(ಪ್ರಾಕೃತಿಕ ಭಾರತ ಸೀಳೋಟ - ೧೦)
ಯಮುನೋತ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನಿಜ ಸೂರ್ಯ ದರ್ಶನಕ್ಕೆ ಮಂಜು, ಮೋಡ ಮತ್ತು ಒತ್ತಿನ ದೈತ್ಯ ಶಿಖರ ಶ್ರೇಣಿಗಳ ಪ್ರಭಾವ ಇದ್ದರೂ ಹಗಲಿನ ಪ್ರಕಾಶ ಬೆಳಿಗ್ಗೆ ಐದು ಗಂಟೆಗೇ ಸಿಗುತ್ತಿತ್ತು. ಆದರೆ ಜನ, ಕುದುರೆ, ಹೇಸರಗತ್ತೆ, ಕಾವಡಿ-ಬುಟ್ಟಿ ಹೊರುವವರು ಎಂಬ ವಿಪರೀತ ಸಂದಣಿ ಆರು ಗಂಟೆಗಷ್ಟೇ ತೊಡಗುವುದು ಎಂದು ತಿಳಿದಿದ್ದೆವು. ಹಾಗಾಗಿ ಸಮಯದ ಉಳಿತಾಯವನ್ನು ಲಕ್ಷಿಸಿ, (೧೪-೫-೯೦)
ಚಾರಣದ ಆವಶ್ಯಕತೆಗಳನ್ನಷ್ಟೇ ಬೆನ್ನಿಗೇರಿಸಿ,
ಐದೂಕಾಲಕ್ಕೇ ನಡಿಗೆಗಿಳಿದಿದ್ದೆವು. ಸಾಮಾನ್ಯ ಯಾತ್ರಿಗಳು ಈ ಚಾರಣದ ಅಂಶವನ್ನು (ಒಟ್ಟು ಸುಮಾರು ೨೬ ಕಿಮೀ) ಎರಡು ದಿನಗಳಲ್ಲಿ ಪೂರೈಸುತ್ತಾರೆಂದು ಕೇಳಿದ್ದೆವು. ಆದರೆ ನಮ್ಮ ಯೋಜನೆ ಒಂದೇ ದಿನದ್ದು.
ಹಿಂದಿನದಂತೇ ಯಮುನೆಯ ದಂಡೆಯಲ್ಲೇ ಉತ್ತರಮುಖಿಗಳಾಗಿ, ಕಾಣುತ್ತಿದ್ದ ಕಾಡಿನತ್ತ ಸಾಗಿದೆವು. ಕಾಲ್ದಾರಿ ಬಹಳ ಸ್ಪಷ್ಟವಿದ್ದುದರಿಂದ ಮಾರ್ಗದರ್ಶಿ ಅಥವಾ ನಕ್ಷೆಯ ಗೋಜಿಗೆ ಹೋಗಲಿಲ್ಲ. ನನ್ನ ನೆನಪಿನಂತೆ, ಆ ಕಾಲದಲ್ಲಿ ಕಾಲ್ದಾರಿ ಉದ್ದಕ್ಕೂ ಯಮುನೆಯನ್ನು ಎಡಕ್ಕೇ ಇಟ್ಟುಕೊಂಡಿತ್ತು. ಇಂದು ಗೂಗಲ್ಲಿನಲ್ಲಿ, ವಾಹನಯೋಗ್ಯ ಮಾರ್ಗ ಅತ್ತ ಹರಿದಿರುವುದರಿಂದ ಹೊಸ ಜಾಡುಗಳನ್ನೂ ಅಡ್ಡ ಸೇತುವೆಗಳನ್ನೂ ಕಾಣಬಹುದು.
ಜಾನಕೀ ಚಟ್ಟಿ (ಔ. ೯೦೦೦), ಅಂದರೆ ಏರು ನಡಿಗೆಯ ಅರ್ಧಾಂಶ (೬ ಕಿಮೀ) ಮತ್ತು ಸುಲಭದ ಭಾಗ. ಇದನ್ನು ನಾವು ಸುಮಾರು ಎರಡು ಗಂಟೆಯಲ್ಲಿ
ಪೂರೈಸಿದೆವು. (ಇಂದಿನಗಳಲ್ಲಿ ಅಲ್ಲಿವರೆಗೂ ವಾಹನಯೋಗವಿದೆ) ಅಲ್ಲಿ ತಿಂಡಿ ತೀರ್ಥ. ಮತ್ತಿನ ಅಂಶದಲ್ಲಿ ದೇವಕಿಗೆ ಸುಸ್ತು ಕಾಡತೊಡಗಿತು. ಹಾಗಾಗಿ ನಾವಿಬ್ಬರು ಹಿಂದುಳಿದು, ಉಳಿದವರನ್ನು ಸಾಮರ್ಥ್ಯದಂತೆ ಮುಂದುವರಿದು, ಕ್ಷೇತ್ರದಲ್ಲಿ ಒಟ್ಟಾಗುವುದೆಂದೂ ನಿಶ್ಚೈಸಿಕೊಂಡಿದ್ದೆವು. ಕೊನೆಯವರಾದ ನಾವು ಮಧ್ಯಾಹ್ನ ೧೨ ಗಂಟೆಗೆ (ತಾ. ೨೭, ತೇ ೪೦%, ಔ. ೧೦೬೦೦) ಯಮುನಾದೇವಿಯ ಮಂದಿರ ಮುಟ್ಟಿದೆವು.
ಬೆಳಗ್ಗೆ ಯಮುನಾ ಕಣಿವೆಯ ಹಸಿರು ಕಾಡುಗಳಾಚೆಗೆ, ಕಟ್ಟಿದ ಬೆಳ್ಳಿಗೋಡೆಯಂತೆ ತೋರುತ್ತಿದ್ದ ಶಿಖರ ಸಾಲಿನ ನೇರ ತಪ್ಪಲಿನಲ್ಲಿದ್ದೆವು. ಅಲ್ಲಿಂದ ಸುಮಾರು ಹತ್ತು ಕಿಮೀ ಅಂತರದ ಬಹಳ ಕಠಿಣವಾದ ಎತ್ತರದಲ್ಲಿ ಮಂಜುಗಡ್ಡೆಯ ರೂಪದಲ್ಲೇ ಯಮುನೆಯ ಮೂಲ ಸ್ರೋತವಿದೆ. ಯಮುನಾದೇವಿ ಮಂದಿರದ ಒಂದು ಮಗ್ಗುಲಿಗೆ ಆ ಎತ್ತರದಲ್ಲಿ ಕರಗಿ, ಒಸರಿನಂತಿಳಿವ ಅಸಾಧ್ಯ ಶೈತ್ಯದ ನದಿ, ಇನ್ನೊಂದು ಮಗ್ಗುಲಿಗೆ ಅಲ್ಲೇ
ಭೂಗರ್ಭದಿಂದ ಬುದ್ಬುದಿಸುತ್ತ ಹಬೆಯಾಡುವ ಬಿಸಿ, ಅಲ್ಲಲ್ಲ ಕುದಿನೀರ ಕುಂಡ. ಶ್ರದ್ಧಾವಂತರ ಪುಣ್ಯ ಸ್ನಾನಾನುಕೂಲಕ್ಕಾಗಿ ಎರಡರ ಹದಮಿಶ್ರಣದ ಹೆಚ್ಚು ಆಳವಿಲ್ಲದ ಪುಟ್ಟ ಕೆರೆ ರಚಿಸಿದ್ದಾರೆ. ಭಕ್ತಾದಿಗಳು ಬಟ್ಟೆಯಲ್ಲಿ ಅಕ್ಕಿ, ಆಲೂಗೆಡ್ಡೆಗಳನ್ನು ಕಟ್ಟಿ, ಕುದಿನೀರಿಗೆ ಮಿನಿಟೆರಡು ಒಡ್ಡುವುದು ನೈವೇದ್ಯವಂತೆ. ಕ್ಷಣಾರ್ಧದಲ್ಲಿ ಎನ್ನುವಂತೆ ಅರಳುವ ಅನ್ನ ಪ್ರಸಾದವನ್ನು ಉಣ್ಣುವುದೂ ಕಂಡು ಧನ್ಯರಾದೆವು. ನಮ್ಮಲ್ಲಿ ಕೆಲವರು ಶೀತಳ ಯಮುನೆಯನ್ನು ಮುಟ್ಟಿ, ಭೂತಳ ಯಮುನೆಯ ಸಂಗಮದಲ್ಲಿ (ಪುಟ್ಟ ಕೆರೆಯಲ್ಲಿ) ಮುಳುಗಿ ನವಚೇತನರೂ ಆದರು. ಎಂದಿನಂತೆ ಧಾಬಾವೊಂದರಲ್ಲಿ ಉಂಡು, ಎಲ್ಲ ಒಟ್ಟಾಗಿ ಹಿಮ್ಮುಖರಾದೆವು.
ತಂಡದ ನಾಯಕನ ಜಬರದಸ್ತಿನಲ್ಲಿ ನಾನು ಈ ಬಾರಿ ದೇವಕಿಗೆ ಕುದುರೆ ಸವಾರಿ ವಿಧಿಸಿದ್ದೆ. ಆದರವಳು ನನ್ನ ಮೇಲಿನ ಯಜಮಾನಿಕೆಯಲ್ಲಿ ನಡೆದೇ ಸಾಧಿಸಿದಳು. ಹನೂಮಾನ್ ಚಟ್ಟಿ ತಲಪಿದಾಗ ಇನ್ನೂ ಸಂಜೆ ಐದು
ಗಂಟೆಯಾಗಿತ್ತು. ನಾವು ಮತ್ತೆ ಅದೇ ಕಾಷ್ಠಗೃಹದ ‘ಸುಖ’, ರಜಾಯಿಗಂಧದ ‘ಕನಸಿ’ಗಳಿಗೆ ಹೆದರಿ, ಚುರುಕಾಗಿ ಖೋಲಿ ಖಾಲಿ ಮಾಡಿ ಬೈಕಿಗೆ ಕಟ್ಟುತ್ತಿದ್ದೆವು. ಆ ಪುಣ್ಯ ಗಳಿಗೆಯಲ್ಲಿ ಮೇಲಿನುಪ್ಪರಿಗೆಯ ಪುಣ್ಯಾತ್ಮೆ ಒಬ್ಬಳು, ಜಲಬಾಧೆಯನ್ನು ಮೇಲಿನ ಓಣಿಯಲ್ಲೇ ಮುಗಿಸಿಕೊಂಡಿದ್ದಳು. ಪವಿತ್ರ ಜಲಸ್ನಾತ ಅಧೋಲೋಕದವನೊಬ್ಬ ಬೊಬ್ಬೆ ಹೊಡೆಯ ತೊಡಗಿದ್ದ! ನಾವು ನಮ್ಮ ಪುಣ್ಯವನ್ನು ಕೊಂಡಾಡುತ್ತ, ಮುಂದಿನೂರಿಗೆ ಬೈಕೇರಿಯೇ ಬಿಟ್ಟೆವು.
ನಮ್ಮ ಚತುರ್ಧಾಮ ಸರಣಿಯ ಎರಡನೆಯ ಲಕ್ಷ್ಯ - ಗಂಗೋತ್ರಿ. ಮಸ್ಸೂರಿ ದಾರಿಯದೇ ಬಾರ್ಕೊಟ್ ಅದಕ್ಕೆ ಕವಲೂರು. ಯಾತ್ರಿಕರ ಲೆಕ್ಕದಲ್ಲಿ ಬಾರ್ಕೊಟ್ ಅನುಕೂಲ ಸಂಧಿಯೂ ಹೌದು ಎನ್ನುವಂತೆ ಜೀಯಂವೀಯೆನ್ನಿನ ಒಳ್ಳೆಯ ವಸತಿ ವ್ಯವಸ್ಥೆಯೂ ಅಲ್ಲಿತ್ತು. (ಇಂದಿನ ನಕ್ಷೆಯಲ್ಲಿ ಮೂರು ನಾಲ್ಕು ಹೋಟೆಲ್ಲುಗಳೂ ಪೋಲಿಸ್ ಠಾಣೆಯೂ ಕಾಣುತ್ತದೆ.) ಹಾಸ್ಟೆಲ್ ಬಹುತೇಕ ಖಾಲಿಯೇ ಇತ್ತು. ಹಾಗಾಗಿ ಮೇಟಿ, ಹೋದದ್ದೇ ಚಾ, ಸ್ನಾನಕ್ಕೆ ಬಕೆಟ್ಟಿನಲ್ಲಿ
ಬಿಸಿನೀರು, ರಾತ್ರಿಗೆ ಊಟ ಕೊಟ್ಟ. ಆಮೇಲೆ ಕೇಳಬೇಕೇ! ನಾಲ್ಕು ಸಾವಿರಕ್ಕೂ ಮಿಕ್ಕು ಸತತ ಬೈಕ್ ಯಾನ ಮುಗಿಸಿದ ಮುನ್ನೆಲೆಯಲ್ಲೇ ಬೆಳಿಗ್ಗೆ ಮೂರೂವರೆಗೇ ಎದ್ದು, ಸತತ ಹನ್ನೆರಡು ಗಂಟೆಯ ಚಾರಣ ನಡೆಸುವುದರೊಡನೆ (೨೭ ಕಿಮೀ) ೧೦,೬೦೦ ಅಡಿಗೇರಿ, ೫೦೦೦ ಅಡಿಗಿಳಿದು, ಊರಿನದೇ ಹವೆಯಲ್ಲೆಂಬಂತೆ, ಮಲಗಿದ್ದೆಂದರೆ ತಪ್ಪಾದ್ದೀತು; ಎಂದೂ ನಿದ್ದೆ ಕಾಣದವರಂತೆ ಕಳೆದೇ ಹೋದೆವು!!
(ದಿನದ ಓಟ ೩೬ ಕಿಮೀ ತಾ ೨೪, ತೇ ೪೭% ಔ ೫೦೦೦)
ಇದು ಗಂಗೋತ್ರಿಯ ದಿನ. (೧೫-೫-೯೦) ನಾವು ಹಕ್ಕಿಯಾಗಿ ಹಾರಿದರೆ ಸುಮಾರು ಐವತ್ತು ಕಿಮೀ, ಬೈಕೇರಿ ಓಡಿದರೆ ಸುಮಾರು ಇನ್ನೂರು ಕಿಮೀ ದಾರಿ. ಬಯಲು ಸೀಮೆಯ ಅಳತೆಗೋಲಿನಲ್ಲಿ, "ದಿನಕ್ ಸರಾಗ ಆರ್ನೂರ್ ಕಿಮೀ ಮಿಕ್ ಹೊಡೀತೀನಿ" ಎನ್ನುವ ಗರ್ವವಿದ್ದರೆ, ಇಲ್ಲಿ ಬಾಳಿಕೆ ಬಾರದು. ಹಿಮಾಲಯದ ಯಾವುದೇ ಉತ್ತಮ ದಾರಿ ಹಿಡಿದರೂ ಹತ್ತಿಳಿವ ಮತ್ತು
ತಿರಿಚಾಡುವ ತೀವ್ರತೆ, ಕಣ್ಣು ಕುಕ್ಕುವ ಎತ್ತರ ಮತ್ತು ಕೊಳ್ಳಗಳನ್ನು ದಿಟ್ಟಿಸುತ್ತ ವಾಹನದೋಟದಲ್ಲಿ ನಿಭಾಯಿಸುವಾಗ ಹೆಚ್ಚುಕಮ್ಮಿ ಮುನ್ನೂರು ಕಿಮೀಗೇ ಕಂಗಾಲಾಗುವುದು ನಿಶ್ಚಿತ. ಹಾಗಾಗಿ ನಾವು ಬೆಳಗ್ಗೆ ಆರು ಮುಕ್ಕಾಲಕ್ಕೆ ಬಾರ್ಕೋಟ್ ಬಿಟ್ಟೆವು. ಭೂಪಟದ ಭಾಷೆಯಲ್ಲಿ ಹೇಳುವುದಾದರೆ, ಎರಡು ಗಂಟೆಗಳ ಅವಧಿಯಲ್ಲಿ ಧರಾಸುವಿನ ಪಾತಾಳಕ್ಕೆ ಬಿದ್ದಿದ್ದೆವು. ಮತ್ತೆ ಸಾಕ್ಷಾತ್ ಗಂಗೆಯನ್ನು ಬಲ ಮಗ್ಗುಲಿನಾಳಕ್ಕೆ ಬಿಟ್ಟುಕೊಂಡು, ಮುಕ್ಕಾಲು ಗಂಟೆಯಲ್ಲಿ ಗಗನದೆತ್ತರಕ್ಕೇರಿ ಉತ್ತರ ಕಾಶಿ
ತಲಪುವಾಗ ಗಂಟೆ ಒಂಬತ್ತೂವರೆ.
ಉತ್ತರಖಂಡ ರಾಜ್ಯದ ಈ ಶಿವನಗರಿಗೂ ನಮ್ಮಲ್ಲಿನ ಅನೇಕ ದೇವಳಗಳು ‘ದಕ್ಷಿಣ’ ಅಂಟಿಸಿಕೊಳ್ಳುವಂತದ್ದೇ ಚಾಳಿ, ಹಾಗೆ ಇದು ಉತ್ತರದ ಕಾಶಿ. ಆದರಿಂದು ‘ಉತ್ತರಕಾಶಿ’ ವಿಶೇಷಣದ ಮಿತಿಗೆ ನಿಲ್ಲದೆ, ಅಂಕಿತನಾಮವೇ ಆಗಿದೆ. ಇದಕ್ಕೆ ಹೆಚ್ಚಿನ ಬಲ ಕೊಡುವಂತೆ ಗಂಗಾನದಿ, ಅರ್ಥಾತ್ ಭಾಗೀರಥಿ ಹೇಗೂ ಇದ್ದಾಳೆ. ಮತ್ತೆ ಊರಿನ ಪುಣ್ಯ ಕ್ಷೇತ್ರಗಳ ಸಂಖ್ಯೆಯೂ ಸಣ್ಣದೇನಲ್ಲ. ಹಿಮಾಲಯದ ಪ್ರಖ್ಯಾತ ಮೂರು ಪರ್ವತಾರೋಹಣ ಸಂಸ್ಥೆಗಳಲ್ಲಿ ಒಂದಾದ ನೆಹರೂ ಪರ್ವತಾರೋಹಣ ಸಂಸ್ಥೆ (ಎನ್ನೈಎಂ) ಉತ್ತರಕಾಶಿಯದೇ. ಸಹಜವಾಗಿ ನನ್ನಂಥ ಪರ್ವತಾರೋಗಿಗಳಿಗೂ ಉತ್ತರಕಾಶಿ ಶುಶ್ರೂಷೆ ನೀಡುವ ಪುಣ್ಯಕ್ಷೇತ್ರ. ನಾವು ಪೇಟೆ ಸುತ್ತಿ, ಎನ್ನೈಎಂಗೆ ಆದ್ಯತೆಯ ಮೇಲೇ ಹೋಗಿದ್ದೆವು. ಸ್ವತಃ ಪ್ರಾಂಶುಪಾಲರೆ ನಮ್ಮ ಕುಶಲ ಮತ್ತು ಚಟುವಟಿಕೆಗಳ ಬಗ್ಗೆ ಧಾರಾಳ ಮಾತಾಡಿಸಿ, ಎಲ್ಲರಿಗೂ ಚಾ ಕೊಟ್ಟು ‘ಹರಸಿದರು’.
ಮನೇರಿ ಎಂಬಲ್ಲಿ ವಿದ್ಯುತ್ ಬಸಿಯಲು ಭಾಗೀರಥಿಗೆ ಭಾರೀ ತಡೆ ಹಾಕುವ ಕಾಮಗಾರಿ ಭರದಿಂದ ನಡೆದಿತ್ತು. ಹಿಮಾಲಯ ಜಗತ್ತಿಗೇ ಅತ್ಯುನ್ನತ ಪರ್ವತಶ್ರೇಣಿ, ಅದರಲ್ಲಿನ ಎವರೆಸ್ಟ್ (೨೯೦೩೦ ಅಡಿ) ಅತ್ಯುನ್ನತ ಶಿಖರ, ಸರಿ. ಆದರೆ ಅದಿನ್ನೂ ಬೆಳವಣಿಗೆ ಮುಗಿಸಿಲ್ಲ (ವರ್ಷಕ್ಕೆ ೬.೧ ಸೆ.ಮೀ ಬೆಳೆಯುತ್ತಲೇ ಇದೆ). ಹಾಗಾಗಿ ಅಲ್ಲಿನ ನೆಲ ಸದಾ ಅಸ್ಥಿರ. ಈ ಕಾರಣದಿಂದ ಅಣೆಕಟ್ಟು ಎಷ್ಟು ಸರಿ ಎನ್ನುವುದು ಅಂದೂ ದೊಡ್ಡ ಪ್ರಶ್ನೆಯಾಗಿತ್ತು. ಆ ಕುರಿತು ಇಲ್ಲೇನಾದರೂ ಪ್ರತಿಭಟನೆಗಳು ನಡೆದಿತ್ತೇ ಎಂದು ನನಗೆ ತಿಳಿದಿಲ್ಲ. ಅದೇ ಟೆಹ್ರಿ - ಇದೇ
ಉತ್ತರಾಖಂಡದಲ್ಲಿ ಮುಂದೆ ನಾವು ನೋಡಲಿದ್ದ ಊರಿನ, ಅಣೆಕಟ್ಟು ರಚನೆ, ಜಾಗತಿಕ ವ್ಯಾಪ್ತಿಯ ಪ್ರತಿಭಟನೆಗಳನ್ನೇ ಕಂಡಿತ್ತು.
ಹೆಲ್ಲುಘರ್ (ಸುಮಾರು ೨೪ ಕಿಮೀ ಮುಂದೆ) ಎಂಬ ಹೆಸರಿನ ಜಲಪಾತವನ್ನೂ ನಾವು ಕಂಡ ಉಲ್ಲೇಖ ಮಾತ್ರ ನನ್ನ ದಿನಚರಿಯಲ್ಲಿದೆ. ನಮ್ಮಲ್ಲೂ ಘಟ್ಟ ಮಾರ್ಗಗಳಲ್ಲಿ ಎಷ್ಟೋ ಜಲಧಾರೆಗಳನ್ನು ನಾವು ಕಾಣುತ್ತಿರುತ್ತೇವೆ. ಅವಕ್ಕೆ ಸ್ಥಳೀಯವಾಗಿ ವಿಚಾರಿಸಿದರೆ ಹೆಸರೂ ಇರುತ್ತವೆ. ಆದರೆ ದೊಡ್ಡ ದಾಖಲೆಗಳ ಬೆಂಬತ್ತಿದರೆ ಅನಾಮಧೇಯವಾಗಿಯೇ ಉಳಿದುಬಿಡುತ್ತವೆ. ಹಾಗೆ ಇದರ ಕುರಿತ ವಿವರಗಳು ನನ್ನ ಮಿತಿಯಲ್ಲಿ ಏನೂ ಸಿಕ್ಕಿಲ್ಲ.
ಉತ್ತರಕಾಶಿ - ಗಂಗೋತ್ರಿ ದಾರಿಗೆ ಇಂದು ರಾಷ್ಟ್ರೀಯ ಹೆದ್ದಾರಿ-೩೪ ಎನ್ನುವ ಮಾನ್ಯತೆ ಇದೆ. ಆದರೆ ಆ ದಿನಗಳಲ್ಲಿ ಅದರ ಅಸ್ಥಿರತೆ, ಅದಕ್ಕೂ ಮಿಗಿಲಾಗಿ ತುಂಬ ಉದ್ದುದ್ದಕ್ಕೆ ಸಿಗುತ್ತಿದ್ದ ಕಚ್ಚಾತನ, ನಮ್ಮ ವೇಗವನ್ನು ಕುಂಠಿತಗೊಳಿಸಿತ್ತು. ಹಿಮಚ್ಛಾದಿತ ಬೆಟ್ಟಗಳನ್ನೂ ಸಮೀಪಿಸುತ್ತಿದ್ದೆವು ಮತ್ತು ಪುಟ್ಟದಾದರೂ ಜನವಸತಿ ಪ್ರದೇಶಗಳೂ ಇಲ್ಲವೆನ್ನುವಷ್ಟು ವಿರಳವೂ ಆಗುತ್ತಿತ್ತು. ಹಾಗಾಗಿ ಜಾಲಾ (ತಾ ೨೬, ತೇ೩೬% ಔ. ೮೬೦೦) ಎಂಬಲ್ಲಿ ಸಿಕ್ಕ ಧಾಬಾದಲ್ಲಿ ಸ್ವಲ್ಪ ಹೆಚ್ಚು ಸಮಯ ಕಳೆದರೂ ರೊಟ್ಟಿ ಮಾಡಿಸಿಕೊಂಡೇ, ಊಟ
ಮುಗಿಸಿಯೇ ಮುಂದುವರಿದೆವು.
ಹೆಚ್ಚು ಸ್ಥಿರವೆನಿಸಿದ ನಮ್ಮ ಪಶ್ಚಿಮಘಟ್ಟಗಳಲ್ಲೂ ಹಲವೆಡೆ ಖಾಯಂ ಬೋರ್ಡುಗಳು ಕುಸಿದ ದರೆ, ಉದುರುವ ಕಲ್ಲು ಮುಂತಾದವನ್ನು ಸಾರುವುದಿದೆ. ಹಿಮಾಲಯದ ದಾರಿಗಳಲ್ಲಿ ಅಂಥ ಬೋರ್ಡುಗಳು ವಿಪರೀತವೇ ಇದೆ. ಅದಕ್ಕೂ ಮಿಗಿಲಾದ್ದೊಂದು ಇಲ್ಲಿ ನಮಗೆ ಮೊದಲ ಬಾರಿಗೆ ನೋಡ ಸಿಕ್ಕಿತ್ತು - ‘ಜಾಗ್ರತೆ! ಹಿಮಸ್ಖಲನ ಕ್ಷೇತ್ರ’. ಒಂದೆರಡು ಕಡೆಯಂತೂ ದಾರಿಯ ಎಡ ಮಗ್ಗುಲಿನಲ್ಲಿ ನೇರ ಮೂರು
ನಾಲ್ಕಡಿ ಎತ್ತರಕ್ಕೆ ಕಡಿದ ಮಣ್ಣ ದರೆಯಂತೇ ಹಿಮದ ಹಾಸು ತಣ್ಣಗೆ ಮಲಗಿತ್ತು.
ಹರಸಿಲ್ ಎಂಬಲ್ಲಿಗೆ ಮುಟ್ಟುವಾಗ ಇಪ್ಪತ್ತು-ಮೂವತ್ತಡಿ ಎತ್ತರಕ್ಕೆ ಹಿಮ ಕುಸಿತವೇ ದಾರಿಗಡ್ಡಲಾಗಿ ಬಿದ್ದಿತ್ತು. ಕಲ್ಲು, ಮಣ್ಣು, ಮರ, ಗಿಡ ಸೇರಿದ ಒಟ್ಟಣೆಯಲ್ಲಿ ದಾರಿಯೇ ಇಲ್ಲವಾಗಿತ್ತು. ನಮ್ಮ ಅದೃಷ್ಟಕ್ಕೆ ಅದು ಘಟಿಸಿ ದಿನ ಎರಡೋ ಮೂರೋ ಆಗಿತ್ತು. ಹಾಗಾಗಿ ಆ ದಾರಿಯಲ್ಲಿ ನಮಗೆ ವಾಹನ ಸಂಚಾರವೇನೂ ಸಿಕ್ಕಲ್ಲಿಲ್ಲ ಎನ್ನುವ ಜ್ಞಾನೋದಯವೂ ಆಗ ಆಯ್ತು. ಮತ್ತೆ ಹಿಂದಿನ ಪುಟ್ಟ ಪೇಟೆಯವರಾದರೂ ನಮಗೆ
ಹೇಳಬಹುದಿತ್ತು ಎಂದು ಯಾರಿಗೂ ಒಮ್ಮೆ ಅನ್ನಿಸುತ್ತದೆ. ಆದರೆ ಅವರೆಲ್ಲ ಇಂಥವನ್ನು ‘ನಿತ್ಯಕರ್ಮ’ಗಳಂತೆ ಅನುಭವಿಸಿ ದಡ್ಡುಗಟ್ಟಿದವರೇ ಎಂದು ಮರೆಯುವಂತಿಲ್ಲ.
ಚತುರ್ಧಾಮದ ದಾರಿಗಳನ್ನು ಎಂದೂ ಯುದ್ಧಸ್ತರದಲ್ಲಿ ವಾಹನಸಂಚಾರಕ್ಕೆ ಮುಕ್ತಗೊಳಿಸಲು ಬೀಯಾರ್ವೋ (ಅರೆಸೈನ್ಯ ಇಲಾಖೆ - ಬಾರ್ಡರ್ ರೋಡ್ ಆರ್ಗನೈಜೇಶನ್) ಸಜ್ಜಾಗಿರುತ್ತದೆಂದು ಕೇಳಿದ್ದೆ. ಹಾಗೆಯೇ ಅವರು ಭರದಿಂದ ಕೆಲಸ ನಡೆಸಿಯೂ ಇದ್ದರು. ಸೂರ್ಯನ ಬಿಸಿಗೆ ಸ್ವಲ್ಪ ಸ್ವಲ್ಪವೇ ಹಿಮ ಕರಗಿ ಕೆಸರು ಕೊಚ್ಚೆಯಾಗಿ ಎಲ್ಲೆಲ್ಲು
ಹರಡಿತ್ತು. ಸಿಡಿ ಮದ್ದು, ಸನ್ನಿವೇಶಕ್ಕೆ ತಕ್ಕಂಥ ಸಣ್ಣ ಪುಟ್ಟ ಯಂತ್ರ ಹಾಗೂ ಸಲಕರಣೆಗಳನ್ನು ಅವರು ಪ್ರಯೋಗಿಸುತ್ತಲೇ ಇದ್ದರು. ಈ ಬದಿಯಲ್ಲಿ ಒಂದೆರಡು ಕಾರು, ಬಹುಶಃ ಕೆಲವು ಗಂಟೆಗಳ ಮೊದಲಷ್ಟೇ ಬಂದವು, ದಾಟುವ ಅವಕಾಶ ಒದಗೀತೇ ಎಂದು ಕಾದು ನಿಂತಿದ್ದವು. ಅವರದ್ದೇನೇ ಆಗಲಿ, "ನಮ್ಮ ಭವಿಷ್ಯವೇನು" ಎಂಬ ಪ್ರಶ್ನೆಯನ್ನು ಸಣ್ಣ ಅಳುಕಿನಲ್ಲೇ ಮೇಲ್ವಿಚಾರಕನಲ್ಲಿ ಇಟ್ಟೆ. ಆತ ಸಹೃದಯಿ, "ನಿಮಗೆ ಒಪ್ಪಿಗೆ ಇದ್ದರೆ, ನೀವೂ
ಸೇರಿಕೊಂಡರೆ, ಬೈಕ್‍ಗಳನ್ನು ಎತ್ತಿ, ನೂಕಿ ಆಚೆ ಬದಿಗೆ ದಾಟಿಸಿ ಕೊಡುತ್ತೇವೆ" ಎಂದ. ಆತ ಅನುಮತಿಯಷ್ಟೇ ಕೊಟ್ಟರೆ ಸಾಕು, ಎನ್ನುವ ಬಯಕೆ ಮತ್ತೂ ಅನುಭವ (ಒಂದು ಉದಾಹರಣೆ ನೋಡಿ: ತಲೆ ನೂರ್ಮಲೆಯಲ್ಲಿ..) ನಮ್ಮದು. ಕೂಡಲೇ ಒಪ್ಪಿ, ಕೈ ಸೇರಿಸಿದೆವು.
ಪಟಗಳಲ್ಲಿ ಕಾಣುವಂತೆ ರಸ್ತೆಯ ಎರಡೂ ಕೊನೆಗಳಲ್ಲಿ ತೆರವುಗೊಳಿಸುವ ಕೆಲಸ ನಡೆಯುತ್ತಿದ್ದುದರಿಂದ ದಾಟುವುದು ಅಸಾಧ್ಯವೆಂದೇ ಕಾಣಬಹುದು. ಆ ಎರಡು ಜಾಗಗಳಲ್ಲೂ ಬೈಕುಗಳನ್ನು ಹೆಚ್ಚು ಕಮ್ಮಿ ಅನಾಮತ್ತಾಗಿ ಎತ್ತಿ
ಮೇಲಕ್ಕೇರಿಸಿಕೊಂಡೆವು. ಒಟ್ಟು ರಾಶಿಯ ಮೇಲೆ ಕೆಲಸಗಾರರು ಮೊದಲೇ ತಮ್ಮ ಅನುಕೂಲಕ್ಕಾಗಿ, ದೊಡ್ಡ ದಿಣ್ಣೆಗಳಂತೆ ಬಿದ್ದಿದ್ದ ಮಂಜಿನಗಡ್ಡೆಗಳನ್ನು ಸಣ್ಣ ಸ್ಫೋಟಗಳಿಂದ ಬಯಲು ಮಾಡಿ, ಬಂಡೆಗಳನ್ನು ತಳ್ಳಿ, ಸಣ್ಣಪುಟ್ಟ ಕೊರಕಲುಗಳಿಗೆ ಕೆಸರು ಮಣ್ಣು ತುಂಬಿ, ಸಾಕಷ್ಟು ಬಿಗಿಯಾದ ಮತ್ತು ಸಮತಟ್ಟಿನ ಪಥವನ್ನೇ ಮಾಡಿಕೊಂಡಿದ್ದರು. ಅದು ಜಾರಬಹುದು, ತಳದ ಮಂಜುಗಡ್ಡೆ ಜಾರಿದರೆ ಬಿರಿಯಬಹುದು, ಕೆಸರು ಹೂಳಬಹುದು ಇತ್ಯಾದಿ ಅಪಾಯಗಳಿದ್ದವು. ಹಾಗಾಗಿ ಭಾರೀ
ಜಾಗ್ರತೆಯಿಂದ, ಸುಮಾರು ಐವತ್ತರವತ್ತಡಿ ಉದ್ದವನ್ನು ಎರಡು ಮೂರು ಮಂದಿಯಷ್ಟೇ ನೂಕಿ ಮುಗಿಸಿದ್ದೆವು. ಸರದಿಯಲ್ಲಿ ಒಂದೊಂದೇ ಆದರೂ ಒಟ್ಟಾರೆ ಎರಡೂವರೆ ಗಂಟೆಯ ಶ್ರಮದಲ್ಲಿ, ಎಲ್ಲ ಬೈಕುಗಳೂ ಮಹಾ ಅಜಗರವನ್ನು (= ಪುರಾಣದಲ್ಲಿ ಬರುವ ದೈತ್ಯ ಹಾವು) ದಾಟಿದ್ದವು. ಸಂಜೆ ಆರು ಗಂಟೆಯ ಸುಮಾರಿಗೆ ನಾವು ಗಂಗೋತ್ರಿ ತಲಪಿದೆವು.
ಖ್ಯಾತಿ ದೊಡ್ಡದು, ನಿಜದಲ್ಲಿ ಗಂಗೋತ್ರಿ ಪೇಟೆ, ಹನೂಮಾನ್ ಚಟ್ಟಿಗಿಂತೇನೂ ವಿಶೇಷ ದೊಡ್ಡದಿರಲಿಲ್ಲ. ಅಲ್ಲಿನಂತೇ ಇಲ್ಲೂ
ಒಂದು ಮರದ ಹೋಟೆಲ್ ಹಿಡಿದೆವು. ಇದು ಒಂದೇ ಮಾಳಿಗೆಯ ಸ್ವಲ್ಪ ಉತ್ತಮ ವ್ಯವಸ್ಥೆಯದ್ದು. ವಾಸಸ್ಥಳದ ತಳದಲ್ಲೇ ಎನ್ನುವಂತೆ ಅಡುಗೆ (ಮನೆಯಲ್ಲ) ಕೊಟ್ಟಿಗೆಯೂ ಪಕ್ಕದಲ್ಲೇ ಶೌಚಾಲಯಾದಿ ಬಂದೋಬಸ್ತೂ ಅಲ್ಲಿನ ಲೆಕ್ಕಕ್ಕೆ ಚೆನ್ನಾಗಿಯೇ ಇತ್ತು. ನಾವು ಕತ್ತಲಾಗುವ ಮುನ್ನ ಗಂಗಾತಟಕ್ಕೆ ಹೋಗಿದ್ದೆವು. "ಸ್ಫಟಿಕ ನಿರ್ಮಲ ಜಲಸಮೀಪದಿ..." ಎಂದು ನಾನಿನ್ನೇನು ಯಕ್ಷ-ಪ್ರಸಂಗದ ಸೊಲ್ಲು ತೆಗೆಯಲಿದ್ದೆ. ಆದರೆ ಗಂಗೆಯ ಕಲಂಕು ಕೆನ್ನೀರ ಪ್ರವಾಹ ನೋಡಿ ನಿರಾಶೆಯಾಯ್ತು. ನಮ್ಮೂರ ಅನುಭವದ ಅಡಿಗೋಲಿನಲ್ಲಿ, "ಎಲ್ಲೋ ಮೇಲೆ ಮಳೆಯಾಗಿರಬೇಕು" ಎಂದಂದುಕೊಂಡೆ. ಪಕ್ಕದ ದೇವಳಕ್ಕೊಂದು ಇಣುಕು ನೋಟ ಹಾಕಿ ವಸತಿಗೆ ಬಂದೆವು. ಅಡುಗೆ ಕೊಟ್ಟಿಗೆಯ ಅಂಚಿಗೇ ನಮ್ಮೂರಿನ ಜಂಬ್ರದ ಒಲೆ ಮಾಡಿ, ಮೇಲೊಂದು ಕೊಪ್ಪರಿಗೆ ನೀರು ತುಂಬಿಟ್ಟಿದ್ದರು. ಅದು ನಮ್ಮ ಶೌಚಕ್ಕೂ ರಾತ್ರಿಯ ನಿದ್ರೆಗೆ ಒತ್ತು ಕೊಡುವ ಬೆಚ್ಚನ್ನ ಸ್ನಾನಕ್ಕೂ ಒದಗಿದ್ದು ಭಾಗ್ಯವೇ ಸರಿ. ಇಲ್ಲವಾದರೆ
ಗಾದೆ ಕೇಳಿಲ್ಲವೇ - ಪೃಷ್ಟ ಶೀತಂ ಪ್ರಾಣ ನಾಶಂ!
(ಸಂಜೆ ತಾ. ೧೪, ತೇ. ೪೪%, ಔ. ೧೦೨೦೦, ದಿನದ ಓಟ ೧೯೧ ಕಿಮೀ)
ಹಿಂದೆ ಹೇಳಿದಂತೆ, ಯಮುನಾ ಮೂಲ ಸಾಮಾನ್ಯರಿಗೆ ಅಸಾಧ್ಯ. ಆದರೆ ಗಂಗಾ ಮೂಲ ಸ್ವಲ್ಪ ಶ್ರಮ ಸಹಿಷ್ಣುಗಳಿಗೆ, ಧೈರ್ಯಸ್ಥರಿಗೆ ಸುಲಭ ಸಾಧ್ಯ. ಈ ಮೂಲ ಗೋಮುಖವೆಂದೇ ಪ್ರಸಿದ್ಧವೂ ಆಗಿದೆ. ಮತ್ತೆ ಅದರ ಸಮೀಪದಲ್ಲಿ ಊಟ ವಸತಿ ಕೊಡುವ ಆಶ್ರಮಗಳೂ ಇವೆ.
ಚಾರಣ ದಾರಿಯ ಕೆಲವೆಡೆಗಳಲ್ಲಿ ನಮ್ಮ ದಿಟ್ಟಿಗೆ ನಿಲುಕದ ಬಲು ಎತ್ತರಗಳಿಂದ ಆಗೀಗ (ಹೆಚ್ಚಾಗಿ ಬೆಟ್ಟದಾಡುಗಳ ಓಡಾಟ ಕಾರಣವಂತೆ) ಉರುಳಿ ಬರುವ ಸಡಿಲ ಕಲ್ಲುಗಳ ಅಪಾಯವಿದೆ. ಉಳಿದಂತೆ ಹೆಚ್ಚು ಕಮ್ಮಿ ಸಪಾಟು ಜಾಡು. ಇಲ್ಲೂ ನಮ್ಮದು ಒಂದೇ ದಿನದಲ್ಲಿ ಹೋಗಿ ಬರುವ ಯೋಜನೆ. ಹಾಗಾಗಿ ಬೆಳಿಗ್ಗೆ (೧೬-೫-೯೦, ತಾ. ೧೦.೫) ಬೆಳಕು ಹರಿಯುತ್ತಿದ್ದಂತೆ ನಡಿಗೆ ಶುರು ಮಾಡಿದ್ದೆವು.
ಎರಡೂ ಬದಿಯಲ್ಲಿ ಬಹಳ ಕಡಿದಾದ ಮತ್ತು ಎತ್ತರದ ಬೆಟ್ಟ ಸಾಲು. ತಳದ ಸಪುರ ಪಾತ್ರೆಯಲ್ಲಿ ಗಂಗೆಯ ಸೆಳವು. ಆಕೆಯ ಬಲ ಮಗ್ಗುಲು, ಅಂದರೆ ಹೋಗುವಾಗ ನಮಗೆ ಬಲ ಮಗ್ಗುಲಿನಲ್ಲಿ ನದಿಯಿದ್ದಂತೆ ಸಾಗಿದೆ ಕಚ್ಚಾ ಪುಟ್ಟಪಥ. ಬೆಟ್ಟವನ್ನು ಬಲು ಎಚ್ಚರದಿಂದ ಕಡಿದು, ಅವಶ್ಯವಿದ್ದಲ್ಲಿ ಅಂಚಿಗೂ ತಳಕ್ಕೂ ಅದೇ ಕಾಡು ಕಲ್ಲುಗಳಿಂದ ಗೋಡೆಯನ್ನೇ ಹೆಣೆದು, ಪುಟ್ಟ ಝರಿಗಳಿಗೆ ಸೇತು ಕೊಟ್ಟು ಬಹಳ ಕೌಶಲ್ಯದಿಂದಲೇ ಮಾಡಿದ್ದಾರೆ. (ಬೆಳಿಗ್ಗೆ ೮
ಗಂಟೆ: ತಾ ೧೧, ತೇ. ೪೪%, ಔ.೧೧೦೦೦) ಕಣಿವೆ ಸಪುರವಾದಲ್ಲಿ ನದಿಯನ್ನು ಸುಮಾರು ಐವತ್ತರವತ್ತಡಿ ಆಳದಲ್ಲೂ ವಿಸ್ತಾರವಾದಲ್ಲಿ ನೂರಿನ್ನೂರಡಿ ದೂರದಲ್ಲೂ ಉಳಿಸಿಯೇ ಸಾಗುತ್ತದೆ. ನದಿಯ ನೆತ್ತಿಯಲ್ಲೇ ಆಳದ ಭಯ ಇರುವವರು ನಡೆಯುವಾಗ, ಅವರ ಎದೆ ಢವಗುಟ್ಟುವುದು ಇನ್ನೊಬ್ಬರಿಗೂ ಕೇಳುವಂತಿದ್ದರೆ ಆಶ್ಚರ್ಯವಿಲ್ಲ. (ಚೀರ್ಬಾಸಿ: ಬೆಳಿಗ್ಗೆ ೮.೪೫: ತಾ. ೧೯, ತೇ.೪೦%, ಔ.೧೧೪೦೦) ಉಳಿದಂತೆ ಪ್ರತಿ ಹೆಜ್ಜೆಯನ್ನೂ ಮೇಲಿನಿಂದ ಉರುಳುಗಲ್ಲು ಬರುತ್ತಿದೆಯೇ ಎಂದು ಆತಂಕಿಸುತ್ತಲೇ ಧಾವಿಸುವ ಸ್ಥಿತಿ.
ಸಾಕಷ್ಟು ಬೇಗನೇ ನಾವು ‘ಗೋಮುಖ ->’ ಮತ್ತು ಭೋಜ್‍ವಾಸಾ ಆಶ್ರಮಕ್ಕೆ ನೇರ ಬಾಣ ಗುರುತಿದ್ದ, ಲಟಾರಿ ಮತ್ತು ಅಸ್ಥಿರ ಬುಡದ ಕೈಕಂಬ ತಲಪಿದ್ದೆವು. ಅಲ್ಲಿ ಬಲದ ಇನ್ನಷ್ಟು ಕಚ್ಚಾ ಸ್ಥಿತಿಯ ಜಾಡಿನಲ್ಲಿ ಹತ್ತಿಪ್ಪತ್ತು ಹೆಜ್ಜೆಯಲ್ಲೇ ನದಿ ನೀರು ಮುಟ್ಟುವ ಸೌಕರ್ಯ ಮಾಡಿದ್ದರು. ಆಗಲೇ ನಮಗೆ ಪುಸ್ತಕಗಳ ಮಾತು ಕಣ್ಣಿಗೆ ಸ್ಪಷ್ಟವಾದದ್ದು....
ಗೋಮುಖ |
ಅದೊಂದು ಭಾರೀ ಹಿಮನದಿ - ಸುಮಾರು ೩೦ ಕಿಮೀ ಉದ್ದ ಮತ್ತು ೪-೫ ಕಿಮೀ ಅಗಲದ
ಗಂಗೋತ್ರಿ ಗ್ಲೇಸಿಯರ್. ಅದು ಕರಗಿ ಹೊಳೆಯಾಗುವ ಮುಖಕ್ಕೆ ಹೆಸರು ಗೋಮುಖ ಮತ್ತು ಹರಿವೇ ಗಂಗೆ. ಗೋಮುಖ ಒಂದು ಸ್ಥಿರ ನೆಲೆಯಲ್ಲ, ಅದಕ್ಕೊಂದು ಮೂರ್ತಿಮತ್ತ ರೂಪವೂ ಇಲ್ಲ. ಋತುಮಾನಗಳ ಪ್ರಭಾವಕ್ಕನುಗುಣವಾಗಿ ಮಂಜು ಗಡ್ಡೆ ಕಟ್ಟುತ್ತದೆ, ಕರಗುತ್ತದೆ. ಅದನ್ನನುಸರಿಸಿ ಗೋಮುಖ ನದೀ ಪಾತ್ರೆಯಲ್ಲಿ ಹಿಂದೆ, ಮುಂದೆ ಸರಿಯುತ್ತಲೇ ಇರುತ್ತದೆ. ಸಹಜವಾಗಿ ಗಂಗೋತ್ರಿಯಿಂದ ಚಾರಣದ ಅಂತರವೂ ವ್ಯತ್ಯಾಸಗೊಳ್ಳುತ್ತಲೂ ಇರುತ್ತದೆ. ಹಾಗಾಗಿ ನಾನು
ಮೊದಲು ಹೇಳಿದ ಕೈಕಂಬ ಅಸ್ಥಿರ. ಅದು ದಂಡೆಯಲ್ಲಿ ಸಾಮಾನ್ಯವಾಗಿ ೯ ಮತ್ತು ೧೯ ಕಿಮೀ ಅಂತರದೊಳಗೆ ಮೇಲೆ ಕೆಳಗೆಇ ಓಡಾಡುತ್ತಲೇ ಇರಬೇಕು. ನಾವು ಹೋದಂದು ಅದು ಸುಮಾರು ೧೨ ಕಿಮೀ ಅಂತರದಲ್ಲಿದ್ದಿರಬೇಕು.
ಗಂಗೋತ್ರಿಯಂತೇ ಗೋಮುಖದಲ್ಲೂ ಗಂಗೆ ಕಲಂಕೇ. ಹಿಮಗಡ್ಡೆಗಳು ನದಿಯಾಗಿ ನೂಕಾಡಿಕೊಂಡು ಬರುವಾಗ ನೆಲ, ದಂಡೆಯ ಕಲ್ಲು ಮಣ್ಣನ್ನು ಅರೆದು, ಬೆರೆತೇ ಬಂದಿರುತ್ತದೆ. ಅದರಿಂದಿಳಿವ ನೀರು ‘ಸ್ಟ್ರೋಂಗ್ ಕಪುಚೀನೋ ಶುಗರ್ ಫ್ರೀ ನ್ಯಾಚುರಲೀ ವೆರ್ರೀ ಕೋಲ್ಡ್ ಕಾಫಿ’ ಸಾದೃಶ ಬೆರಕೆಯೇ ಆಗಿರುತ್ತದೆ! ಒಂದೇ ವ್ಯತ್ಯಾಸ ಅಲ್ಲಿನ ಗಂಗೆಯ ಕಲಂಕು ಅನಿವಾರ್ಯ ಪರಿಶುದ್ಧ ಮಣ್ಣಿನದು, ವಾರಾಣಾಸಿಯಲ್ಲಿ ಗಂಗೆಯದು ಕಲಂಕಲ್ಲ, ಕಳಂಕ - ನಾಗರಿಕ ವಲಯಗಳ ಮಹಾಪರಾಧದ್ದು. ಇದನ್ನು ತಿಳಿದೇ ಬುದ್ಧಿವಂತ ಕನ್ನಡಿಗರು ಗಂಗೆಯನ್ನು ಸ್ನಾನಕ್ಕಿಟ್ಟು, ಪಾನಕ್ಕೆ ತುಂಗೆಯನ್ನು
ನೆಚ್ಚಿದ್ದಾರೆ! (ಗಂಗಾಸ್ನಾನಂ, ತುಂಗಾ ಪಾನಂ). ಅಂದು ಅಮ್ಮನಿಗೆ ಬರೆದ ನನ್ನೊಂದು ಪತ್ರದಲ್ಲಿ ದೃಶ್ಯ ವಿವರ ಬರೆದ ಕೊನೆಯಲ್ಲಿ "....ನಿನಗೆ, ನನ್ನತ್ತೆಗೆ, ಮಾಧವ ಭಟ್ಟರಿಗೆ (ನನ್ನೊಬ್ಬ ಪರಮ ಸಾತ್ವಿಕ, ಹಿರಿಯ ಗಿರಾಕಿ ಮಿತ್ರ) ಅತ್ಯಂತ ಶುದ್ಧ ಧಾರೆಯೊಂದರಿಂದ ನೀರು ಸಂಗ್ರಹಿಸಿದ್ದೇವೆ, ತರುತ್ತಿದ್ದೇವೆ" ಎಂದೇ ಮುಗಿಸಿದ್ದೆ. (ಮಧ್ಯಾಹ್ನ ೧೨.೪೫ ತಾ. ೨೪, ತೇ. ೨೮% ಔ. ೧೨೨೫೦)
ಗೋಮುಖದ ದಾರಿಯಲ್ಲಿ ಸುಮಾರು ೯ ಕಿಮೀ ಅಂತರದ ಚೀರ್‍ಭಾಸದಲ್ಲೊಂದು ಆಶ್ರಮವಿದೆಯಂತೆ. ನನಗೆ ಮಾತ್ರ ನೋಡಿದ ನೆನಪಿಲ್ಲ. (ಉಪಾಧ್ಯರ ದಾಖಲೆಯಲ್ಲಿ ಹೆಸರಿದೆ.) ಮತ್ತೆ ಅಲ್ಲಿಂದಲೂ ಮುಂದೆ ಐದು ಕಿಮೀ ಅಂತರದ ಭೋಜ್‍ವಾಸಾದಲ್ಲೂ ಒಂದು ಆಶ್ರಮವಿರುವುದು ಮತ್ತು ಅಲ್ಲಿ ಊಟ ಲಭ್ಯವೆನ್ನುವುದು ನಮಗೆ ತಿಳಿದಿತ್ತು. ಹಾಗೆ ನಮ್ಮ ಚಾರಣವನ್ನು ಅಲ್ಲಿವರೆಗೂ ಮುಂದುವರಿಸಿದೆವು. ಆಶ್ರಮ ಪೌರಾಣಿಕ ಕಲ್ಪನೆಗಳಿಗೆ ಹೊಂದುವಂತೆಯೂ ಆಧುನಿಕ ಅಗತ್ಯಗಳನ್ನು ಸರಳವಾಗಿ ಪೂರೈಸುವಂತೆಯೂ ಇದ್ದು ಕುಶಿ ಕೊಟ್ಟಿತು.
(ತಾ ೧೯, ತೇ ೪೦%, ಔ ೧೧೪೦೦) ಅವರ ಗುಡಿಯ ಪೂಜಾ ಸಮಾಪ್ತಿಯೊಡನೆ ನಮ್ಮನ್ನೂ ಸೇರಿಸಿದಂತೆ ಎಲ್ಲರನ್ನೂ ನೆಲದಲ್ಲಿ ಸಾಲಾಗಿ ಕೂರಿಸಿ, ಪ್ರಸಾದ ರೂಪದ ಸರಳ ಊಟವನ್ನು ಧಾರಾಳವಾಗಿ ಬಡಿಸಿದರು. ಅಲ್ಲಿನ ನನ್ನ ಸಣ್ಣ ಅಧಿಕಪ್ರಸಂಗ ನೆನೆಸಿ, ಈಗಲೂ ನನಗೆ ನಗೆ ಬರುತ್ತದೆ. ಅವರು ಬಡಿಸಿದ್ದ ಚಪಾತಿ, ಸಬ್ಜಿಗೆ ಪೂರಕವಾಗಿ ನಾನು ನೀರುಳ್ಳಿ ಹೋಳುಗಳನ್ನು ಕೇಳಿಬಿಟ್ಟೆ. ಬಡಿಸುತ್ತಿದ್ದ ಮಹಾರಾಜ್ ತುಸು ವ್ಯಗ್ರವಾಗಿ "ಯೇ ಆಶ್ರಮ್ ಹೈ,
ಆಶ್ರಮ್!" ಎಂದು ಗುಡುಗಿದರು. ನಾನು ಈ ಆಶ್ರಮಗಳಲ್ಲಿ ಬೆಳ್ಳುಳ್ಳಿ, ನೀರುಳ್ಳಿ ನಿಷೇಧವಿರುವುದರ ಅರಿವಿಲ್ಲದ್ದಕ್ಕೆ ಕ್ಷಮೆ ಕೇಳಿ ಮುಗಿಸಿಕೊಂಡೆ. ಊಟಕ್ಕವರು ಹಣ ಸ್ವೀಕರಿಸುವುದಿಲ್ಲ ಮತ್ತು ಸೂಚಿಸುವುದೂ ಇಲ್ಲ. ನಾವೇ ಇಚ್ಛಾನುಸಾರ ಹಣವನ್ನು ಗುಡಿಯ ಭಂಡಾರಕ್ಕೆ ಹಾಕಿ ವಾಪಾಸಾದೆವು.
ಬಿಸಿಲಿನ ಕಾವು ಮತ್ತು ಔನ್ನತ್ಯದ ಪರಿಣಾಮಗಳಿಂದ ನಮ್ಮ ನಡಿಗೆ ಬಹುತೇಕ ಯಾಂತ್ರಿಕವಾಗಿಯೂ ಪರಸ್ಪರ ವಿವಿಧ ಅಂತರಗಳಲ್ಲಿಯೂ ನಡೆದಿತ್ತು. ಒಂದೆಡೆ ಮಾತ್ರ ಒಮ್ಮೆಲೆ
ಮೇಲಿನಿಂದ ಕಲ್ಲ ಹರಳುಗಳು ರಭಸದಿಂದ ಬೀಳುವುದು ಉಪಾಧ್ಯರ ಅನುಭವಕ್ಕೆ ಬಂದಿತ್ತಂತೆ. ಝಿಗ್ಗನೆ ವಿದ್ಯುದಾಘಾತವಾದಂತೆ ಅವರೋಡಿದ ವೇಗ, ಇಂದು ನಿಜಕ್ಕೂ ‘ಅನುಭವದ ನೆನಪೇ ಸಿಹಿ’ ಎಂದು ಸಾರುತ್ತದೆ. ಮುಸ್ಸಂಜೆಯನ್ನು ಪೂರ್ಣ ಕತ್ತಲು ನುಂಗುತ್ತಿದ್ದಂತೆ, ನಾವೆಲ್ಲರೂ ಕೇವಲ ಸೋತು ಸುಣ್ಣಾಗಿ ಗಂಗೋತ್ರಿ ಸೇರಿಕೊಂಡಿದ್ದೆವು. ಸ್ಥಳೀಯ ಕೆಲವರು "ಒಂದೇ ದಿನದಲ್ಲಿ ೩೪ ಕಿಮೀ, ಅದೂ ಮಾತಾಜೀ (ದೇವಕಿ) ಸಹಿತ ?" ಎಂದು ಶಂಕಿಸಿದ್ದನ್ನು, ನಾವು ಪಾರಿತೋಷಕದಂತೇ ಸ್ವೀಕರಿಸಿದೆವು.
ಮಲಬದ್ಧತೆ ನನಗೆ ಆನುವಂಶಿಕ ಕೊಡುಗೆ. ದೆಹಲಿ ಅಜೀರ್ಣ ನನ್ನ ಮುಂದಿನ ಚಟುವಟಿಕೆಗಳಲ್ಲಿ ಮಲಬದ್ಧತೆಯ ರಗಳೆಯನ್ನು ಹೆಚ್ಚಿಸಿತ್ತು. ಗೋಮುಖ ಚಾರಣದ ಕೊನೆಯಲ್ಲಿ ಅದು ವ್ಯಗ್ರವಾಗಿತ್ತು. ಗಂಗೋತ್ರಿಯ ಎರಡನೇ ರಾತ್ರಿ ನನಗೆ ಬಹಳ ಸಂಕಟದಾಯಿಯಾಯ್ತು. (ಇದರ ಹೆಚ್ಚಿನ ವಿವರ ಮತ್ತು ಸಮಾಪನದ ಆಸಕ್ತಿಯವರು ನನ್ನ ಇನ್ನೊಂದೇ ಲೇಖನವನ್ನು ಓದಬಹುದು - ಕಾಯಿಲ ಮನಸ್ಕತೆಗೆ ಪರಮಾನಂದ ದಾರಿ) ಮರು ಬೆಳಿಗ್ಗೆ ಸಂಕಟವನ್ನು ಸೂಕ್ಷ್ಮವಾಗಿ ತಂಡದ ಎಲ್ಲ ಸದಸ್ಯರಿಗೆ ತಿಳಿಸಿದೆ. ಆದರೆ
ಯೋಜನೆಯಂತೇ ಸವಾರಿಯನ್ನು ಮುಂದುವರಿಸುವ ಹಠತೊಟ್ಟೆ.
ನನ್ನ ಅಸೌಖ್ಯ ಕಾರಣವಾಗಿ, ನಿತ್ಯ ಶಿಸ್ತಿಗೆ ಸಣ್ಣ ಅಪವಾದವಾಗಿ ಬೆಳಿಗ್ಗೆ (೧೭-೫-೯೦, ೬ ಗಂಟೆಗೆ: ತಾ.೧೪, ತೇ. ೪೪%) ಎಂಟಕ್ಕೆ ಗಂಗೋತ್ರಿ ಬಿಟ್ಟೆವು. ಬೀಯಾರ್ವೋದವರ ಅದ್ಭುತ ಕಾಮಗಾರಿಯಲ್ಲಿ ಹರಸಿಲ್ ಬಳಿ ದಾರಿ ಮುಕ್ತವಾಗಿತ್ತು. ಆದರೆ ಒಟ್ಟಾರೆ ದಾರಿಯ ಕಚ್ಚಾ ಸ್ಥಿತಿ, ನನ್ನ ನೋವಿನ ನಿಧಾನಗಳ ಮೇಲೆ ಎರಡೆರಡು ಟಯರ್ ಪಂಚೇರ್‍ಗಳೂ ಕಾಡಿದ್ದವು. ಹಾಗೆ ಹನ್ನೆರಡು ಗಂಟೆಯ ಸುಮಾರಿಗೆ, ರಣಗುಡುವ ಬಿಸಿಲಿನಲ್ಲಿ ಒಂದು ಟ್ಯೂಬ್ ಬದಲಾವಣೆ ನಡೆಸುತ್ತಿದ್ದಂತೆ, ನಮಗಭಿಮುಖವಾಗಿ ದೂಳಿಯಲೆ ಎಬ್ಬಿಸುತ್ತ, ಆ ನೆಲಕ್ಕೆ ತುಸು ಹೆಚ್ಚೇ ಎನ್ನುವ ವೇಗದಲ್ಲಿ ಬಂದೇ ಬಂತು ಎರಡು ಬೈಕ್! ಯಾರವರು?
(ಮುಂದುವರಿಯಲಿದೆ)
ಅಲ್ಲಿ ಕಲ್ಲುಬೀಳುವ ಜಾಗದಲ್ಲಿ ನಾನು ಓಡಿದ ವೇಗಕ್ಕಿಂತ ನನ್ನ ಓಟದ ಶೈಲಿಯೇ ಸಿಕ್ಕಾಪಟ್ಟೆ ಮನರಂಜಕವಾಗಿತ್ತಲ್ವೇ. ನನ್ನ ಒಂದು ಕಾಲು ಸ್ವಲ್ಪ ಕುಂಟಲ್ವೇ. ನಾನು ಕೊಟ್ಟ ಚಿತ್ರಗಳಲ್ಲಿ ಸ್ಥಳನಾಮವೂ ಇದ್ದಿತ್ತಲ್ಲಾ, ಅದನ್ನೂ ಬರೆದಿದ್ದರೆ ಚೆನ್ನಿತ್ತಲ್ಲಾ.
ReplyDeleteಈ ಬಿಸಿನೀರು ಕುಂಡಗಳನ್ನು ನಾನು ಮೊದಲ ಬಾರಿ ನೋಡಿದ್ದು ಮಣಿಕರ್ಣದಲ್ಲಿ.ಓಡಾಡುವ ದಾರಿ ಬದಿಗಳಲ್ಲೇ ಇದ್ದ ಕುಂಡಗಳಲ್ಲಿ ಬಟ್ಟೆಯಲ್ಲಿ ಗಂಟುಕಟ್ಟಿದ ಅಕ್ಕಿ ಇಟ್ಟು ಅನ್ನ ಮಾಡಿಕೊಳ್ಳುತ್ತಿದ್ದರು.ಅಲ್ಲಿನ ಗುರುದ್ವಾರ ದಲ್ಲಿ ಹೀಗೆ ಬೇಯಿಸಿದ ಅನ್ನ ವೇ ಪ್ರಸಾದವಾಗಿ ಸಿಕ್ಕಿತ್ತು.ಗಂಧಕದ ವಾಸನೆಯುಕ್ತ ಅನ್ನ ಗಂಟಲಲ್ಲಿ ಇಳಿಯುತ್ತಿರಲಿಲ್ಲ.ಪ್ರಸಾದವನ್ನು ಬಿಡುವ ಹಾಗೂ ಇಲ್ಲ.ಬೇರೆ ಹೋಟೆಲ್ ಗತಿ ಇಲ್ಲದ್ದರಿಂದ ಕಷ್ಟಪಟ್ಟು ತಿಂದೇಬಿಟ್ಟೆವು.ಇದು ಮೊದಲಬಾರಿ ಹೋದಾಗ.ಎರಡನೇ ಬಾರಿ ಹೋಗುವಾಗ ಸಾಕಷ್ಟು ಹೋಟೆಲ್ ಗಳು ಉದ್ಭವ ವಾಗಿದ್ದವು.ತಣ್ಣೀರು,ಬಿಸಿನೀರು ಹದವಾಗಿ ಬರುವಂತೆ ಮಾಡಿದ ಸ್ನಾನಗೃಹಗಳು ಹೆಂಗಸರಿಗೆ,ಗಂಡಸರಿಗೆ ಪ್ರತ್ಯೇಕ ವ್ಯವಸ್ಥೆ ಎಲ್ಲಾ ಸಿಕ್ಕಿತ್ತು.
ReplyDeleteಈ ಬಿಸಿನೀರು ಕುಂಡಗಳನ್ನು ಕಂಡವಳಿಗೆ ನಂತರದ ದಿನಗಳಲ್ಲಿ ನಮ್ಮದೇ ರಾಜ್ಯದ ಬೇಂದ್ರ್ ತೀರ್ಥ ನೋಡಲು ಹೋಗಿ ಭ್ರಮನಿರಸನ ವಾಗಿದ್ದು ಸುಳ್ಳಲ್ಲ ��
2.ಹರಿದ್ವಾರದಲ್ಲಿ ಗಂಗಾನದಿ ದಡದ ಬಳಿ ನಿಂತಿದ್ದ ಪ್ರವಾಸಿ ಬಸ್ಸಗಳ ಪ್ರವಾಸಿಗರು ತಮ್ಮ ನಿತ್ಯಕರ್ಮಗಳನ್ನು ಆ ಬಯಲಲ್ಲೇ ನಿರ್ವಹಿಸುತ್ತಿದ್ದು ನೋಡಿ ಗಂಗೆಯಲ್ಲಿ ಮುಳುಗುವ ಯೋಚನೆಯೇ ಬರಲಿಲ್ಲ.ನೀವಂದಂತೆ,ನಾವು ಓದಿದಂತೆ ಬಯಲು ಪ್ರದೇಶ ಕ್ಕೆ ಮೆಕ್ಕಲು ಮಣ್ಣನ್ನು ಹೊತ್ತು ತರುವ ಗಂಗೆಯನ್ನು ನೋಡಿ ವ್ಯಥೆಯಾಗಿತ್ತು.ಹೂ ಕಣಿವೆ,ಬದರೀ ಯಾತ್ರೆಯಲ್ಲಿ ಸ್ನಾನಕ್ಕೆ ಅವಕಾಶ ವಾಗಿರಲಿಲ್ಲ.ವಾಪಸ್ ಹರಿದ್ವಾರ ಕ್ಕೆ ಬಂದು ಮೂಗುಮುಚ್ಚಿ ಬಟಾಬಯಲಿನಲ್ಲಿ ಗಂಗೆಯಲ್ಲಿ ಮಿಂದು ಪುನೀತರಾಗಿದ್ದೆವು.
,3.ಹರಿದ್ವಾರದ ಬೀದಿಗಳಲ್ಲಿ ಅಲೆಯುವಾಗ ಸಹ ಚಾರಣಿಗರು ತಾಮ್ರದ ತಂಬಿಗೆಗಳನ್ನು ಕೊಂಡು ಗಂಗೆಯನ್ನು ತುಂಬಿಕೊಂಡಾಗಲೂ ನಾವು ಬರಿಕೈಯಲ್ಲಿ ಬಂದೆವು.ನಾನು ಸಾಯುವಾಗ ಆ ನೀರು ಬಾಯಿಗೆ ಬಿಡದಿದ್ದರೂ ತೊಂದ್ರೆ ಇಲ್ಲ ಎಂದೇ ಅನ್ನಿಸಿದ್ದು.ಈಗ ತುಂಗೆಯೂ ಪಾನ ಮಾಡುವ ರೀತಿಯಲ್ಲಿ ಇಲ್ಲ ಬಿಡಿ.
,4.ಎರಡು ಬಾರಿ ಹಿಮಾಲಯ ಅಂದುಕೊಂಡು ಹೋದರೂ,14000ಅಡಿ ಚಂದ್ರಕಾಣಿ ಪಾಸ್ ಏರಿದರೂ ಮಂಜುಗಡ್ಡೆ ಯ ಮಜ ಸಿಗಲಿಲ್ಲ ವೆಂದೇ ನನ್ನ ದೂರಿತ್ತು.ದೇವಕಿಯವರು ನಿಂತ ಹಿಮಾಲಯದ ಗೋಡೆಯನ್ನು ಕಾಣಲು ನಾನು ಅಮೆರಿಕಕ್ಕೇ ಹೋಗಬೇಕಾಯಿತು.ಅಲ್ಲಿ ತೃಪ್ತಿ ಯಾಗುವಷ್ಟು ಮಂಜುಗುಡ್ಡೆಗಳನ್ನು ನೋಡಿದೆ.
5.ನಿಮ್ಮ ಚಾರಣ/ಬೈಕ್ ಸವಾರಿ ಅತ್ಯಂತ ಸಾಹಸಭರಿತವಾಗಿದೆ.ಕಥನ ಓದಲೂ ಖುಷಿಯಾಗುವುದು.
6.ಬೆತ್ತದ ಬುಟ್ಟಿಯಲ್ಲಿ ಕೂತವರು ದೇವಕಿಯೇ? ಚಿತ್ರ ಸ್ಪಷ್ಟವಾಗಿ ಕಾಣಲಿಲ್ಲ.ಬಸ್ಸಿನಲ್ಲಿ, ರೈಲಿನಲ್ಲಿ ಹೀಗೆ ಹಿಮ್ಮುಖವಾಗಿ ಕುಳಿತರೆ ನನಗೆ ತಲೆಸುತ್ತು ಬಂದಂತೆ ಆಗುವುದು.ದೇವಕಿಯವರ ಅನುಭವ ಹೇಗಿತ್ತೋ???ಕಳೆದ ವರ್ಷ ಅಮರನಾಥ ಪ್ರವಾಸ ಹೋಗಿದ್ದ ನನ್ನ ಗೆಳತಿಯ ಫೋಟೋ ನೋಡಿದ್ದೆ.ಒಂದು ಕುರ್ಚಿ ಯನ್ನೇ ಎರಡು ಬೊಂಬಿಗೆ ಬಿಗಿದಿದ್ದಾರೆ.ಆ ಕುರ್ಚಿಯಲ್ಲಿ ಕುಳಿತರೆ ಆಯ್ತು.ನಾಲ್ಕು ಜನ ಅದನ್ನು ಎತ್ತಿಕೊಂಡು ಹೋಗುವುದು.ಕುರ್ಚಿಯಲ್ಲಿ ಕೂತವರು ನಿಸರ್ಗ ಸೌಂದರ್ಯ ಸವಿಯುತ್ತಾ, ಕ್ಯಾಮೆರಾ ದಲ್ಲಿ ಫೋಟೋ ತೆಗೆಯುತ್ತಾ ಸಾಗಬಹುದು.
ಕುತೂಹಲದ ಕೊನೆ;ಮುಂದಿನ ಭಾಗಕ್ಕೆ ಕಾದಿರುವೆ.
ಇಲ್ಲ, ನಾನು ಬರೆದಂತೆ ದೇವಕಿ ನಡೆದೇ ಸಾಧಿಸಿದಳು. ಬುಟ್ಟಿಯಲ್ಲಿ ಯಾರೋ ಅಪರಿಚಿತ ಭಕ್ತೆ
Delete