[ಮಣಿಪಾಲದ ಡಾ| ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠಕ್ಕೆ ವೈದೇಹಿಯವರು ಗೌರವಾಧ್ಯಕ್ಷೆಯಾಗಿದ್ದ ಕಾಲವದು (೨೦೧೭). ಅವರ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ, ಅಂದು ಎರಡು ದಿನಗಳುದ್ದಕ್ಕೊಂದು ವಿಚಾರ ಸಂಕಿರಣ - `ಅಡುಗೆಮನೆ ಜಗತ್ತು’ ಸಂಘಟಿಸಿದ್ದರು. ಅದರಲ್ಲಿ ನಮ್ಮ ಮಗ – ಅಭಯಸಿಂಹನಿಗೆ ಓರ್ವ ಪ್ರಬಂಧಕಾರನ ಪಾತ್ರ ಕೊಟ್ಟಿದ್ದರು. ಆದರೆ ವೇದಿಕೆ ಮೇಲಿನ ಮಾತು ಮತ್ತು ಕೆಳಗಿನ ಕೇಳ್ಮೆ ಮೀರಿ, ಹಳೆಗಾಲದ ಅಡುಗೆಮನೆಯ ಒಲೆಕಟ್ಟೆ ಸುತ್ತಣ ಸಂವಾದದ ಸಾಧ್ಯತೆಯನ್ನೂ ಶೋಧಿಸುವ ಸಾಹಸ ವೈದೇಹಿಯವರದ್ದು. ಇದಕ್ಕೆ ಬಲಕೊಡುವಂತೆ ವೇದಿಕೆಯ ಕಲಾಪಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಹಲವು ಆಯ್ದ ಖ್ಯಾತನಾಮರನ್ನು ಕರೆಸಿದ್ದಂತೆ ನನಗೂ ದೇವಕಿಗೂ ಸ್ಪಷ್ಟ ಆಮಂತ್ರಣವನ್ನು ವೈದೇಹಿಯವರು ಹೇರಿದ್ದರು. ನಾವು ಮುಂದಾಗಿಯೇ ತಿಳಿಸಿದಂತೆ, ಮೊದಲ ದಿನವಷ್ಟೇ ನಾವು ಮೂವರೂ ಭಾಗವಹಿಸಿದ್ದೆವು. ಹಾಗೆ ನನಗೆ ಮಣಿಪಾಲದಲ್ಲಿ ದಕ್ಕಿದ ವಿಭಿನ್ನ ಅನುಭವಗಳ ಒಂದು ಸಂಕಲನವಿದು. ನಮ್ಮಲ್ಲಿ ವಿವಿಧ ಗುಣಗಳ ತರಕಾರಿಗಳ ಒಂದು ಮೇಲೋಗರವನ್ನು ‘ಅವಿಲು’ ಎನ್ನುತ್ತಾರೆ. ಇದೂ ಒಂದು ಅವಿಲು ಎಂದೇ ಭಾವಿಸಿಕೊಳ್ಳಿ.]
ಅಂದು (೨೫-೨-೨೦೧೭) ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುವವರಿದ್ದರು. ಅದನ್ನು ಪ್ರತಿಭಟಿಸುವಂತೆ `ಹಿಂದೂ’ ಮತೀಯ ಬಣಗಳು ದಕ ಜಿಲ್ಲಾ ಹರತಾಳಕ್ಕೆ ಕರೆ ಕೊಟ್ಟಿದ್ದವು. ಅದಕ್ಕೆ ಹೆದರಿ ನಾವು ಮಂಗಳೂರು ಬಿಡುವಲ್ಲಿ ತಡವಾಯ್ತು. ಮಣಿಪಾಲದ ಸಭಾಂಗಣ ತಲಪುವಾಗ, ಬಂಗಾಳದ ಹಿರಿಯ ಲೇಖಕಿ ಡಾ| ನಬನೀತಾ ದೇವ್ಸೇಣನ್, ತನ್ನ ಉದ್ಘಾಟನಾ (ಇಂಗ್ಲಿಷ್) ಭಾಷಣವನ್ನು ಕೊನೆ ಮುಟ್ಟಿಸುವುದರಲ್ಲಿದ್ದರು. ಕೇಳಿದಷ್ಟೂ ಚೆನ್ನಾಗಿತ್ತು. ವೈದೇಹಿಯವರ ಪ್ರಾಸ್ತಾವಿಕ ನುಡಿಗಳು ನಮಗೆ ತಪ್ಪಿಹೋಯ್ತು. ಉಳಿದಂತೆ....
೧. ಆರುಂಧತೀ ನಾಗ್ ಮತ್ತು ವನ್ಯಸಂರಕ್ಷಣೆ!
ಆರುಂಧತೀ ನಾಗ್ - ನಾನು ಕೆಲವು ಚಿತ್ರಗಳಲ್ಲಿ ಮತ್ತು ರಂಗಶಂಕರದಲ್ಲಿ ದೂರದಿಂದಷ್ಟೇ ಕಂಡು ತಿಳಿದವ. ಅವರ ನೈಜಾಭಿವ್ಯಕ್ತಿಯನ್ನು ತೋರುವ ಎಷ್ಟೆಲ್ಲಾ ನಾಟಕಗಳು ಬೆಂಗಳೂರು ವಲಯದಲ್ಲಿ ಮೆರೆಯುತ್ತಿದ್ದ ಕಾಲದಲ್ಲಿ ನಾನು ದೇಶಕಾಲಗಳ ಅಂತರದಿಂದ ಅನುಭವಿಸದಾದೆ. ಆ ಕೊರತೆಯನ್ನು ಸಣ್ಣದಾಗಿ ತುಂಬಿಕೊಟ್ಟ, ಕೇವಲ ವಾಚಿಕಾಭಿನಯವನ್ನಷ್ಟೇ ಕೊಟ್ಟ ನಾಟಕ ಪ್ರದರ್ಶನ – ಇತಿ ನಿನ್ನ ಅಮೃತ (ಕನ್ನಡಾನುವಾದ ಜಯಂತ ಕಾಯ್ಕಿಣಿ. ನನ್ನ ನೆನಪು ಸರಿಯಿದ್ದರೆ ಅಂದು ಸಹನಟ - ಶ್ರೀನಿವಾಸ ಪ್ರಭು, ನಿರ್ದೇಶನ – ಸದಾನಂದ ಸುವರ್ಣ). ಪ್ರಸ್ತುತ ಅಡುಗೆ ಸಂಕಿರಣದಲ್ಲಿ ಅವರು ಲೆಕ್ಕಕ್ಕೆ ಮೊದಲು ಅತಿಥಿಯಾಗಿ, ಕೊನೆಯಲ್ಲಿ (ಎರಡನೇ ದಿನ) ಸಮಾರೋಪಕಿಯಾಗಿ ಅಭಿಪ್ರಾಯ ಮಂಡಿಸುವುದಿತ್ತು. ಆರುಂಧತೀ ಉದ್ಘಾಟನಾ ಕಲಾಪಕ್ಕೆ ನಾಲ್ಕು ಔಪಚಾರಿಕ ಮಾತುಗಳನ್ನೇನೋ ಆಡಿದರು. ಆದರೆ ಚಾ ವಿರಾಮದಲ್ಲಿ ನಿಜದ ಅಡುಗೆಮನೆಯ ಅನೌಪಚಾರಿಕ ಮಾತಿಗೆ ಅವರು ಸಿಕ್ಕಿದ್ದು ನಮಗೆ ಹೆಚ್ಚಿನ ಸಂತೋಷ ಕೊಟ್ಟಿತು.
ಮಾತಿನ ವಿಷಯವಾದರೂ ಸುಮಾರು ಎಂಟು ವರ್ಷಗಳ ಹಿಂದಿನದು. ಆಗ ವನ್ಯವಿಜ್ಞಾನಿ ಉಲ್ಲಾಸ ಕಾರಂತರ ಬಳಗ, ಸೀಮಿತ ಸಂಖ್ಯೆಯಲ್ಲಿ ತೀವ್ರ ಆಸಕ್ತ ವಿದ್ಯಾರ್ಥಿಗಳಿಗೆ ವನ್ಯಜೀವಶಾಸ್ತ್ರದ ವಿಶೇಷ ಅಧ್ಯಯನಾವಕಾಶ ಶುರು ಮಾಡಿದ್ದರು. (ಎರಡು ವರ್ಷಗಳ ಅಧ್ಯಯನ, ಎಲ್ಲ ಕೂಡಿಬಂದರೆ ಎರಡು ವರ್ಷಕ್ಕೊಮ್ಮೆ ಮಾತ್ರ ಪ್ರವೇಶ) ಆರುಂಧತೀ-ಶಂಕರನಾಗರ ಏಕೈಕ ಮಗಳು – ಐಶ್ವರ್ಯಾನಾಗ್, ಯೋಗ್ಯತೆಯಿಂದಲೇ ಆ ವಿದ್ಯಾರ್ಥಿ ಬಳಗದಲ್ಲಿದ್ದಳು. ಅವರ ಅಧ್ಯಯನದ ಪರೋಕ್ಷ ಅಂಗವಾಗಿ ವಿದ್ಯಾರ್ಥಿಗಳು ಬಿಡುವಿನ ದಿನಗಳಲ್ಲಿ ವಿವಿಧ ವನ್ಯಪ್ರದೇಶಗಳ ಅನೌಪಚಾರಿಕ ಭೇಟಿಯನ್ನೂ ಇಟ್ಟುಕೊಳ್ಳುತ್ತಿದ್ದರು. ಹಾಗೆ ಐಶ್ವರ್ಯಾ ಸೇರಿದಂತೆ ನಾಲ್ಕು ಹುಡುಗಿಯರು ನಮ್ಮ ಬಿಸಿಲೆಯ `ಅಶೋಕವನ’ದಲ್ಲಿ ಮೂರು ದಿನಗಳ ಶಿಬಿರವಾಸಕ್ಕೆ ಬಂದಿದ್ದರು. (ನೋಡಿ: ಕಾನನದೊಳಗಿಂದ ಬಂದವನಾವನಿವಂ) ಅದರ ಶಿಬಿರಾಗ್ನಿ ಎದುರಿನ ಮಾತುಕತೆಗಳಲ್ಲಿ ಐಶ್ವರ್ಯಾ, ತಾನು ಮುಂದೆ ಬಹಳ ದೊಡ್ಡ ಆದರ್ಶದ ವನ್ಯ ಅಧಿಕಾರಿಣಿಯಾಗಿ ಬರುವ ಮಾತಾಡಿದ್ದರು. ಇಂದು ವನ್ಯ ಪರಿಸರದ ಶೋಚನೀಯ ಸ್ಥಿತಿ, ಅದಕ್ಕೆ ನೇರ ಕಾರಣವಾದ ಸರಕಾರೀ ಅಧಿಕಾರಿಗಳ ಅಜ್ಞಾನ, ಉಡಾಫೆ ಎಲ್ಲಕ್ಕೂ ಮಿಗಿಲಾಗಿ ದುರುದ್ದೇಶಗಳನ್ನು ಕಂಡೂ ಕಂಡೂ ಬೇಸತ್ತದ್ದಕ್ಕೆ, ಅಮ್ಮ-ಆರುಂಧತಿಯವರನ್ನು ನಾನು ನೇರ ಕೇಳಿದ್ದೆ “ಐಶ್ವರ್ಯಾ ಎಲ್ಲಿ?”
ಒಂದೆರಡು ವರ್ಷಗಳ ಹಿಂದೆ ಪತ್ರಿಕೆಯಲ್ಲೆಲ್ಲೋ `ಐಶ್ವರ್ಯಾನಾಗ್ – ಯಶಸ್ವೀ ಯುವ ಉದ್ಯಮಿ’, ಎಂಬ ಪರಿಚಯಾತ್ಮಕ ವರದಿ ನೋಡಿದ್ದ ನೆನಪು ನನಗಿತ್ತು. ಆದರ್ಶ ಅರಣ್ಯಾಧಿಕಾರಿ ಆಗಬೇಕಿದ್ದಾಕೆ ಇದೇನು ನಡೆಸಿದ್ದಾಳೆ ಎಂಬ ನನ್ನ ವಿಷಾದಕ್ಕೆ ಇಲ್ಲಿ ಆರುಂಧತೀ ಸಮಾಧಾನ ಕೊಟ್ಟರು. ಐಶ್ವರ್ಯಾ ವನ್ಯ ಓಡಾಟದಿಂದ ಗಳಿಸಿದ ಮಂಗನ ಕಾಯಿಲೆ ಮೊದಲು ಆಕೆಯನ್ನು ಭೀಕರವಾಗಿ ಕಾಡಿತ್ತಂತೆ. ಹಿಂಬಾಲಿಸಿದಂತೆ ಕಣ್ಣಿಗೇ ಸರ್ಪಸುತ್ತು (ಹರ್ಪಿಸ್) ಬಡಿಯಿತಂತೆ. ಚೇತರಿಸಿಕೊಳ್ಳುವಾಗ ಪರಿಣತ ವೈದ್ಯರುಗಳು ಖಡಕ್ಕಾಗಿ ಎಚ್ಚರಿಸಿದರಂತೆ, “ವನ್ಯಪರಿಸರಕ್ಕೆ ಹೋದರೆ ಶಾಶ್ವತ ಅಂಧತೆ ಬಂದೀತು!” ಪ್ರಾಮಾಣಿಕವಾಗಿ ಆಕೆಗೆ ನಮ್ಮ ವಿಷಾದಗಳನ್ನು ಹೇಳುವುದರೊಡನೆ, ಮನಸ್ಸಿನಲ್ಲಿ ರಾಜ್ಯದ ಹತಭಾಗ್ಯವನ್ನು ಹಳಿದುಕೊಳ್ಳುವುದಷ್ಟೇ ನನಗುಳಿಯಿತು.
೨. ಕೊಡ, ಕುಟ್ಟಾಣಿ, ತಾಟು, ಬಕೇಟು ಓಕೆ – ಘಟಂ ಯಾಕೆ!?
ಕಮ್ಮಟದ ಎರಡನೇ ಕಲಾಪ – ಅಡುಗೆಮನೆ ವಾದ್ಯಮೇಳ. ಖ್ಯಾತ ಘಟಂ ವಿದುಷಿ ಸುಕನ್ಯಾ ರಾಮಗೋಪಾಲ ಅಡುಗೆಮನೆ ಜಗತ್ತಿಗೆಂದೇ ವಿಶೇಷ ತಂಡದೊಡನೆ ಸಜ್ಜಾಗಿಯೇನೋ ಬಂದಿದ್ದರು. ಅವರ ವಿನಯ ಮತ್ತು ಪ್ರಾಮಾಣಿಕತೆ, ಬಹುತೇಕ ಅವರ
ಶಿಷ್ಯವರ್ಗವೇ ಆದ ಯುವ ಕಲಾವಿದರ ತಂಡದ ಉತ್ಸಾಹಗಳೆಲ್ಲ ಪ್ರಶ್ನಾತೀತ. ಆದರೂ.... ವಿಖ್ಯಾತ ರಂಗಸಂಗೀತ ಪ್ರವೀಣ ಬಿವಿ ಕಾರಂತರ ಆತ್ಮವನ್ನೇ ಕಥಿಸಿದ ವೈದೇಹಿಯವರದೇ ಆಯೋಜನೆಯ ಭಾಗ ಈ ಕಲಾಪ. ತಾಟು ಡಬ್ಬ ಮಣೆಗಳನ್ನೆಲ್ಲ ಸಂಗೀತದ ಭಾಗ ಮಾಡಿದ ಅಂಥಾ ಕಾರಂತರ ಹೆಸರು ಇಲ್ಲಿ ಉಲ್ಲೇಖಕ್ಕೂ ಬಾರದಿದ್ದುದು ಆಶ್ಚರ್ಯ. ಸುಕನ್ಯಾ ಅರಿವಿದ್ದೋ ಇಲ್ಲದೆಯೋ ಅಡುಗೆಮನೆಯ ವಾದ್ಯಗೋಷ್ಠಿಯ ಅನೌಪಚಾರಿಕತೆಯನ್ನು ಸಲಕರಣೆಗಳಲ್ಲಿ (ಘಟಂ ಒಂದನ್ನು ಬಿಟ್ಟು) ಬಳಸಿಕೊಂಡರೂ ಫಲಿತಾಂಶದಲ್ಲಿ ಕರ್ನಾಟಕ ಸಂಗೀತದ ಶಿಸ್ತನ್ನೇ ಅರಸಿದರು. ಇದು (ಪ್ರೇಕ್ಷಕನಾಗಿ ನನಗುಂಟಾದ) ಪರಿಣಾಮದಲ್ಲಿ ಎಡೆಬಿಡಂಗಿಯಾಯ್ತು. ಪಾಲ್ಘಾಟ್ ಮಣಿ ಅಯ್ಯರರ ನಡೆಗಳನ್ನು ಕೇವಲ ತನ್ನ ಸಂತೋಷದ ಅಭಿವ್ಯಕ್ತಿಯಾಗಿ ನನ್ನ ತಂದೆ ರೇಡಿಯೋ ಇಟ್ಟಿದ್ದ ಮೇಜಿನ ಬದಿಗಳಿಗೆ ಬಡಿದು ಅನುಕರಿಸುತ್ತಿದ್ದರು. ಆದರೆ ಮೇಜನ್ನೇ ವಾದ್ಯವಾಗಿ ಒಪ್ಪಿಕೊಂಡು ಸಾರ್ವಜನಿಕ ಪ್ರದರ್ಶನಕ್ಕೆ ಇಳಿಯುವುದಾದರೆ ಮಣಿ ಅಯ್ಯರರ (ಮೃದಂಗದ) ನಡೆಗಳು ಪ್ರಾಯೋಗಿಕವಾಗಲಾರದು.
ಅಡುಗೆಮನೆ ‘ವಾದ್ಯ’ಗಳ ಮನೋಧರ್ಮಕ್ಕೆ ಸಂಗೀತವೂ (ಕಾರಂತರು ಅವುಗಳೊಡನೆ ಭಿನ್ನ ಸಾಧ್ಯತೆಗಳನ್ನರಸಿದ್ದಕ್ಕೇ ರಂಗ ಸಂಗೀತವೆಂದೇ ಖ್ಯಾತವಾಯ್ತು) ಬದಲಬೇಕಿತ್ತು. ಆ ಲೆಕ್ಕದಲ್ಲೂ ಕಾರಂತರು ಸ್ಮರಣೀಯರೇ ಆಗುತ್ತಾರೆ. ಅಡುಗೆಮನೆ ಬಳಕೆಯ (ಮಣ್ಣಿನದ್ದೇ ಆದರೂ) ಕೊಡಪಾನ ಎಂದೂ ನೇರಾನೇರ ಸಂಗೀತ ಕಛೇರಿ ಬಳಕೆಯ ಘಟಂ ಆಗುವುದು ಅಸಾಧ್ಯ. ಅಂಥ ಘಟಂ ಬಳಕೆ ಮತ್ತು ಶುದ್ಧ ಬಾಯಿತಾಳಗಳ (ಗಮನಿಸಿ, ವಾಸ್ತವದ ನುಡಿತಗಳ ಅಲ್ಲ) ನೆರವು ಇಲ್ಲದೇ ಈ ಗೋಷ್ಠಿ ವಿಕಸಿಸಬೇಕಿತ್ತು. ಅಂಥ ಒಂದು ಸಂಗೀತ ಕಲಾಪಕ್ಕೆ ಪೂರಕವಾಗಬೇಕಿದ್ದ ಸಾಹಿತ್ಯ, ಇಲ್ಲಿ ಅಡುಗೆ ಸಂಗತಿಗಳ ನಾಮಸೂಚಕ ಚಮತ್ಕಾರಕ್ಕಷ್ಟೇ ಬಳಕೆಯಾಯ್ತು. ಅಂದರೆ ಸನ್ನಿವೇಶ ಮತ್ತು ಸಲಕರಣೆಗಳನ್ನು ಅಮಾನ್ಯ ಮಾಡಿ ಕರ್ನಾಟಕ ಸಂಗೀತದ ತಾಳವಾದ್ಯ ಕಛೇರಿಯೇ ಅಡುಗೆಮನೆಗೆ ನುಗ್ಗಿತ್ತು! ಬಿವಿ ಕಾರಂತರಾದರೋ ಬಹುಶಿಸ್ತುಗಳನ್ನು ಸಹಜವಾಗಿ ಒಳಗೊಳ್ಳುವ ನಾಟಕ ಪ್ರಪಂಚಕ್ಕೆ ಈ ಅನೌಪಚಾರಿಕ ವಾದ್ಯಗೋಷ್ಠಿಯನ್ನು ತಂದಿದ್ದರು. ಅದನ್ನು ಗುಣಾತ್ಮಕವಾಗಿ ಗ್ರಹಿಸುವಲ್ಲಿ ಸುಕನ್ಯಾ ರಾಮಗೋಪಾಲ ತಂಡ ಸೋತಿದೆ ಎಂದೇ ನನಗನ್ನಿಸಿತು.
೩. ಕವಿಗೋಷ್ಠಿ
ಚಹಾ ವಿರಾಮದ ಬೆನ್ನಿಗೆ `ಅಡುಗೆಮನೆ ಪದ್ಯಗಳು’ ಎನ್ನುವ ಸೀದಾ ಹೆಸರಿನ ಕವಿಗೋಷ್ಠಿ ಇತ್ತು. ಆಮಂತ್ರಣದಲ್ಲಿ ಹೆಸರಿಸಿದ್ದ ಏಕೈಕ ಪುರುಷ ಕವಿ - ಸುಬ್ಬು ಹೊಲೆಯಾರ್, ಗೈರುಹಾಜರಾಗಿದ್ದರು. ಪ್ರತಿಭಾ ನಂದಕುಮಾರ್, ಶಬ್ದಗಳ ವಾಚಿಕ ಶಕ್ತಿಯನ್ನು
ಅರ್ಥಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಮತ್ತು ಈ ವೇದಿಕೆಯ ಕಲ್ಪನೆಗೂ ಮೊದಲೇ ಅಡುಗೆಮನೆಗೆ ತನ್ನ ಪ್ರಕಟಿತ ಕೃತಿಗಳಲ್ಲಿ ಶಕ್ತ ಅಭಿವ್ಯಕ್ತಿ ಕೊಟ್ಟ ನೆಲೆಯಲ್ಲೂ ಉಜ್ವಲವಾಗಿ ಮೆರೆದರು. ಸವಿತಾ ನಾಗಭೂಷಣ, (ಕನಿಷ್ಠ ಹದಿನೈದಿಪ್ಪತ್ತು ದಿನಗಳ ಅವಕಾಶವಿದ್ದೂ) ಕ್ಷಮಾಪೂರ್ವಕವಾಗಿವಾಗಿಯೇ ಆದರೂ ಅರೆಬೆಂದ ಪಾಕ ಬಡಿಸಿದ್ದು ನನಗೆ ರುಚಿಸಲಿಲ್ಲ. ನಾನು ವೃತ್ತಿಪರ ಪುಸ್ತಕೋದ್ಯಮಿಯಾಗಿದ್ದ ಕಾಲದಲ್ಲಿ, ಕೆಲವು ಬಾರಿ ಹಿರಿಯ ವೃತ್ತಿಪರ ಪುಸ್ತಕೋದ್ಯಮಿ - ಗೀತಾ ಬುಕ್ ಹೌಸಿನ ಸತ್ಯನಾರಾಯಣ ರಾಯರೊಡನೆ, ಗೋಷ್ಠಿ, ಕಮ್ಮಟಗಳಲ್ಲಿ ಭಾಗವಹಿಸಿದ್ದು ನೆನಪಿಗೆ ಬರುತ್ತದೆ. ಅವರು ಪ್ರತಿಬಾರಿಯೂ ತಾನು ಸಿದ್ಧಪಡಿಸದ ಪ್ರಬಂಧದ ಬಗ್ಗೆ ಕ್ಷಮಾಯಾಚನೆಯ ಪೀಠಿಕೆ ಹೊಡೆಯುತ್ತಿದ್ದರು. ಸಂದ ಪ್ರಾಯದ ಬಲದಲ್ಲಿ, ಸಹಭಾಗಿಗಳಿಗೆ ಅಯಾಚಿತ `ಆಶೀರ್ವಚನ’ಗಳನ್ನು ಹೊಸೆಯುತ್ತಲೂ ಇದ್ದರು. ಕೊನೆಗೆ ತನ್ನ ವೃತ್ತಿಪರ ಹಿತಾಸಕ್ತಿಗಳಿಗೆ ಯಾವುದೇ ತೊಂದರೆಯುಂಟಾಗದಂತೆ, ಏನೋ ಒಂದಷ್ಟು ಮಾತಾಡಿ, ಅಧಿಕೃತ ಗೌರವಗಳನ್ನು ಪಡೆದೇ ನಡೆಯುತ್ತಿದ್ದದ್ದು ನೆನಪಾಯ್ತು! ಸಬಿಹಾ ಭೂಮಿಗೌಡ, ಸಬಿತಾ ಬನ್ನಾಡಿ ಮತ್ತು ವೈದೇಹಿಯವರೂ ಕವನ ವಾಚನ ಮಾಡಿದ್ದರು. ಅವುಗಳ ಪೂರ್ವ ಓದಿಲ್ಲದೆ, ಒಂದೇ ಕೇಳ್ಮೆಯ ಬಲದಲ್ಲಿ ಅಭಿಪ್ರಾಯ ಕೊಡಲು ನಾನು ಶಕ್ತನಲ್ಲ, ಚೆನ್ನಾಗಿಯೇ ಇದ್ದಿರಬೇಕು.
೪. ಮಣ್ಣಪಳ್ಳಕ್ಕೊಂದು ಭೇಟಿ
ಕಲಾಪಗಳ ಅಂಗವೇ ಆದ ಊಟವನ್ನು ನಾವು (ದೇವಕಿ, ಅಭಯರು ಸೇರಿ) ಚುರುಕಾಗಿ ಬಳಸಿಕೊಂಡರೂ ವಿರಾಮವನ್ನು ಹೊರಗೆ ಬಳಸಿದೆವು. ಮಣಿಪಾಲಕ್ಕೆ ಹೆಸರು ಕೊಟ್ಟ ಮತ್ತು ಸಭಾಭವನದ ಪಕ್ಕದಲ್ಲೇ ಕಾಣುತ್ತಿದ್ದ ಮಣ್ಣಪಳ್ಳವನ್ನು ಅದೇ ಮೊದಲ ಬಾರಿ ಹತ್ತಿರದಿಂದ ನೋಡಲು ಹೋಗಿದ್ದೆವು. ರಣಬಿಸಿಲು, ಕಸ-ದೂಳಿನ ನಿರಾಕರ್ಷಕ ಮಣ್ಣದಾರಿಯಲ್ಲಿ ನಡೆದೆವು. ಸೈಜು ಕಲ್ಲುಗಳಲ್ಲಿ ಕಟ್ಟಿಕೊಟ್ಟ ಮೇಲ್ಸ್ತರದ ಪಾತ್ರೆ
ಅಥವಾ ದಂಡೆಯಲ್ಲಿ, (ಸಾಮಾನ್ಯ ಮಳೆಗಾಲಗಳಲ್ಲೂ ಮುಳುಗಡೆ ಕಾಣದ ನೆಲ) ವನಮಹೋತ್ಸವಿಗಳು ಮರವಾಗುವ ಸಸಿಗಳನ್ನು ನೆಟ್ಟದ್ದು ಕಾಣಿಸಿತು. ಉತ್ಸವಪ್ರೇಮಿಗಳು ಆ ಸಸಿಗಳು ಬಂದ ಹರಕು ತೊಟ್ಟೆಗಳನ್ನು ಉಡಾಫೆಯಲ್ಲಿ ಅಲ್ಲೇ ಬಿಟ್ಟಿದ್ದರು!! ಗೊತ್ತಲ್ಲ – ಪ್ಲ್ಯಾಸ್ಟಿಕ್ ವಿಘಟನೆಗೊಳ್ಳಲು, ಅರ್ಥಾತ್ ಮಣ್ಣಾಗಲು ಕಡಿಮೆ ಎಂದರೆ ನಾನೂರೈವತ್ತು ವರ್ಷ ಬೇಕು! ನೆನಪಿರಲಿ, ಭಾರತದ ಅತ್ಯಂತ ಹಳೆಯ ಎನ್ನಬಹುದಾದ ಮರದ (ಚೆನೈಯ ಆಲದ ಮರ) ಪ್ರಾಯ ಕೂಡಾ ನಾನೂರೈವತ್ತು ವರ್ಷ. ಬಹುಶಃ ಇಂದು ಪಳ್ಳದ
ದಂಡೆಯಲ್ಲೂರಿದ ಮಳೆಮರದ ಮೂರನೇ ಅಥವಾ ನಾಲ್ಕನೇ ತಲೆಮಾರಿಗೆ ಈ ಪ್ಲ್ಯಾಸ್ಟಿಕ್ ಗೊಬ್ಬರವಾಗಿ ಒದಗೀತು!
ಪಳ್ಳದ ಒಂದು ಪಾರ್ಶ್ವದ ಶುದ್ಧ ಗೊಸರನ್ನು ನೀಲಹೂಗಳ ಹಾಸು ಮುಚ್ಚಿತ್ತು. ಮಳೆ ದೂರಾದ ದಿನಗಳಿಗೆ ಸಹಜವಾಗಿ ಇಳಿಮುಖವಾಗಿರುವ ನೀರಹರಹು, ಪಳ್ಳದ ದ್ವೀಪವನ್ನು ಒಂದಂಚಿನ ದಂಡೆಯಾಗಿ ಸ್ವೀಕರಿಸಿತ್ತು. ತೆಳುಗಾಳಿ ದಿಬ್ಬದ ಮೇಲಿನ ಬಿದಿರ ತುಯ್ದು, ಹಸಿರ ತೊನೆಸಿ ನಮ್ಮನ್ನು
ಕರೆದಂತಾಯ್ತು. ನಾವು ದಿಬ್ಬ ಏರಿ (ಅಲ್ಲಿದ್ದ ಏಕಾಂತಪ್ರಿಯ ಜೋಡಿಯೊಂದರ ಕ್ಷಮೆಯನ್ನು ಮನದಲ್ಲೇ ಕೋರಿ), ನೆನಪಿಗೊಂದು ನಮ್ಮದೇ ಪಟ ಹಿಡಿದುಕೊಂಡೆವು. ಆ ಎತ್ತರಕ್ಕೆ ಕೆರೆಯ ನೀರು ಸಾಕಷ್ಟು ಶುದ್ಧವಾಗಿಯೇ ಕಾಣಿಸಿತು. ನೇರ ನೀರಂಚಿಗೆ ಹೋಗೋಣವೆಂದರೆ ಯಾವುದೋ ಬಡ ಹೆಂಗಸು, ಮಕ್ಕಳು ಅಲ್ಲಿ ಸ್ನಾನ ಬಟ್ಟೆತೊಳೆಯುವ ಕೆಲಸದಲ್ಲಿದ್ದರು. ಮರ್ಯಾದೆಯಿಂದ ಬಚ್ಚಲಲ್ಲಿ, ವಾಶಿಂಗ್ ಮಶೀನುಗಳಲ್ಲಿ ಶಾಂಪೂ ಲಿಕ್ವಿಡ್ ಡಿಟರ್ಜೆಂಟ್ ಬಳಸಿ ಸ್ನಾನ ಬಟ್ಟೆ ತೊಳೆವವರು ನಾವು. ಆದರೆ ಮತ್ತೆ ಹಾಗೆ ಬಳಸಿದ ನೀರನ್ನು
ಭೂಗತ ಕೊಳವೆಗಳಲ್ಲಿ ಬೇನಾಮಿಯಾಗಿ ಕೆರೆ ನದಿಗಳಿಗೆ ಬಿಡುವವರೂ ನಾವೇ ಎಂಬ ಪಾಪಪ್ರಜ್ಞೆ ಕಾಡಿತು. ಇಲ್ಲಿ ಅನಿವಾರ್ಯವಾಗಿ ಖುಲ್ಲಂ ಖುಲ್ಲಾ ಸಾಬೂನು ಕೊಳೆಯನ್ನು ಕೆರೆಯೊಡನೆ ಹಂಚಿಕೊಳ್ಳುವ ಮಂದಿಯ ಬಳಿ ಪರಿಸರ ಪಾಠ ಹಿಡಿದುಕೊಂಡು ಹೋಗುವ ಧೈರ್ಯ ನಮಗೆ ಬರಲಿಲ್ಲ. ತೋರಿಕೆಯ ಜಗತ್ತಿನಲ್ಲಿ ಅಂಥವರ ಕ್ಷುದ್ರತೆಯನ್ನು (?) ಮೀರಿದ, ಅಡುಗೆಮನೆ ಜಗತ್ತನ್ನು ಬೆಳಗಿಸುವ (!) ಗಂಭೀರ ಜವಾಬ್ದಾರಿ ನೆನೆಸುತ್ತ ಸಭಾಭವನಕ್ಕೆ ಧಾವಿಸಿದೆವು.
೫. ಸೋ ಎನ್ನಿರೋ ಸೋಭಾನೇ ಎನ್ನಿರೋ
ಮಟಮಟ ಮಧ್ಯಾಹ್ನದ ಸುತ್ತಾಟದ ವಾಸ್ತವ ಕಳಚಿಕೊಂಡು, ಹವಾನಿಯಂತ್ರಿತ ಸಭಾಭವನದ ಒಳಗೆ ಬರುವಾಗ ನಾಲ್ಕನೇ ಅವಧಿಯ ಕಲಾಪ ಶುರುವಾಗಿಬಿಟ್ಟಿತ್ತು. ಕುಂದಾಪ್ರ ವಲಯದ ಮದುವೆಹಾಡುಗಳ ಕಣಜ - ಶಾಂತಾ ಐತಾಳ, ಕೋಟದ ಗೃಹಿಣಿ, ಯಾವುದೇ ವೃತ್ತಿಪರ ಆವುಟ, ಪ್ರದರ್ಶನಗಳಿಲ್ಲದ ಮಹಿಳೆ, ಓರ್ವ ಸಂದರ್ಶಕಿಯೊಡನೆ (ಕ್ಷಮಿಸಿ, ನಾವು ತಡವಾದ್ದರಿಂದ ಅವರ ಹೆಸರು ತಿಳಿಯಲಿಲ್ಲ) ವೇದಿಕೆ ಅಲಂಕರಿಸಿದ್ದರು. ಅವರ ಅನೌಪಚಾರಿಕ ಸಂದರ್ಶನ - ಹಾಡು ಮಾತುಗಳ ಮಾಲೆ, ಕುಶಿ ಕೊಟ್ಟಿತು. ಮಾದರಿಗಾಗಿ ಒಂದು ವಿಡಿಯೋ ತುಣುಕು ಲಗತ್ತು.
೬. ಔಪಚಾರಿಕತೆಯ ಸ್ಪರ್ಶಕೊಟ್ಟ ಕತಾಸಮಯ
ಹಾಡಿನ ಬೆನ್ನಿಗೆ ಕತೆ ಬಂತು. ದ್ರೌಪದಿಯುಳಿಸಿದ ಅಗುಳೊಂದು ದೂರ್ವಾಸರ ಕೂಟಕ್ಕೆ ಏದುಬ್ಬಸದ ಭೋಜನತೃಪ್ತಿ ಕೊಟ್ಟ ಕತೆ, ಅಜ್ಞಾತವಾಸದಲ್ಲಿ (ಭೀಮ) ವಲಲನ ಪಾಕಶಾಲೆ ಸೇಡಿನ ಅಭಿವ್ಯಕ್ತಿಯಾದ ಪರಿ.... ಹೀಗೆ ಪುರಾಣ ಕಥನಗಳಲ್ಲಿ ಅಡುಗೆ ಜಗತ್ತು ಎಷ್ಟೂ ಮಹತ್ವದ ಪಾತ್ರ ನಿರ್ವಹಿಸುವುದು ಸರಿಯೇ. ಆದರಿದನ್ನು ದಿನದ ಕೊನೆಯ ಕಲಾಪವಾದ ತಾಳಮದ್ದಳೆಯಲ್ಲಿ ಆನ್ವಯಿಕವಾಗಿಯೇ ವಿಶ್ಲೇಷಿಸಲಿದ್ದ ಖ್ಯಾತ ಅರ್ಥಧಾರಿ, ವಿದ್ವಾಂಸ ಕೆರೆಕೈ ಉಮಾಕಾಂತ ಭಟ್ಟರನ್ನು ಔಪಚಾರಿಕ ಮಾತುಗಳಿಗೆ ಬಳಸಿಕೊಂಡದ್ದು ನನಗೆ ಅನಗತ್ಯವಾಗಿಯೇ ಕಾಣಿಸಿತು. ಇನ್ನೋರ್ವ ವಿದ್ವಾಂಸ ಎಚ್.ವಿ. ನಾಗರಾಜರಾಯರು ಮತ್ತು `ಅಡುಗೆಮನೆ ಜಗತ್ತು’ ಗೋಷ್ಠಿಯ ಸಂಘಟನೆಯಲ್ಲಿ ಮಹತ್ವದಪಾತ್ರ ನಿರ್ವಹಿಸಿದ ಪತ್ರಕರ್ತೆ ದೀಪಾ ಗಣೇಶ್ ಕೂಡಾ ಕತಾ ಸಮಯದಲ್ಲಿ ಪಾಲ್ಗೊಂಡಿದ್ದರು.
೭. ನಾಗೇಶ ಹೆಗಡೆ
`ಅಡುಗೆಮನೆ ಜಗತ್ತು’ ವಿಚಾರ ಸಂಕಿರಣದ ದಿನದ ಎಲ್ಲ ಕಲಾಪಗಳಲ್ಲೂ ವಿಷಯ (ಉದ್ಘಾಟನೆ, ಸಂಗೀತ, ಕವಿತೆ, ಜನಪದ ಇತ್ಯಾದಿ) ಪ್ರಧಾನವಾದರೆ ಇದೊಂದು ಕಲಾಪದಲ್ಲಿ ಮಾತನಾಡುವ ವ್ಯಕ್ತಿ – ನಾಗೇಶ ಹೆಗಡೆ ಮುಖ್ಯರಾಗುತ್ತಾರೆ. ನಾಲ್ಕು ದಶಕಗಳಿಗೂ ಮಿಕ್ಕು ಪರಿಸರ ಮತ್ತು ವಿಜ್ಞಾನವನ್ನು ಎರಡಲ್ಲದಂತೆ ಕಂಡು ಬರೆಯುತ್ತ, ಆಡುತ್ತ ಹಾಗೇ ನಡೆಯುತ್ತ ಬಂದವರು ಇವರು. ಬೆಂಗಳೂರಿನಲ್ಲಿ ಕೆರೆಗಳು ಹೊತ್ತಿ ಉರಿಯುವ ಕಾಲಕ್ಕೆ ಸಂಚಿ ಟ್ರಸ್ಟಿನ ಜ್ಞಾನಸರಣಿ ಭಾಷಣ ಮಾಲೆಯಲ್ಲಿ ನೀರಸಮಸ್ಯೆಯ ಕುರಿತು ಮಾತಾಡಲು ಮೊದಲು ಹೊಳೆದ ಹೆಸರೇ ನಾಗೇಶ ಹೆಗಡೆ! (ನೋಡಿ: ಜ್ಞಾನಸರಣಿ)
ಸಂಘಟಕರ ಆಶಯಸೂಚಿ - `ಆಹಾರ, ಪರಿಸರ ಮತ್ತು ಜಾಗತಿಕ ವಿದ್ಯಮಾನಗಳು’ ಎನ್ನುವುದನ್ನು, ನಾಗೇಶ ಹೆಗಡೆಯವರು - `ಅಡುಗೆಮನೆಯ ಹಲ್ಲಿ ಮತ್ತು ಅಗ್ರಿಬಿಸಿನೆಸ್ ಮೊಸಳೆ’ ಎಂದು ಮೌಲ್ಯಾಂತರಗೊಳಿಸಿ, ಪ್ರಾತಿನಿಧಿಕ ಸ್ಲೈಡ್ಸ್ ಪ್ರದರ್ಶನಗಳೊಡನೆ ಸುಮಾರು ನಲ್ವತ್ತು ಮಿನಿಟಿನ ಭಾಷಣ, ಸಂವಾದವನ್ನು ನಡೆಸಿಕೊಟ್ಟರು. ವಿಷಯದ ಹರಹು ಮತ್ತು ಮಾತಾಡಿದ ವ್ಯಕ್ತಿಯ ಸಾಮರ್ಥ್ಯಕ್ಕೆ ಇದು ತೀರಾ ಸಣ್ಣ ಅವಧಿಯೇ ಆದರೂ ಕೇಳುಗರಲ್ಲಿ ಹುಟ್ಟಿಸಿದ ವಿಚಾರತರಂಗಗಳು ಗಾಢ ಮತ್ತು ದೀರ್ಘ ಕಾಲಿಕ ಎನ್ನುವುದರಲ್ಲಿ ಸಂದೇಹವಿಲ್ಲ.
೮. ಸಮೂಹಮಾಧ್ಯಮದಲ್ಲಿ ಪಾಕ ಜಗತ್ತು
ಒಂದು: ರಶ್ಮಿ – ನಮ್ಮ ಸೊಸೆ (ಅಭಯನ ಹೆಂಡತಿ), ಬೆಂಗಳೂರಿನಲ್ಲಿ ನೆಲೆಸಿದ ಕೆಲವೇ ಕಾಲದಲ್ಲಿ, ಗಳಿಸಿದ ಸಮೂಹಮಾಧ್ಯಮಗಳ ಆತ್ಮೀಯತೆಯಲ್ಲಿ ಕೆಲವು ಸರಳ ಪಾಕಗಳ ವಿಶೇಷ ವಿಡಿಯೋ ಸರಣಿಯನ್ನು ತನ್ನದೇ ಜಾಲತಾಣ ಮಾಡಿಕೊಂಡು ಅನಿಯತವಾಗಿ ಅಂತರ್ಜಾಲದಲ್ಲಿ ಹರಿಬಿಟ್ಟಳು. (ನೋಡಿ: ರಶ್ಮಿ ಡೈರೀಸ್) ಅದು ಯಾವುದೇ ವಿಶೇಷ ಪ್ರಚಾರ ಪ್ರಯತ್ನಗಳಿಲ್ಲದೆ ಬಹು ಬೇಗನೆ ಜನಪ್ರಿಯವಾದರೂ ರಶ್ಮಿಗೆ ಅನ್ಯ ಜವಾಬ್ದಾರಿಗಳ ಒತ್ತಡದಲ್ಲಿ ಅದನ್ನು ಸದ್ಯ ಬೆಳೆಸಲಾಗಿಲ್ಲ, ಬಿಡಿ. (ಇಂದು ಇಂಥ ಪಾಕ ವಿಶೇಷಗಳ ಜಾಲತಾಣ ಎಷ್ಟೂ ಇವೆ)
ಎರಡು: ಕಳೆದ ಹನ್ನೆರಡು ವರ್ಷಗಳಿಂದ ನಾನು ಈ ಜಾಲತಾಣ ನಡೆಸಿರುವುದು ನಿಮಗೆಲ್ಲ ತಿಳಿದೇ ಇದೆ. ಹಾಗೇ ಸುಮಾರು ಅಷ್ಟೇ ಕಾಲದಿಂದ ನಾನು ಫೇಸ್ ಬುಕ್ಕಿನಲ್ಲೂ ದಿನದಿನ ಎಂಬಂತೆ ಚಿತ್ರ, ಅನೇಕ ವಿಚಾರಪರ ಟಿಪ್ಪಣಿ ಮತ್ತು ಪ್ರತಿಕ್ರಿಯೆಗಳನ್ನು ತುಂಬುತ್ತಲೇ ಇದ್ದೇನೆ. ಎರಡರಲ್ಲೂ ನನ್ನ ಆಸಕ್ತಿಗಳ ಹರಹು – ಪುಸ್ತಕೋದ್ಯಮ, ಪರಿಸರ, ಪರ್ವತಾರೋಹಣ, ದೋಣಿ ಸವಾರಿ,
ಸೈಕಲ್ ಸವಾರಿ, ಯಕ್ಷಗಾನ, ವೈಚಾರಿಕ, ಬಳಕೆದಾರ, ಪ್ರವಾಸ ಕಥನ, ಆತ್ಮಕಥೆ, ಸಿನಿಮಾ, ನಾಟಕ ಎಂದೇನೆಲ್ಲಾ ವ್ಯಾಪಿಸಿವೆ. ಆದರೆ ಅಲ್ಲಿ ತಿನಿಸು ಅಥವಾ ಅಡುಗೆ ಕುರಿತ ಯಾವುದೇ ನಮೂದು ಉಂಟುಮಾಡುವ ಓದುಗ-ಕಲ್ಲೋಲ, ಟೀವೀ ಛಾನೆಲ್ಲುಗಳ ಭಾಷೆಯಲ್ಲಿ ಹೇಳುವುದಾದರೆ, ಹುಚ್ಚು ಜ್ವರದಂತೇ ಏರುವ ಟೀಯಾರ್ಪಿಯನ್ನು ನಾನು ಬೇರೆ ವಿಷಯಗಳಲ್ಲಿ ಕಂಡಿಲ್ಲ!
ಮೂರು: ಅಭಯಸಿಂಹ (ಮಗ) ಬಹುಶಕ್ತ ಸಿನಿ-ಮಾಧ್ಯಮದ ಅಧ್ಯಯನಾತ್ಮಕ ಮತ್ತು ಪ್ರಾಯೋಗಿಕ ತಿಳುವಳಿಕೆಯವನು. ಆತ ಪತ್ನಿ ರಶ್ಮಿಯ ಪ್ರಯೋಗಗಳಿಗೆ ಪ್ರೇರಕ ಮತ್ತು ನನ್ನ ಅಂತರ್ಜಾಲ ಮಾಧ್ಯಮದ ನಿರ್ವಾಹಕ. ಹಾಗಾಗಿ ಅವನದ್ದೂ ಸೇರಿದಂತೆ ಮೂರೂ ಅನುಭವಗಳಿಗೆ ಸಮರ್ಥ ಮುಖವಾಣಿಯಾಗಬಲ್ಲವ. ಇವನ ಮೂಲಕ ವಿದ್ಯುನ್ಮಾನ ಮಾಧ್ಯಮದೊಳಗಿನ ಅಡುಗೆಮನೆ ಜಗತ್ತು ಅನಾವರಣಗೊಳಿಸುವ ಪ್ರಯತ್ನ ಗೋಷ್ಠಿಯ ಏಳನೇ ಕಲಾಪ. ಅವನ ಮಾತಿನ ಮಾದರಿಗೆ ವಿಡಿಯೋ ತುಣುಕನ್ನು ಇಲ್ಲೇ ನೋಡಬಹುದು . ಆದರೆ ಸಭೆಯಲ್ಲಿ ಪ್ರಸ್ತುತಪಡಿಸಿದ ಮಾತುಗಳನ್ನು ಅವನದೇ ಪ್ರಬಂಧದಲ್ಲಿ ಓದಲು ಚಿಟಿಕೆ ಹೊಡೆಯಿರಿ: ಟೆಲಿವಿಶನ್ ಮತ್ತು ಸಿನಿಮಾಗಳಲ್ಲಿ ಅಡುಗೆ.
೯. ತಾಳಮದ್ದಳೆಯಲ್ಲಿನ ರಸಪಾಕ
ಒಂದು ಚಂದದ ಅವಿಲು ಸವಿದು ಬಂದೆ.. ಎಲ್ಲಾ ಓದಿದ ಮೇಲೆ ಅವಿಲು ಕಲಸು ಮೇಲೋಗರ ಆಯ್ತು.. ಬಹುಮುಖೀ ಚಿಂತನೆ ಗಳ ಕಂಡೆ..��
ReplyDeleteಸೊಗಸಾದ ಬರವಣಿಗೆ..ಒಂದಕ್ಕೊಂದು ಜೋಡಿಸುತ್ತಾ ವಿಷಯಗಳ ಹರಹು ಹೇಗೆ ಕೊಡಬಹುದೆಂಬ ಆಯಾಮ.. ��
ಲೇಖನ ಓದಿಸಿದ್ದೀರಿ.. ಧನ್ಯವಾದಗಳು..��
ಅವಿಲು ಊಟದ ನಡುವಣ ಭಕ್ಷ್ಯ ಅದರಲ್ಲಿ ಸಾಮಾನ್ಯ ಎಲ್ಲ ರಸಗಳೂ (ಬಹುಶಃ ಸಿಹಿ ಹೊರತು) ಮಿಳಿತ. ಅನ್ನದೊಂದಿಗೆ ಅದು ಹೊಟ್ಟೆ ಸೇರಿದರೆ ಇನ್ನಷ್ಟನ್ನು ತೆಗೆದುಕೊಳ್ಳಲು ಪ್ರೇರಿಸುತ್ತದೆ. ನೀವು ಬಡಿಸಿದ ಅವಿಲು ನಿಮ್ಮಿಂದ ಇನ್ನಷ್ಟು ಬರಹವನ್ನು ಕೇಳುವ ಹಾಗೆ ಮಾಡಿದೆ.Thanks.
ReplyDelete