26 October 2020

ಕಣ್ದಣಿಸಿದ ಬುರ್ರಾ, ಹೊಟ್ಟೆ ದಣಿಸಿದ ಕಾಕಿನಾಡ

(ಭಾರತ ಅ-ಪೂರ್ವ ಕರಾವಳಿಯೋಟ - ೧೪) 



ಮುರಕಲ್ಲ ಹಾಸುಗಳಲ್ಲಿನ ದೊಡ್ಡ ಪೊಳ್ಳುಗಳನ್ನು ದಕ ಜಿಲ್ಲಾ ವಲಯದಲ್ಲಿ ನಾನು ಸಾಕಷ್ಟು ಕಂಡಿದ್ದೇನೆ, ಹೊಕ್ಕು ಹೊರಟಿದ್ದೇನೆ. ಗಟ್ಟಿ ಕೆಮ್ಮಣ್ಣಿನ ಹಾಸುಗಳಲ್ಲಿ ಬಿಳಿ-ಬೂದು ಬಣ್ಣದ ಮಿದು ಮಣ್ಣಿನ ಸೆಳಕುಗಳು ಅರ್ಥಾತ್ ಸೇಡಿ ಮಣ್ಣಿನ ಅಂಶಗಳು ಇರುತ್ತವೆ. ಅವು ನೂರಾರು ವರ್ಷಗಳ ನೀರ ಕೊರೆತದಲ್ಲಿ ತೊಳೆದು ಹೋಗಿ ಉಳಿದ ಖಾಲಿ ಜಾಗವೇ ಈ ಪೊಳ್ಳುಗಳು. ಇವು ಹೊರಲೋಕಕ್ಕೆ ಸಹಜವಾಗಿ ತೆರೆದಿರುವುದೂ ಇದೆ, ಕೆಲವೊಮ್ಮೆ ಮನುಷ್ಯ ಉದ್ದೇಶಪಟ್ಟೋ (ನೀರಿಗಾಗಿ) ಆಕಸ್ಮಿಕದಲ್ಲೋ ತೆರೆಯುವುದೂ ಇದೆ. ಅವನ್ನು

ಪ್ರಾದೇಶಿಕವಾಗಿ ಬಿಲ, ಮಾಟೆ, ಬಾಂಜಾರ, ಗವಿ, ಗುಹೆ ಎಂದೆಲ್ಲ ಹೆಸರಿಸುತ್ತಾರೆ. ಅವು ಗಾತ್ರಾನುಸಾರ ಕೆಲವು ಉಪಯೋಗಗಳಿಗೆ ಒದಗುವುದನ್ನೂ ನಾವು ಕಾಣಬಹುದು. ಹೀಗೇ ಅನ್ಯ ಕಲ್ಲ ಹಾಸುಗಳಲ್ಲೂ ಪ್ರಾಕೃತಿಕ ಗುಹೆಗಳಿರುತ್ತವೆ, ಪ್ರಕ್ರಿಯೆ ತುಸು ಭಿನ್ನ. ಆ ಗುಹೆಗಳು ಹೆಚ್ಚು ದೃಢವೂ ದೀರ್ಘಾಯುಷಿಯೂ ಆಗಿರುತ್ತವೆ. ಅಂಥವು ಭಾರತದಲ್ಲಿ ಮುಖ್ಯವಾಗಿ ಉತ್ತರ-ಪೂರ್ವ ಭಾಗದಲ್ಲೂ (ನೋಡಿ: ‘ಮೇಘಾಲಯದ ಗಿರಿ ಕೊಳ್ಳಗಳಲ್ಲಿ’) ಪೂರ್ವ ಘಟ್ಟಗಳಲ್ಲೂ ಹೆಚ್ಚಿವೆಯೆಂದು ಕೇಳಿದ್ದೆ, ಕಾಣುವ ಅವಕಾಶವಾಗಿರಲಿಲ್ಲ. 

ಪ್ರಸ್ತುತ ಯಾನಪೂರ್ವದಲ್ಲಿ, ನಕ್ಷೆಗಳ ಮೇಲೆ ಭಾರತದ ಪೂರ್ವ ಘಟ್ಟಗಳನ್ನು ಅನುಸರಿಸಿದ್ದೆ. ಪೂರ್ವ ಘಟ್ಟಗಳು ನಮ್ಮ ಪಶ್ಚಿಮಘಟ್ಟದಷ್ಟು ಖ್ಯಾತವೇನೂ ಅಲ್ಲ. ಆದರೆ ಪ್ರಕೃತಿಯಲ್ಲಿ ಎಲ್ಲಕ್ಕೂ ಅವವುಗಳ ಪ್ರಾಮುಖ್ಯತೆ ಇದ್ದೇ ಇದೆ. ಆ ಅರಿವಿನಲ್ಲಿ ವಿಶಾಖಪಟ್ಟಣದಿಂದ ಉತ್ತರಕ್ಕೆ ನನ್ನನ್ನು ಆಕರ್ಷಿಸಿದ ಹೆಸರು ಬೊರ್ರಾ

ಗುಹೆ ಮತ್ತು ಅದಕ್ಕೆ ಸೇರಿದಂತೆ - ಅರಕ್ಕು ಕಣಿವೆ. ಇವು ಸುಣ್ಣದ ಕಲ್ಲಿನ ರಚನೆಗಳು ಮತ್ತು ದಾಖಲಾರ್ಹ ಗಾತ್ರದವುಗಳೇ ಆದ್ದರಿಂದ ನಮ್ಮ ‘ಅವಶ್ಯ ಭೇಟಿ’ ಪಟ್ಟಿಗೆ ಸೇರಿಸಿಕೊಂಡಿದ್ದೆ. 

ಬೆಳಿಗ್ಗೆ (೧೨-೫-೯೬) ವಿ.ಕೆ.ಎಸ್ ಮೂರ್ತಿಯವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದೆವು. ನಾವು ಹೋಟೆಲಿನಲ್ಲಿ ಉಳಿದದ್ದು ಕೇಳಿ ಅವರು ಬೇಸರಿಸಿದರೂ ನಮ್ಮ ಮುಂದಿನ ಕಲಾಪಕ್ಕೆ ಸಲಹೆ ಸಹಕಾರಗಳನ್ನು ಧಾರಾಳ ಕೊಟ್ಟರು. ಆ ಪ್ರಕಾರ ನಾವು ಅವರ ಮನೆಗೇ ಹೋಗಿ, ನಮ್ಮ ದೊಡ್ಡ ಹೊರೆಗಳನ್ನು ಇಳಿಸಿಟ್ಟೆವು. ಮತ್ತೆ ಬೊರ್ರಾ ಗುಹೆಗಳ ನಾಮ ಜಪದೊಂದಿಗೆ, ನೇರ ಉತ್ತರದ ದಾರಿ ಹಿಡಿದೆವು. (‘ನಾಮಜಪ’ ತಮಾಷೆಗೆ ಹೇಳಿದ್ದಲ್ಲ - ಅಮುಖ್ಯ ರಸ್ತೆಗಳ ಕವಲುಗಳಲ್ಲಿ ಕಳೆದು ಹೋಗದಂತೆ ಜನ ಸಿಕ್ಕಲ್ಲೆಲ್ಲ "ಬೊರ್ರಾ ಬೊರ್ರಾ..." ಎನ್ನುವುದು ಅನಿವಾರ್ಯವಾಗಿತ್ತು!) ವಿಶಾಖಪಟ್ಟಣದ ಬಳಿ ಕರಾವಳಿ ಬಹುತೇಕ ಪಶ್ಚಿಮಕ್ಕೆ ಒಳ

ಸರಿದಿದೆ. ಅಂದರೆ ಇದಕ್ಕೆ ಲಂಬಕೋನದಲ್ಲಿರುವ ಬೊರ್ರಾಗುಹೆಗಳ ದಾರಿ ಉತ್ತರಮುಖಿಯೇ ಆಗಿತ್ತು. 

ಏಳೂ ಮುಕ್ಕಾಲು ಗಂಟೆಗೆ ವಿಶಾಖಪಟ್ಟಣ ಬಿಟ್ಟವರು ಸ್ವಲ್ಪದರಲ್ಲೇ ಘಟ್ಟ ದಾರಿ ಹಿಡಿದಿದ್ದೆವು. ಕೊತ್ತವಲಸ, ಶೃಂಗಾರವರಪು ಕೋಟಾ ಎಂಬ ಸಣ್ಣ ಊರುಗಳೊಡನೆ ಘಟ್ಟ ದಾರಿ ಹೊಸೆದುಕೊಂಡಿತ್ತು. ಸಾಕಷ್ಟು ಔನ್ನತ್ಯ ಗಳಿಸಿದರೂ ಬಿರು ಬೇಸಗೆಯ ಹೊಡೆತದಲ್ಲಿ ಪರಿಸರವೆಲ್ಲ ಭಣಭಣ. ತ್ಯಾಡ ಎಂಬಲ್ಲಿ ನಾವು ದಾಟುತ್ತಿದ್ದಾಗ ಈ ಖಾಲಿತನದೊಳಗೇನೋ

ಭಾರೀ ಗದ್ದಲ ಕೇಳಿ ಒಮ್ಮೆಗೆ ಬೆಚ್ಚಿಬಿದ್ದಿದ್ದೆವು. ಮತ್ತೆ ನೋಡಿದರೆ, ನಮ್ಮಿಂದ ಅನತಿ ದೂರದ ಗುಡ್ಡೆಯ ಮಗ್ಗುಲಿನಲ್ಲಿ ಮ್ಯಾಂಗನೀಸ್ ಹೊರೆ ಹೊತ್ತ ರೈಲೋಡಿತ್ತು. ಅದುವರೆಗೆ ನಾವು ಗಮನಿಸದೇ ಇದ್ದ ಗುಹಾಮುಖದಿಂದ ರೈಲು ಧುತ್ತೆಂದು ಪ್ರಕಟವಾಗಿ ಮತ್ತೆ ಐವತ್ತೋ ನೂರು ಮೀಟರ್ ಅಂತರದಲ್ಲಿ ಇನ್ನೊಂದೇ ಗುಹೆಗೆ ಛುಪ್ಪೆಂದು ತೂರಿ ಮಾಯವಾಗಿತ್ತು! ಆ ದಿನಗಳಲ್ಲಿ ಅದು ಕೇವಲ ಕಬ್ಬಿಣದ ಅದಿರು ಸಾಗಣೆ ಮಾಡುತ್ತಿತ್ತಂತೆ. ಅದರಲ್ಲಿ ೩೧ಕ್ಕೂ ಮಿಕ್ಕು (ಆಧುನಿಕ)

ಗುಹೆಗಳನ್ನು ಕೋದಿದ್ದಾರೆ. ಈ ದಿನಗಳಲ್ಲಿ ಅದನ್ನು ಪ್ರವಾಸೀ ಆಕರ್ಷಣೆಯಾಗಿಯೂ ಪರಿವರ್ತಿಸಿದ್ದಾರೆ. ಇಂದು ವಿಶಾಖಪಟ್ಟಣದಿಂದ ಬೊರ್ರಾ ಗುಹೆಗಳಿಗೆ ಸಾರ್ವಜನಿಕ ರೈಲು ಸಂಪರ್ಕವೂ ಇದೆ. ಬಸ್ಸು, ಕಾರುಗಳಲ್ಲಿ ಪ್ಯಾಕೇಜ್ ಟೂರು ಕೊಡುವವರೂ ಪ್ರಾಕೃತಿಕ ಬೊರ್ರಾ ಗುಹೆಗಳೊಡನೆ ಈ ಮಾರ್ಗದ ಆಯ್ದ ಕೆಲವು ರೈಲ್ವೇ ಗುಹೆಗಳ ದರ್ಶನವನ್ನೂ ಸೇರಿಸಿಕೊಂಡಿದ್ದಾರೆ! 

ಕೊನೆಯಲ್ಲಿ ನಮ್ಮ ವಾಹನ ಮಾರ್ಗ ಸಣ್ಣ ಗಿರಿಶ್ರೇಣಿಯನ್ನು (ಅನಂತಗಿರಿ) ದಾಟಿ ತುಸು ಇಳಿದು, ಬಹುತೇಕ ಭಾರೀ ಕಗ್ಗಲ್ಲ ಹಾಸಿನ ಪ್ರಪಾತದಂಚಿಗೆ ಮುಗಿದಿತ್ತು. ಇದು ಈಚೆಗೆ ನಾವು ಮೇಘಾಲಯ ಪ್ರವಾಸದಲ್ಲಿ ಕಂಡ ಕ್ರೆಂ ಪುರಿ ಗುಹಾಜಾಲಕ್ಕೆ ಬಸ್ ಇಳಿದ ಜಾಗದಂತೇ ಇತ್ತು. ಒಂದೇ ವ್ಯತ್ಯಾಸ - ಕ್ರೆಂಪುರಿ ಗುಹಾವಲಯದ್ದು ನಿತ್ಯ ಹರಿದ್ವರ್ಣ ಕಾಡು, ಕಣಿವೆಯ ಆಳ ಕಾಣುತ್ತಿರಲಿಲ್ಲ. ಬೊರ್ರಾ ಗುಹಾಮುಖ ಬೆಂಗಾಡು. ಅದರ ಆಳದಲ್ಲಿ ಅಲ್ಲಿನ ಗುಹಾಜಾಲದ ನಿರ್ಮಾತೃ - ಗೋಸ್ತನೀ ನದಿ, ಸಣ್ಣದಾಗಿ

ಹರಿಯುವುದನ್ನು ಕಾಣಬಹುದಿತ್ತು! ಕ್ರೆಂಪುರಿಯಲ್ಲಾದರೋ ಗುಹಾವಲಯ ಈಚೆಗಷ್ಟೇ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿದೆ. ವಾಹನ ಇಳಿದದ್ದೇ ೫೦-೧೦೦ ಮೀಟರ್‍ವರೆಗೆ ಮಾತ್ರ ಸ್ವಲ್ಪ ಕಾಂಕ್ರೀಟ್ ಚೆಲ್ಲಿದ್ದು ಬಿಟ್ಟರೆ, ಉಳಿದೆಲ್ಲ ‘ನಾಗರಿಕ ಸೌಲಭ್ಯ’ಗಳು ಅಪ್ಪಟ ವನ್ಯತನವನ್ನೇ ಪ್ರತಿಪಾದಿಸುತ್ತವೆ. ಆದರೆ ೨೪ ವರ್ಷಗಳ ಹಿಂದೆಯೇ ಬೊರ್ರಾ ವಲಯದ ಪ್ರವಾಸಿ ಸೌಕರ್ಯ ಚೆನ್ನಾಗಿಯೇ ಇತ್ತು. [ವಿಶಾಖಪಟ್ಟಣ ಬೆಳಿಗ್ಗೆ ೫.೩೦ಕ್ಕೆ ತಾ. ೩೩, ಬೊರ್ರಾ ಗುಹೆ

೧೧ ಗಂಟೆಗೆ ತಾ ೨೮, ಔ. ೧೫೦೦, ತೇ.೩೦%] 

ವ್ಯವಸ್ಥಿತ ತಂಗುದಾಣದಲ್ಲಿ ಬೈಕ್ ಬಿಟ್ಟು, ಟಿಕೆಟ್ ಪಡೆದು, ದೃಢ ಕೈ ತಾಂಗುಗಳಿದ್ದ ಕಾಂಕ್ರೀಟ್ ಮೆಟ್ಟಿಲುಗಳಲ್ಲಿ ಇಳಿದಿಳಿದು ಗುಹಾಗರ್ಭ ಸೇರಿದ್ದೆವು. ಒಳಗೆ ಪುಟ್ಟಪಥ, ಅಗತ್ಯವಿದ್ದಲ್ಲಿ ಕೈ ತಾಂಗು, ಗುಹೆಯ ವಿಶೇಷವನ್ನು ಕಾಣಿಸುವಂತ ವಿದ್ಯುತ್ ದೀಪ, ಗುಹಾಜಾಲದ ನಿಷೇಧಿತ ಕವಲುಗಳಲ್ಲಿ ಪ್ರೇಕ್ಷಕರು ತಪ್ಪಿ ಹೋಗದಂತೆ ತಡೆ.... ಚೆನ್ನಾಗಿದ್ದವು. ಇಲ್ಲಿನ ಬಂಡೆ ಹಾಸು ಸುಣ್ಣದ ಕಲ್ಲಿನದ್ದು. ಬೆಟ್ಟದ ಮೇಲ್ಮೈ ಇಂಗಿಸಿಕೊಂಡ ನೀರು ಸಾವಿರಾರು ವರ್ಷಗಳಲ್ಲಿ ಈ ಕಲ್ಲುಗಳ ಪದರಗಳಲ್ಲಿ ಜಿನುಗಿ ಇಳಿಯುತ್ತಲೇ ಇವೆ. ಅದರೊಡನೆ ಸುಣ್ಣದ ಅಂಶ ಕರಗಿ ಉಂಟಾದ ಸವಕಳಿಯ ದೊಡ್ಡ ಪೊಳ್ಳುಗಳೇ ಗುಹೆಗಳು. ಮತ್ತಾ ಪೊಳ್ಳಿನ ಗೋಡೆಯ ಅಂಚಿನಲ್ಲಿ, ಕೆಲವೆಡೆ ಮಾಡುಗಳಲ್ಲಿ ಈಗಲೂ ನೀರು ತೊಟ್ಟಿಕ್ಕುತ್ತಿರುವುದನ್ನು ಕಾಣಬಹುದು. ಅಲ್ಲಿ ಘನೀಕೃತ ಸುಣ್ಣದ ಅಂಶಗಳು ತಳೆದ ವಿವಿಧ ರೂಪಗಳನ್ನು (stalactites) ತೂಗು

ತೊಂಗಲೆಂದೂ ನೆಲಕ್ಕೆ ಬಿದ್ದು ಗೋಪುರಗಳಂತೆ ಬೆಳೆಯುವ ರೂಪಗಳನ್ನು ಸ್ಥಿರ ತೊಂಗಲು (Stalagmites) ಎಂದೂ ಗುರುತಿಸುತ್ತಾರೆ. ಪ್ರೇಕ್ಷಕರಿಗೆ ಬಿಟ್ಟ ಜಾಡಿನುದ್ದಕ್ಕೆ ಅವುಗಳನ್ನು ನೋಡುತ್ತಾ ಒಳ ಸಾಗುವುದು ನಿಜಕ್ಕೂ ಅದ್ಭುತ ಅನುಭವ. 

ತೊಂಗಲುಗಳ ಸ್ಪರ್ಷ ಮತ್ತು ಸಾಮೀಪ್ಯವನ್ನೂ ಸರಿಯಾಗಿಯೇ ನಿಷೇಧಿಸಿದ್ದಾರೆ. ಆದರೆ ನಮ್ಮ ಕಲ್ಪನಾ ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳಲ್ಲಿ ಏನೆಲ್ಲ ರೂಪಗಳನ್ನು ಕಾಣುವ ಸ್ವಾತಂತ್ರ್ಯ ಧಾರಾಳ ಇದೆ. ಅಂಥ ಕಲ್ಪನೆಗಳಲ್ಲಿ ಜನಪ್ರಿಯವಾದವನ್ನು ವ್ಯವಸ್ಥಾಪಕರು ಅಲ್ಲಲ್ಲಿ ಬರೆದು ಹಾಕಿದ್ದೂ ಕಾಣಬಹುದು. ಉದಾಹರಣೆಗೆ - ಶಿವ ಪಾರ್ವತಿ, ತಾಯಿ ಮಗು, ಅಣಬೆ, ದೇವಳ, ಇಗರ್ಜಿ, ಮುದಿಯನ ಗಡ್ಡ, ಮಿದುಳು, ಮೊಸಳೆ... ಇತ್ಯಾದಿ. ಈ ಕಲ್ಪನಾ ಸ್ವಾತಂತ್ರ್ಯ ಭಾವಾತಿರೇಕಕ್ಕೆ ಒಳಪಡದ ಎಚ್ಚರವನ್ನು ಮಾತ್ರ ವ್ಯವಸ್ಥಾಪಕರು ಸದಾ ಕಾಪಾಡಿಕೊಳ್ಳಬೇಕಾಗುತ್ತದೆ.

ಮೇಘಾಲಯದ ಗುಹಾ ಸಂದರ್ಭದಲ್ಲಿ ಕ್ರೆಂಪುರಿಯ ಗುಹೆಯಲ್ಲಿ ಸಣ್ಣದಾಗಿ, ಮುಂದುವರಿದಂತೆ ಮೌಜಿಬುಯಿನ್ ಗುಹೆಯಲ್ಲಿ ತುಸು ದೊಡ್ಡದಾಗಿ ಇಂಥ ಅತಿರೇಕಗಳನ್ನು ನಾವು ಕಂಡಿದ್ದೇವೆ. [ಕ್ರೆಂಪುರಿಯ ಒಂದು ಕೊನೆಯಲ್ಲಿ ‘ಲಿಂಗದರ್ಶನ’ವಾಗದೇ ಗುಹಾಶೋಧ ಅಪೂರ್ಣ ಎನ್ನುವ ಮಾತು ಕೇಳಿತ್ತು. ಮೌಜಿಬುಯಿನ್ನಿನಲ್ಲಂತೂ ಧಾರ್ಮಿಕ ಕ್ರಿಯೆಗಳನ್ನು ಬೋರ್ಡು ಹಾಕಿಯೇ ನಿಷೇಧಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೇಲೆ ಕೊಟ್ಟ ಸೇತುವಿನ ಲೇಖನವನ್ನೇ ನೋಡಿ] 

ಸುಮಾರು ಒಂದೂ ಕಾಲು ಗಂಟೆಯ ಕಾಲ ಬೊರ್ರಾ ಗುಹೆಗಳನ್ನು ನೋಡಿದೆವು. ಮತ್ತೆ ಪ್ರಚಾರಗಳಲ್ಲಿ ಜೊತೆಗೊಟ್ಟ ಅರಕ್ಕು ಕಣಿವೆಯನ್ನೂ ನೋಡಿಯೇ ಬಿಡೋಣವೆಂದು ಬೈಕೋಡಿಸಿದೆವು. ಘಟ್ಟದ ನೆತ್ತಿಯಲ್ಲೇ ಸುಮಾರು ಮೂವತ್ತು ಕಿಮೀ ಸುತ್ತಾಡಿ, ಹತ್ತಿಳಿದು ಸಾಗುವ ದಾರಿ. ಘಟ್ಟಕ್ಕೆ ಸಹಜವಾಗಿ

ಮಾರ್ಗಸೂಚಿಗಳು ಕಾರ್ತಿಕವೋ ಮತ್ತೊಂದೋ ಹೆಸರಿನ ಜಲಪಾತಗಳ ಉಲ್ಲೇಖವನ್ನು ಅಲ್ಲಿ ಇಲ್ಲಿ ಮಾಡುತ್ತವೆ. ಆದರೆ ಬೇಸಗೆಯ ಉತ್ತುಂಗದಲ್ಲಿ ಅವೆಲ್ಲ ನಮ್ಮ ನಿರೀಕ್ಷೆಯನ್ನು ಹುಸಿ ಮಾಡಿದವು. ಅಷ್ಟೇಕೆ ಕೊನೆಯಲ್ಲಿ ‘ಅರಕ್ಕು ಕಣಿವೆ’ ಎಂಬ ನಿಲುಗಡೆಯೂ ದೊಡ್ಡ ಠುಸ್ ಪಟಾಕಿ! ಅಲ್ಲಿನ ದೂಳು ಹಾರುವ ಮೈದಾನದಲ್ಲಿದ್ದ ಜೋಪಡಿ ಹೋಟೆಲಿಗೆ ನಮ್ಮ ಹೊಟ್ಟೆಗಾದರೂ ಏನಾದರೂ ಹಾಕೋಣ ಎಂದು ನುಗ್ಗಿದ್ದೆವು. ಚಾಯ್ವಾಲಾನಲ್ಲಿ ನಾವು ಅರಕ್ಕು ಕಣಿವೆಯ ಬಗ್ಗೆ ಸಣ್ಣ ವಿಚಾರಣೆ ನಡೆಸಿದ್ದೆವು. ಆತ "ಛೆ, ಈಗಲ್ಲ. ನೀವು ಸೀಸನ್ನಿನಲ್ಲಿ ಬರಬೇಕು, ಇಲ್ಲಿನ ಚಂದ ನಿಮಗೆಲ್ಲೂ ಸಿಗದು..." ಎಂದು ಎದೆದುಂಬಿ ಹಾಡಿದ. ಪಶ್ಚಿಮ ಘಟ್ಟದ ಘನಸ್ಥಿಕೆ ಮತ್ತು ನಿತ್ಯಹಸುರಿನ ಕಾಡು ಕಂಡ ನಮಗೆ, ಅವನ ಅಜ್ಞಾನಕ್ಕೆ ಕನಿಕರಿಸುವುದೋ ವ್ಯಾಪಾರೀ ಜಾಣ್ಮೆಗೆ (ನಾಳೆ ನಮ್ಮ ಮಾತು ಕೇಳಿ ನೀವೆಲ್ಲ ಹೋಗದಿದ್ದರೆ!!) ನಗುವುದೋ ಅರ್ಥವೇ ಆಗಲಿಲ್ಲ. 


ಒಂದೂವರೆ ಗಂಟೆಗೆ ಅರಕ್ಕು ಕಣಿವೆ ಬಿಟ್ಟವರು ಘಾಟಿ ದಾರಿಯನ್ನು ವಿರಾಮದಲ್ಲೇ ಅನುಭವಿಸುತ್ತ ವಿಶಾಖಪಟ್ಟಣಕ್ಕೆ ಮುಟ್ಟುವಾಗ ಸಂಜೆ ನಾಲ್ಕೂವರೆಯಾಗಿತ್ತು. ಮೂರ್ತಿಯವರಿಂದ ನಮ್ಮ ಹಡಪಗಳನ್ನು ಚುರುಕಾಗಿ ಸಂಗ್ರಹಿಸಿ, ಮತ್ತೆ ಹೆದ್ದಾರಿಗಿಳಿದು, ಇನ್ನಷ್ಟು ದಕ್ಷಿಣಕ್ಕೆ ಬೈಕೋಡಿಸಿದೆವು. ನೆನಪಿದೆಯಲ್ಲಾ ಹಿಂದೆ ಹೇಳಿದ್ದು - ಇಂದಿನ ಗೆಯ್ಮೆ ನಾಳೆಗೆ ಠೇವಣಿ! ಆ ರಾತ್ರಿಗೆ ಕಾಕಿನಾಡ ತಲಪಬೇಕೆಂದೇ ಗುರಿ ಇಟ್ಟುಕೊಂಡಿದ್ದೆವು. ಉತ್ತಮ ದಾರಿ

ಹಾಗೂ ಕನಿಷ್ಠ ಎರಡು ಗಂಟೆಗಳ ಹಗಲಿನ ಬೆಳಕು ನಮ್ಮೊಡನೆ ಸಹಕರಿಸುವಾಗ ಮತ್ತೊಂದಷ್ಟು ಕತ್ತಲಲ್ಲಿ ಪ್ರಯಾಣಿಸಿ ಒಟ್ಟಾರೆ ನೂರೈವತ್ತು ಕಿಮೀ ಓಡುವುದು ದೊಡ್ಡ ಸವಾಲಲ್ಲ ಎಂದೂ ಅಂದುಕೊಂಡಿದ್ದೆವು. ಆದರೆ.... 

ಬಿಸಿಲಿಳಿಯುತ್ತಿದ್ದಂತೆ ಹೆದ್ದಾರಿಯ ವಾಹನ ಸಮ್ಮರ್ದ ಹೆಚ್ಚಾಗಿತ್ತು. ಅತಿವೇಗಕ್ಕಿಳಿಯದ ನಮ್ಮ ಸಂಯಮವೂ ಪೂರ್ವ ಕರಾವಳಿಯಾದ್ದರಿಂದ ಸೂರ್ಯಾಸ್ತವೂ ಚುರುಕು ಮುಟ್ಟಿಸಿತು. ಅದಕ್ಕೂ ಹೆಚ್ಚಿಗೆ ನಾವು ನಿರೀಕ್ಷಿಸದ ಕತ್ತಲು ಬೆಳಕಿನಾಟ ಮುಸ್ಸಂಜೆಯೊಡನೇ ತೊಡಗಿ, ನಮ್ಮನ್ನು ಪರದಾಡಿಸಿತು. ಆರೋಣಿ (ಷಣ್ಪಥ) ದಾರಿಯ ಶಿಸ್ತನ್ನು ಎಲ್ಲ ವಾಹನಗಳು ಚೆನ್ನಾಗಿಯೇ ನಿರ್ವಹಿಸುತ್ತಿದ್ದವು. ಆದರೆ ಎದುರಿನಿಂದ ಬರುವ ಮೂರೋಣಿ ವಾಹನಗಳ ಬೆಳಕಿನ ಕೋಲುಗಳು ಮಾತ್ರ ವಿಭಾಜಕದ ಮರ್ಯಾದೆ ಬಿಟ್ಟು ನಮ್ಮ ಕಣ್ಣು ಕುಕ್ಕುತ್ತಿದ್ದವು. ನಮ್ಮ ವಾಹನ ಚಾಲಕರಿಗೆ ದೀಪ ಮತ್ತು ಹಾರ್ನ್ ಮೋಹ ವಿಪರೀತ. ಆಗೀಗ ಪೋಲಿಸರ ಕಿವಿ

ಹೊಟ್ಟಾದಾಗ ದೊಡ್ಡ ವಾಹನಗಳ ಮೇಲೆ ‘ಹಾರ್ನ್ ರೇಡ್’ ಮಾಡಿ, ಕಿತ್ತು ಹಾಕುವುದಾದರೂ ನೋಡಿದ್ದೇವೆ. ದೀಪಗಳ ಪ್ರಖರತೆಯ ಕುರಿತ ಶಿಸ್ತನ್ನು ಹೇರಿದ್ದು ಕಂಡೇ ಇಲ್ಲ. ನಮಗೋ ಉಭಯ ಸಂಕಟ. ಕಣ್ಣು ಕತ್ತಲಿಟ್ಟಾಗ ನುಗ್ಗಿ, ಎದುರು ನಿಧಾನಿಸುವ ಅಥವಾ ನಿಂತ ಅನ್ಯ ವಾಹನಗಳಿಗೆ ತಲೆ ಚಚ್ಚಿಕೊಳ್ಳುವುದೇ? ಅದು ಬಿಟ್ಟು, ನಾವು ಒಮ್ಮೆಲೇ ಬದಿಗೆ ಸರಿದೋ ನಿಧಾನಿಸಿಯೋ ಹಿಂದಿನವರಿಂದ ಗುದ್ದಿಸಿಕೊಳ್ಳುವುದೇ? ಅಸಹಾಯಕತೆಯಲ್ಲಿ ಎರಡೆರಡು ಬಾರಿ

ನಿಂತು ಯೋಚಿಸಿದೆವು. ಕೊನೆಗೆ ಮುಂದಿನ ದೊಡ್ಡ ಊರು ಸಿಗುವವರೆಗಾದರೂ ಹೋಗಲು ಸಣ್ಣ ಉಪಾಯ ಕಂಡುಕೊಂಡೆವು. ಸಾಧಾರಣ ವೇಗದ ಭಾರೀ ಲಾರಿಯೊಂದರ ಬೆನ್ನು ಹಿಡಿದೆವು. ಅದು ನಮ್ಮ ಕಣ್ಣು ಕುಕ್ಕುವ ಬೆಳಕೋಲುಗಳಿಗೆ ಗುರಾಣಿ. ಉಪಾಯದ ಪೂರ್ಣ ಯಶಕ್ಕಾಗಿ ನಮ್ಮ ಲಾರಿಯ ನಡುವಿನ ಅಂತರವನ್ನು ಆದಷ್ಟು ಕಡಿಮೆ ಇಟ್ಟುಕೊಳ್ಳಬೇಕಾಗುತ್ತಿತ್ತು. ಲಾರಿಯ ಚತುಶ್ಚಕ್ರ ತಾಳಕ್ಕೆ ನಮ್ಮ ದ್ವಿಚಕ್ರ ರಾಗವನ್ನು ಹೊಂದಿಸಿದೆವು. ಮನಸ್ಸಿನೊಳಗೇ ಲಾರಿ

ಫಕ್ಕನೆ ನಿಲ್ಲಲಾರದು ಮತ್ತು ಅದರ ಎರಡು ಸಾಲು ಚಕ್ರಗಳ ನಡುವೆ ಸತ್ತ ನಾಯಿಯೋ ಬೆಕ್ಕೋ ಬಿದ್ದಿರಲಾರದು ಎಂದು ಹಾರೈಸುತ್ತ ಧಾವಿಸಿದೆವು. ರಾತ್ರಿ ಎಂಟೂವರೆ ಸುಮಾರಿಗೆ ಸಿಕ್ಕ ತುನಿ, ಸಾಕಷ್ಟು ದೊಡ್ಡ ಪೇಟೆಗೆ, ನಮ್ಮ ದಿನದ ಓಟ ಮುಗಿಸಿದೆವು. ಕಾಕಿನಾಡ ಇನ್ನು ಸುಮಾರು ಐವತ್ತೇ ಕಿಮೀ ದೂರ, ಅಲ್ಲಿ ನಮಗೆ ಎರಡು ಹಾರ್ದಿಕ ವಸತಿ ಸೌಕರ್ಯಗಳು ಕಾದಿವೆ ಎಂಬ ಅರಿವು ಕಾಡುತ್ತಲೇ ಇತ್ತು. ಆದರೆ ಭಂಡ ಧೈರ್ಯ ಮಾಡದೆ, ಸಿಕ್ಕ ಬಾಲಾಜಿ ಲಾಜಿನಲ್ಲಿ ಕೋಣೆ ಹಿಡಿದು ರಾತ್ರಿಗೆ ಸಂದೆವು. (ದಿನದ ಓಟ ೩೪೧ ಕಿಮೀ) 

ಮೊದಲು ಅದೇನು ‘ಎರಡು ಹಾರ್ದಿಕ ಸೌಕರ್ಯ’ ಎನ್ನುವ ಕುರಿತು ಎರಡು ಮಾತು. ನನ್ನ ಬಹುಕಾಲದ ಕಿರಿಯ ಮಿತ್ರ ಪ್ರಸನ್ನ ಕಾವೂರು ಮತ್ತವನ ಕುಟುಂಬ ನಿಮಗೆ ತಿಳಿದದ್ದೇ. (ನೋಡಿ: ಸಾವಿರ ಕೊಟ್ಟು ಲಕ್ಷ ಗಳಿಸುವ ಯೋಗ ) ಅವನ ತಂಗಿ - ಪ್ರತಿಭಾಳ ಮಾವ, ಕೃಷ್ಣಮೂರ್ತಿಯವರು ಕಾಕಿನಾಡದ ‘ಗಣೇಶ ಭವನ’ದ

ಯಜಮಾನರು. ಯೋಜನಾ ಹಂತದಲ್ಲಿ ನಾನು ಪ್ರಸನ್ನನ ಮೂಲಕ ಕಾಕಿನಾಡ ಮುಟ್ಟುವ ಸುದ್ದಿ ಕೊಟ್ಟೆ. ಕೂಡಲೇ ಕೃಷ್ಣಮೂರ್ತಿಯವರಿಂದ ನಾವು ಆಪ್ತ ನೆಂಟರೋ ಎಂಬಂತೇ ಕರೆ ಬಂದಿತ್ತು. ಮತ್ತೊಬ್ಬರು ಕೆಸಿ ಕಲ್ಕೂರರ ದೊಡ್ಡ ಯೋಜನೆಯ ಭಾಗ, ಕಾಕಿನಾಡದ ವೀನಸ್ ಲಾಜ್ ಹೋಟೆಲಿನ ಯಜಮಾನರು - ವೈ.ವೆಂಕಟೇಶ್. ಪರಿಸ್ಥಿತಿಯ ಪೀಕಲಾಟದಲ್ಲಿ

ನಾವು ಕಾಕಿನಾಡವನ್ನೇ ಮುಟ್ಟಲಿಲ್ಲ. 

ಬೆಳಿಗ್ಗೆ (೧೩-೫-೯೬) ಆರು ಗಂಟೆಗೆ ಮತ್ತೆ ಅದೇ ಹೆದ್ದಾರಿ ಪಯಣ. ಹತ್ತಿಪ್ಪತ್ತು ಕಿಮೀ ಕಳೆಯುವುದರೊಳಗೆ ಸಿಕ್ಕ ಊರು ಅನ್ನಾವರಂ. ಅದರಲ್ಲೂ ಹೆದ್ದಾರಿಯ ಬಲ ಮಗ್ಗುಲಿನಲ್ಲಿ ಕಾಣಿಸಿದ ಸಣ್ಣ ಗುಡ್ಡೆಯ (ರತ್ನಗಿರಿ) ಮೇಲಿನ ಭಾರೀ ದೇವಳ

ಸಂಕೀರ್ಣ ನಮ್ಮ ಕುತೂಹಲ ಕೆರಳಿಸಿತು. ಬಹುಶಃ ಕಲ್ಕೂರರೇ ನನ್ನಲ್ಲಿ ಟಿಪ್ಪಣಿ ಹಾಕಿಸಿದ್ದರು, ಅನ್ನಾವರಂನ ವೀರ ವೆಂಕಟ ಸತ್ಯನಾರಾಯಣ ದೇವಸ್ಥಾನ ನೋಡುವಂತದ್ದು! ನೋಡಿಯೇ ಬಿಡೋಣವೆಂದು ಹೆದ್ದಾರಿ ಬಿಟ್ಟು ಗುಡ್ಡೆ ಏರಿಸಿದೆವು. ವ್ಯವಸ್ಥಿತ ತಂಗುದಾಣದಲ್ಲಿ ಬೈಕ್ ಬಿಟ್ಟು ಸುತ್ತಾಡಿದೆವು. ಗುಡ್ಡೆಯ ಇನ್ನೊಂದು ತಪ್ಪಲಿನ ಪಂಪಾ ಸಾಗರ ಸೆಕೆಯ ದಿನಗಳಲ್ಲೂ ನಮ್ಮ ಕಣ್ಣು ತಂಪು ಮಾಡಿತು. ದೇವಸ್ಥಾನದ ಐತಿಹಾಸಿಕ ವಿವರಗಳು ನನ್ನ ನೆನಪಿನಲ್ಲುಳಿದಿಲ್ಲ. ಆದರೆ ಅದರ ಸುತ್ತಣ

ಆಧುನಿಕ ಕಟ್ಟಡ ಸಂಕೀರ್ಣ, ಸೇವಾದಾರರ ನಿತ್ಯ ಜಾತ್ರೆ ಮತ್ತು ವಿವಿಧ ಕಲಾಪಗಳನ್ನು ಬೆರಗುಗಣ್ಣುಗಳಲ್ಲಿ ತುಂಬಿಕೊಂಡೆವು. ಎಲ್ಲದರ ಶುಚಿ, ಶಿಸ್ತನ್ನು ಸುಮಾರು ಅರ್ಧ ಗಂಟೆಯ ಕಾಲ ಸುತ್ತಾಡಿ ಮೆಚ್ಚಿಕೊಂಡೆವು. ಈ ದೇವಳ ಸಾಮೂಹಿಕ ಸತ್ಯನಾರಾಯಣ ವ್ರತ ಮತ್ತು ಪೂಜೆಯಲ್ಲಿ ಬಹಳ ದೊಡ್ಡ ದಾಖಲೆಯನ್ನು ಮಾಡಿದೆ, ಮಾಡುತ್ತಲೇ ಇದೆ. ಇಲ್ಲಿ ಬಹುಶಃ ವರ್ಷದ ಎಲ್ಲ ದಿನಗಳಲ್ಲೂ ಎಲ್ಲ ಹೊತ್ತುಗಳಲ್ಲೂ ಸತ್ಯನಾರಾಯಣ ವ್ರತ ನಡೆಯುತ್ತಲೇ ಇರುತ್ತದೆ. ಭಕ್ತಾದಿಗಳ

ಅಗತ್ಯಾನುಸಾರ ಒಂದು ಕುಟುಂಬದಿಂದ ಹಿಡಿದು ಅನೇಕ ತಂಡಗಳವರೆಗೆ, ದೇವಸ್ಥಾನ ಸಂಕೀರ್ಣದ ವಿವಿಧ ಭವನಗಳಲ್ಲಿ ಪೂಜಾಕ್ರಿಯೆಗಳು ಸಾಂಗವಾಗಿ ನಡೆಯುತ್ತಲೇ ಇರುತ್ತವೆ. ಆಂಧ್ರದೊಳಗೆ ಭಕ್ತಜನ ಪ್ರೀತಿಯಲ್ಲಿ ತಿರುಪತಿಯ ವೆಂಕಟರಮಣನಿಗೆ - ಫಸ್ಟ್ ರ್ಯಾಂಕ್ ಆದರೆ, ಅನ್ನಾವರಂನ ವೀರ ವೆಂಕಟ ಸತ್ಯನಾರಾಯಣನಿಗೆ ಎರಡನೆಯ ರ್ಯಾಂಕ್ ಅಂತೆ. 

ಬೆಟ್ಟದ ತಪ್ಪಲಿನಲ್ಲಿ ನಮಗೆ ಒಳ್ಳೆಯ ದಕ್ಷಿಣ ಭಾರತದ

ಹೋಟೆಲ್ ಸಿಕ್ಕಿತು. ಬಹು ದಿನಗಳ ಮೇಲೆ ಸಿಕ್ಕ ಮೃದು ಇಡ್ಲಿ, ಗರಿಗರಿ ದೋಸೆಗಳನ್ನು ಪೊಗದಸ್ತಾಗಿ ಹೊಡೆದು, ಪಯಣ ಮುಂದುವರಿಸಿದೆವು. ದಾರಿಯಲ್ಲಿ ಸಿಕ್ಕ ಪೀಠಪುರ - ಶಾಕ್ತಪಂಥದ ಖ್ಯಾತ ಹದಿನೆಂಟು ಶಕ್ತಿ ಪೀಠಗಳಲ್ಲಿ ಒಂದಂತೆ. ನಾವು ಅದನ್ನು ಬೋರ್ಡಿನ ಹಂತದಲ್ಲೇ ಹಿಂದೆ ಬಿಟ್ಟು, ಎಂಟೂ ಮುಕ್ಕಾಲಕ್ಕೆ ಕಾಕಿನಾಡ ತಲಪಿದೆವು. ಅಲ್ಲಿ ಎರಡನೇ ಯೋಚನೆ ಇಲ್ಲದೆ, ನೇರ ಕೃಷ್ಣಮೂರ್ತಿಯವರ ಮನೆಗೇ ಹೋದೆವು. 

ಕೃಷ್ಣಮೂರ್ತಿಯವರ ಸಕುಟುಂಬ ಉಪಚಾರದ ಹೊಯ್ಲಿಗೆ ನಮ್ಮ ಇಡಿಯ ಸಾಹಸಯಾನದ ಬಳಲಿಕೆಗಳನ್ನೂ ಕಿತ್ತೊಗೆಯುವ ಛಲವಿತ್ತು. ಮನೆಯಲ್ಲಿ ಸ್ವಾಗತದ ಚಾ ಕೊಟ್ಟು, ಸಮೀಪದ ಅವರದೇ ಗಣೇಶಭವನಕ್ಕೆ ಒಯ್ದರು. "ಬೇಡ, ಬೇಡ" ಎಂದರೂ ಒತ್ತಾಯ ಮಾಡಿ ಭರ್ಜರಿ ತಿಂಡಿ ತಿನ್ನಿಸಿಯೇ ಬಿಟ್ಟರು. ಇನ್ನು ಮಧ್ಯಾಹ್ನ ‘ಉಪವಾಸವೇ ಮದ್ದು’ ಎಂದುಕೊಂಡೆವು. ನಮ್ಮ ಬೈಕುಗಳಿಗೆ ಬಿಲಾಸ್ ಪುರದ ಸಂಕಟದ ಮೇಲೆ ಕಾಯಕಲ್ಪದ ಅಗತ್ಯವಿತ್ತು. ಹಾಗಾಗಿ ಕೃಷ್ಣಮೂರ್ತಿಗಳ ಮಗ ಶ್ರೀಕಾಂತ ನಮಗೆ ಸ್ಥಳೀಯ ಹೀರೊಂಡಾ ಮಳಿಗೆ ಕಾಣಿಸಿದರು. ಬೈಕ್ ಮಜ್ಜನದ ವೇಳೆಗೆ ಎಂಬಂತೆ, ಅವರ ಕಾರಿಗೇರಿಸಿ, ಅಲ್ಲಿನ ಆಧುನಿಕ ಬಂದರದ ದರ್ಶನವನ್ನೂ ಮಾಡಿಸಿದರು. ಕಾಕಿನಾಡ ಪ್ರಾಕೃತಿಕವಾಗಿಯೇ ಸಮರ್ಥ ಬಂದರು. ಅಲ್ಲಿನ ಮೀನುಗಾರಿಕಾ ಚಟುವಟಿಕೆಗಳಿಗೆ ಸರಿಯಾಗಿ ಅದು ಮತ್ತಷ್ಟು ಪರಿಷ್ಕೃತಗೊಂಡಿದೆಯಂತೆ. ಅದರ ಮೇಲೆ ಆಧುನಿಕ ಬಡಾವಣೆ ಸೇರಿಸಿ, ಮತ್ತೆ ಪೆಟ್ರೋಲಿಯಮ್ ಉತ್ಪನ್ನಗಳ ಬಹುದೊಡ್ಡ ವಹಿವಾಟಿಗೂ ಹೆಸರುವಾಸಿಯಾಗಿದೆ. 


ಉಳಿದ ಸಮಯದಲ್ಲಿ ನಮ್ಮ ವಿಶ್ರಾಂತಿಗೆಂದು ಗಣೇಶ್ ಭವನದ್ದೇ ಒಂದು ಹವಾನಿಯಂತ್ರಿತ ಕೋಣೆಯನ್ನು ನಮಗೆ ಕೊಟ್ಟಿದ್ದರು. ನಾವು ಸಂಕೋಚದಲ್ಲೇ ಬೈಕುಗಳು ಸಿಕ್ಕರೆ ಸಾಕು, ಓಡಿ ಬಿಡುತ್ತೇವೆ ಎಂದು ಕಾದಿದ್ದೆವು. ಹನ್ನೆರಡೂವರೆಯ ಸುಮಾರಿಗೆ ಮಳಿಗೆ ಮಾಲಕ ಫೋನ್ ಮಾಡಿದರು. ಅಲ್ಲಿ ಕೃಷ್ಣಮೂರ್ತಿಯವರ ‘ಫಿತೂರಿ’ಯೋ ಅಥವಾ ಅವರ ಪ್ರೀತಿ ಸಾಂಕ್ರಾಮಿಕವಾಯ್ತೋ ನನಗೆ ತಿಳಿದಿಲ್ಲ. ಮಳಿಗೆ ಮಾಲಕ ಚುರುಕಾಗಿಯೇ ಬೈಕುಗಳನ್ನು ಏ-ಒನ್ ಮಾಡಿಕೊಟ್ಟದ್ದಲ್ಲದೆ, "ಪ್ರೀತಿಯೇ ಪಾವತಿ" ಎಂದು ಕೈ ಕುಲುಕಿಬಿಟ್ಟರು! ಬಾಯ್ತುಂಬಾ ಧನ್ಯವಾದ ಹೇಳಿದೆವು. ಮುಂದಿನ ದಾರಿ ಎಂದು ನಾವು ಯೋಚಿಸುವ ಮೊದಲೇ.... 

ಕೃಷ್ಣಮೂರ್ತಿಯವರು ಮೊದಲೇ ಒಂದು ರಾತ್ರಿಗಾದರೂ ನಮ್ಮಲ್ಲಿ ಉಳಿದು ಹೋಗಬೇಕು ಎಂದು ಕೇಳಿಕೊಂಡದ್ದನ್ನು ನಾವು ಸವಿನಯ ತಳ್ಳಿಹಾಕಿದ್ದೆವು. ಆದರೆ ಅವರ ಎರಡನೇ ಬೇಡಿಕೆಯನ್ನು ನಿರಾಕರಿಸುವುದು ಕಷ್ಟವೇ ಇತ್ತು. "ಬೈಕ್ ಎಷ್ಟು ಬೇಗ ಸಿಕ್ಕರೂ ಕನಿಷ್ಠ ಮಧ್ಯಾಹ್ನದ ಊಟ ನಮ್ಮಲ್ಲಿ ಮುಗಿಸಿಯೇ ಹೋಗಬೇಕು." ನಾವು ತುಂಬ ಬೇಗ ಆಯ್ತೆಂದು ತುಸು ಕೊಸರಾಡಿದೆವು. ಆದರೆ ಅವರ ಪಟ್ಟು ಗಟ್ಟಿ ಇತ್ತು. ನಮ್ಮನ್ನು ಕೇಳದೇ ಕಾಕಿನಾಡದ ಉತ್ತಮ ಹೋಟೆಲ್ ಒಂದರಲ್ಲಿ ನಮ್ಮ ‘ರಾಜಭೋಜನ’ಕ್ಕೆ ನಾಲ್ಕು ಊಟದ ಮೇಜನ್ನೇ ಕಾಯ್ದಿರಿಸಿದ್ದರು. ಮತ್ತೆ ನಾವು ಊಟದಾಟದಲ್ಲಿ ಕಳ್ಳಬೀಳದಂತೆ ನೋಡಿಕೊಳ್ಳಲು ಸ್ವತಃ ಕೃಷ್ಣಮೂರ್ತಿಯವರೇ ಬಂದು, ಆಟವಾಡದ ಕಪ್ತಾನನಂತೆ (ಅವರೂಟ ಮಾಡಲಿಲ್ಲ!) ಐದನೇ ಕುರ್ಚಿ ಹಾಕಿ ಜೊತೆಗೆ ಕುಳಿತುಬಿಟ್ಟರು. ಅಲ್ಲಿನ ಪಾಕ ವಿಶೇಷಗಳ ಪರಿಚಯ ಸಹಿತ ಒತ್ತಾಯಿಸಿ, ಒತ್ತಾಯಿಸಿ ನಮಗೆ ಉಸಿರು ತೆಗೆಯಲಾಗದಂತೆ ಹೊಟ್ಟೆ ತುಂಬಿಸಿಬಿಟ್ಟರು. ಅನ್ನಾವರಂನ ಪೊಗದಸ್ತು ತಿಂಡಿ ಮೇಲೆ ಗಣೇಶ ಭವನದ ಭರ್ಜರಿ ತಿಂಡಿ ಹೇರಿ, ಈಗ ಪಂಚ ಭಕ್ಷ್ಯ ಪರಮಾನ್ನ ನೂಕಿಟ್ಟರೆ ಏನಾಗಬೇಕು ನಮ್ಮ ಗತಿ! ನಮ್ಮ ಸಂಜೆಯ ತಿಂಡಿ, ರಾತ್ರಿಯ ಊಟಗಳೆಲ್ಲ ನಿಮ್ಮ ಕುಟುಂಬದ ಪ್ರೀತಿಗೇ ಮುಡಿಪು ಎಂದು ಅವರಲ್ಲೇ ಹೇಳಿ ಬೀಳ್ಕೊಂಡೆವು. ಸುಮಾರು ೨೩೦ ಕಿಮೀ ಅಂತರದ ವಿಜಯವಾಡಾದ ಗುರಿ ಇಟ್ಟುಕೊಂಡು, ಎರಡು ಗಂಟೆಗೆ ಕಾಕಿನಾಡ ಬಿಟ್ಟೆವು. 


ಕಾಕಿನಾಡಕ್ಕೇ ನಮ್ಮ ಪೂರ್ವ ಕರಾವಳಿಯೋಟ ಹಾಗೂ ಮಹಾ ಹೆದ್ದಾರಿಯ ಸಂಬಂಧ ಮುಗಿಸಿಕೊಂಡೆವು. (ಅಲ್ಲಿಂದ ಮುಂದೆ ಪತ್ರ ಬರೆದು ಅಂಚಿಸಿದರೂ ನಮ್ಮೊಡನೇ ಮಂಗಳೂರು ಮುಟ್ಟೀತು ಎಂದು ಅಂದಾಜಿಸಿ, ಪತ್ರ ಸಾಹಿತ್ಯ ನಡೆಸಲೇ ಇಲ್ಲ. ಆದರೆ ಯಾರಿಗೆ ತಿಳಿದಿತ್ತು, ನನ್ನ ನೆನಪಿನ ಬಲವನ್ನು ೨೪ ವರ್ಷಗಳ ಮೇಲೆ ಪರೀಕ್ಷಿಸುತ್ತೇನೆಂದು? ಮುಂದಿನ ವಿವರಗಳಲ್ಲಿ ನಾನು ಇನ್ನಷ್ಟು ಬಡವನಾಗಿದ್ದೇನೆ, ಕ್ಷಮಿಸಿ.) ದಾರಿಯಲ್ಲಿ ಸಿಕ್ಕ ರಾಮಚಂದ್ರಪುರದ ದ್ರಾಕ್ಷಾರಾಮ ದೇವಾಲಯಕ್ಕೆ ಭೇಟಿ ಕೊಟ್ಟಿದ್ದೆವು. ಗೂಗಲಣ್ಣ ‘ಭಾರತದ ಖ್ಯಾತ ಪಂಚರಾಮ ಕ್ಷೇತ್ರದಲ್ಲಿ’ ಇದೂ ಒಂದು ಎನ್ನುವುದನ್ನಷ್ಟೇ ಸದ್ಯ ಹೇಳಬಲ್ಲೆ. ಹಾಗೆ ತೀರ್ಥ ಯಾತ್ರೆ ಮಾಡುವುದಿದ್ದರೆ, ಈ ವಲಯದ ನಕ್ಷೆ, ಪೂರಕವಾಗಿ ವಿಕಿಪೀಡಿಯಾ ತೆರೆದರೆ ಒಂದೊಂದು ಕಿಮೀಗೂ ಒಂದೊಂದು ಪುಣ್ಯಕ್ಷೇತ್ರ ಕಾಣಬಹುದು. 

ಸ್ವಲ್ಪದರಲ್ಲೇ ನಾವು ಗೋದಾವರಿ ನದಿ ಹರಿದು ಬರುವ ವಿಸ್ತಾರ ಕಣಿವೆಯಲ್ಲಿದ್ದೆವು. ಗೋದಾವರಿ ಸಾಗರ ಸಮೀಪಿಸಿದಂತೆ ಕೆಲವು ಕವಲುಗಳಲ್ಲಿ ಸೀಳಿಕೊಂಡದ್ದಕ್ಕೋ ಸರಕಾರಗಳ ಉಪೇಕ್ಷೆಗೋ ದಾರಿಯ ಸತಾವಣೆ ಮತ್ತೆ ವಕ್ಕರಿಸಿತ್ತು. ಮಂದಪೇಟಾ, ತನುಕು, ತಾಡಪಲ್ಲಗುಡಂ ಎಂದೆಲ್ಲ ಊರುಗಳು ಹಿಂದೆ ಬೀಳುತ್ತಿದ್ದಂತೆ ಆಗಸದ ಬಹು ಬಣ್ಣಕ್ಕೆ ಮಸಿ ಚೆಲ್ಲಿತ್ತು. ವಿಜಯವಾಡಕ್ಕೆ ಬಿಜಯಂಗೈಯುವುದನ್ನು ಮರುದಿನಕ್ಕೆ ಮುಂದೂಡಿ, ಆರೂವರೆಗೆ ಎಲುರು ಊರಿನಲ್ಲಿ ಝಂಡಾ ಹೊಡೆದೆವು. ಕಲ್ಕೂರರ ಆತ್ಮೀಯ ಬಳಗದ ಕೆ. ಪ್ರಭಾಕರ ರಾವ್ ಯಜಮಾನಿಕೆಯ ವಸಂತ ಮಹಲ್ ಎಂಬ ಹೋಟೆಲ್ ನಮ್ಮನ್ನು ಹಾರ್ದಿಕವಾಗಿ ಉಳಿಸಿಕೊಂಡಿತು. (ದಿನದ ಓಟ ೨೬೨ ಕಿಮೀ, ತಾ. ೩೫, ತೇ. ೩೪%) 

(ಮುಂದುವರಿಯಲಿದೆ)

2 comments:

  1. ಪಂಡಿತಾರಾಧ್ಯ26 October, 2020 22:46

    ಸತ್ಯನಾರಾಯಣ ವ್ರತದ ಬಗ್ಗೆ ಶ್ರೀನಿವಾಸ ಹಾವನೂರರ ಲೇಖನ ನಿಮಗೆ ನೆನಪಿರಬೇಕು. ಸಚ್ಚಾ ಪೀರ್ ಬಾಬಾ ಸತ್ಯನಾರಾಯಣ ಆಗಿದೆ ಎಂದು ಅವರು ಸಂಶೋಧಿಸಿದ್ದಾರೆ. ಅವರಿಗೆ ವೀರವೆಂಕಟ ಸತ್ಯಾನಾರಾಯಣ ಗಮನಕ್ಕೆ ಬಂದಿಲ್ಲದಿರವಹುದು. ನಿಮಗೆ ಆ ದೇವಸ್ಥಾನ, ನಂಬಿಕೆ ವ್ರತಗಳ ಬಗ್ಗೆ ಇಷ್ಟು ವರ್ಷಗಳ ಬಳಿಕ ಕೇಳುವುದು ಫಲಪ್ರದವಲ್ಲದಿರಬಹುದು.

    ReplyDelete
  2. ಕಳೆದ ವರ್ಷ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಇಂತಹ ಒಂದು ಗುಹೆಯನ್ನು ಕಂಡು ಬಂದಿದ್ದು ನೆನಪಾಯಿತು.ಪ್ರವಾಸಿ ಸ್ನೇಹಿ ಬುರ್ರಾ ಗುಹೆಗಳು ಇಪ್ಪತ್ತೈದು ವರ್ಷಗಳ ಹಿಂದೆಯೇ ಸುಸಜ್ಜಿತವಾಗಿತ್ತು ಎನ್ನುವುದೂ ಸಂತೋಷದ ವಿಚಾರ.ಅಮೆರಿಕದಲ್ಲೂ ಅಷ್ಟೇ.ಸ್ವಾಭಾವಿಕವಾಗಿ ರೂಪುಗೊಂಡ ಗುಹಾಂತರ್ ಲೋಕದಲ್ಲಿ ಒಂದೊಂದು ರಚನೆಗೂ ಒಂದೊಂದು ಕತೆ ಹೆಣೆಯುವರು.ಇದೆಲ್ಲಾ ಪ್ರವಾಸಿ ಆಕರ್ಷಣೆಗೆ ಮಾತ್ರ.ಅದರ ಹೊರತಾಗಿಯೂ ಆ ರಚನೆಗಳು ಅದ್ಭುತವಾಗೇ ಇದೆ.ಇತ್ತೀಚೆಗೆ ಅರಕು ಕಣಿವೆ ಬಗ್ಗೆ ಪ್ರಚಾರ ಜಾಸ್ತಿ.
    ಹಗಲಿನಲ್ಲೂ ದೊಡ್ಡ ಲಾರಿಗಳ ಹಿಂದೆ ಹೋಗುವುದು ಮಹಾ ಅಪಾಯ ಕಾರಿ.ಅದೂ ಕಡಿಮೆ ಅಂತರವನ್ನು ಇಟ್ಟುಕೊಳ್ಳುವುದು ಇನ್ನೂ ಡೇಂಜರ್.ಶಿರಾಡಿ ಘಾಟಿಯಲ್ಲಿ ಓಡಾಡುವಾಗ ನಮಗೆ ಇದೇ ಅನುಭವ.ಆದಷ್ಟೂ ಅವುಗಳನ್ನು ಹಿಂದೆ ಹಾಕಿಬಿಡುತ್ತೇವೆ.ನಮ್ಮದು ಯಾವಾಗಲೂ ಹಗಲು ಪಯಣ ಮಾತ್ರ.ಕತ್ತಲಾಗುವ ಮುಂಚೆ ಊರು ಸೇರಿಕೊಳ್ಳುವುದು��

    ReplyDelete