17 September 2020

ಕಲ್ಕತ್ತಾ ದರ್ಶನ

(ಭಾರತ ಅ-ಪೂರ್ವ ಕರಾವಳಿಯೋಟ - ೪) 



ಈಶ್ವರಚಂದ್ರ ವಿದ್ಯಾ ಸಾಗರ ಸೇತುವೆ ಅಥವಾ ವಿದ್ಯಾಸಾಗರ್ ಸೇತು, ಹದಿಮೂರು ವರ್ಷಗಳ ನಿರ್ಮಾಣ ಸಮಯ ನುಂಗಿ ೧೯೯೨ರಲ್ಲಿ ಲೋಕಾರ್ಪಣೆಗೊಂಡಿತು. ಆದರೆ ಅದರ ಉತ್ತರೋತ್ತರ ಕೆಲಸಗಳು ನಾವು ಕಲ್ಕತ್ತಾಕ್ಕೆ ಹೋದಂದೂ ಪೂರ್ಣಗೊಂಡಿರಲಿಲ್ಲ. ಅಂದರೆ, ಎರಡೂ ದಂಡೆಗಳ ವಿವಿಧ ದಾರಿಗಳನ್ನು ತಡೆರಹಿತವಾಗಿ ಸೇರಿಕೊಳ್ಳುವ ಮೇಲು ಸೇತುವೆಗಳ ಜಾಲ ಮತ್ತು ವಾಹನ ಸಂಚಾರದ ಪ್ರಮುಖಧಾರೆಯನ್ನು ಇತ್ತ ಹರಿಬಿಡುವ ಕೆಲಸಗಳು

ಕುಂಟುಗತಿಯಲ್ಲೇ ಇದ್ದವು. ಆದರೇನು, ಐವತ್ತು ವರ್ಷಕ್ಕೂ ಹಳೆಯ ಹೌರಾ ಸೇತುವೆಗೆ ಹೆಚ್ಚಿನ ಸಾಮರ್ಥ್ಯದ ಜತೆಗಾರ, ಭಾರತದ ತೂಗು ಸೇತುವೆಗಳ ಅಗ್ರಣಿ (೨೭೦೦ ಅಡಿ) ಎಂಬ ಖ್ಯಾತಿಗಳೇ ನಮಗೆ ಸಾಕಿತ್ತು. ನಮ್ಮ ಹೊಸ ಹಗಲ (೧೯-೪-೧೯೯೬) ಸಂದರ್ಶನ ಪಟ್ಟಿಯಲ್ಲಿ ಮೊದಲ ಸ್ಥಾನ ಅದಕ್ಕಿತ್ತು. 

‘ಉಡುಪಿ ಲಂಚ್ ಹೋಂ’ ಪತ್ತೆ ಹಚ್ಚಿದ ಸಂತೋಷಕ್ಕೆ ರೂಢಿ ರುಚಿಯ ಚಪಲವನ್ನು ಭರ್ಜರಿಯಾಗಿಯೇ ತೀರಿಸಿಕೊಂಡಿದ್ದೆವು.

ಮತ್ತೆ ಸಿಕ್ಕಿದ್ದೇ ವಿದ್ಯಾಸಾಗರ್ ಸೇತು. ತಲಾ ಎರಡು ರೂಪಾಯಿ ಬೈಕ್ ಸುಂಕ ಕೊಟ್ಟು (ಟೋಲ್) ನಮ್ಮನುಕೂಲಕ್ಕೆ ಒದಗಿದ ಮೇಲ್ಸೇತು ಅನುಸರಿಸಿದೆವು. ವಾಹನ ಸಂಚಾರ ತೀರಾ ವಿರಳವಿತ್ತು. ಅಂದಿನ ನಮ್ಮ ತಿಳುವಳಿಕೆಯಲ್ಲಿ "ಯಾರಿಗೂ ಬೇಕಿಲ್ಲದ ಇಷ್ಟು ದೊಡ್ಡ ರಚನೆ ಮಾಡಿದ್ದಾದರೂ ಯಾಕೋ..." ಎಂದು ಮಾತಾಡಿಕೊಂಡೇ ಬೈಕೋಡಿಸಿದೆವು. ದೀರ್ಘ ಎಡ ತಿರುವಿನ ಕೊನೆಯಲ್ಲಿ ಮುಖ್ಯ ಸೇತುವೆಯ ಅಗಾಧ ಸ್ತಂಭ ಜೋಡಿ ನಾವು ದಂಗಾದೆವು. (ಹೌರಾ ಸೇತುವನ್ನು ನಿಂತು, ನೋಡಲು ನಮಗೆ ಆಗಿರಲಿಲ್ಲ.) ಭಾರೀ ಉಕ್ಕಿನ ಮಿಣಿಗಳು

ಸುಂದರ ಜ್ಯಾಮಿತೀಯ ಚಿತ್ರದಂತೆ, ಚಿತ್ತಾರಗಳಲ್ಲಿ ಕಾಣುವ ಸೂರ್ಯ ರೇಕುಗಳಂತೆ, ಸ್ತಂಭಗಳ ನೆತ್ತಿಯಿಂದ ಇಳಿದು, ಸೇತುವೆಯನ್ನು ಎತ್ತಿ ಹಿಡಿದ ರಚನಾ ಸೌಂದರ್ಯ ಯಾರೂ ಒಮ್ಮೆ ನಿಂತು ನೋಡುವಂತದ್ದು. 

ನಮ್ಮೂವರ ಬಳಿಯೂ ಕ್ಯಾಮರ ಇತ್ತು. ಸರಿ, ಅಲ್ಲಿ ಇಲ್ಲಿ ಬೈಕ್ ನಿಲ್ಲಿಸಿ, ಸೇತುವೆ ಅಂಚಿನಿಂದ, ದಾರಿ ಸೀಳಿನ ಬೇಲಿಯಿಂದ, ಉಕ್ಕಿನ ಮಿಣಿಗುಂಟ ಎಂದೇನೇನೋ ಚಿತ್ರ ಸೆರೆಹಿಡಿಯುತ್ತ ಸೇತುವೆಯ ಇನ್ನೊಂದು ತುದಿ ಮುಟ್ಟಿದೆವು. ಎರಡು ಬೈಕುಗಳನ್ನು ರಸ್ತೆಯ ಎಡ ಅಂಚಿನಲ್ಲಿ ಪೂರ್ತಿ ಬಿಟ್ಟು, ದೇವಕಿ

ಕಿಶೋರರು ಅಲ್ಲಿದ್ದಂತೆ ನಾನು ಇನ್ನೊಂದಿಷ್ಟು ಚಿತ್ರಕ್ಕೆ ಸ್ವಲ್ಪ ನಡೆದಿದ್ದೆ. ನನ್ನಿಂದಲೂ ದೂರದಲ್ಲಿದ್ದ ಉಪಾಧ್ಯರ ಬಳಿಗೆ ಎದುರು ದಿಕ್ಕಿನಿಂದ ಬಂದೊಂದು ಕೆಂಪು ಲಾರಿ ನಿಂತದ್ದು ಗಮನಿಸಿದೆ. ಲಾರಿಯ ಹಿಂಬದಿಯಲ್ಲಿ ಎರಡು ವಾಲುಗಂಬ, ಗಲ್ಲಿಗೇರಿಸಲು ಸಜ್ಜಾದಂತೆ ಕೊಕ್ಕೆ ಕಟ್ಟಿದ ದಪ್ಪ ಹಗ್ಗ ಕಂಡದ್ದೇ ಅದು ಪೋಲಿಸರದ್ದೆಂದು ನನಗರ್ಥವಾಗಿತ್ತು! ಚಾಲಕ ಬಂಗಾಳಿಯಲ್ಲಿ ಉಪಾಧ್ಯರನ್ನು ಕುರಿತು ಏನೋ ಒದರಿದ. ಅಪ್ಪಟ ಕನ್ನಡ ಕುವರ ಉಪಾಧ್ಯ, ಆತ ಹಿಂದಿ, ಇಂಗ್ಲಿಷಿನಲ್ಲಿ ಕೇಳಿದ್ದರೂ ತೋರಬಹುದಾದ ಉಪೇಕ್ಷೆ, ಮೌನವನ್ನೇ ಧರಿಸಿ ಕಾಯಕ ಮುಂದುವರಿಸಿದರು. ಲಾರಿಯವರಿಗೆ ರೇಗಿತು. ಅವರು ಲಾರಿಯಿಳಿದು ಬರುತ್ತಿದ್ದಂತೆ ನಾನು ಕೂಗಿ ಹೇಳಿದೆ "ಅವನೇನೋ ಆಕ್ಷೇಪಿಸುತ್ತಿದ್ದಾನೆ, ಬನ್ನಿ ಬನ್ನೀ..." 

ಉಪಾಧ್ಯರು ಹಿಂದಕ್ಕೋಡಿ ಬರುತ್ತಿದ್ದಂತೆ ಅವರಿಬ್ಬರೂ ಹೆಚ್ಚೇ ಬೊಬ್ಬೆ, ಕೈಕರಣ ಮಾಡಿಕೊಂಡೇ ಬಂದರು. ಆದರೆ ನಮ್ಮನ್ನು ಸಮೀಪಿಸಿದಾಗ, ನಾವು ಬಂಗಾಳಿಗಳಲ್ಲ ಎಂದು ಅರಿವಾಗಿ ತುಸು ಸೌಮ್ಯರಾದರು. ಹರಕು ಹಿಂದಿಯಲ್ಲಿ "ಸೇತುವೆಯ ಫೋಟೋ ತೆಗೆಯುವುದು ಕಾನೂನು ಬಾಹಿರ, ಬೋರ್‍ಡ್ ನೋಡಿಲ್ಲವೇ" ಎಂದ. ನಾನು ಸಹಜವಾಗಿ ಹೇಳಿದೆ - ಬಂಗಾಳಿ ಬೋರ್‍ಡ್ ನಮಗೆ ಅರ್ಥವಾಗಲಿಲ್ಲ. "ಅದೆಲ್ಲ ಗೊತ್ತಿಲ್ಲ, ಕ್ಯಾಮರಾ ಕೊಡಿ, ಇಲ್ಲವೇ ಸ್ಟೇಶನ್ನಿಗೆ ನಡಿ..." ಎಂದು ಬೆದರಿಕೆ ಹಾಕಿದ. ನಮ್ಮ ವಿದೇಶೀತನ, ತರ್ಕ, ಕ್ಷಮಾಯಾಚನೆಗಳಿಗೆಲ್ಲ ಆತ ಕಿವುಡಾದ. ನಾನು ಸೌಮ್ಯವಾಗಿಯೇ "ಆಯ್ತು. ಇವರಿಲ್ಲೇ ಇರಲಿ, ನಿಮ್ಮಲ್ಲೊಬ್ಬರು ನನ್ನ ಹಿಂದೆ ಕೂತುಕೊಳ್ಳಿ, ಸ್ಟೇಶನ್ನಿಗೇ ಹೋಗೋಣ.." ಎಂದೆ. ಆಗ ಮಾತಿನಲ್ಲಿ ಕೊಸರಾಡುತ್ತ, "ಬೇಡ, ಏರುದಾರಿ ಕೆಳಗೇ ಠಾಣೆ ಇದೆ. ಕನಿಷ್ಠ ಐನೂರು ರೂಪಾಯಿ ದಂಡ ಗ್ಯಾರಂಟೀ" ಎಂದೆಲ್ಲ ಗೊಣಗಿದ. ಉಪಾಧ್ಯರು ಅವನ ನಿಷ್ಠೆಯನ್ನೋ ‘ಮಾರುಕಟ್ಟೆ’ ಧಾರಣೆಯನ್ನೋ ಪರೀಕ್ಷಿಸುವವರಂತೆ ಇಪ್ಪತ್ತರ ನೋಟೊಂದನ್ನು ಗಾಳಿಯಲ್ಲಿ ಅಲ್ಲಾಡಿಸಿ ನೋಡಿದರು. ಕೋಳೀ ತಿನ್ನೋ ಭೂತಕ್ಕೆ ಚಾಕ್ಲೇಟ್ ನೈವೇದ್ಯ ಮಾಡಿದರೆ ನಾಟೀತೇ! ಆತ ಅಸಹನೆಯಲ್ಲೇ "ಸ್ಟೇಷನ್ನಿಗೇ ನಡೆಯಿರಿ..." ಎಂದ. ಉಪಾಧ್ಯ, ದೇವಕಿಯರನ್ನು ಬೈಕ್ ಬಳಿ ಬಿಟ್ಟು, ನಾನು ಕಿಶೋರ್ ಅವರ ಜತೆ ನಡೆದೆವು. ಸ್ತಂಭ ಒಂದರ ಮೆಟ್ಟಿಲ ಸಾಲಿಳಿದೆವು. ತಳದಲ್ಲಿ ಪೂರ್ಣ ನವನಗರಿ - ಪೋಲೀಸ್ ವಠಾರವೇ ಇತ್ತು. ಅದರ ಸಪುರ ಓಣಿಯಲ್ಲಿ ಹಾಯುವಾಗ ನಮಗೆ ಸ್ವಲ್ಪ ಆತಂಕವೂ ಆಯ್ತು. 

ಠಾಣೆಯೊಳಗೆ ಮಫ್ತಿಯಲ್ಲಿದ್ದ ಅಧಿಕಾರಿಗೆ (ಬಹುಶಃ ದಫೇದಾರ) ಚಾಲಕ ದೂರು ಸಲ್ಲಿಸಿದ. ನಾನು ಹಿಂದಿನ ಪ್ರವಾಸಾನುಭವದ ಬಲದಲ್ಲಿ ಈಗ ಪಕ್ಕಾ ಇಂಗ್ಲಿಷಿಗನಾಗಿದ್ದೆ. ನಮ್ಮ ಅಜ್ಞಾನವನ್ನು ವಿವರಿಸಿ, ಕ್ಷಮೆ ಕೇಳಿದೆ. ಮತ್ತೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಮುದ್ರೆ ಸಹಿತ ನಮ್ಮನ್ನು (ಅವರ ವನಧಾಮಗಳಿಗೆ) ಆಹ್ವಾನಿಸಿದ್ದ ಇಂಗ್ಲಿಷ್ ಪತ್ರವೇ ಮುಂತಾದ ಕಡತ ತೆಗೆಯುತ್ತಿದ್ದಂತೆ, ದಫೇದಾರನಿಗೆ ಅಭದ್ರತೆ ಕಾಡಿರಬೇಕು. ಆತನಿಗೆ ಚಾಲಕನ ಸೂಚನೆಯನ್ನು ‘ನಗದೀಕರಿಸು’ವುದಕ್ಕಿಂತ, ನಮ್ಮಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ ಅಂದನ್ನಿಸಿರಬೇಕು. "ಸರಿ, ಇನ್ನು ಮಾಡಬೇಡಿ, ಹೋಗಿ ಹೋಗಿ.,.." ಎಂದು ಕೇಸು ಖುಲಾಸೆ ಮಾಡಿದ! 

[ಕರಾವಳಿಯೋಟ ಮುಗಿಸಿ ಬಂದಂದು, ಹಳೇ (೭-೪-೯೬ರ) ಸುಧಾದಲ್ಲಿ ಎಂ.ಎಸ್. ನಟರಾಜ್ ಇದೇ ವಿದ್ಯಾಸಾಗರ್ ಸೇತುವಿನ ಅನುಭವವನ್ನು ‘ಸೆರೆ ಹಿಡಿಯಲು ಹೋಗಿ ಸೆರೆಮನೆಯತ್ತ’ ಎಂದು ಪ್ರಕಟಿಸಿದ್ದು ಕಂಡೆ. ಅದಕ್ಕೆ ಪೂರಕ ಪ್ರತಿಕ್ರಿಯೆ ಎನ್ನುವಂತೆ ನಾನು ಮೇಲಿನ ತುಣುಕನ್ನಷ್ಟೇ ಬರೆದು ಸುಧಾಕ್ಕೆ ಕಳಿಸಿದ್ದೆ. ನನ್ನದು ಪ್ರಕಟವಾಯ್ತೋ ಕಬು ಸೇರಿತೋ ನೆನಪಿಲ್ಲ. ಆ ಸಂಜೆ ಸಂಘದ ಮಿತ್ರಕೂಟದಲ್ಲೂ ನಮ್ಮ ಅನುಭವವನ್ನು ಹಂಚಿಕೊಂಡಿದ್ದೆವು. ಆಗ ಅವರಲ್ಲೊಬ್ಬರು, ಹಿಂದೆಂದೋ ಸ್ವತಃ ನೂರಿನ್ನೂರು ರೂಪಾಯಿ ಲಂಚಕೊಟ್ಟು ಬಿಡಿಸಿಕೊಂಡು ಬಂದವರು "ನೀವು ಆಗಬಹುದು ಮಾರಾಯ್ರೇ" ಎಂದು ಪ್ರಶಸ್ತಿಯನ್ನೇ ಕೊಟ್ಟರು!] 

ಯೋಜನಾ ಹಂತದಲ್ಲಿ ಸ್ವಾಮೀ ಜಗದಾತ್ಮಾನಂದರಲ್ಲಿ ನಾನು ಕೇಳಿದ್ದ ಇನ್ನೊಂದು ಮಾಹಿತಿ ‘ಸುಂದರ ಬನ್ಸ್’ ಕುರಿತಾಗಿತ್ತು. ಭಜನೆ, ಪ್ರವಚನ ಮತ್ತು ಅಧ್ಯಾತ್ಮ ಎಂದುಕೊಂಡೇ ಸಾಮಾಜಿಕರ ನಡುವೆ ಇರಬಹುದಾದ ಸನ್ಯಾಸಿಗಳಲ್ಲಿ ಅಪ್ಪಟ ಕಾಡು ಮತ್ತು ನರಭಕ್ಷಕ ಹುಲಿ ಪರಿಸರಗಳ ಕುರಿತು ವಿಚಾರಿಸುತ್ತಿದ್ದೇನೆಂಬ ಕಲ್ಪನೆ, ಸಹಜ ಸಂಕೋಚ ನನ್ನಲ್ಲಿತ್ತು. ಆದರೆ ಅವರಿಂದ ಬಂದ ಪ್ರತಿಕ್ರಿಯೆ ಅಪೂರ್ವ ಮತ್ತು ನನ್ನ ಅಜ್ಞಾನಕ್ಕೆ ಹಿಡಿದ ಕನ್ನಡಿಯೂ ಆಗಿತ್ತು. ರಾಮಕೃಷ್ಣಾಶ್ರಮಗಳು ಭಕ್ತಿಯನ್ನು ಸಲಕರಣೆಯನ್ನಾಗಿಸಿಕೊಂಡು, ಸಾಮಾಜಿಕ ಹಿತಸಾಧನೆಯನ್ನೇ ಲಕ್ಷ್ಯವನ್ನಾಗಿಸಿಕೊಂಡ ವ್ಯವಸ್ಥೆ. ನಮ್ಮ ವಲಯದಲ್ಲೇ ಕಣ್ಣಾಡಿಸಿದರೆ ಮಂಗಳೂರಿನಲ್ಲಿ ಅನಾಥ ಮಕ್ಕಳಿಗೆ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಆದಿವಾಸಿಗಳಿಗೆ, ಮೈಸೂರಿನಲ್ಲಿ ವಿದ್ಯೆಗೆ, ಬೆಂಗಳೂರಿನಲ್ಲಿ ವಿದ್ಯಾ-ವಸತಿ ಸೌಕರ್ಯಕ್ಕೆ ಮತ್ತು ಸಾಂಸ್ಕೃತಿಕ ಉತ್ಥಾನಕ್ಕೆ, ಪೊನ್ನಂಪೇಟೆಯಲ್ಲಿ ಸಾಮುದಾಯಿಕ ಆರೋಗ್ಯಕ್ಕೆ..... ರಾಮಕೃಷ್ಣಾಶ್ರಮಗಳು ಪ್ರಚಾರದ ಹಪಹಪಿಯಿಲ್ಲದೆ ದುಡಿಯುತ್ತಿರುವುದು ಅರಿವಾಗುತ್ತದೆ. ಇಂಥವುಗಳ ಮುಂದುವರಿಕೆಯೇ ಎನ್ನುವಂತೆ ಸುಂದರಬನ್ಸ್ ಅಥವಾ ಗಂಗಾ ಮುಖಜಭೂಮಿಯ ಅಸಂಖ್ಯ ಮೀನುಗಾರ ಸಮುದಾಯವನ್ನು ಸಂಘಟಿಸುವಲ್ಲಿ ರಾಮಕೃಷ್ಣ ಆಶ್ರಮದ ನರೇಂದ್ರಪುರ ಶಾಖೆ ತೀವ್ರವಾಗಿ ತೊಡಗಿಕೊಂಡಿತ್ತು. ಜಗದಾತ್ಮಾನಂದರು ಆ ಶಾಖೆಯ ನಿರ್ವಾಹಕ ಸ್ವಾಮಿ ಅಸಕ್ತಾನಂದರಿಗೆ ನಮ್ಮ ಪರಿಚಯ ಮತ್ತು ಸಾಹಸಯಾನದ ವಿವರ ಕೊಟ್ಟು ಮಾಹಿತಿ ಕೋರಿದರಂತೆ. ಆ ಸ್ವಾಮಿಗಳಿಗೆ, ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಸುಂದರಬನ್ಸಿನಲ್ಲಿ ಖಾಯಂ ಒಂದೂವರೆ ದಿನದ ಪ್ರವಾಸ ನಡೆಸುವುದು ತಿಳಿದಿತ್ತು. ಅದನ್ನು ತಿಳಿಸುವುದರೊಡನೆ, ನಮ್ಮ ಅನುಕೂಲದ ದಿನಗಳಿಗೆ ನಾಲ್ಕು ಟಿಕೇಟನ್ನೇ ಖರೀದಿಸಿ ಜಗದಾತ್ಮಾನಂದರಿಗೆ ಕಳಿಸಿಬಿಟ್ಟಿದ್ದರು. ಬೇಸಗೆಯಲ್ಲಿ ಸುಂದರ್ಬನ್ಸ್ ಪ್ರವಾಸ ವಾರಾಂತ್ಯಗಳಿಗಷ್ಟೇ (ಶನಿ-ಆದಿತ್ಯವಾರ) ಸೀಮಿತವಾದ್ದರಿಂದ, ಸುಂದರ್ ಬನ್ಸ್ ಭೇಟಿಗೆ ಹೊಂದುವಂತೆ ನಾವು ಕಲ್ಕತ್ತಾ ವಾಸವನ್ನು ಮೊದಲೇ ಸ್ವಲ್ಪ ತಿದ್ದಿಕೊಂಡಿದ್ದೆವು. ಸ್ವಾಮಿ ಜಗದಾತ್ಮಾನಂದರ ಭೇಟಿ ಮತ್ತು ಟಿಕೆಟ್ ಸಂಗ್ರಹಕ್ಕಾಗಿ ನಾವು ವಿದ್ಯಾಸಾಗರ್ ಸೇತುವಿನಿಂದ ಬೇಲೂರು ಮಠಕ್ಕೆ ಹೋದೆವು. 


ಮಠದ ಸ್ವಾಗತ ಕಚೇರಿಯ ಪಕ್ಕದಲ್ಲೇ ಇದ್ದ ಪುಸ್ತಕ ಮಳಿಗೆಯಲ್ಲಿ ಸ್ವಾಮಿ ಜಗದಾತ್ಮಾನಂದರ ಕುರಿತು ವಿಚಾರಿಸಿದೆವು. ಆತ ಕೂಡಲೇ ಮಠದ ವಿಸ್ತಾರದಲ್ಲೆಲ್ಲೋ ಕಾರ್ಯ ನಿರತರಾಗಿದ್ದ ಸ್ವಾಮಿಗಳಿಗೆ ಸುದ್ಧಿ ಮುಟ್ಟಿಸಿದ್ದ. ಹತ್ತೇ ಮಿನಿಟಿನಲ್ಲಿ ಮಂದಿರ ಸಂಕೀರ್ಣದ ಯಾವುದೋ ಮೂಲೆಯಿಂದ ಜಗದಾತ್ಮಾನಂದರು ಬರುವುದು ಕಾಣಿಸಿತು. ಸಾಂಪ್ರದಾಯಿಕ ಸ್ವಾಮಿಗಳಿಗೆ ‘ಶೋಭೆ ತರುವ’ ಪರಾಕಿನವರು, ಗಿಂಡಿಮಾಣಿಗಳು, ಗಾಂಭೀರ್ಯದ ನಡೆ ಎಲ್ಲವನ್ನೂ ನಿವಾಳಿಸಿ ಎಸೆದಂತೆ, ದಾಪುಗಾಲು ಹಾಕುತ್ತ ಬಂದರು. ದೂರದಿಂದ ನಮ್ಮನ್ನು ಗುರುತಿಸಿದಷ್ಟಕ್ಕೇ ಹಳೆ ಪರಿಚಯದ ಗೆಳೆಯನನ್ನು ಕಂಡಂತೆ, (ನಮಗೂ ಮೊದಲೇ) ಕೈಯೆತ್ತಿ ಬೀಸಿ, ಗಟ್ಟಿ ಧ್ವನಿಯಲ್ಲಿ ನಮಸ್ಕಾರವನ್ನೂ ಕೊಟ್ಟುಬಿಟ್ಟಿದ್ದರು! ಸಮೀಪಿಸಿದವರೇ ನಮ್ಮ ಕುಶಲ ವಿಚಾರಿಸಿದರು. ತಮ್ಮ ಕೆಲಸದ ಒತ್ತಡವನ್ನೇನೂ ಪ್ರದರ್ಶಿಸದೆ, ನಮಗೆ ಮಠ ತೋರಿಸುವ ಉತ್ಸಾಹ ತೋರಿದರು. ಮಠದ ಸಾರ್ವಜನಿಕ ಪ್ರೇಕ್ಷಣೀಯ ಅಂಶಗಳನ್ನು ನಾವು ಹಿಂದಿನ ದಿನವೇ ಬಂದು ನೋಡಿದ್ದನ್ನು ತಿಳಿಸಿದೆವು. "ಮಧ್ಯಾಹ್ನ ನನ್ನ ಜತೆಗೆ ಸನ್ಯಾಸಿಗಳ ಸರಳ ಊಟಕ್ಕಾದರೂ ನಿಲ್ಲಿ, ಸಂತೋಷವಾಗುತ್ತಿತ್ತು" ಎಂದರು. ನಮ್ಮ ಮಟ್ಟಿಗೆ ಆ ಗೌರವ ಬಹಳ ದೊಡ್ಡದು. ಆದರೆ ಆಗ ಇನ್ನೂ ಬೆಳಿಗ್ಗೆ ಒಂಬತ್ತೋ ಹತ್ತೋ ಗಂಟೆಯಿದ್ದಿರಬೇಕು. ಊಟಕ್ಕೆ ಕನಿಷ್ಠ ಎರಡು ಮೂರು ಗಂಟೆಗಳ ಕಾಲವಿರುವಾಗ, ಮಠದ ಅಷ್ಟು ದೊಡ್ಡ ಜವಾಬ್ದಾರಿಯಲ್ಲಿರುವವರ ಸಮಯವನ್ನು ಏನೂ ಕೆಲಸವಿಲ್ಲದ ನಾವು ಹಾಳುಗೆಡಹುವುದು ನಮಗೆ ಸರಿ ಕಾಣಲಿಲ್ಲ. ಸಾಲದ್ದಕ್ಕೆ ಹಿಂದಿನ ಸಂಜೆಯೇ ನಾವು ಇನ್ನೊಬ್ಬ ಕನ್ನಡಿಗರಿಗೆ "ಮಧ್ಯಾಹ್ನದೂಟಕ್ಕೆ ನಿಮ್ಮನೆಗೇ" ಎಂದು ಒಪ್ಪಿಕೊಂಡದ್ದೂ ಇತ್ತು. ನಾವು ಬಹಳ ಸಂಕೋಚದಲ್ಲಿ ಅವೆಲ್ಲವನ್ನೂ ಅವರಿಗೆ ಒಪ್ಪಿಸಿ, ಅನ್ಯ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನದ ನೆಪವನ್ನು ಮುಂದೆ ಮಾಡಿ, ಸ್ವಾಮಿಗಳ ಕರೆಯನ್ನು ಸವಿನಯ ನಿರಾಕರಿಸಿದೆವು. ಹಾಗಾದರೆ ಎಂಬಂತೆ... 

ಸ್ವಾಮಿ ಜಗದಾತ್ಮಾನಂದರು ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದ ಸುಂದರಬನ್ಸ್ ವಿಹಾರದ ಟಿಕೆಟ್ಟುಗಳನ್ನು ಕೊಟ್ಟರು. ಮತ್ತೆ ನಮಗೆ ಯಾವ ಸಂದೇಹವೂ ಉಳಿಯದಂತೆ, "ಇವು ನರೇಂದ್ರಾಶ್ರಮದ ಸ್ವಾಮೀ ಅಸಕ್ತಾನಂದರಿಂದ ನಿಮಗೆ ಉಚಿತ ಕೊಡುಗೆ (ರೂ ೪೪೦೦)! ಇದಕ್ಕೆ ಕೃತಜ್ಞತೆ ಸಲ್ಲಿಸುವ ಔಪಚಾರಿಕತೆಗಾಗಿ ನೀವು ನರೇಂದ್ರಪುರಕ್ಕೆ (೫೩ ಕಿಮೀ ಅಂತರ) ಬರುವುದು ಬೇಡವೆಂದೂ ಸ್ವಾಮೀಜಿ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಮತ್ತದರ ಹಣಕಾಸಿನ ವಿಚಾರದಲ್ಲೂ ನಿಮ್ಮ ಮಾತುಗಳನ್ನು ಅವರು ಕೇಳಲು ಸಿದ್ಧರಿಲ್ಲವಂತೆ." ಆ ಮಾತುಗಳು ವಾಸ್ತವವೇ ಆಗಿದ್ದರೆ ಸ್ವಾಮಿ ಜಗದಾತ್ಮಾನಂದರು ನಮ್ಮ ಕುರಿತು ಎಷ್ಟೊಂದು ಒಳ್ಳೇ ನುಡಿಗಳನ್ನಾಡಿರಬೇಕು! ಒಂದೊಮ್ಮೆ ಅದು (ಸುಳ್ಳಲ್ಲ) ಮರೆಸಿನ ಮಾತಾಗಿ, ಸ್ವತಃ ಜಗದಾತ್ಮಾನಂದರೇ ಆ ಹಣ ಹಾಕಿದ್ದರೆ, ನಮ್ಮ ಮೇಲೆ ಅದೆಷ್ಟು ಪ್ರೀತಿ! ನಾವು ಅಂದು ಏನೆಲ್ಲ ತೊದಲಿದೆವೋ ನನಗೆ ನೆನಪಿಲ್ಲ. ಮೈಮನವೆಲ್ಲ ಕೃತಜ್ಞತೆಯಲ್ಲಿ ಮುದುಡಿ, ಇಬ್ಬರಿಗೂ ವಂದನೆಯನ್ನಷ್ಟೇ ಹೇಳಿ ಬೇಲೂರು ಮಠ ಬಿಟ್ಟೆವು. [ಸಾಹಸಯಾನ ಪೂರ್ತಿಮಾಡಿ, ಮಂಗಳೂರಿಗೆ ಮರಳಿದ ಮೇಲೆ ಇಬ್ಬರೂ ಸ್ವಾಮಿಗಳಿಗೆ ಧನ್ಯವಾದಗಳೊಡನೆ ವರದಿಯನ್ನೇನೋ ಕಳಿಸಿದ್ದೆ. ಆದರೆ ಹೀಗೆ ಸವಿವರ ಬರೆಯುತ್ತಿರುವುದನ್ನು ಓದಲು ಸ್ವಾಮಿ ಜಗದಾತ್ಮಾನಂದರು ಇಲ್ಲ ಮತ್ತು ನರೇಂದ್ರಪುರದ ಸ್ವಾಮಿ ಅಸಕ್ತಾನಂದರ ಪರಿಚಯ, ಸಂಪರ್ಕಗಳೂ ನನ್ನಲ್ಲಿಲ್ಲ ಎಂಬ ವಿಷಾದವಷ್ಟೇ ನನಗುಳಿದಿದೆ.] 


ಬೆಂಗಳೂರಿನ ದೊಡ್ಡಾಲ ಮರದ ಉಲ್ಲೇಖ ಬಂದಾಗೆಲ್ಲ "ಭಾರತದ ಅತ್ಯಂತ ವಿಸ್ತಾರವಾದ ಮರ ಕಲ್ಕತ್ತಾದ ಬಟಾನಿಕಲ್ ಗಾರ್ಡನ್ನಿನಲ್ಲಿದೆ" ಎಂದೇ ಕೇಳಿದ್ದೆವು. ಅದನ್ನು ಜಪಿಸುತ್ತಲೇ ಬೇಲೂರು ಮಠದಿಂದ ನಾವು ಆ ಸಸ್ಯೋದ್ಯಾನಕ್ಕೆ ಹೋದಾಗ ನಮಗಾದ ನಿರಾಶೆ ತುಂಬ ದೊಡ್ಡದು. ಅಲ್ಲಿ ಆಲದ ಮರದ ಅಸಂಖ್ಯ ಕಾಲುಗಳೇನೋ (ಅಧಃಶಾಖಾ) ವಿಸ್ತಾರಕ್ಕೆ ಹಬ್ಬಿವೆ. ಆದರೆ ಎಲ್ಲಕ್ಕೂ ಮೂಲ ಕಾಂಡ ೧೯೨೫ರಷ್ಟು ಹಿಂದೆಯೇ ನಶಿಸಿಹೋಗಿದೆ! ಇನ್ನೂ ಸರಿಯಾಗಿ ಹೇಳುವುದಿದ್ದರೆ,

ಆ ಭಾಗಕ್ಕೆ ತಟ್ಟಿದ ಮರಣಾಂತಿಕ ಕಾಯಿಲೆ ಎಲ್ಲ ಶಾಖೆಗಳಿಗೆ ವ್ಯಾಪಿಸುವುದು ಬೇಡವೆಂದು ಅಧಿಕಾರಿಗಳೇ ಅದನ್ನು ಸುಟ್ಟು ಕಳೆದರೆಂದು ದಾಖಲೆಗಳು ಹೇಳುತ್ತವೆ. (ಆ ಲೆಕ್ಕದಲ್ಲಿ, ನಿಜ ಹಳತನ ಬಿಂಬಿಸುವ ಬೆಂಗಳೂರಿನ ದೊಡ್ಡಾಲವೇ ಹೆಚ್ಚು ಆಕರ್ಷಕ.) ಹಲವು ತಲೆಮಾರುಗಳ ಹಿರಿಯನನ್ನು ಕಳೆದುಳಿದ ದೊಡ್ಡ ಕೂಡು ಕುಟುಂಬದ ಖಾಲಿತನ ಅಲ್ಲಿತ್ತು. ಒಟ್ಟಾರೆ ನೋಟದಲ್ಲಿ ನಮಗೆ ಬೃಹತ್ ವೃಕ್ಷದ ಬದಲು, ಸಾಮಾನ್ಯ ಮರಗಳ ತೋಪಿನ ಭಾವನೆಯಷ್ಟೇ ಬಂತು. ಬದಲಿಗೆ, ಆ ಸಸ್ಯವಾಟಿಯ ಕೊಳವೊಂದರಲ್ಲಿ ಪುಟ್ಟ ಮಗುವಿನ ಭಾರವನ್ನು ತಾಳಿಕೊಂಡೂ ತೇಲಬಲ್ಲ ಪದ್ಮಪತ್ರ ನೋಡಲು ಸಿಕ್ಕಿದ್ದು ಇಂದಿಗೂ ಸ್ಮರಣೀಯವಾಗಿದೆ. 

ಅತ್ರಿಯಲ್ಲಿ ನಾನು ಪುಸ್ತಕ ಪ್ರಕಾಶನ ನಡೆಸತೊಡಗಿದ ಕಾಲದಲ್ಲಿ, ಪತ್ರಿಕಾ ವಿಮರ್ಶೆಗೆ ಪ್ರತಿಗಳನ್ನು ಕಳಿಸುತ್ತಿದ್ದೆ. ಪತ್ರಿಕೆಗಳು ಪುಸ್ತಕಗಳು ಮುಟ್ಟಿದ್ದಕ್ಕೆ ರಸೀದಿಯಂತೆ ಪ್ರಕಟಿಸುತ್ತಿದ್ದ ಪಟ್ಟಿ (ಸಾದರ ಸ್ವೀಕಾರ) ಜಾಹೀರಾತಿನಂತೆ ಕೆಲಸ ಮಾಡುತ್ತಿದ್ದದ್ದು

ಒಂದೇ ನನ್ನ ನಿಜಲಾಭ. ಇನ್ನು ವಿಮರ್ಶೆ, ಹಲವು ಪುಸ್ತಕಗಳಿಗೆ ಬಂದದ್ದೇ ಇಲ್ಲ. ತಡವಾಗಿ ಬಂದವುಗಳಲ್ಲೂ ಗಂಭೀರ ಓದಿನಿಂದ ಸಿದ್ಧಿಸಿದ ನುಡಿಗಳು ಬಹಳ ಕಡಿಮೆ, ಬಿಡಿ. ‘ಸಾದರ ಸ್ವೀಕಾರ’ ಕಾಲಂನ ಕತ್ತರಿಕೆಯೊಂದಿಗೆ, ಕಲ್ಕತ್ತಾದ ‘ಕೇಂದ್ರೀಯ ಗ್ರಂಥಾಲಯ’ದ ಹೆಸರಿನಲ್ಲಿ ನನಗೆ ಮುದ್ರಿತ ಕಾರ್ಡು ಕೆಲವು ಬಾರಿ ಬಂದದ್ದಿತ್ತು. ಅದರ ಮುದ್ರಿತ ಒಕ್ಕಣೆ ಪರೋಕ್ಷವಾಗಿ ಬೆದರಿಕೆಯಂತೇ ಇರುತ್ತಿತ್ತು. ".... ಶಾಸನದಂತೆ, ಎಲ್ಲ ಪ್ರಕಾಶಕರೂ ತಮ್ಮ ಹೊಸ ಪ್ರಕಟಣೆಗಳು ಬಂದಂತೆಲ್ಲ

ಒಂದೊಂದು ಪ್ರತಿಗಳನ್ನು ದೇಶದ (ಮೂರೋ ನಾಲ್ಕೋ ಇರಬೇಕು) ಕೇಂದ್ರೀಯ ಗ್ರಂಥಾಲಯಗಳಿಗೆ ಕಳಿಸತಕ್ಕದ್ದು!" ನಾನು ಪುಸ್ತಕೋದ್ಯಮದಲ್ಲಿ ಸರಕಾರೀ ಹಸ್ತಕ್ಷೇಪವನ್ನು ಸ್ಪಷ್ಟ ಮಾತುಗಳಲ್ಲೇ ವಿರೋಧಿಸುತ್ತಿದ್ದವ. ಸಹಜವಾಗಿ ಈ ಪತ್ರಗಳನ್ನೂ ಎಷ್ಟೋ ಹೆಸರಾಂತ ಸಾಹಿತಿ-ಪ್ರೊಫೆಸರರುಗಳ ‘ಗೌರವಪ್ರತಿ’ ಆದೇಶಗಳಷ್ಟೇ ಗೌರವದಲ್ಲಿ ಕಾಣುತ್ತಿದ್ದೆ - ನಿರ್ಯೋಚನೆಯಿಂದ ಕಸದ ಬುಟ್ಟಿ ಸೇರಿಸುತ್ತಿದ್ದೆ! 

ನಮ್ಮ ಸಾಹಸಯಾನದ ಯೋಜನಾ ಹಂತದಲ್ಲೊಮ್ಮೆ ಕನ್ನಡ ವಿವಿ ನಿಲಯದ ಗ್ರಂಥಪಾಲೆ ನಾಗವೇಣಿ ನನ್ನಂಗಡಿಗೆ ಬಂದಿದ್ದರು. ಅವರು "ಕಲ್ಕತ್ತಾದ ಕೇಂದ್ರೀಯ ಗ್ರಂಥಾಲಯವನ್ನು ಅವಶ್ಯ ನೋಡಿ. ಅದಕ್ಕೂ ಮುಖ್ಯವಾಗಿ ಅದರ ಕನ್ನಡ ವಿಭಾಗದ ಕುಮಾರಪ್ಪನವರನ್ನು ಭೇಟಿಯಾಗಲು ಮರೆಯಬೇಡಿ" ಎಂದು ಒತ್ತಿ ಹೇಳಿದ್ದರು. ಹಾಗಾಗಿ ಕಲ್ಕತ್ತಾ ಕನ್ನಡ ಸಂಘದ ಸಂಜೆಯ ಸ್ನೇಹ ಕೂಟದಲ್ಲಿ "ನಾನು ಕುಮಾರಪ್ಪಾಂತ..." ಎಂದು ಕೇಳಿದ್ದೇ ವಿಶೇಷ ಆಸಕ್ತಿ ತೋರಿದ್ದೆ. ಅವರಾದರೂ ಹೊಟ್ಟೇಪಾಡು ಮೀರಿದ ಕನ್ನಡ ಮತ್ತು ಪುಸ್ತಕ ಪ್ರೀತಿ ಹೊಂದಿದವರೆಂದು ನನ್ನರಿವಿಗೆ ಬಂತು. ಹಾಗಾಗಿ ಮರುದಿನ ಕೇಂದ್ರೀಯ ಗ್ರಂಥಾಲಯ ಭೇಟಿ, ಅದಕ್ಕೂ ಹೆಚ್ಚಾಗಿ ಮಧ್ಯಾಹ್ನದ ನಮ್ಮ ಊಟವನ್ನು ಅವರ ಮನೆಯಲ್ಲೇ ಎಂದು ಕುಮಾರಪ್ಪ ಬಲವಂತದಲ್ಲೇ ನಿಶ್ಚೈಸಿಬಿಟ್ಟಿದ್ದರು. ನಾವು ‘ಬಟಾಣೀಕಾಳು ಗಾರ್ಡನ್’ನಿಂದ ಕಲ್ಕತ್ತಾ ಕೇಂದ್ರೀಯ ಗ್ರಂಥಾಲಯಕ್ಕೆ ಹೋದೆವು. 

ಬ್ರಿಟಿಷ್ ಕಾಲದ ಕಟ್ಟಡದ ಭವ್ಯತೆ ಮತ್ತು ಹಿಂದಿನಿಂದ ವ್ಯವಸ್ಥಿತವಾಗಿ ಬೆಳೆದು ಬಂದ ಪುಸ್ತಕ ಸಂಗ್ರಹ ನಮ್ಮನ್ನು ಬಹಳ ಪ್ರಭಾವಿಸಿತು. ಅದರ ವಿಸ್ತರಣೆಯೇ ಆದರೂ ಪ್ರತ್ಯೇಕ ಕಟ್ಟಡ ಹಾಗೂ ಹೆಚ್ಚುವರಿ ವ್ಯವಸ್ಥೆಯನ್ನೇ ಪಡೆದುಕೊಂಡಿದ್ದ - ಆಶುತೋಷ ಮುಖರ್ಜಿಯವರ (೧೮೬೪ -೧೯೨೪) ಪುಸ್ತಕ ಸಂಗ್ರಹವಂತೂ ನಮ್ಮ ಕಲ್ಪನೆಗೂ ನಿಲುಕದಷ್ಟು ಗಂಭೀರವಾದದ್ದು. ಹತ್ತೆಂಟು ಭಾಷೆ ನೂರಾರು ವಿಷಯ, ಲಕ್ಷಕ್ಕೂ ಮಿಕ್ಕು ಪುಸ್ತಕಗಳನ್ನು ಒಬ್ಬ ಮನುಷ್ಯ, ಅದೂ ಕನಿಷ್ಠ ನೂರು ವರ್ಷಗಳ ಹಿಂದೆ, ಕುತೂಹಲ ತಳೆದು, ಸ್ವಂತ ತಾಕತ್ತಿನಲ್ಲಿ ಸಂಗ್ರಹಿಸಿ, ಜೀರ್ಣಿಸಿಕೊಂಡು, ಫಲವನ್ನು ಎಷ್ಟೋ ಪಾಲು ಮಿಗಿಲಾಗಿ ಅದೂ ಲೋಕೋಪಯೋಗಿಯಾಗಿ ಅನ್ವಯಿಸಿದ ಸಾಧನೆ ನನಗೆ ಇಂದಿಗೂ ಗ್ರಹಿಸಲಾಗದ ದಿಗ್ಭ್ರಮೆಯಾಗಿ ಉಳಿದಿದೆ. (ಅವರಿಗೆ ಸಣ್ಣದರಲ್ಲಿ ಸಾಟಿಯಾಗಿ ನನಗೆ ಹೊಳೆಯುವ ಇನ್ನೊಂದೇ ಹೆಸರು ಮಂಜೇಶ್ವರದ ಗೋವಿಂದ ಪೈ) ಅಂಥ ಮುಖರ್ಜಿ ಸಂಗ್ರಹವನ್ನು (ಗ್ರಂಥಾಲಯವನ್ನೂ) ಬಿಟ್ಟು, ನನ್ನ ಮಿತಿಗೆ ದಕ್ಕಿದ ಕುಮಾರಪ್ಪನವರನ್ನಷ್ಟೇ ಇಲ್ಲಿ ನೆನೆಸಿ ಮುಂದುವರಿಯುತ್ತೇನೆ. 

ಸಂದ ಪ್ರಾಯ, ಸವಲತ್ತುಗಳ ಸಂಗ್ರಹ, ಗತಿಸಿದ ಸಾಧಕರ ಪಟ್ಟಿ ಮುಂದು ಮಾಡಿ ಯಾವುದೇ ಸಂಸ್ಥೆಯನ್ನು ದೊಡ್ಡದೆಂದು ಭಾವಿಸುವುದು ತಪ್ಪೇ ತಪ್ಪು. ವರ್ತಮಾನದ ಅಗತ್ಯಗಳನ್ನು ದಿಟ್ಟವಾಗಿ ಪೂರೈಸುವಂತೆ, ಕಾಲಕಾಲಕ್ಕೆ ಸಂಸ್ಥೆಯೊಡನೆ ನಿಂದವರ ಸಾಮರ್ಥ್ಯವೇ ಸಂಸ್ಥೆಗಳ ನಿಜ ಶಕ್ತಿ. ಅಂಥವರನ್ನು ಗುರುತಿಸಿ, ಹೆಚ್ಚಿನ ಕೆಲಸಕ್ಕೆ ಸಹಾಯಕವಾಗುವುದು ಸಮಾಜದ ಜವಾಬ್ದಾರಿ ಎಂದೇ ನಂಬಿದವ ನಾನು. ಆ ನಿಟ್ಟಿನಲ್ಲಿ ಕೇಂದ್ರೀಯ ಗ್ರಂಥಾಲಯ ಇನ್ನೊಂದೇ ಸರಕಾರೀ ಪುಸ್ತಕೋದ್ಯಮ ಎಂಬ ನನ್ನ ನಿಲುವಿನಲ್ಲಿ ಯಾವ ರಾಜಿ ಮಾಡಿಕೊಳ್ಳದೆ, ಕುಮಾರಪ್ಪನವರ ದೊಡ್ಡತನವನ್ನು ಮಾತ್ರ ನೆನೆಯಲೇಬೇಕು. 

ಕನ್ನಾಡಿನಿಂದ ಕಲ್ಕತ್ತಾದ ದೂರದಲ್ಲಿ ಕುಳಿತಿದ್ದರೂ ಕುಮಾರಪ್ಪ ತನ್ನ ವೃತ್ತಿಗೆ ತೆತ್ತುಕೊಂಡ ಪರಿ ಅಸಾಧಾರಣ. ಅದಕ್ಕೆ ಸಣ್ಣ ಉದಾಹರಣೆ ನನ್ನಂಥ ಸಣ್ಣ ಪ್ರಕಾಶಕರನ್ನು ಅವರು ಪತ್ರಮುಖೇನ ತಟ್ಟುತ್ತಿದ್ದ ಕ್ರಮ. ವೈಯಕ್ತಿಕ ಪರಿಚಯ ಇದ್ದ ಲೇಖಕ ಪ್ರಕಾಶಕರಲ್ಲಿ ಕುಮಾರಪ್ಪ ದುಂಬಾಲು ಬಿದ್ದಾದರೂ ಪ್ರತಿಗಳನ್ನು ಸಂಗ್ರಹಿಸಿ, ತಂದು ಕೇಂದ್ರೀಯ ಗ್ರಂಥಾಲಯದೊಳಗಿನ ಕನ್ನಡ ವಿಭಾಗವನ್ನು ಬಲಪಡಿಸುತ್ತಿದ್ದರು. ನಾಗವೇಣಿ ಹೇಳಿದಂತೆ, ಅವರು ರಜಾವಧಿಯಲ್ಲಿ ಕನ್ನಾಡಿಗೆ ಬಂದು ವಾಪಾಸು ಹೋಗುವಾಗ ಸ್ವಂತ ಲಗ್ಗೇಜಿಗಿಂತ ಹೆಚ್ಚು ಗ್ರಂಥಾಲಯಕ್ಕೆ ಸಂಗ್ರಹಿಸಿದ ಪುಸ್ತಕಗಳ ಹೊರೆಯೇ ಇರುತ್ತಿತ್ತಂತೆ. ನಮ್ಮ ಸಮಯ ಮಿತಿಯಲ್ಲದಿದ್ದರೆ, ಕುಮಾರಪ್ಪ ಆ ದಿನವಿಡೀ ಗ್ರಂಥಾಲಯವನ್ನು ನಮಗೆ ಇನ್ನಷ್ಟು ವಿವರಗಳಲ್ಲಿ ಪರಿಚಯಿಸುತ್ತಿದ್ದರು ಖಂಡಿತ. ನಾನು ಮಂಗಳೂರಿಗೆ ಮರಳಿದ ಮೇಲೆ ನನ್ನೆಲ್ಲ ಪ್ರಕಟಣೆಗಳ ಒಂದೊಂದು ಪ್ರತಿಯನ್ನು ‘ಗ್ರಂಥಾಲಯ ಪ್ರತಿ’ ಎಂದೇ ಕುಮಾರಪ್ಪನವರ ವೈಯಕ್ತಿಕ ವಿಳಾಸಕ್ಕೆ ಅಂಚೆಯಲ್ಲಿ ಕಳಿಸಿದ್ದೆ. ಜತೆಗೇ ವೈಯಕ್ತಿಕ ಅಭಿಮಾನದಿಂದ ಕೆಲವು ಅನ್ಯ ಪುಸ್ತಕಗಳನ್ನು ಕುಮಾರಪ್ಪನವರಿಗೆಂದೇ ಸೇರಿಸಿದ್ದೆ. ಪುಣ್ಯಾತ್ಮ ಎಲ್ಲವನ್ನೂ ಸೇರಿಸಿದಂತೆ ಕೇಂದ್ರೀಯ ಗ್ರಂಥಾಲಯದ ಅಧಿಕೃತ ರಸೀದಿ ಕಳಿಸಿದ್ದರು! 

ಕುಮಾರಪ್ಪನವರ ಹೆಂಡತಿ ಯಾವುದೋ ಬ್ಯಾಂಕ್ ಉದ್ಯೋಗಿ. ಆದರೂ ಬೃಹನ್ನಗರ ಜೀವನದ ಬಂಡಾಟದಲ್ಲಿ ಕುಂದದೆ, ಕನ್ನಡದ ಅಭಿಮಾನಕ್ಕೆಂಬಂತೆ ಬೆಳಿಗ್ಗೆಯೇ ನಮಗೆಲ್ಲರಿಗೆ ಅಡುಗೆ ಮಾಡಿಟ್ಟು, ತಾವು ಬುತ್ತಿ ಹಿಡಿದು ಹೋಗಿದ್ದರು. ಅವರ ಪುಟ್ಟ ಮನೆಯಲ್ಲಿ ನಾವೈವರು ನೆಲದಲ್ಲೇ ಸುತ್ತ ಕುಳಿತು ಬಡಿಸಿಕೊಂಡು ಮಾಡಿದ ಸರಳ ಊಟ ನಿಜಕ್ಕೂ ಮರೆಯಲಾಗದ್ದು. ಕುಮಾರಪ್ಪನವರು ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಅನುವಾದಿತ ಕೃತಿಗಳನ್ನೂ ಕೊಟ್ಟು, ಕೆಲವು ವರ್ಷಗಳ ಹಿಂದೆಯೇ ಕಾಲಕ್ಕೆ ಸಂದುಹೋಗಿದ್ದಾರೆ. 

ನಗರ ದರ್ಶನದ ಅಂಗವಾಗಿ ರಾಮಕೃಷ್ಣ ಪರಮಹಂಸರ ಆರಾಧ್ಯ ದೈವ - ದಕ್ಷಿಣೇಶ್ವರದ ಕಾಳೀ ಮಂದಿರ ಮತ್ತು ಅಷ್ಟೇ ಖ್ಯಾತಿಯ ಮದರ್ ತೆರೇಸಾರವರ ‘ಸಾವಿನ ಮನೆ’ಗಳಿಗೆ ಭೇಟಿ ಕೊಡಬೇಕೆನ್ನುವ ಸೂಚನೆಗಳೇನೋ ನನ್ನ ಯೋಜನಾ ಪುಟಗಳಲ್ಲಿತ್ತು. ಆದರೆ ಸಮಯದ ಹೊಂದಾಣಿಕೆಯಲ್ಲಿ ಅವನ್ನು ಕೈ ಬಿಟ್ಟೆವು. ಮತ್ತು ದಿನದ ಕೊನೆಯ ವೀಕ್ಷಣಾ ಕಲಾಪವಾಗಿ... 

‘ಬಿರ್ಲಾ ಇಂಡಸ್ಟ್ರಿಯಲ್ ಮ್ಯೂಸಿಯಂಗೆ ಹೋಗಿದ್ದೆವು. ಅದರ ನಾಲ್ಕು ವಿಭಾಗಗಳಲ್ಲಿ ಕಲ್ಲಿದ್ದಲ ಗಣಿ ವಿಭಾಗ ಚೆನ್ನಾಗಿತ್ತು. ರೊಬಾಟ್ ವಿಭಾಗ ಮತ್ತು ವಿವಿಧ ವಸ್ತು ಸಂಗ್ರಹಗಳಲ್ಲಿ ನಮಗೆ ವಿಶೇಷ ಆಕರ್ಷಣೆ ಮೂಡಲಿಲ್ಲ. ತಾರಾಮಂಡಲ ನನಗೆ ತಂದೆಯ ಲೆಕ್ಕದಲ್ಲಿ ಸ್ವಲ್ಪ, ಉಪಾಧ್ಯರಿಗೆ ಆಪ್ತ ಹವ್ಯಾಸದ ಬಲದಲ್ಲಿ ತುಂಬ ಕುತೂಹಲಕಾರಿ ವಿಭಾಗವಾಗಿತ್ತು. ತಾರಾಮಂಡಲದ ನಿರೂಪಕ - ಕಿನ್ನರ ತಾರಾಪುಂಜದ ಚಿತ್ರವನ್ನು ತಪ್ಪಾಗಿ ಧನು ರಾಶಿಯಲ್ಲೂ, ರೆಗ್ಯುಲಸ್‍ನ್ನು ತಪ್ಪಾಗಿ ಸಿಂಹ ರಾಶಿಯಲ್ಲೂ ತೋರಿದನೆಂದು ಉಪಾಧ್ಯರು ಗೊಣಗಿಕೊಂಡರು. ಅಂಥವನ್ನೆಲ್ಲ ಘಟ್ಟಿಸಿ ಹೇಳುವ ಛಾತಿ ಉಪಾಧ್ಯರದ್ದಲ್ಲ. ಆದರೂ ಸಭೆ ಮುಗಿದ ಮೇಲೆ ನಾನು ಆತನಿಗೆ ಉಪಾಧ್ಯರ ಆಕಾಶವೀಕ್ಷಣೆಯ ಸಾಹಸವನ್ನು ಸಣ್ಣದಾಗಿ ಪರಿಚಯಿಸಿದ್ದೆ. ಅದಕ್ಕೆ ಪೂರಕವಾಗಿ ಅವರು ಹಿಂದೆ ತನ್ನದ್ದೇ ಸಲಕರಣೆಗಳಲ್ಲಿ ತೆಗೆದಿದ್ದ ಹ್ಯಾಲೀ ಮತ್ತು ಹಯಾಕುಟಿಕಿ ಧೂಮಕೇತುಗಳ ಚಿತ್ರ ತಂದಿದ್ದದ್ದನ್ನು ತೋರಿಸುವಂತೆ ಮಾಡಿದೆ. ಸೌಮ್ಯವಾಗಿ ಆತನ ನಿರೂಪಣೆಯ ತಪ್ಪನ್ನು ಸೂಚಿಸಿದಾಗ ಆತ ಬೆಪ್ಪಾಗಿ ಬಿಟ್ಟ ಬಾಯಿ ಮುಚ್ಚುವುದರೊಳಗೆ, ನಾವು ಜಾಗ ಖಾಲಿ ಮಾಡಿದ್ದೆವು. 


ವೀಕ್ಷಣಾ ಪ್ರಧಾನವಾದ ಪ್ರವಾಸದಲ್ಲಿ, ಅದೂ ಬೈಕಿನ ಮಿತಿಯಲ್ಲಿ, ನಾವು ಅಂದಂದಿನ ಆವಶ್ಯಕತೆಗಳನ್ನು ಮೀರಿ ಯಾವುದೇ ಖರೀದಿಗಳನ್ನು (ಶಾಪಿಂಗ್ ಎನ್ನುವ ಅರ್ಥದಲ್ಲಿ) ಮಾಡಬಾರದೆಂದು ಬಹಳ ಹಿಂದೆಯೇ ನಿರ್ಧಾರ ಮಾಡಿದ್ದೆವು. ಅಂಥದ್ದರಲ್ಲೂ ಕಳೆದ ಪ್ರವಾಸದ ಒಂದು ದುರ್ಬಲ ಗಳಿಗೆಯಲ್ಲಿ, ಅಂದರೆ ಜೈಪುರದಲ್ಲಿ, ಸೀರೆ ಖರೀದಿಸಿ ಮೋಸ ಹೋದದ್ದನ್ನೂ ಮರೆತಿರಲಿಲ್ಲ. ಆದರೆ ಕಲ್ಕತ್ತಾ ಹತ್ತಿ ಸೀರೆಗಳ ಖ್ಯಾತಿ ನಮ್ಮ ಪ್ರವಾಸದ ಯೋಜನೆಯ ಕಾಲದಲ್ಲೇ ದೇವಕಿಯನ್ನು ಹಿಡಿದಿಟ್ಟಿತ್ತು. ಹಾಗಾಗಿ ಸಮಯ, ಹಣ ಮತ್ತು ಸಾಗಣಾ ವ್ಯವಸ್ಥೆಗಳನ್ನೂ ಆಕೆ ಪ್ರತ್ಯೇಕ ಯೋಚಿಸಿಟ್ಟುಕೊಂಡಿದ್ದಳು. ಹಿಂದಿನ ಸಂಜೆ ಕನ್ನಡ ಸಂಘದ ಮಹಿಳೆಯರಲ್ಲೂ ಸಾಕಷ್ಟು ವಿಚಾರಿಸಿ ನಿಶ್ಚೈಸಿದ್ದಂತೆ, ತಡ ಸಂಜೆಯಲ್ಲಿ ಕಲ್ಕತ್ತಾದ ವಿಶ್ವಾಸಾರ್ಹ ಮಳಿಗೆ ‘ಬಸಕ್’ಗೆ ಭೇಟಿ ಕೊಟ್ಟೆವು. ಅಲ್ಲಿ ದೇವಕಿ - ಅಮ್ಮ, ಅತ್ತೆ, ಸೋದರಿ ಎಂದಿತ್ಯಾದಿ ಪಟ್ಟಿ ಮಾಡಿಕೊಂಡು ಬಂದಿದ್ದಂತೆ ಎಂಟು (೧೫೦೦ ರೂ) ಕಿಶೋರ್ ಅವರ ಕುಟುಂಬದವರ ಲೆಕ್ಕದಲ್ಲಿ ಏಳು ಸೀರೆ (೧೩೦೦ ರೂ) ಖರೀದಿಸಿದರು. ಮತ್ತವನ್ನೆಲ್ಲ ಮಳಿಗೆಯವರ ಸಹಾಯದಲ್ಲಿ ಅಲ್ಲಿಂದಲೇ ಮಂಗಳೂರಿಗೆ ಅಂಚೆ ಪಾರ್ಸೆಲ್ ಕೂಡಾ ಮಾಡಿಸಿ ಹಗುರಾದರು. ಪ್ರತಿ ಕಾನೂನಿಗೂ ವಿನಾಯಿತಿ ಇರುತ್ತದಲ್ಲಾ ಹಾಗೆ! 

(ಮುಂದುವರಿಯಲಿದೆ)

7 comments:

  1. ನಾನು ಕೋಲ್ಕತಾ ಗೆ ಹೋದರೆ ನೋಡಲೇ ಬೇಕೆಂದು ಕೊಂಡ ಸ್ಥಳಗಳಲ್ಲಿ ಒಂದು”ಬಟಾಣಿ ಕಾಳು ಉದ್ಯಾನ”ಅದೇ ಅಮೆಜಾನ್ ತಾವರೆಯ ಆಕರ್ಷಣೆ.ಆದರೆ ಕೋಲ್ಕತಾ ಭೇಟಿ ಸಾಧ್ಯವಾಗಿಲ್ಲ.ಅಮೆಝಾನ್ ತಾವರೆ ಬೆಂಗಳೂರಿಗೇ ಬಂದಿದೆ.ಕೊರೊನಾ ಕಾಟ ಮುಗಿದಮೇಲೆ ಹೋಗಿ ಬರಬೇಕು.ಇನ್ನು ಆ ದೊಡ್ಡ ಆಲದ ಮರ ಆ ಕಾಲದಲ್ಲೇ ಹಾಗಿದ್ದರೆ ಈಗ ಹೇಗಿದೆಯೋ.ಬೆಂಗಳೂರಿನ ದೊಡ್ಡ ಆಲದಮರ ಹಾಗಾಗುವ ಮುಂಚೆ ನೋಡಿ ಬರಬೇಕು.
    “ಗಾಂಧಿ ಬಂದ”ಪುಸ್ತಕದ ಒಂದು ಸಂವಾದ ಕಾರ್ಯಕ್ರಮ ಎಂಟತ್ತು ವರ್ಷ ಗಳ ಹಿಂದೆ ದುರ್ಗದಲ್ಲಿ ದ್ದಾಗ ನಾಗವೇಣಿಯವರು ಇಲ್ಲಿಗೆ ಬಂದಿದ್ದರು.ಅವರ ಕೋಲ್ಕತ್ತಾ ವಾಸದ ದಿನಗಳನ್ನು ನೆನೆದು ನುಡಿದ ಮಾತುಗಳು ನೆನಪಾದವು.ಅವರ ರೋಬೀಂದ್ರ ಸಂಗೀತದ ಬಗ್ಗೆ ಯೂ ತಮಾಷೆ (!)ಮಾಡಿದ್ದು ನೆನಪಾಯಿತು.ಅವರ ಯಾವುದೋ ಪುಸ್ತಕದಲ್ಲೂ ಈ ಕುರಿತು ಉಲ್ಲೇಖಿಸಿದ್ದಾರೆ.ಯಾವ ಪುಸ್ತಕ ಎಂದು ನೆನಪಾಗುತ್ತಿಲ್ಲ.
    ಕಾಟನ್ ಸೀರೆ ಪ್ರಿಯರ ಮೊದಲ ಆದ್ಯತೆ ಕೋಲ್ಕತಾ ಕಾಟನ್.ಕೋಲ್ಕತಾಗೆ ಹೋಗಲಾಗದಿದ್ದರೂ, ಬೆಂಗಳೂರಿನ ಅವರ ಶೋರೂಂ, ಮೆಜೆಸ್ಟಿಕ್ ನಲ್ಲಿದ್ದ ‘ತಂತುಜಾ’ (ಈಗಲೂ ಇದೆಯೋ ಗೊತ್ತಿಲ್ಲ)ದಲ್ಲೇ ಎಷ್ಟೋ ಸೀರೆಗಳು ಕೊಂಡದ್ದು ನೆನಪಾಯಿತು.

    ReplyDelete
  2. ಸೀರೆಯ ಪಾರ್ಸೆಲ್ ಮಾಡುವಾಗ ಅದಕ್ಕೆ ಅಧಿಕ್ರುತ ಮುದ್ರೆ ಹಾಕುವ ಅಗತ್ಯವಿತ್ತು. ಪೋಸ್ಟ ಆಫೀಸಲ್ಲಿ ಮಾಡಿಸಿ ತಂದುಕೊಡಲು ಅಂಗಡಿಯವರು ಹೇಳಿದ ನೆನಪು. ಆದರೆ ಮರುದಿನ ಪೋಸ್ಟ್ ಆಪೀಸು ತೆರೆಯುವಲ್ಲಿ ವರೆಗೆ ಕಾಯುವ ಸಮಯ ನಮಗೆ ಇರಲಿಲ್ಲವಷ್ಟೇ. ಆಗ ಉಪಾಧ್ಯರು ಅದು ನಾನು ಮಾಡ್ತ್ತೇಂತ ರಸ್ತೆ ಅಂಚಿನಲ್ಲಿ ದಡ್ಡುಗಟ್ಟಿದ್ದ ಡಾಮರ್ ಮುದ್ದೆಯನ್ನು ಕಲ್ಲಿನಲ್ಲೇ ಕುಟ್ಟಿ, ಕಿತ್ತು ತಂದು,
    ಮೊಂಬತ್ತಿ ಬಿಸಿಯಲ್ಲಿ ಕರಗಿಸಿ, ನಮ್ಮಲ್ಲಿದ್ದ ಯಾವುದೋ ನಾಣ್ಯದ್ದೇ ಅಚ್ಚು ಒತ್ತಿ ಕೊಟ್ಟಿದ್ದರು!

    ReplyDelete
  3. ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳ ಜಾಡು ಹಿಡಿದು ನ್ಯಾಷನಲ್ ಲೈಬ್ರರಿಗೆ ಪ್ರತಿಗಳನ್ನು ತರಸಿಕೊಳ್ಳಲು ಪಡುತ್ತಿದ್ದ ಭಗೀರಥ ಪ್ರಯತ್ನವನ್ನು ಕಣ್ಣಾರೆ ಕಂಡಿದ್ದೆ. ನಮ್ಮ ಖ್ಯಾತ ಕಾದಂಬರಿಕಾರರ ಒಂದೂ ಕೃತಿಗಳು ಅಲ್ಲಿರಲಿಲ್ಲ. ಕುಮಾರಪ್ಪನವರ ಪ್ರಯತ್ನಕ್ಕೆ ಪ್ರಕಾಶಕರು ಸ್ಪಂದಿಸಿರಲೇ ಇಲ್ಲ.ಪ್ರಖ್ಯಾತ ಲೇಖಕರ ಕೃತಿಗಳು ನ್ಯಾ ಲೈ ನಲ್ಲಿಲ್ಲದ್ದು ನನಗೇಕೋ ಸರಿ ಎನಿಸಲಿಲ್ಲ . ಪ್ರಕಾಶಕರ ಅಲ್ಪ ಸ್ವಲ್ಪ ಪರಿಚಯವಿದ್ದರಿಂದ ನಾನು ಪ್ರಯತ್ತಿಸುತ್ತೇನೆಂದೆ. ಆ ಸರ್ತಿ ಬೆಂಗಳೂರಿಗೆ ಬಂದಾಗ ಪ್ರಕಾಶನದವರನ್ನು ಭೇಟಿ ಯಾಗಿ ವಿವರಿಸಿ ವಿನಂತಿಸಿಕೊಂಡೆ. ಅವರು ಕ್ಷುಲ್ಲಕ ಕಾರಣಗಳನ್ನು ನೀಡಿ ಪುಸ್ತಕಗಳನ್ನು ಕಳಿಸಲು ಒಪ್ಪಲಿಲ್ಲ. ಅವರ ಈ ಕಠಿಣ ನಿರ್ಧಾರದಿಂದ ನಷ್ಟ ಆದದ್ದು ಕನ್ನಡ ಸಾರಸ್ವತ‌ಲೋಕಕ್ಕೇ . ಕುಮಾರಪ್ಪನವರ ಒಡನಾಟ ಮೂರು ವರ್ಷಗಳ ಕಾಲ ಲಭಿಸಿದ್ದು ನನ್ನ ಪುಣ್ಯ. ಕರ್ನಾಟಕದ ಸಾರಸ್ವತ ಲೋಕಕ್ಕೂ ಕಲ್ಕತ್ತಾಕ್ಕೂ ಕುಮಾರಪ್ಪ ಒಂದು ಬಲಿಷ್ಠ ಕೊಂಡಿಯಾಗಿದ್ದರು.

    ReplyDelete
  4. ಸೊಗಸಾಗಿದೆ. ಸೀರೆಗಳನ್ನು ಕೊಂಡು ಊರಿಗೆ ಪಾರ್ಸೆಲ್ ಮಾಡಿದ ಐಡಿಯಾ ಚೆನ್ನಾಗಿದೆ. ಇಲ್ಲದಿದ್ದರೆ ಅದನ್ನು ಹೊತ್ತುಕೊಂಡು ಪಶ್ಚಿಮ ಕರಾವಳಿವರೆಗಿನ ಯಾತ್ರೆಯುದ್ದಕ್ಕೂ ತಿರುಗಾಡಬೇಕಿತ್ತು. ನಾನಾಗಿದ್ದರೆ ಬೋದಾಳನಂತೆ ಹಾಗೇ ಮಾಡುತ್ತಿದ್ದೆನೇನೋ. ನೀವು ನಿಮ್ಮ ಹೊರೆಯನ್ನು ಅಂಚೆಇಲಾಖೆಗೆ ಒಪ್ಪಿಸಿಬಿಟ್ಟು ನಿರಾಳರಾದಿರಿ.

    ReplyDelete
  5. ನಿಮ್ಮ ಪಯಣ ಮತ್ತು ಪುಸ್ತಕ ಗಳ ನಡುವಣ ಸೇತುವೆಯಾಗಿ ಕುಮಾರಪ್ಪನವರ ಕಥನವನ್ನು ಹಿಂದೆ ಓದಿದ್ದೆ.
    ನೆನಪಿಸಿದಿರಿ.ಚಿಟಿಕೆ ಹೊಡೆದು ಮರಳಿ ಓದಿದೆ.
    ವಂದನೆಗಳು.

    ReplyDelete
  6. ಕಲ್ಕತ್ತಾ ದರ್ಶನ ಚೆನ್ನಾಗಿ ಮಾಡಿಸಿದಿರಿ. ನಾವು ಒಮ್ಮೆ ಕಲ್ಕತ್ತಾದ ದರ್ಶನ ಮಾಡಬೇಕು ಅನ್ನೋ ತರಹ ನಿಮ್ಮ ಬರವಣಿಗೆ.

    ReplyDelete
  7. ಅರರೇ.... ಇಲ್ಲಿನ ಬಹಳಷ್ಟು ನನಗೆ ಹೊಸದೆಂಬಂತೇ ಕಂಡಿತಲ್ಲಾ...😂

    ReplyDelete