"ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ ಮನೆಯಲ್ಲಿ ಸೇರುತ್ತಿದ್ದೆವು. ಅಲ್ಲಿ ಆಡದ ಮಾತಿಲ್ಲ, ಮಾಡದ ಚಟುವಟಿಕೆಗಳಿಲ್ಲ...." ಎಂದೇ ತೊಡಗಿತ್ತು ಎನ್.ಜಿ ಮೋಹನರ ಪ್ರಾಸ್ತಾವಿಕ ಮಾತುಗಳು. ಸಂದರ್ಭ - ಮೋಹನ್ನರ ತಾಯಿ - ವಸಂತಿ ಟೀಚರ್ ಅವರ ಜನ್ಮ ಶತಾಬ್ದಿ, ಅವರ ಪುಸ್ತಕ - ಬೀದಿ
ದೀಪದ ಬೆಳಕು, ಇದರ ಲೋಕಾರ್ಪಣ ಮತ್ತು ‘ದ ಅನಿರುದ್ಧ್ ಚಾರಿಟೆಬಲ್ ಟ್ರಸ್ಟ್’ ಉದ್ಘಾಟನೆ. ಎನ್.ಜಿ ಮೋಹನ್ ಮಂಗಳೂರಿನಲ್ಲಿ ಕೆಲವು ಔಷಧ ಕಂಪೆನಿಗಳ ಯಶಸ್ವೀ ಸಗಟು ವಿತರಕರು. ಈ ತ್ರಿವಳಿ ಸಂತೋಷಕೂಟವನ್ನು ಮೋಹನ್ ಅವರ ಕಂಪೆನಿ - ‘ಬೆಟಾ ಏಜನ್ಸೀಸ್ ಅಂಡ್ ಪ್ರಾಜೆಕ್ಟ್ಸ್ ಪ್ರೈ.ಲಿ’, ಅವರ ಪ್ರಿಯ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್ ಕಾಲೇಜ್ ಸಹಯೋಗ ಮತ್ತು ಸಭಾಂಗಣದಲ್ಲಿ (೧೫-೫-೨೦೨೨, ಆದಿತ್ಯವಾರ ಸಂಜೆ) ವ್ಯವಸ್ಥೆ ಮಾಡಿತ್ತು.
ಬಹುತೇಕ ಉದ್ಯಮ/ಉದ್ಯಮಿಗಳ ‘ಸಾಮಾಜಿಕ ಸೇವೆ’, ಕಾನೂನಿನ ನಿರ್ಬಂಧಕ್ಕೆ ತೊಡಿಸಿದ ಔದಾರ್ಯದ ಮುಖವಾಡವಾಗಿರುತ್ತದೆ. ಅದರಲ್ಲೂ ಪ್ರಚಾರ ಲಾಭವನ್ನು ತಮ್ಮ ಉದ್ದಿಮೆಯ ಹಿತಾಸಕ್ತಿಗೆ ಗಿರವಿ ಇಡುವವರೇ ಹೆಚ್ಚು. ಆದರೆ ಮೋಹನ್ ಆರ್ಯಸಮಾಜ, ರೆಡ್ ಕ್ರಾಸ್, ಸ್ಕೌಟ್ ಮುಂತಾದ ಸಂಘಟನೆಗಳ ಮುಂಚೂಣಿಯಲ್ಲಿ, ಸ್ವಂತ ತಾಕತ್ತಿನಲ್ಲಿ ನಡೆಸಿದ ಸಮಾಜಸೇವೆಗೆ ಪ್ರಚಾರದ ಹೆದ್ದೀಪವನ್ನು ಎಂದೂ ಎಳಕೊಂಡವರಲ್ಲ.
ಹಾಗಾಗಿ ಅವರ ಸೇವಾ ಸಹಯೋಗದ ಸವಿಯುಂಡ ಫಾ| ಡಯನೀಶಿಯಸ್ ವಾಸ್, ಬೆಂಗಳೂರಿನಿಂದ ಬಂದು, ತ್ರಿವಳಿ ಕಲಾಪಗಳ ಔಪಚಾರಿಕ ಉದ್ಘಾಟನೆಯನ್ನು ನಡೆಸಿಕೊಟ್ಟರು. ಫಾ| ವಾಸ್ ಅವರು ಹಿಂದೆ ಅಲೋಶಿಯಸ್ ಕಾಲೇಜಿನ ರೆಕ್ಟರ್ ಆಗಿದ್ದರು. (ಪ್ರಾಂಶುಪಾಲರಿಂದಲೂ ಮೇಲೆ, ಆಡಳಿತ ನಿರ್ದೇಶಕರು ಎನ್ನಬಹುದೇನೋ) ಸದ್ಯ ಬೆಂಗಳೂರಿನಲ್ಲಿ ‘ಕರ್ನಾಟಕ ಜೆಸುಯಿಟ್ ಪ್ರಾಂತ್ಯ’ದ ಮುಖ್ಯಸ್ಥರಾಗಿ (ಪ್ರೊವಿನ್ಶಿಯಲ್) ಕಾರ್ಯ ನಿರ್ವಹಿಸುತ್ತಿದ್ದಾರೆ. ಫಾ| ವಾಸ್ ಮೋಹನ್ ಕೊಟ್ಟ ಸಹಯೋಗವನ್ನು ನೆನೆಸಿಕೊಂಡು, ಅವರ ಸದ್ಯದ ಎಲ್ಲ ಯೋಜನೆಗಳಿಗೂ ಹಾರ್ದಿಕ ಯಶ ಕೋರಿದರು.
ಪ್ರಸ್ತಾವನೆಯಲ್ಲಿ ಬಂದ ಬಾಲ ಕೂಟದ ಸದಸ್ಯರು, ಸಂದ ಆರೇಳು ದಶಕಗಳಲ್ಲಿ ವಿದ್ಯೆ, ವೃತ್ತಿ, ಊರು, ಕುಟುಂಬ ಎಂದಿತ್ಯಾದಿ ಅನಿವಾರ್ಯತೆಗಳಲ್ಲಿ ಅಕ್ಷರಶಃ ವಿಶ್ವಾದ್ಯಂತ ಚದುರಿಹೋಗಿದ್ದಾರೆ. ಆದರೆ ಆಗಿಂದಾಗ್ಗೆ ಸಣ್ಣ ಬಿಡುವು ಮಾಡಿಕೊಂಡಾದರೂ ಪರಸ್ಪರ ಭೇಟಿಯಾಗಿ, ಪ್ರೀತಿ ವಿಶ್ವಾಸಗಳ ನವೀಕರಣ ನಡೆಸುತ್ತಲೂ ಬಂದಿದ್ದಾರೆ. ಆ ಎಳವೆಯಲ್ಲಿ, ಬೆಸೆಂಟ್ ಶಾಲೆಯ ವ್ಯಾಯಾಮ ಟೀಚರರ ಮಗ ಮೋಹನ್, ಉದ್ಧಾಮ ಸಾಹಿತಿ ಶಿವರಾಮ ಕಾರಂತರ ಮಗ ಉಲ್ಲಾಸ್, ಜನಪ್ರಿಯ ವೈದ್ಯದಂಪತಿ ಸತ್ಯಶಂಕರ್ ಹಾಗೂ ವಸಂತರ ಮಗ ರಘು.... ಮುಂತಾದವರೆಲ್ಲರೂ (ಕ್ಷಮಿಸಿ ಪೂರ್ಣ ಪಟ್ಟಿ ನನ್ನಲ್ಲಿಲ್ಲ) ಸ್ನೇಹಬಂಧದಲ್ಲಿ ಸಮಾನರೇ ಆಗಿದ್ದರು. ಮುಂದುವರಿದಂತೆ ಅವರೆಲ್ಲರೂ ಯೋಗ ಮತ್ತು ಯೋಗ್ಯತೆಗಳಲ್ಲಿ (ಮೋಹನ್ ದೊಡ್ಡ ಉದ್ಯಮಿ, ಉಲ್ಲಾಸ್ ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ....) ಏನೆಲ್ಲಾ ವಿಕಸಿಸಿದರೂ ಮೂಲ ಸ್ನೇಹದ ಬಂಧ ಏಕಪ್ರಕಾರವಾಗಿತ್ತು. ಅದನ್ನು ಮೋಹನ್, ತನ್ನಡಿಗೆ ಬಂದ ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಬೆಳಗುವ ಬೀದಿ ದೀಪದ ಬೆಳಕಿಗೆ ಹೋಲಿಸುತ್ತಾರೆ. ಹಾಗೆ ಕಂಡ ತನ್ನ ನೂರೊಂದು ನೆನಪುಗಳನ್ನು ಇಂದು ಮೋಹನ್ ಅಚ್ಚಗನ್ನಡದ ಕಥನಕ್ಕಿಳಿಸಿದ್ದಾರೆ. ಸಹಜವಾಗಿ ಪುಸ್ತಕದ ಹೆಸರೂ ‘ಬೀದಿ ದೀಪದ ಬೆಳಕು’.
ಹನ್ನೊಂದೂ ಮಂದಿಯ ಸಾಮಾಜಿಕ ಸ್ಥಿತಿಗತಿ ಏನೇ ಆದರೂ ಶಿಥಿಲವಾಗದ ತಮ್ಮ ಈ ಬಾಂಧವ್ಯಕ್ಕೆ ಮೋಹನ್ ಕಾಣುವ ಒಂದೇ ಕಾರಣ - ನಿಷ್ಕಾಮ ಸ್ನೇಹ! "ನಾವು ಎಂದೂ ಗೆಳೆತನವನ್ನು ವೈಯಕ್ತಿಕ ಜೀವನೋಪಾಯದ ಭಾಗವಾಗಿ ಕಾಣಲೇ ಇಲ್ಲ." ಅದನ್ನು ವಿಸ್ತರಿಸುತ್ತ ಮೋಹನ್ ಕೊಟ್ಟ ಒಂದು ಹೃದಯಸ್ಪರ್ಷೀ ಉದಾಹರಣೆಯನ್ನಷ್ಟೇ ನಾನಿಲ್ಲಿ ಉಲ್ಲೇಖಿಸುತ್ತೇನೆ. ಬಳಗದ ಓರ್ವ ಗೆಳೆಯ ಹೇಮ - ಎರಡು ಹೆಮ್ಮಕ್ಕಳ ತಂದೆ. ಅವರಿಗೆ ಹಿಂದೊಮ್ಮೆ ಹೃದಯ ಚಿಕಿತ್ಸೆಯಾಗಿತ್ತು. ಸುಮಾರು ಹದಿನೈದು ವರ್ಷ ಕಳೆದು ಎರಡನೆಯದರ ಅನಿವಾರ್ಯತೆ ಬಂದಿತ್ತು. ಚಿಕಿತ್ಸೆಯ ಅಂದಾಜು ವೆಚ್ಚ ಐದು ಲಕ್ಷ ರೂಪಾಯಿ. ಅನಾವಶ್ಯಕವಾಗಿ ಹೇಮ, ಪ್ರಾಯಕ್ಕೆ ಬಂದ ತಮ್ಮ ಮಗಳಂದಿರ ಮದುವೆಯ ವೆಚ್ಚವನ್ನು ಎಣಿಸಿ, ತನ್ನ ಚಿಕಿತ್ಸೆಯನ್ನು ಗುಟ್ಟಾಗಿಯೇ ಮುಂದೂಡಿಬಿಟ್ಟರು. ಮಕ್ಕಳ ಮದುವೆ ಪೂರೈಸಿ, ಮಿತ್ರ ಬಳಗವೇನು ಸ್ವಂತ ಕುಟುಂಬಕ್ಕೂ ಅನಿರೀಕ್ಷಿತವಾಗಿ ಕಾಲವಶರಾದರು. "ಆನಂತರದ ದಿನಗಳಲ್ಲಷ್ಟೇ ಹೇಮ ಮಾಡಿದ ಗುಟ್ಟು ನಮಗೆ ತಿಳಿಯಿತು. ನಮ್ಮಲ್ಲಿ ಯಾರೊಬ್ಬರಿಗೂ ಆತ ತಿಳಿಸಲೇ ಇಲ್ಲ ಎಂಬ ವಿಚಾರ ನೆನಪಿಗೆ ಬಂದಾಗೆಲ್ಲ, ಇಂದೂ ನಮ್ಮ ಹೃದಯ ದ್ರವಿಸುತ್ತದೆ" ಎಂದೇ ಮಾತು ಮುಗಿಸಿದರು ಮೋಹನ್.
ಬೀದಿ ದೀಪದ ಬೆಳಕನ್ನು ಲೋಕಾರ್ಪಣಗೊಳಿಸಿದವರು - ಪ್ರಾಧ್ಯಾಪಕ ಬಿ.ಎ. ವಿವೇಕ ರೈ. ಸುಮಾರು ಐವತ್ತು ವರ್ಷಗಳ ಹಿಂದೆ, ಮಂಗಳೂರಿನ ವಿದ್ಯಾ ಭೂಪಟದಲ್ಲಿ ಸ್ನಾತಕೋತ್ತರ ಕೇಂದ್ರ ಹಾಗೂ ಕನ್ನಡ ಎಂಎ ಪದವಿಗಳನ್ನು ದಾಖಲಿಸಿದವರು ಕೀರ್ತಿಶೇಷ ಪ್ರಾ| ಎಸ್.ವಿ ಪರಮೇಶ್ವರ ಭಟ್. ಭಟ್ಟರು ಅಷ್ಟಕ್ಕೇ ನಿಲ್ಲದೆ, ಆ ಕಾಲದ ಸಂಚಾರ ಮತ್ತು ಸಂಪರ್ಕದ ಎಲ್ಲ ಮಿತಿಗಳನ್ನೂ ಮೀರಿ, ಅವಿಭಜಿತ ದಕ ಜಿಲ್ಲೆಯ ಮೂಲೆ ಮೂಲೆಗೂ ಸಂಚರಿಸಿ, ಕನ್ನಡದ ನೂರೆಂಟು ದೀಪ ಹಚ್ಚಿದ್ದರು. ಭಟ್ಟರ ಶಿಷ್ಯರಾಗಿಯೂ ಧೀಪಧಾರಿತ್ವವನ್ನು ಮುಂದುವರಿಸಿದವರಾಗಿಯೂ ವಿವೇಕ ರೈಗಳ ಸಾಧನೆ ಖ್ಯಾತವೇ ಇದೆ. ಇವರು ಎರಡು ವಿವಿ ನಿಲಯಗಳ ಕುಲಪತಿಗಳಾಗಿ ವಿದ್ವತ್ತಿನ ಆಳಕ್ಕೂ ಜರ್ಮನಿಯ ದೂರಕ್ಕೂ ಕನ್ನಡದ ಡಿಂಡಿಮವನ್ನು ಕೇಳಿಸಿದ್ದಾರೆ. ರೈಯವರು ಬೀದಿ ದೀಪದ ಬೆಳಕನ್ನು ಸಭೆಗೆ ಪ್ರಜ್ವಲಿಸಿ ತೋರಿಸಿದ್ದಲ್ಲದೆ, ಉತ್ತೇಜಕರ ನುಡಿಗಳನ್ನು ಆಡಿದರು.
ಒಂದಕ್ಕೊಂದು ಉಚಿತ, ಅಳತೆಯ ಮೇಲೆ ಕೊಸರು ಎಂದೆಲ್ಲ ಲೋಕರೂಢಿಯಿದೆ. ಹಾಗೇ ಬೀದಿ ದೀಪದ ಬೆಳಕಿನ ಜತೆಗೆ ಬೆಳಕು ಕಂಡ ಇನ್ನೊಂದು ಪುಟ್ಟ ಪುಸ್ತಕ - ಎನ್.ಜಿ. ಮೋಹನರ ಕಿರು ಜೀವನ ಕಥನ, ಲೇಖಕಿ - ಚೇತನ್. (ಆಮಂತ್ರಣದಲ್ಲಿ ಇದರ ಉಲ್ಲೇಖವೇ ಇರಲಿಲ್ಲ) ಚೇತನ್ ಬೀಕಾಮ್ ಪರೀಕ್ಷೆ ಬರೆದು, ಬೇಕಾಮ್ (ನಿರುದ್ಯೋಗಿ) ಆಗಿದ್ದ ಕಾಲದಲ್ಲಿ, ಕರೆದು ಕೆಲಸ ಕೊಟ್ಟವರಂತೆ ಮೋಹನ್. ಆಕೆಗೆ ಫಲಿತಾಂಶ ಬಂದ ಮೇಲೆ, ಹೆಚ್ಚಿನ ಓದಿನ ಬಯಕೆ ಉಂಟಾಯ್ತಂತೆ. ಬಹುತೇಕ ಉದ್ಯಮಿಗಳು
ತಮ್ಮಲ್ಲಿ ಕೆಲಸ ಕಲಿತವರು ಹೆಚ್ಚಿನ ಯೋಗ್ಯತೆ ಗಳಿಸಿದಲ್ಲಿ, ಅನ್ಯ ಸಂಸ್ಥೆಗಳಿಗೆ ಪಗರುತ್ತಾರೆನ್ನುವ ಭಯಕ್ಕೆ ಅವಕಾಶವನ್ನೇ ವಂಚಿಸುತ್ತಾರೆ. ಆದರೆ ಮೋಹನ್ನರ ಔದಾರ್ಯ ಅಂಥದ್ದಲ್ಲ. ಹೆಚ್ಚಿನ ಓದಿಗೆ ಅವಕಾಶ ಮಾತ್ರವಲ್ಲ, ಹಣದ ಬಲವನ್ನೂ
ಕೊಟ್ಟರಂತೆ. ಇಂದು ಆಕೆ (ನಾನು ಕೇಳಿಸಿಕೊಂಡದ್ದು ಸರಿಯಾದರೆ) ಸಿಎ ಪೂರ್ಣಗೊಳಿಸಿದ್ದಲ್ಲದೇ ಮೋಹನ್ನರ ಕಂಪೆನಿಯಲ್ಲೇ ಹೆಚ್ಚಿನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಂತೆ. ಅಂಥ ಚೇತನ್ ಸ್ವಪ್ರೇರಣೆಯಿಂದ ‘ನೆಚ್ಚಿನ ಬಾಸ್’ ಕುರಿತು ದಾಖಲಿಸಿದ ಪುಸ್ತಿಕೆಯನ್ನೂ ವಿವೇಕ ರೈಯವರು ಲೋಕಾರ್ಪಣಗೊಳಿಸಿದರು.
ತಮ್ಮಲ್ಲಿ ಕೆಲಸ ಕಲಿತವರು ಹೆಚ್ಚಿನ ಯೋಗ್ಯತೆ ಗಳಿಸಿದಲ್ಲಿ, ಅನ್ಯ ಸಂಸ್ಥೆಗಳಿಗೆ ಪಗರುತ್ತಾರೆನ್ನುವ ಭಯಕ್ಕೆ ಅವಕಾಶವನ್ನೇ ವಂಚಿಸುತ್ತಾರೆ. ಆದರೆ ಮೋಹನ್ನರ ಔದಾರ್ಯ ಅಂಥದ್ದಲ್ಲ. ಹೆಚ್ಚಿನ ಓದಿಗೆ ಅವಕಾಶ ಮಾತ್ರವಲ್ಲ, ಹಣದ ಬಲವನ್ನೂ
ಕೊಟ್ಟರಂತೆ. ಇಂದು ಆಕೆ (ನಾನು ಕೇಳಿಸಿಕೊಂಡದ್ದು ಸರಿಯಾದರೆ) ಸಿಎ ಪೂರ್ಣಗೊಳಿಸಿದ್ದಲ್ಲದೇ ಮೋಹನ್ನರ ಕಂಪೆನಿಯಲ್ಲೇ ಹೆಚ್ಚಿನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಂತೆ. ಅಂಥ ಚೇತನ್ ಸ್ವಪ್ರೇರಣೆಯಿಂದ ‘ನೆಚ್ಚಿನ ಬಾಸ್’ ಕುರಿತು ದಾಖಲಿಸಿದ ಪುಸ್ತಿಕೆಯನ್ನೂ ವಿವೇಕ ರೈಯವರು ಲೋಕಾರ್ಪಣಗೊಳಿಸಿದರು.
ಯೇನೆಪೋಯಾ ಅಬ್ದುಲ್ಲಾ ಕುಂಞಿ, ನಗರದ ಯೇನೆಪೋಯಾ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಉದ್ಯಮಗಳ ಯಜಮಾನ, ಮೋಹನರ ಸಮಕಾಲೀನ ಮಿತ್ರ. ಅಬ್ದುಲ್ಲಾರ ಉದ್ದಿಮೆಗಳ ಮೂಲಪುರುಷ ಕೀರ್ತಿಶೇಷ ಯೇನೆಪೋಯಾ ಮೊಯ್ದಿನ್ ಕುಂಞಿ - ಅಬ್ದುಲ್ಲರ ತಂದೆ. ಇಂದು ಅಬ್ದುಲ್ಲರೂ ಸ್ವಲ್ಪ ಮೋಹನರಂತೆ, ತಮ್ಮ ತಂದೆಯ ನೂರೊಂದು ನೆನಪುಗಳನ್ನು ಅಕ್ಷರದಲ್ಲಿ ಹಿಡಿದಿಡುವ ಸಾಹಸ ನಡೆಸಿದ್ದಾರೆ. ಅದು ಏಕ ಕಾಲದಲ್ಲಿ ಕನ್ನಡ, ಮಲೆಯಾಳ ಮತ್ತು ಇಂಗ್ಲಿಷಿನಲ್ಲಿ ಪ್ರಕಟವಾಗಲಿದೆ. ಹಾಗೆಂದು ಪ್ರಸ್ತುತ ತ್ರಿವಳಿ ಸಂಭ್ರಮದಲ್ಲಿ ಪ್ರಾಸಂಗಿಕವಾಗಿ ಘೋಷಿಸಿದವರು - ಪ್ರಾ| ಬಿಎ ವಿವೇಕ ರೈ. ಪ್ರೊ ರೈಯವರು ಅಬ್ದುಲ್ಲರ ಬರವಣಿಗೆಯ ಸಾಹಸಕ್ಕೂ ಸಹಯೋಗ ಕೊಡುತ್ತಿದ್ದಾರೆ.
ದಿನದ ಎರಡನೇ ಕಲಾಪ - ಮೋಹನರ ಕೀರ್ತಿಶೇಷ ಮಗ ಅನಿರುದ್ಧನ ಹೆಸರಿನ ಸೇವಾ ಸಂಸ್ಥೆಯ ಉದ್ಘಾಟನೆ. ಉತ್ತಮ ವಿದ್ಯಾರ್ಹತೆ ಮತ್ತು ಶಿಸ್ತಿನೊಡನೆ ವಿದೇಶದಲ್ಲಿ ವೃತ್ತಿ ನಿರತನಾಗಿದ್ದವ ಅನಿರುದ್ಧ. ಆದರೆ ಗುಣಮಣಮಿಲ್ಲದ ಕಾಲಪುರುಷ ಈತನನ್ನು ೨೮ರ ಎಳೆಹರಯದಲ್ಲೇ (ಹೃದಯಾಘಾತ) ಕರೆಸಿಕೊಂಡ. ಅನಂತರದ ಅನಿವಾರ್ಯತೆಯಲ್ಲಿ ಮೋಹನ್ ಮಗನ ಹಣಕಾಸಿನ ಲೆಕ್ಕ ತೆರೆದಾಗಲೇ ಆತನ ಸಾಮಾಜಿಕ ಸೇವಾ ಮನೋಭಾವದ ಪರಿಚಯವಾಯ್ತಂತೆ. ಇನ್ನೂ ವೃತ್ತಿರಂಗದ ಮೊದಲ ಪಾದದಲ್ಲೇ ಇದ್ದ ಅನಿರುದ್ಧ, ನೀಡಿದ ಗುಪ್ತ ದಾನಗಳ ಹಿಂದಿನ ಸದ್ಭಾವನೆ ಇವರಿಗೆ ಬೆರಗು ಹುಟ್ಟಿಸಿತ್ತು. ಇಂದು ಆ ಭಾವಕ್ಕೆ ಹೆಚ್ಚಿನ ಗೌರವ ಸಲ್ಲುವಂತೆ, ಮೋಹನ್ ಆತನ ಹೆಸರಿನಲ್ಲೇ ಸೇವಾ ಸಂಸ್ಥೆಯನ್ನು ರೂಪಿಸಿದ್ದಾರೆ.
ಮೋಹನ್ ಕುಟುಂಬದ ಬಂಧು, ಕನ್ನಡ ಮುಖ್ಯವಾಗಿರುವಂತೆ ಬಹುಭಾಷಾ ಸಾಹಿತಿ, ಅಪಾರ ಮನುಷ್ಯಪ್ರೀತಿಯ ಹಿರಿಯ - ಪ್ರೊ| ಅಮೃತ ಸೋಮೇಶ್ವರರನ್ನು, ಅನಿರುದ್ಧ ಸೇವಾಸಂಸ್ಥೆಯ ಔಪಚಾರಿಕ ಉದ್ಘಾಟನೆ ನಡೆಸಿದರು. ವೃದ್ಧಾಪ್ಯದ ಬೇನೆಗೆ ಸಹಜವಾಗಿ ಅಮೃತರು ಗಾಲಿಕುರ್ಚಿಯಲ್ಲಿದ್ದರು. ಹಾಗಾಗಿ ಅವರೂ (ಇನ್ನೊಂದೇ ಗಾಲಿ ಕುರ್ಚಿಯಲ್ಲಿದ್ದ ಶತಾಯುಷಿ ವಸಂತೀ ಟೀಚರ್ ಜತೆಗೆ) ಸಭೆಯ ಮುಂಚೂಣಿಯಲ್ಲಿದ್ದಂತೇ ಅನಿರುದ್ಧ ಟ್ರಸ್ಟನ್ನು ಲೋಕಾರ್ಪಣಗೊಳಿಸಿ, ಶುಭ ನುಡಿದರು.
ಯೇನೆಪೋಯಾ ಅಬ್ದುಲ್ಲ ಕುಂಞಿಯವರು ಮೋಹನರ ದೀರ್ಘ ಕಾಲೀನ ಮಿತ್ರ. ಮೋಹನ್ನರ ‘ಬಾಲ ಬಳಗ’ದ ಹನ್ನೊಂದರಲ್ಲೂ ಅವರಿದ್ದರೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ಅವರಿಬ್ಬರೂ ಸಾಮಾಜಿಕ ಸೇವೆಯಲ್ಲಿ ಪೂರಕವಾಗಿಯೂ ಪರಸ್ಪರ ಪ್ರಭಾವಿಯಾಗಿಯೂ ತೊಡಗಿಕೊಂಡವರು. ಅದಕ್ಕೆ ಸಹಜವಾಗಿ ಅಬ್ದುಲ್ಲರು ಪ್ರಸ್ತುತ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು ಮತ್ತು ಅದನ್ನು ಚೊಕ್ಕ ಕನ್ನಡ ಭಾಷಣದಲ್ಲೂ ಪ್ರಕಟಿಸಿದರು.
ಪ್ರಾಸ್ತಾವಿಕ ನುಡಿಗಳಲ್ಲೇ ಮೋಹನ್, ಕೂಟದ ಹನ್ನೊಂದರಲ್ಲಿ, ಇಬ್ಬರು (ರಘು ಮತ್ತು ಹೇಮ) ಇಂದಿಲ್ಲವೆನ್ನುವುದನ್ನು ತಿಳಿಸಿದ್ದರು. ಉಳಿದವರಲ್ಲಿ ಒಬ್ಬರಾಗಿ ಉಲ್ಲಾಸ ಕಾರಂತ ಭಾಗವಹಿಸುತ್ತಾರೆಂದು ಆಮಂತ್ರಣದಲ್ಲಿತ್ತು. ಆದರೆ ಅವರು ಬೆಂಗಳೂರಿನ ರಸ್ತೆಯ ಗೊಂದಲಗಳಲ್ಲಿ ವಿಳಂಬಿಸಿ, ಮಂಗಳೂರು ವಿಮಾನ ತಪ್ಪಿಸಿಕೊಂಡದ್ದು ನಿಜಕ್ಕೂ ದುರದೃಷ್ಟಕರ.
ಮೊದಲಲ್ಲಿ ಅಲ್ಪ ಉಪಾಹಾರ, ಸ್ವಾಗತ ನೃತ್ಯ ಮತ್ತು ಗೀತೆಯ ಆಯೋಜನೆ ಚೆನ್ನಾಗಿಯೇ ಇತ್ತು. ಮುಂದೆ ಎರಡೇ ಸಭಾ ಕಲಾಪಗಳೊಡನೆ ವೇದಿಕೆ ತೆರವುಗೊಂಡಾಗ ನನಗೆ ತುಸು ಆಶ್ಚರ್ಯವೇ ಆಗಿತ್ತು. ಆದರೆ ವ್ಯವಸ್ಥಾಪಕರು, ಸಂತೋಷಕೂಟ ಉದ್ದಕ್ಕೂ ಭಾಷಣಗಳ ಹೊರೆಯಾಗದಂತೆ ಅಲ್ಲೊಂದು ತುಳು ಪ್ರಹಸನ ಜೋಡಿಸಿದ್ದರು. ಅನಂತರ ಯೋಜಿತ ಮೂರನೇ ಕಲಾಪ - ಶತಾಯುಷಿ ಸಮ್ಮಾನ ಮತ್ತು ಕೊನೆಯಲ್ಲಿ ಮಿತ್ರ ಭೋಜನವನ್ನೂ ಸೇರಿಸಿದ್ದರು. ನಾಟಕ ಮತ್ತು ಊಟ, ಒಟ್ಟಾರೆಯಲ್ಲಿ ವಿಲಂಬಿತ ಕಲಾಪಗಳ ಉಲ್ಲೇಖ ಆಮಂತ್ರಣದಲ್ಲಿರಲಿಲ್ಲ. ನನ್ನ ದುರದೃಷ್ಟಕ್ಕೆ ಆ ಸಂಜೆ ನಾನು ಹೆಚ್ಚು ತಡ ಮಾಡುವಂತೆಯೂ ಇರಲಿಲ್ಲ. ಹಾಗಾಗಿ ಅದುವರೆಗೆ ನಾನು ಅನುಭವಿಸಿದ್ದರ ಸಂತೋಷದಲ್ಲಿ, ತಪ್ಪಿಸಿಕೊಳ್ಳುತ್ತಿದ್ದ ಕಲಾಪದ ವಿಷಾದವನ್ನು ಮರೆಸಿ ಮನೆಗೆ ನಡೆದೆ.
ReplyDeleteಚೆಂದದ ವಿವರಣೆ. ಎನ್.ಜಿ. ಮೋಹನ್ ಅಂದ್ರೆ ಅಲೋಶಿಯಸ್ ನ ಒಂದು ಭಾಗ. ಏನೇ ಬರಲಿ ಸಂಸ್ಥೆ ಜೊತೆ ಗಟ್ಟಿಯಾಗಿ ನಿಂತವರು. ಅವರೊಂದಿಗೆ ಯಾರು ಜಗಳ ವಾಡಿದ್ದುನಾನು ನೋಡಿಲ್ಲ. ಅವರ ವ್ಯಕ್ತಿತ್ವವೇ ಹಾಗೆ. ನನ್ನ ಮೇಲೂ ಅವ್ರಿಗೆ ತುಂಬಾ ವಿಶ್ವಾಸ ಪ್ರೀತಿ. ಸುಮ್ಮನೆ ಕೂರುವವರಂತೂ ಅಲ್ಲವೇ ಅಲ್ಲ. ಸಾಕಷ್ಟು ನೋವು ಅನುಭವಿಸಿದ್ದರೂ ಇತರರಿಗೆ ಅವ್ರು ಕೊಡುವುದು ಪ್ರೀತಿ ಮಾತ್ರ. ಇಂತಹ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.
- ಫೇಸ್ ಬುಕ್ಕಿನಲ್ಲಿ ಎ.ಎಂ ನರಹರಿಯವರು ಬರೆದರು
Thanks Ashoka, for your detailed account of the function. I am sorry I had to miss all this because of the 10K marathon.. Ullas
ReplyDeleteನಮ್ಮ ವಿನಂತಿಯಂತೆ ಆಗಮಿಸಿದಿರಿ , ನೂರರ ನಮ್ಮಮ್ಮನನ್ನು ಕಾರಿನಿಂದ ಕೆಳಗಿಳಿಸಿ, ವೀಲ್ ಚೇರ್ ನಲ್ಲಿ ಒಳಗೊಯ್ದು, ಮಹತ್ವದ ಮೊದಲರ್ಧದ ಪರ್ಯಂತ ಜೊತೆಗಿದ್ದು, ಇಷ್ಟು ಆತ್ಮೀಯವಾಗಿ ಇಲ್ಲಿ ಸಮಾರಂಭವನ್ನು ನಿಮ್ಮ ಮಾತಿನಲ್ಲಿ ಪಡಿಮೂಡಿಸಿದ ನಿಮಗೆ ಥ್ಯಾಂಕ್ಸ್ ಹೇಳುವಂತಿಲ್ಲವಲ್ಲಾ, ಅಶೋಕ ವರ್ಧನ್? ಹೌದು, ಆ ಮನರಂಜನಾ ಉಪಕ್ರಮ ಕೊನೆಯಲ್ಲೇ ಇರುತ್ತಿದ್ದರೆ ಚೆನ್ನಿತ್ತು, ಎಂದು ನನ್ನ ಅಭಿಪ್ರಾಯವೂ ಆಗಿತ್ತು.
ReplyDeleteಶ್ಯಾಮಲಾ ಮಾಧವ