22 October 2020

ಪುರಿ, ಕೊನಾರ್ಕ ಮತ್ತು ಚಿಲ್ಕಾ

(ಭಾರತ ಅ-ಪೂರ್ವ ಕರಾವಳಿಯೋಟ - ೧೩) 



"ಹೊಟ್ಟೆ ಪಾಡಿನ ಕಷ್ಟಕ್ಕಾಗಿ ನಮ್ಮ ಅನೇಕ ಹಿರಿಯರು ಕೇವಲ ಸೌಟು, ಸಟ್ಟುಗ ಹಿಡಿದು (ದಕ ಜಿಲ್ಲೆ) ಊರು ಬಿಟ್ಟಿದ್ದರು. ಅಪರಿಚಿತ ಊರು, ಅನಿಶ್ಚಿತ ಭವಿಷ್ಯಗಳ ನಡುವೆ ಆಂಧ್ರಪ್ರದೇಶವನ್ನು ವ್ಯಾಪಿಸಿ, ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತ ಅಂಥವರ ಸಾಹಸ ತುಂಬ ದೊಡ್ಡ ಕತೆ..." ಎಂದೇ ಕೂರಾಡಿ ಚಂದ್ರಶೇಖರ ಕಲ್ಕೂರರು (ಕೆ.ಸಿ ಕಲ್ಕೂರ) ಹೇಳಿದ್ದರು. ಅವರು ಆಂಧ್ರಪ್ರದೇಶದ ಕರ್ನೂಲಿನಲ್ಲಿ ಹಿರಿಯರ ಹೋಟೆಲ್ ಸಾಹಸವನ್ನು ಯಶಸ್ವೀಯಾಗಿಯೇ ಮುಂದುವರಿಸಿದ್ದರು. ನಾನು ಭಾರತ ಅ-ಪೂರ್‍ವ ಕರಾವಳಿಯೋಟದ ತಯಾರಿಯಂದು ಪತ್ರಮುಖೇನ ಅವರ ಸಹಕಾರ ಕೋರಿದ್ದೆ. ಅದೇ ವೇಳೆಗೆ (೧೯೯೬ ಫೆಬ್ರುವರಿಯ ಒಂದು ದಿನ) ಬ್ರಹ್ಮಾವರ ಸಮೀಪದ ಅವರ ಮೂಲ ನೆಲೆಗೆ ಇನ್ಯಾವುದೋ ಕಾರ್ಯದಲ್ಲಿ ಅವರು ಬರುವುದಿತ್ತು. ಆಗ ನನ್ನನ್ನೂ ಅಲ್ಲಿಗೆ ಕರೆಸಿಕೊಂಡು, ಅಗತ್ಯಕ್ಕೆ ತಕ್ಕ ಮಾಹಿತಿಯ ಮಹಾಪೂರವನ್ನೇ ಹರಿಸಿದ್ದರು. 

ಕೆಸಿ ಕಲ್ಕೂರರ ಇಬ್ಬರು ಅಣ್ಣಂದಿರು - ರಾಮಚಂದ್ರ ಮತ್ತು ಗೋವಿಂದ ಕಲ್ಕೂರರು, ೧೯೪೪ರಲ್ಲಿ ಯಃಕಶ್ಚಿತ್ ಬಾಲಕಾರ್ಮಿಕರಾಗಿ ಆಂಧ್ರ ಸೇರಿದ್ದರು. ಅವರ ದುಡಿಮೆಯ ಪೋಷಣೆಯಲ್ಲಿ ಬಾಲ-ಚಂದ್ರಶೇಖರರು ಊರಿನಲ್ಲೇ ಮೊದಲ ಹಂತದ ಓದು ಮುಗಿಸಿಕೊಂಡರು. ಮತ್ತೆ ಆಂಧ್ರದಲ್ಲಿದ್ದುಕೊಂಡು ಅಣ್ಣಂದಿರ ಉದ್ಯಮಕ್ಕೆ ಸಹಕಾರಿಸುತ್ತಾ ಸ್ನಾತಕ ಹಾಗೂ ಕಾನೂನು ಓದನ್ನೂ ಪೂರೈಸಿದ್ದರು. ಅಷ್ಟಾಗಿಯೂ ಮುಂದೆ ವೃತ್ತಿ ನೆಲೆಯಲ್ಲಿ ಹೋಟೆಲ್ ಉದ್ಯಮವನ್ನು ದೂರ ಮಾಡದೇ ಕರ್ನೂಲಿನಲ್ಲಿ ಕಲ್ಕೂರ ಹೋಟೆಲನ್ನು ಯಶಸ್ಸಿನ ಎತ್ತರದಲ್ಲಿ ನಿಲ್ಲಿಸಿದ್ದರು. ಅವರ ಸಾಹಿತ್ಯ ಪ್ರೀತಿಯ ತಬ್ಬುಗೆಯಲ್ಲಿ ನನ್ನ ತಂದೆಯೂ ಸೇರಿದ್ದರಿಂದ ನಮ್ಮದು ಕುಟುಂಬ ಸ್ನೇಹ. ಇನ್ನೊಂದು ನೆಲೆಯಲ್ಲಿ ಕಲ್ಕೂರರು ಸಾಮಾಜಿಕ ಕಳಕಳಿಯಲ್ಲಿ ಆಂಧ್ರಪ್ರದೇಶದ ಹೋಟೆಲಿಗರ ಸಂಘದ ಅಧ್ಯಕ್ಷ. ಅವೆರಡರ ಪುಣ್ಯವೂ ನಮಗೆ ಒಲಿದಂತೆ, ಆಂಧ್ರದೊಳಗಿನ ನಮ್ಮ ಸವಾರಿಯ ಉದ್ದಕ್ಕೂ ನಮಗೆ ಉಚಿತ ಊಟ ವಾಸ ಕೊಡುವ ವ್ಯವಸ್ಥೆಯನ್ನೇ ಮಾಡಿಬಿಟ್ಟಿದ್ದರು. ಆ ಕುರಿತು ನಾವು ಮಂಗಳೂರು ಬಿಡುವ ದಿನದವರೆಗೂ ಅವರಿಂದ ಬರುತ್ತಲೇ ಇದ್ದ ಪತ್ರ ಸಮಾಚಾರಕ್ಕೆ ಲೆಕ್ಕವೇ ಇಲ್ಲ. ಅಷ್ಟು ಸಾಲದೆಂಬಂತೆ ಕಲ್ಕೂರರು ಒರಿಸ್ಸಾಕ್ಕೂ ಕೈ ಚಾಚಿ, ಭುವನೇಶ್ವರದಲ್ಲಿ ನಮಗೆ ಮಾಡಿ ಕೊಟ್ಟ ಸಂಪರ್ಕ - ವಿ. ಪದ್ಮನಾಭ ಕೆದಿಲಾಯರು. 

ಕೆದಿಲಾಯರು ಹಿರಿಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ಮೇಲೆ ರೈಲ್ವೇ ಟ್ರಿಬ್ಯೂನಲ್ ಒಂದರ ವರಿಷ್ಠರಾಗಿ ಭುವನೇಶ್ವರದಲ್ಲಿದ್ದರು. ಅವರು ಕುಟುಂಬವನ್ನು ಊರಿನಲ್ಲೇ ಬಿಟ್ಟು ಅಲ್ಲಿ ಒಂಟಿ ಬಿಡಾರ ಹೂಡಿದ್ದರು. ಹಾಗಾಗಿ ತನ್ನ ಅಧಿಕೃತ ವಸತಿಗೇ ನಿಸ್ಸಂಕೋಚವಾಗಿ ಬರುವಂತೆ ನಮ್ಮನ್ನು ಆಹ್ವಾನಿಸಿದ್ದರು. ಮತ್ತು ನಾವು ಯಾವ ವೇಳೆಯಲ್ಲೂ (ಅಂದರೆ ಅವರ ಕಛೇರಿ ಅವಧಿಯಲ್ಲೂ) ಮನೆ ಸೇರಿಕೊಳ್ಳಲು ಅನುಕೂಲವಾಗುವಂತೆ ಮನೆಯ ಕೀಲಿಕೈಯನ್ನೂ ಪಕ್ಕದ ಮನೆಯಲ್ಲಿ ಕೊಡುವುದಾಗಿಯೂ ತಿಳಿಸಿದ್ದರು. ಅದು ಮೊದಲು ನೋಡದ, ಗುರುತು ಪರಿಚಯವಿರದ ಮಂದಿಗೆ, ಸ್ವಂತ ಮನೆಯನ್ನೇ ಮುಕ್ತವಾಗಿಸಿದ ಅವರ ಔದಾರ್ಯದಷ್ಟೇ ದೊಡ್ಡದು ಕಲ್ಕೂರರ ಶಿಫಾರಸು! ಕಟಕ್ಕಿನಿಂದ ನಾವು ಭುವನೇಶ್ವರ ತಲಪುವಾಗ ಅಪರಾಹ್ನ ಎರಡು ಗಂಟೆ. ಪಕ್ಕದ ಮನೆಯಿಂದ ಕೀಲಿಕೈ ಪಡೆದು, ಕೆದಿಲಾಯರ ಮನೆಯಲ್ಲಿ ಹೊರೆಗಳನ್ನು ಇಳಿಸಿ ಹಗುರವಾಗಿ, ಪುರಿ - ಕೋನಾರ್ಕ ತ್ರಿಕೋನ ಭೇಟಿಗೆ ಧಾವಿಸಿದೆವು. 


ಇಂಗ್ಲಿಷಿಗೆ ಭೂಮಗಾತ್ರ ಸೂಚಿಯಾಗಿ ಪ್ರವೇಶಿಸಿದ ಅಪ್ಪಟ ಭಾರತ ಶಬ್ದ - Juggernaut. ಇದಕ್ಕೆ ಪ್ರೇರಣೆ ಪುರಿಯ ‘ಜಗನ್ನಾಥ’ನ ತೇರು! ಪುರಿಯ ಜಗನ್ನಾಥ ದೇವಾಲಯವು ಐತಿಹಾಸಿಕವಾಗಿ ಸುಮಾರು ೧೨ನೇ ಶತಮಾನದಲ್ಲಿ ಗಂಗ ರಾಜಮನೆತನದದಿಂದ ನಿರ್ಮಾಣಗೊಂಡಿತು. ಆದರೆ ಅಲ್ಲಿನ ಆಚಾರಗಳಿಗೆ ಸಂಬಂಧಿಸಿದಂತೆ ಸ್ಥಳಪುರಾಣ ಸ್ವಲ್ಪ ಭಿನ್ನ ಕತೆ ಹೇಳುತ್ತದೆ. ವನ್ಯ ಸಮುದಾಯದ ವಿಶ್ವಾವಸುವಿನಿಂದ ರಾಜಮನೆತನದ ಇಂದ್ರದ್ಯುಮ್ನ ರಾಜಬಲದಿಂದ ವಶಪಡಿಸಿಕೊಂಡರೂ ಭಕ್ತಿ ಬಲದಲ್ಲಿ ದಕ್ಕಿಸಿಕೊಂಡ ದೇವ ಬಿಂಬವಂತೆ ಪುರಿಯ ಜಗನ್ನಾಥ. ಇಲ್ಲಿ ವರ್ಷಾವಧಿ ನಡೆಯುವ ಜಗನ್ನಾಥ, ಬಲರಾಮ ಮತ್ತು ಸುಭದ್ರೆಯರ ಮೂರು ಭಾರೀ ರಥೋತ್ಸವ ಲಕ್ಷಾಂತರ ಜನರನ್ನು ಆಕರ್ಷಿಸುವಷ್ಟು ಜಗತ್ಪ್ರಸಿದ್ಧ. ಭುವನೇಶ್ವರದಿಂದ ಸುಮಾರು ಎಪ್ಪತ್ತು ಕಿಮೀ ಬೈಕೋಡಿಸಿ ಜಗನ್ನಾಥ ಮಂದಿರವನ್ನು "ನಾವೂ ನೋಡಿದ್ದೇವೆ" ಎಂದು ಪಟ್ಟಿ ಮಾಡುವಷ್ಟೇ ಸಂತೋಷ ನಮಗೆ ದಕ್ಕಿತು. 


ಜಗನ್ನಾಥ ಮಂದಿರದ ಮಹಾದ್ವಾರದಲ್ಲೇ ತೆಳು ನೀರು ಹರಿಸಿ, ಭೇಟಿಕೊಡುವೆಲ್ಲರ ಪಾದ ತಂತಾನೇ ತೊಳೆಯುವ ವ್ಯವಸ್ಥೆ ನೋಡಿ ಬಹಳ ಕುಶಿಯೇ ಆಯ್ತು. (ಅಂಥದ್ದನ್ನು ನಾನು ಅದೇ ಮೊದಲು ಕಂಡದ್ದು.) ದೇವಳಕ್ಕೆ ‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಎಂಬ ಮಾತು ಕೇಳಿದ್ದೆ. ಆದರೆ ನಮಗದನ್ನು ಪ್ರಮಾಣಿಸುವ ಅಗತ್ಯ ಬರಲಿಲ್ಲ. (೧೯೮೦ರ ದಶಕದಲ್ಲಿ ನಾವು ದಕ್ಷಿಣ ಭಾರತದ ಸಾಹಸಯಾನ ಮಾಡುವಾಗ ಗುರುವಾಯೂರಿನಲ್ಲಿ ‘ಹಿಂದುತ್ವ’ ಪ್ರಮಾಣಿಸುವ ಅಗತ್ಯ ಬಂದಿತ್ತು. ನಾವು ತಿರಸ್ಕರಿಸಿ ನಮ್ಮ ದಾರಿ ಹಿಡಿದಿದ್ದೆವು!) ಪುರಿಯ ದೇವಳ ಕಗ್ಗಲ್ಲಿನ ಭಾರೀ ಕಂಬ, ಬೋದಿಗೆ, ಚಪ್ಪಡಿಗಳದೇ ರಚನೆ. ಅದರ ಶೈಥಿಲ್ಯ ಅಪಾಯಕಾರಿಯಾಗಿ ಕಾಣುತ್ತಿತ್ತು. ಮುಂದೆಂದೋ ಅಲ್ಲಿನ ಮಾಡಿನ ಸಣ್ಣ ಅಂಶ, ಕುಸಿದು ಅಪಾಯ ಉಂಟು ಮಾಡಿದ ಸುದ್ಧಿಯೂ ನೆನಪಾಗುತ್ತದೆ. ಪುರಿ ಕಡಲ ಕಿನಾರೆಯಲ್ಲೇ ಇದ್ದರೂ ಜಗನ್ನಾಥ ದೇವಳ ಹಾಗೂ ಅದರ ಪಾರಿಸರಿಕ ಅಥವಾ ಸಾಂಪ್ರದಾಯಿಕ ಸೌಂದರ್ಯವನ್ನೆಲ್ಲ ಇಂದು ಆವರಿಸಿ ಬೆಳೆದಿರುವ ನಗರ ಮಾಸಿಬಿಡುತ್ತದೆ. 


ದೇವಳ ಮಹಾದ್ವಾರದ ಹೊಸ್ತಿಲು ದಾಟುತ್ತಿದ್ದಂತೆ ಭಯೋತ್ಪಾದನೆ ಎದುರಾಯ್ತು. ಪಂಡಾ ಹಿಂಡು, ಬಲಗೈಯಲ್ಲಿ ಹಿಡಿದ ಸೀಳು ದೆಬ್ಬೆಯನ್ನು ಬಂದೆಲ್ಲರ ತಲೆಗೆ (ಜಗನ್ನಾಥನ ಆಶೀರ್ವಾದ ಎನ್ನುವಂತೆ) ಮುಟ್ಟಿಸುತ್ತ, ಚಾಚಿದ ಎಡಗೈಯಲ್ಲಿ ಒತ್ತಾಯಪೂರ್ವಕವಾಗಿ ಕಾಣಿಕೆ ವಸೂಲುಮಾಡುತ್ತಿದ್ದರು. ಹಾಗೂ ಪೈಸೆ ಕೊಡದವರ ತಲೆಗೆ ದೆಬ್ಬೆಯ ಸ್ಪರ್ಷವಲ್ಲ, ಮೊಟಕಿನೊಡನೆ ‘ಆಶೀರ್ವಚನ’ವೂ ಸಿಕ್ಕುತ್ತಿತ್ತು; ಶಾಪಾದಪಿ, ವರಾದಪಿ! ನಾನಂತೂ ಪೈಸೆ ಕೊಡದೆ, ದೆಬ್ಬೆ ಮತ್ತು ಪಂಡಾನನ್ನು ತಳ್ಳಿಕೊಂಡೇ ಒಳ ಹೋಗಿದ್ದೆ. 

ಅದೇನೂ ಪರ್ವ ದಿನವಲ್ಲದಿದ್ದರೂ ಜನಸಂದಣಿ ಸಾಕಷ್ಟಿತ್ತು. ‘ಮಂದೆಯಲಿ ಒಂದಾಗಿ’ ನಾವು ಗರ್ಭಗುಡಿಯತ್ತ ಹೋಗುತ್ತಿದ್ದಂತೆ, ಭಾರೀ ಗರ್ಜನೆ ಕೇಳಿತು. ನಾಲ್ಕೈದು ಜನ ‘ಮಡಿವಂತರ’ ತಂಡ ಜಗನ್ನಾಥನ ನೈವೇದ್ಯಕ್ಕೆ ಬೇಕಾದ ಅಕ್ಕಿಯ ಹೊರೆ ಸಾಗಿಸಿತ್ತು. ದೇವರ ದೇವ ಜಗನ್ನಾಥನಿಗೆ ಮೈಲಿಗೆಯಾಗದಂತೆ, ಭೀತ ಸಮೂಹ ಕರೆಗೆ ಒಂದಿ, ದಾರಿ ಕೊಟ್ಟಿತ್ತು. ನಮ್ಮಲ್ಲೆಲ್ಲ ಭೋಜ್ಯಗಳು ಪಕ್ವವಾದ ಹಂತದಲ್ಲಷ್ಟೇ ಮಡಿಯಾಗುವುದು ಕಂಡಿದ್ದೇನೆ. ಇಲ್ಲಿ ‘ಮಡಿ’ ಅನ್ನದಿಂದ ಅಕ್ಕಿಗೆ ಏರಿದ್ದು ಸ್ಪಷ್ಟವಿತ್ತು. ಇದು ಮತ್ತೂ ಮೇಲೆ, ಅಂದರೆ ಭತ್ತ, ಪೈರು, ರೈತನನ್ನೂ ಕಾಡಬಹುದಲ್ಲವೇ ಎಂದೇ ನನ್ನ ತಲೆಹೊಕ್ಕ ಕೊಕ್ಕೆ ಹುಳ, ಇಂದಿಗೂ ಕೊರೆಯುತ್ತಲೇ ಇದೆ. 

ಜಗನ್ನಾಥನ ಬಿಂಬದ ಎದುರು ಅರ್ಚಕರು ಭಕ್ತಾದಿಗಳ ಬೊಗಸೆಗೆ ಪ್ರಸಾದ ರೂಪದಲ್ಲಿ ಬರಿಯ ಬಿಸಿ ಅನ್ನವನ್ನೇ ಹಾಕುತ್ತಿದ್ದರು. (ಭಕ್ತರು ತಟ್ಟೆ, ದೊನ್ನೆಗಳನ್ನು ಹಿಡಿದದ್ದು ಕಾಣಲಿಲ್ಲ) ಭಕ್ತಾದಿಗಳು ಅನ್ನದ ಬಿಸಿಯನ್ನು ಭಕ್ತಿಯ ಭಾಗವಾಗಿ ಸಹಿಸಿಕೊಂಡರೂ ಇತ್ತ

ಬಂದದ್ದೇ ಎಲ್ಲ ತುಳಿದಾಡುವ ಅಂಗಳದ ಕಲ್ಲ ಚಪ್ಪಡಿಯ ಮೇಲೇ ಹಾಕಿ ‘ಸ್ವೀಕರಿಸು’ತ್ತಿದ್ದರು. ಹಾಗೆ ದೇವಳದ ಒಳ ಅಂಗಳವನ್ನು ಹೊಸದಾಗಿ ನೋಡುವಾಗ, ಮತ್ತೆ ತಲೆಯೊಳಗಿನ ಕೊಕ್ಕೆ ಹುಳ ಬಾಧೆ ಕೊಟ್ಟಿತು, "ಎಂಥಾ ಅನ್ಯಾಯ, ವಠಾರವೆಲ್ಲಾ ಭಕ್ತರು ತಿಂದು ಬಿಟ್ಟ, ನೊಣವೂ ಹಾರುತ್ತಿದ್ದ ಅನ್ನದ ಮೇಲೇ ಸ್ವಲ್ಪ ಮೊದಲು ದೇವರ ಮಡಿ ಅಕ್ಕಿ ಒಯ್ದಿದ್ದರು!!" 

ಪುರಿಯಿಂದ ಹಾಗೇ ಕಡಲ ಕಿನಾರೆಯಲ್ಲಿ ಸುಮಾರು ಮೂವತ್ತೈದು ಕಿಮೀ ಉತ್ತರಕ್ಕೆ ಕೋನಾರ್ಕ. ಇದು ಖ್ಯಾತ ಸೂರ್ಯ ದೇಗುಲ. ಇಲ್ಲಿನ ಆರಾಧನೀಯ ಬಿಂಬವನ್ನು ಅನ್ಯರ ಆಕ್ರಮಣ ಭಯದಿಂದ ಬಹಳ ಹಿಂದೆಯೇ ಪುರಿಗೆ ವರ್ಗಾಯಿಸಿದ್ದಾರೆ. ಅದು ಇಂದಿನ ಕಾಲಧರ್ಮಕ್ಕೆ ಪರೋಕ್ಷವಾಗಿ ವರವೇ ಆಗಿದೆ. ಅಲ್ಲಿಗೆ ಇಂದು ಐತಿಹಾಸಿಕ, ವೈಜ್ಞಾನಿಕ ಮತ್ತು ಶಿಲ್ಪಕಲಾ ವೈಭವಗಳನ್ನು ಆಸ್ವಾದಿಸುವವರೇ ಮುಖ್ಯವಾಗಿ ಬರುತ್ತಾರೆ. ಪುರಿಯಂತೇ ಸೂರ್ಯ ದೇವಾಲಯ ಸಂಕೀರ್ಣವೂ ಕಡಲ ಕಿನಾರೆಯಲ್ಲೇ ಇದೆ. ಆದರೆ ನಿಜ ಕಡಲ ನೀರಾಟ ಹಾಗೂ ಸೂರ್ಯೋದಯದ ಚಂದ ಅನುಭವಿಸಲು ಮತ್ತೂ ನಾಲ್ಕು ಕಿಮೀ

ಪೂರ್ವಕ್ಕೆ, ಅಂದರೆ ಚಂದ್ರಭಾಗಾ ದೇವಾಲಯದವರೆಗೂ ಹೋಗಬೇಕಾಗುತ್ತದೆ. ನಾವು ಸುಮಾರು ಒಂದು ಗಂಟೆಯ ಕಾಲ ಕೇವಲ ಸೂರ್ಯ ದೇವಳದಲ್ಲೇ ಇದ್ದು, ವಿವರವಾಗಿ ನೋಡಿ ಸಂತೋಷಿಸಿದೆವು. ಪಡುಗಡಲ ಕಿನಾರೆಯಲ್ಲಿ ಹೆಚ್ಚು ಕಮ್ಮಿ ನಿತ್ಯ ಎನ್ನುವಂತೆ ಸೂರ್ಯಾಸ್ತ ನೋಡುವ ಮಂದಿಯಾದ್ದರಿಂದ ನಾವು ಪುಳಿನ ಹಾಸಿನತ್ತ ಹೋಗಲಿಲ್ಲ. ಇನ್ನೂ ಸರಿಯಾಗಿ ಹೇಳುವುದಿದ್ದರೆ, ೭೦ ಕಿಮೀ ದೂರದ ಭುವನೇಶ್ವರಕ್ಕೆ ಕತ್ತಲ ದಾರಿ ಕಡಿಮೆ ಇರಲಿ ಎಂದೇ ಸೂರ್ಯಾಸ್ತಕ್ಕೂ ಮೊದಲೇ ಕೋನಾರ್ಕ ಬಿಟ್ಟೆವು. 

ದಾರಿಯಲ್ಲೇ ಊಟ ಮಾಡಿ, ಏಳೂ ಮುಕ್ಕಾಲಕ್ಕೆ ಬಿಡಾರ ಸೇರಿದೆವು. ಆ ಹೊತ್ತಿಗೆ ಕರ್ತವ್ಯ ನಿರ್ವಹಿಸಿ ಬಂದಿದ್ದ ಪದ್ಮನಾಭ ಕೆದಿಲಾಯರ ಪ್ರಥಮ ದರ್ಶನವನ್ನೂ ಆತಿಥ್ಯದ ಬಿಸುಪನ್ನೂ ಅನುಭವಿಸಿದೆವು. ಮಲಗುವ ಮುನ್ನ ಧಾರಾಳ ಮಾತಾಡಿಸಿದರು. (ತೇ ೩೫% ದಿನದ ಓಟ ೪೪೩ ಕಿಮೀ) ಮರು ಬೆಳಗ್ಗೆ (೧೧-೫-೯೬) ನಾವು ಎಂದಿನಂತೆ ಐದೂವರೆಗೆ ಮನೆ ಬಿಡುವ ಮಾತು

ಹೇಳಿದ್ದೆವು. ಆದರೆ ಕೆದಿಲಾಯರು ‘ಬ್ರಹ್ಮಚಾರಿ ಬಿಡಾರ’ದ ವ್ಯವಸ್ಥೆಯಲ್ಲೂ ನಮ್ಮೆಲ್ಲ ನಿರಾಕರಣೆಯನ್ನು ತಳ್ಳಿ ಹಾಕಿ, ನಮ್ಮ ಸಮಯಕ್ಕೆ ಸ್ವಲ್ಪವೂ ತೊಂದರೆಯಾಗದಂತೆ ಚಾ, ಅವಲಕ್ಕಿಯನ್ನು ತಾವೇ ಮಾಡಿ ಕೊಟ್ಟರು. ನ್ಯಾಯಮೂರ್ತಿ ಪದ್ಮನಾಭ ಕೆದಿಲಾಯರಿಂದ ಬೀಳ್ಕೊಂಡಾಗಲೂ ನಮಗೆ ಮಾತು ಸೋತಿತ್ತು. 

‘ಪೂರ್ವ ಕರಾವಳಿಯೋಟ’ ಪೂರ್ಣ ಅರ್ಥದಲ್ಲಿ ಅನ್ವರ್ಥವಾದದ್ದು ಆ ಒಂದು ದಿನ ಮಾತ್ರ. ಅದು ಕಲ್ಕತ್ತಾದಿಂದ ಮದ್ರಾಸಿಗೆ ಹೋಗುವ, ಆ ಕಾಲದಲ್ಲೂ ಭಾರೀ ವಾಹನ ಸಂಚಾರವಿದ್ದ ರಾಷ್ಟ್ರೀಯ ಹೆದ್ದಾರಿ. ನಮ್ಮೂರಿನಲ್ಲಿ (ಪಶ್ಚಿಮದಲ್ಲಿ) ಗೋವಾದಿಂದ ಕಾಸರಗೋಡಿನವರೆಗೆ ಓಡಿದಂತೇ ಇಲ್ಲಿ ನಮ್ಮ ದಿನದ ಗುರಿ ಭುವನೇಶ್ವರದಿಂದ ವಿಶಾಖಪಟ್ಟಣ. ಅಲ್ಲಿ ಬಲ ಮಗ್ಗುಲಿನಲ್ಲಿ ಅರಬೀ ಸಮುದ್ರವಾದರೆ ಇಲ್ಲಿ ಬಂಗಾಳ ಕೊಲ್ಲಿ. ಪಶ್ಚಿಮ ಕರಾವಳಿಯ ಉದ್ದದಲ್ಲಿ ಹಲವು ಕುದ್ರುಗಳು (ನದಿ ದ್ವೀಪಗಳು), ‘ಬೆಂಗ್ರೆ’ಗಳಿವೆ. (ಹೊರಮೈಗೆ ಸಮುದ್ರವಿದ್ದರೆ, ಒಳಮೈಗೆ ಹೊಳೆಯನ್ನಿಟ್ಟುಕೊಂಡು ಕೆಲವು ಉದ್ದಕ್ಕೆ ಚಾಚಿದ

ಭೂಭಾಗ). ಅದಕ್ಕೆ ಬಹಳ ದೊಡ್ಡ ಬದಲಿಯಾಗಿ ಪೂರ್ವ ಕರಾವಳಿಯಲ್ಲಿ ಚಿಲ್ಕಾ ಸರೋವರವಿತ್ತು. 

ಚಿಲ್ಕಾ ನದಿ ಪಾತ್ರೆಯಲ್ಲ. ಇದು ಸಮುದ್ರ ದಂಡೆಯ ಹೊರ ಮಗ್ಗುಲಿನಲ್ಲಿ ಸುಮಾರು ೬೪ ಕಿಮೀ ಉದ್ದಕ್ಕೆ, ಅತ್ಯಂತ ಹೆಚ್ಚು ಎನ್ನುವಲ್ಲಿ ಸುಮಾರು ಹದಿನಾರು ಕಿಮೀ ಅಗಲಕ್ಕೆ, ಗರಿಷ್ಠ ಎನ್ನುವಲ್ಲಿ ೧೪ ಅಡಿ ಆಳಕ್ಕೆ ಇರುವ ಸರೋವರ. ಒಟ್ಟಾರೆ ಸುಮಾರು ೧೧೬೫ ಚ.ಕಿಮೀ ವ್ಯಾಪಿಸಿದ ಅರೆ-ಸಮುದ್ರವೇ (ಲಗೂನ್) ಚಿಲ್ಕಾ. ಇದರ ಒಳ ದಂಡೆಯ ಗುಂಟ ರಾಷ್ಟ್ರೀಯ ಹೆದ್ದಾರಿ ಹರಿದಿದೆ. ಇದರ ಪೂರ್ವದಂಡೆ ಹಲವು ಕುದುರುಗಳು ಮತ್ತು ಕೆಲವು ಪರ್ಯಾಯ ಅಳಿವೆಗಳಿಂದ (ನದಿ ಸಮುದ್ರ ಸೇರುವ ಬಾಯಿ) ಹರಕು ಹರಕಾಗಿ, ಸಮುದ್ರ ಸಂಬಂಧ ಉಳಿಸಿಕೊಂಡಿದೆ. ಸರೋವರದ ವ್ಯಾಪ್ತಿಯಲ್ಲಿ ಬೀಳುವ ಮಳೆ ಮತ್ತು ಸುಮಾರು ಐವತ್ತಕ್ಕೂ ಮಿಕ್ಕು ಸಣ್ಣ ಪುಟ್ಟ ಹೊಳೆ ತೋಡುಗಳಿಂದ ಬಂದು ಸೇರುವ ಸಿಹಿ ನೀರಿನ ಸಂಗ್ರಹ ಹೆಚ್ಚಿದಾಗ, ಸಮುದ್ರಕ್ಕೆ ಚೆಲ್ಲಿಕೊಳ್ಳುತ್ತದೆ. ಹಾಗೇ ಸಮುದ್ರದ ಭರತ ಕಾಲ ಮತ್ತು ಹವಾ ವೈಪರೀತ್ಯಗಳ ಉಬ್ಬರಗಳಲ್ಲಿ ಉಪ್ಪುನೀರನ್ನು ಪಡೆದುಕೊಳ್ಳುತ್ತದೆ. ಚಿಲ್ಕಾದ ಈ ಪ್ರಾಕೃತಿಕ ವೈಶಿಷ್ಟ್ಯ ಸುಂದರಬನಗಳದ್ದಕ್ಕಿಂತ ತುಸು ಭಿನ್ನ ಮತ್ತು ವೈವಿಧ್ಯಮಯ. ಬರಿಯ ವೈಶಾಲ್ಯದಲ್ಲೂ ಇದು ಭಾರತಕ್ಕೆ ಅದ್ವಿತೀಯ, ಜಾಗತಿಕವಾಗಿ ದ್ವಿತೀಯ. ಆ ದಿನಗಳಲ್ಲಿ ನಮಗಿದರ ಪೂರ್ಣ ಚಿತ್ರ ಸಿಕ್ಕಿರಲಿಲ್ಲ. ಮತ್ತದು ಒದಗಿದ್ದರೂ ವಿರಾಮದಲ್ಲಿ ತಿಳಿದು ಆನಂದಿಸುವ ಸಮಯ ಹೊಂದಾಣಿಕೆ ನಮಗೆ ಅಸಾಧ್ಯವೇ ಆಗುತ್ತಿತ್ತು. 


ಕೆದಿಲಾಯರ ಕೃಪೆಯಲ್ಲಿ ಹೊಟ್ಟೆ ಗಟ್ಟಿಯಿದ್ದುದರಿಂದ ಸೂರ್ಯ ದಿನದಡುಗೆಗೆ ಕಾರ ಸಂಗ್ರಹಿಸುವ ಮೊದಲು, ಅಂದರೆ ಏಳೂವರೆ ಗಂಟೆಯ ಸುಮಾರಿಗೆ ಓಟದ (ಕಿಮೀ) ಶತಕೋತ್ತರದಲ್ಲಿ ಬಾಲೂಗಾಂವ್ ಎಂಬ ಸಣ್ಣ ಮೀನುಗಾರಿಕಾ ಹಳ್ಳಿಯಲ್ಲಿ ವಿಶ್ರಾಂತಿಗೆ ನಿಂತೆವು. ಅದುವರೆಗೆ ತಾತ್ವಿಕವಾಗಿ ನಾವು ಚಿಲ್ಕಾ ಸರೋವರದ ಬಗಲಲ್ಲೇ ಓಡಿದ್ದರೂ ನಿಜ ಮೊದಲ ದರ್ಶನವಾದದ್ದು ಅಲ್ಲೇ. ಸಾಮಾನ್ಯವಾಗಿ ನಾವು ನಿಂತ ಮೆಟ್ಟಿಗೆ ಕಾಣುವ ದಿಗಂತ ಐದು ಕಿಮೀಗಿಂತ ಹೆಚ್ಚಿನ ದೂರದ್ದಲ್ಲವಂತೆ. ಹಾಗಿರುವಾಗ ಬಾಲೂಗಾಂ ಅಥವಾ ಸಾಮಾನ್ಯವಾಗಿ ಹೆದ್ದಾರಿಗೆ ಕನಿಷ್ಠ ಹತ್ತು ಕಿಮೀ ಮೀರಿದ ದೂರದಲ್ಲಿದ್ದಿರಬಹುದಾದ ಚಿಲ್ಕಾದ ಪೂರ್ವ ದಂಡೆ, ದ್ವೀಪಗಳು, ಅಲ್ಲಿನ ಹಸಿರು ಮುಂತಾದ್ದು ಕಾಣುವ ಪ್ರಶ್ನೆಯೇ ಇಲ್ಲ. ವಿರಾಮದಲ್ಲಿ ಅವರಿವರಿಂದ ತಿಳಿದು, ಕಾದು ನೋಡುವ ತಾಳ್ಮೆ ಮೊದಲೇ ಹೇಳಿದಂತೆ, ನಮ್ಮ ಓಟಕ್ಕೇ ಇರಲಿಲ್ಲ. ಎಲ್ಲೋ ಭೌಗೋಳಿಕ, ಜೈವಿಕ ವೈಶಿಷ್ಟ್ಯವಷ್ಟೇ ಇರಬಹುದಾದ ಸಂಗತಿಯನ್ನು ‘ಜನಪ್ರೀಯ ಪ್ರವಾಸೋದ್ದಿಮೆ’ಯ ಅಪಕಲ್ಪನೆ ಎತ್ತಿ ಹಾಕಿರಬೇಕು, ಎಂದು ಸಿಟ್ಟು ಮಾತ್ರ ಬಂತು. 


ಸರೋವರದ ದ್ವೀಪಗಳಿಗೆ ಪ್ಯಾಕೇಜ್ ಸುತ್ತಾಟ ಕೊಡುವ ಬೋರ್ಡುಗಳು ರಾರಾಜಿಸುತ್ತಿದ್ದವು. ಪರಿಸರ ಮಹಾತ್ಮೆಯನ್ನು ತಿಳಿಸುವ ಪ್ರಯತ್ನಕ್ಕೂ ಮುಂದೆ ಪ್ರವಾಸೀ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿ ಜಾರಿಯಲ್ಲಿತ್ತು. ಸರಕಾರೀ ಪ್ರವಾಸಿ ಬಂಗ್ಲೆಯ ಕಾಮಗಾರಿ ಆಮೆ ವೇಗದಲ್ಲಿ ನಡೆದಿತ್ತು. ಸರೋವರದೊಳಗೇ ಕಾಂಕ್ರೀಟ್ ಸುರಿದು ನೂರಾರು ಮೀಟರ್ ಉದ್ದದ ದೋಣಿಗಟ್ಟೆ ಮಾಡುವ ಕೆಲಸವೂ ನಡೆದಿತ್ತು. ಮತ್ತೆ ಮಾಮೂಲೀ ಮೋಜಿನಾಟಗಳು, ತಿಂಡಿ ತೀರ್ಥಗಳು, ರಂಗುರಂಗಿನ ಗದ್ದಲಗಳು ಎಲ್ಲ ಯಥಾಶಕ್ತಿ ‘ಹೋಂ ಅವೇ ಫ್ರಂ ಹೋಂ’ ಕಲ್ಪಿಸಲು ದುಡಿಯುವಂತೇ ಕಾಣುತ್ತಿತ್ತು. (ಮನೆಯ ಕೋಟಲೆಗಳಿಗೆ ಬೇಸತ್ತವನು ರೆಸಾರ್ಟ್ ಒಂದಕ್ಕೆ ಹೋದನಂತೆ. ಅಲ್ಲಿ ಅವರ ಧ್ಯೇಯವಾಕ್ಯ - ಹೋಂ ಅವೇ ಫ್ರಂ ಹೋಂ, ಕಂಡು ಹೆದರಿ ಮನೆಗೇ ಮರಳಿದನಂತೆ!) 

ಇಂದು ಗೂಗಲ್ ನಕ್ಷೆ ಕಾಣಿಸುವಂತೆ ಚಿಲ್ಕಾದ ಪ್ರಾಕೃತಿಕ ಸತ್ಯ ನಿಜಕ್ಕೂ ರಮ್ಯ. ಹಾಗಾಗಿ ನಾನು ಮಂಗಳೂರಲ್ಲಿ ಕುಳಿತಂತೇ ಚಿಲ್ಕಾದ ಉತ್ತರ ಕೊನೆಯ ಪುರಿಯಿಂದ ಕಲ್ಪನಾ ಬ್ರಾಂಡ್ ಸೈಕಲ್ ಸವಾರಿಗಿಳಿದೆ. ಸ್ಪಷ್ಟ ಸಮುದ್ರ ಕಿನಾರೆಯಲ್ಲೇ ಸಾಗುವ ದಾರಿಯಲ್ಲಿ ದಕ್ಷಿಣಾಭಿಮುಖವಾಗಿಯೇ ಸಾಗಿದೆ. ಹತ್ತೆಂಟು ಹಳ್ಳಿ, ಕೆಲವು ಕುದುರು, ದೇವಳ, ಜನಜೀವನವನ್ನೆಲ್ಲ ವಿರಾಮದಲ್ಲಿ ಕಣ್ತುಂಬಿಕೊಳ್ಳುತ್ತ ದೆಲೆಂಗ, ಬ್ರಹ್ಮಗಿರಿಗಳನ್ನು ಹಾದು ಸತಪಾದದ ಅಳಿವೆ ಮುಟ್ಟಿದ್ದೆ. ಅಲ್ಲಿನ ದೋಣಿ ಸಾಗಣೆಗೆ ಸೈಕಲ್ಲನ್ನೂ ಒಡ್ಡಿಕೊಂಡು ದಕ್ಷಿಣ ದಂಡೆಯ ಕೃಷ್ಣಪುರ ಸೇರಿದೆ, ಮತ್ತೆ ಸೀಟಿಗೇರಿ ಪೆಡಲೊತ್ತಿದೆ. ಪರಿಕುಡಿಗಾಗಿ ರಂಭಾದಲ್ಲಿ ಭುವನೇಶ್ವರ - ವಿಶಾಖಪಟ್ಟಣ ಹೆದ್ದಾರಿ ಸೇರುವಾಗ ಸೈಕಲ್ ಕರಗಿ ಹೋಗಿತ್ತು! ವಾಸ್ತವದಲ್ಲಿ ನಾವು ಬಾಲೂಗಾಂವ್ನಲ್ಲಿ ಚಾ ಕುಡಿದು, ಮೋಟಾರ್ ಬೈಕುಗಳಲ್ಲೇ ಹೆದ್ದಾರಿಯ ನೀರಸ ಓಟದಲ್ಲೇ ರಂಭಾ ಹಿಂದಿಕ್ಕಿ, ವಿಶಾಖೆಯತ್ತ ಓಡುತ್ತಲೇ ಇದ್ದೆವು. 


ಕಲ್ಕತ್ತಾ ಮತ್ತು ಮದ್ರಾಸ್ ಎಂಬ ಎರಡು ಮಹಾನಗರಿಗಳನ್ನು ಸಂಪರ್ಕಿಸುವ, ಅಂದರೆ ಭಾರತದ ಉತ್ತರ ಮುಡಿಯಿಂದ ದಕ್ಷಿಣ ಅಡಿಯನ್ನು ಮುಟ್ಟುವ ನಿಜಕ್ಕೂ ರಾಷ್ಟ್ರೀಯ ಹೆದ್ದಾರಿಯದು. ಆ ಕಾಲಕ್ಕೇ ಅದು ‘ಡಬ್ಬಲ್ ರೋಡ್’ (ಚತುಷ್ಪಥ) ಆಗಿದ್ದದ್ದು ಮತ್ತು ಉತ್ತಮ ಗುಣಮಟ್ಟದ್ದೂ ಆಗಿತ್ತು. ಮೈಸೂರಿನಲ್ಲಿ ‘ಚಾಮರಾಜೇಂದ್ರ ರಸ್ತೆ’ ರೂಪುಗೊಂಡ ಕಾಲಕ್ಕೆ ಜನ ಸಂಭ್ರಮದಲ್ಲಿ ಜೋಡಿ ರಸ್ತೆ, ಡಬ್ಬಲ್ ರೋಡ್, ನೂರಡಿ ರಸ್ತೆ ಎಂದೆಲ್ಲಾ ಹಚ್ಚಿದ ವಿಶೇಷಣಗಳು ಇಂದೂ ಮರೆಯಾಗಿಲ್ಲ. ಇಂದು ಬೇಕೋ ಬೇಡವೋ ಡಬ್ಬಲ್ ರೋಡುಗಳು ಗಲ್ಲಿಗಲ್ಲಿಗಳನ್ನೂ ವ್ಯಾಪಿಸಿವೆ, ಅದರಲ್ಲೂ ಕಾಂಕ್ರೀಟಿನವು ಭಾರೀ ದಂಧೆಯೇ ಆಗಿದೆ, ಬಿಡಿ! ಅದಲ್ಲ, ನಿಜದ ಹೆದ್ದಾರಿಗಳು ಜೋಡು ಮಾರ್ಗಗಳೇ ಆಗಬೇಕು, ಎಂಬ ಅರಿವು ನನಗೆ ಮೂಡಿದ್ದೇ ಭುವನೇಶ್ವರ ವಿಶಾಖಪಟ್ಟಣದ ಓಟದಲ್ಲಿ. ಆದರದು ಬಹುತೇಕ ಸಪಾಟು, ಬೋಳು ಬಯಲು. ದೃಶ್ಯ ವಿಶೇಷಗಳಿಲ್ಲದೆ, ಸವಾರಿ ಚಾತುರ್ಯಕ್ಕೂ ಸವಾಲಾಗದ ಸ್ಥಿತಿಯಲ್ಲಿ ಯಾಂತ್ರಿಕತೆ ಕಾಡದ ಎಚ್ಚರ ಅವಶ್ಯ. 

ಇಲ್ಲೇ ಹೇಳಿಬಿಡುತ್ತೇನೆ - ಇಂದಿಗೂ ಪಶ್ಚಿಮ ಕರಾವಳಿಯಲ್ಲಿ, ಅಂದರೆ ಕನಿಷ್ಠ ತಿರುವನಂತಪುರದಿಂದ ಮುಂಬೈವರೆಗೆ ಇಂಥ ಒಂದು ಸ್ವಸ್ಥ ದಾರಿಯೇ ಇಲ್ಲ. ಎಲ್ಲೋ ಕರ್ನಾಟಕದ ಭಾಗದಲ್ಲಿ ಅರೆಬರೆ ಚತುಷ್ಪಥ ಬಂದಿರುವುದು ಬಿಟ್ಟರೆ, ಕೇರಳ, ಗೋವಾ ಮತ್ತು ಮಹಾರಾಷ್ಟ್ರಗಳು ಪೊಳ್ಳು ಘೋಷಣೆಯ ಹೆದ್ದಾರಿಯಲ್ಲೇ ತೃಪ್ತವಾಗುಳಿದಿವೆ. ಮಂಗಳೂರು ಉಡುಪಿಗಳಿಂದ ನಿತ್ಯ ನೂರಾರು ಜನ ಬಸ್ಸು, ರೈಲು ಎಂದು ಒದ್ದಾಡಿ ಮುಂಬೈಗೆ ಹೋಗುತ್ತಿರುವುದನ್ನು ಶೋಧಿಸಿದರೆ ನೂರು ವರ್ಷಕ್ಕೂ ಮಿಕ್ಕ ಇತಿಹಾಸವಿದ್ದೀತು. ನೇರ ಬಸ್ಸುಗಳು ಹೊರಟು, ೨೪ ಗಂಟೆಗೂ ಮಿಕ್ಕ ಪಯಣವೆಂದರೂ ಎಲ್ಲ ಸಂಕಟಗಳನ್ನು ಅದುಮಿಕೊಂಡು, ಬಳಸಂಬಟ್ಟೆಯೇ ಆದರೂ ಸಾವಿರಾರು ಮಂದಿ ನಿತ್ಯ ಓಡಾಡುತ್ತಲೇ ಇದ್ದರು. ಹೊರೆ ಇಳಿಸುವಂತೆ ಕೊಂಕಣ್ ರೈಲು ಬಂತು. ಅದು ತೀರಾ ಸಣ್ಣ ಪರಿಹಾರ ಎನ್ನುವಂತೆ ಇಂದಿಗೂ ಲಾರಿ, ಬಸ್ಸು, ಇತರ ವಾಹನಗಳು ಅನಿವಾರ್ಯವಾಗಿ ಇಲ್ಲಿ ಪಶ್ಚಿಮಘಟ್ಟ ಏರಿ, ಅಲ್ಲಿ ಇಳಿದು ಮುಂಬೈ ಮತ್ತೂ ಮುಂದೆ ಹೋಗುವುದು ನಡೆದೇ ಇದೆ! 

ವಾತಾವರಣ ಬಹುತೇಕ ನಮ್ಮ ದಕ್ಷಿಣ ಕನ್ನಡದ್ದೇ. ತೇವಾಂಶ ೩೫%ಗೂ ಮೇಲಿದ್ದು, ಸೂರ್ಯನ ತಾಪವೇ ಹೆಚ್ಚಾಯ್ತೋ ಎನ್ನುವ ಭ್ರಮೆ ಮೂಡಿಸಿತ್ತು. ಧಾರಾಳ ಬೆವರುತ್ತ, ಅದರ ಮೇಲೆ ಓಟದ ಗಾಳಿ ತೀಡುವ ತಣ್ಪನ್ನು ಅನುಭವಿಸುತ್ತ, ಎರಡು ಬೈಕುಗಳು ವಿರಾಮದಲ್ಲಿ ಒಂದನ್ನಿನ್ನೊಂದು ಹಿಂದಿಕ್ಕುತ್ತಾ ಸಾಗಿದೆವು. ಬೆಹ್ರಾಂಪುರವಾದ ಮೇಲೆಲ್ಲೋ ಒರಿಸ್ಸಾ ಗಡಿದಾಟಿ ಆಂಧ್ರದಲ್ಲಿ ಮುಂದುವರಿದೆವು. ಇಚ್ಛಾಪುರ, ಹರಿಪುರ ಕಳೆದ ಮೇಲೆಲ್ಲೋ ರೈಲ್ವೇ ಗೇಟಿನ ಬಳಿ ಭಾರೀ ಅಪಘಾತವಾಗಿತ್ತು. ಕಿಲೋಮೀಟರ್ಗಟ್ಲೆ ವಾಹನಗಳು ಬಿಸಿಲಿನ ಭರಪೂರ ಆನಂದದಲ್ಲಿ ಬಿಸಿಸುಯ್ಯುತ್ತಿದ್ದವು! ನಾವು ದ್ವಿಚಕ್ರದ ಸರಳತೆಯಲ್ಲಿ, ಅವುಗಳ ಬಗಲಲ್ಲೇ ನುಸಿದು ದಾರಿ ಅಳತೆ ಮುಂದುವರಿಸಿದೆವು. ಕಾಶಿಬುಗ್ಗಾ, ತಕ್ಕಳಿ, ನರಸಣ್ಣಪೇಟ, ಶ್ರೀಕಾಕುಳಂ... ಪಟ್ಟಿ ಬೆಳೆದೇ ಇತ್ತು. 

ನಾನು ಮೊದಲೇ ಹೇಳಿದಂತೆ, ಚಂದ್ರಶೇಖರ ಕಲ್ಕೂರರ ಕೃಪೆಯಲ್ಲಿ ಆಂಧ್ರಪ್ರದೇಶದ ನಮ್ಮ ದಾರಿಯುದ್ದಕ್ಕೂ ಅನೇಕ ವಾಸ ಸ್ಥಾನಗಳು ನಮ್ಮನ್ನು ಕಾದೇ ಇದ್ದವು. ಆದರೆ ನಿಜದಲ್ಲಿ ನಾವು ಹಾಗೆ ಸಿಕ್ಕಿದ ಎಲ್ಲ ಸೌಕರ್ಯಗಳನ್ನು ಅನಿವಾರ್ಯತೆಯಲ್ಲಷ್ಟೇ ಬಳಸಬೇಕು ಎಂದು ನಿರ್ಧರಿಸಿಯೇ ಹೊರಟಿದ್ದೆವು. ನಮ್ಮ ಉಳಿತಾಯದ ಬಯಕೆ, ಇತರರಿಗೆ ಅನಾವಶ್ಯಕ ಹೊರೆಯಾಗಬಾರದೆಂಬ ವಿವೇಚನೆ ನಮ್ಮದಿತ್ತು. ಹಾಗಾಗಿ ಅಪರಾಹ್ನ ಮೂರೂ ಕಾಲಕ್ಕೇ ನಾವು ಶ್ರೀಕಾಕುಲಂ ತಲಪಿದಾಗ, ವೈ.ಎಚ್ ಮೋಹನ್ ರಾವ್ ಅವರ ಹೋಟೆಲ್ ವೀನಸ್ ನೆನಪಾಯ್ತು. ಬಹುಶಃ ನಾವಲ್ಲಿ ಕೇವಲ ಕಾಫಿಯ ಉಪಚಾರಕ್ಕಷ್ಟೇ ನಿಂತಿದ್ದೆವು. ಇಂದು ಗಳಿಸಿದ ದಾರಿ, ನಾಳೆಗೆ ಉಳಿಸಿದ ಶ್ರಮ ಎಂದೇ ಅಲ್ಲಿ ನಿಲ್ಲದೇ ಮುಂದುವರಿದಿದ್ದೆವು. ಕ್ಷಮಿಸಬೇಕು, ಮೋಹನ ರಾಯರ ವೈಯಕ್ತಿಕ ಭೇಟಿ ನಮಗಾಯ್ತೇ ಇಲ್ಲವೇ ಎನ್ನುವ ವಿವರಗಳು ಇಂದು ನನಗೆ ಮರೆತುಹೋಗಿದೆ. 

ಅತಿ ವೇಗಕ್ಕೆ ಮರುಳಾಗದ, ಬಳಲಿಕೆಯನ್ನು ಉಪೇಕ್ಷಿಸದ ಎಚ್ಚರ ಇದ್ದೇ ಇತ್ತು. ಕಾಲಕಾಲಕ್ಕೆ ಮುಖಕ್ಕೆ ನೀರು ಹೊಡೆದುಕೊಳ್ಳುತ್ತ, ಚಾ, ಊಟ, ಕುರುಕಲು ಚಪಲಗಳನ್ನು ಹೊಟ್ಟೆಗೆ ಹೊರೆಯಾಗದಂತೆ, ಆದರೆ ವಿರಾಮಕ್ಕೆ ನೆಪವಾಗುವಂತೆ ಪೂರೈಸಿಕೊಳ್ಳುತ್ತ, ಕಿಲೋ ಕಲ್ಲುಗಳ ಇಳಿ ಎಣಿಕೆ ಚಾಲೂ ಇಟ್ಟಿದ್ದೆವು. ವಿಶಾಖಪಟ್ಟಣ ಸಮೀಪಿಸುತ್ತಿದ್ದಂತೆ ಹೆದ್ದಾರಿ ನಾಲ್ಕಲ್ಲ, ಆರಾದಾಗ (ಷಣ್ಪಥ!) ನಮ್ಮ ಆಶ್ಚರ್ಯಕ್ಕೆ ಕೊನೆಯಿಲ್ಲ. ಇಲ್ಲಿ ಬಸ್ ಸರ್ವಿಸ್ ಬಳಸುವವರು ಸಣ್ಣ ಕವಲೋಟದಲ್ಲಿ ಸಿಗುವ ದೊಡ್ಡ ನಗರ - ವಿಜಯನಗರಂ ಮುಟ್ಟಿಯೇ ಬರುತ್ತಾರಿರಬೇಕು. ಕಲ್ಕೂರ ಕೃಪೆಯಲ್ಲಿ ವಿಜಯನಗರದಲ್ಲಿ ಕೃಷ್ಣ ಭವನದ ಪಿ. ವೆಂಕಟೇಶನ್ ಮತ್ತು ಪೂರ್ಣಿಮಾ ರೆಸ್ಟುರಾದ ಆರ್. ಆರ್. ಕೃಷ್ಣ ನಮ್ಮ ಆತಿಥ್ಯಕ್ಕೆ ಸಿದ್ಧರಿದ್ದರು. ಆದರೆ ನಾವು ಹೆದ್ದಾರಿ ಬಿಡಲೇ ಇಲ್ಲ. ಸಂಜೆ ಆರೂವರೆ ಗಂಟೆಗೆ ನಿರಾಯಾಸವಾಗಿ ೪೪೦ ಕಿಮೀ ಓಟ ಮುಗಿಸಿ ವಿಶಾಖಪಟ್ಟಣ ತಲುಪಿದ್ದೆವು. 

ವಿಶಾಖ ಪಟ್ಟಣದಲ್ಲಿ ನಮಗೆ ಮೂರು ಗಟ್ಟಿಯಾದ ಸಂಪರ್ಕಗಳಿದ್ದವು. ನಮ್ಮ ರೈಲ್ವೇ ಹಾಗೂ ಇತರ ಅನೇಕ ಸೌಕರ್ಯಗಳಿಗೆ ಕಾರಣರಾದ ಎಮ್.ಎಸ್. ಭಟ್ಟರ ಮಿತ್ರ ವಿ.ಕೆ.ಎಸ್ ಮೂರ್ತಿ ಪ್ರಥಮಾದ್ಯತೆಯಲ್ಲಿ ಕಾದಿದ್ದರು. ಆದರೆ ಅಷ್ಟು ದೊಡ್ಡ ಪಟ್ಟಣದಲ್ಲಿ, ಪ್ರತ್ಯಕ್ಷ ಯಾವುದೇ ಪರಿಚಯವಿಲ್ಲದ ಮೂರ್ತಿಯವರ ಮನೆಗೆ ಹೊರೆಯಾಗಲು ನಮ್ಮ ಮನಸ್ಸು ಒಪ್ಪಲಿಲ್ಲ. ಮತ್ತಿನೆರಡು ಕಲ್ಕೂರರ ಹೋಟೆಲ್ ಸಂಪರ್ಕಗಳು - ಎಸ್. ರಂಗರಾಜು ಅವರ ಹೋಟೆಲ್ ಅಮರಾವತಿ ಮತ್ತು ಬಿ. ನಾಗರಾಜ್ ಅವರ ಹೋಟೆಲ್ ಕಾರಂತ. ಆದರೆ ದಿನವಿಡೀ ಬೇಯಿಸಿದ ಬಿಸಿಲು, ಓಟದ ಬಳಲಿಕೆ ಮತ್ತು ರೂಢಿಸಿದ ಹೆದ್ದಾರಿ ಮನೋಸ್ಥಿತಿಯಲ್ಲಿ ಮಹಾನಗರಿಯ ಸಂಜೆಯ ವಾಹನ ಸಮ್ಮರ್ದ ನಮಗೆ ಹಿತವಾಗಲಿಲ್ಲ. ಊರೆಲ್ಲ ಸುತ್ತಿ ಬಂದು ಮನೆ ಹೊಸ್ತಿಲಲ್ಲಿ ಎಡವಿ ಬಿದ್ದವರ ಕತೆ ನೆನಪಾಯ್ತು. ಮತ್ತೆ ಕಲ್ಕೂರರು ಏನೇ ಹೇಳಿದರೂ ವೃತ್ತಿಪರ ಹೋಟೆಲಿನವರ ಬಳಿ, ನಮ್ಮ ಹವ್ಯಾಸದ ಚಪಲಕ್ಕೆ ಪೂರ್ತಿ ಬಿಟ್ಟಿ ಸೇವೆ ಪಡೆಯುವುದಕ್ಕೂ ನಮಗಷ್ಟು ಮನಸ್ಸಿರಲಿಲ್ಲ. ಹಾಗಾಗಿ ನಮ್ಮ ದಾರಿಗೇ ಸಿಕ್ಕ ಮತ್ತು ಮನಸ್ಸಿಗೂ ಅಡ್ಡಿಯಿಲ್ಲ ಅನ್ನಿಸಿದ ಶ್ರೀಕನ್ಯಾ ಹೋಟೆಲ್ಲಿನಲ್ಲೇ ತಂಗಿಬಿಟ್ಟೆವು. (ದಿನದ ಓಟ ೪೪೦ ಕಿಮೀ) 

(ಮುಂದುವರಿಯಲಿದೆ)

3 comments:

  1. ಭುವನೇಶ್ವರದ ಶಿಲ್ಪಗಳ ಶೈಲಿಯಲ್ಲಿ ಕಣ್ಣುಗಳು ಗೂಬೆಯ ಕಣ್ಣುಗಳ ಹಾಗೆ ಅಗಲವಾಗಿ ವೃತ್ತಾಕಾರವಾಗಿ ಇರುವ ಬಗ್ಗೆ ಏನಾದರೂ ವಿವರಣೆ ಇದೆಯೆ?

    ReplyDelete
  2. 1988ರಲ್ಲಿ ನನ್ನ ಪ್ರಥಮ ದೂರ ಪ್ರವಾಸದಲ್ಲಿ ಪುರಿ, ಭುವನೇಶ್ವರ,ಕೊನಾರ್ಕ್ ಎಲ್ಲಾ ನೋಡಿದ್ದು.ಪುರಿಯ ಪರಿಸ್ಥಿತಿ ಹಾಗೇ ಇತ್ತು.ಪಂಡರ ಕಾಟ ಜಾಸ್ತಿ.ದೇವಳದ ಫೋಟೋ ತೆಗೆಯಲು ಅಲ್ಲಿಯೂ, ಭುವನೇಶ್ವರದಲ್ಲೂ ಅನುಮತಿ ಇರಲಿಲ್ಲ.ಕದ್ದಾದರೂ ತೆಗೆಯಲು ಪುರಿಯಲ್ಲಿ ಸಾಧ್ಯವೇ ಇಲ್ಲದಷ್ಟು ಜನ ಸಂದಣಿ.ಭುವನೇಶ್ವರದಲ್ಲಿ ಕಂಬಗಳ ಹಿಂದೆ ಮರೆಯಾಗಿ ಕದ್ದು ಮುಚ್ಚಿ,ಗೊತ್ತಾದರೆ ರೀಲ್ ಎಳೆದಾರೆಂಬ ಅಳುಕಿನಲ್ಲೇ ತೆಗೆದಿದ್ದು.ಕೊನಾರ್ಕ್ನಲ್ಲಿ ಯಾರೂ ಹೇಳುವವರು ಕೇಳುವವರಿಲ್ಲದೇ ಮನಸೋ ಇಚ್ಛೆ,(ಅಲ್ಲ,ರೀಲಿನ ಲಭ್ಯ ತೆಯಂತೆ!)ಪಟ ತೆಗೆದದ್ದಾಯಿತು.
    ಚಿಲ್ಕಾ ಸರೋವರ ನೋಡದಿದ್ದರೂ, ನಂದನ್ ಕಾನನ್ ಮೃಗಲಾಯದಲ್ಲಿ ಮೊದಲ ಬಾರಿಗೆ ಬಿಳಿಹುಲಿಯನ್ನು ನೋಡಿದ್ದು,ಎಲ್ಲಾ, ನಿಮ್ಮ ಪ್ರವಾಸದ ಓದಿನೊಂದಿಗೆ ನೆನಪಾಗಿ ಮನ ಮುದಗೊಂಡಿತು.����
    ಧವಳಗಿರಿ ಬೆಟ್ಟದ ಮೇಲಿಂದ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಂಡ ಭತ್ತದ ಹಸಿರು ಪೈರಿನ ನೋಟ ಇನ್ನೂ ಕಣ್ಣ ಮುಂದಿದೆ.ಈ ಫಲವತ್ತಾದ ಭೂಮಿಗೇ ತಾನೇ ಯುದ್ಧ ಕದನ ಎಲ್ಲಾ ನಡೆದಿದ್ದು.

    ReplyDelete