12 August 2020

ಸೀಳೋಟದ ಕೊನೆಗೊಂದು ಸೀಳು ನೋಟ

(ಪ್ರಾಕೃತಿಕ ಭಾರತ ಸೀಳೋಟ - ೧೩) 


ಪ್ರಾಕೃತಿಕ ಭಾರತದ ಸೀಳೋಟ ಯೋಜನೆಯಲ್ಲಿ ಆರಂಭದ ೨೫-೪-೯೦ ಮತ್ತು ಕೊನೆಯ ೨೭-೫-೯೦ ದಿನಾಂಕಗಳನ್ನು ಖಚಿತವಾಗಿಯೇ ನಿಶ್ಚೈಸಿದ್ದೆ. ಕಾರಣ ಸರಳ - ಹುಬ್ಬಳ್ಳಿ, ಭೋಪಾಲ ಮುಂತಾದ ಸ್ಥಳಗಳಲ್ಲಿ ನಮ್ಮನ್ನು ಕಾದು ಕುಳಿತವರನ್ನು ನಿಗದಿತ ದಿನಕ್ಕೆ ಮುಟ್ಟದೇ ಅಗೌರವಿಸಬಾರದು. ಮತ್ತು ಮಂಗಳೂರಿಗೆ ಮರಳಲು ರೈಲ್ವೇ ಕಾಯ್ದಿರಿಸುವಿಕೆ ವ್ಯರ್ಥವಾಗಬಾರದು. ಹಾಗೆ ಲಭ್ಯ ಮೂವತ್ಮೂರು ದಿನಗಳಲ್ಲಿ, ಬೈಕ್ ಯಾನ ಮತ್ತು ಸ್ಥಳ ಸಂದರ್ಶನದ ದಿನಗಳು ಮೂವತ್ತು ಮಾತ್ರ. ಹೆಚ್ಚುವರಿ ಮೂರು ದಿನಗಳನ್ನು ಮಾರ್ಗಕ್ರಮಣದ ಆಕಸ್ಮಿಕಗಳ ಹೊಂದಾಣಿಕೆಗೂ ದಿಲ್ಲಿ ದರ್ಶನಕ್ಕೂ ಮೀಸಲಿರಿಸಿದ್ದೆವು. ೨೪ರ ಅಪರಾಹ್ನವೇ ದಿಲ್ಲಿ ಸೇರಿದ್ದ ನಮಗೆ ವಿನಿಯೋಗಕ್ಕೆ ಸ್ಪಷ್ಟ ಮೂರು ದಿನಗಳು ಉಳಿದಿದ್ದವು. 

ಹನ್ನೊಂದು ದಿನಗಳ ಹಿಂದೆ ಬಾರದ ಅನೇಕ ಹೃದ್ಯವಾಗುವಂತ ಪತ್ರಗಳ ಪಠಣ
ಪ್ರಥಮಾದ್ಯತೆಯ ಖುಷಿ. ಅನಂತರ ತಂದೆಗೆ "ಎಲ್ಲ ಸೌಖ್ಯ. ಬಾಕಿ ಸಂಗ್ತಿ ಮೊಖ್ತಾ" ಎಂದಷ್ಟೇ ತಿಳಿಸುವ ನನ್ನೆಲ್ಲ ಒದ್ದಾಟಗಳನ್ನು ಎಸ್ಟೀಡೀ ಭೂತಗಳು ಯಶಸ್ವಿಗೊಳಿಸಲೇ ಇಲ್ಲ. ಕರ್ನಾಟಕ ಸಂಘದ ಅಟೆಂಡರ್ - ಗೌಡ, ತಲಾ ರೂ ಮೂವತ್ತೈದರಂತೆ ದಿಲ್ಲಿ ದರ್ಶನ ಮಾಡಿಸುತ್ತೇನೆಂದ. ಒಪ್ಪಿ ಬಸ್ಸೇರಿದೆವು. ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ಗಂಟೆಯೊಳಗೆ ಗಾಂಧೀ ನೆಹರೂ ಇಂದಿರಾ ಶಾಸ್ತ್ರೀ ಎಂದಷ್ಟು ಭೂಮಿದಂಡಗಳಲ್ಲಿ ಶ್ರದ್ಧಾಂಜಲಿಯ, ಸಂಸತ್ ರಾಷ್ಟ್ರಪತಿ ಇಂಡಿಯಾಗೇಟ್ ಎಂದಿತ್ಯಾದಿಗಳಲ್ಲಿ ದೇಶಭಕ್ತಿಯ, ಕೆಂಪು ಕೋಟೆಯಂಥವಲ್ಲಿ ಭವ್ಯತೆಯ ಭಾವಗಳನ್ನು ಉದ್ದೀಪಿಸುವಂತೆ, ವಿರಾಮದಲ್ಲಿ ಸುತ್ತಿಸಿ ಬಿಟ್ಟರು. ಕೊನೆಯಲ್ಲಿ ನನಗೆ ‘ದಿಲ್ಲಿಯೊಂದು ಮಹಾಗೋರಿ’ ಎಂಬರ್ಥದಲ್ಲಿ ಯಾರೋ ಹೇಳಿದ ಮಾತೇ ನಿಜ ಅನ್ನಿಸಿತು. 

ಕರ್ನಾಟಕ ಸಂಘದ ಭವನ ನಮ್ಮ ದಿಲ್ಲಿ ವಿಳಾಸ ಮಾತ್ರ. ಆದರೆ ದಿಲ್ಲಿಯ ನಮ್ಮ ನಿಜ ಪ್ರತಿನಿಧಿ - ವಿವಿ ಮೆಹ್ತಾ. ಅವರನ್ನು ಮತ್ತೊಮ್ಮೆ ಮನೆಯಲ್ಲಿ ಭೇಟಿಯಾಗಿ ನಮ್ಮ ಯಶಸ್ಸಿನ ವಾರ್ತೆ ಹಾಗೂ ಹಾರ್ದಿಕ
ಕೃತಜ್ಞತೆಗಳನ್ನು ಸಲ್ಲಿಸಿದೆವು. ಉಳಿದಂತೆ ಬಹುತೇಕ ನಮ್ಮದೇ ಬೈಕುಗಳಲ್ಲಿ ಪ್ಲಾನೆಟೇರಿಯಂ, ಕುತುಬ್ ಮಿನಾರ್, ಮೋಜಿನ ಉದ್ಯಾನ, ಬಿರ್ಲಾ ಮಂದಿರ್, ಬಹಾಯಿ ಮಂದಿರ, ಸರೋಜಿನಿ ಮತ್ತು ಕಮಲಾ ಮಾರುಕಟ್ಟೆಗಳು ಎಂದೇನೇನೋ ಸುತ್ತಿದೆವು. ಬಿದ್ದುಕೊಳ್ಳಲು ಸಂಘದ ಪಾತಾಳ, ಹೊಟ್ಟೆಗೆ ಅಲ್ಲಿನ ಕ್ಯಾಂಟೀನ್ ಧಾರಾಳವೇ ಇತ್ತು. 

ಇಪ್ಪತ್ತೇಳರಂದು ಸಾಕಷ್ಟು ಮುಂಚಿತವಾಗಿಯೇ ನಿಜಾಮುದ್ದೀನ್ ರೈಲ್ವೆ
ನಿಲ್ದಾಣ ಸೇರಿಕೊಂಡಿದ್ದೆವು. ಹಿರಿಯರಿಗೆ ವೃಥಾ ಶ್ರಮ ಯಾಕೆಂದು ನಾವು ಸ್ಪಷ್ಟವಾಗಿಯೇ ಮೆಹ್ತಾರನ್ನು ಬರದಿರಲು ಕೇಳಿಕೊಂಡಿದ್ದೆವು. ಆದರೆ ಅವರು ನಿವೃತ್ತ ರೈಲ್ವೇ ಇಂಜಿನಿಯರ್ ಎಂಬ ಪ್ರಭಾವ ಮತ್ತು ಸಂಪರ್ಕಗಳೊಡನೆ ಖುದ್ದು ಬಂದು ತೋರಿದ ಮೆಹನತ್ತಲ್ಲದಿದ್ದರೆ, ಮುಖ್ಯವಾಗಿ ನಮ್ಮ ಬೈಕುಗಳನ್ನು ನಮ್ಮದೇ ರೈಲಿಗೆ ಸೇರಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು. 

ಮಧ್ಯಾಹ್ನ ಹನ್ನೆರಡಕ್ಕೆ ರೈಲು ಆಲಾಪಿಸಲು ತೊಡಗಿತ್ತು. ಮಥುರಾ ಆಗ್ರಾಗಳ ಮಾಸಲು
ಚಿತ್ರಗಳು ಪಕ್ಕ ವಾದ್ಯದ ಅನುಸರಣೆಯಂತಿತ್ತು. ಸಂಜೆಯ ಬೆಳಕಿನೊಡನೆ ರೈಲು ಪ್ರಕೃತಿ ಮಾತೆಯ ಅದ್ಭುತ ಕೃತಿ - ಚಂಬಲ್ ನದಿಯನ್ನು ಎತ್ತಿಕೊಂಡಿತ್ತು. ಮುಂದುವರಿದಂತೆ ಕುಖ್ಯಾತ ಢಕಾಯಿತರುಗಳ ನೆಲೆಯಾಗಿಯೇ ಹೆಚ್ಚು ಪ್ರಚಾರಕ್ಕೆ ಬಿದ್ದ ವಿಶಿಷ್ಟ ಕೊರಕಲುಗಳನ್ನೂ ಕಂಡೆವು. ಇವು ನಮಗೆ ಬೈಕ್ ಯಾನದಲ್ಲಿ ಸಿಗದ ದೃಶ್ಯಲಾಭಗಳು. ಇತಿಹಾಸ ಪಾಠದ ಹಲವು ಅರ್ಥ ಸಾಧ್ಯತೆಗಳ ಚರಣಗಳಾಗಿ ಗ್ವಾಲಿಯರ್, ಝಾನ್ಸಿ ಮುಂತಾದವು ಕಛೇರಿ
ಓಘದಲ್ಲಿ ಸಾಗುತ್ತಲೇ ಇದ್ದವು, ನಿಲ್ದಾಣಗಳ ಹೆಸರಾಗಿ ಹಿಂದೆ ಸರಿಯುತ್ತಲೇ ಇದ್ದವು. ಹಾಗೇ ನಿಶಾ ಗುಹಾಯಾನದ, ಕಲ್ಪನಾಸ್ವರಗಳಲ್ಲಿ ಸುಖಿಸಿ, ಕಣ್ಣು ಬಿಡುವಾಗ ಮತ್ತಷ್ಟು ಚರಣಗಳು - ನಾಗ್‍ಪುರ, ವರ್ಧಾ, ವಾರಂಗಲ್, ವಿಜಯವಾಡಾ... ಮತ್ತೊಂದೇ ರಾತ್ರಿಯ ಮುಸುಕಿನುದ್ದಕ್ಕೂ ಅಪ್ಪಟ ಕರ್ನಾಟಕ ಸಂಗೀತ ವಲಯವೇ ಆದ ಸೇಲಂ, ಈರೋಡ್, ಪಾಲ್ಘಾಟ್. ಇಲ್ಲಿಗಾಗುವಾಗ ಕಿವಿ ತುಂಬಾ ತನಿ ಆವರ್ತದ ತರಹೇವಾರಿ ಪೆಟ್ಟುಗಳು ತುಂಬಿ ಬಂದಂತಿತ್ತು - ಲಟ
ಲಟಕ್, ಲಟ ಪಟಕ್... ಅದ್ಭುತ ರಾಗರಂಜನಿ ಮುಕ್ತಾಯಕ್ಕೆ ಬರುತ್ತಿದ್ದಂತೆ, ಧವಳ ಶಿಖರಗಳಿಗೆ ಹೊನ್ನ ಮೆತ್ತಿದ ಸೂರ್ಯ, ಪಡುಗಡಲಿಗೆ ಕೈ ತೊಳೆಯಲು ಬಂದಿದ್ದ, ನಾವು ಮಂಗಳೂರಿನಲ್ಲಿದ್ದೆವು. ರಂಗಮಿತ್ರ ಮ್ಯಾಕ್ಸಿಮ್ ರಾಡ್ರಿಗಸ್ ಮತ್ತು ಇಕ್ಬಾಲ್ ಕೊಕಾಕೋಲಾ ಕ್ಯಾನ್ ಹಿಡಿದು ನಮ್ಮನ್ನು ಸ್ವಾಗತಿಸಿದರು! 

ಸಾಹಸಯಾನ ನಮಗಂತೂ ಇನ್ನಿಲ್ಲದ ಕೃತಾರ್ಥತೆಯನ್ನು ಕೊಟ್ಟಿತ್ತು. ಆ ಅನುಭವ ಸಾರವನ್ನು ಸಾರ್ವಕಾಲಿಕ ಪ್ರೇರಕ ಮತ್ತು ಅನುಸರಿಸುವವರಿಗೆ ಉತ್ತಮ ಆಕರವಾಗಿ ಒದಗಿಸಬೇಕೆಂಬ ಉತ್ಸಾಹ ನನ್ನದಿತ್ತು. (ಅಂತರ್ಜಾಲದ ಮಾಹಿತಿ ಮಹಾಪೂರದ ಕಲ್ಪನೆ ಇಲ್ಲದ ದಿನಗಳವು ಎಂಬುದು ನೆನಪಿರಲಿ) ಅದಕ್ಕೆ ಒದಗುವಂತೆ ಅಲ್ಲಲ್ಲಿ ಸಿಕ್ಕಿದ ಹಲವು ನಕ್ಷೆ, ಸಾಹಿತ್ಯಗಳನ್ನೂ ನಾನು ಸಂಗ್ರಹಿಸಿದ್ದೆ. ಆದರೆ ಪ್ರಥಮ ಕರ್ತವ್ಯವಾಗಿ, ಮಂಗಳೂರು ತಲಪಿದ ಹತ್ತು ಹದಿನೈದು ದಿನಗಳೊಳಗೇ ಯಾನದ ಪುಟ್ಟ ಫಲಶ್ರುತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದೆ. (ಚಿತ್ರ ನೋಡಿ) ಅದು ಎಲ್ಲೂ ನಮ್ಮ ಶಂಖ ಬಾಜಣವಾಗಿರಲಿಲ್ಲ. ಅದರ ಪ್ರತಿಗಳನ್ನು ಮುಖ್ಯವಾಗಿ ನಮಗೊದಗಿದ ಎಲ್ಲರಿಗೂ
ಮತ್ತು ಪತ್ರಿಕೆಗಳಿಗೂ ಕಳಿಸಿಕೊಟ್ಟೆ. ಅದು ಅವರೆಲ್ಲ ನಮ್ಮ ಕುರಿತು ತೋರಿದ ಕುತೂಹಲ ಮತ್ತು ಕೊಟ್ಟ ಸಹಕಾರಗಳಿಗೆ ಪ್ರತಿಯಾಗಿ, ನಾವೆಷ್ಟು ಏರಿದ್ದೇವೆ ಅಥವಾ ಬಿದ್ದಿದ್ದೇವೆ ಎಂಬುದರ ಪ್ರಮಾಣಪತ್ರ ಮಾತ್ರ. 

ಸಾಹಸಯಾನ ಮಾಡಿ ಬಂದ ಹೊಸತರಲ್ಲಿ ಸಿಕ್ಕ ಪರಿಚಿತರೆಲ್ಲ ನಮ್ಮ ಸಂತೋಷ ಭಾಗಿಗಳಾಗುವುದಕ್ಕಿಂತ ಹೆಚ್ಚಿಗೆ, ನನ್ನ ‘ಅನಾರೋಗ್ಯ’ವನ್ನು ದೊಡ್ಡದು ಮಾಡಿ, ತಮ್ಮ ಕಾಳಜಿಯ (ಪ್ರೀತಿ?) ಪ್ರದರ್ಶನ ಮಾಡಿಕೊಂಡರು. ಆರೋಹಣದ ಸದಸ್ಯ ಮತ್ತು ಪ್ರಜಾವಾಣಿಯ ಮಂಗಳೂರು ಪ್ರತಿನಿಧಿ ಜಿಪಿ ಬಸವರಾಜು, ಮೂರು ತಿಂಗಳು ಕಳೆದು ಪ್ರಜಾವಾಣಿ ಸಾಪ್ತಾಹಿಕದಲ್ಲಿ ಮೂರು ಕಾಲಮಿನ ಒಂದು ಲೇಖನ ಮಾಡಿದ್ದರು. ಉಳಿದಂತೆ ಇನ್ಯಾರೂ ಉತ್ತೇಜಿತರಾಗಲೇ ಇಲ್ಲ. ತತ್ತ್ವವಾಗಿಯೇ ನಾನು ಹೊಗಳಿಕೆ ಬಯಸುವುದಿಲ್ಲ, ಸಮ್ಮಾನ, ಪ್ರಶಸ್ತಿಗಳನ್ನಂತೂ ಸ್ವೀಕರಿಸುವುದೇ ಇಲ್ಲ. ಆದರೆ ನಮ್ಮನುಭವಕ್ಕೆ
ಸಮ್ಮಾನವಾಗುವಂತೆ ಶಾಲೆ, ಕಾಲೇಜು, ಸಂಘಗಳು ಬಯಸಿದ್ದರೆ, ಯಾವುದೇ ಫಲಾಪೇಕ್ಷೆಯಿಲ್ಲದೆ ಹಂಚಿಕೊಳ್ಳಲು ಉತ್ಸುಕನಾಗಿದ್ದೆ. ಯಾರೂ ಕೇಳಲೇ ಇಲ್ಲ. 

ನಮ್ಮ ಲೆಕ್ಕಕ್ಕೆ ಮೂರೂ ಹೀರೊಂಡಾ ಬೈಕುಗಳ ಸಾಮರ್ಥ್ಯ, ಸಾಧನೆ ಅಸಾಧಾರಣ ಮತ್ತು ಪೂರ್ಣ ಸಂತೋಷದಾಯಿಯಾಗಿತ್ತು. ಅದಕ್ಕೆ ಹೊಗಳಿಕೆ ಸಲ್ಲುವುದಿದ್ದರೆ ಮೂಲ ಜಪಾನೀ ಹೊಂಡಾ ಕಂಪೆನಿಗೆ, ಭಾರತೀಯ ನಕಲೀಶ್ಯಾಮ - ‘ಹೀರೋ’ಕ್ಕಲ್ಲ. ಸಹಾಯ ಮಾಡಲಿಲ್ಲ ಬಿಡಿ, ಕೊನೆಯಲ್ಲಿ ನಾನು ಕಳುಹಿಸಿದ ಫಲಶ್ರುತಿಗೆ ಒಂದು ಸಾಲು ಉತ್ತರಿಸುವಷ್ಟೂ ಬುದ್ಧಿ ಈ ಕಂಪೆನಿಗಿಲ್ಲ. ಆ ಪತ್ರ ಆಡಳಿತ ನಿದ್ರೇಶಕನ ಕಸದ ಬುಟ್ಟಿ ನೇರ ಸೇರಿದ್ದರೆ ಆಶ್ಚರ್ಯವಿಲ್ಲ. ಇವೆಲ್ಲವನ್ನೂ ಮೀರಿ ದೆಹಲಿ ಕರ್ನಾಟಕ ಸಂಘದ ಕುರಿತು, ಸಂದ ಮೂವತ್ತೂ ವರ್ಷಗಳುದ್ದಕ್ಕೆ ನನ್ನಲ್ಲುಳಿದ ಕಹಿಯನ್ನು ಸಂಕ್ಷಿಪ್ತವಾಗಿಯಾದರೂ ದಾಖಲಿಸುವುದು ಅವಶ್ಯ. 

ದೆಹಲಿ ಕರ್ನಾಟಕ ಸಂಘದ ಪೂರ್ವಸೂರಿಗಳು ಏನೇನೋ ಕಷ್ಟಪಟ್ಟು
ಶಿವರಾಮ ಕಾರಂತರ ಹೆಸರಿನ ವಾರ್ಷಿಕ ಪ್ರಶಸ್ತಿಗೆ ಪುದುವಟ್ಟು ಮಾಡಿದ್ದಿರಬೇಕು. ಅದರ ೨೦೦೦ನೇ ಇಸವಿಯ ವಿನಿಯೋಗದ ಅನಿವಾರ್ಯತೆಯಲ್ಲಿ ಆಯ್ಕಾ ಸಮಿತಿಗೆ ಸಿಕ್ಕ ಹೆಸರು ನನ್ನ ತಂದೆ - ಜಿಟಿ ನಾರಾಯಣ ರಾಯರದು. ಸಂಘ ನನ್ನ ತಂದೆಯ ಜತೆಗೆ ತಾಯಿಯನ್ನೂ ಸೇರಿಸಿದಂತೆ, ವಿಮಾನಯಾನ ಮತ್ತು ದೆಹಲಿ ವಾಸ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತೇವೆ ಎಂದಿತ್ತು. ಅವರೀರ್ವರ ವೃದ್ಧಾಪ್ಯಕ್ಕೆ ಸಂಗಾತಿಯಾಗಿ ನಾನು, ಸ್ವಂತ ಖರ್ಚಿನಲ್ಲೇ ಜತೆಗೊಟ್ಟಿದ್ದೆ. ಆಗಲೇ ನಾನು ಸಂಘದ ಕಟ್ಟಡದ ಮಹಡಿಗಳಲ್ಲಿ ಸಾರ್ವಜನಿಕ ವಾಸಕ್ಕೆಂದೇ ಸಜ್ಜಾದ ಹಲವು ಕೋಣೆಗಳಿರುವುದನ್ನು ಗಮನಿಸಿದ್ದು ಮತ್ತು ಅವರ ಜತೆಗೆ ಅನುಭವಿಸಿದ್ದು. ಆದರೆ ಅದಕ್ಕೂ ಹತ್ತು ವರ್ಷ ಮೊದಲು ಸಾಹಸಯಾನದಲ್ಲಿ ಬಂದಿದ್ದ... 

ನಮಗೆ ರಿಯಾಯ್ತಿ ದರದಲ್ಲಿ ಅವೇ ಕೋಣೆಗಳನ್ನು ಕೊಡುವುದು ಬಿಟ್ಟು ಪ್ರಸ್ತಾವವನ್ನೂ ಅವರು ಮಾಡಲಿಲ್ಲ. ಅದಕ್ಕೇನಾದರೂ ಅಸಹಾಯಕತೆ ಇದ್ದಿದ್ದರೆ, ಮುಂದಾಗಿ ಹೇಳಿ ನಮ್ಮನ್ನು ಬದಲಿ ವ್ಯವಸ್ಥೆಗೆ ಮುಕ್ತವಾಗಿಸುವುದನ್ನೂ ಮಾಡಲಿಲ್ಲ. ನಮ್ಮದೇ ಖರ್ಚು
ಮತ್ತು ಹುಚ್ಚಿನಲ್ಲಿ ಕರ್ನಾಟಕದ ದೂರದಿಂದ ಅವರ ಬಾಗಿಲಿಗೇ ಬಂದ ನಮ್ಮ ಅನುಭವದ ಲಾಭವನ್ನು, ಅವರ ಆಸಕ್ತ ಸದಸ್ಯರಿಗೆ ಉಣಬಡಿಸುವುದಕ್ಕೂ ಅವರು ಮನ ಮಾಡಲಿಲ್ಲ. ಬದಲಿಗೆ ನಮಗೆ ಐದಾರು ದಿನಗಳ ಭಿಕಾರಿ ವಾಸ್ತವ್ಯ ಕೊಟ್ಟು, ಅನಧಿಕೃತ ನೆಲ ಬಾಡಿಗೆ ವಸೂಲು ಮಾಡಿದ್ದರು (ರಸೀದಿ ಕೊಡಲಿಲ್ಲ). ನನ್ನ ಮೊದಲ ಪತ್ರದಿಂದ ಹಿಡಿದು ಕೊನೆಯ ಫಲಶ್ರುತಿಯವರೆಗಿನ ಯಾವುದಕ್ಕೂ ಸಂಘದ ಒಂದು ಅಧಿಕೃತ ದಾಖಲೆಯೇ ಇಲ್ಲ. ನಾವಲ್ಲಿದ್ದ ಐದಾರು ದಿನಗಳಲ್ಲಿ ಅಧ್ಯಕ್ಷ ಒಮ್ಮೆ ನಮಗೆ ‘ದರ್ಶನ’ ಕೊಟ್ಟು, ನಾಲ್ಕು ಸೌಜನ್ಯದ
ನುಡಿಯನ್ನೂ ಆಡಲಿಲ್ಲ. ಎಲ್ಲಕ್ಕೂ ಹೀನಾಯವಾಗಿ ಅಲ್ಲಿದ್ದ ಅಟೆಂಡರ್ - ಗೌಡ, ದಿಲ್ಲಿ ದರ್ಶನದ ಹೆಸರಿನಲ್ಲಿ ನಮ್ಮನ್ನು ವಂಚಿಸಿದ್ದ. ಅದನ್ನು ಪ್ರಶ್ನಿಸಿದಾಗ, ಆತ ನಿಕೃಷ್ಟ ವಚನದಲ್ಲಿ "ದಿಲ್ಲಿ ಬಿಟ್ಟು ನೀ ಹ್ಯಾಗ್ ಹೊರಗೆ ಹೋಗ್ತಿಯಾ ನಾ ನೋಡ್ಕೊಳ್ತೀನಿ..." ಎಂದು ಬೆದರಿಕೆಯನ್ನೇ ಹಾಕಿದ್ದ! (ಅದಕ್ಕೆ ಬೆಲೆ, ಚಲಾವಣೆ ಯೋಗ್ಯತೆ ಏನೂ ಇರಲಿಲ್ಲ, ಬಿಡಿ) 

[ದೆಹಲಿ ಕರ್ನಾಟಕ ಸಂಘದ ಕಟ್ಟಡ ಹಾಗೂ ವ್ಯವಸ್ಥೆಗಳು ೨೦೦೧ರಲ್ಲಿ ನಾನು ನೋಡಿದಾಗ ಶಿಥಿಲವಾಗಿತ್ತು. ಮುಂದೊಂದು ಕಾಲದಲ್ಲಿ ಅದರ ಆಡಳಿತ ಮಂಡಳಿಯ ಶೈಥಿಲ್ಯವನ್ನೂ ಕಳೆಯುವಂತೆ, ಗೆಳೆಯ ಪುರುಷೋತ್ತಮ ಬಿಳಿಮಲೆ ಸಂಘದ ಅಧ್ಯಕ್ಷರೇ ಆದರು. ಮತ್ತು ಅಧಿಕಾರದ ನಿಜ ಸಮರ್ಥನೆಗೆನ್ನುವಂತೆ, ಅದುವರೆಗೆ ನೆನೆಗುದಿಗೆ ಬಿದ್ದಿದ್ದ ಹೊಸ ಕಟ್ಟಡದ ಕನಸನ್ನು ದಿಟ್ಟವಾಗಿ ನನಸಾಗಿಸಿದರು. ಅದು ಬರಿಯ ಭವನವಲ್ಲ, ನಿಸ್ಸಂದೇಹವಾಗಿ ಸಂಘ ನಡೆದು ಬಂದ ದಾರಿಯಲ್ಲಿ ಒಂದು ಅದ್ವಿತೀಯ ಶಿಖರ. ಅದರ ಹೆಚ್ಚಿನ ವಿವರಗಳಿಗೆ ಅವಶ್ಯ ಓದಿ - ಪುರುಷೋತ್ತಮ ಬಿಳಿಮಲೆಯವರ ಆತ್ಮಕತೆ - ಕಾಗೆ ಮುಟ್ಟಿದ ನೀರು.] 

ನಮಗೇನೂ ಆಗಬೇಕಿಲ್ಲದ ಪಕ್ಕಾ ವಾಣಿಜ್ಯ ವಹಿವಾಟಿನ ಪಂಚತಾರಾ ಹೋಟೆಲ್ ನೌಕರರು ರಣಥೊಂಬರಾದಲ್ಲಿ ಸ್ವಂತ ಖರ್ಚಿನಲ್ಲಿ ಉಚಿತ ಜೀಪ್ ಯಾನ ಕೊಟ್ಟಿದ್ದರು. ನೈನಿತಾಲಿನ ಕರ್ನಲ್ ಸಾಬ್ ನಮ್ಮ ಅರೆಬರೆ ಅನುಭವ ಹಂಚಿಕೊಂಡದ್ದಕ್ಕೆ, ಒಂದು ರಾತ್ರಿಯ ವಾಸ್ತವ್ಯವನ್ನೇ ಹಗುರ ಮಾಡಿದ್ದರು. ಧಾರವಾಡದ ಘಾಣೇಕರ್ ಮತ್ತು ಸುಬ್ರಹ್ಮಣ್ಯ, ಹುಬ್ಬಳ್ಳಿಯ ಛಡ್ಡಾ, ಬಿಜಾಪುರದ ಜೋಶಿ, ಭೋಪಾಲದ ಭಟ್ಟರು, ದಿಲ್ಲಿಯ ಮೆಹ್ತಾ, ಋಷಿಕೇಶ ದಾರಿಯ ವೈದ್ಯರಲ್ಲದೆ ಕಾಲಪ್ರಭಾವದಲ್ಲಿ ಇಂದು ನಾನು ಮರೆತಿರಬಹುದಾದ ಅಸಂಖ್ಯರು
ವೈಯಕ್ತಿಕ ನೆಲೆಯಲ್ಲೇ ನಮಗೆ ನಿರ್ಮಮವಾಗಿ ಒದಗಿದ್ದರು. ಅವರೆಲ್ಲರನ್ನು ನೆನೆಯುವಾಗ ನನಗೆ ಕೃತಕೃತ್ಯತೆಯೊಡನೆ ಧನ್ಯತೆಯೊಂದೇ ಚಿರಸ್ಥಾಯಿಯಾಗಿ ಉಳಿಯುತ್ತದೆ. 

ಪುಟ್ಟ ಸಂಪುಟದೊಳಗೆ ಅಂಕಿ ಸಂಕಿಗಳು 

ಮೂರು ಬೈಕ್, ಆರು ಜನ, ಮೂವತ್ತೈದು ದಿನ. ಹೋದದ್ದು ಬೈಕ್, ಬಂದದ್ದು ರೈಲು. ಒಂದು ಬೈಕಿನ ಪೆಟ್ರೋಲ್ ೯೯ ಲೀ, ಹಣ ರೂ ೧೦೮೫-೯೦. ಓಟ ೫೫೨೬ ಕಿಮೀ. ರೈಲ್ವೇ (ಒಬ್ಬರ) ಟಿಕೆಟ್, ಬೈಕ್ ಪ್ಯಾಕಿಂಗ್ ಮತ್ತು ಸಾಗಣೆ (ಒಬ್ಬರ ಲೆಕ್ಕಕ್ಕೆ) ರೂ ೭೫೫-೦೦. ಬೈಕ್ ಸೇವೆಗಳು (ಬಿಡಿ ಭಾಗ ಸೇರಿ)
ರೂ ೪೬೪. ಸದಸ್ಯನ - ಊಟೋಪಹಾರ ರೂ ೧೧೬೩, ವಾಸ ರೂ ೫೯೦, ಇತರ ೨೫೮, ರೈಲ್ವೇ ಟಿಕೆಟ್ ೨೪೨. ಒಟ್ಟು ತಲಾ ಖರ್ಚು ರೂ ೩೨೭೭/- 

ದಿನ ಒಂದರ ಗರಿಷ್ಠ ಸವಾರಿ ೪೧೮ ಕಿಮೀ, ಗರಿಷ್ಠ ಚಾರಣ ೩೪ ಕಿಮೀ. ಗರಿಷ್ಠ ಉಷ್ಣಾಂಶ ೪೭ ಮತ್ತು ಕನಿಷ್ಠ ೮ ಡಿಗ್ರಿ ಸೆ. ಗರಿಷ್ಠ ಔನ್ನತ್ಯ ೧೨೩೦೦ ಅಡಿ
ಮತ್ತು ಕನಿಷ್ಠ ಮಂಗಳೂರು :-) 

ಭಾರತ ಸೀಳೋಟ ಮುಗಿಯಿತು

3 comments:

  1. ಮೊದಲ ಬಾರಿ ನಾವು ಉ.ಭಾರತ ಪ್ರವಾಸ ಹೊರಟಾಗ ಅದೆಷ್ಟು ಸಿದ್ಧತೆ ನಡೆಸಿದ್ದೆವು.ಈಗಿನ ಹಾಗೆ ಮೊಬೈಲ್, ಎಟಿಎಂ ಗಳಿಲ್ಲದ ಕಾಲ.ಟ್ರಾವೆಲರ್ಸ್ ಚೆಕ್ ಗಳ ಸೌಲಭ್ಯ ವಿದ್ದರೂ ನಮಗದರ ಬಳಕೆ ಇರಲಿಲ್ಲ.ಮೊದಲ ಬಾರಿ ಅಷ್ಟು ದೂರದ ಪ್ರಯಾಣ.ನಾನು,ನನ್ನ ಸಹೋದ್ಯೋಗಿ ಉಷಾ.ಹೋಗುವಾಗೇನೋ ಹೈಸ್ಕೂಲ್ ಗೆಳತಿಯ ಸಂಸಾರ ಜೊತೆಗೆ ಇತ್ತು.ಸೂಟ್ಕೇಸ್ಗಳಿಗೆ ನಾಯಿ ಚೈನ್ ಹಾಕುವುದೂ ನಮಗೆ ಪ್ರಥಮ ಅನುಭವವೇ ಆಗಿತ್ತು.ಲಗ್ಗೇಜ್ ರೂಂ ವ್ಯವಸ್ಥೆ ಬಗ್ಗೆ ಏನೂ ಅರಿಯದ ಅಮಾಯಕ ರಾಗಿದ್ದೆವು.ಹೆಚ್ಚು ಕಡಿಮೆ ಒಂದು ತಿಂಗಳ ಪ್ರವಾಸ ಕ್ಕೆ ಅಷ್ಟೇ ಬಟ್ಟೆಬರೆ ಕಟ್ಟಿಕೊಂಡು ಹೊರಟಿದ್ದೆವು.ದೆಹಲಿಗೆ ಹೋದವರು , ಹಿಮಾಚಲ ಪ್ರದೇಶ ದಿಂದ ವಾಪಸ್ ಬರುವವರೆಗೆ ಇಪ್ಪತ್ತು ದಿನಗಳಾದರೂ ಆಗುತ್ತಿತ್ತು.ಬೇಡದ ಲಗ್ಗೇಜ್ಗಳನ್ನೆಲ್ಲಾ ಒಂದು ಸೂಟ್ಕೇಸಿಗೆ ವರ್ಗಾಯಿಸಿ, ನಿಜಾಮುದ್ದೀನ್ ರೈಲು ನಿಲ್ದಾಣ ದ ಕ್ಲಾಕ್ ರೂಮಿನಲ್ಲಿ ಇಬ್ಬರ ಸೂಟ್ಕೇಸನ್ನೂ ಪಕ್ಕಪಕ್ಕ ಇಟ್ಟು,ಆ ರ್ಯ್ಕ್ (rack)ನ ಗುರ್ತಿಟ್ಟುಕೊಂಡು ರಸೀದಿ ತಪ್ಪದೇ ಪಡೆದು ಅಷ್ಟೂ ದಿನಗಳು ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದೆವು.ಹೊರಡುವ ದಿನ ಬಂತು.ಕೆ.ಕೆ.ಎಕ್ಸಪ್ರೆಸ್ ರಾತ್ರಿ ಒಂಬತ್ತಕ್ಕೆ ಹತ್ತೋ, ಹನ್ನೊಂದನೇ ಪ್ಲಾಟ್ಫಾರ್ಮ್ ನಿಂದ ಹೊರಡುತ್ತಿತ್ತು.ನಮ್ಮದು RAC ಟಿಕೆಟ್ ಬೇರೆ.ಆಗಿನ ಕಾಲದಲ್ಲಿ ಒಂದು ತಿಂಗಳಿಗೂ ಮುಂಚಿತವಾಗಿ ಮುಂಗಡ ಸೀಟು ಕಾದಿರಿಸಲು ಅವಕಾಶ ವಿರಲಿಲ್ಲ.ನಾವು ಹಿಮಾಚಲ ಪ್ರದೇಶ ದಿಂದ ದೆಹಲಿಗೆ ವಾಪಸ್ ಬಂದಾಗ ರಿಸರ್ವ್ ಮಾಡಿದ್ದರಿಂದ ಟಿಕೆಟ್ ಕನ್ಫರ್ಮ್ ಆಗಿರಲಿಲ್ಲ. ನಾವು ಏಳೂವರೆಗೆ ಕ್ಲಾಕ್ ರೂಮಿನ ಎದುರು ನಿಂತು ರಸೀದಿ ತೋರಿಸಿದೆವು.ಅರ್ಧ ಗಂಟೆ ಹುಡುಕಿದರೂ ನಮ್ಮ ಸೂಟ್ಕೇಸ್ ಗಳು ಕಾಣಸಿಗಲಿಲ್ಲ.ನಾವು ಗುರ್ತಿಟ್ಟುಕೊಂಡಿದ್ದ rackನಲ್ಲಿ ಇನ್ಯಾರದ್ದೋ ಸೂಟ್ಕೇಸ್ ರಾರಾಜಿಸುತ್ತಿತ್ತು.ಆ ರೂಮಿನ ತುಂಬಾ ಇದ್ದ ಸಾವಿರಾರು ಸೂಟ್ಕೇಸ್ಗಳು ಎಲ್ಲಾ ಒಂದೇ ರೀತಿ ತೋರುತ್ತಿದೆ.ಎಲ್ಲಾ ವಿಐಪಿ ಸೂಟ್ ಕೇಸ್ ಗಳಿಗೂ ಮಿಲಿಟರಿ ಹಸಿರಿನ ಹೊದಿಕೆ ಯ ಕವರ್.ತಲೆ ಕೆಟ್ಟು ಹೋಯ್ತು.ಎಂಟು ಗಂಟೆಗೆ ಅಲ್ಲಿನವರ ಶಿಫ್ಟ್ ಬದಲಾಯಿತು.ಹೊಸದಾಗಿ ಬಂದವರ ಎದಿರು ನಮ್ಮ ಗೋಳು ತೋಡಿಕೊಂಡೆವು.ಅವರಿಗೂ ಹುಡುಕಿ ಸಾಕಾಗಿ ನಮ್ಮ ಅದೃಷ್ಟ ಕ್ಕೆ,ನೀವೇ ಹುಡುಕಿ ಕೊಳ್ಳಿ ಅಂತ ಒಳಗೆ ಬಿಟ್ಟರು.ಹುಡುಕಿ ಹುಡುಕಿ ಸಾಕಾಯಿತು.ಆ ಕಾಲದಲ್ಲಿ ದೆಹಲಿಯಲ್ಲಿ ಅನಾಮಿಕ ಸೂಟ್ಕೇಸ್ಗಳಲ್ಲಿ ಬಾಂಬ್ ಸ್ಫೋಟಗಳಾಗುತ್ತಿದ್ದ ಕಾಲ.ಅವರು ನಮ್ಮನ್ನು ನೋಡುತ್ತಿದ್ದರೆ,ನಾವೇ ಆ ಭಯೋತ್ಪಾದಕ ರಿರಬಹುದೆಂದು ಗುಮಾನಿಸುತ್ತಿದ್ದಾರೆಂದು ಅನ್ನಿಸುತ್ತಿತ್ತು.ಆ ದೊಡ್ಡ ಗೋಡೋನಿನ ಕೊಟ್ಟ ಕೊನೆಯrack ಬಳಿ ಬಂದಾಗ ನಮ್ಮ ಸೂಟ್ಕೇಸ್ ಗಳು ಅಂತೂ ಕಣ್ಣಿಗೆ ಬಿತ್ತು.ಬೇಗಬೇಗ ಅದನ್ನು ತೆಗೆದುಕೊಂಡು ಉಳಿದಲಗ್ಗೇಜ್ಗಳೊಂದಿಗೆ ಒಂದನೇ ಪ್ಲಾಟ್ ಫಾರಂ ನಿಂದ ಮೆಟ್ಟಿಲುಗಳನ್ನು ಹತ್ತಿ ಹತ್ತನೇ ಪ್ಲಾಟ್ಫಾರ್ಮ್ ಗೆ ಬಂದಾಗ ರೈಲು ಹೊರಡಲು ಹತ್ತು ನಿಮಿಷ ಮಾತ್ರ ಬಾಕಿ ಇತ್ತು.ರೈಲಿನಲ್ಲಿ ಸೀಟಿನಡಿಗೆ ತಳ್ಳಿ ಚೈನ್ ಹಾಕಿ ಬೀಗ ಜಡಿದು ಹಾಯಾಗಿ ನಿದ್ದೆ ತೆಗೆಯುತ್ತಿದ್ದ ನಮಗೆ ಕ್ಲಾಕ್ ರೂಮಿನಲ್ಲೂ ಹಾಗೇ ಮಾಡಲು ಹೊಳೆದಿರಲಿಲ್ಲ.ಸೂಟ್ಕೇಸ್ಗಳನ್ನು ಹುಡುಕುವಾಗ ಹೆಚ್ಚಿನವರು ಆ ರೀತಿ ಮಾಡಿದ್ದು ಗಮನಕ್ಕೆ ಬಂತು.

    ಒಂದು ಪ್ರವಾಸ ಎಷ್ಟೆಲ್ಲಾ ಜೀವನಾನುಭವ ಗಳನ್ನು ಕೊಡುತ್ತದೆ ನೋಡಿ.ಆ ಕ್ಷಣದಲ್ಲಿ ಆತಂಕ ಅನುಭವಿಸಿದರೂ ಇಂದು ಆರಾಮವಾಗಿ ಕುಳಿತು ಅದರ ಮಜಾ ನೆನೆದರೆ ಖುಷಿಯಾಗುವುದು.ಈ ಕಾರಣದಿಂದ ನಿಮ್ಮ ಭಾರತ ಸೀಳುನೋಟ ಪ್ರವಾಸ ನನ್ನ ಮಟ್ಟಿಗೆ ಖುಷಿ ಕೊಟ್ಟಿದ್ದು ಸುಳ್ಳಲ್ಲ.ಕರ್ನಾಟಕ ಸಂಘದ ಕಹಿ ನೆನಪು, ಅನಾರೋಗ್ಯದ ಸಮಸ್ಯೆ ಎಲ್ಲವೂ ಸಾರ್ಥಕ ಪ್ರವಾಸವೊಂದರ ಮರೆಯದ ನೆನಪುಗಳೇ.

    ಇನ್ನೊಂದೆರಡು ವಿಷಯ ಸೇರಿಸಿ ಬಿಡುವೆ.ಇಷ್ಟು ವರ್ಷಗಳಾದರೂ ದೂರದ ನಮ್ಮ ಮೊದಲ ಪ್ರವಾಸದ ವಿಚಾರಗಳನ್ನು ಆಗಾಗ ನೆನೆಯುತ್ತ ಲೇ ಇರುವ ನಾನು ನನ್ನ ಸಹ ಪಯಣಿಗ ಳಾಗಿದ್ದ ನನ್ನ ಸಹೋದ್ಯೋಗಿ ಬಳಿ ಹೇಳಿದರೆ, ಅಯ್ಯೋ ಮೇಡಂ,ನನಗೆ ಅವೇನೂ ನೆನಪೇ ಇಲ್ಲ ಅಂತಾಳೆ.ನಾಲ್ಕಾರು ವರ್ಷಗಳ ಕೆಳಗೆ ಕೈಲಾಸ ಮಾನಸ ಸರೋವರ ಯಾತ್ರೆ ಹೋಗಿ ಬಂದ ಸ್ನೇಹಿತೆಯೊಬ್ಬರು ಒಂದೂ ಫೋಟೋ ಇಲ್ಲದೆ, ಕನಿಷ್ಠ ಮೊಬೈಲ್ ಫೋಟೋ ಕೂಡಾ ಇಲ್ಲದೆ ಬಂದರು.ತುಂಬಾ ಚೆನ್ನಾಗಿತ್ತು ಎಂದಷ್ಟೇ ತಮ್ಮ ಅನುಭವ ಹೇಳಿಕೊಂಡರು.ಇದೆಲ್ಲಾ ನೋಡುವಾಗ ಜನ ಪ್ರವಾಸ ಮಾಡುವ ಧ್ಯೇಯೋದ್ದೇಶ ಗಳೇ ಬದಲಾಗಿದೆ ಅನ್ನಿಸುತ್ತೆ.ಬೆರಳ ತುದಿಯಲ್ಲಿ ಬುಕ್ಕಿಂಗ್,ಹಣ ಚಲಾವಣೆ ಎಲ್ಲಾ ಮಾಡುವ ಇಂದಿನವರು ಎಲ್ಲಾ ಚಿತ್ರಗಳೂ ಗೂಗಲ್ ನಲ್ಲಿ ಸಿಗುತ್ತದಲ್ಲಾ ಅನ್ತಾರೆ.ಹಳೇ ಆಲ್ಬಂ ಹಿಡಿದುಕೊಂಡು ಗತಕಾಲದಲ್ಲಿ ಮುಳುಗುವ ನಮ್ಮಂತಹವರು ಪಳೆಯುಳಿಕೆಗಳಂತೆ ಅವರಿಗೆ ಕಂಡು ಬಂದರೆ ಆಶ್ಚರ್ಯವಿಲ್ಲ.

    ನಿಮ್ಮ ಪ್ರವಾಸ ಕಥನ ದ ಒಂದೇ ಕೊರತೆ ಅಂತ ನನಗನ್ನಿಸಿದ್ದು.ತಂಡದ ಏಕೈಕ ಮಹಿಳಾ ಯಾತ್ರಿಯಾದ ದೇವಕಿ ಯವರ ಅನುಭವ ದಾಖಲಾಗದೇ ಹೋಗಿದ್ದು.ನಮ್ಮ ಪ್ರವಾಸ ವಂತೂ ಮಾಮೂಲಿ ಬಸ್ಸು, ರೈಲಿನಲ್ಲಿ.ಅವರೋ ಬೈಕಿನಲ್ಲಿ ಅಷ್ಟು ದೂರ ಹೋಗಿ ಬಂದಿದ್ದು , ನಿಮ್ಮ ಜೊತೆ ಇದ್ದರೂ ಈ ಕಾಲಕ್ಕೂ ಸಾಹಸವೇ.ಮತ್ತೆ ಅನುಭವ ಭಿನ್ನ ವಾಗಿದ್ದಿರಬಹುದು ಎಂದು ನನ್ನ ಅನಿಸಿಕೆ.

    ReplyDelete
  2. ತುಂಬಾ ಸೊಗಸಾಗಿ ಬರೆದಿದ್ದೀರಿ ಸಾರ್. ಅಂದಿನ ನಿಮ್ಮ ಬೈಕ್ ಟ್ರಿಪ್ ನಮಗೆ ಒಂದು ಪ್ರೇರಣೆ. ಮುಂದೊಂದು ದಿನ ನಾನು ಕೂಡ ಮಾಡುವಾಸೆ.

    ಧನ್ಯವಾದಗಳು.

    ReplyDelete
  3. ಪೂರ್ಣ ಓದಿದೆ, ಯೌವನದಲ್ಲಿ ಇಂತಹ ಪ್ರವಾಸ ಮಾಡುವ ಉತ್ಸಾಹ ಇತ್ತು ಅದಕ್ಕೆ ಪ್ರೇರಣೆ ವಿದೇಶಿ ಪ್ರವಾಸಿಗಳು ಜೋಗ್ ಫಾಲ್ಸ್ ಗೆ ಬರುವುದು ನೋಡಿ ಆದರೆ ಆಗಿನ ನನ್ನ ಜೀವನ ಮಟ್ಟದಲ್ಲಿ ಕಾರ್ಯಸಾಧು ಆಗುವ೦ತಾದ್ದಾಗಿರಲಿಲ್ಲ.
    ಹಿಮಾಚಲ ಪ್ರದೇಶದ ತನಕ ವ್ಯವಹಾರಿಕ ಪ್ರವಾಸ ಮಾಡಿದ್ದಿದೆ ಆದರೆ ಅಲ್ಲಿಯ ಪ್ರೇಕ್ಷಣೀಯ ಸ್ಥಳ ಬೇಟಿಗೆ ಹಣ, ಸಮಯ ಮತ್ತು ಜೊತೆಗಾರರ ನಿರಾಸಕ್ತಿಯಿಂದ ಸಾಧ್ಯವಾಗಲಿಲ್ಲ.
    ಮುಂದಿನ ದಿನದಲ್ಲಿ ರೈಲು-ಟ್ಯಾಕ್ಸಿ - ವಿಮಾನ ಬಳಸಿ ಆಲ್ ಇಂಡಿಯಾ ಟೂರ್ ಮಾಡುವ ಯೋಚನೆ ಇದೆ ಆದ್ದರಿಂದ ನಿಮ್ಮ ಪ್ರವಾಸದ ಅನುಭವ ಒಂದು ರೀತಿ ಮಾರ್ಗದರ್ಶನ ಮಾಡಿತು.
    ನೀವು ದಂಪತಿಗಳು ಮಾತ್ರ ಅಸಾದಾರಣ ಸಾಹಸಿಗಳು

    ReplyDelete