(ಪ್ರಾಕೃತಿಕ ಭಾರತ ಸೀಳೋಟ - ೧೧)
ಗೂಗಲ್ ಕೃಪೆ |
ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು.
ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು - ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) - ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) - ಕುಶಲ ಕರ್ಮಿ, ಮತ್ತು ಕಾವೂರು ಪ್ರಸನ್ನ - ಉದ್ಯಮಿ, ಮಂಗಳೂರಿನಲ್ಲಿ ರೈಲೇರಿದ್ದರು! ಆ ಕಾಲದಲ್ಲಿ ಕೊಂಕಣ ರೈಲ್ವೇ ಇರಲಿಲ್ಲ. ಇವರು ಗಾದೆಯ ‘ಕೊಂಕಣ (ಅರಕ್ಕೋಣಂಗಾಗಿ) ಸುತ್ತಿ ಮೈಲಾರಕ್ಕೆ (ದಿಲ್ಲಿಗೆ)’ ಬರುವಾಗ ೧೪-೫-೯೦ರ ರಾತ್ರಿ. ಪೂರ್ವ ಲೆಕ್ಕಾಚಾರದಂತೆ ಅವರಲ್ಲಿಬ್ಬರ ದಿಲ್ಲಿ ಗೆಳೆಯರು, ಮರು ಬೆಳಗ್ಗೆಯೇ (೧೫-೫-೯೦) ಇವರಿಗೆ ತಮ್ಮ ಬೈಕ್ ಒಪ್ಪಿಸಿದರು. ನನ್ನ ದಿನಚರಿಯ ನಕ್ಷೆಯ ಯಥಾ ಪ್ರತಿ ತ್ರಿಮೂರ್ತಿಗಳಲ್ಲಿತ್ತು. ಅದರ ಬಲದಲ್ಲಿ ನಮ್ಮನ್ನು ನೇರ ಗಂಗೋತ್ರಿಯಲ್ಲಿ ಹಿಡಿಯುವ ಉಮೇದಿನಲ್ಲಿ, ಹನ್ನೊಂದು ಗಂಟೆಗೆ ದಿಲ್ಲಿ ಬಿಟ್ಟರು. ಮೋಹನ್ ಒಂಟಿ, ಪ್ರಸನ್ನನ ಬೆಂಬಲಕ್ಕೆ ರೆಡ್ಡಿ.
ತ್ರಿಮೂರ್ತಿಗಳು ಮುಜಾಫರ್ ನಗರ್, ರೂರ್ಕಿಗಳನ್ನು ಹಾಯ್ದು ಕತ್ತಲೆಗೆ ಋಷಿಕೇಶ ತಲಪಿಕೊಂಡರು. ಅಲ್ಲಿನ ಕೆಲವು ಆಶ್ರಮಗಳಲ್ಲಿ "ಇಸ್ತ್ರೀ ನೈತೋ ಕಮ್ರಾ ನೈ" ಎಂದು ತಿರಸ್ಕೃತರಾದರಂತೆ. ಅಂದರೆ ಅವರು ಸರಳವಾಗಿ, "ತಿರುಗಾಡಿ ಯುವಕರಿಗಿಲ್ಲ, ದಂಪತಿಗಳಿಗಾದರೆ ಆಶ್ರಯ" ಎಂದಿದ್ದರು. ಇವರು ಅಂತೂ ಎಲ್ಲೋ ದಮ್ಮಯ್ಯಗುಡ್ಡೆ ಹಾಕಿ ಛತ್ರದಲ್ಲಿ ಬಿದ್ದುಕೊಂಡರಂತೆ. (ದಿನದ ಓಟ ಅಂದಾಜು ೨೪೩ ಕಿಮೀ.) ಮರು ಬೆಳಿಗ್ಗೆ (೧೬-೫-೯೦) ಊರಿನ ಹರ್-ಕಿ-ಪೌರಿ, ಶಿವಾನಂದ ಮತ್ತು ಲಕ್ಷ್ಮಣ ಝೂಲಾಗಳನ್ನೆಲ್ಲ ನೋಡಿ, ಮತ್ತೆ ಯಾಕ್ಸಿಲರೇಟರ್ ತಿರುಪಿದ್ದಾರೆ.
ಎರಡೂ ಬೈಕುಗಳು ಹಳೆಯವು, ಸಾಮರ್ಥ್ಯ ಮತ್ತು ದೌರ್ಬಲ್ಯ ಇವರಿಗೆ ಅಪರಿಚಿತದವು ಕೂಡಾ. ಎಲ್ಲೋ ಒಮ್ಮೆ ಪಂಚೇರ್ ಕಾಡಿರಬೇಕು, ತತ್ಕಾಲೀನ ಅಂಟು ತೇಪೆ, ಪಂಪು ಇದ್ದು ಬಳಸಿದರೂ ಸಮಯ ಸೋರುತ್ತಲೇ ಇತ್ತು. ಕೊನೆಗೆ ಮಳೆ ಸಿಕ್ಕಿ, ಕತ್ತಲು ಪೇರಿ, ಚಳಿಗೆ ಪ್ರಸನ್ನನ ಬೆರಳುಗಳು ಸೆಟಗೊಂಡು, ಉತ್ತರಕಾಶಿಯಲ್ಲೇ ನಿಲ್ಲಬೇಕಾಯ್ತು. ಒಳ್ಳೆ ಹೋಟೆಲ್ ಸಿಕ್ಕಿ, ತಂಗಿ, ಪುನಶ್ಚೇತನರಾದರು. (ದಿನದ ಓಟ ೧೭೦ ಕಿಮೀ.) ೧೭ರಂದು "ಇಂದು ಹಿಡಿದೇ ಸಿದ್ಧ" ಎಂಬ ಉದಯ ಘೋಷದೊಡನೆ ಹೊರಟವರಿಗೆ ನಡು ದಾರಿಯಲ್ಲಿ, ಮಟಮಟ ಮಧ್ಯಾಹ್ನ ನಾವು ಎದುರು ಸಿಕ್ಕಾಗ ಆನಂದವೋ ಆನಂದ.
ನಮ್ಮ ಗಂಗೋತ್ರಿ, ಗೋಮುಖದ ಲೆಕ್ಕಕ್ಕೆ ತ್ರಿಮೂರ್ತಿಗಳು ಎರಡು ದಿನ ಹಿಂದಿದ್ದರು. ಅಷ್ಟು ದೂರ ಬಂದು ಅವನ್ನು ನೋಡದೇ ಅವರು ಮರಳುವುದೂ ನ್ಯಾಯವಲ್ಲ. ಹಾಗಾಗಿ "ಅವನ್ನು ಸುಧಾರಿಸಿಕೊಂಡು ಬನ್ನಿ, ನಾವು ಟೆಹ್ರಿ ನೋಡಿ ಮುಂದುವರಿಯುತ್ತೇವೆ. ಕೇದಾರನಾಥಕ್ಕೆ ಒಟ್ಟಿಗೆ ಏರೋಣ" ಎಂದೇ ಬೀಳ್ಕೊಂಡೆವು. ನಮ್ಮ ದಾರಿಯಲ್ಲಿ ಸ್ವಲ್ಪ ಮುಂದುವರಿಯುವುದರೊಳಗೆ, ಮತ್ತೊಂದು ಪಂಚೇರ್. ವಾಸ್ತವದಲ್ಲಿ ಈ ಸರಣಿ ಸಂಕಟಗಳೆಲ್ಲ ನಮ್ಮ ಬಳಲಿದ ಬೈಕೂ ದಾರಿಯ ದುಸ್ಥಿತಿಗೂ ಹಿಡಿದ ಕನ್ನಡಿ ಮಾತ್ರ.
ಹಿಂದಿನ ಕಂತಿನಲ್ಲಿ ಹೇಳಿದ ನನ್ನ ವೈಯಕ್-ತಿಕ ನೋವನ್ನು (ನೋಡಿ: ಪರಮಾನಂದ ದಾರಿ ) ತಪ್ಪಿಸಲು, ನಾನು ಮೊದಮೊದಲು ಕೂರುವ ಭಂಗಿಯಲ್ಲಿ ಮಗ್ಗುಲನ್ನು ಬದಲಿಸಿಕೊಳ್ಳುತ್ತ, ಸೀಟಿನ ಸಂಪರ್ಕ ಕೇವಲ ತೊಡೆಗಿರುವಂತೆ ಸುಧಾರಿಸಿಕೊಂಡು ಬೈಕ್ ಚಲಾಯಿಸಿದ್ದೆ. ಸ್ವಲ್ಪೇ ಸಮಯದಲ್ಲಿ ದೇವಕಿಗೆ ಹೊಸದೇ ಹೊಳಹು ಮೂಡಿತು. ಚೀಲದಿಂದ ತನ್ನ ಎರಡು ಶಾಲುಗಳನ್ನು ದಪ್ಪ ರೋಲರಿನಂತೆ ಮಾಡಿ, ಹಿಂದೊಂದು ಮುಂದೊಂದು ಇಟ್ಟು ಕೊಟ್ಟಳು. ಮತ್ತೆ ಸಣ್ಣ ಪುಟ್ಟ ಸಿಡಿತವಿದ್ದರೂ ನಗಣ್ಯ ಮಾಡಿ ಎಲ್ಲರೊಳಗೊಂದಾದೆ ಮಂಕುತಿಮ್ಮ!
ಒಂದು ಗಂಟೆಯ ಸುಮಾರಿಗೆ ಆಕಾಶದಲ್ಲಿದ್ದ ಬೆಳ್ಳಿ ತಳಿಗೆ ಕವುಚಿಕೊಂಡಿತು. ಸೂರ್ಯ ಮರೆಯಾಗಿ (ತಳಿಗೆಯೊಳಗಿದ್ದ ನೀರಿನಂತೆ) ಭೋರೆಂದು ಮಳೆ ಬಿತ್ತು. ಹೇಗೋ ಬಚಾವಾದೆವು. ಹಾಗೆ ನಿಂತಲ್ಲಿ ಸಿಕ್ಕ ಹೋಟೆಲಿನಲ್ಲಿ ಊಟದ ಶಾಸ್ತ್ರವನ್ನು ಮುಗಿಸಿಕೊಂಡದ್ದಷ್ಟೇ ಲಾಭ. ಇಲ್ಲಿ ಸುಮಾರು ಎರಡೂವರೆ ಗಂಟೆಗಳೇ ಸೋರಿ ಹೋಗಿತ್ತು. ಮುಂದೆ ಸಿಕ್ಕ ಉತ್ತರಕಾಶಿಯಲ್ಲಿ, ತೂತು ಬಿದ್ದ ಟ್ಯೂಬುಗಳ ರಿಪೇರಿ ಮತ್ತು ಹೊಸದೇ ಟ್ಯೂಬ್ ಖರೀದಿಸುವ ಅನಿವಾರ್ಯತೆಯೂ ನಮ್ಮ ಸಮಯದ ಒತ್ತಡವನ್ನು ಹೆಚ್ಚಿಸುವುದೇ ಆಗಿತ್ತು. "ಕೊನೆಗೂ ನಿರುಮ್ಮಳವಾಗಿ..." ಎಂದು ದಿನಾಂತ್ಯವಾಗದಂತೆ, ಶಕುನ ಶುನಕಗಳಾದರೆ (ನಾವಲ್ಲ) ಏಳರ ಮನೆ ಶನಿಕಾಟ ಎನ್ನುವಂತೆ, ಭಾರೀ ಸುಂಟರಗಾಳಿ ಕಾಣಿಸಿಕೊಂಡಿತು. ಅದರ ದೈತ್ಯ ಸುಳಿಗೆ ಹೆದರಿ, ಹತ್ತಿಪ್ಪತ್ತು ಮಿನಿಟು ಯಾವುದೋ ಮೂಲೆ ಸೇರಿಕೊಂಡಿದ್ದೆವು. ಹಾಗೂ ಧಾರಾಸು ಎಂಬ ತುಸು ದೊಡ್ಡ ಪೇಟೆ ಕಳೆದು, ದಿನದ ಲಕ್ಷ್ಯವೇ ಆಗಿದ್ದ ಟೆಹ್ರಿ ಮುಟ್ಟುವಾಗ ಸಂಜೆಯಾಗಿತ್ತು. ಹೋಟೆಲ್ ಟೂರಿಸ್ಟ್ ಹಿಡಿದು, ಹೊರೆ ಇಳಿಸಿ, ತುರ್ತಾಗಿ ಅಣೆಕಟ್ಟು ನಿರ್ಮಾಣ ವಲಯಕ್ಕೆ ಬೈಕೋಡಿಸಿದೆವು.
ಟೆಹ್ರಿಯ ಭಾರೀ ಅಣೆಕಟ್ಟಿಗೆ ದೊಡ್ಡ ಪರ್ಯಾಯ ನಾಮವಾಗಿಯೇ ವಿಶ್ವಪ್ರಸಿದ್ಧಿ ಗಳಿಸಿದ ಹೆಸರು - ಸುಂದರ ಲಾಲ್ ಬಹುಗುಣ. (ನರ್ಮದಾಕ್ಕೆ ಮೇಧಾ ಪಾಟ್ಕರ್ ಹಾಗೆ.) ಅಲ್ಲೇ ಮೇಲೆ ಎನ್ನುವಂತೆ ಗೋಮುಖದಲ್ಲಿ, ಲೋಕ ಕಲ್ಯಾಣಕ್ಕೆಂದು ಹೊರಟ ಭಾಗೀರಥಿಯನ್ನು, ತವರು ನೆಲದಲ್ಲೇ ತಡೆದು, ವಿದ್ಯುತ್ ಬಸಿದು ಬಿಟ್ಟು, ‘ಧನ್ಯ’ರಾಗುವ ಉದ್ದೇಶ ಯೋಜಕರದ್ದು. ಆದರೆ ಬಹುಗುಣರ ಬಳಗ, ಅಸ್ಥಿರ ಹಿಮಾಲಯದ ಹೃದಯ ಭಾಗವೇ ಆದ ಟೆಹ್ರಿಯ ನೆಲಕ್ಕೆ ಈ ಭಾರೀ ಹೊರೆ ವಿನಾಶಕಾರಿ ಎಂದಿತ್ತು. ನಮ್ಮ ಸಹಾನುಭೂತಿಯೇನೋ ಪರಿಸರದ ಪರವೇ ಇತ್ತು. ಆದರೆ ಪ್ರಸ್ತುತ ಯಾತ್ರೆಯಲ್ಲಿ, ನಿರ್ಮಮವಾಗಿ ಸ್ಥಳದ ವಾಸ್ತವವನ್ನು ಕೂಡಿತಾದಷ್ಟು ಗ್ರಹಿಸುವುದಕ್ಕೇ ಸೀಮಿತಗೊಳಿಸಿಕೊಂಡಿದ್ದೆವು.
ಎಲ್ಲೋ ಒಂದು ದಿಬ್ಬದ ಮೇಲೆ, ಬಹುಗುಣರ ಪ್ರತಿಭಟನಾ ಜೋಪಡಿ ಕಂಡ ನೆನಪಷ್ಟೆ ನನ್ನಲ್ಲಿದೆ. ಉಳಿದಂತೆ ಭಾರೀ ವಿಸ್ತಾರದಲ್ಲೂ ಜೋರಿನಲ್ಲೂ ನಡೆದಿದ್ದ ನಿರ್ಮಾಣ ಕಾಮಗಾರಿಯೇ ನಮ್ಮನ್ನು ಮುಖ್ಯವಾಗಿ ಆಕರ್ಷಿಸಿತ್ತು. ದೊಡ್ಡ ದೊಡ್ಡ ಕ್ರೇನುಗಳು, ಟಿಪ್ಪರುಗಳು ಕೆಲಸ ಮಾಡುವುದನ್ನು ನೋಡಿದೆವು. ಒಂದೆಡೆ ಬಹುತೇಕ ಸಮತಳದಲ್ಲಿ, ಸುಮಾರು ಒಂದೂವರೆ ಕಿಮೀ ದೂರಕ್ಕೆ ನೀರು ಹರಿಸಲು ನಾಲ್ಕು ಭಾರೀ ಸುರಂಗಗಳ (ವ್ಯಾಸ ಕಡಿಮೆ ಎಂದರೂ ಇಪ್ಪತ್ತಡಿ ಇದ್ದಿರಬಹುದು) ಕಾಮಗಾರಿ ಕಂಡೆವು. ಅಲ್ಲಿ ಮೇಲ್ವಿಚಾರಣೆ ನಡೆಸಲು ಬಂದಿದ್ದ ಹಿರಿಯ ಇಂಜಿನಿಯರೊಬ್ಬರೂ ಸಿಕ್ಕಿದ್ದರು. ಅವರು ಕರ್ನಾಟಕ ನೋಂದಣಿಯ ಬೈಕೇರಿ ಬಂದಿದ್ದ ನಮ್ಮನ್ನು ಕುತೂಹಲದಲ್ಲಿ ಮಾತಾಡಿಸಿ, ಸಾಧನೆಗೆ ಕುಶಿ ಪಟ್ಟರು. ನಾವು ಕೇಳಿದ್ದಕ್ಕೆ, ನಮ್ಮದೇ ಜವಾಬ್ದಾರಿಯಲ್ಲಿ ಮತ್ತು ಎಚ್ಚರಿಕೆಯಲ್ಲಿ, ಎಲ್ಲೆಡೆ ಬೈಕ್ ಸುತ್ತಾಡಿಸಿ ನೋಡಲು ಬಾಯ್ದೆರೆ ಅನುಮತಿಯನ್ನೂ ಕೊಟ್ಟರು. ನಾವು ಸಹಜವಾಗಿ ಮೂಲಭೂತ ಕೆಲಸಗಳೆಲ್ಲ ಮುಗಿದಿದ್ದ ಒಂದು ಸುರಂಗದೊಳಗೆ ಸುಮಾರು ಒಂದು ಕಿಮೀ ದೂರದವರೆಗೂ ಆರಾಮವಾಗಿ ಹೋಗಿ ಬಂದ ಅನುಭವ ರೋಮಾಂಚಕರ.
ಟೆಹ್ರಿ ಎಂದಲ್ಲ, ಶಿರಾಡಿಯಲ್ಲಿ ಮೊದಲ ರೈಲ್ವೇ ಹಳಿಗಳು ಬರುತ್ತಿದ್ದಾಗ, ಮಲ್ಲೇಶ್ವರದಲ್ಲಿ ಕುದುರೆಮುಖ ಗಣಿ ಕಂಪೆನಿ ಮತ್ತು ಅದಕ್ಕೆ ಮಾಳದ ಮೂಲಕ ಹೊಸದೇ ದಾರಿಯಾಗುತ್ತಿದ್ದಾಗ, ಕೊಂಕಣ ರೈಲ್ವೇ ನಿರ್ಮಾಣವಾಗುತ್ತಿದ್ದಾಗ... ನನ್ನ ಮಿತಿಯಲ್ಲಿ ಖುದ್ದು ಭೇಟಿಕೊಟ್ಟು ತಂತ್ರಜ್ಞಾನದ ಸಾಧನೆ ನಿಜಕ್ಕೂ ಅದ್ಭುತವೇ ಎಂದು ಪ್ರಾಮಾಣಿಕವಾಗಿಯೇ ಉದ್ಗರಿಸುತ್ತ ಬಂದಿದ್ದೇನೆ. ಅಂಥದ್ದೇ ಮಹಾಸಾಹಸ ಕಥನ ಎಂದೇ ಈಚೆಗೆ ಲಿಂಗನಮಕ್ಕಿ ಕಟ್ಟಿದ ಕತೆಯನ್ನು ‘ಪುನರ್ವಸು’ ಹೆಸರಿನಲ್ಲಿ, ಗಜಾನನ ಶರ್ಮರು ಬರೆದದ್ದನ್ನು ಎತ್ತಿಕೊಂಡಿದ್ದೆ. ನಿಜ ಅದರಲ್ಲಿ ನಾನು ಬಯಸಿದ ಅಂಶ ಬಹಳ
ಚೆನ್ನಾಗಿಯೇ ಇದೆ. ಆದರೆ ಅದನ್ನೂ ಮೀರಿದಂತೆ ಬೆಳೆದು ನಿಂತ ಇನ್ನೊಂದೇ ಮುಖ ನನ್ನನ್ನು ಇನ್ನಿಲ್ಲದಂತೆ, ಇಂದೂ ಆವರಿಸಿಕೊಂಡೇ ಇದೆ. ಅಂಥದ್ದೇ ಒಂದು ಅಸ್ಪಷ್ಟ ಚಿತ್ರ - ಮುಳುಗಡೆಯ ಕತೆ, ಸುಂದರಲಾಲ್ ಬಹುಗುಣರ ಆಂದೋಲನದ ಫಲವಾಗಿ ನನ್ನ ಮನಸ್ಸಿನಲ್ಲಿತ್ತು.
ಅಣೆಕಟ್ಟು ಪೂರ್ಣವಾದಾಗ ಟೆಹ್ರಿ ಪಟ್ಟಣ ೨ ಕಿಮೀ ಉದ್ದಕ್ಕೆ ಅಂದರೆ ಹೆಚ್ಚು ಕಮ್ಮಿ ಪೂರ್ತಿ ಮುಳುಗಲಿತ್ತು. ಟೆಹ್ರಿಯಲ್ಲಿ ಭೂಕಂಪಕ್ಕೋ (೨೦೧೩ರಲ್ಲಿ ಕೇದಾರದಲ್ಲಿ ಸಂಭವಿಸಿದಂತೆ) ಅನಿರೀಕ್ಷಿತ ಮಹಾಪ್ರವಾಹ ಕಾರಣಕ್ಕೋ ಅಣೆಕಟ್ಟು ಒಡೆದರೆ ಗಂಗಾ ಪಾತ್ರೆಯುದ್ದಕ್ಕೂ ನಡೆಯುವ ವಿಧ್ವಂಸ ವಿವರಿಸಲಸಾಧ್ಯ... ಇತ್ಯಾದಿ. ಹಾಗಾಗಿ ದಿನದ ಕೊನೆಯ ಬೆಳಕಲ್ಲೂ ಹಳೆ ಪೇಟೆಯ ಬೀದಿಗಳಲ್ಲೊಂದು ಸಣ್ಣ ಸುತ್ತು ಹಾಕಿ, ಕೆಲವರನ್ನು ಮಾತಾಡಿಸಿದ್ದೆವು. (ಕ್ಷಮಿಸಿ, ವಿವರಗಳನ್ನು ಮರೆತಿದ್ದೇನೆ.) ಅವರೇ ದೂರದ ಎತ್ತರದಲ್ಲಿ ಅಂದು ರೂಪುಗೊಳ್ಳುತ್ತಿದ್ದ ಹೊಸ ಟೆಹ್ರಿ ಪಟ್ಟಣ ಮತ್ತು ದಾರಿಗಳನ್ನೂ ಬೆಟ್ಟು ಮಾಡಿ ತೋರಿದ್ದರು. ಊರಿನ ಅರ್ಧಕ್ಕರ್ಧ ಜನ ಆಗಲೇ ವಲಸೆ ಹೋಗಿದ್ದರು. ಪೇಟೆ ಯುದ್ಧ ಸಂತ್ರಸ್ತವಾದಂತೆ, ನಾಗರಿಕ ಸೇವೆಗಳೆಲ್ಲ ಬಹುತೇಕ ಕೆಟ್ಟುಹೋಗಿ, ಕೊಳೆತು ಚಿಂತಾಜನಕ ಸ್ಥಿತಿಯಲ್ಲಿತ್ತು. ಹೆಚ್ಚು ನೋಡಲು ನಮಗೂ ಮನಸ್ಸಾಗದೇ ಹೋಟೆಲಿಗೆ ಮರಳಿದ್ದೆವು.
(ತಾಪ ೨೭, ತೇವ ೪೯%, ಔನ್ನತ್ಯ ೩೪೦೦, ದಿನದ ಓಟ ೧೭೪ ಕಿಮೀ)
ಬೆಳಿಗ್ಗೆ (೧೮-೫-೯೦) ಎಂದಿನಂತೇ ಆರೂವರೆಯ ಸುಮಾರಿಗೆ ದಾರಿಗಿಳಿದಿದ್ದೆವು. ಮುಂದೆ ಧನಸಾಲೀ ಎಂಬ ಊರಿನಲ್ಲಿ ವೈದ್ಯರೊಬ್ಬರಿಗೆ ನನ್ನ ಸಮಸ್ಯೆಯ ದರ್ಶನ ಮಾಡಿಸಿದ್ದೆ. ಅವರು ನಿಯತ ಪೇನ್ ಕಿಲ್ಲರ್ ಮತ್ತು ಮುಲಾಮು ಕೊಟ್ಟು, "ಕೇದಾರವನ್ನೂ ಹತ್ತಬಹುದು" ಎಂದು ಬಿಟ್ಟರು! ಮತ್ತೆ ಶಾಲಿನ ಸಿಂಬಿಗಳ ಆಸರೆಯೂ ಇದ್ದ ಮೇಲೆ ಕೇಳಬೇಕೇ - ಪಂಗುಂ ಲಂಘಯತೇ ಗಿರಿಂ!
ದಾರಿ ಕಿಮೀಗಟ್ಟಳೆ ಬಳುಕಾಡಿಸುತ್ತ ಒಂದು ಬೆಟ್ಟ ಹತ್ತಿಸುತ್ತಿತ್ತು, ಹಾಗೇ ಇನ್ನೊಂದು ಮಗ್ಗುಲನ್ನು ಕುಣಿಸ್ಯಾಡಿಸುತ್ತ ಇಳಿಸುತ್ತಿತ್ತು. ಸರಾಸರಿಯಲ್ಲಿ ೨೫ ಕಿಮೀ ದಾರಿ ಸವೆದರೆ ಹೆಚ್ಚು! ಅಗಸ್ತ್ಯಮುನಿ (ತಾ. ೩೩, ತೇವ ೩೮%, ಔನ್ನತ್ಯ ೩೦೦೦) ಎಂಬ ಹಳ್ಳಿಯಲ್ಲಿ ಇನ್ನೊಂದು ಪಂಚರ್. ನೆನಪಿರಲಿ, ಎಲ್ಲ ಪಂಚೇರುಗಳು ಒಬ್ಬರದೇ ಅಲ್ಲ, ಒಂದೇ ಚಕ್ರದ್ದೂ ಅಲ್ಲ. ಅಷ್ಟರೊಳಗೆ ನಮಗೆಲ್ಲ ಟ್ಯೂಬ್ ಬದಲಿಸುವುದು ನಿತ್ಯ ಕರ್ಮದಷ್ಟು ಸುಲಭವಾಗಿತ್ತು! ಮುಂದೆಲ್ಲೋ ಹದವಾದ ಮಳೆ ಸಿಕ್ಕಿತು. ನಾವು ಮಳೆಕೋಟೇರಿಸಿ, ಅರ್ಧಮರ್ಧ ನೆನೆದರೂ ಪ್ರಗತಿ ಕುಂಠಿತವಾಗದಂತೆ ನೋಡಿಕೊಂಡೆವು. ದೇವಕಿ ಅಮ್ಮನಿಗೆ ಬರೆದ ಪತ್ರದ ಒಂದು ಸಾಲು "ಶಿಖರ ಸಾಲಿನ ಮಧ್ಯೆ ಮಧ್ಯೆ ಮೋಡ, ಮಂಜು ಹಿಮಗಳ ಆಟ ನೋಡಲು ಬಹಳ ಚಂದ. ಇಲ್ಲಿ ಶಿವನ ಕವಿ ಕಲ್ಪನೆ ಅದ್ಭುತವಾಗಿ ಸಾಕ್ಷಾತ್ಕಾರವಾಗುತ್ತದೆ." ಬೇಗವೇ ಎಂಬಂತೆ, ಸಂಜೆ ನಾಲ್ಕು ಗಂಟೆಗೆ ಸೋನ್ ಪ್ರಯಾಗ್ ಮುಟ್ಟಿದ್ದೆವು.
ಎಡ - ಮೋಹನ್, ಬಲ - ಪ್ರಸನ್ನ |
(ತಾ. ೧೪, ತೇ. ೫೬%, ಔನ್ನತ್ಯ ೬೦೦೦. ದಿನದ ಓಟ ೧೮೫ ಕಿಮೀ)
ಬೆಳಿಗ್ಗೆ (೧೯-೫-೯೦) ನನಗೆ ಅಷ್ಟೇನೂ ಹಿತಕರವಾಗಲಿಲ್ಲ. ತಂಡಕ್ಕೆ ಹೊರೆಯಾಗಬಾರದೆಂಬ ಎಚ್ಚರದಲ್ಲಿ ಕಡೇ ಗಳಿಗೆಗೆ ಒಬ್ಬನೇ ಹಿಂದುಳಿಯುವ ನಿರ್ಧಾರ ಮಾಡಿದೆ. ದೇವಕಿಯನ್ನು ಒತ್ತಾಯಿಸಿಯೇ ನಾಲ್ವರು ಗೆಳೆಯರ ಸಂಗಡ ಕಳಿಸಿದೆ. ಅವರೆಲ್ಲ ಆರೂವರೆಯ ಸುಮಾರಿಗೆ ಬಸ್ಸೇರಿ ಹೋದರು. ರೆಡ್ಡಿ ಬಳಗ ಎಷ್ಟು ತಡವಾದೀತೋ ಎಂಬ ಸಣ್ಣ ಆತಂಕದೊಡನೆ ಸಣ್ಣ ನಿದ್ರೆ ತೆಗೆದೆ. ನನ್ನ ನಿರೀಕ್ಷೆ ಮೀರಿ, ಹತ್ತು ಗಂಟೆಯ ಹೊತ್ತಿಗೇ ತ್ರಿಮೂರ್ತಿಗಳು ಭಾರೀ ಲವಲವಿಕೆಯಲ್ಲೇ ಬಂದು ಬಿಟ್ಟರು. ಮತ್ತೆ ನೋಡಿದರೇ.... ತ್ರಿಮೂರ್ತಿ ಬಳಗ ಅರೆ-ಪುಣ್ಯಾತ್ಮರು! ನಮ್ಮಿಂದ ಬೀಳ್ಕೊಂಡವರು ಗಂಗೋತ್ರಿಯನ್ನು ಸಾಕಷ್ಟು ಬೇಗನೇ ಸೇರಿಕೊಂಡದ್ದು, ದೇವಳ-ಗಂಗಾದರ್ಶನ ಮಾಡಿದ್ದು, ರಾತ್ರಿ ಹಿತವಾಗಿ ಕಳೆದದ್ದು ಎಲ್ಲ ಸರಿಯೇ. ಆದರೆ ಮರು ಬೆಳಿಗ್ಗೆ ಎದ್ದವರು
ನಮ್ಮ ಅನುಭವವನ್ನು ಬಿಟ್ಟು, ಊರವರ ಹಿತವಾಕ್ಕಿಗೆ ಕಿವಿ ಕೊಟ್ಟರು. ಒಂದೇ ದಿನದಲ್ಲಿ ಗೋಮುಖಕ್ಕೆ ಹೋಗಿ ಬರುವುದು ತಮ್ಮಿಂದ ಅಸಾಧ್ಯ ಅಂದುಕೊಂಡರು. ಬದಲಿಗೆ, ನೇರ ಸೋನ್ ಪ್ರಯಾಗ್ ಚಲೋ ಎಂದಿದ್ದರು. ಈಗ ನೀವೇ ಹೇಳಿ - ಗೋಮುಖ ದರ್ಶನ ಮಾಡದವರ ಖಾತೆಗೆ ಪೂರ್ಣ ಪುಣ್ಯ ಜಮಾ ಆದೀತೇ? ಅದರ ಫಲವಾಗಿ....
ಎಡ - ರೆಡ್ಡಿ, ಬಲ - ಮೋಹನ್ |
ಉತ್ತರ ಕಾಶಿಯಲ್ಲಿ, ನಮಗೆ ಮಸ್ಸೂರಿಯಲ್ಲಿ ಸಿಕ್ಕಂತವನೇ ಒಬ್ಬ ಪೋಲಿಸಪ್ಪ ಅಡ್ಡಗಟ್ಟಿದನಂತೆ - "ಪಹಾಡ್ ಕಾ ಲೈಸೆನ್ಸ್". ಇವರು ಬುದ್ಧಿಯನ್ನು ಭಯಕ್ಕೊಪ್ಪಿಸಿ, ಪೋಲೀಸಪ್ಪನ ‘ಚಾಯ್ಪಾನೀ’ಗೆ ವ್ಯವಸ್ಥೆ ಮಾಡಿ ಮುಂಬಂದರು. ಆಕಾಶರಾಯನಿಗೆ ಅಸಹನೆ ಬಂದು, ಭೋರೆಂದು ಮಳೆ ಕುಟ್ಟಿದನಂತೆ. ಇವರು ಸಾರ್ವಜನಿಕದಲ್ಲಿ ಸಚೇಲ ಸ್ನಾನ ಮಾಡಿದಂತಾದರೂ ಪೂರ್ತಿ ನಿಲ್ಲಲಿಲ್ಲವಂತೆ. ಮಹಾಕವಿ ಸ್ಮರಣೆಯೊಡನೆ "ಜಗ್ಗದೆಯೆ, ಕುಗ್ಗದೆಯೆ ನಡೆಮುಂದೆ, ನಡೆಮುಂದೆ" ಎಂದರಂತೆ. ಆದರೆ ರುದ್ರಪ್ರಯಾಗ್ ಮುಟ್ಟಿದಾಗ, ಕತ್ತಲೆಯೊಡನೆ ಗದಗುಟ್ಟುವ ಚಳಿ ಹಿಡಿದಾಗ, ಎರಡನೇ ಯೋಚನೆ ಮಾಡದೆ ಹೋಟೆಲ್ ಹಿಡಿದಿದ್ದರು. ಮರು ಬೆಳಿಗ್ಗೆ ಮಾತ್ರ ಬೇಗ ಹೊರಟದ್ದಕ್ಕೆ, ಅನ್ಯ ವಿಘ್ನಗಳೇನೂ ಕಾಡದ್ದಕ್ಕೆ, ಅಷ್ಟೇನೂ ತಡವಲ್ಲವೆಂಬಂತೆ ಸೋನ್‍ಪ್ರಯಾಗ್ ಮುಟ್ಟಿದ್ದರು.
ತ್ರಿಮೂರ್ತಿಗಳ ಉತ್ಸಾಹ, ಹೆಚ್ಚುವರಿ ನಿದ್ರೆ ಕೊಟ್ಟ ಚೇತರಿಕೆಯೊಡನೆ ನನಗೆ ಹೊಸ ಹುರುಪು ಬಂತು. ಏನಲ್ಲದಿದ್ದರೂ ಗೌರೀಕುಂಡ ನೋಡ್ತೇನೆಂದು ಮೋಹನ್ ಬೆನ್ನಿಗೇರಿದ್ದೆ. ಅಲ್ಲಿ ಅವರು ಎರಡು ಬೈಕ್‍ಗಳ ಬಂದೋಬಸ್ತು ಮಾಡುತ್ತಿದ್ದಂತೆ, ನಾನು ಬೇರೇ ಲೋಕದಲ್ಲಿದ್ದೆ. ಕೈಗೂಸುಗಳಿಂದ ಹಿಡಿದು ಮಹಾಮುದಿಯರವರೆಗೂ ಕೇದಾರನಾಥನಿಗೆ ಜೈಕಾರ ಹಾಕಿದ್ದರು. ಗೌರೀಕುಂಡದ ಬಿಸಿನೀರ ಬುಗ್ಗೆಯಲ್ಲಿ ಮಿಂದು, ಇನ್ನೂ ಹಬೆಯಾಡುತ್ತಿದ್ದಂತೆ ನಡಿಗೆ, ಹೇಸರಗತ್ತೆ, ಬುಟ್ಟಿ ಪಲ್ಲಕ್ಕಿಗಳೆಂದು ಏರುಮುಖದಲ್ಲಿದ್ದ ಪಕ್ಕಾ ಯಾತ್ರಾರ್ಥಿ ಸಾರ್ವಜನಿಕ ಸಂದೋಹದಲ್ಲಿ, ನಾನೂ ನಿಧಾನಕ್ಕೆ ಸೇರಿಹೋಗಿದ್ದೆ. ನನ್ನದೇ ಲಯದಲ್ಲಿ ಕೇದಾರದ ಮೆಟ್ಟಿಲ ಎಣಿಕೆ ಶುರು ಮಾಡಿಯೇಬಿಟ್ಟೆ.
ಕಾಡು ಕಲ್ಲು ಹಾಕಿ ಬಿಗಿ ಮಾಡಿದ ಜಾಡೋ ಒರಟು ಮೆಟ್ಟಿಲ ಸಾಲೋ ಮೊದಮೊದಲು ಚೆನ್ನಾಗಿಯೇ ಇತ್ತು. ಔನ್ನತ್ಯ ಗಳಿಸುತ್ತಿದ್ದಂತೆ ನಮ್ಮ ಜಾಡುಳಿದು ತುಸು ಆಚೀಚೆ, ಮಣ್ಣು ಕಲಸಿದ ಹಿಮದ ಹೊದಿಕೆಯೂ ಕಾಣಿಸುತ್ತಿತ್ತು. ಹಾಗೆಂದು ಚಳಿ ಇರಲೇ ಇಲ್ಲ. ಬದಲಿಗೆ ಶುಭ್ರಾಕಾಶದಿಂದ ಬೆಳಗುತ್ತಿದ್ದ ಸೂರ್ಯ ಕಿರಣಗಳು, ವಾತಾವರಣದ ಶುಷ್ಕತೆ ಸೇರಿಸಿ ಪ್ರಖರವಾಗಿಯೇ ಕುಕ್ಕುತ್ತಿದ್ದವು. ಬಿಸಿ ಉಡುಪುಗಳೆಲ್ಲ ಅನಾವಶ್ಯಕ ಹೊರೆಯಾಗಿಯೇ ಚೀಲ ಸೇರಿದ್ದವು.
ಜಾಡು ಕೆಲವೆಡೆ ಜರಿದಲ್ಲಿ, ಕೂಲಿಯಾಳುಗಳು ತತ್ಕಾಲೀನ ರಿಪೇರಿ ಮಾಡುತ್ತಾ ಅಗತ್ಯವಿದ್ದವರಿಗೆ ಸಹಾಯಹಸ್ತ ಕೊಡುತ್ತಾ ದಾಟಿಸುತ್ತಿದ್ದರು. ಅಲ್ಲೆಲ್ಲ ಉರುಳಿ ಬರುವ ಪುಡಿ ಕಲ್ಲಿನಿಂದ ತೊಡಗಿ ದೊಡ್ಡ ಕುಸಿತಗಳು ಎಂದೂ ಆಗಬಹುದು. ಎಚ್ಚರದ ನೋಟವಷ್ಟೇ ಇಟ್ಟುಕೊಂಡು, ಒಂದೇ ಕಡೆ ನಿಲ್ಲದಂತೆ ಸಾಮರ್ಥ್ಯಕ್ಕೆ ತಕ್ಕಂತೆ ನಡೆಯುತ್ತಿರುವುದೊಂದೇ ತಪ್ಪಿಸಿಕೊಳ್ಳುವ ಉಪಾಯ.
ತ್ರಿಮೂರ್ತಿಗಳು ಯಮುನೋತ್ರಿ ದಾರಿಯಲ್ಲಿ |
ಹೇಸರಗತ್ತೆ ಏರಿದ್ದೆಲ್ಲಾ ಸರಿ. ಆದರೆ ‘ಬಾಣಲೆಯಿಂದ ಬೆಂಕಿಗೆ’ ಎನ್ನುವ ಗಾದೆ ಇಲ್ಲಿ ಚೆನ್ನಾಗಿ ಅನ್ವಯಿಸುತ್ತಿತ್ತು. ಕಾಸ್ತಾರ ಕೊಟ್ಟ ಹೆಚ್ಚಿನ ಮೆತ್ತೆ, ನಾನು ಕುಳಿತ ಭಂಗಿ ಯಾವವೂ ನನಗೆ ಹಿತವಾಗಲೇ ಇಲ್ಲ. ಆದರೆ ಪ್ರಗತಿ ಮಾತ್ರ ಬಹಳ ಚುರುಕಾಗಿತ್ತು. ಯಮುನೋತ್ರಿಯ ಹೋಲಿಕೆಯಲ್ಲಿ ಕೇದಾರ ಕಠಿಣವಾದ ಚಾರಣ. ಅದು ಕಣಿವೆಯ ತಳದಲ್ಲಿ ಹೆಚ್ಚು ಕಮ್ಮಿ ಯಮುನೆಯ ಬಗಲಿನದ್ದೇ ಹದವಾದ ಏರಿಕೆ. ಇಲ್ಲಿನದು ಮಂದಾಕಿನಿಯ ಕಣಿವೆ. ಆದರೆ ಜಾಡು ಮಾತ್ರ ನೀರ ಹರಿವು ಕಾಣದಷ್ಟು ಎತ್ತರದಲ್ಲಿ ಸಾಗಿತ್ತು. ಜಾಡು ಝರಿಗಳನ್ನಲ್ಲದೆ, ಪೂರ್ಣ ಮಂಜಿನ ಹೊದಿಕೆಯ ಭಾಗಗಳನ್ನೂ ಆದಷ್ಟು ಬಳಸಿ ಹೋಗುವಂತೆ ಮಾಡಿದ್ದರು.
ಸಹಜವಾಗಿ ಕೆಲವು ಬೆಟ್ಟಗಳ ಭಾರೀ ಉಬ್ಬುಗಳಲ್ಲಿ ಹತ್ತಿಪ್ಪತ್ತು ಹಿಮ್ಮುರಿ ತಿರುವು, ಜಾಡಿನ ಮೇಲೆ ಜಾಡಾಗಿ ನೇರ ಮೇಲಕ್ಕೇರಿಸುತ್ತಿತ್ತು. ಅಲ್ಲೂ ಇಂಗ್ಲಿಷಿನ Z ನ ಮೇಲೆ ಅಸಂಖ್ಯ Z ಹೇರಿದಂತೆ ಅನ್ನಿಸಿದರೂ ಅವನ್ನು ಬಲು ವಿಸ್ತಾರದಲ್ಲಿ ಮೂಲೆಯಿಂದ ಮೂಲೆಗೆ ಜಗ್ಗಿಟ್ಟಂತೆ ರಚಿಸಿದ್ದರು. ನಿಮಗೆ ಗೊತ್ತಲ್ಲ, ಹಿಮಾಲಯದ ನೆಲದ ರಚನೆ ಅಂದರೆ ತೀರಾ ಸಡಿಲವಾಗಿ ಗುಪ್ಪೆ ಹಾಕಿದ ಕಲ್ಲು, ಮಣ್ಣು. ಸಣ್ಣ ಭೂಕಂಪಕ್ಕೂ ನಡೆಯುವವರ ಎಡವಟ್ಟಿಗೂ ಕೆಳಕ್ಕೆ ಸರಣಿ ಶಿಲಾಪಾತವನ್ನೇ ಮಾಡಿಬಿಡುತ್ತದೆ. ಅದನ್ನು ಆದಷ್ಟೂ ತಪ್ಪಿಸಲು ಈ ಅಂಕಾಡೊಂಕಿಯಲ್ಲೂ ಎಚ್ಚರ ಅನಿವಾರ್ಯ.
ತ್ರಿಮೂರ್ತಿಗಳು ಕಂಡ ಗಂಗೋತ್ರಿ |
ಅಂತದ್ದರಲ್ಲೂ ಒಂದೆಡೆ ಇನ್ನೂರು ಮುನ್ನೂರಡಿ ಉದ್ದಕ್ಕೆ ಶಿಖರ ವಲಯದಿಂದ ಹಿಮಪಾತವಾಗಿ ಕಾಲ್ದಾರಿಯನ್ನು ಸಂಪೂರ್ಣ ಕೊಚ್ಚಿಕೊಂಡು ಹೋಗಿತ್ತು. ಹತ್ತೆಂಟು ಬೆಟ್ಟದಾಳುಗಳು ಹೊಸ ಜಾಡು ಬಿಡಿಸುತ್ತಲೂ ಯಾತ್ರಿಗಳಿಗೆ ಅಗತ್ಯ ಬಂದಲ್ಲಿ ಕೈಯಾಸರೆ ಕೊಡುತ್ತಲೂ ಸುಧಾರಿಸುತ್ತಿದ್ದರು. ಅಲ್ಲಿ ಹೇಸರಗತ್ತೆ ಸವಾರರೆಲ್ಲ ಇಳಿದು ನಡೆಯುವುದು ಅನಿವಾರ್ಯ. ಆಗ ನನಗೆ ತಿಳಿಯಿತು, ನಡಿಗೆಗಿಂತ ಸವಾರಿ ನಿಜದಲ್ಲಿ ಹೆಚ್ಚಿನ ಶಿಕ್ಷೆಯೇ ಸರಿ. ನಿಜದಲ್ಲಿ ನಾವು ಸವಾರರೇ ಅಲ್ಲ, ಕಡಿವಾಣ ಮುಟ್ಟದ ಸೀಟಿನ ಗೂಟ ಹಿಡಿದ ಬೆರ್ಚಪ್ಪಗಳು. ಕಾಸ್ತಾರ ಅದರ ಮುಸುಡು ದಾರ ಹಿಡಿದು ನಡೆದೇ ಬರುತ್ತಿದ್ದ. ಅದನ್ನು ಜಗ್ಗುತ್ತ, ನೂಕುತ್ತ, ಬೆದರಿಸುತ್ತ ಸಮತೋಲನವನ್ನೂ ಪ್ರಗತಿಯನ್ನೂ ದಿಕ್ಕನ್ನೂ ಸರಿಯಾಗಿಯೇ ಕಾಪಾಡಿಕೊಡುತ್ತಾನೆ. ಆದರೂ ಬಡಪ್ರಾಣಿಯ ಬೆನ್ನ ಚಲನೆ, ವಾಲಾಟಗಳು ಬೈಕ್ ಸೀಟಿನಂತೆ ಸ್ಥಿರವಲ್ಲ. ಕೊನೆಯ ಸುಮಾರು ಮೂರು ಕಿಮೀಯನ್ನು ನಾನು ಹೇಸರಗತ್ತೆ ಲೆಕ್ಕ ಚುಕ್ತಾ ಮಾಡಿ, ನಡೆದೇ ಪೂರೈಸಿದೆ.
ಯಮುನೋತ್ರಿ ಸಪುರ ಕಣಿವೆಯ ಮಾಲೆ. ಜಲಪಾತಗಳು ಕೊನೆಗೆ ಹಿಮಶಿಖರಗಳು ಇದ್ದರೂ ಒಂದು ಮಗ್ಗುಲಿಗೆ ಅಂಟಿ, ತಪ್ಪಲಿಗೆ ಜಾರಿದಂತಿತ್ತು - ಭವ್ಯತೆ ಇಲ್ಲ. ಗೋಮುಖವೂ ಅಷ್ಟೇ. ಕೇದಾರನಾಥ್ (ಔನ್ನತ್ಯ ೧೨೩೦೦) ಹಾಗಲ್ಲ. ವಿಸ್ತಾರ ಬೋಗುಣಿ, ಸುತ್ತುವರಿದಂತೆ ಎತ್ತೆತ್ತರದ ಹಿಮಶಿಖರಗಳು. ಮಂದಾಕಿನಿ ಬಹುತೇಕ ಅಲ್ಲೇ ಒಟ್ಟಾಗುವುದರಿಂದ ಉಗಮಸ್ಥಾನ ಎಂದರೂ ತಪ್ಪಾಗದು. ದೇವಸ್ಥಾನದ ಆವರಣದಲ್ಲೆಲ್ಲ ಕಗ್ಗಲ್ಲು ಹಾಸಿರುವುದರಿಂದ, ತಾಜ್ ಮಹಲ್ ಹೊರಾವರಣದಲ್ಲಿ (ಶೃಂಗೇರಿಯಲ್ಲೂ) ಬರಿಗಾಲಿಗೆ ಉರಿ ತಾಗಿ ಹಾರಾಡಿದಂತೆ, ಇಲ್ಲಿ ಶೀತ ಕೊರೆತಕ್ಕೆ ಹಾರಾಡುವಂತಾಗುತ್ತಿತ್ತು. ಇಲ್ಲೂ ಜಮಖಾನದ ನಡೆಮಡಿ ಅನಿವಾರ್ಯ.
ದೇವಳ ಹತ್ತಿರವಾಗುತ್ತಿದ್ದಂತೆ, ನಮಗಿಂತ ಸುಮಾರು ಒಂದೂವರೆ ಗಂಟೆ ಮೊದಲೇ ಹೊರಟ ಇತರರೂ ಸಿಕ್ಕಿದರು. ಎಲ್ಲ ಒಟ್ಟು
ಗರ್ಭಗುಡಿ ಹೊಕ್ಕು ಹೊರಟೆವು. ಕೇದಾರದ ‘ಬಝಾರ್’ನ ಓಣಿಗಳಲ್ಲೆಲ್ಲ ಹಿಮದ ಚೂರುಗಳು, ಮಣ್ಣು, ಕುದುರೆ ಲದ್ದಿಗಳದೇ ಖಿಚಡಿ. ಧಾಬಾದಲ್ಲಿ ಅವಸರದ ಊಟ ಮುಗಿಸಿ, ಬಂದಲ್ಲಿಗೇ ಮರಳಲು ಅವಸರಿಸಿದೆವು. ಹಾಗೇ ಅಲ್ಲಿದ್ದಷ್ಟು ಹೊತ್ತೂ ಮಂಜೋ ಮೋಡ ಬಿದ್ದದ್ದೋ ಬೀಸುಗಾಳಿಯೋ ಪಿರಿಪಿರಿ ಮಳೆಯೋ ಕಾಡಿದ್ದು ಸಾಲದೆಂಬಂತೆ ವಾತಾರಾವಣ ಕೊನೆಯಲ್ಲಿ ಬಿರು ಮಳೆಗೇ ರೂಪಾಂತರಗೊಂಡಿತ್ತು. ನಾನೇರಿ ಬಂದಿದ್ದ ಹೇಸರಗತ್ತೆಯವ ಪಾಪ, ಮೊದಲೇ ನಾನು ಎಷ್ಟು ಬೇಡವೆಂದಿದ್ದರೂ ಕಾದೇ ಇದ್ದ. ದೇವಕಿ ಅನುಭವಕ್ಕಾಗಿ, ಅವನ ತೃಪ್ತಿಗಾಗಿ ಒಮ್ಮೆ ಏರಿದ ಶಾಸ್ತ್ರವೇನೋ ಮಾಡಿದಳು. ನಾಲ್ಕು ಹೆಜ್ಜೆಯೂ ಹೋಗದೆ, ಅಸಾಧ್ಯವೆಂದು ಇಳಿದರೂ ಚಿತ್ರದಲ್ಲಿ ಅಮರಳಾದಳು!
ಪ್ರವಾಹೋತ್ತರ ಕೇದಾರನಾಥ |
ನಾನು ದೇವಕಿ ಇದ್ದಬದ್ದ ಬಿಸಿಯುಡುಪು, ಮೇಲೆ ರಾಣೀಕೋಟು ಹೇರಿಕೊಂಡೆವು. ಏರುತ್ತಿದ್ದ ಚಳಿಯಲ್ಲಿ ಗದಗುಟ್ಟುತ್ತ, ಎಲ್ಲರಿಗೂ "ಅಪ್ನಾ ಅಪ್ನಾ ಬಂದೋಬಸ್ತ್" ಹೇಳಿ, ಇಳಿದಾರಿಯತ್ತ ದೌಡಾಯಿಸಿದೆವು. ಉಳಿದವರೂ ಮಳೆಕೋಟೇರಿಸಲು ಸಿಕ್ಕ ಮರೆಗೋ ಮುಂದಿನ ಜಾಡಿಗೋ ಓಡುತ್ತ ಜಾಗ ಖಾಲಿ ಮಾಡಿದ್ದರು. ಈ ಗೊಂದಲದ ಕಾವಿನಲ್ಲಿ ಸಿಕ್ಕ ಉಪಾಧ್ಯರೇನು ಮಾಡಿದರು? ಅವರದೇ
ಮಾತಿನಲ್ಲಿ ಓದಿ: ಉಪಾಯ್ದರು ಕಂಡ ಕೇದಾರ:
ಪ್ರವಾಹೋತ್ತರ ಕೇದಾರನಾಥ |
ಸದಾ ಸಮುದ್ರಮಟ್ಟದಲ್ಲೇ ವಾಸಿಸುವ ನಾನು ಯಾವೊಂದೂ ಆಧುನಿಕ ಮಾನವ ರಚನೆಗಳಿಲ್ಲದ ಅಪ್ಪಟ ನೈಸರ್ಗಿಕ ಹಿಮಾಲಯದ ಔನ್ನತ್ಯಕ್ಕೆ ಮಾರುಹೋಗುವುದು ಸಹಜವೇ ಇತ್ತು. ಕೇದಾರನಾಥ ಮಂದಿರಕ್ಕೆ ಕಾಲ್ನಡಿಗೆಯ ಪ್ರಾರಂಭ ಗೌರೀಕುಂಡ ಎಂಬಲ್ಲಿಂದಲ್ವೇ. ಹೆಚ್ಚು ಕಮ್ಮಿ ಅರ್ಧ ದಿನವೇ ಏರಿ, ಮಂದಿರದ ಕ್ಷೇತ್ರ ತಲುಪಿದಾಗಲೇ ಅಲ್ಲೊಂದಷ್ಟು ಮಾನವನ ಆಧುನಿಕ ರಚನೆಗಳಿರುವುದು ತಿಳಿಯಿತು. ಪುಟ್ಟ ಬೀದಿಯಲ್ಲೊಂದು ದೊಡ್ಡ ಮಂಜುಗಡ್ಡೆ ಪೂರ್ತಿ ಕರಗದೇ ಇನ್ನೂ ಉಳಿದಿತ್ತು. ಮಂದಿರದೊಳಗೆ ಎಣ್ಣೆ ಜಿಡ್ಡಂಟಿದ ಅನಿಯಮಿತಾಕಾರದ ಸಾಮಾನ್ಯವಾದ್ದೆಂಬ ಬಂಡೆಗಲ್ಲೇ ಸಾಕ್ಷಾತ್ ಕೇದಾರನಾಥನಾಗಿ ಕುಳಿತಿತ್ತು!
ಶಿಖರದ ದರ್ಶನ, ಊಟ ಎಂದೆಲ್ಲ ಕೆಲಸ ಮುಗಿಸಿ, ಇನ್ನೇನು ವಾಪಾಸು ಹೊರಡುವಷ್ಟರಲ್ಲಿ ಮಳೆ ಶುರೂವಾಯ್ತು. ನಾನು ಕಕ್ಕಾಬಿಕ್ಕಿಯಾಗಿರುವಂತೆ ಉಳಿದವರು ಹೋ..... ಎಂದು ದಿಕ್ಕಾಪಾಲಾಗಿ ಓಡಿಬಿಟ್ರೂ. ನಾನು ಮಳೆಯಂಗಿ ಹಾಕ್ಕೊಂಡು ಅತ್ತಿತ್ತ ನೋಡದೇ ನಡೆದೇಬಿಟ್ಟೆ. ಅರರೇ ನನ್ನನ್ನು ಬಿಟ್ಟೇ ಹೋದ್ರಲ್ಲಾ..... ಅವ್ರೆಲ್ಲೂ ಕಾಂತಿಲ್ವಲ್ಲಾ! ಏನೀಗ ದಾರಿ ತೋರ್ತಿದೆಯಲ್ಲಾ... ನಿರ್ಜನ ದಾರಿಯಲ್ಲಿ ನಡೆದೇಬಿಟ್ಟೆ. ಮಳೆ ಜೋರಾಗಿ, ಬಟಾಣಿಕಾಳಿನಂತಹ ನೀರ್ಗಲ್ಲೂ ಪಟಫಟನೇ ಬೀಳ್ತಿತ್ತು.
ಕೆಲವೆಡೆಗಳಲ್ಲಂತೂ ಜಾಡಿನಲ್ಲಿ ನಾನೊಬ್ಬನೇ. ನನಗೆಲ್ಲವೂ ಮರೆತೋಗಿತ್ತು. ಮಳೆ ಬರುತ್ತಿರುವುದೂ ನಿಂತೋಗಿರುವುದೂ ನಾನು ನಡ್ಕೊಂಡೋಗುತ್ತಿರುವುದೂ ನಾವು ಆರೋ ಒಂಬತ್ತೋ ಮಂದಿಗಳಿರುವುದೂ ಯಾವುದೂ ಜ್ಞಾಪಕಕ್ಕೆ ಬರಲೇ ಇಲ್ಲ. ತಲೆಯೊಳಗೆ ಏನೂ ಇರಲಿಲ್ಲ. ಹಾಗೆ ಇಳಿದುಬರುತ್ತಾ ಎಷ್ಟೋ ಗಂಟೆಯ ಮೇಲೆ ಸಪುರ ಜಾಡು ಕಳೆದು ಬಯಲಾಗಿದ್ದೆ. ಅಯೋ..... ಇಲ್ಲಿ ಹಲವಾರು ಕವಲು ದಾರಿಗಳಿವೆ. ಪರಿಚಿತ ಪ್ರದೇಶಗಳಲ್ಲೇ ಎಲ್ಲೆಂದರಲ್ಲಿ ದಾರಿತಪ್ಪುವ ನಾನು, ದಿಢೀರನೇ ಜನಜಂಗುಳಿಯನ್ನು ನೋಡಿ ಬೆರಗಾಗಿಬಿಟ್ಟೆ. ಅಯ್... ನಾನೆಲ್ಲಿಗೆ ಬಂದೇ?.. ಈಮುಂಚೆ ನೋಡಿದಂತಿದೆಯಲ್ಲಾ. ಹಾಗಾದರೆ ನಮ್ಮ ಉಳಿದವರೆಲ್ಲೀ? ಗೊಂದಲದಲ್ಲಿದ್ದಂತೆ ಅಶರೀರ ವಾಣಿಯೊಂದು ಮೊಳಗಿತು "ಓಯ್... ಅಲ್ಲಲ್ಲ, ಇಲ್ಲಿ ಈಕಡೆ ಬನ್ನಿ!" ಅರೆ, ಅವರು ಆಡಿದ್ದು, ದಾರಿತೋರಿದ್ದು ಕನ್ನಡವೇ! ಅತ್ತ ತಿರುಗಿದರೆ ಬಾಲಕೃಷ್ಣರ ನಗುಮುಖ ತೋರಿತು. ನಾನು ಅವರನ್ನು ಹುಡುಕಿದೆನೋ, ಅವರೇ ನನ್ನನ್ನು ಹುಡುಕಿದರೋ? ಕಳೆದುಹೋದವರು ಯಾರೂ?" (ಉಪಾಧ್ಯರ ಕಥನ ಮುಗಿಯಿತು)
ಪ್ರವಾಹೋತ್ತರ ಕೇದಾರನಾಥ |
ಸಂಜೆ ಎಲ್ಲರೂ ಸುಕ್ಷೇಮವಾಗಿ ಸೋನ್ ಮಾರ್ಗಿನ ಶಿಬಿರದಲ್ಲಿ ಒಟ್ಟಾದೆವು.
[ವಿಸೂ: ನನಗೂ ದೇವಕಿಗೂ ಏಳು ವರ್ಷಗಳ ಹಿಂದಿನ ಭೀಕರ ಪ್ರವಾಹೋತ್ತರದಲ್ಲಿ, ಅನಿರೀಕ್ಷಿತವಾಗಿ ಮತ್ತೊಮ್ಮೆ ಕೇದಾರ ದರ್ಶನಾವಕಾಶ ಒದಗಿತ್ತು. ಅದರ ಪೂರ್ಣ ಕಥನದ ಆಸಕ್ತಿ ಇರುವವರು ಅವಶ್ಯ ಇಲ್ಲಿ ಚಿಟಿಕೆ ಹೊಡೆದು ಓದಿ: ಕೇದಾರ ಬದರಿ]
(ಮುಂದುವರಿಯಲಿದೆ)
ಅಯೋ.... ಅಲ್ಲಿ ಮತ್ತೂ ಮೂರುಮಂದಿ ನಮ್ಮೊಂದಿಗೆ ಸೇರಿದ್ದು ಮರ್ತೇ ಹೋಯ್ತಲಪೋ.
ReplyDeleteVery exciting to read.. Dad's second visit and my first visit to Kedarnath was in 1996, when mom, dad, grandparents and I went there as part of North India tour through Nirmala travels..
ReplyDeleteWhile climbing, grandparents went via the carrier.. Parents and I went by mule..While climbing down, Dad and I walked the whole way 12 km.. It was indeed an amazing journey..
ನಾವು ದೆಲ್ಲಿ ತಲು ಪಿದ ನಂತರದ ಕಥೆ ತುಂಬಾ ಚನ್ನಾಗಿದೆ. ಆದರೆ ರೈಲು ಪ್ರಯಾಣ ಅಷ್ಟೇ ನು ಸುಖದಾಯಕವಾಗಿರಲಿಲ್ಲ
ReplyDeleteಸಂಜೆ ನಾಲ್ಕಕ್ಕೆ ಡೆಲ್ಲಿ ತಲುಪಬೇಕಾದ ರೈಲು ರಾತ್ರಿ ಹನ್ನೆರಡಕ್ಕೆ ತಲುಪಿತು.ದಾರಿಯುದ್ದಕ್ಕೂ ಪರೀಕ್ಷೆ ಗೆ ಹೊರಟ ಹುಡುಗರು ಸೇರಿಕೊಂಡು ಬಲವಾಗಿ ಸರಪಳಿ ಎಳೆ ಯುತಿದ್ದರು."ಪೇಪರ್ವಾಳೆ ಹೈ"ಎಂದು ಅವರಿಗೆ ಇತರರ ಬೆಂಬಲ ಬೇರೆ. ದೆಲ್ಹಿ ಯಿಂದ ಹೊರಗೆ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ನಮ್ಮವಸತಿ. ಇಂದಿರಾ ಗಾಂಧಿ ಯವರ ಹತ್ಯೆಯ ನಂತರ ಸಿಖ್ಖರ ಮಾರಣಹೋಮ ನಡೆದಿತ್ತು.ಅದಾಗಿ ಎಂಟು ವರ್ಷ ಕಳೆದರೂ ದೆಲ್ಲಿಯ ವಾತಾವರಣ ತಿಲಿಯಾಗಿರಲಿಲ್ಲ ರೈಲಿನಲ್ಲೇ ಜನ ನಮ್ಮನ್ನು ಎಚ್ಚರಿಸಿದರು."ಸಿಖ್ಖರ ಬಾಡಿಗೆ ಕಾರು ಹತ್ತಬೇಡಿ ಅಪಾಯ".ದೆಲ್ಲಿಯಲ್ಲಿ ಬೇರೆ ಯಾರ ಪರಿಚವೂ ನಮಗಿರಲಿಲ್ಲ ಆಗ ನಮ್ಮ ನೆರವಿಗೆ ಬಂದವರು ರೈಲ್ನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದ ಬ್ಯಾಂಕ್ ಅಧಿಕಾರಿ ಅಶೋಕ್ ಕುಮಾರ ಅವರು ಇವರು ನಮ್ಮ ಜಿಲ್ಲೆಯವರೇ .ಕೆಲಸ ದೇಲ್ಲಿಯಲ್ಲಿ.ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮರುದಿನ ಬೆಳಿಗ್ಗೆ ಕಳಿಸಿಕೊಟ್ಟರು.
ಹರಿದ್ವಾರಕ್ಕೆ ಬಂದಾಗಲೂ ,ಸಿಖ್ ಸಮುದಾಯದ ಅಂಗಡಿಗಳು ಖಾಲಿ ಖಾಲಿ ಇದ್ದದ್ದನ್ನು ನೋಡಿ ಸಂಕಟವಾಯಿತು.