04 August 2020

ಹನುಮಾನ್ ಚಟ್ಟಿಯ ದುಂಧುಭಿ ವಧ!!

(ಪ್ರಾಕೃತಿಕ ಭಾರತ ಸೀಳೋಟ - ೯) 

ಕಾಗೆ ಹಾರಿದಂತೆ ಡೆಹ್ರಾಡೂನ್ - ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ - ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು ಇನ್ನೂ ಕಡಿದು ಎಂದು ತಿಳಿದು, ಅಲ್ಲೇ ಊಟ ಮುಗಿಸಿಕೊಂಡೆವು. ಅಪರಾಹ್ನದ ದಾರಿ ಬಲು ಸುರುಳಿ ಚಕ್ಕುಲಿಯಂತೆ ಸುತ್ತುತ್ತಿದ್ದಂತೆ, ಕ್ಷಣ ಕ್ಷಣಕ್ಕೂ ವಾತಾವರಣದಲ್ಲೂ ತಂಪು ಏರುತ್ತಿತ್ತು. ದಾರಿಯ ಈ ಭಾಗವನ್ನೇ ಹೀರೊಂಡಾ ಕಂಪೆನಿ ತನ್ನ ಜಾಹೀರಾತುಗಳೆಲ್ಲ ‘ಒಂದು ಲೀಟರ್ ಪೆಟ್ರೋಲ್ ದಾರಿ’ ಎಂದೇ ಮೆರೆಸುತ್ತಿದ್ದದ್ದು ನೆನಪಾಗಿತ್ತು. 

ಎರಡೂ ಮುಕ್ಕಾಲು ಗಂಟೆಗೆ ನಾವು ಮಸ್ಸೂರಿ ಮುಟ್ಟುತ್ತಿದ್ದಂತೆ ಆಕಾಶವೇ ಹರಿದು ಬಿದ್ದಂತೆ ಭಾರೀ ಮಳೆ ಬಂತು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಮುದ್ರಣಾಲಯದ ಶೆಡ್ಡು ಖಾಲಿಯಾಗಿ ತೆರೆದುಕೊಂಡಿತ್ತು! ಸಕಾಲಕ್ಕೆ ಒಳ ಸೇರಿದ್ದಕ್ಕೆ ಉರಿ ಬಿಸಿಲ ನಾಡಿನ ವ್ಯವಸ್ಥೆಯಲ್ಲೇ ಇದ್ದ ನಾವೂ ನಮ್ಮ ಗಂಟು ಮೂಟೆಗಳೂ ಬಚಾವಾದವು. (ಮುಂದೆ ಗಂಟುಗಳಿಗೆಲ್ಲ ಪ್ಲ್ಯಾಸ್ಟಿಕ್ ಆವರಣ ಕೊಟ್ಟೇ ಕಟ್ಟುತ್ತಿದ್ದೆವು, ನಮ್ಮ ಮಳೆಯುಡುಪುಗಳು ಸುಲಭವಾಗಿ ಸಿಗುವಂತೇ ಇಟ್ಟುಕೊಳ್ಳುತ್ತಿದ್ದೆವು.) 

ಹಿಮಾಲಯದ ಪ್ರಾಥಮಿಕ ಶ್ರೇಣಿಯೊಂದರ ಶಿಖರ ವಲಯದಲ್ಲಿರುವ ಪುಟ್ಟ ಪಟ್ಟಣ ಮಸ್ಸೂರಿ. ನಾವು ಮಳೆ ತಪ್ಪಿಸಿಕೊಂಡ ಸ್ವಲ್ಪದರಲ್ಲೇ ಅಂದರೆ ದಾರಿಯ ಉತ್ತುಂಗದಲ್ಲೇ ಒಂದು ಪೋಲಿಸ್ ಕಟ್ಟೆ ಇತ್ತು. ಅಲ್ಲಿದ್ದೊಬ್ಬ ಕನಿಷ್ಠಬಿಲ್ಲೆ, ಜಬರ್‍ದಸ್ತಿನಲ್ಲಿ ತಡೆದು, "ಪಹಾಡ್ ಕಾ ಲೈಸೆನ್ಸ್..." ಎಂದು ಸವಾಲು ಹಾಕಿದ. ನಾನು ನನ್ನ ಲೈಸೆನ್ಸ್ ತೆಗೆದು ತೋರಿಸಿದೆ. ಅವನದನ್ನು ನಿರಾಕರಿಸಿ ಮತ್ತೆ "ಪಹಾಡ್ ಕಾ..." ಎನ್ನುವಾಗ ನನಗೆ ಲೌಕಿಕದ ಅರಿವಾಯ್ತು. ‘ಇಂಥವು’ಗಳನ್ನು ಹೊಸಕಲು ನಾನು
ಸಜ್ಜಾಗಿದ್ದ ನಾಟಕದಂತೆ, ಹಿಂದಿ ಅರ್ಥವಾಗದವನಂತೆ ನಟಿಸಿ, ಇಂಗ್ಲೀಷಿನಲ್ಲಿ, ತಣ್ಣಗಿನ ಗಂಭೀರ ಸ್ವರದಲ್ಲಿ, ಭಾರತದ ಸಂವಿಧಾನದಿಂದ ತೊಡಗಿ ಮಂಗಳೂರಿನ ಆರ್‍ಟೀಓವರೆಗಿನ ಪುರಾಣಗಳನ್ನೆಲ್ಲ ಉದ್ಧರಿಸಿ, "ಭಾರತಕ್ಕೆಲ್ಲ ಕೊಡುವುದು ಒಂದೇ ಲೈಸೆನ್ಸ್" ಎಂದೆ. ಆತ ಪಿಳ ಪಿಳ ಕಣ್ಣು ಬಿಟ್ಟು ಸುಮ್ಮನಾದ. ವಾಸ್ತವದಲ್ಲಿ ಅಸಂಖ್ಯ ಟ್ಯಾಕ್ಸೀವಾಲರು, ಮುಖ್ಯವಾಗಿ ದಿಲ್ಲಿಯಿಂದ, ನೇರ ಬಾಡಿಗೆಯಲ್ಲಿ ಗಢವಾಲ್ ಪ್ರದೇಶ ಸುತ್ತಿಸಲು ಗಿರಾಕಿ ತರುತ್ತಿದ್ದರಂತೆ. ಇದು ಹೆಚ್ಚಿನ ಸಂಖ್ಯೆಯ ಅಪಘಾತಗಳಿಗೆ ಕಾರಣವಾಗುತ್ತಿತ್ತು. ಸಣ್ಣದಾಗಿ
ಸ್ಥಳೀಯ ಟ್ಯಾಕ್ಸೀವಾಲರಿಗೂ ವಹಿವಾಟು ಕೊರತೆಯಾಗುತ್ತಿದ್ದಿರಬೇಕು. ಅದರ ತಡೆಗಾಗಿ ಇಲ್ಲಿ ಬರುವ ಕೇವಲ ಟ್ಯಾಕ್ಸೀಗಳಿಗೆ ‘ಪಹಾಡ್ ಕಾ ಲೈಸೆನ್ಸ್’ ಅರ್ಥಾತ್ ಬೆಟ್ಟದ ಪರವಾನಗಿ ಕಡ್ಡಾಯ ಮಾಡಿದ್ದಾರೆ. ಆದರೀತ ನಮ್ಮ ಮೇಲೆ ‘ಮಾಮೂಲಿ’ ಚಪಲ ಮೆರೆದಿದ್ದನಷ್ಟೆ. 

ಮಸ್ಸೂರಿಯಲ್ಲಿ ನಗರವೆಂದರೆ ಬಲದಾರಿ. ಅದಕ್ಕೂ ಮೊದಲೇ ಡೆಹ್ರಾಡೂನ್ - ಯಮುನೋತ್ರಿ ಮುಖ್ಯ ದಾರಿಯ ಎಡ ಮಗ್ಗುಲಿನಲ್ಲಿ, ನಾವು ಆ ಕಾಲಕ್ಕೆ ಮೊದಲ ಬಾರಿಗೆ
ಬಹುಮಹಡಿ ವಾಹನ ತಂಗುದಾಣ ನೋಡಿದೆವು. ಪೇಟೆಗೆಂದು ಬಲಕ್ಕೆ ಹೊರಳುವ ತುಂಡು ರಸ್ತೆ, ಹೆಚ್ಚು ಕಡಿಮೆ ಬೆಟ್ಟದ ಆ ಶಿಖರವಲಯದ ಎಲ್ಲ ಪ್ರವಾಸೀ ಅಗತ್ಯಗಳನ್ನೂ ಪೂರೈಸುತ್ತದೆ. ಆಹಾರ, ಅಲಂಕಾರಿಕ ಮಾರುಕಟ್ಟೆ, ಶಿಖರದರ್ಶನ ಮುಂತಾದವುಗಳೊಡನೆ ವಿಶ್ರಾಂತಿಗೆ ಬಹುತೇಕ ಹೋಟೆಲುಗಳಿದ್ದದ್ದೂ ಅಲ್ಲೇ. ಅದನ್ನು ಸಮರ್ಥವಾಗಿ ನಿರ್ದೇಶಿಸಿ, ನಿರ್ವಹಿಸುವ ಗುತ್ತಿಗೆಯನ್ನು ಖಾಸಗಿಯವರಿಗೆ ಬಿಟ್ಟದ್ದರಿಂದ ಅಲ್ಲಿಗೆ ಹಗಲು ಪ್ರವೇಶಿಸುವ ವಾಹನಗಳು ಪ್ರತ್ಯೇಕ ಸುಂಕ ಕೊಡಲೇಬೇಕಿತ್ತು. ಮತ್ತೆ
ಯಾವ ವಾಹನಗಳೂ ಊರೊಳಗೆ ತಂಗುವಂತಿರಲಿಲ್ಲ. ಆದರೆ ದೊಡ್ಡವಕ್ಕೆ ಆಚೆ ಹೇಗೂ ಬಹುಮಹಡಿಯ ವ್ಯವಸ್ಥೆಯಿತ್ತು. ನಮಗೇನೆಂದು ತಿಳಿಯಲು, ನಾವೊಂದಿಬ್ಬರು ಬೈಕನ್ನೂ ಇತರರನ್ನೂ ಹೊರಗೇ ಬಿಟ್ಟು ನಡೆದೇ ಹೋದೆವು, ಅನುಕೂಲದ ಹೋಟೆಲ್ ನಿಷ್ಕರ್ಷೆ ಮಾಡಿದೆವು. ಬೈಕಿಗೆ ಹೋಟೆಲ್ ಅಂಗಳದಲ್ಲಿ ಜಾಗವಿತ್ತು. ಆದರೂ ಬೈಕೊಂದಕ್ಕೆ ಸುಂಕದ ಲೆಕ್ಕದಲ್ಲಿ ಸುಂಕೇ ಐವತ್ತು ರೂಪಾಯಿ ಕಳೆದುಕೊಳ್ಳಬೇಕೇ? ಹೋಟೆಲಿನವ ಜಾಣತನ ಹೇಳಿಕೊಟ್ಟ. ನಾವು ಬೈಕನ್ನು ಮುಖ್ಯ ದಾರಿ ಬದಿಯಲ್ಲೇ ಬಿಟ್ಟು, ಗಂಟು
ಗದಡಿಯನ್ನಷ್ಟೇ ಕಳಚಿ, ಹೊತ್ತು ನಡೆದು ಕೋಣೆ ಸೇರಿಕೊಂಡೆವು. ರಾತ್ರಿ ಸುಂಕದ ಅವಧಿ ಮುಗಿದ ವೇಳೆಗೆ, ಅಂದರೆ ಒಂಬತ್ತೂವರೆಯನಂತರ ಹೋಗಿ ಬೈಕ್ ತಂದು ಜಾಗ್ರತೆ ಮಾಡಿಕೊಂಡೆವು. 

ಮಸ್ಸೂರಿ ಪೇಟೆಯ ನಿಜ ಶಿಖರಕ್ಕೆ ಗೊಂಡೋಲಾ (ರೋಪ್ವೇ ಅರ್ಥಾತ್ ಹಗ್ಗದಲ್ಲಿ ಹೋಗುವ ತೂಗುತೊಟ್ಟಿಲು) ಇತ್ತು. ಜೋಗ, ಪಳನಿಗಳಲ್ಲಿ ಬಂಡೆಯ ತೀವ್ರ ಇಳಿಜಾರು ಮೈಯಲ್ಲಿ ಎಳೆಯುವ ಗಾಡಿಗಳಲ್ಲಿ ಹೋದ ನೆನಪಷ್ಟೇ ಇತ್ತು. ಸಂಜೆ,
ಬಹುಶಃ ಅದೇ ಮೊದಲ ಭಾರೀ ಎನ್ನುವ ಸಂಭ್ರಮದಲ್ಲೇ ರೋಪ್ವೇ ಬಳಸಿದ್ದೆವು. ಅದರಲ್ಲಿ ಪ್ರಚಾರಕ್ಕೆ ತಕ್ಕ ಭಾರೀ ಗಗನಗಾಮೀ ದೃಶ್ಯ ವೈಭವವೇನೂ ಇರಲಿಲ್ಲ - ಬಹುತೇಕ ಪೇಟೆಯದೇ ಮಾಡುಗಳ ಮೇಲೆ ಹೋಗುತ್ತದೆ. ಶಿಖರದಲ್ಲಾದರೂ ದಕ್ಕಿದ್ದು ಒಂದು ಪಾರ್ಶ್ವ ನೋಟ ಮಾತ್ರ. ಬದರಿ, ಕೇದಾರಗಳ ದಿಕ್ಕನ್ನು ತೋರುವ ಬೋರ್ಡಷ್ಟೇ ನೋಡಿ ತೃಪ್ತರಾಗಬೇಕಾಯ್ತು. ನಾವು ಅನನುಭವದ ಉಡಾಫೆಯಲ್ಲಿ ಬೆಚ್ಚಗಾಗಿಸುವ ಉಡುಪುಗಳನ್ನೇನೂ ಒಯ್ದಿರಲಿಲ್ಲ. ಅಲ್ಲಿ ಕೊನೆಗೆ ಒಮ್ಮೆಲೇ ಮೋಡ, ಮಂಜು
ಕವಿದು, ಪಿರಿಪಿರಿ ಮಳೆಯೂ ಸುರಿದು, ಏರಿದ ಚಳಿಯಲ್ಲಿ, ನಮಗೆ ಗದಗುಟ್ಟಿ ಮುದುಡಿ ಹೋಟೆಲ್ ಸೇರಿದರೆ ಸಾಕೆನ್ನಿಸಿತ್ತು. 

ಬೆಟ್ಟಕ್ಕೆ ಸಹಜವಾಗಿ ಬೇಗನೆ ವಾತಾವರಣ ತಿಳಿಯಾದ ಮೇಲೆ ನಮ್ಮ ಹೋಟೆಲ್ ಬಾಲ್ಕನಿಯಿಂದ ಕಾಣುತ್ತಿದ್ದ ಡೆಹ್ರಾ ಡೂನ್ ದಾರಿ (ಹೀರೊಂಡಾ ಜಾಹೀರಾತಿನದ್ದೇ ತದ್ಪ್ರತಿ) ಮತ್ತು ಕಣಿವೆ ನಮಗೆ ಶಿಖರದಲ್ಲಾದ ಸ್ವಲ್ಪ ನಷ್ಟಭರ್ತಿ ಮಾಡಿತು. ಈಚೆಗೆ (೨೦೧೯) ಡೆಹ್ರಾಡೂನಿನಿಂದ ನೇರ
ಮಸ್ಸೂರಿಗೇ ರೋಪ್ವೇ ಶುರುವಾಗಿದೆ. ಐದೂವರೆ ಕಿಮೀ ಅಂತರದ ಇದನ್ನು ಸುಮಾರು ಹದಿನಾರು ಮಿನಿಟಿನಲ್ಲಿ ಹಾದು ಬರುವ ಈ ಅವಕಾಶ ಖಂಡಿತವಾಗಿಯೂ ಹೆಚ್ಚಿನ ಸೌಂದರ್ಯಸೂರೆ ಮಾಡಬಹುದು. ಹಾಗೆಂದು ಹಿಂದೆಲ್ಲ ಯಮುನೋತ್ರಿ ಯಾತ್ರಿಗಳು ಹೆಚ್ಚು ಕಮ್ಮಿ ಇದೇ ನೇರಕ್ಕೆ ನಡೆಸುತ್ತಿದ್ದ ಸಾಹಸೀ ಚಾರಣ, ನಾವು ಬಂದ ದಾರಿಯ ಚಂದಗಳೆಲ್ಲ ಉಪೇಕ್ಷಿಸುವಂತವೂ ಅಲ್ಲ. 

ನಮ್ಮ ಬಾಲ್ಕನಿಯಿಂದ ಡೂನ್ ಕಣಿವೆಯ ಹವೆ ತಿಳಿಯಾಗಿದ್ದಂದು ರಾತ್ರಿಯ ದೃಶ್ಯ ಇನ್ನೊಂದೇ ರೋಮಾಂಚಕ ದೃಶ್ಯ. ಪ್ರವಾಸದ ನಮ್ಮ ಕ್ಯಾಮರಾಗಳಿಗೆ ‘ಬಿಡುಗಣ್ಣ’ಲ್ಲಿರುವ ಸಾಮರ್ಥ್ಯ ಇರಲಿಲ್ಲ ಮತ್ತೆ ರೋಲುಗಳಿಗೆ ಹಗಲಿನ ದೃಶ್ಯಗಳನ್ನು ಗ್ರಹಿಸುವ ಕ್ಷಮತೆ ಮಾತ್ರ ಇತ್ತು. ಹಾಗೆಂದು ಪ್ರಯೋಗಶೀಲ ಉಪಾಧ್ಯರು ಸುಮ್ಮನೆ ಕೂರಲಿಲ್ಲ. ಆ ದಿನಗಳಲ್ಲಿ ಶಾಲೆ ಕಾಲೇಜುಗಳ ‘ಗ್ರೂಪ್ ಪಟ’ ತೆಗೆಯಲು ಬರುತ್ತಿದ್ದ ಸ್ಟುಡಿಯೋ ಮಂದಿ ಮುಕ್ಕಾಲಿ ಮೇಲೆ ದೊಡ್ಡ ಡಬ್ಬಿ
ಕ್ಯಾಮರಾ ಕೂರಿಸಿ, ಮೇಲೆ ಕರಿ ಮುಸುಕು ಹಾಕಿ, ಅದರೊಳಗೆ ನುಸಿದುಕೊಂಡು ಚೌಕಟ್ಟು, ಜನ ಹೊಂದಾಣಿಕೆ ಮಾಡುತ್ತಿದ್ದದ್ದು ನೆನಪಿಸಿಕೊಳ್ಳಿ. ಉಪಾಧ್ಯರು ಮೊದಲು ತಮ್ಮ ಕ್ಯಾಮರಾವನ್ನು ಮುಕ್ಕಾಲಿ, ಬೇಕಾದ ಚೌಕಟ್ಟುಗಳೆಲ್ಲ ಹೊಂದಿಸಿಟ್ಟರು. ಅನಂತರದ್ದೆಲ್ಲ ಬಹಳ ಸೂಕ್ಷ್ಮ ಕೆಲಸ. ಕ್ಯಾಮರಾದ (ಲೆನ್ಸ್ ಕ್ಯಾಪ್) ರೆಪ್ಪೆ ಮುಚ್ಚಿದರು. ಸಜ್ಜಾಗಿರಿಸಿಕೊಂಡಿದ್ದ ಪುಟ್ಟ ಟೇಪಿನಂತ ದಾರವೊಂದರಲ್ಲಿ ಕ್ಲಿಕ್ ಗುಂಡಿ ಒತ್ತಿ ಕಟ್ಟಿದರು. ಎಲ್ಲ ತೃಪ್ತಿಯಾದ ಮೇಲೆ ಕ್ಯಾಮರಾ ‘ರೆಪ್ಪೆ’ ತೆರೆದಿಟ್ಟು, ಅಂದಾಜಿನ
ಸಮಯಾಂತರದಲ್ಲಿ ಮುಚ್ಚಿದರು. ಆ ಕೌಶಲ್ಯಕ್ಕೇ ಮಾರುಹೋಗಿ ನಾನೂ ರಾಜನೂ ನಮ್ಮ ಕ್ಯಾಮರಾಗಳನ್ನು ಅವರಿಗೇ ಕೊಟ್ಟು ಹಾಗೇ ಮಾಡಿಸಿಕೊಂಡೆವು. ಇಂದು ಸಂದ ಕಾಲ ಮಹಾತ್ಮ್ಯೆಯಲ್ಲಿ ಇತರ ಚಿತ್ರಗಳಂತೆ ಅವು ಮಾಸಿದ್ದರೂ ಆ ಚಂದ ಅಲೌಕಿಕ. 
(ಔನ್ನತ್ಯ ೭೨೦೦, ತಾಪಮಾನ ಸಂಜೆ ೧೬, ತೇ೪೫%, ಮರು ಬೆಳಿಗ್ಗೆ ತಾ. ೧೪.೫ ಡಿಗ್ರಿ ದಿನದ ಓಟ ೭೨ ಕಿಮೀ) 

ಬೆಳಿಗ್ಗೆ (೧೩-೫-೯೦) ಮಸ್ಸೂರಿ ಶ್ರೇಣಿಯ ಹಿಮ್ಮೈ ಅಂಕಾಡೊಂಕಿಯಲ್ಲಿ ನಾವು ನಿಧಾನಕ್ಕೇ ಎಲ್ಲ ನೋಡಿ
ಆನಂದಿಸುತ್ತ ಕಣಿವೆಗೆ ಇಳಿದೆವು. ಎಂಟೇ ಕಿಮೀಯಲ್ಲಿ ಪುರಸಭೆಯ ಅಲಂಕಾರಿಕ ಉದ್ಯಾನವನ, ಅಲ್ಲಿದ್ದ ಪುಟ್ಟ ಕೊಳದ ದೋಣಿ ಸವಾರಿಯ ಮೋಜನ್ನು ಅಂಚಿನಿಂದ ನೋಡಿಯೇ ಮುಂದುವರಿದೆವು. ಮತ್ತೊಂದು ಸಣ್ಣ ಬಲ ಕವಲು ಹಿಡಿದು ಸುಮಾರು ಹದಿನೈದು ಕಿಮೀ ಕೊನೆಯಲ್ಲಿ ನಿಂತ ಸ್ಥಳ - ಕೆಮ್ಟಿ ಜಲಪಾತ (ಉದ್ದ ಸು. ೪೫೦೦ ಅಡಿ). ಹಿಂದಿನದ ಮಳೆಯ ಹೊಡೆತದಲ್ಲಿ ಕೆರಳಿದ ಜಲಪಾತ ಇನ್ನೂ ಆರ್ಭಟೆಯನ್ನು ತಗ್ಗಿಸಿರಲಿಲ್ಲ. ಅದರ ಸಮೀಪದಲ್ಲಿ ಹಿಂದಿನ ನಡೆದ ಭೂಕುಸಿತ ಇನ್ನೂ ಅಂದಾಜಿಗೆ ಸಿಕ್ಕಿರಲಿಲ್ಲ. ನಮ್ಮನ್ನು
ಸಮೀಪ ಹೋಗದಂತೆ ಸ್ಥಳೀಯರು ಎಚ್ಚರಿಸಿದರು. ನಾವು ಸಿಕ್ಕಷ್ಟನ್ನೇ ಗ್ರಹಿಸಿ ಮತ್ತೆ ಯಮುನೋತ್ರಿ ದಾರಿಗೇ ಮರಳಿದೆವು. 

ಕೆಂಪ್ಟಿಯ ಆಳದಿಂದ ಮುಖ್ಯ ದಾರಿಗೆ ಏರಿ ಇನ್ನೊಂದು ಮಗ್ಗುಲಿನಲ್ಲಿ ಸುತ್ತಿ ಸುಳಿದು ಇಳಿದದ್ದು ಯಮುನಾ ನದೀ ತಟಕ್ಕೆ. ಹೆಚ್ಚು ಕಮ್ಮಿ ಉತ್ತರದಿಂದ ನೇರ ಬರುವ ಯಮುನೆ ಈ ಮಸ್ಸೂರಿ-ಕೆಮ್ಟಿ ಶ್ರೇಣಿಯನ್ನು ನಿವಾರಿಸುವಂತೆ, ಇಲ್ಲಿ ವಿರಾಮದಲ್ಲಿ ಪಶ್ಚಿಮ ಮುಖಿಯಾಗುತ್ತಾಳೆ. ಮುಂದೆ ಉದ್ದಕ್ಕೂ ಬಹುತೇಕ ಯಮುನಾ ನದಿ ದಂಡೆಯೇ ನಮ್ಮ ದಾರಿ ಎನ್ನಬಹುದು. ಯಮುನೆ ಕೊರೆದ ತೀರಾ ಇಕ್ಕಟ್ಟಿನ ಕಣಿವೆಗಳನ್ನು ನಿವಾರಿಸಲಷ್ಟೇ ಮಗ್ಗುಲಿನ ಬೆಟ್ಟಕ್ಕೆ ತೀವ್ರ ಏರು. ಮುಗಿದದ್ದೇ ಮತ್ತೆ ಅಷ್ಟೇ ತೀವ್ರ ಇಳಿಜಾರಿನಲ್ಲಿ ಯಮುನೆಯ ಸಾಂಗತ್ಯ. 

ಹಿಂದೆಲ್ಲ ಚತುರ್ಧಾಮಗಳನ್ನು ಡೆಹ್ರಾಡೂನ್ ತಪ್ಪಲಿನಿಂದ ದಿನಗಟ್ಟಳೆ ನಡೆದೇ ನೋಡುತ್ತಿದ್ದರು. ಈಗಲೂ ಹರಕೆ ಹೊತ್ತು ಮಾಡುವವರಿದ್ದಾರಂತೆ. ಅದಕ್ಕೆ ಸರಿಯಾಗಿ ಆಯಕಟ್ಟಿನ ಜಾಗಗಳ ಹಳ್ಳಿಗಳೋ ಏನೂ ಇಲ್ಲದಲ್ಲಿ ಬೇರೆ ಬೇರೆ ರೂಪದ ವಾಸ ವ್ಯವಸ್ಥೆ ವಿಕಾಸಗೊಂಡದ್ದನ್ನು ಧಾರಾಳ ನೋಡಬಹುದು. ಎಲ್ಲಕ್ಕೂ ರಮ್ಯ ಸ್ಥಳಪುರಾಣಗಳು! ಮಥುರಾದ ಕೃಷ್ಣ ಜನ್ಮಸ್ಥಾನದಲ್ಲಿ ನಾನು ಹೇಳಿದ್ದನ್ನು ನೆನಪಿಸಿಕೊಳ್ಳಿ. ಸಣ್ಣ ಸಣ್ಣ ಪೇಟೆಗಳು - ನೈನ್ ಭಾಗ್, ಡಮ್ಟಾ (ಔ. ೩೪೦೦), ನವಗಾಂವ್ (ಔ.೪೫೦೦) ಕೆಲವು ಉದಾಹರಣೆಗಳು. 

ದಾರಿಯಲ್ಲೆಲ್ಲೋ ಒಂದು ಪಂಚೇರ್ ಕಾಡಿತ್ತು. ನಮ್ಮಲ್ಲಿ ಫುಟ್ ಪಂಪ್ ಮತ್ತು ಹೆಚ್ಚುವರಿ ಟ್ಯೂಬುಗಳಿದ್ದವು. ಚಕ್ರ, ಟ್ಯೂಬ್ ಕಳಚಿ ಹೊಸ ಟ್ಯೂಬ್ ಹಾಕುವುದು ನಮಗೆ ಹೊಸತೇನಲ್ಲ. ತೂತಾದ ಟ್ಯೂಬನ್ನು ಮುಂದೆ ಸಿಕ್ಕ ರಿಪೇರಿ ಅಂಗಡಿಯಲ್ಲಿ ಸರಿಮಾಡಿಸಿಟ್ಟುಕೊಂಡೆವು. ನವಗಾಂವಿನಲ್ಲಿ ಊಟ ಮಾಡಿ, ಮುಂದುವರಿದೆವು. ಸಯಾನ್ ಚಟ್ಟಿ (ಔ.೬೬೦೦) ತನ್ನ ಔನ್ನತ್ಯದಿಂದಲೇ ಒಳ್ಳೆಯ ಪ್ರೇಕ್ಷಣೀಯ ಸ್ಥಳ. ಸಂಜೆಗೆ, ವಾಹನ ಯೋಗ್ಯದಾರಿಯ ಕೊನೆಯ ಹಂತ - ಹನೂಮಾನ್ ಚಟ್ಟಿಗೆ ತಲಪಿದೆವು. (ಇಂದು ವಾಹನ ದಾರಿ ತುಂಬ ಮುಂದುವರಿದಿದೆಯಂತೆ) 

ಯಾತ್ರಿಗಳ ಕನಿಷ್ಠ ಅಗತ್ಯಗಳನ್ನಷ್ಟೇ ಪೂರೈಸುವ ವ್ಯವಸ್ಥೆ ಹನೂಮಾನ್ ಚಟ್ಟಿಯಲ್ಲಿತ್ತು. ಆದರೂ ನಮಗೆ ಸಿಕ್ಕ ಎರಡು ಮಾಳಿಗೆಗಳ, ಪೂರ್ಣ ಮರದ್ದೇ ಮನೆ ಕೊಡುತ್ತಿದ್ದ ದೃಶ್ಯ ಮೋಹಕ. ಹೊರೆಗಳನ್ನು ನಮಗೆ ಸಿಕ್ಕ ಎರಡನೇ ಮಾಳಿಗೆಯ ಕೋಣೆಯೊಂದಕ್ಕೆ ಹೊತ್ತು ಹಾಕಿ ಬಾಲ್ಕನಿಯಿಂದಲೇ ನೇರ ಕೆಳಗೆನ್ನುವಂತೇ ಕಾಣುತ್ತಿದ್ದ ರಮಣಿ - ಯಮುನೆ, ಕಲ್ಲಚೂರುಗಳದೇ ಪಾತ್ರೆಯಲ್ಲಿ ಕಲಕಲಿಸುತ್ತಿದ್ದಳು. ಅಕಲಂಕಿತೆ, ಪರಿಶುಭ್ರೆ, ಲಲಿತಗಮನೆ ಎಂದೇನೋ ಹೊಗಳಿಸಿಕೊಳ್ಳುವವಳನ್ನು ಕನಿಷ್ಠ ಮುಟ್ಟುವ ಸಂತೋಷವಾದರೂ ತಪ್ಪಿಸಿಕೊಳ್ಳುವುದುಂಟೇ! ಧಾವಿಸಿದ್ದೆವು ನಿಜ, ಆದರೆ ಮುಖಕ್ಕೆ ನಾಲ್ಕು ಹನಿ ಹಾಕಿಕೊಳ್ಳುವಷ್ಟಕ್ಕೆ ನಡುಗಿಹೋದೆವು. ಕಾಲಿಳಿಸಿದರೆ ಸೆಟೆದುಕೊಳ್ಳುವ ಶೈತ್ಯ, ಅಡಿ ತಪ್ಪಿಸುವ ಸೆಳೆತ! ದಂಡೆಯ ಸುಖವನ್ನಷ್ಟೇ ಅನುಭವಿಸಿ, ತಣ್ಣಗೆ ವಾಪಾಸಾದೆವು. ಇನ್ನು ಮರದ ಮನೆಯ ‘ವೈಭವ’ ಕೇಳಿ... 

ಸಮಶೀತೋಷ್ಣ ವಲಯದ ನಮ್ಮ ಅರಣ್ಯ ಇಲಾಖೆಯ ದುಂದು ವೆಚ್ಚದ, ಐಶರಾಮದ ಬಂಗ್ಲೆ, ಕಛೇರಿಗಳಂತೆ ಅಲ್ಲಿನ ಮರದಮನೆ ಎಂದು ತಪ್ಪು ಭಾವಿಸಬೇಡಿ. ಎತ್ತರದ ನೆಲದಲ್ಲಿ ದಪ್ಪ ಕಂಬಗಳನ್ನು ದೃಢವಾಗಿಯೇ ನಿಲ್ಲಿಸಿ, ಅಡ್ಡ ನೀಟ ಪಕಾಸು ಬಡಿದು, ಹಲಿಗೆಗಳನ್ನು ಬಿಗಿಯಾಗಿ ಕೂರಿಸಿದ ಸಾಲು ಸಾಲಾದ ಪುಟ್ಟ ಕೋಣೆಗಳು. ಸುತ್ತೂ ಸಪುರ ಓಣಿ ಕೊಟ್ಟು, ಸುಮಾರು
ಹತ್ತಡಿ, ಎಂಟಡಿ ಮತ್ತು ಸಾಮಾನ್ಯ ಎತ್ತರದ ಖೋಲೀ ಎಂದರೆ, ದೀಪ ಮಂಚ ಇತ್ಯಾದಿ ಏನೂ ಇಲ್ಲದ ಖಾಲಿ! ಕಿಟಕಿ, ಗವಾಕ್ಷಿಯಿಲ್ಲದ ಒಂದು ಪುಟ್ಟ ಬಾಗಿಲು. ಪ್ರಾಣವಾಯು ವಾಸಿಗಳ ಮೇಲೆ ದಯೆಯಿಟ್ಟು ಹಲಿಗೆ ಸಂದುಗಳಲ್ಲಿ ನುಸಿಯುತ್ತಿತ್ತೋ ಏನೋ! ಅಲ್ಲಿನ ವಾತಾವರಣದ ಶೈತ್ಯಕ್ಕೆ ಇದು ಒಂದು ಲೆಕ್ಕದಲ್ಲಿ ಅನುಕೂಲವೇ. ನಮ್ಮಲ್ಲಿ ಮಳೆ, ಚಳಿಗಾಲಗಳಲ್ಲಿ ಮೊಸಾಯಿಕ್, ವಿಟ್ರಿಫೈಡ್ ನೆಲ ಇರುವವರು ಕಾರ್ಪೆಟ್ಟೋ ಚಪ್ಪಲ್ಲೋ ಹಾಕುವ ಹಿತ-ಸಂಕಟ ನಾನು ಹೇಳಬೇಕೇ. ಇದು ಎಂದೂ ಬರಿಗಾಲಿಗೆ ಥಂಡಿ ಮುಟ್ಟಿಸುವುದಿಲ್ಲ, ಒಳಗಿನ ವಾತಾವರಣದ ಬಿಸಿ ಕಳೆಯುವುದೂ ಇಲ್ಲ. ಕೊನೆಗೆ ತಲೆ ಲೆಕ್ಕದಲ್ಲಿ ದಪ್ಪದ ರಜಾಯಿಗಳು - ಹಾಸಲು, ಹೊದೆಯಲು. ಅವು ಬಿಸಿಲು, ನೀರು ಕಂಡಿವೆಯೇ ಎಂಬ ಅಪ್ರಿಯ ಪ್ರಶ್ನೆ ನಾವು ಹಾಕಲಿಲ್ಲ! ಅಲ್ಲಿನ ಚಳಿಗೆ ಯಾವ ಕ್ರಿಮಿಗಳು ಬದುಕಿರಲಾರವು ಎಂಬ ಅಚಲ ವಿಶ್ವಾಸದಲ್ಲಿ ಒಳ್ಳೇ ನಿದ್ರೆಯನ್ನು ತೆಗೆದೆವು. 

ಅಪರಾತ್ರಿಯಲ್ಲಿ ನಡೆದ ಒಂದು ಸಣ್ಣ ಘಟನೆ ಮಾತ್ರ ನನಗೆ ಜೀವಮಾನದ ನೆನಪಾಗಿ ಉಳಿದದ್ದಕ್ಕೆ ಇಲ್ಲಿ ದಾಖಲಿಸುತ್ತಿದ್ದೇನೆ. ಭುಂಜಿತಾಯಾಸದಲ್ಲಿ ಮಹಾಗುರು ಪರಶುರಾಮರು ಪ್ರಿಯಶಿಷ್ಯ ಕರ್ಣನ ತೊಡೆಯ ತಲ್ಪಕ್ಕೆ ತಲೆಯೊಪ್ಪಿಸಿದಾಗ ಬಂದಂತೊಂದು ವಜ್ರಕೀಟ. ಇಲ್ಲೂ ಅದು ಅಪರಾತ್ರಿಯಲ್ಲಿ ಎಲ್ಲಿಂದ ಅವತರಿಸಿತೋ ಏನೋ. ಪಯಣದಾಯಾಸಕ್ಕೋ ರಜಾಯಿಗಳ ಕಮಟಿನ ಅಮಲಿಗೋ ಲೋಕ ಮರೆತಿದ್ದ ನನ್ನೊಂದು ಕರ್ಣರಂಧ್ರವನ್ನೇ ಬೆಚ್ಚನ್ನ ಗೂಡಾಗಿ ಆಯ್ದು ನುಸುಳಿಯೇ ಬಿಟ್ಟಿತ್ತು. ರಕ್ತದಿಂದ ತೊಯ್ದೆದ್ದ ಭಾರ್ಗವಾವೇಶದಿಂದಲೇ ನಾನೆದ್ದೆ. ನನ್ನ ಕಿರು ಬೆರಳಿನ ಆಕ್ರಮಣವನ್ನು ತಪ್ಪಿಸಲು, ವಾಲಿ ಬೆಂಬತ್ತಿದ ದುಂದುಭಿಯಂತೆ ಕುಹರಾಂತರವನ್ನೇ ಸೇರಿ ನನ್ನ ಜಂಘಾಬಲವನ್ನೇ ಸೋಲಿಸಿತು. ದೇವಕಿಯಿಂದ ತೊಡಗಿ ಎಲ್ಲರೂ ತ್ರಾಹಿ ತ್ರಾಹಿ ಎಂದು ಸಂಕಟದಲ್ಲಿ ಒರಲುವಾಗ, ಸಾಕ್ಷಾತ್ ವೆಂಕಟರಮಣನೇ ಅವತರಿಸಿ, ತನ್ನ ಅಕ್ಷಯ ಭಂಡಾರದಿಂದ ಸೂಕ್ಷ್ಮ ಚಿಮ್ಮಟಿಗೆಯನ್ನು ತೆಗೆದು, ಎವರೆಡಿಯ ದಿವ್ಯಪ್ರಕಾಶದಲ್ಲಿ ವೈರಿಯನ್ನು ಕೊಂದು ಕಳೆದ! (ವೆಂಕಟರಮಣ ಉಪಾದ್ಯರು ಎಲ್ಲಾದರೂ ಕಾಲಿಗೆ ಮುಳ್ಳು ಕಂತಿದರೆ ಕೀಳಲೆಂದು ಪುಟ್ಟ ಚಿಮ್ಮಟ ತಂದಿದ್ದರೆಂದು ಪ್ರತ್ಯೇಕ ಹೇಳಬೇಕೇ!) 
(ಸೂರ್ಯ ಕಂತುವ ಮೊದಲು ತಾ.೨೧. ತೇ ೪೧% ಔ. ೭೫೦೦. ಮರುಬೆಳಿಗ್ಗೆ ೧೭.೫, ತೇ.೪೦%, ದಿನದ ಓಟ ೧೩೭ ಕಿಮೀ) 

(ಮುಂದುವರಿಯಲಿದೆ) 

2 comments:

  1. Hahaha! This reminds me of how a caterpillar had made the life of my friend miserable as he nonchalantly got into his five seasons sleeping bag at Ghuttu in our approach to Pk. Jaonli. Well, the world there has changed a lot now. There are superb accommodations available all the way to Yamunotri. Enjoyed reading your saga though!

    ReplyDelete
  2. ಅಯ್ಯೋ! ನಾನಂತೂ ಅಶೋಕರ ಮಾತು ಕೇಳಿ ಒಮ್ಮೆಲೇ ತುಂಬಾ ಆಶ್ಚರ್ಯಚಕಿತನಾಗಿಬಿಟ್ಟೆ. ಆ ಕೀಟ ನನ್ನ ಕಿವಿಯೊಳಗೇ ಹೊಕ್ಕಿತ್ತೆಂದು ತಿಳಿದುಬಿಟ್ಟೆನಲ್ಲಾ. ಇರ್ಲಿ,ಕಿವಿ ಯಾರದ್ದಾದರೇನಂತೆ, ಅನುಭವ ಒಂದೇ. ಮತ್ತೆ ನನ್ನ ಚೀಲದ ಅಡಿಯಲ್ಲಿದ್ದ ಚಿಮ್ಮಟ ಇನ್ನೊಬ್ಬರ ಕೈಗೆ ಸಿಗುವುದು ದುರ್ಲಭ.ಮತ್ತೆ ಟಾರ್ಚ್ ಬೆಳಕಿನಲ್ಲಿ ಕಿವಿಯೂ ಕಿವಿಯೊಳಗಿದ್ದ ಕೀಟವೂ ನನ್ನ ಕಣ್ಣಲ್ಲಿ ತೋರುತ್ತದೆ. ತಮಾಷೆಯಾಗಿದೆ.

    ReplyDelete