗೆ ಚೂಪುಕೊಡಲು ಸಹಕಾರಿಯಾಗಿ ಒದಗಿದ ಪ್ರಸಂಗ - ಚಿತ್ರಪಟ ರಾಮಾಯಣ.  

 

11 April 2022

ಸಸ್ಯ ತಪಸ್ವಿ ಗೋಪಾಲಕೃಷ್ಣ ಭಟ್


ಒಂದು ಪುಸ್ತಕ, ಒಂದು ನಮನ



ಡಾ| ಕಾಕುಂಜೆ ಗೋಪಾಲಕೃಷ್ಣ ಭಟ್ಟರ (ಕೆ.ಜಿ ಭಟ್) ಸಹಜ ಹಸನ್ಮುಖವನ್ನು ಹೊತ್ತ, ಹೊಳಪುಳ್ಳ ಉತ್ತಮ ಕಾಗದದ ನೂರಾ ಹದಿನಾರು ಪುಟಗಳ, ಅಸಂಖ್ಯ ಚಿತ್ರಗಳ ಪುಸ್ತಕ - ಟ್ಯಾಕ್ಸೋನೊಮಿ ಭಟ್ಟರ ಯಾನ. ನಿಜ ‘ಎಲೆಗಳ ಹಿಂದೆ’ ಬೀಳುವ ಗೀಳಿನ ಭಟ್ಟರ ವ್ಯಕ್ತಿತ್ವ ಸಾಮಾನ್ಯ ಲೋಕಮುಖಕ್ಕೆ, ಲೋಕೋಕ್ತಿಯಂತೆ ಎಲೆಯ ಮರೆಯಲ್ಲೇ ಉಳಿದಿತ್ತು. ಆ ಕೊರತೆಯನ್ನು ಕಿರಿದರಲ್ಲಿ ನೀಗಿಸುವ ಪ್ರಾಮಾಣಿಕ ಪ್ರಯತ್ನ ಈ ಪುಸ್ತಕ. ಗೋಪಾಲಕೃಷ್ಣ ಭಟ್ಟರು ಸ್ವಪ್ರಚಾರ ಬಿಡಿ, ಅವಶ್ಯವಿದ್ದಲ್ಲಿ ಯುಕ್ತ ಸ್ವಸ್ಥಾಪನೆಯನ್ನೂ ದೋಷ ಎನ್ನುವಂತೆಯೇ ನಿರಾಕರಿಸಿದ ನಿರ್ಮೋಹಿ. ಪುಸ್ತಕದ ಮುನ್ನುಡಿಕಾರ, ಪ್ರಕಾಶಕ - ಎನ್ ರಾಮನಾಥ್, ಒತ್ತು ಕೊಟ್ಟು

21 January 2022

ಡಾ| ಕೃಷ್ಣಮೋಹನ ಪ್ರಭು ಇನ್ನಿಲ್ಲ

(ಈ ಬರಹದ ಮೊದಲ ಪ್ರತಿಯನ್ನು ಐದು ಕಂತುಗಳ ಧಾರಾವಾಹಿಯಾಗಿ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದೆ. ಇಲ್ಲಿ ಅವನ್ನು ಪರಿಷ್ಕರಿಸಿ ಸಂಕಲಿಸಿದ್ದೇನೆ. ಫೇಸ್ ಬುಕ್ಕಿನಲ್ಲಿ ವಿಷಾದ ವ್ಯಕ್ತಪಡಿಸಿದವರು, ತಮ್ಮ ವಲಯದ ಇನ್ನಷ್ಟು ಮಂದಿಗೆ ಮುಟ್ಟಿಸಿದವರು ನೂರಾರು. ಅಲ್ಲಿ ಬಂದ ಕೆಲವು ವಿಷಯಕ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರತಿಕ್ರಿಯಾ ಅಂಕಣದಲ್ಲಿ ಸೇರಿಸಿಕೊಳ್ಳುತ್ತಿದ್ದೇನೆ. ಹಾಗೇ ಸುದೀರ್ಘ ಟಿಪ್ಪಣಿಯನ್ನೇ ಕೊಟ್ಟ ‘ಪವಾಡ ವಿರೋಧಿ’ ನರೇಂದ್ರ ನಾಯಕ್ ಮತ್ತು ಹಿರಿಯ ವೈದ್ಯ ಮಿತ್ರ ಶ್ರೀನಿವಾಸ ಕಕ್ಕಿಲ್ಲಾಯರ ಬರಹಗಳನ್ನು, ಅವರ ಅನುಮತಿಯೊಡನೆ ಇದಕ್ಕೆ ಅನುಬಂಧಗಳಾಗಿ ಬಳಸಿಕೊಂಡಿದ್ದೇನೆ)


ಕೃಶಿ ತೊರೆ ಬತ್ತಿಹೋಯ್ತು

ಮಲೇಶ್ಯಾದಿಂದ ವೈದ್ಯಕೀಯ ಓದಿಗಾಗಿ ಅಸಂಖ್ಯ ವಿದ್ಯಾರ್ಥಿಗಳು ಮಂಗಳೂರು, ಮಣಿಪಾಲಕ್ಕೆ ಬರುತ್ತಿದ್ದ ಕಾಲವದು (ಸುಮಾರು ೧೯೮೪). ಆ ಬಳಗದ್ದೇ ಇದೊಂದು ಕುಡಿ ಎಂದೇ ನಾನೋರ್ವ ಧಡೂತಿ ತರುಣನನ್ನು ಭಾವಿಸಿದ್ದೆ. ಆದರೆ ಒಮ್ಮೆ ನಾನು ಇನ್ಯಾರದೋ ಜತೆ ಕನ್ನಡದಲ್ಲಿ ಮಾತಾಡುತ್ತಿದ್ದಾಗ, ಅಲ್ಲೇ ಇದ್ದ ಈತ ಅರ್ಥಪೂರ್ಣ ನಗೆ ಕೊಟ್ಟ! ಆಗ ತಿಳಿಯಿತು, ಈತ ಅಪ್ಪಟ ಕನ್ನಡಿಗ - ಸಮೀಪದ ಮೂಡಬಿದ್ರೆಯ ಕೃಷ್ಣಮೋಹನ ಪ್ರಭು; ಮಿತ್ರವಲಯಕ್ಕೆ ಕೃಶಿ. ಮುಂದೆ ನನ್ನ ಮಾತಿನ ಚಪಲಕ್ಕೋ, ಕೃಶಿಯದೇ ಮಿತಿಯರಿಯದ ಕುತೂಹಲಕ್ಕೋ ನಮ್ಮೊಳಗೆ ಅಪೂರ್ವ ಗೆಳೆತನದ ಬಂಧ ಏರ್ಪಟ್ಟಿತ್ತು. ಮತ್ತದು ಸುಮಾರು ಮೂವತ್ತೇಳು ವರ್ಷಗಳ ಉದ್ದಕ್ಕೆ ದೃಢವಾಗಿ ಬೆಳೆದಿತ್ತು. ಆದರೆ ಈಚೆಗೆ (೧೧-೧-೨೦೨೨) ತೀರಾ ಅನಿರೀಕ್ಷಿತವಾಗಿ, ಅಕಾಲಿಕವಾಗಿ ಮತ್ತು ಯಾವತ್ತಿಗೂ ಕಡಿದು ಹೋಯ್ತು; ಕೃಶಿ ಇನ್ನಿಲ್ಲ!

17 November 2021

ಆಷ್ಟಭುಜೆ ರಮಾದೇವಿಗೆ ನಮನ


ಚಿತ್ರ ಕೃಪೆ: ಅಭಿಜಿತ್ ಎಪಿಸಿ

"ದಿಬ್ಬಣ ವೆಂಕಪ್ಪು ಮನೆಗೆ ಬಂದಿದೆ" ಎಂದು ಕೇಳಿದಾಗ, ಹೊಸ ಚಡ್ಡಿ ಎಳೆದುಕೊಂಡು ಅರ್ಧ ಕಿಮೀ ದೂರದ ತೋಡಿನಾಚೆ ದಂಡೆಗೆ ಓಡಿದ ಐದರ ಹುಡುಗ ನಾನು. ಅಜ್ಜ - ಎಪಿ ಸುಬ್ಬಯ್ಯ, ಸಕಾಲದಲ್ಲೇ ಹಿರೀಮಗ - ತಿಮ್ಮಪ್ಪಯ್ಯನಿಗೆ ಮದುವೆಯನ್ನೇನೋ ಮಾಡಿದ್ದರು. ಆದರೆ ದುರದೃಷ್ಟಕ್ಕೆ ಪತ್ನಿ ಗಂಗಮ್ಮ, ಚೊಚ್ಚಲ ಹೆರಿಗೆಯಲ್ಲಿ ಮಗುವನ್ನಿತ್ತು (ಸುಬ್ಬಯ್ಯ ದ್ವಿತೀಯ), ಬಾಣಂತಿಸನ್ನಿಗೆ ಪ್ರಾಣ ನೀಗಿದ್ದರು. ಇಂಥ ಸ್ಥಿತಿಯಲ್ಲಿ ೨೯ರ ತರುಣನಿಗೆ, ೧೬ರ ನವವಧುವಾಗಿ ಬಂದವರು (೧೯೫೭) ವರ್ಮುಡಿಯ ರಮಾದೇವಿ. ತಿಮ್ಮಪ್ಪಯ್ಯ - ನನಗೆ ಸೋದರಮಾವ, ಹುಟ್ಟಿದಾರಭ್ಯ ರೂಢಿಸಿದಂತೆ ಏಕವಚನದ ಅಣ್ಣ. ಅದೇ ರೂಢಿಯ ಮುಂದುವರಿಕೆಯಾಗಿ ರಮಾದೇವಿ ಅತ್ತಿಗೆಯಾದರೂ ಬಂಧ ಬಹುವಚನದ್ದು! ಆದರೆ ಸಂದ ಆರು ದಶಕಗಳಿಗೂ ಮಿಕ್ಕ ಕಾಲದಲ್ಲಿ ಪರಸ್ಪರ ಪ್ರೀತ್ಯಾದರಗಳು ಗಾಢವೇ ಇದ್ದವು ಎನ್ನುವ ಅರಿವು ಮೂಡಿದ್ದು ಮಾತ್ರ ತೀರಾ ಈಚೆಗೆ!

07 August 2021

‘ನಕ್ಷೆ’ತ್ರಿಕನ ವಿಷಾದದ ಎಳೆ


ಈಚೆಗೆ ಫೇಸ್ ಬುಕ್ ಗೆಳೆಯ ರಾಜೇಂದ್ರ ಪ್ರಸಾದ್, ನನ್ನ ಗಣಪತಿ ಗುಹಾ ನಕ್ಷೆ (೧೯೯೪) ನೋಡಿ ಮೋಹಗೊಂಡು, ವಿವರ ವಿಚಾರಿಸಿದರು. ಸೀಮಿತ ಮುದ್ರಿತ ನಕಾಶೆಗಳಿದ್ದ ಕಾಲದ ಅಗತ್ಯಕ್ಕೆ ನಾನು ಬಿಡಿಸಿದ ೯೬ ನಕ್ಷೆಗಳ ಕುರಿತು ಒಂದೆರಡು ಮಾತು ಹೇಳಿದೆ. ಆತ ಎಲ್ಲವನ್ನು ಪುಸ್ತಕವಾಗಿ ಪ್ರಕಟಿಸಲು ಒತ್ತಾಯಿಸಿದರು. ನಾನೋ ‘ಇದು ಮುದ್ರಿತ ಪುಸ್ತಕಗಳ ಕಾಲವೇ ಅಲ್ಲ’ ಎಂದು ಘೋಷಿಸಿ ಇದ್ದ ಪುಸ್ತಕ ಪ್ರಕಾಶನ, ಅಂಗಡಿಗಳನ್ನು ಮುಚ್ಚಿದವ! "ಅದೆಲ್ಲ ಯಾಕೆ? ಕೇವಲ ನನ್ನ ಆವಶ್ಯಕತೆಗೆ ಮಾಡಿಕೊಂಡ ಈ ನಕ್ಷೆಗಳು ಯಾರಿಗಾದರೂ ಉಪಯೋಗವಾಗುವುದಿದ್ದರೆ ಇಲ್ಲೇ ಹಾಕಿಬಿಡುತ್ತೇನೆ" ಎಂದೆ. ಈಗ ಫೇಸ್ ಬುಕ್ಕಿನಲ್ಲಿ ಸರಣಿಯಲ್ಲಿ ಪ್ರಕಟಿಸಿ ಮುಗಿಸಿದ್ದೇನೆ. ನಕ್ಷೆಗಳನ್ನು ಸ್ಕ್ಯಾನ್ ಮಾಡಿ, ಪ್ರವೇಶಿಕೆಯ ಎರಡು ಮಾತು, ಲೇಖನವಿದ್ದರೆ ಸೇತು ಸೇರಿಸುತ್ತ ಬಂದೆ. ಈ ಕ್ರಿಯೆ ನನ್ನನ್ನು ಮೂವತ್ತಾರು ವರ್ಷಗಳ ಹಿಂದಿನಿಂದ (೧೯೮೫) ತೊಡಗಿ, ಇಪ್ಪತ್ತೊಂದು ವರ್ಷಗಳ ಹಿಂದಿನವರೆಗಿನ (೨೦೦೦) ಪರಿಸರ ಮತ್ತು ಮನೋಸ್ಥಿತಿಗೆ ಒಯ್ದಿತ್ತು. ಪರಿಣಾಮವಾಗಿ, ನಕ್ಷೆಗಳನ್ನು ಮೀರಿದ ಕೆಲವು ಮಾತುಗಳು.

03 July 2021

ಗುಹಾ ನೆನಪುಗಳು, ಇನ್ನಷ್ಟು


ಮಂಗಳೂರಿನಲ್ಲಿ ನಾನು ವೃತ್ತಿಪರನಾಗಿ (ಪುಸ್ತಕೋದ್ಯಮಿ - ೧೯೭೫) ನೆಲೆಸಿದಂದಿನಿಂದ ‘ಸಾಹಸ’ದ ಹೊದಿಕೆಯಲ್ಲಿ ಪ್ರಾಕೃತಿಕ ಅನ್ವೇಷಣೆಯನ್ನು (ಬೆಟ್ಟ, ಕಾಡು, ಜಲಪಾತ ಇತ್ಯಾದಿ ಸೇರಿದಂತೆ) ಗಟ್ಟಿ ಹವ್ಯಾಸವಾಗಿ ರೂಢಿಸಿಕೊಂಡೆ. ಅದರಲ್ಲಿ ಗಳಿಸಿದ ಸಂತೋಷ ಇತರರಿಗೂ ಪ್ರೇರಕವಾಗಬೇಕೆಂಬ ಆಸೆಯಲ್ಲಿ ಯುಕ್ತ ಪ್ರಚಾರಕ್ಕೂ ಇಳಿದೆ. ಆ ದಿನಗಳಲ್ಲಿ ಇದ್ದ ಬಹುಶಕ್ತ ಮಾಧ್ಯಮ ಮುದ್ರಣದ್ದು. ಅದಾದರೂ ನನ್ನ ಅಷ್ಟೇನೂ ಜನಪ್ರಿಯವಲ್ಲದ ವಿಷಯಕ್ಕೆ, ಶಬ್ದಗಳ ಮಿತಿಯನ್ನೂ ಚಿತ್ರಗಳಲ್ಲಿ ಗುಣಮಟ್ಟದ ಮಡಿಯನ್ನೂ ತೋರುತ್ತಿದ್ದವು.

23 June 2021

ದುಗ್ಗುಳಮಾಟೆ ಮತ್ತಿತರ ಮಣಿಪಾಲ ಗುಹೆಗಳು


ಉಡುಪಿ ಇಂದ್ರಾಳಿ ಸಮೀಪದ ಜಗನ್ನಾಥರಿಗೆ (ವೃತ್ತಿತಃ ಏನೋ ವರ್ಕ್ ಶಾಪ್ ಮಾಲಿಕ) ಮೂಡಬಿದ್ರೆಯ ಸೋನ್ಸರೊಂದಿಗೆ ಒಳ್ಳೆಯ ಸ್ನೇಹಾಚಾರವಿತ್ತು. ಅವರಂತೆ ಇವರೂ ಹವ್ಯಾಸೀ ಡೌಸರ್. ಜಗನ್ನಾಥರ ಇನ್ನೋರ್ವ ಗೆಳೆಯ ಕೃಷ್ಣ ಭಟ್. ಭಟ್ಟರು ಜಿಲ್ಲೆಗೆ ಬರುತ್ತಿದ್ದ ವಿದೇಶೀಯರೂ ಸೇರಿದಂತೆ ಜನಪದ ತಜ್ಞರಿಗೆ ಕ್ಷೇತ್ರಕಾರ್ಯದಲ್ಲಿ ಸಹಾಯಕನಾಗಿ, ದುಭಾಷಿಯಾಗಿ ಕೆಲಸ ಮಾಡುತ್ತ ಅಪಾರ ಅನುಭವ ಗಳಿಸಿದ್ದವರು. ಸಹಜವಾಗಿ ಅವರಿಗೂ ನನ್ನಲ್ಲಿ ಒಳ್ಳೆಯ ಸ್ನೇಹಾಚಾರವಿತ್ತು. ಜಗನ್ನಾಥರ ಆಸಕ್ತಿ ಸಹಸ್ರದಲ್ಲಿ ಧ್ಯಾನ, ಪಿರಮಿಡ್ ಶಕ್ತಿ, ಅಂಜನ, ಆರ, ಜೀವಚೈತನ್ಯ, ರೇಕಿ, ನಿಧಿಶೋಧ ಮುಂತಾದ ಅಲೌಕಿಕ, ಅಧ್ಯಾತ್ಮಿಕ ತಂತ್ರಗಳೂ ಇದ್ದವು. ಜಗನ್ನಾಥರಿಗೆ ಇವಕ್ಕೆ ಬೇಕಾದ ಪುಸ್ತಕಗಳಲ್ಲಿ ಹಲವು ಕಾಲಕಾಲಕ್ಕೆ ನನ್ನಲ್ಲೇನೋ ಖರೀದಿಗೆ ಸಿಗುತ್ತಿತ್ತು. ಆದರೆ ಅವನ್ನು ಗಟ್ಟಿಯಾಗಿ ಓದಿ ಹೇಳುವ ಮತ್ತು ಅರ್ಥೈಸಿಕೊಡುವ ಜವಾಬ್ದಾರಿ ಕೃಷ್ಣಭಟ್ಟರದ್ದಾಗಿತ್ತು.

18 June 2021

ಅಂಬರೀಷ ಗುಹೆ


೧೯೮೦ರ ದಶಕದಲ್ಲಿ ಬುಲ್ಡೋಜರ್ ಮತ್ತು ತೂತು ಭಾವಿಯ ಕ್ರಾಂತಿ ಚುರುಕಾಗಿತ್ತು. ಭೂಗರ್ಭದ ಜಲನಿಧಿ ಸರ್ವವ್ಯಾಪಿ ಮತ್ತು ಅಕ್ಷಯ ಎನ್ನುವ ಹುಚ್ಚಿನಲ್ಲಿ ಕೃಷಿಕರು ಎಲ್ಲೆಂದರಲ್ಲಿ ಗುಡ್ಡೆಗಳನ್ನು ತಟ್ಟಾಗಿಸುತ್ತ ತೋಟ ವಿಸ್ತರಣೆ ನಡೆಸಿದ್ದರು. ಅದಕ್ಕೆ ಪೂರಕವಾಗಿ ಭೂಗರ್ಭ ಶಾಸ್ತ್ರಜ್ಞರು, ಮೂಲನೆಲದ ರಚನೆ ನೋಡಿ, ಕೆಲವು ಯಂತ್ರೋಪಕರಣಗಳ ಪ್ರಯೋಗದಿಂದ (ವೆಚ್ಚವೂ ಸಾಕಷ್ಟು ಇದ್ದಿರಬೇಕು), ಅಸ್ಪಷ್ಟ ಜಲಮೂಲಗಳನ್ನು ಗುರುತಿಸಿಕೊಡುತ್ತಿದ್ದರು. ಆದರೆ ‘ವಿಜ್ಞಾನದ ವಿನಯ’ಕ್ಕೆ ಒಗ್ಗಿಕೊಳ್ಳದ ಮತ್ತು ಕೃಷಿಯ ಹೆಸರಿನಲ್ಲಿ ವಾಣಿಜ್ಯ ಬೆಳೆಯ ಗೀಳು ಹಿಡಿಸಿಕೊಂಡ ಜನರಿಗೆ ಅಷ್ಟು ಸಾಲದಾಯ್ತು. ಆಗ ವಾಸ್ತುಬ್ರಹ್ಮರು,

28 May 2021

ಜಯಂತರಿಗೊಂದು ನುಡಿ ನಮನ


"ನಾನು ಜಯಂತ್+ಅ, ಜಯಂತ! ಏಗ್ನೆಸ್ (ಮಹಿಳಾ) ಕಾಲೇಜಿನ ಕೆಮಿಸ್ಟ್ರಿ ಅಧ್ಯಾಪಕ. ನಮ್ಮದು ಮಹಿಳಾ ಕಾಲೇಜಾದ್ದರಿಂದ ಬರಿಯ ಹೆಸರು ಕೇಳಿದವರು ‘ಜಯಂತಿ’ ಮಾಡಿಬಿಡ್ತಾರೆ..." ಎಂದು ನನ್ನಂಗಡಿಯ ಹೊಸ ಕಾಲದಲ್ಲಿ ಬಂದಿದ್ದವರು (೧೯೭೬ರ ಸುಮಾರಿಗೆ) ಮುಕ್ತ ನಗೆಯೊಡನೆ, ನಾಲ್ಕು ಹನಿ ಕಣ್ಣೀರು ಒರೆಸಿಕೊಳ್ಳುತ್ತ ಪರಿಚಯಿಸಿಕೊಂಡಿದ್ದರು. ಹೌದು, ಜಯಂತರಿಗೆ ಧಾರಾಳ ನಗೆಯೊಡನೆ ಕಣ್ಣೀರು ಬರುವ ಸಣ್ಣ ದೈಹಿಕ ಕೊರತೆಯಿತ್ತು. ಆದರೆ ಅವರ ಪರಿಚಯ ಬೆಳೆದಂತೆ, ಮೃದು ಮಾತು, ವೈವಿಧ್ಯಮಯ ಆಸಕ್ತಿ ಮತ್ತು ತನಗೆ ತಿಳಿದದ್ದನ್ನೆಲ್ಲ ಎಲ್ಲರಲ್ಲಿ ಹಂಚಿಕೊಳ್ಳುವಲ್ಲಿ ಇದ್ದ ಆನಂದವನ್ನು ಕಂಡಾಗ, ಅದು ಆನಂದಾಶ್ರುವೇ ಇರಬೇಕು!

29 April 2021

ಮುಕ್ಕಾಂ ಕಪ್ಪೆಗೂಡು

೧. ಬಳಸು ದಾರಿಯಲ್ಲಿ


‘ಏಪ್ರಿಲ್ ೧೬ರಿಂದ ಜೂನ್ ೧ರವರೆಗೆ ಬಿಸಿಲೆ ದಾರಿ ಬಂದ್’ ಹಾಸನ ಜಿಲ್ಲಾಧಿಕಾರಿ ಪ್ರಕಟಣೆ ಬಂತು. ಗಡಿಬಿಡಿಯಾಗಬೇಡಿ, ಇದು ಕೋವಿಡ್ ಸಂಬಂಧಿಯಲ್ಲ. ನಾನೇ ಹಿಂದೆ ಹೇಳಿದ್ದ ಕುಳ್ಕುಂದ - ಬಿಸಿಲೆ ನಡುವೆ ಬಾಕಿಯುಳಿದಿದ್ದ ಮೂರು ಕಿಮೀ ಕಾಂಕ್ರಿಟೀಕರಣ ಪೂರೈಕೆಗೆ. ಆದರೆ ಆರಂಭಕ್ಕೆ ತಡ, ಮುಕ್ತಾಯ ಎಂದೂ ಇಲ್ಲ ಎನ್ನುವ ನಮ್ಮ ಸರಕಾರೀ ಕಾಮಗಾರಿಗಳು ನಂಬಲರ್ಹವಲ್ಲ. ಹಾಗಾಗಿ ನಾನು ಬಿಸಿಲೆ ಗಣೇಶರಲ್ಲಿ ಚರವಾಣಿಸಿ ಕೇಳಿದೆ. "ಅಯ್ಯೋ ಮೂರು ಕಿಮೀ

ಕಾಂಕ್ರೀಟಿಗೆ ಒಂದೂವರೆ ತಿಂಗಳು ಎಲ್ ಸಾಲುತ್ತೇ? ಹಂಗಾಗಿ ಎಂಟು ದಿನ ಮೊದಲೇ ರೋಡ್ ಕ್ಲೋಸ್ ಮಾಡಿ, ಕೆಲಸ ಜೋರಾಗಿ ನಡೆದಿದೆ..." ಎಂದರು.

‘ಕಪ್ಪೇಗೂಡಿ’ಗೆ ಮೇಲ್ಟಾಂಕಿ ಕೂರಿಸಿ ಬಂದ ಮೇಲೆ ನಾನು ಅತ್ತ ತಲೆ ಹಾಕಿರಲಿಲ್ಲ. ಬಾಕಿಯುಳಿದ ಚಿಲ್ಲರೆ ಕೆಲಸ ಸೇರಿಸಿಕೊಂಡು, ಬಳಸು ದಾರಿಯಲ್ಲಿ ಅಶೋಕವನಕ್ಕೆ ಹೋಗುವ, ಮೂರು ದಿನದ ಮೊಕ್ಕಾಂ ಮಾಡುವ ಯೋಜನೆ ಹಾಕಿದೆ. ಹಿಂದಾದರೋ

14 April 2021

ಯಕ್ಷಗಾನ ದೀವಟಿಗೆ ಬೆಳಕಿನಲ್ಲಿ, ಮರುಚಿಂತನೆ


"ಯಕ್ಷಗಾನಕ್ಕೆ ಆರ್ನೂರೋ ಎಂಟ್ನೂರೋ ವರ್ಷಗಳ ಇತಿಹಾಸವಿದೆ ಎಂದು ಕೇಳಿದ್ದೇನೆ, ಇರಬಹುದು. ಆದರೆ ಇಂದು ನಮ್ಮಲ್ಲಿ, ಅಂದರೆ ಕರ್ನಾಟಕದ ಕರಾವಳಿ ಸೇರಿದಂತೆ ಸ್ವಲ್ಪ ಮಲೆನಾಡಿನ ಜಿಲ್ಲೆಗಳಲ್ಲಿ ಬಹಳ ಜನಪ್ರಿಯತೆ ಮಾತ್ರವಲ್ಲ, ಬಹುದೊಡ್ಡ ‘ಉದ್ಯಮ’ವೇ ಆಗಿ (ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟುಗಳು) ಕಂಡ ಬೆಳವಣಿಗೆಗೆ ಮಾತ್ರ ಈ ಪ್ರಾಚೀನತೆ ಇದ್ದಂತಿಲ್ಲ. ವಾಸ್ತವದಲ್ಲಿ ಇದು ನೂರು ನೂರಿಪ್ಪತ್ತು ವರ್ಷಗಳಷ್ಟು ಆಧುನಿಕವೇ ಇದೆ" ಎಂದು ಗೋವಾ ವಿವಿನಿಲಯದ ಪ್ರಾಧ್ಯಾಪಕ ಕೆ. ಶ್ರೀಪಾದ ಭಟ್ ಹೇಳಿದರು. ಇದು ಈಚೆಗೆ

12 April 2021

ಲಕ್ಷದ್ವೀಪದ ಮರಿ - ಪೆರುಮಾಳ ಪಾರ


ಲೇಖನ ಮತ್ತು ಚಿತ್ರ: ಗಿರೀಶ ಪಾಲಡ್ಕ



[ಎರಡು ವಾರಗಳ ಹಿಂದೆ ಗೆಳೆಯ ಗಿರೀಶ್ ಫೇಸ್ ಬುಕ್ಕಿನಲ್ಲಿ ನಾಲ್ಕು ಚಿತ್ರ ಹಾಕಿ, ಕೇಳಿದವರಿಗೆ "ನಿರ್ಜನ ದ್ವೀಪ - ಪೆರುಮಾಳ ಪಾರ" ಎಂದು ಸುಧಾರಿಸಿ ಮುಗಿಸುವುದರಲ್ಲಿದ್ದರು. ಆದರೆ ಈಗ ನನ್ನ ಒತ್ತಾಯಕ್ಕೆ, ಪುಟ್ಟ ಲೇಖನ ಮತ್ತು ಹೆಚ್ಚಿನ ಪಟಗಳನ್ನೂ ಪೂರೈಸಿದ್ದಾರೆ. ಗಿರೀಶ್ ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದಾಗಲೇ ಅಂದರೆ, ಸುಮಾರು ಐದು ವರ್ಷಗಳ ಹಿಂದೆಯೇ ತಮ್ಮ ಡಾರ್ಜಿಲಿಂಗ್ ಚಾರಣಾನುಭವವನ್ನು ಇಲ್ಲಿ ಮೂರು ಕಂತುಗಳಲ್ಲಿ ಹಂಚಿಕೊಂಡದ್ದು ನೀವೆಲ್ಲ ಓದಿಯೇ ಇರುತ್ತೀರಿ. ಕಳೆದ ವರ್ಷ ಅವರು ವೃತ್ತಿ ಸಹಜವಾದ ವರ್ಗಾವಣೆಯಲ್ಲಿ ಲಕ್ಷದ್ವೀಪಕ್ಕೆ ಹೊರಟಾಗ ನಾನು ಎಚ್ಚರಿಸಿದ್ದಿತ್ತು "ಬರವಣಿಗೆಗೆ ವಿರಾಮ ಕೊಡಬೇಡಿ." ಅದನ್ನು ನೆನಪಿನಲ್ಲಿಟ್ಟು ಅವರು ಕಳೆದ ವರ್ಷ ‘ಲಕ್ಷದ್ವೀಪದತ್ತ ಒಂದು ಲಕ್ಷ್ಯ’ ಹರಿಸಿದ್ದೂ ನಿಮ್ಮ ಗಮನಕ್ಕೂ ಬಂದೇ ಇದೆ. ಈಗ ಕುಸುರಿ ಕೆಲಸದಲ್ಲಿ ಪೆರುಮಾಳ್ ಪಾರ. ಮೂಲತಃ ಎರಡೂವರೆ ಎಕ್ರೆ ವಿಸ್ತೀರ್ಣದ ನಿರ್ಜನ ದ್ವೀಪ, ಕಡಲು ಹೆಚ್ಚುತ್ತಿರುವ ಭೌಗೋಳಿಕ ವಿದ್ಯಮಾನದ ಅಂಗವೋ ಎನ್ನುವಂತೆ ಒಂದೂವರೆ ಎಕ್ರೆಗೆ ಇಳಿದಿದೆ. ಆ ಪುಟ್ಟ ನೆಲವೂ ನಡು ರಾತ್ರಿಯಲ್ಲಿ, ಕಡಲಿನ ಭರತದ ವೇಳೆ, ಮುಳುಮುಳುಗುತ್ತ ಕೇವಲ ಹದಿನಾಲ್ಕು ಚದರ ಮೀಟರ್ ಮುಟ್ಟುವುದನ್ನು ನಿಶ್ಚಿಂತೆಯಿಂದ ನೋಡಿ, ಆಡಿ, ಉಂಡು, ಮಲಗಿ ಬಂದ ಕಥನ ಈಗ ನಿಮಗಾಗಿ - ಅಶೋಕವರ್ಧನ]


ನಾನು ಮಂಗಳೂರಿನಿಂದ ಲಕ್ಷದ್ವೀಪ ಸಮೂಹದ ಅಗಾತ್ತಿ ದ್ವೀಪದ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಬಂದು ಒಂದು ವರ್ಷ ಕಳೆಯಿತು. ಇಲ್ಲಿನ ಎಲ್ಲಾ ದ್ವೀಪಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವುದು ನನ್ನ ಆಸೆ. ಆದರೆ ದುರದೃಷ್ಟಕ್ಕೆ ಈ ಕೊರೊನಾ ಬಾಧೆ ವಕ್ಕರಿಸಿ ಕೆಲವು ತಿಂಗಳಕಾಲ ಎಲ್ಲವೂ ಅಸ್ತವ್ಯಸ್ತವಾಯಿತು. ದ್ವೀಪಕಲ್ಪದ ಹೊರಗಿನವರು ಇತರ ಮುಖ್ಯ ದ್ವೀಪಗಳಿಗೆ ತೆರಳಲು ಅಧಿಕೃತ ಅನುಮತಿ

07 April 2021

ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ


೧. ಕಥನಾರಂಭದಲ್ಲಿ

ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ: ಸಿನಿಮಾವಲ್ಲ, ದಾಖಲೀಕರಣ) ಅಂಥದ್ದೇ ಯೋಜನೆಯ ಭಾಗವಾಗಿ ೨೦೧೯ರ ಒಂದು ದಾಖಲೀಕರಣಕ್ಕೆ ಜತೆಗೊಟ್ಟ ನನಗೆ, ಅಯಾಚಿತವಾಗಿ ಆ ವರ್ಷದ ನೀನಾಸಂ ರಂಗ ಶಾಲೆಯ ಹೊಸ ವಿದ್ಯಾರ್ಥಿಗಳ ಮೊದಲ ದಿನವನ್ನೂ ನೋಡುವ ಅವಕಾಶ ಒದಗಿತ್ತು. (ನೋಡಿ: ನೀನಾಸಂ ಕಥನ ಮಾಲಿಕೆ...) ಅಂದು ಪ್ರಾಸಂಗಿಕವಾಗಿ, ಆದರೆ ಶುದ್ಧ ಪ್ರಾಯೋಗಿಕವಾಗಿ ಕೆವಿ ಅಕ್ಷರ ಮಾತಾಡುತ್ತಾ (ವಿದ್ಯಾರ್ಥಿಗಳನ್ನು ಉದ್ದೇಶಿಸಿ) "ನೀವೆಲ್ಲ ವರ್ಷದ ಕೊನೆಯಲ್ಲಿ ದಶ ಶಿರನನ್ನು ಮೀರಿಸಿದ ರಂಗಪುರುಷನನ್ನು ಇಲ್ಲಿ ರೂಪಿಸಬೇಕು..." ಎಂದಿದ್ದರು. ಆದರೆ ನಿಮಗೆಲ್ಲ ತಿಳಿದಂತೆ, ‘ಕೋವಿಡ್’ ಮಹಾಮಾರಿಯ ಗೊಂದಲದಲ್ಲಿ ಇಲ್ಲೂ ವಿದ್ಯಾವರ್ಷ ಮೊಟಕುಗೊಂಡಿತ್ತು.ಈಚೆಗೆ ಸರಕಾರದ ಬಿಗಿತಗಳು ಕಡಿಮೆಯಾದ ಮೇಲೆ, ನೀನಾಸಂ ಕಡಿದ ಎಳೆಗಳನ್ನು ಜೋಡಿಸಿ, ಆ ಬಳಗದ ಶಿಕ್ಷಣವನ್ನು ಪೂರ್ಣಗೊಳಿಸಿತ್ತು. ಮತ್ತದನ್ನು ಸಣ್ಣದಾಗಿ ಲೋಕಕ್ಕೆ ಸಾರುವಂತೆ ಎರಡು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. ಹೀಗೆ ಮೈದಳೆದ ಸುಮಾರು ಇಪ್ಪತ್ತು ತಲೆಗಳ (ವಿದ್ಯಾರ್ಥಿ ಸಂಖ್ಯೆ) ರಂಗಪುರುಷನ ಎರಡು ಅವತಾರಗಳನ್ನು (ಪರಮಪದ ಸೋಪಾನಪಟ ಮತ್ತು ಮಳ್ಳಗಿಂಪೆಲ್) ಕ್ಯಾಮರಾದಲ್ಲಿ ಹಿಡಿಯಲು, ಅತ್ತ ಬೆಂಗಳೂರಿನಿಂದ ಅಭಯನ ಬಳಗ ಹದಿನೇಳರ ರಾತ್ರಿ ಬಸ್ ಹಿಡಿದಿತ್ತು. ‘ಮಗನನ್ನು ಕರೆದರೆ ಪೋಷಕರು ಮುಫತ್ತು’ ಎಂದು ನೀನಾಸಂ ತಿಳಿದರೂ ಸರಿ, ಎಂದು ಇತ್ತ ಮಂಗಳೂರಿನಿಂದ ನಾವೂ ಹೊರಟೆವು. ಹೊಸ ಎರಡು ನಾಟಕಗಳನ್ನು ಕಣ್ದುಂಬಿಕೊಳ್ಳುವುದರೊಡನೆ, ನಮ್ಮ ತಿರುಗಾಡಿತನಕ್ಕೊಪ್ಪುವಂತೆ (ಹೀರೊ ಹೊಂಡಾ ಸೂಪರ್ ಸ್ಪ್ಲೆಂಡರ್ - ೧೨೫ ಸಿಸಿ) ಬೈಕೇರಿದ್ದೆವು.


೨. ಹೀಗೊಬ್ಬ ಚಾಯ್ವಾಲಾ

ಸೋಮಾರಿ ಅರುಣ ಜಡ ಕಳೆದು, ಲೋಕವನ್ನು ಹುರಿಯಲು ಕಾವೇರಿಸುವ ಮೊದಲು ನಾವು ಪಡುಬಿದ್ರೆಗಾಗಿ ಕಾರ್ಕಳ ಮುಟ್ಟಿದ್ದೆವು. ಕಾರ್ಕಳದ ಹೊರಬಳಸಿನ ರಸ್ತೆಯಲ್ಲಿದ್ದ ಸಣ್ಣ ಹೋಟೆಲಿಗೆ ನುಗ್ಗಿದೆವು. ಬಟವಾಡೆ ಹಿರಿಯ ಎದುರು

27 February 2021

ಕಾಡಿನೊಳಗೊಂದು ಮನೆಯ ಮಾಡೀ ......

[ಕಗ್ಗಾಡಿನ ನಡುವೆ ಬೆಚ್ಚನ್ನ ಮನೆ - ಕಂಟೇನರ್ ಹೌಸ್ ಅಥವಾ ‘ಕಪ್ಪೆಗೂಡು’ವಿನ ಹೆರಿಗೆಯ ಕಥೆಯೇನೋ ಓದಿದ್ದೀರಿ. (ಬಿಸಿಲೆಯಲ್ಲಿ ಹೊಸಬೆಳಕು) ಈಗ ಕಲ್ಪನೆಯು ರೂಪ ಪಡೆದು ‘ಮೊದಲ ಅಳು’ ಕೊಡುವವರೆಗಿನ ವಿಕಾಸದ ಕತೆ]


ಮಂಗಳೂರಿನ ನಮ್ಮ ನಿಜನಿವಾಸ - ‘ಅಭಯಾದ್ರಿ’ (೧೯೮೦) ಮತ್ತು ಮೊಂಟೆಪದವಿನ ಪ್ರಯೋಗಭೂಮಿ - ‘ಅಭಯಾರಣ್ಯ’ದ ‘ಕಾಡ್ಮನೆ’ಗಳ (೧೯೯೯) ಮೂಲ ನಕ್ಷೆ ನನ್ನದೇ. ಹಾಗೇ ಕಪ್ಪೆಗೂಡಿನ ಒಳಾಂಗಣದ ವಿವರಗಳನ್ನೂ ನಾನೇ ಆರೆಂಟು ನಕ್ಷೆಗಳಲ್ಲಿ ಮಾಡಿದೆ. ಸಾಮಾನ್ಯವಾಗಿ ಕಂಟೇನರುಗಳು ಇಪ್ಪತ್ತಡಿ ಮತ್ತು ನಲ್ವತ್ತಡಿ ಉದ್ದಗಳಲ್ಲಿ ಬರುತ್ತವೆ. ನನ್ನ ಲಕ್ಷ್ಯ - ‘ಚಿಕ್ಕದು ಚೊಕ್ಕದು’, ಇಪ್ಪತ್ತಡಿ ಗುಣಿಸು ಒಂಬತ್ತಡಿಯದ್ದು. ನಾಲ್ಕು ಅಟ್ಟಳಿಗೆ ಮಂಚ, ಅಡುಗೆ ಕಟ್ಟೆ, ತೊಳೆ ತೊಟ್ಟಿ,

02 February 2021

ಬಿಸಿಲೆಯಲ್ಲಿ ಹೊಸ ಬೆಳಕು - ಕಪ್ಪೆಗೂಡು


ಸ್ವಾಗತ:

"ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ ಆಮಂತ್ರಣದ ಮೇಲೆ, ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಕುತೂಹಲ ಮತ್ತು ಅಪಾರ ಸಹಾನುಭೂತಿ ಇಟ್ಟುಕೊಂಡು ಬಂದ ಎಲ್ಲರಿಗೂ ಹಾರ್ದಿಕ ಸ್ವಾಗತ. ಖಾಸಗಿ ವನ್ಯ ಸಂರಕ್ಷಣೆಯ ತೀರಾ ಸಣ್ಣ ಪ್ರಯೋಗವನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳುವ ತಾಳ್ಮೆ ಹೊತ್ತು ಬಂದ ಒಬ್ಬೊಬ್ಬರ ಪರಿಚಯ ಮತ್ತು ಉಪಸ್ಥಿತಿಯ ಮಹತ್ವ ವಿಸ್ತರಿಸಲು ನನ್ನ ಸಾಮರ್ಥ್ಯವೂ ದಿನವೂ ಸಣ್ಣದಾಗುವುದರಿಂದ ಮಾಡುತ್ತಿಲ್ಲ, ಕ್ಷಮಿಸಿ. ಸಭೆ ತೀರಾ ಸಣ್ಣದು ಮತ್ತು ಅನೌಪಚಾರಿಕವೂ ಇರುವುದರಿಂದ ನೀವು ನೀವೇ ವನ್ಯಸಂರಕ್ಷಣೆಯ ಹಿತಕ್ಕಾಗಿ ಪರಸ್ಪರ ಪರಿಚಯ ಮಾಡಿಕೊಳ್ಳಬೇಕು, ಸ್ನೇಹಸಂಬಂಧ ಬೆಳೆಸಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ." 

02 December 2020

ಅಡುಗೆಮನೆ ಜಗತ್ತಿನ ‘ಅವಿಲು’ಪಾಕ


[ಮಣಿಪಾಲದ ಡಾ| ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠಕ್ಕೆ ವೈದೇಹಿಯವರು ಗೌರವಾಧ್ಯಕ್ಷೆಯಾಗಿದ್ದ ಕಾಲವದು (೨೦೧೭). ಅವರ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ, ಅಂದು ಎರಡು ದಿನಗಳುದ್ದಕ್ಕೊಂದು ವಿಚಾರ ಸಂಕಿರಣ - `ಅಡುಗೆಮನೆ ಜಗತ್ತು’ ಸಂಘಟಿಸಿದ್ದರು. ಅದರಲ್ಲಿ ನಮ್ಮ ಮಗ – ಅಭಯಸಿಂಹನಿಗೆ ಓರ್ವ ಪ್ರಬಂಧಕಾರನ ಪಾತ್ರ ಕೊಟ್ಟಿದ್ದರು. ಆದರೆ ವೇದಿಕೆ ಮೇಲಿನ ಮಾತು ಮತ್ತು ಕೆಳಗಿನ ಕೇಳ್ಮೆ ಮೀರಿ, ಹಳೆಗಾಲದ ಅಡುಗೆಮನೆಯ ಒಲೆಕಟ್ಟೆ ಸುತ್ತಣ ಸಂವಾದದ ಸಾಧ್ಯತೆಯನ್ನೂ ಶೋಧಿಸುವ ಸಾಹಸ ವೈದೇಹಿಯವರದ್ದು. ಇದಕ್ಕೆ ಬಲಕೊಡುವಂತೆ ವೇದಿಕೆಯ ಕಲಾಪಗಳಿಲ್ಲದೆಯೂ ನಾಡಿನ

25 November 2020

ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು

ಗುಡ್ಡ ಬೆಟ್ಟಗಳು ಬರಿಯ ಮಣ್ಣ ದಿಬ್ಬವಲ್ಲ - ಬಜ್ಪೆ 

(ಚಕ್ರೇಶ್ವರ ಪರೀಕ್ಷಿತ ೨೪

ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ) 



ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ ಕಾಂಕ್ರೀಟೀಕರಣ ಮುಗಿದಿದೆ. ಏಕಮುಖ ಸಂಚಾರದ ನಿರ್ಬಂಧ ಏರುವವರ ಪರವಾಗಿಯೇ ಇತ್ತು. ವೃತ್ತದಲ್ಲಿ ನೇರ ಸಾಗಿ, ಪದವು ಶಾಲೆ, ಯೆಯ್ಯಾಡಿ, ಬೊಂದೇಲ್, ಕಾವೂರು ವೃತ್ತ, ಮರಕಡ, ಫಲ್ಗುಣಿ ನದಿ ದಾಟಿ, ವಿಮಾನ ನಿಲ್ದಾಣದ ಹೊಸ ದಾರಿಯವರೆಗೂ ಓಟಕ್ಕೊಂದು ಚೂಪು ಇರಲಿಲ್ಲ. ಇಲ್ಲಿ ಹಳೆಯ ಆದ್ಯಪಾಡಿ ರಸ್ತೆಗೆ ಹೊಸ ಬಾಯಿ ಕೊಟ್ಟು, ಇಲಿ ಹಿಡಿಯಲೆಂದೇ ಭಾರೀ ಗುಡ್ಡ ಅಗೆದದ್ದರ ವರ್ತಮಾನ ನೋಡುವ ಉತ್ಸಾಹದಲ್ಲಿ ತಿರುಗಿದೆ. 

10 November 2020

WILDLIFE SANCTUARIES - Visited 1996


[‘ಭಾರತ ಅ-ಪೂರ್ವ ಕರಾವಳಿಯೋಟ’ - ೧೯೯೬, ಸಾಹಸಯಾನ ಮುಗಿದ ಕೆಲವೇ ವಾರಗಳಲ್ಲಿ ನಾನೊಂದು ಇಂಗ್ಲಿಷ್ ವರದಿಯನ್ನು ಬರೆದಿದ್ದೆ. ಅದರಲ್ಲಿ ನಾವು ಭೇಟಿ ಕೊಟ್ಟ ಪ್ರಾಕೃತಿಕ ವೈಶಿಷ್ಟ್ಯಗಳನ್ನಷ್ಟೇ ಲೆಕ್ಕಕ್ಕೆ ಹಿಡಿದು, ಸಂಬಂಧಿಸಿದ ಇಲಾಖೆಗಳಿಗೆ ಹೀಗೊಂದು ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸುವ ಕರ್ತವ್ಯವನ್ನು ನಿರ್ವಹಿಸಿದ್ದೆ. ಇದರಲ್ಲಿದ್ದ ಅಸಂಖ್ಯ ಭಾಷಾ ಸ್ಖಾಲಿತ್ಯವನ್ನು ಅಂದೇ ನನ್ನ ತಂದೆ ತಿದ್ದಿ ಕೊಟ್ಟಿದ್ದರು. ಉಳಿದಂತೆ, ನನ್ನದು ಕೇವಲ ಹಕ್ಕಿನೋಟ ಮತ್ತು ಅವಸರದ ದರ್ಶನ ಎಂಬ ಅರಿವು ನನಗಿದೆ. ಇವೆಲ್ಲವುಗಳ ಮೇಲೆ ‘ತಜ್ಞ ವರದಿ’ ಕೊಡುವಲ್ಲಿ ನನಗೆ ಪ್ರಾಮಾಣಿಕ ವನ್ಯ ಪ್ರೀತಿಯೊಂದೇ ಬೆಳಕು, ವಿಸ್ತಾರ ಅಧ್ಯಯನ ಅಲ್ಲ ಎಂಬ ಅರಿವೂ ನನಗಿದೆ. ಎಲ್ಲಕ್ಕೂ ಮುಖ್ಯವಾಗಿ ಇದು ಇಪ್ಪತ್ನಾಲ್ಕು ವರ್ಷಗಳ ಹಿಂದಿನ ಪ್ರತ್ಯಕ್ಷ ಅನುಭವದ ಅಂದೇ ಬರೆದ ಸಾರಾಂಶ ಎನ್ನುವುದನ್ನೂ ಗಮನಿಸಿ.] 

From 14-4-96 to 18-5-96 we were on brief natural trail-cum-sight seeing tour of (mostly) eastern India. The travelogue in full is in Kannada - ಭಾರತ ಅ-ಪೂರ್ವ ಕರಾವಳಿಯೋಟ (16 parts) . This is a separate brief about the Wild life Sanctuaries or National parks visited by us, sent to different authorities listed in the end. 

06 November 2020

ಹಂಪಿ, ದುರ್ಗ, ಜಯ ಮಂಗಳಂ

(ಭಾರತ ಅ-ಪೂರ್ವ ಕರಾವಳಿಯೋಟ - ೧೬) 



ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ ಹಠವಾಗಲೀ ನನ್ನದಲ್ಲ. ಬದಲಿಗೆ ರಚನೆಗಳ ವೈಭವವನ್ನೂ ಅದರ ಸೃಷ್ಟಿಕರ್ತ ಮನುಷ್ಯನ ವರ್ತನೆಗಳನ್ನೂ ಕಂಡುಕೊಳ್ಳುವ ಕುತೂಹಲ ನನ್ನದು. ಹಾಗಾಗಿ ಈ ಯಾನದಲ್ಲಿ

30 October 2020

ವಿಜಯ ಧಾವಂತ ಕರ್ನೂಲಿನವರೆಗೆ

(ಭಾರತ ಅ-ಪೂರ್ವ ಕರಾವಳಿಯೋಟ - ೧೫) 



ಎಲುರು ಹೋಟೆಲಿನಿಂದ ದೇವಕಿ ಅಭಯನಿಗೆ ಬರೆದ ಪತ್ರ "...ವಿಜಯವಾಡಾ ಇಲ್ಲಿಂದ ೬೪ ಕಿಮೀ ಮಾತ್ರ. ಅಲ್ಲಿ ಕಲ್ಕೂರರ ಇನ್ನೋರ್ವ ಗೆಳೆಯರ ಹೋಟೆಲ್ ನಮ್ಮನ್ನು ಕಾದಿದ್ದಂತೇ ನಾವಿಲ್ಲೇ ಉಳಿಯಬೇಕಾಯ್ತು..... ಒರಿಸ್ಸಾಕ್ಕೆ ಬಂದ ಮೇಲೆ ನಮ್ಮೂರಿನದೇ ವಾತಾವರಣ - ಬೆವರು ಬೆವರು. ಇಲ್ಲೆಲ್ಲ ಗೇರು ಕೃಷಿ ತುಂಬಾ ಕಾಣುತ್ತಿದೆ. ಮಾವಿನ ಹಣ್ಣು ರಾಶಿ ರಾಶಿ. ಇಲ್ಲೊಂದು ಜಾತಿಯ ಮಾವಿನ ಹಣ್ಣು (ರಸಾಲ) ಜೂಸ್ ಬಾಟಲಿನಂತೇ ಇದೆ ಗೊತ್ತಾ. ಹಣ್ಣನ್ನು ಹಾಗೇ ಹಗೂರಕ್ಕೆ ಎಲ್ಲ

26 October 2020

ಕಣ್ದಣಿಸಿದ ಬುರ್ರಾ, ಹೊಟ್ಟೆ ದಣಿಸಿದ ಕಾಕಿನಾಡ

(ಭಾರತ ಅ-ಪೂರ್ವ ಕರಾವಳಿಯೋಟ - ೧೪) 



ಮುರಕಲ್ಲ ಹಾಸುಗಳಲ್ಲಿನ ದೊಡ್ಡ ಪೊಳ್ಳುಗಳನ್ನು ದಕ ಜಿಲ್ಲಾ ವಲಯದಲ್ಲಿ ನಾನು ಸಾಕಷ್ಟು ಕಂಡಿದ್ದೇನೆ, ಹೊಕ್ಕು ಹೊರಟಿದ್ದೇನೆ. ಗಟ್ಟಿ ಕೆಮ್ಮಣ್ಣಿನ ಹಾಸುಗಳಲ್ಲಿ ಬಿಳಿ-ಬೂದು ಬಣ್ಣದ ಮಿದು ಮಣ್ಣಿನ ಸೆಳಕುಗಳು ಅರ್ಥಾತ್ ಸೇಡಿ ಮಣ್ಣಿನ ಅಂಶಗಳು ಇರುತ್ತವೆ. ಅವು ನೂರಾರು ವರ್ಷಗಳ ನೀರ ಕೊರೆತದಲ್ಲಿ ತೊಳೆದು ಹೋಗಿ ಉಳಿದ ಖಾಲಿ ಜಾಗವೇ ಈ ಪೊಳ್ಳುಗಳು. ಇವು ಹೊರಲೋಕಕ್ಕೆ ಸಹಜವಾಗಿ ತೆರೆದಿರುವುದೂ ಇದೆ, ಕೆಲವೊಮ್ಮೆ ಮನುಷ್ಯ ಉದ್ದೇಶಪಟ್ಟೋ (ನೀರಿಗಾಗಿ) ಆಕಸ್ಮಿಕದಲ್ಲೋ ತೆರೆಯುವುದೂ ಇದೆ. ಅವನ್ನು

22 October 2020

ಪುರಿ, ಕೊನಾರ್ಕ ಮತ್ತು ಚಿಲ್ಕಾ

(ಭಾರತ ಅ-ಪೂರ್ವ ಕರಾವಳಿಯೋಟ - ೧೩) 



"ಹೊಟ್ಟೆ ಪಾಡಿನ ಕಷ್ಟಕ್ಕಾಗಿ ನಮ್ಮ ಅನೇಕ ಹಿರಿಯರು ಕೇವಲ ಸೌಟು, ಸಟ್ಟುಗ ಹಿಡಿದು (ದಕ ಜಿಲ್ಲೆ) ಊರು ಬಿಟ್ಟಿದ್ದರು. ಅಪರಿಚಿತ ಊರು, ಅನಿಶ್ಚಿತ ಭವಿಷ್ಯಗಳ ನಡುವೆ ಆಂಧ್ರಪ್ರದೇಶವನ್ನು ವ್ಯಾಪಿಸಿ, ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತ ಅಂಥವರ ಸಾಹಸ ತುಂಬ ದೊಡ್ಡ ಕತೆ..." ಎಂದೇ ಕೂರಾಡಿ ಚಂದ್ರಶೇಖರ ಕಲ್ಕೂರರು (ಕೆ.ಸಿ ಕಲ್ಕೂರ) ಹೇಳಿದ್ದರು. ಅವರು ಆಂಧ್ರಪ್ರದೇಶದ ಕರ್ನೂಲಿನಲ್ಲಿ ಹಿರಿಯರ ಹೋಟೆಲ್ ಸಾಹಸವನ್ನು ಯಶಸ್ವೀಯಾಗಿಯೇ ಮುಂದುವರಿಸಿದ್ದರು. ನಾನು ಭಾರತ ಅ-ಪೂರ್‍ವ ಕರಾವಳಿಯೋಟದ ತಯಾರಿಯಂದು ಪತ್ರಮುಖೇನ ಅವರ ಸಹಕಾರ ಕೋರಿದ್ದೆ. ಅದೇ ವೇಳೆಗೆ (೧೯೯೬ ಫೆಬ್ರುವರಿಯ ಒಂದು ದಿನ) ಬ್ರಹ್ಮಾವರ ಸಮೀಪದ ಅವರ ಮೂಲ ನೆಲೆಗೆ ಇನ್ಯಾವುದೋ ಕಾರ್ಯದಲ್ಲಿ ಅವರು ಬರುವುದಿತ್ತು. ಆಗ ನನ್ನನ್ನೂ ಅಲ್ಲಿಗೆ ಕರೆಸಿಕೊಂಡು, ಅಗತ್ಯಕ್ಕೆ ತಕ್ಕ ಮಾಹಿತಿಯ ಮಹಾಪೂರವನ್ನೇ ಹರಿಸಿದ್ದರು. 

19 October 2020

ಮಾರ್ಗಕ್ರಮಣ ಮತ್ತು ಸೋರಿದ ಎಣ್ಣೆ

(ಭಾರತ ಅ-ಪೂರ್ವ ಕರಾವಳಿಯೋಟ - ೧೨) 



ಜಬ್ಬಲ್ ಪುರದ ಜಬ್ಬರ್ದಸ್ತ್ ಸರ್ವೀಸಾಗಿ ಏಳ್ನೂರು ಕಿಮೀ ಕಳೆಯುವುದರೊಳಗೇ ಅಂದರೆ, ಎರಡೇ ದಿನದ ಓಟದೊಳಗೇ ಬೈಕುಗಳು ಬಹಳ ಬಳಲಿದ್ದವು. ಹಾಗಾಗಿ ಸಂಜೆ ನಾಲ್ಕಕ್ಕೆ ದೊಡ್ಡ ಊರಾಗಿ ಸಿಕ್ಕಿದ ಬಿಲಾಸ್‍ಪುರದಲ್ಲಿ ಓಟ ಮುಗಿಸಿದ್ದೆವು. ತರಾತುರಿಯಿಂದ ಹೋಟೇಲ್ ಹಿಡಿದು, ಹೊರೆ ಇಳಿಸಿ, ಬೈಕುಗಳ ಸಮಗ್ರ ತನಿಖೆಗಾಗಿ ಹೀರೊಂಡಾ ಮಳಿಗೆಗೆ ಓಡಿದ್ದೆವು. ಆದರೆ

15 October 2020

ಬಾಂಧವ್ಯ ಹೆಚ್ಚಿಸಿದ ಕಾನ್ಹಾ ವನಧಾಮ

(ಭಾರತ ಅ-ಪೂರ್ವ ಕರಾವಳಿಯೋಟ - ೧೧) 



ಎರಿಕ್ ಡಿ ಕುನ್ನಾರನ್ನು ನೀವು ಮರೆತಿಲ್ಲವೆಂದು ಭಾವಿಸುತ್ತೇನೆ (ನೋಡಿ: ರಣಥೊಂಬರಾದ ಹುಲಿಗಳು). ಒಂದೇ ವಾಕ್ಯದಲ್ಲಿ ಹೇಳುವುದಿದ್ದರೆ, ಅವರು ‘ಇಂಡಿಯನ್ ಅಡ್ವೆಂಚರ್ಸ್’ ಎಂಬ ಖಾಸಗಿ ಪ್ರವಾಸೋದ್ಯಮ ಸಂಸ್ಥೆಯಲ್ಲಿ ಪರಿಸರ ಮಾರ್ಗದರ್ಶಿ (ಗೈಡ್ ಅಲ್ಲ, ನ್ಯಾಚುರಲಿಸ್ಟ್). ೧೯೯೦ರ ನಮ್ಮ ಭಾರತ ಸೀಳೋಟಕ್ಕೆ ಅವರು ಚೆನ್ನಾಗಿಯೇ ಸೌಕರ್ಯಗಳ ವ್ಯವಸ್ಥೆ ಮಾಡಿದ್ದರು, ಸ್ವತಃ ನಿಂತು ನಿಭಾಯಿಸಲು ಅವಕಾಶ ಕಳೆದುಕೊಂಡಿದ್ದರು. ಈ ಬಾರಿ, "ನಾನು ಕಾನ್ಹಾ ವನಧಾಮದಲ್ಲೇ ಇದ್ದೇನೆ ಮತ್ತು ಸಮೀಪದ ಬಾಂಧವಘರ್‍ನಲ್ಲೂ ಏನು ಮಾಡಲು ಸಾಧ್ಯ ನೋಡ್ತೇನೆ..." ಎಂದೇ ಮುಂದಾಗಿಯೇ ಬರೆದಿದ್ದರು.

10 October 2020

ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ

(ಭಾರತ ಅ-ಪೂರ್ವ ಕರಾವಳಿಯೋಟ - ೧೦) 



ಶಿವರಾಮ ಕಾರಂತರು ಸಾರ್ವಜನಿಕಕ್ಕೆ ಹತ್ತೆಂಟು ಮುಖಗಳಿಂದ ವಿಖ್ಯಾತರಿದ್ದಷ್ಟೇ ಗಾಢವಾಗಿ ನಮಗೆ ಕುಟುಂಬದ ಸ್ನೇಹಿತರೂ ಹೌದು. ಅವರು ೧೯೯೫ರ ಸುಮಾರಿಗೆ ಯಾರಿಂದಲೋ ನನ್ನ ಪ್ರಥಮ ಭಾರತ ಯಾನದ ಸುದ್ದಿಯನ್ನು ಕೇಳಿದರಂತೆ. ಮುಂದುವರಿದು, ನಾನು ಎರಡನೇದಕ್ಕೆ ಸಜ್ಜುಗೊಳ್ಳುತ್ತಿರುವುದು ತಿಳಿದ ಕೂಡಲೇ ಅವರ ಸ್ವಭಾವಕ್ಕೆ ಭೂಷಣದಂತೇ ನನಗೆ ಖಡಕ್ ಸಂದೇಶ ಕಳಿಸಿದ್ದರು "...ಖಜುರಾಹೋ ಅವಶ್ಯ ನೋಡಿ..."! ಯೋಜನಾ ಹಂತದಲ್ಲಿ

06 October 2020

ಗಯಾ ಕಾಶಿ, ಪನ್ನಾಕ್ಕೆ ಗುನ್ನಾ

(ಭಾರತ ಅ-ಪೂರ್ವ ಕರಾವಳಿಯೋಟ - ೯) 



ದೇವರು, ನಂಬಿಕೆಗಳ ಕುರಿತ ನನ್ನ ವೈಯಕ್ತಿಕ ನಿಲುವು ಎಂದೂ ನನ್ನ ವೃತ್ತಿಯ ಭಾಗವಾದ ಪುಸ್ತಕ ವೈವಿಧ್ಯದ ಸಂಗ್ರಹ ಮತ್ತು ಮಾರಾಟವನ್ನು ಪ್ರಭಾವಿಸಿದ್ದಿಲ್ಲ. (ಎಲ್ಲೂ ಇಲ್ಲದ್ದು ಅತ್ರಿಯಲ್ಲಿ ವಿಚಾರಿಸಿ!) ಹಾಗಾಗಿ ಮಠಾಧಿಪತಿಗಳೂ ಜ್ಯೋತಿಷ್ಯ ಮಾರ್ತಾಂಡರೂ ಸಕಲ ಧರ್ಮೀಯರೂ ಸಂಶಯಚಿತ್ತರೂ ನಾಸ್ತಿಕ ಪ್ರಚಂಡರೂ ನನ್ನಂಗಡಿಯನ್ನು ಪುಸ್ತಕಾಸಕ್ತಿಗಾಗಿ ಒಪ್ಪಿಕೊಳ್ಳುತ್ತಿದ್ದರು. ಮತ್ತೆ ಯಥಾಮಿತಿಯಲ್ಲಿ ನನ್ನೊಡನೆ ವಿಚಾರ ವಿನಿಮಯಿಸುವುದೂ ಇತ್ತು. ಅಂಥವರಲ್ಲಿ ಮಾಧವ ಭಟ್

03 October 2020

ನಲಂದಾ - ರಾಜಗಿರ್ ಮುಟ್ಟಿ, ಓಡು

(ಭಾರತ ಅ-ಪೂರ್ವ ಕರಾವಳಿಯೋಟ - ೮) 



ಎಂಟು ತಿಂಗಳ ಹಿಂದೆ ನಾನು ಅಭಯ ರೈಲೇರಿ ಕೊಯಂಬತ್ತೂರಿಗೆ ಹೋಗಿದ್ದೆವು. ಇಬ್ಬರಿಗೂ ಅಪರಿಚಿತ ನೆಲ. ಅಭಯ ಸಹಜವಾಗಿ ಕರದೊಳಿದ್ದ ‘ಮಾಯೆ’ಗೆ (ಚರವಾಣಿ) ನಾವಿಳಿದ ಪೋದನೂರು ಮತ್ತು ಹೋಗಬೇಕಾದ ‘ಶ್ರದ್ಧಾ ಟ್ರಾನ್ಸ್ಪೋರ್‍ಟ್’ ಮಂತ್ರಾನುಸಂಧಾನ ಮಾಡಿದ. ಮತ್ತೆ ನಮ್ಮ ೫ ಕಿಮೀ ನಡಿಗೆಯ ಉದ್ದಕ್ಕೂ ಮೇಲಿನ ಲೋಕದಿಂದ, ಭೂ ಲಕ್ಷಣಗಳ ಯಥಾಚಿತ್ರದೊಡನೆ ಅಶರೀರವಾಣಿಯ ನಿಖರ ಮಾರ್ಗದರ್ಶನವೇ ಸಿಕ್ಕಿತ್ತು. ಆದರೆ ಇಲ್ಲಿ ನಾನು

28 September 2020

ಡಾರ್ಜಿಲಿಂಗ್ ಮತ್ತು ಮಿರಿಕ್ ಮಿಸ್ಟೇಕ್

(ಭಾರತ ಅ-ಪೂರ್ವ ಕರಾವಳಿಯೋಟ - ೭) 



ಕಾಲೇಜು ದಿನಗಳಿಂದ ನನ್ನ ದೊಡ್ಡ ಕನಸು - ಡಾರ್ಜಿಲಿಂಗ್ ಭೇಟಿ ಮತ್ತು ತೇನ್ ಸಿಂಗ್ ಶಿಷ್ಯತ್ವ ಗಳಿಕೆ. ಸಿಕ್ಕ ಮೊದಲ ಅವಕಾಶ - ೧೯೭೧ರ ಅಸ್ಸಾಂ ಭೇಟಿ, ನಾನು ಮಿಂಚು ನೋಟಕ್ಕಾದರೂ ಡಾರ್ಜಿಲಿಂಗ್ ಎಂದು ತಿಣುಕಿದ್ದೆಲ್ಲ ನಿಮಗೆ ತಿಳಿದೇ ಇದೆ (ನೋಡಿ: ೫. ಮತ್ತೆ ಮತ್ತೆ ನಾಯಕತ್ವದ ಪ್ರಶ್ನೆ). ಹಾಗಾಗಿ ಪ್ರಸ್ತುತ ಸಾಹಸಯಾನ ಯೋಜಿಸುವಂದು, ತೇನ್‍ಸಿಂಗ್ ಇಲ್ಲದ ಡಾರ್ಜಿಲಿಂಗಿನಲ್ಲಿ ಒಂದು ರಾತ್ರಿಗಾದರೂ ನಿಂತು, ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬೇಕೆಂದು ನಿಶ್ಚೈಸಿದ್ದೆ. ಅದಕ್ಕನುಕೂಲ ಆರಂಭ ಬಿಂದುವಾಗಿ ನಮಗೊದಗಿದ್ದು ಸುಖ್ನಾ

25 September 2020

ಗಂಗಾ ಪಾತ್ರೆಯಲ್ಲಿ ಸ್ವಲ್ಪ ಉದ್ದಕ್ಕೆ...

(ಭಾರತ ಅ-ಪೂರ್ವ ಕರಾವಳಿಯೋಟ - ೬) 



‘ಆಸೇತು ಹಿಮಾಚಲ’ ಎನ್ನುವಲ್ಲಿ ಭಾರತದ ಉದ್ದ ಸ್ಪಷ್ಟ ಇದೆ. ಬಹುತೇಕ ಆ ‘ಸೇತು’ವಿನ (ದಕ್ಷಿಣ ಕೊನೆಯ ರಾಮಸೇತು) ಸಮೀಪವೇ ಇರುವ ನಾವು ಭಾರತಯಾನ ಎಂದೇ ಯೋಜಿಸುವಾಗ, ಹಿಮಾಲಯ ಮುಟ್ಟದೇ ಪರಿಪೂರ್ಣವಲ್ಲ ಎಂಬ ಭಾವವೂ ಸೇರಿತ್ತು. ಹಾಗಾಗಿ ಮೊದಲ ಹಂತದಲ್ಲಿ ಯೋಜನೆಯಂತೇ ರೈಲ್ವೇ, ನಗರದರ್ಶನ, ದೋಣಿಯಾನ ಎಂದೆಲ್ಲ ಎಂಟು ದಿನ ಸಂದರೂ ಆ ಬೆಳಿಗ್ಗೆ (೨೨-೪-೯೬) ನಿಜದ ಬೈಕ್ ಯಾನ ಮತ್ತು ‘ಹಿಮಾಚಲ’ ಮುಟ್ಟಲು ಹೊರಟಿದ್ದೆವು. 

17 September 2020

ಸುಂದರಬನದ ಕೂಳು ಭಕ್ಷಕರು!

ಭಾರತ ಅ-ಪೂರ್ವ ಕರಾವಳಿಯೋಟ - ೫



ವನಧಾಮಗಳ ವಿಚಾರ ಬರುತ್ತಿದ್ದಂತೆ ನನಗೆ ಮೊದಲು ಹೊಳೆಯುವ ಹೆಸರು - ವನ್ಯ ವಿಜ್ಞಾನಿ ಗೆಳೆಯ, ಉಲ್ಲಾಸ ಕಾರಂತ. ಅ-ಪೂರ್ವ ಕರಾವಳಿಯೋಟದ ಯೋಜನಾ ಹಂತದಲ್ಲೇ ನಾನವರನ್ನು ಸಂಪರ್ಕಿಸಿದ್ದೆ. ಭಾರತದ ವಿವಿಧ ವನಧಾಮಗಳಲ್ಲಿ ಅವರಿಗಿದ್ದ ವಿಸ್ತೃತ ಪರಿಚಯ ಬಲದಲ್ಲಿ ನನಗೆ ನಾಲ್ಕೆಂಟು ಪರಿಚಯ ಪತ್ರಗಳನ್ನೂ ಧಾರಾಳ ಸಲಹೆಗಳನ್ನೂ ನೀಡಿದ್ದರು. ಅದರಲ್ಲೂ ಭಾರತದ ಪ್ರಥಮ ‘ಟೈಗರ್ ಪ್ರಾಜೆಕ್ಟ್’ ತಾಣವೆಂದೇ ಖ್ಯಾತವಾದ ಸುಂದರಬನದಲ್ಲಿ ಹೆಚ್ಚಿನ

ಕಲ್ಕತ್ತಾ ದರ್ಶನ

(ಭಾರತ ಅ-ಪೂರ್ವ ಕರಾವಳಿಯೋಟ - ೪) 



ಈಶ್ವರಚಂದ್ರ ವಿದ್ಯಾ ಸಾಗರ ಸೇತುವೆ ಅಥವಾ ವಿದ್ಯಾಸಾಗರ್ ಸೇತು, ಹದಿಮೂರು ವರ್ಷಗಳ ನಿರ್ಮಾಣ ಸಮಯ ನುಂಗಿ ೧೯೯೨ರಲ್ಲಿ ಲೋಕಾರ್ಪಣೆಗೊಂಡಿತು. ಆದರೆ ಅದರ ಉತ್ತರೋತ್ತರ ಕೆಲಸಗಳು ನಾವು ಕಲ್ಕತ್ತಾಕ್ಕೆ ಹೋದಂದೂ ಪೂರ್ಣಗೊಂಡಿರಲಿಲ್ಲ. ಅಂದರೆ, ಎರಡೂ ದಂಡೆಗಳ ವಿವಿಧ ದಾರಿಗಳನ್ನು ತಡೆರಹಿತವಾಗಿ ಸೇರಿಕೊಳ್ಳುವ ಮೇಲು ಸೇತುವೆಗಳ ಜಾಲ ಮತ್ತು ವಾಹನ ಸಂಚಾರದ ಪ್ರಮುಖಧಾರೆಯನ್ನು ಇತ್ತ ಹರಿಬಿಡುವ ಕೆಲಸಗಳು

ಮೆಟ್ರೋದಲ್ಲಿ ಕಾಣೆಯಾದ ಮೂವರು!

(ಭಾರತ ಅ-ಪೂರ್ವ ಕರಾವಳಿಯೋಟ - ೩) 



ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು. ಮತ್ತೆ ನಿರ್ವಿಘ್ನವಾಗಿ.... 

ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ.

ರೈಲ್ವೇಯಲ್ಲಿ ಪ್ರಭಾವ, ವಿಭಾವಗಳು


(ಭಾರತ ಅ-ಪೂರ್ವ ಕರಾವಳಿಯೋಟ - ೨) 

೧೯೯೬ರ ಏಪ್ರಿಲ್ ಹದಿನಾಲ್ಕರಂದು ಮೋಟಾರ್ ಬೈಕ್ ಏರದೇ ನಮ್ಮ ಬೈಕ್ ಮಹಾಯಾನ ಮೊದಲ್ಗೊಂಡಿತ್ತು. ಅಂದು ಬೆಳಿಗ್ಗೆ ಕಿಶೋರ್ ಮತ್ತು ನಾನು ಬೈಕುಗಳನ್ನು ಮಂಗಳೂರು ರೈಲ್ವೇ ನಿಲ್ದಾಣಕ್ಕೊಯ್ದು ಗೆಳೆಯ ಕಿಶನ್ ಬಂಗೇರಾರ (ಇವರು ನಿಲ್ದಾಣದ ಸ್ವಾಗತಕಾರ) ಸಹಾಯಕರಿಗೊಪ್ಪಿಸಿದೆವು. ಬೈಕ್ ಯಾನದ ನಾಲ್ವರ ರೈಲ್ವೇ ಪ್ರಯಾಣದ ಟಿಕೇಟ್ ಒಟ್ಟು ರೂ. ೧೪೨೦/-ಶುಲ್ಕ ಕೊಟ್ಟು (ಮೂರು ಅಟ್ಟಳಿಗೆ ಮಲಗು ಸೌಕರ್ಯದ ಮೂರನೇ ದರ್ಜೆ ಡಬ್ಬಿ) ತಿಂಗಳ ಮುಂಚೆಯೇ ಕಾಯ್ದಿರಿಸಿದ್ದಾಗಿತ್ತು. ಈಗ ಬೈಕುಗಳಿಗೆ ‘ಪ್ಯಾಕಿಂಗ್’ ಶಾಸ್ತ್ರ ಮಾಡಿಸಿ, ಪ್ರಯಾಣದ ಟಿಕೆಟ್ಟಿಗೆ

ನವ ಭಾರತಾಹವಕ್ಕೆ ಅನ್ಯೋದ್ಯೋಗ ಪರ್ವ!


(ಭಾರತ ಅ-ಪೂರ್ವ ಕರಾವಳಿಯೋಟ - ೧) 


೧೯೯೦ರ ಪ್ರಾಕೃತಿಕ ಭಾರತ ಸೀಳೋಟ ಎರಡು ವರ್ಷ ಹಳತಾಗುತ್ತಿದ್ದಂತೆ ತಲೆಯೊಳಗೆ ಇನ್ನೊಂದೇ ಸಾಹಸಯಾನ ಮೊಳಕೆಯೊಡೆದಿತ್ತು. ಹಿಂದಿನಂತೆ ವ್ಯಾಪಾರ ಕಡಿಮೆಯಿರುವ ಬೇಸಗೆ ಕಾಲ, ಮತ್ತೆ ತಿಂಗಳ ಕಾಲ ಅಂಗಡಿ, ಮನೆ ಮತ್ತು ಮಗನ ನಿರ್ವಹಣೆಗೆ ತಂದೆ ತಾಯಿಯರಲ್ಲಿ ಬೇಡಿಕೆ ಇಡುವವನಿದ್ದೆ. ಅಷ್ಟರಲ್ಲಿ ನನ್ನ ಅಮೆರಿಕನ್ನಡಿಗ ತಮ್ಮ - ಆನಂದನಿಂದ, ಅವರಿಬ್ಬರಿಗೆ ಮಾಮೂಲೀ ಕರೆ - "ನಮ್ಮಲ್ಲಿಗೆ ಒಮ್ಮೆಯಾದರೂ ಬನ್ನಿ" ಹೊಸ ಭಾರೀ ಆಮಿಷದೊಡನೆ ಬಂದಿತ್ತು. "ಪ್ರಯಾಣ ನನ್ನ ಎರಡನೇ ವೈರಿ (ದೇವರು ಮೊದಲನೇ ವೈರಿ)" ಎಂದೇ ಸಾರುತ್ತಿದ್ದ ತಂದೆಗೆ ನಿರಾಕರಿಸಲಾಗದ ಆಮಿಷ - ಎಸ್. ಚಂದ್ರಶೇಖರ್ ಭೇಟಿ. 

ಲಕ್ಷದ್ವೀಪದತ್ತ ಒಂದು ಲಕ್ಷ್ಯ

ಲೇಖಕ - ಗಿರೀಶ್ ಪಾಲಡ್ಕ 


[ಮುಮ್ಮಾತು: ಸಾವಿರ ಕೊಟ್ಟು ಲಕ್ಷ ಗಳಿಸುವ ಯೋಗ  ೨೦೧೦ ರ ನನ್ನ ಆರು ಭಾಗಗಳ ಲಕ್ಷದ್ವೀಪ ಪ್ರವಾಸ ಕಥನ ನೀವೆಲ್ಲ ಓದಿದ್ದೀರಿ ಎಂದು ಭಾವಿಸುತ್ತೇನೆ. ಅನಂತರದ ದಿನಗಳಲ್ಲಿ ಗೆಳೆಯ ಅಬ್ದುಲ್ ರಶೀದ್ ಕವರತ್ತಿಯಲ್ಲಿರುವ ಆಕಾಶವಾಣಿಯ ಶಾಖೆಗೆ ವರ್ಗಾವಣೆಗೊಂಡರು. ಅವರ ಚಿತ್ರಗಳು, ಚಲಚಿತ್ರಗಳು ಎಲ್ಲಕ್ಕೂ ಮಿಗಿಲಾಗಿ ಲಕ್ಷದ್ವೀಪ ಡೈರಿಯ ಮುಗಿಯದ ಪುಟಗಳು, ನಮಗೆ ಎಂದೂ ಹಳತಾಗದ, ಕಡಲಲೆಗಳಂತೇ ಹೊಸ ವಿಚಾರಗಳನ್ನು ಮಗುಚುತ್ತಲೇ ಇವೆ. ನನಗೆ ಸಿಕ್ಕ ಈ ಆಪ್ತ ಸರಣಿಯಲ್ಲಿ ಮೂರನೇ ಕಣ್ಣು ತೆರೆಯುತ್ತಿರುವವರು - ಇನ್ನೊಬ್ಬ

ಆರು ದಶಕಗಳ ಹಿಂದಿನ ಶಿಷ್ಯನ ಕಣ್ಣಲ್ಲಿ ಜಿಟಿನಾ


ಲೇಖಕ: ಹೊಂಡೆಲ್ ಪ್ರಸನ್ನ 

[ಅಮೆರಿಕಾದಲ್ಲಿರುವ ನನ್ನ ತಮ್ಮ - ಆನಂದವರ್ಧನ ಓದಿ, ಭಾರೀ ಕುಶಿಪಟ್ಟು "ನೋಡೋ" ಎಂದು ನನಗೂ ದೂಡಿದ ಲೇಖನವಿದು. ಪ್ರಸ್ತುತ ವೃತ್ತಿ, ವಾಸ್ತವ್ಯಗಳಲ್ಲಿ ನ್ಯೂ ಜೆರ್ಸಿಯ ಹೊಂಡೆಲ್ಲಿನಲ್ಲಿರುವ ಬಿ.ಎಸ್. ಪ್ರಸನ್ನ ಅಥವಾ ಬಾಲ ಪ್ರಸನ್ನರು ನಮಗೆ ಪೂರ್ವಪರಿಚಿತರಲ್ಲ. ಅವರು ವಿದ್ಯಾರ್ಥಿ ದೆಸೆಯಲ್ಲಿ (೧೯೬೦ರ ದಶಕ) ಬೆಂಗಳೂರಿನ ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನನ್ನ ತಂದೆ - ಜಿಟಿನಾ ಶಿಷ್ಯರಂತೆ. ಪ್ರಸನ್ನರು ಆ

15 August 2020

ತೇನ್ ಸಿಂಗ್ ಬಿಳಿಮಲೆ ಮತ್ತು ‘ಕಾಗೆ ಮುಟ್ಟಿದ ನೀರು’

ಬಹುಮಂದಿಗೆ ಪಶ್ಚಿಮ ಘಟ್ಟದ ದಿಗ್ಗಜಗಳ (ಕುದುರೆಮುಖ, ಕುಮಾರ ಪರ್ವತ...) ಗಹನತೆ ಅಡಿ, ಮೀಟರ್‍ಗಳಲ್ಲಿ ಹೇಳಿದರೆ ಮುಟ್ಟುವುದಿಲ್ಲ. ಅವರಿಗೆ ನಿತ್ಯ ಕಾಣುವ ಬಲ್ಲೇರಿ, ಕಳಂಜಿಮಲೆ, ಬಿರುಮಲೆ, ಬಂಟಮಲೆಗಳೇ ನಿಜದ ಅಳತೆಗೋಲು. ನಾನು ಅವನ್ನೂ ಅನುಭವಿಸುವ ಸರಣಿಯಲ್ಲಿ, ಒಂದು ಮಳೆ ದಿನದ ಬೆಳಿಗ್ಗೆ ಬಂಟಮಲೆ ಆಯ್ದುಕೊಂಡಿದ್ದೆ. ತಂಡ ನಾಲ್ಕು ಬೈಕೇರಿ, ಪಂಜ ತಲಪಿತ್ತು. ಮತ್ತೆ ಅಲ್ಲಿ ಇಲ್ಲಿ ವಿಚಾರಿಸುತ್ತ ಸುಮಾರು ಹನ್ನೊಂದು ಕಿಮೀ ಕಳೆದು, ಬಿಳಿಮಲೆಯಲ್ಲಿದ್ದ ಪುರುಷೋತ್ತಮರ ಮನೆ ಸೇರಿದ್ದು ಒಂದು ಆಕಸ್ಮಿಕ. ಪುರುಷೋತ್ತಮರು ಆ ದಿನಗಳಲ್ಲಿ ಮಂಗಳೂರು ವಿವಿ ನಿಲಯದಲ್ಲಿದ್ದರು (೧೯೮೭). ಹಾಗಾಗಿ ಅವರು ನಮಗೆ ಮನೆಯಲ್ಲಿ ಸಿಗಲಿಲ್ಲ. ನಾವು ಬೈಕು, ಜಿಗಣೆಗೆ ಬೆದರಿದ ಅಭಯ, ಜತೆಗೆ ದೇವಕಿಯನ್ನು ಪುರುಷೋತ್ತಮರ ತಾಯಿಗೊಪ್ಪಿಸಿ, ಕಾಡು ನುಗ್ಗಿದ್ದೆವು. ಸುಮಾರು ಎರಡು ಗಂಟೆಯ ಅವಧಿಯಲ್ಲಿ, ಶಿಖರ ವಲಯವನ್ನು ತಲಪಿ ಸುತ್ತಾಡಿ, ಬುತ್ತಿಯೂಟ ಮಾಡಿ ಮುಗಿಸಿದ್ದೆವು. ಅನಂತರ ಉತ್ಸಾಹದಲ್ಲಿ ಇಳಿಯುತ್ತ ಮಳೆ, ಮಂಜು, ಹುಲ್ಲು, ಪೊದರುಗಳ ಫಿತೂರಿಯಲ್ಲಿ ದಿಕ್ಕು ತಪ್ಪಿ ತಲಪಿದ್ದು ಎದುರು ಮೈಯ ಏರಿಮಲೆ, ಗುತ್ತಿಗಾರು. ಮತ್ತೆ ಬಾಡಿಗೆ ವಾಹನ ಹಿಡಿದು ಪಂಜಕ್ಕಾಗಿ ಬಿಳಿಮಲೆ ಸೇರಿ, ಮರಳಿದ ಪ್ರಕರಣ ಸುಖಾಂತ ಸಾಹಸವೇ ಅನ್ನಿಸಿತ್ತು. ಆದರೆ.... 

12 August 2020

ಸೀಳೋಟದ ಕೊನೆಗೊಂದು ಸೀಳು ನೋಟ

(ಪ್ರಾಕೃತಿಕ ಭಾರತ ಸೀಳೋಟ - ೧೩) 


ಪ್ರಾಕೃತಿಕ ಭಾರತದ ಸೀಳೋಟ ಯೋಜನೆಯಲ್ಲಿ ಆರಂಭದ ೨೫-೪-೯೦ ಮತ್ತು ಕೊನೆಯ ೨೭-೫-೯೦ ದಿನಾಂಕಗಳನ್ನು ಖಚಿತವಾಗಿಯೇ ನಿಶ್ಚೈಸಿದ್ದೆ. ಕಾರಣ ಸರಳ - ಹುಬ್ಬಳ್ಳಿ, ಭೋಪಾಲ ಮುಂತಾದ ಸ್ಥಳಗಳಲ್ಲಿ ನಮ್ಮನ್ನು ಕಾದು ಕುಳಿತವರನ್ನು ನಿಗದಿತ ದಿನಕ್ಕೆ ಮುಟ್ಟದೇ ಅಗೌರವಿಸಬಾರದು. ಮತ್ತು ಮಂಗಳೂರಿಗೆ ಮರಳಲು ರೈಲ್ವೇ ಕಾಯ್ದಿರಿಸುವಿಕೆ ವ್ಯರ್ಥವಾಗಬಾರದು. ಹಾಗೆ ಲಭ್ಯ ಮೂವತ್ಮೂರು ದಿನಗಳಲ್ಲಿ, ಬೈಕ್ ಯಾನ ಮತ್ತು ಸ್ಥಳ ಸಂದರ್ಶನದ ದಿನಗಳು ಮೂವತ್ತು ಮಾತ್ರ. ಹೆಚ್ಚುವರಿ ಮೂರು ದಿನಗಳನ್ನು ಮಾರ್ಗಕ್ರಮಣದ ಆಕಸ್ಮಿಕಗಳ ಹೊಂದಾಣಿಕೆಗೂ ದಿಲ್ಲಿ ದರ್ಶನಕ್ಕೂ ಮೀಸಲಿರಿಸಿದ್ದೆವು. ೨೪ರ ಅಪರಾಹ್ನವೇ ದಿಲ್ಲಿ ಸೇರಿದ್ದ ನಮಗೆ ವಿನಿಯೋಗಕ್ಕೆ ಸ್ಪಷ್ಟ ಮೂರು ದಿನಗಳು ಉಳಿದಿದ್ದವು. 

ಹನ್ನೊಂದು ದಿನಗಳ ಹಿಂದೆ ಬಾರದ ಅನೇಕ ಹೃದ್ಯವಾಗುವಂತ ಪತ್ರಗಳ ಪಠಣ

09 August 2020

ತಪ್ಪಿದ ಬದರಿ ಮತ್ತು ಮಾರ್ಗ ಕ್ರಮಣ

(ಪ್ರಾಕೃತಿಕ ಭಾರತ ಸೀಳೋಟ - ೧೨) 


ಕೇದಾರ ನಾಥದ ‘ವಿಜಯ’ಕ್ಕೆ ನಾನು ಅನುಭವಿಸಿದ ನೋವು ಹೆಚ್ಚೇ ಆಗಿತ್ತು. ಹಾಗಾಗಿ ಮರುದಿನದ ಬದರೀ ಯಾನದ ಯೋಚನೆಯನ್ನು ನಾನು ಮತ್ತು ದೇವಕಿ ಕೈ ಬಿಟ್ಟೆವು. ಸೋನ್ ಪ್ರಯಾಗಿನಿಂದ ಬದರಿಗೆ ಹೋಗಿ ಮರಳುವಲ್ಲಿ ಕವಲೂರಾಗಿ ಸಿಗುವ ಊರು ಕರ್ಣಪ್ರಯಾಗ್. ಅಲ್ಲಿ ನಮಗೆ ಎರಡು ದಿನದ ವಿಶ್ರಾಂತಿ, ಇತರರು ಬದರೀನಾಥಕ್ಕೆ. (ಇಂದು ದಾರಿಯ ಸಾಧ್ಯತೆಗಳು ತುಂಬ ಬದಲಿವೆ, ಬಿಡಿ.) ತಂಡವಾದರೂ ಸಾಕಷ್ಟು ಸೋತಿದ್ದುದರಿಂದ ಬೆಳಿಗ್ಗೆ (೨೦-೫-೯೦) ಸುಮಾರು ಎಂಟು ಗಂಟೆಯ ಹೊತ್ತಿಗೆ ಎಲ್ಲರು

07 August 2020

ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!


(ಪ್ರಾಕೃತಿಕ ಭಾರತ ಸೀಳೋಟ - ೧೧) 

ಗೂಗಲ್ ಕೃಪೆ

ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು. 


ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು - ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) - ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) - ಕುಶಲ ಕರ್ಮಿ, ಮತ್ತು

05 August 2020

ಯಮುನೋತ್ರಿ, ಗಂಗೋತ್ರಿ, ಗೋಮುಖ

(ಪ್ರಾಕೃತಿಕ ಭಾರತ ಸೀಳೋಟ - ೧೦) 

ಯಮುನೋತ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನಿಜ ಸೂರ್ಯ ದರ್ಶನಕ್ಕೆ ಮಂಜು, ಮೋಡ ಮತ್ತು ಒತ್ತಿನ ದೈತ್ಯ ಶಿಖರ ಶ್ರೇಣಿಗಳ ಪ್ರಭಾವ ಇದ್ದರೂ ಹಗಲಿನ ಪ್ರಕಾಶ ಬೆಳಿಗ್ಗೆ ಐದು ಗಂಟೆಗೇ ಸಿಗುತ್ತಿತ್ತು. ಆದರೆ ಜನ, ಕುದುರೆ, ಹೇಸರಗತ್ತೆ, ಕಾವಡಿ-ಬುಟ್ಟಿ ಹೊರುವವರು ಎಂಬ ವಿಪರೀತ ಸಂದಣಿ ಆರು ಗಂಟೆಗಷ್ಟೇ ತೊಡಗುವುದು ಎಂದು ತಿಳಿದಿದ್ದೆವು. ಹಾಗಾಗಿ ಸಮಯದ ಉಳಿತಾಯವನ್ನು ಲಕ್ಷಿಸಿ, (೧೪-೫-೯೦)

04 August 2020

ಹನುಮಾನ್ ಚಟ್ಟಿಯ ದುಂಧುಭಿ ವಧ!!

(ಪ್ರಾಕೃತಿಕ ಭಾರತ ಸೀಳೋಟ - ೯) 

ಕಾಗೆ ಹಾರಿದಂತೆ ಡೆಹ್ರಾಡೂನ್ - ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ - ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು ಇನ್ನೂ ಕಡಿದು ಎಂದು ತಿಳಿದು, ಅಲ್ಲೇ ಊಟ ಮುಗಿಸಿಕೊಂಡೆವು. ಅಪರಾಹ್ನದ ದಾರಿ ಬಲು ಸುರುಳಿ ಚಕ್ಕುಲಿಯಂತೆ ಸುತ್ತುತ್ತಿದ್ದಂತೆ, ಕ್ಷಣ ಕ್ಷಣಕ್ಕೂ ವಾತಾವರಣದಲ್ಲೂ ತಂಪು ಏರುತ್ತಿತ್ತು. ದಾರಿಯ ಈ ಭಾಗವನ್ನೇ ಹೀರೊಂಡಾ ಕಂಪೆನಿ ತನ್ನ ಜಾಹೀರಾತುಗಳೆಲ್ಲ ‘ಒಂದು ಲೀಟರ್ ಪೆಟ್ರೋಲ್ ದಾರಿ’ ಎಂದೇ ಮೆರೆಸುತ್ತಿದ್ದದ್ದು ನೆನಪಾಗಿತ್ತು. 

28 July 2020

ದಿಲ್ಲಿಯಿಂದ ಡೆಹ್ರಾಡೂನಿಗೆ...

(ಪ್ರಾಕೃತಿಕ ಭಾರತ ಸೀಳೋಟ - ೮) 


ದಿಲ್ಲಿ ದಾಳಿಗೆ (೯-೫-೯೦) ಬೆಳಿಗ್ಗೆ ಆರಕ್ಕೆ ನಾಂದಿಯೇನೋ ಹಾಡಿದೆವು. ಆದರೆ ನನ್ನ ಚಕ್ರವೊಂದು ನಿಟ್ಟುಸಿರು ಬಿಟ್ಟು, ಒಂದು ಗಂಟೆ ತಡವಾಗಿ ಮುಂದುವರಿದೆವು. ಆ ದಾರಿ ಖ್ಯಾತ ಪ್ರವಾಸೀ ತ್ರಿಕೋನದ ಬಲ ಭುಜ, ವಾಸ್ತವದಲ್ಲೂ ಬಹುತೇಕ ಸರಳ ರೇಖೆಯಂತೇ ಇದೆ. ಗಗನಗಾಮೀ ನಕ್ಷಾ ನೋಟದಲ್ಲಿ ಮಾತ್ರ ಉದ್ದಕ್ಕೂ ಯಮುನಾ ನದಿ ದೀರ್ಘ ಬಳಕುಗಳ ಸಾಂಗತ್ಯ ಕೊಡುತ್ತದೆ. ಮಾರ್ಗದ ಕಠೋರ ತಪೋನಿಷ್ಠೆಯನ್ನು ಮುರಿಯ ಬಂದ ಅಪ್ಸರೆಯಂತೆ ನಲಿದಿದೆ. ದಾರಿಗೆ ಈ ಅಲೌಕಿಕ ದೃಶ್ಯ ಅಗೋಚರವಾದ್ದರಿಂದ ಸುಮಾರು ಇನ್ನೂರು ಕಿಮೀ ಉದ್ದದ್ದ ದಿಲ್ಲಿಯ ಜಪವನ್ನೇ ನಾವು ಮಾಡಿಕೊಂಡಿದ್ದೆವು. ಸುಮಾರು ಮಧ್ಯಂತರದಲ್ಲಿದ್ದ ಏಕೈಕ ಬದಲಾವಣೆ ಮಥುರಾ.