17 November 2021

ಆಷ್ಟಭುಜೆ ರಮಾದೇವಿಗೆ ನಮನ


ಚಿತ್ರ ಕೃಪೆ: ಅಭಿಜಿತ್ ಎಪಿಸಿ

"ದಿಬ್ಬಣ ವೆಂಕಪ್ಪು ಮನೆಗೆ ಬಂದಿದೆ" ಎಂದು ಕೇಳಿದಾಗ, ಹೊಸ ಚಡ್ಡಿ ಎಳೆದುಕೊಂಡು ಅರ್ಧ ಕಿಮೀ ದೂರದ ತೋಡಿನಾಚೆ ದಂಡೆಗೆ ಓಡಿದ ಐದರ ಹುಡುಗ ನಾನು. ಅಜ್ಜ - ಎಪಿ ಸುಬ್ಬಯ್ಯ, ಸಕಾಲದಲ್ಲೇ ಹಿರೀಮಗ - ತಿಮ್ಮಪ್ಪಯ್ಯನಿಗೆ ಮದುವೆಯನ್ನೇನೋ ಮಾಡಿದ್ದರು. ಆದರೆ ದುರದೃಷ್ಟಕ್ಕೆ ಪತ್ನಿ ಗಂಗಮ್ಮ, ಚೊಚ್ಚಲ ಹೆರಿಗೆಯಲ್ಲಿ ಮಗುವನ್ನಿತ್ತು (ಸುಬ್ಬಯ್ಯ ದ್ವಿತೀಯ), ಬಾಣಂತಿಸನ್ನಿಗೆ ಪ್ರಾಣ ನೀಗಿದ್ದರು. ಇಂಥ ಸ್ಥಿತಿಯಲ್ಲಿ ೨೯ರ ತರುಣನಿಗೆ, ೧೬ರ ನವವಧುವಾಗಿ ಬಂದವರು (೧೯೫೭) ವರ್ಮುಡಿಯ ರಮಾದೇವಿ. ತಿಮ್ಮಪ್ಪಯ್ಯ - ನನಗೆ ಸೋದರಮಾವ, ಹುಟ್ಟಿದಾರಭ್ಯ ರೂಢಿಸಿದಂತೆ ಏಕವಚನದ ಅಣ್ಣ. ಅದೇ ರೂಢಿಯ ಮುಂದುವರಿಕೆಯಾಗಿ ರಮಾದೇವಿ ಅತ್ತಿಗೆಯಾದರೂ ಬಂಧ ಬಹುವಚನದ್ದು! ಆದರೆ ಸಂದ ಆರು ದಶಕಗಳಿಗೂ ಮಿಕ್ಕ ಕಾಲದಲ್ಲಿ ಪರಸ್ಪರ ಪ್ರೀತ್ಯಾದರಗಳು ಗಾಢವೇ ಇದ್ದವು ಎನ್ನುವ ಅರಿವು ಮೂಡಿದ್ದು ಮಾತ್ರ ತೀರಾ ಈಚೆಗೆ!

ಎಡದಿಂದ ಎಪಿ ದೇವಕಿ, ಸೀತೆ, ಭವಾನಿ, ಅತ್ತಿಗೆ, ಅನುರಾಧೆ 
ಮಡಿಕೇರಿ ಮೂಲದ ನನ್ನಜ್ಜ - ಎಪಿ ಸುಬ್ಬಯ್ಯ, ತನ್ನ ಪಾಲಿಗೆ ಬಂದ ಪುತ್ತೂರಿನ ಬಳಿಯ ಮರಿಕೆ ಬೈಲನ್ನು ಕೃಷಿಗೆ ವಹಿಸಿಕೊಂಡಿದ್ದರು. ಅವರು ಸಂಸಾರ ವೃದ್ಧಿಸಿದಂತೆ, ತನ್ನ ಸೂಕ್ಷ್ಮ ದೇಹಪ್ರಕೃತಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ಅಗತ್ಯಗಳೆರಡನ್ನೂ ಸೇರಿಸಿ ಪುತ್ತೂರಿನಲ್ಲೇ ಪ್ರತ್ಯೇಕ ಮನೆ (ಬಿಡಾರ) ಮಾಡಿ ನೆಲೆಸಿದರು. ಆಗ ತನ್ನ ಹಿರಿಯ ಮಗ, ಇನ್ನೂ ಬಹುತೇಕ ಮೀಸೆ ಬಲಿಯದ ತರುಣ ತಿಮ್ಮಪ್ಪಯ್ಯನನ್ನು ಕಾರ್ಯರಂಗದ ಮುಖ್ಯಸ್ಥನನ್ನಾಗಿ ಮರಿಕೆಯಲ್ಲಿ ನೆಲೆಗೊಳಿಸಿದರು. (ಅಣ್ಣನ ಕುರಿತ ಹೆಚ್ಚಿನ ವಿವರಗಳಿಗೆ ನೋಡಿ: ಅಸಮ ಸಾಹಸಿ ಮರಿಕೆ ಅಣ್ಣ) ಆ ಮೊದಲ ಹಂತದಲ್ಲಿ ಆತನ ಗೃಹಕೃತ್ಯದ ಬಹುತೇಕ ನೈತಿಕ ಬೆಂಬಲಕ್ಕೆ ಜತೆಗಿದ್ದವರು ವಿಧವೆ ಅಜ್ಜಿ - ಅಮ್ಮಯ್ಯ. ಆದರೀಗ ಹೊಸದಾಗಿ ಬಂದ ಎಳೆಯ ಜೀವ, ಎಲ್ಲಾ ಬಲವನ್ನೂ ಊಡಲೇ ಬೇಕಾದ ಅರ್ಧಾಂಗಿ!
ಮಹಾಕುಟುಂಬದ ಒಂದು ಭಾಗದ ಕೇದ್ರದಲ್ಲಿ ಅಣ್ಣ ಅತ್ತಿಗೆ


ಅತ್ತಿಗೆಗೆ ಒಮ್ಮೆಗೇ ಸುಧಾರಿಸಿಕೊಳ್ಳಲು ಬಿದ್ದ ಹೊರೆ - ಗಂಡ, ದೊಡ್ಡ ಮನೆ, ನಿತ್ಯ ಪೂಜೆಯ ದೇವರು - ದುರ್ಗೆ, ಸಂಬಂಧಿಸಿದ ಕಾಲಾವಧಿ ವಿಶೇಷಗಳು (ನವರಾತ್ರಿ, ಚೌತಿ, ಅನಂತನ ವ್ರತ....), ಹಿರಿಯ ಜೀವ ಅಮ್ಮಯ್ಯ. ಮತ್ತೆ ಅದೇ ವ್ಯವಸ್ಥೆಯ ಭಾಗವಾದ ಉಳಿದವರಲ್ಲಿ ಹಲವರು ಪ್ರಾಯದಲ್ಲಿ ಹಿರಿಯರಾದರೂ ಅತ್ತಿಗೆಯ ಅಧಿಕಾರ (ಹುಸಿಯಲ್ಲ, ಬಾಧ್ಯತೆಯೊಡನೆ) ದೊಡ್ಡದು! ಮೂರು ಮೈದುನರು ಮತ್ತು (ನನ್ನಮ್ಮನನ್ನುಳಿದು) ಐದು ನಾದಿನಿಯರು, ಅವರ ಮದುವೆಗಳು, ಮುಂದುವರಿದಂತೆ ಹೆರಿಗೆ, ಅನಾರೋಗ್ಯಗಳ ವಿಶ್ರಾಂತಿ, ಮೊಮ್ಮಕ್ಕಳ ಅಜ್ಜನ ಮನೆಯ ಹಕ್ಕಿನ ರಜಾ ಧಾಳಿ... ಎಲ್ಲದರ ಧಾರಿಣಿ ಈ ಅತ್ತಿಗೆ. ಮೊದಮೊದಲು ಮೈದುನ ನಾದಿನಿಯರು ವಿದ್ಯಾಭ್ಯಾಸ, ವೃತ್ತಿ ನಿಮಿತ್ತ ಪುತ್ತೂರು ಬಿಡಾರದಲ್ಲೋ ಹೊರ ಊರಿನಲ್ಲೋ ಇದ್ದರೂ ಎಂದೂ ಮತ್ತು ಕುಟುಂಬದ ವಿಶೇಷಗಳಿಗಂತೂ ಬಂದು ಸೇರುತ್ತಿದ್ದದ್ದು ಅತ್ತಿಗೆಯ ನೆರಳಿಗೇ. ಅವರೆಲ್ಲ ಅತ್ತಿಗೆಗೆ ಎಷ್ಟು ಸಹಕಾರಿಗಳೇ ಇದ್ದರೂ ಉತ್ತಮ ‘ಅತಿಥಿ’ ಪಾಲುದಾರರಷ್ಟೇ ಆಗುತ್ತಿದ್ದರು. ಕೃಷಿ, ಕಾರ್ಮಿಕರು, ಹೈನು ಮತ್ತು ಮಾರುಕಟ್ಟೆಯ ಅಸಂಖ್ಯ ಚಟುವಟಿಕೆಯಲ್ಲಿ ಅಣ್ಣನಿದ್ದರೆ, ನಿತ್ಯದ ಗೃಹಕೃತ್ಯದ ಅಷ್ಟೂ ಜವಾಬ್ದಾರಿ ಮತ್ತು ನಿರ್ವಹಣೆಗೆ ಅತ್ತಿಗೆಯೇ ಅಷ್ಟಭುಜೆ; ರಮಾದೇವಿ! ನಿತ್ಯಕ್ಕೆ ಅಡುಗೆ ಸಹಾಯಕರು ಯಾರೂ ಇರಲಿಲ್ಲ. ಯಾವುದೇ ಕೊರತೆಗಳಿಗೆ ಕನಿಷ್ಠ ನಾಲ್ಕು ಮೈಲು ದೂರದ ಪುತ್ತೂರ ಪೇಟೆಯನ್ನೇ ನೋಡಬೇಕಾದ ಸ್ಥಿತಿ. ಎಲ್ಲೆಲ್ಲಿಂದಲೋ (ಮಡಿಕೇರಿ, ಬಳ್ಳಾರಿ, ಮುಂಬೈ, ಬೆಂಗಳೂರು...) ರಜಾದಿನಗಳಲ್ಲಿ ಬಂದು ಪುತ್ತೂರು, ಮರಿಕೆಗಳೆಂದು ರಜೆಯ ಮಜಾ ಮಾತ್ರ ತಿಳಿದಿದ್ದ ನಮಗೆ ಇವೆಲ್ಲ ಅರಿವಿಗೆ ಬಂದದ್ದು ತುಂಬ ತಡವಾಗಿ.
ಎಡದಿಂದ ಅತ್ತಿಗೆ, ನನ್ನಮ್ಮ, ದೇವಕಿ, ಸೀತೆ


ಅಣ್ಣನ ಯೋಜನೆ, ನಿರ್ವಹಿಸುವಲ್ಲಿನ ಶ್ರಮ ಮತ್ತು ಶಿಸ್ತುಗಳೆಲ್ಲ ನೇರ ಉಪಯುಕ್ತತೆಯನ್ನೇ ಲಕ್ಷಿಸುವಾಗ ಎಷ್ಟೋ ಬಾರಿ ತೀರಾ ಒರಟಾಗುವುದಿತ್ತು. ಅದಕ್ಕೆ ಪ್ರೀತಿಯ ಅರ ಉಜ್ಜಿ ಸಂಬಂಧಗಳನ್ನು ಸಂಭಾಳಿಸಿದ ಯಶಸ್ಸು ಅತ್ತಿಗೆಯದ್ದು. ದ್ವಿತೀಯ ಸುಬ್ಬಯ್ಯ (ಮೊದಲ ಹೆಂಡತಿಯ ಮಗ) ಹಿರಿಯ ಪ್ರಾಥಮಿಕದವರೆಗೆ ಆತನ ಅಜ್ಜನ ಮನೆಯಲ್ಲಿ ಬೆಳೆದ. ಆದರೆ ಇಲ್ಲಿನ ಕುಟುಂಬದ ಎಲ್ಲಾ ವಿಶೇಷಗಳಲ್ಲಿ ಆತ ಮನೆಯವನಾಗಿಯೇ ಭಾಗಿಯಾಗುವುದು ಮತ್ತು ಪ್ರೌಢಶಾಲಾ ಹಂತದಿಂದ ಮುಂದೆ ಇಲ್ಲೇ ನೆಲೆಸುವುದನ್ನೆಲ್ಲ ಅಣ್ಣ ಯೋಜನಾಬದ್ಧವಾಗಿಯೇ ನಡೆಸಿದ. ಆ ದಿನಗಳಲ್ಲಿ ಸುಬ್ಬಯ್ಯ ಏನು ಮಾಡಿದರೂ ‘ಬಾಲಬುದ್ಧಿ, ತಾಯಿಯಿಲ್ಲದ ಹುಡುಗನ ಕತೆ’ ಎಂದನ್ನಿಸಿದ್ದರೆ, ಅತ್ತಿಗೆ ಏನು ಮಾಡಿದರೂ ‘ಮಲತಾಯಿ, ಮಲಸೋದರರು’ ಎಂದು ಕಾಣಿಸಿದ್ದರೆ, ಅದು ಸಾಮಾಜಿಕ ದೋಷ. ಅಂಥವು ತಲೆ ಎತ್ತದಂತೆ (ತನ್ನದೇ ನಾಲ್ವರು ಮಕ್ಕಳಿದ್ದೂ) ಸಮಭಾವದಿಂದ ತಾಳಿಕೊಂಡು, ನಿರ್ವಹಿಸಿದ ಸಮರ್ಥೆ ಅತ್ತಿಗೆ. ಅದಕ್ಕೆ ಸಾಕ್ಷಿ ಇಂದಿನ ಸುಬ್ಬಯ್ಯ. ಆತ ವೃತ್ತಿ ಸಂಬಂಧ ಮುಂಬೈಯಲ್ಲಿ (ಸ್ವಂತ ಮನೆ ಮಾಡಿಯೇ) ನೆಲೆಸಿದ್ದರೂ ನಿವೃತ್ತಿಗೆ ‘ಮರಳಿ ಮಣ್ಣಿಗೆ’ಯನ್ನೇ ಬಯಸಿದ. ಇಂದು ಮರಿಕೆಮನೆಯ ಹೊರ ವಲಯದ ಸ್ವಂತ ನಿವೇಶನ ಮತ್ತು ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸಿದ್ದಾನೆ. ಮತ್ತು ಮೂಲ ದೊಡ್ಡ ಮನೆಯ ಭಾಗವೆನ್ನುವಂತೆ, ಚಿಕ್ಕಮ್ಮನನ್ನು "ಅಮ್ಮ"ನೆಂದೇ ಸಂಬೋಧಿಸುತ್ತ ಎಲ್ಲರೊಡನೊಂದಾಗಿ ಇದ್ದಾನೆ.

ಮೈದುನ ನಾದಿನಿಯರು ಪ್ರಬುದ್ಧರಾಗುತ್ತಿದ್ದಂತೆ ಮದುವೆ, ಪಾಲು, ಹೊಸದಾಗಿ ಮನೆಹೂಡುವವರಿಗೆ ಯುಕ್ತ ಸಹಾಯಗಳಲ್ಲಿ ಅತ್ತಿಗೆಯನ್ನು ಇತರರಿರಲಿ, ಕುಟುಂಬಿಕರೇ ಗುರುತಿಸಿದ್ದು ಕಡಿಮೆ ಎಂದು ನನಗೀಗ ಹೊಳೆಯುತ್ತದೆ. ವಾಸ್ತವದಲ್ಲಿ ಆ ಮನೋವೈಶಾಲ್ಯದ ಫಲವಾಗಿಯೇ ಮರಿಕೆಮನೆಯ ನಿತ್ಯ ಅಥವಾ ಹೆಚ್ಚುಕಟ್ಲೆಗಳಲ್ಲಿ ಇತರ ಮೂರೂ ಮನೆಗಳ ಗೃಹಿಣಿಯರೂ ಮಕ್ಕಳೂ (ಹೊರಗಿನವರಂತಲ್ಲದೆ) ಮನೆಯವರಂತೇ ತೊಡಗಿಕೊಳ್ಳುತ್ತಿರುವುದನ್ನು ನೆನೆಸಿದಾಗ ಮನಸ್ಸು ತುಂಬುತ್ತದೆ.

ಮನೆಯಿಂದ ಮೈದುನ ನಾದಿನಿಯರು ಕಳಚಿಕೊಂಡರೂ ಮನೆಯ ನಿತ್ಯದ ಮತ್ತು ವಿಶೇಷದ ಜವಾಬ್ದಾರಿಗಳು ಅತ್ತಿಗೆಗೆಂದೂ ಕಡಿಮೆಯಾದದ್ದಿಲ್ಲ. ಅಣ್ಣನಿಗೆ ಅತ್ತಿಗೆಯಲ್ಲಿ ಮಕ್ಕಳು ನಾಲ್ವರು - ಚಂದ್ರಶೇಖರ, ಶಾರದೆ, ಸದಾಶಿವ ಮತ್ತು ನಳಿನಿ. ಸಹಜವಾಗಿ ಕಾಲಚಕ್ರದ ಹೊಸಸುತ್ತಿನಲ್ಲಿ, ಹಿರಿಪತ್ನಿಯ ಮಗನನ್ನೂ ಸೇರಿಸಿಕೊಂಡೇ ಹುಡುಗರಿಗೆ ಉಪನಯನದಿಂದ ತೊಡಗಿ, ಎಲ್ಲರ ಮದುವೆ, ಹೆರಿಗೆಯಂಥ ಪ್ರೀತಿಯ ಹೊರೆಗಳನ್ನೆಲ್ಲ ಅತ್ತಿಗೆ ಯಾವ ಕೊರತೆ ಬಾರದಂತೆ, ನಿರಾಯಾಸವಾಗಿ (ನಮ್ಮಂಥವರಿಗೆ ಅದೆಲ್ಲ ನಡೆಸಿದವರು ಯಾರೆಂಬ ಅರಿವೇ ಬಾರದಂತೆ) ನಡೆಸುತ್ತಲೇ ಬಂದರು.

ನನ್ನಪ್ಪಮ್ಮರದು ಸೋದರಿಕೆಯ ಸಂಬಂಧ. (ನನ್ನ ಅಮ್ಮಪ್ಪನ ತಂಗಿಯೇ ಅಪ್ಪಪ್ಪನ ಹೆಂಡತಿ) ಮರಿಕೆ ನನ್ನಪ್ಪನಿಗೆ ಡಬ್ಬಲ್ ಮಾವನ ಮನೆಗಿಂತಲೂ ಮೊದಲೇ ಅಜ್ಜನ ಮನೆ. ನನ್ನಪ್ಪ, ಚಿಕ್ಕಪ್ಪಂದಿರ ಬಾಲ್ಯ ಮತ್ತು ಇಲ್ಲಿನ ಸದಸ್ಯರ ಒಡನಾಟ ಅವಿಭಕ್ತ ಕುಟುಂಬದೊಳಗಿನದೇ ಎನ್ನುವಷ್ಟು ಆತ್ಮೀಯ. ಇದರ ವಿಸ್ತರಣೆ ಎನ್ನುವಂತೇ ನನ್ನ ಮದುವೆಯೂ ನಡೆಯಿತು. ಹುಡುಗಿ ಆರಿಸುವಲ್ಲಿ, ದಿನ ಮತ್ತು ಕಲಾಪಗಳನ್ನು ನಿಗದಿಸುವಲ್ಲಿ ಅಣ್ಣನ ಪ್ರೀತಿಯ ನಿರ್ಧಾರಗಳಿಗೆ ನನ್ನಪ್ಪ ಪ್ರತಿಯಾಡಲೇ ಇಲ್ಲ. ಸಂಪ್ರದಾಯದಂತೆ ಮದುವೆ ಹುಡುಗಿ ಮನೆಯಲ್ಲೇ (ಕೊಂದಲಕಾನ) ನಡೆದರೂ ವಧೂಗೃಹಪ್ರವೇಶ ಎಲ್ಲರ ಅನುಕೂಲಕ್ಕಾಗಿ ನಡೆದದ್ದು ಮರಿಕೆಯಲ್ಲಿ! ಆ ಲೆಕ್ಕದಲ್ಲಿ ಮರಿಕೆ ಮನೆಯ ಮುಖ್ಯಸ್ಥೆಯಾಗಿ, ಎಲ್ಲ ಸಸೂತ್ರ ನಡೆಸಿಕೊಟ್ಟ ಅತ್ತಿಗೆಯನ್ನು ಗುರುತಿಸುವಲ್ಲಿ ಇದುವರೆಗೆ ನನಗೆ ಪುರುಷಂಕಾರ (ಅಣ್ಣ ನಡೆಸಿದ್ದು) ಕಣ್ಣಪಟ್ಟಿ ಕಟ್ಟಿದ್ದಿರಬೇಕು.

ಅತ್ತಿಗೆ ಬಹು ಚಟುವಟಿಕೆಯ, ನಿರೋಗೀ ವ್ಯಕ್ತಿ. ಸುಮಾರು ದಶಕಗಳ ಹಿಂದೆ ಆಕಸ್ಮಿಕವಾಗಿ ಪಾಲದಿಂದ ತೋಡಿಗೆ ಬಿದ್ದು ಸೊಂಟ ಮುರಿದುಕೊಂಡರೂ ಆರೇ ತಿಂಗಳಲ್ಲಿ ಹಿಂದಿನ ಲವಲವಿಕೆಗೇ ಮರಳುವಷ್ಟು ಚೇತರಿಸಿಕೊಂಡರು. ಆದರೆ ಸುಮಾರು ಹದಿನೇಳು ವರ್ಷಗಳ ಹಿಂದೆ ಬಡಿದ ಪಾರ್ಶ್ವ ವಾಯು. ಮುಂದೆ ಏನೇನೋ ಅನಾರೋಗ್ಯ ಸರಣಿ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತಲೇ ಹೋದವು. ಆದರೂ ಆಕೆಯ ಮಾನಸಿಕ ಜೀವಜ್ಯೋತಿ ಸ್ಪಷ್ಟ ಕುಡಿಯಾಡಿಸುತ್ತಲೇ ಇತ್ತು. ಹಾಗೆ ಅವರು ಮಲಗಿದ್ದಂತೇ ಒಮ್ಮೆ ಭೇಟಿಯಾಗಿದ್ದಾಗ "ನಿನ್ನ ಬ್ಲಾಗು ಗೀಗು ನನಗೆ ಓದಲು ಬರುವುದಿಲ್ಲ. ಪತ್ರಿಕೆಗಳಲ್ಲಿ ಬಂದರೆ ಓದಿಕೊಳ್ಳುತ್ತಿದ್ದೆ" ಎಂದಿದ್ದರು. ನಾನು ಮುಂದೆಂದೋ ನನ್ನ ಲೇಖನದ ಒಂದೆರಡು ಮುದ್ರಿತ ಪ್ರತಿಗಳನ್ನು ಅವರಿಗೆ ಕಳಿಸಿ ಕೊಟ್ಟಿದ್ದೆ. ಅವರು ಅದನ್ನು ಶ್ರದ್ಧೆಯಿಂದ ಓದಿ, ಒಂದೆರಡು ಪುಟದ ಸುಸಂಗತ ಮೆಚ್ಚುಗೆಯ ನುಡಿಗಳನ್ನು ಬರೆದು ಕಳಿಸಿದ್ದರು. ಅದೂ ಹೇಗೆ - ಪಾರ್ಶ್ವವಾಯು ಬಲಭಾಗ ಪೀಡಿಸಿದ ಮೇಲೆ ಹಠಗಟ್ಟಿ ರೂಢಿಸಿಕೊಂಡ ಎಡಗೈ ಹಸ್ತಾಕ್ಷರದಲ್ಲಿ! (ಕ್ಷಮಿಸಿ, ಆ ಪತ್ರ ಎಲ್ಲೋ ಕಳೆದುಹೋಗಿದೆ)

ಸ್ಪಷ್ಟ ಕೆಲಸವಿಲ್ಲದೆ ಯಾರದೇ ಮನೆಗೆ ಹೋಗುವಲ್ಲಿ ನಾನೂ ಹಿಂದುಳಿದವ. ಹಾಗೇ ನಾನು ಪೂಜೆ ಪುನಸ್ಕಾರಗಳ ಸೋಂಕಿಲ್ಲದವನಾದ್ದಕ್ಕೆ (‘ಕಾಡುಮನುಷ್ಯ’) ಹತ್ತಿರದ ಬಂಧುಗಳಿಗೂ ನನ್ನ ಮನೆಗೆ ಬರುವ ನೆಪ ಹೆಚ್ಚು ಸಿಕ್ಕಿದ್ದಿಲ್ಲ. ಆದರೂ ಬಾಲ್ಯದ ನೆನಪುಗಳ ಸೆಳೆತದಲ್ಲಿ, ಹೆಚ್ಚುಕಟ್ಲೆಗಳ ಆಮಂತ್ರಣ ಮತ್ತು ಅನುಕೂಲ ಕೂಡಿ ಬಂದಾಗೆಲ್ಲ, ಮರಿಕೆಗೆ (ಮತ್ತು ಅಂಥ ಹತ್ತಿರದ ಸಂಬಂಧಿಕರಲ್ಲಿಗೂ) ಹೋಗುವುದನ್ನು ತಪ್ಪಿಸಿಕೊಂಡದ್ದಿಲ್ಲ. ಆಗೆಲ್ಲ ಗಾಲಿ ಕುರ್ಚಿಗೆ ಅಂಟಿ ಕುಳಿತ ಅತ್ತಿಗೆಯ ನಗುಮುಖ, ಕುಶಲೋಪರಿ ಸಿಕ್ಕಿಯೇ ಸಿಗುತ್ತಿತ್ತು. ಅಂಥ ಒಂದೆರಡು ಸಂದರ್ಭಗಳಲ್ಲಿ, ಅವರನ್ನು ಮನೆಯೊಳಗಿನಿಂದ ಚಪ್ಪರದೊಳಕ್ಕೋ ಮಾಳಿಗೆಗೋ (ಎತ್ತಿಕೊಂಡು) ಸಾಗಿಸುವ ಕೆಲಸ ನನಗೊದಗಿದ್ದಿತ್ತು. (ಇದನ್ನು ನಿತ್ಯದಲ್ಲಿ ಮಾಡುತ್ತಿದ್ದ ಅವರ ಮಗ ಸದಾಶಿವ ಅಥವಾ ಮೊಮ್ಮಗ ಸುಹಾಸನ ಅನುಪಸ್ಥಿತಿಯಲ್ಲಿ.) ಆದರೆ ಅದನ್ನು ಮಹಾಕಾರ್ಯವೆನ್ನುವಂತೆ ಅತ್ತಿಗೆ ನೆನಪಲ್ಲಿಟ್ಟು, ಇನ್ನೆಲ್ಲೋ ಸ್ಮರಿಸಿದ್ದು ಕೇಳಿದಾಗ ಆಶ್ಚರ್ಯವೂ ನಾಚಿಕೆಯೂ ಆಗಿತ್ತು.

ಈಚೆಗೆ ಅತ್ತಿಗೆಯ ದೇಹಸ್ಥಿತಿ ತೀವ್ರ ಕುಸಿತದ ದಾರಿಯಲ್ಲಿದ್ದ ಸುದ್ದಿ ನನಗೆ ಸಿಕ್ಕುತ್ತಲೇ ಇತ್ತು. ಹಾಗೆ ಸಂಕಟದಲ್ಲಿರುವವರನ್ನು ಕಾಣಹೋಗುವ ಔಪಚಾರಿಕತೆ (ಅದರಲ್ಲೂ ಆಸ್ಪತ್ರೆಯಲ್ಲಿ), ನಾವು ಅವರಿಗೂ ಅದಕ್ಕೂ ಮಿಗಿಲಾಗಿ ಜತೆಯಲ್ಲಿರುವವರಿಗೆ ಕೊಡುವ ಹಿಂಸೆಯೆಂದೇ ಭಾವಿಸುವವ ನಾನು, ಸುಮ್ಮನಿದ್ದೆ. ಆದರೆ ಒಂದೆರಡು ವಾರಗಳ ಹಿಂದೆ, ಚಿಕ್ಕಮ್ಮ ಸೀತೆ, "ಅತ್ತಿಗೆ ಬಹಳ ಕಂಗಾಲು. ಒಮ್ಮೆ ಹೋಗಿ ನೋಡಿ ಬಾ ಮಾರಾಯಾ, ಕುಶಿಪಡುತ್ತಾಳೆ..." ಎಂದಾಗ ದೇವಕಿ ಸಮೇತ ಸಂಕೋಚದಲ್ಲೇ ಹೋಗಿದ್ದೆ. ಕೋಣೆಗೆ ದೇವಕಿ ಮೊದಲು ಹೋದಾಗ, ಮೂಳೆ ಚಕ್ಕಳದ ಮೊತ್ತದಂತಿದ್ದ ಅತ್ತಿಗೆ ದುರ್ಬಲ ರೆಪ್ಪೆ ಅರಳಿಸಿ "ಏನು ದೇವಕಿ..." ಎಂದರೂ ದೃಷ್ಟಿ ನನ್ನನ್ನು ಹುಡುಕುತ್ತಿತ್ತಂತೆ. ನಾನು ಹೋದಾಗ ಕ್ಷೀಣಧ್ವನಿಯಲ್ಲೇ ಹೆಸರು ಹಿಡಿದು, ಔಪಚಾರಿಕ ಮಾತುಗಳನ್ನಾಡಿದರು. ಕೊನೆಯಲ್ಲಿ ಸಾಂಪ್ರದಾಯಿಕ ಕ್ರಮಗಳಲ್ಲಿ ಪಳಗಿದ ದೇವಕಿಯೇನೋ ಸಹಜವಾಗಿ ಅತ್ತಿಗೆಯ ಕಾಲುಮುಟ್ಟಿ ನಮಸ್ಕರಿಸಿ "ಬರ್ತೇವೆ" ಎಂದಿದ್ದಳು. ಔಪಚಾರಿಕತೆಗಳಲ್ಲೆಲ್ಲ ಕಳ್ಳಬೀಳುವ ನಾನು, ಸುಮ್ಮನೇ ತಲೆಯಾಡಿಸಿ, ಬಾಯುಪಚಾರದಲ್ಲೇ ಜಾರುವವನಿದ್ದೆ. ಅತ್ತಿಗೆ ಹತ್ತಿರ ಕರೆದು, "ತಲೆ ಬಗ್ಗಿಸು" ಎಂದರು. ನಾನು ಆಶ್ಚರ್ಯದಲ್ಲಿ ಹಾಗೆ ಮಾಡಿದಾಗ, ಸಣ್ಣ ತುಂಟನಗೆ ಬೀರಿ ತಲೆಯ ಮೇಲೆ ಅವರ ಕೈಯಿಟ್ಟು ಬೀಳ್ಕೊಂಡರು. ನಾವು ಹೋದ ಮೇಲೆ ಮಗಳು - ನಳಿನಿಯಲ್ಲಿ, ಹೇಳಿದರಂತೆ "ಅಶೋಕನಿಗೆ ಮೊದಲಿನಿಂದಲೂ ತೋರಿಸಲಾಗದ ಪ್ರೀತಿ ಹೆಚ್ಚು. ಅದಕ್ಕೆ ನೆಟ್ಟಗೆ ನಿಂತ ಅವನನ್ನು ಬಗ್ಗಿಸಿ, ಆಶೀರ್ವಾದ ಮಾಡಿದೆ!" ನನ್ನನ್ನು ನೋಡುತ್ತ, ಎಷ್ಟೋ ಸಂದರ್ಭಗಳಲ್ಲಿ ಅನುಸರಿಸುತ್ತಲೂ ಬೆಳೆದ ಬಹುಮಂದಿ ಸಂಬಂಧಿಗಳಿಗೆ, ‘ವಿದ್ಯಾವಂತರಿಗೆ’ ಮೂಡದ ಈ ಮನೋಸಂಸ್ಕಾರ ತುಂಬಾ ದೊಡ್ಡದು.

ಶನಿವಾರ (೧೩-೧೧-೨೧) ನಾವೈದು ಜನ ಅಶೋಕವನದ ದಾರಿಯಲ್ಲಿದ್ದಾಗ ಸುದ್ದಿ ಬಂತು "ಅತ್ತಿಗೆ ಹೋದರು."

13 comments:

  1. Very moving account. from one close to Ademane Palethadka family..

    ReplyDelete
  2. ಬಾರಿ ಒಳ್ಳೇದು ಬರೆದಿದ್ದೀಯ. ಇಡೀ ಓಡಿದೆ, ನನ್ನ ನಿನ್ನ ಬದುಕು parallel line ಆದ್ದರಿಂದ ನೀನು ಬರೆದದ್ದು ಅಷ್ಟು ಓದಿಸಿಕೊಂಡು ಹೋಗುತ್ತದೆ. ಒಂದು ದಿನ ಎನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಇದನ್ನೆಲ್ಲ ಓದಿ ಹೇಳ ಬೇಕು .... ಆ ಮದ್ಯದ ಪಟ ಬೇಸ್ಟು. ಅಪ್ಪ, ಅಣ್ಣ ಮಾವ ಎಲ್ಲರೂ ನೆಗೆಮಾಡಿದ್ದಾರೆ!! ಖುಶೀ ಆಯಿತು ಭಾವ

    ReplyDelete
  3. ಮನಸಿಗೆ ತಟ್ಟಿತು. ನನ್ನ ಅಮ್ಮ ಚಿಕ್ಕಮ್ಮ ದೊಡ್ದಮ್ಮಂದಿರ ರಮಕಿರಿಯಬ್ಬೆಯನ್ನು ನನ್ನ ಅಜ್ಜನಮನೆಯಲ್ಲಿ ಸುಮಾರು ಸಲ ನೋಡಿದ್ದೆ. ajakkala girisha

    ReplyDelete
  4. ಕೊನೆಯ ಸಾಲನ್ನು ನೀವು ನಿಮ್ಮೊಳಗೆಯೇ ಇರಿಸಿಕೊಳ್ಳಬೇಕಾಗಿತ್ತು ಸಾರ್.

    ReplyDelete
  5. ಲೇಖನದ ತುಂಬೆಲ್ಲಾ ತೋರಿಸಲಾಗದ ಆದರೂ ಎದ್ದು ಕಾಣುವ ಪ್ರೀತಿ.ಪ್ರೀತಿಯ ಅನುಭೂತಿ.
    ಓಲವಿನಲ್ಲೇ ಬಾಳಿ ಬದುಕು ಬಲ ಗೊಳಿಸಿದ ಹಿರಿ ಜೀವ

    ReplyDelete
  6. ಅಷ್ಟಭುಜೆ- ಒಪ್ಪುವ ಅನ್ವರ್ಥನಾಮ. ನಮನಗಳು.

    ReplyDelete
  7. Gurumurthy Jogibyil in FB
    ಹಿರಿಯರಿಗೆ ಗೌರವ ಸೂಚಿಸುವ ಸಾಂಪ್ರದಾಯಿಕ ವಿಧಾನಗಳ ಇರಿಸು ಮುರಿಸು ನನ್ನವೂ ಆಗಿದ್ದರಿಂದ ಬರಹ ಆಪ್ತವೆನಿಸಿತು.

    ReplyDelete
  8. Muralidhar N Prabhu in FB
    ಎಲ್ಲೋ ಕಳೆದುಹೋದೆ. ನಿಮ್ಮ ಬರಹಗಳು ಓದಿ ಮುಗಿಸಿದಮೇಲೂ ಬಹುಕಾಲ ಕಾಡುತ್ತವೆ. ಆತ್ಮೀಯವಾದ ಬರಹ

    ReplyDelete
  9. Nalini Mailankodi in FB
    "ಸೋದರಳಿಯಂದಿರ ಮೇಲೆ ಅಪ್ಪನಿಗೆ ಪ್ರೀತಿ" ಅನ್ನುತ್ತಿದ್ದ ಅಮ್ಮನಿಗೂ ಅದೇ ಪ್ರೀತಿ ಇತ್ತು.
    ಈ ನಮನ ಓದಿದರೆ ಅವಳು "ಅಶೋಕನಿಗೆ ನನ್ನ ಕುರಿತು ಯಾವಾಗಲೂ ಅಭಿಮಾನ" ಅನ್ನುತ್ತಿದ್ದಳು

    ReplyDelete
  10. Laxminarayana Bhat P in FB
    ಬಾಳಪಯಣದಲಿ ಮಾಗಿದ ಜೀವ ಪಡಕೊಂಡ ಪಕ್ವತೆ ದೊಡ್ಡದು. ಸಂಸ್ಕಾರ ಎನ್ನುವುದು ಇದನ್ನೇ ಅಲ್ಲವೇ! ನಮ್ಮ ಮೂಗಿನ ನೇರಕ್ಕೇ ಚಿಂತನೆ ಮಾಡುವ ನಾವು ಇಂಥಾ ಹಿರಿಯರಿಂದ ಕಲಿತುಕೊಳ್ಳುವುದು ಬಹಳಷ್ಟಿದೆ

    ReplyDelete
  11. Ranjan Sham Mailankody in FB
    ಅಜ್ಜನ ಕರ್ತವ್ಯಗಳಲ್ಲಿ ಅಜ್ಜಿಯ ಪಾತ್ರವನ್ನು ನೀವು ಕಂಡಂತೆ ಬರೆದದ್ದು ಬಹಳ ಚೆನ್ನಾಗಿದೆ. ಆಧುನಿಕ ಸುಖ ಸೌಲಬ್ಯಗಳಲ್ಲಿ ಬೆಳೆದೆ ನನಗೆ, ಇದು ಹೊಸ ಮಾಹಿತಿ. ಅಮ್ಮನಿಗೆ ಹುಷಾರಿಲ್ಲದೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅಜ್ಜಿಯೊಡನೆ ನಾನೂ ಚೈತ್ರಾ ಮಂಗಳೂರಿನಿಂದ ಬೆಳಗಾವಿಯ ನಮ್ಮೆ ಮನೆಗೆ ಹೋದೆವು. 10 ದಿವಸ ನಮ್ಮಿಬ್ಬರ ಜವಾಬ್ದಾರಿ ಅಜ್ಜಿಯದ್ದು. ಆ ದಿನಗಳ ನೆನಪು ಮೊನ್ನೆಯಿಂದ ಕಾಡುತ್ತಿದೆ.

    ReplyDelete
  12. Radhakrishna in FB
    ಅಮ್ಮನಂತಿದ್ದ ನನ್ನ ದೊಡ್ಡಮ್ಮ ಕಳೆದ ಶನಿವಾರ (13.11.21) ಬೆಳಗ್ಗೆ ತೀರಿಕೊಂಡ ಸುದ್ದಿ ಬರುವಾಗ ನಾನು ಎಂದಿನಂತೆ ಕಾಲೇಜಿಗೆ ಹೊರಡುವ ಗಡಿಬಿಡಿಯಲ್ಲಿದ್ದೆ. ಧಾವಿಸಿದೆ - ತರವಾಡು ಮರಿಕೆ ಮನೆಗೆ. ಪುಟ್ಟ ಹಕ್ಕಿಯ ತೆರದಿ ದೊಡ್ಡಮ್ಮ ನಿಶ್ಚಲವಾಗಿ ಮಲಗಿದ್ದಳು - ಸುಧೀರ್ಘ ದೈಹಿಕ ನೋವಿನಿಂದ ಶಾಶ್ವತವಾಗಿ ಮುಕ್ತಿ ಪಡೆದ ನಗು ಇದ್ದಂತಿತ್ತು - ಮಗುವಿನಂಥ ಮುಖದಲ್ಲಿ. ಮೆಲ್ಲಗೆ ತಲೆ ಸವರಿ ಕಾಲೇಜಿಗೆ ಹೋಗುವಾಗ ದೊಡ್ಡಮ್ಮನ ನೆನಪಿನ ಮೆರವಣಿಗೆ.
    ಮರಿಕೆಯ ಮೂಲ ಮನೆ - ಬಾಲ್ಯದಲ್ಲಿ ನನ್ನ ನೆಲೆಯೇ ಆಗಿತ್ತು. ನನ್ನದೇ ಪ್ರಾಯದ ನಳಿನಿ, ವರ್ಷಕ್ಕೆ ಹಿರಿಯನಾದ ಸದಾಶಿವ (ಸದ್ದಪ್ಪ), ಮತ್ತೆರಡು ವರ್ಷ ಹಿರಿಯಳಾದ ಶಾರದಕ್ಕ, ಮತ್ತೆರಡು ವರ್ಷಕ್ಕೆ ಹಿರಿಯ ಚಂದ್ರಣ್ಣ (ಚಂದ್ರಶೇಖರ), ಎಲ್ಲರೂ ಹಿರೋ ಎಂದು ಗುರುತಿಸುವಂತಿದ್ದ ಸುಬ್ಬಯ್ಯಣ್ಣ.. ಕೇಳಬೇಕೇ.. ತೆಳ್ಳಗೆ, ಪಿಚಲಾಗಿದ್ದ ನಾನು ಜಾರುತ್ತಿದ್ದ ಚಡ್ಡಿಯನ್ನು ಎಳೆದುಕೊಂಡು ಓಡುತ್ತಿದ್ದೆ ಮರಿಕೆಗೆ - ಬೆಳಗ್ಗೆ ಸಂಜೆ ಎಂದಿಲ್ಲ. ನಮ್ಮೆಲ್ಲರ ಆಟ, ಗಲಾಟೆಗಳನ್ನು ಸುಧಾರಿಸಿ ಹೊತ್ತು ಹೊತ್ತಿಗೆ ಬೆಲ್ಲದ ನೀರು, ತಿಂಡಿ, ಪುಷ್ಕಳ ಊಟ ಕೊಟ್ಟು ಮಮತೆಯ ಧಾರೆ ಎರೆದವಳು ಮರಿಕೆಯ ದೊಡ್ಮನೆಯ ಈ ದೊಡ್ಡಮ್ಮ.
    ಚೌತಿ, ಅನಂತನ ಚತುರ್ದಶಿ, ನವರಾತ್ರೆ ಪೂಜೆ, ಸಾಲು ಸಾಲಾಗಿ ಮದುವೆ, ಉಪನಯನದ ಗೌಜಿ, ಗದ್ದಲ. ಎಲ್ಲರಿಗೂ ಖುಷಿ, ಸಂಭ್ರಮ. ಈ ಎಲ್ಲ ಸಂಭ್ರಮದ ಹಿಂದೆ ತಣ್ಣಗೆ ಇದ್ದವರು ದೊಡ್ಡಮ್ಮ. ಅದೆಷ್ಟು ಜವಾಬ್ದಾರಿ ನಿಭಾಯಿಸಿರಬಹುದು ದೊಡ್ಡ ಮನೆಯ ಲಕ್ಷ್ಮಿಯಾಗಿ.
    ನನಗೆ ಇನ್ನೂ ನೆನಪಿದೆ. ಐದಾರು ವರ್ಷದ ಪೀಚಲು ಹುಡುಗನಾದ ನನ್ನ ಮೈ ಮೇಲೆ ಅಲ್ಲಲ್ಲಿ ದೊಡ್ಡ ಹುಣ್ಣು. ಅದರಲ್ಲಿ ತುಂಬಿ ಸುರಿಯಲು ಹೊರಟ ಹಳದಿ ಬಣ್ಣದ ಕೀವು. ಸೂಜಿಯಿಂದ ನೋವಾಗದಂತೆ ಚುಚ್ಚಿ ಕೀವು ತೆಗೆದು ಕೀವಿಗಿಂತ ಹೆಚ್ಚು ಘಾಟು ಇರುವ ಮುಲಾಮು ದೊಡ್ಡಮ್ಮ ಹಚ್ಚುತ್ತಿದ್ದರೆ ನೋವೆಲ್ಲ ಮಾಯ. ಅಷ್ಟು ಪ್ರೀತಿ, ಮಮತೆ.
    ಸುಮಾರು ಮೂವತ್ತು ವರ್ಷಗಳ ಹಿಂದೆ. ನಮ್ಮ ಮನೆಯಿಂದ ಮರಿಕೆಗೆ ತೋಟದ ಮೂಲಕ ಹೋಗಬೇಕಾದರೆ ಮನೆ ಸಮೀಪದ ತೋಡಿಗೆ ಅಡ್ಡವಾಗಿ ಹಾಕಿದ ಅಡಿಕೆ ಮರದ ಪಾಲವನ್ನು ದಾಟಿ ಹೋಗಬೇಕಿತ್ತು. ಹಿಂದಿನ ರಾತ್ರೆ ಸುಬ್ರಹ್ಮಣ್ಯದಲ್ಲಿ ಜೇಸುದಾಸರ ಸಂಗೀತ ಕಾರ್ಯಕ್ರಮ ಮುಗಿಸಿ ಬೆಳಗ್ಗಿನ ಹೊತ್ತು ಚಂದ್ರಣ್ಣನೊಂದಿಗೆ ಬಂದಿಳಿದರು ದೊಡ್ಡಮ್ಮ. ಸಂಗೀತ ಸುಧೆಯ ಖುಷಿ ಹಂಚಿಕೊಂಡು ಹೊರಟ ದೊಡ್ಡಮ್ಮನ ಕಾಲು ಪಾಲದಲ್ಲಿ ಜಾರಿತು - ಸುಮಾರು ಹದಿನೈದು ಅಡಿ ಎತ್ತರದಿಂದ ಬಿದ್ದರು ತೋಡಿಗೆ. ರಾತ್ರೆ ಸುರಿದ ಮಳೆ ಆ ಹೊತ್ತಿಗೆ ಬಿರಿದ ಕಾರಣದಿಂದ ಹೆಚ್ಚು ನೀರು ಇರಲಿಲ್ಲ ಅದೃಷ್ಟವಶಾತ್. ಧಾವಿಸಿ, ತೋಡಿಗಿಳಿದ ನಾನು ಮತ್ತು ಚಂದ್ರಣ್ಣ ದೊಡ್ಡಮ್ಮನನ್ನು ಮೆಲ್ಲಗೆ ಮೇಲೆ ತಂದೆವು. ಪಕ್ಕೆಲುಬುಗಳು ಮುರಿದ ದೊಡ್ಡಮ್ಮ, ದೊಡ್ಡಪ್ಪನ ಕಾಳಜಿಯ ಆರೈಕೆಯಲ್ಲಿ ಸಂಪೂರ್ಣ ಚೇತರಿಸಿಕೊಳ್ಳಲು ವರ್ಷಗಳೇ ಬೇಕಾದವು.
    ಈ ಆಘಾತಾವೇ ಕಾರಣವೋ ತಿಳಿಯದು ಮತ್ತೆ ಕೆಲವು ವರ್ಷಗಳ ಬಳಿಕ ಪಾರ್ಶ್ವವಾಯುವಿಗೆ ತುತ್ತಾಗಿ
    ದೊಡ್ಡಮ್ಮನ ಕ್ರಿಯಾಶೀಲತೆ ಕುಂಠಿತವಾಯಿತು. ವರ್ಷದಿಂದ ವರ್ಷಕ್ಕೆ ಕೃಶವಾದರು. ಗಾಲಿ ಕುರ್ಚಿ ನಿತ್ಯ ಸಂಗಾತಿಯಾಯಿತು. ಆದರೂ ದೊಡ್ಡಮ್ಮನಲ್ಲಿ ಸಂಭಾಷಣೆಯ ಉತ್ಸಾಹವಿತ್ತು. ಮಂಚದ ಬಳಿಯಲ್ಲಿಯೇ ಪುಸ್ತಕ, ಪತ್ರಿಕೆಗಳು. ನಿರಂತರ ಓದುತ್ತಿದ್ದಳು. ವಿಷಯ ಹಿಡಿದು ಮಾತನಾಡುತ್ತಿದ್ದಳು - ಮೆಲು ದನಿಯಲ್ಲಿ. ಗೌತಮ ಅಮೆರಿಕಕ್ಕೆ ತೆರಳುವ ಸುದ್ದಿ ಕೇಳಿದಾಗ ಕಸಿವಿಸಿಗೊಂಡ ದೊಡ್ಡಮ್ಮ ಹೇಳಿದ್ದು " ಯಾಕೆ ಹೋಗಬೇಕು, ಇಲ್ಲಿಯೇ ಕಲಿಯಬಹುದಲ್ಲ" ಮತ್ತೆ ನುಡಿದಳು " ಅದೂ ಸರಿಯೇ. ಅವರವರ ಭವಿಷ್ಯ ಅವರವರೇ ನೋಡಬೇಕು"
    ಇತ್ತೀಚೆಗೆ - ನಾಲೈದು ವರ್ಷಗಳಿಂದ ದೊಡ್ಡಮ್ಮನ ದೈಹಿಕ ತ್ರಾಣ ಇನ್ನಷ್ಟು ಬಿಗಡಾಯಿಸಿತು; ಕುಸಿಯುತ್ತ ಹೋಯಿತು. ನಿತ್ಯ ಕಿಂಚಿತ್ತೂ ಊನವಾಗದಂತೆ ಜೋಪಾನವಾದ ಆರೈಕೆಯಿಂದ ದೊಡ್ಡಮ್ಮ ಇದ್ದರು ನಮ್ಮೆಲ್ಲರ ಜತೆಯಲ್ಲಿ ಇಷ್ಟು ದಿನ. ಮರಿಕೆ ಮನೆಯಲ್ಲಿ ದೊಡ್ಡಮ್ಮ ಇದ್ದ ಆ ಕೋಣೆಯೇ ದೇವರ ಮನೆಯಂತಿತ್ತು ನಮ್ಮ ಪಾಲಿಗೆ. ದೊಡ್ಡಮ್ಮನೊಂದಿಗೆ ತುಸು ಮಾತನಾಡಿ ಅಥವಾ ಮೌನದಲ್ಲಿಯೇ ಸಂಭಾಷಿಸಿ, ಅವಳ ಕೃಶವಾದ ಬೆರಳುಗಳನ್ನು ಒಂದಷ್ಟು ಹೊತ್ತು ಒತ್ತಿ, ಹಣೆ ನೇವರಿಸಿ ಬಂದಾಗ ಅದೇನೋ ಸಮಾಧಾನ.
    ಎಲ್ಲರನ್ನು ಬಿಟ್ಟು ಮುಕ್ತಿ ಪಡೆದ ದೊಡ್ಡಮ್ಮನ ಕುರಿತು ಅಶೋಕ ಬಾವನದು (ಅಶೋಕ ವರ್ಧನ) ಭಾವಸ್ಪರ್ಶಿ ನಮನ. ಅಮ್ಮನಂತಿದ್ದ ದೊಡ್ಡಮ್ಮ ಇನ್ನು ಬರಿದೇ ನೆನಪು.

    ReplyDelete